ದೇಹವು ಜೀವಂತವಾಗಿರಲು ಆಹಾರ ಬೇಕು. ಅದು ಬೆಳೆಯಲು, ನಷ್ಟವಾಗುವ ಜೀವಕಣಗಳು ಪುನರುಜ್ಜೀವನಗೊಳ್ಳಲು ಸೂಕ್ತ ಆಹಾರ ಸೇವನೆ ಮೂಲಕ ಅವಕ್ಕೆ ಬೇಕಾದ ಅಂಶಗಳನ್ನು ದೇಹದ ವಿವಿಧ ಭಾಗಗಳಿಗೆ ಕೊಡಬೇಕಾಗುವುದು. ಈ ಆಹಾರವನ್ನು ಬೇಕಾದ ರೂಪಕ್ಕೆ ಪರಿವರ್ತಿಸಿ ಕೊಡುವ ಅಂಗಗಳ ಸಮುದಾಯಕ್ಕೆ ಪಚನಾಂಗ ವ್ಯವಸ್ಥೆ ಎಂದು ಹೆಸರು. ಬೇಕಾದ ವಸ್ತುಗಳನ್ನು ಉಪಯೋಗಿಸಿಕೊಂಡು ಬೇಡವಾದ ಕಶ್ಮಲಗಳನ್ನು ಹರಹಾಕುವುದೂ ಕೂಡ ಈವ್ಯವಸ್ಥೆಗೆ ಸೇರಿದೆ. ಈಎಲ್ಲಾ ಕೆಲಸಗಳು ,ಅಲ್ಲಲ್ಲಿ ಬೇರೆ ಬೇರೆ ರೂಪತಾಳಿ ನಾನಾಬಗೆ ಕೆಲಸ ಮಾಡುವ ದೀರ್ಘ ನಳಿಕೆಯ ಮೂಲಕ ನಡೆಯುತ್ತವೆ. ಇದರ ಆರಂಭ ನಮ್ಮ ಬಾಯಿ. ಅದರ ಕೊನೆ ಯೇ ಗುದದ್ವಾರ.
ಮನುಷ್ಯನ ದೇಹದಲ್ಲಿ ಪ್ರಮುಖ ಅಂಗಗಳಲ್ಲಿ ಹೊಟ್ಟೆ ಕೂಡ ಒಂದಾಗಿದ್ದು, ಅತ್ಯಂತ ಪ್ರಮುಖವಾಗಿದೆ. ನಾವು ಸೇವಿಸುವ ಆಹಾರವನ್ನು ಸರಿಯಾದ ರೀತಿಯಲ್ಲಿ ತನ್ನಲ್ಲಿ ಶೇಖರಣೆ ಮಾಡಿ ಅದನ್ನು ಜೀರ್ಣವಾಗುವಂತೆ ನೋಡಿಕೊಂಡು ನಮ್ಮ ಇಡೀ ದೇಹಕ್ಕೆ ಶಕ್ತಿ ಸಂಚಾರವನ್ನು ಏರ್ಪಡಿಸುವ ಕಾರ್ಯವನ್ನು ಹೊಟ್ಟೆ ಮಾಡುತ್ತದೆ. ಹೊಟ್ಟೆಗೆ ಊಟ ಕಡಿಮೆಯಾದರೂ ಅಥವಾ ಹಸಿವು ಹೆಚ್ಚಾದರೂ ಅದು ದೇಹದ ಸಂಪೂರ್ಣ ಪರಿಣಾಮ ಬೀರುತ್ತದೆ. ಹೀಗಾಗಿ ಹಸಿವಾದಾಗ ಎಲ್ಲರ ಗಮನ ಹೊಟ್ಟೆಯ ಮೇಲಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಸಮಯದ ಅಭಾವದಿಂದಾಗಿ ಜನರು ಫಾಸ್ಟ್ ಫುಡ್ ಹಾಗೂ ಜಂಕ್ ಫುಡ್ ಗಳ ಮೊರೆ ಹೋಗುತ್ತಿದ್ದು, ಆರೋಗ್ಯಕರ ಆಹಾರಗಳನ್ನು ಮರೆತು ಹೋಗುತ್ತಿದ್ದಾರೆ. ಹೀಗಾಗಿ ಜನರದಲ್ಲಿ ಹೊಟ್ಟೆಯ ಸಮಸ್ಯೆಗಳು, ಅಜೀರ್ಣ ಸಮಸ್ಯೆಗಳು ಹೆಚ್ಚಾಗುತ್ತಿದೆ.
ಹೊಟ್ಟೆಯಲ್ಲಿ ಸಮಸ್ಯೆಗಳು ಎದುರಾದಾಗ ಸಾಮಾನ್ಯವಾಗಿ ಮಲಬದ್ಧತೆ ಅಜೀರ್ಣ, ಎದೆ ಉರಿ, ಗ್ಯಾಸ್ಟ್ರಿಕ್, ಹೊಟ್ಟೆಯ ಸೋಂಕು, ವಿಪರೀತವಾದ ಉಷ್ಣ ಎಂಬ ಸಮಸ್ಯೆಗಳು ಎದುರಾಗುತ್ತವೆ. ಮನುಷ್ಯನ ಹೊಟ್ಟೆ ಆರೋಗ್ಯವಾಗಿರಬೇಕೆಂದರೆ ಮೊದಲು ತಿನ್ನುವಂತಹ ಆಹಾರ ಜೀರ್ಣವಾಗಬೇಕು. ಅದಕ್ಕಾಗಿ ಆರೋಗ್ಯಕರ ಆಹಾರ ಸೇವನೆ ಅತ್ಯಗತ್ಯ.
ಜೀರ್ಣಕ್ರಿಯೆ ಸುಲಭವಾಗಿಸಲು ಕೆಲವು ಮನೆ ಮದ್ದುಗಳು ಇಲ್ಲಿವೆ.
೧.ಹೊಟ್ಟೆಯಲ್ಲಿನ ಗ್ಯಾಸ್ ಮತ್ತು ಕಡಿಮೆ ಮಾಡುವ ಮತ್ತು ಗ್ಯಾಸ್ಟ್ರಿಕ್ ಸ್ರವಿಸುವಿಕೆ ಹೆಚ್ಚಿಸುವ ಗುಣವು ಲವಂಗದಲ್ಲಿ ಇದೆ. ಇದು ಜೀರ್ಣಕ್ರಿಯೆಗೆ ವೇಗ ನೀಡುವುದು. ಒತ್ತಡ ಹಾಗೂ ಸೆಳೆತ ಕಡಿಮೆ ಮಾಡುವುದು. ಲವಂಗವು ವಾಕರಿಕೆ ಮತ್ತು ವಾಂತಿ ತಡೆಯುವುದು. ಹೊಟ್ಟೆಯ ಸಮಸ್ಯೆ ಇದ್ದರೆ ಆಗ ನೀವು ಒಂದು ಅಥವಾ ಎರಡು ಚಮಚ ಲವಂಗ ಹುಡಿಯನ್ನು ಒಂದು ಚಮಚ ಜೇನುತುಪ್ಪದ ಜತೆಗೆ ಬೆರೆಸಿಕೊಂಡು ರಾತ್ರಿ ಮಲಗುವ ಮೊದಲು ಸೇವಿಸಬೇಕು. ವಾಕರಿಕೆ ಮತ್ತು ಎದೆಯುರಿ ಸಮಸ್ಯೆಗೆ ನೀವು ಎಂಟು ಲವಂಗವನ್ನು ಕುದಿಯುವ ನೀರಿಗೆ ಹಾಕಿಕೊಂಡು ಲವಂಗ ಚಹಾ ತಯಾರಿಸಿಕೊಳ್ಳಿ. ಇದನ್ನು ದಿನದಲ್ಲಿ ಒಂದು ಅಥವಾ ಎರಡು ಸಲ ಸೇವಿಸಿ.
೨.ತಿನ್ನುವಂತಹ ಆಹಾರ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ ಎನ್ನುವವರು, ಆಹಾರ ತಿಂದ ಕೂಡಲೇ ಬಿಸಿ ನೀರನ್ನು ಕುಡಿಯಬೇಕು. ಪ್ರತಿದಿನ ಬೆಳಿಗ್ಗೆ ಅಥವಾ ಊಟಕ್ಕೆ ಅರ್ಧಗಂಟೆ ಮೊದಲು ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಗ್ಯಾಸ್ ರಸ ಉತ್ಪತ್ತಿಯಾಗುವುದು ನಿಯಂತ್ರಣಗೊಳ್ಳುತ್ತದೆ.
ಅಜೀರ್ಣ ತಪ್ಪಿಸಲು ಸರಿಯಾದ ಸಮಯಕ್ಕೆ ತಿನ್ನುವುದನ್ನು ರೂಪಿಸಿಕೊಳ್ಳಬೇಕು.
ನಾವು ಯಾವ ರೀತಿ ಆಹಾರ ಸೇವಿಸುತ್ತೇವೆಂಬುದು ಕೂಡ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕುಳಿತುಕೊಂಡು ಆರಾಮವಾಗಿ ಆಹಾರವನ್ನು ಸೇವಿಸಿ ಆನಂದಿಸಬೇಕು.
೩.ಅಜೀರ್ಣ ನಿವಾರಣೆ ಮಾಡಲು ಆಪಲ್ ಸೀಡರ್ ವಿನೇಗರ್ ತುಂಬಾ ಪರಿಣಾಮಕಾರಿ ಆಗಿದೆ. ನಿಮಗೆ ಜೀರ್ಣಕ್ರಿಯೆ ಸಮಸ್ಯೆಯಿದ್ದರೆ ಆಗ ನೀವು ಇದನ್ನು ಕುಡಿಯಿರಿ. ಇದರಲ್ಲಿ ಉನ್ನತ ಮಟ್ಟದ ಮೆಗ್ನಿಶಿಯಂ, ಪೋಸ್ಪರಸ್, ಪೊಟಾಶಿಯಂ, ಕ್ಯಾಲ್ಸಿಯಂ ಮತ್ತು ಇತರ ಕೆಲವೊಂದು ಖನಿಜಾಂಶಗಳು ಇವೆ. ವಿನೇಗರ್ ನೈಸರ್ಗಿಕವಾಗಿ ಆಮ್ಲೀಯ ಗುಣ ಹೊಂದಿದೆ ಮತ್ತು ಇದು ಕೊಬ್ಬನ್ನು ವಿಘಟಿಸುವುದು ಮತ್ತು ಆಮ್ಲೀಯ ಹಿಮ್ಮುಖ ಹರಿವು ತಡೆಯುವುದು. ಕ್ಷಾರೀಯ ಗುಣ ಹೊಂದಿರುವಂತಹ ಇದು ಜೀರ್ಣಕ್ರಿಯೆಗೆ ನೆರವಾಗುವುದು. ನೀರು ಅಥವಾ ಜೇನುತುಪ್ಪ ಹಾಕಿಕೊಂಡು ವಿನೇಗರ್ ಸೇವಿಸಬಹುದು. ಸಾವಯವ ಮತ್ತು ಶೋಧಿಸದೆ ಇರುವುದನ್ನು ಬಳಸಿಕೊಳ್ಳಿ.
೪.ಅಜೀರ್ಣ ಸಮಸ್ಯೆ ದೂರವಿಡಲು ಸಾಕಷ್ಟು ನೀರನ್ನು ಕುಡಿಯಬೇಕು. ಇದು ದೇಹವನ್ನು ಸ್ವಚ್ಛಗೊಳಿಸುತ್ತದೆ ಅಲ್ಲದೆ, ಅಜೀರ್ಣವಾಗದಂತೆ ನೋಡಿಕೊಳ್ಳುತ್ತದೆ.
ಆರೋಗ್ಯಕರ ಆಹಾರ ಸೇವನೆ ಮಾಡಿ, ಪ್ರತಿನಿತ್ಯ ತಿನ್ನುವ ಆಹಾರದಲ್ಲಿ ತರಕಾರಿ, ಹಣ್ಣುಗಳನ್ನು ಸೇವನೆ ಮಾಡಿ. ತರಕಾರಿಯಿಂದ ಮಾಡಿದ ಸಲಾಡ್ ಸೇವನೆ ಮಾಡಿ. ಪ್ರಮುಖವಾಗಿ ನಾರಿನ ಪದಾರ್ಥವುಳ್ಳ ತರಕಾರಿಗಳನ್ನು ಸೇವಿಸಿರಿ. ಇದರಿಂದ ಮಲಬದ್ಧತೆ ಸಮಸ್ಯೆ ದೂರಾಗುವುದೂ ಅಲ್ಲದೆ, ಜೀರ್ಣ ಕ್ರಿಯೆ ಕೂಡ ಸುಲಭವಾಗುತ್ತದೆ.
೫.ಮಜ್ಜಿಗೆಯಲ್ಲಿ ಮೊಸರು ಮುಖ್ಯವಾಗಿರುವ ಕಾರಣ ಮೊಸರಿನ ಗುಣಗಳೆಲ್ಲವೂ ಇದೆ. ಇದರಲ್ಲಿರುವ ಪ್ರೋಬಯೋಟಿಕ್ಸ್ ಅಥವಾ ಜೀರ್ಣಕ್ರಿಯೆಗೆ ಸಹಕರಿಸುವ ಪೋಷಕಾಂಶಗಳು ಜೀರ್ಣಾಂಗಗಳ ಹೊರೆಯನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಮಜ್ಜಿಗೆಯಲ್ಲಿ ಸೇರಿಸಿರುವ ಜೀರಿಗೆ ಪುಡಿ ಮೊದಲಾದ ಮಸಾಲೆ ಪದಾರ್ಥಗಳು ಜೀರ್ಣಕ್ರಿಯೆಗೆ ಇನ್ನಷ್ಟು ಸಹಕರಿಸಿ ಜೀರ್ಣಕ್ರಿಯೆಯನ್ನು ಸುಲಭ ಮತ್ತು ಪರಿಪೂರ್ಣಗೊಳಿಸುತ್ತವೆ. ಅಲ್ಲದೇ ಬೆಳ್ಳುಳ್ಳಿ ಮೊದಲಾದವು ಕರುಳಿನ ತೊಂದರೆಗಳನ್ನು
ನಿವಾರಿಸುತ್ತದೆ. ಒಟ್ಟಾರೆ ಜೀರ್ಣವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ.
೬.ಮೆಂತೆ, ಜೀರಿಗೆ, ಕೊತ್ತೊಂಬರಿ, ಕಾಳುಮೆಣಸು, ಇಂಗು ಮೊದಲಾದವು ಅಜೀರ್ಣತೆಯನ್ನು ಕಡಿಮೆಗೊಳಿಸುವುದು. ತರಕಾರಿಗಳಾದ ಹಸಿಮೆಣಸು, ಹಸಿಶುಂಠಿ, ಲಿಂಬೆ, ಪುದೀನಾ ಸೊಪ್ಪುಗಳನ್ನು ಗೊಟಾಯಿಸಿ ತಯಾರಿಸಿದ ಜ್ಯೂಸ್ ಸಹಾ ಉತ್ತಮ. ಶುಂಠಿಯ ಚಿಕ್ಕ ತುಂಡಿಗೆ ಕಪ್ಪು ಉಪ್ಪು ಮತ್ತು ಲಿಂಬೆರಸದ ಕೆಲವು ಹನಿಗಳನ್ನು ಚಿಮುಕಿಸಿ ಸೇವಿಸಿದರೆ ಹೊಟ್ಟೆಯುಬ್ಬರ ತಕ್ಷಣ ಕಡಿಮೆಯಾಗುತ್ತದೆ. ಮಜ್ಜಿಗೆ ನೀರಿಗೆ ಹುರಿದು ಪುಡಿಮಾಡಿದ ಜೀರಿಗೆ ಮತ್ತು ಕೊತ್ತಂಬರಿ ಪುಡಿಗಳನ್ನು ಸೇರಿಸಿ ಕುಡಿದರೂ ಹೊಟ್ಟೆಯುರಿ ಕಡಿಮೆಯಾಗುತ್ತದೆ.
೭.ಫೆಂಚೋನ್ ಮತ್ತು ಎಸ್ಟ್ರಾಗೋಲ್ ಎನ್ನುವ ಎಣ್ಣೆಯಂಶವು ಜೀರಿಗೆ ಮತ್ತು ಸೊಂಪು ಕಾಳುಗಳಲ್ಲಿ ಇದೆ. ಇದು ಕರುಳಿನಲ್ಲಿ ಇರುವಂತಹ ಗ್ಯಾಸ್ ನ್ನು ನಿವಾರಣೆ ಮಾಡುವುದು ಅಥವಾ ತಡೆಯುವುದು. ಇದು ಗ್ಯಾಸ್ಟ್ರಿಕ್ ರಸ ಬಿಡುಗಡೆ ಮಾಡುವ ಪರಿಣಾಮವಾಗಿ ಜೀರ್ಣಕ್ರಿಯೆ ಪ್ರಕ್ರಿಯೆಯು ತುಂಬಾ ಸರಾಗವಾಗಿ ಆಗುವುದು. ಆಂಟಿಸ್ಪಾಸ್ಮೊಡಿಕ್ ಗುಣವು ಸ್ನಾಯುಗಳಿಗೆ ಆರಾಮ ನೀಡುವುದು. ಜೀರಿಗೆ ಚಹಾ ಕುಡಿಯಬಹುದು ಅಥವಾ ಜೀರಿಗೆ ಜಗಿದು ನೀರು ಕುಡಿಯಬಹುದು.
೮.ಒಂದು ಹಿಡಿಯಷ್ಟು ಧನಿಯ (ಕೊತ್ತಂಬರಿ) ಕಾಳುಗಳನ್ನು ದಪ್ಪತಳದ ಬಾಣಲೆಯಲ್ಲಿ ಚಿಕ್ಕ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಕೆಂಪಗಾಗುತ್ತಲೇ ಬಾಣಲೆಯಿಂದ ಒಂದು ತಟ್ಟೆಯಲ್ಲಿ ಹರಡಿ. ಇದನ್ನು ಕೊಂಚ ಜಜ್ಜಿ (ಎರಡು ಬಟ್ಟೆಗಳ ನಡುವೆ ಇರಿಸಿ ಲಟ್ಟಣಿಗೆಯಿಂದ ಲಟ್ಟಿಸಿ) ಒಂದು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ. ಊಟವಾದ ಬಳಿಕ ಮಜ್ಜಿಗೆಯಲ್ಲಿ ಈ ಪುಡಿಯನ್ನು ಸೇರಿಸಿ (ಒಂದು ಲೋಟಕ್ಕೆ ಒಂದು ಚಿಕ್ಕ ಚಮಚ) ಕುಡಿದರೆ ಹೊಟ್ಟೆಯುರಿ, ಉಬ್ಬರ ಕಡಿಮೆಯಾಗುತ್ತದೆ. ಹೊಟ್ಟೆಯುಬ್ಬರ ಮತ್ತು ಉರಿ ಜಾಸ್ತಿ ಇದ್ದರೆ ಕೆಲವು ಏಲಕ್ಕಿ, ಲವಂಗ ಮತ್ತು ಹಸಿಶುಂಠಿಯ ಚಿಕ್ಕ ತುಂಡುಗಳನ್ನು ಸೇರಿಸಿ ನಯವಾಗಿ ಅರೆದು ಮಜ್ಜಿಗೆಗೆ ಸೇರಿಸಿ ಕುಡಿಯಿರಿ.(ಇದು ಮಧ್ಯಾಹ್ನ ಮತ್ತು ರಾತ್ರಿ ಊಟದ ಬಳಿಕ ಮಾತ್ರ, ಬೆಳಗ್ಗಿನ ಹೊತ್ತಿಗೆ ಉತ್ತಮವಲ್ಲ)

೯.ಒಂದು ಲೋಟ ಕುದ್ದು ಅರ್ಧ ತಣಿದಿರುವ ನೀರಿನಲ್ಲಿ ಅರ್ಧ ಟೀ ಚಮಚ ಜೇನು ಮತ್ತೊ ದೊಡ್ಡ ಲಿಂಬೆಯಾದರೆ ಅರ್ಧ ಭಾಗ (ಪುಟಾಣಿ ಲಿಂಬೆಯಾದರೆ ಇಡೀ ಒಂದು) ರಸ ಹಿಂಡಿ ಕಲಕಿ. ಈ ನೀರನ್ನು ಖಾಲಿಹೊಟ್ಟೆಯಲ್ಲಿ ಸೇವಿಸಬೇಕು. ಅಂದರೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೂ ಅರ್ಧಗಂಟೆ ಮೊದಲು ಸೇವಿಸಿದರೆ ಬಳಿಕ ಸೇವಿಸುವ ಆಹಾರದಿಂದ ಅಜೀರ್ಣವಾಗುವ ಸಂಭವ ತಪ್ಪುತ್ತದೆ.
೧೦.ನಾರಿನಂಶ ಹೆಚ್ಚಿರುವ ಚೆರ್ರಿ,ದ್ರಾಕ್ಷಿ,ದೊಣ್ಣೆ ಮೆಣಸು,ಧಾನ್ಯಗಳು ಮತ್ತು ನಟ್ಸ್ ಗಳನ್ನು ಹೆಚ್ಚು ತಿನ್ನಿ.ಈ ಆಹಾರಗಳು ಜೀರ್ಣಕ್ರಿಯೆ ಸುಲಭವಾಗಿಸಲು ಸಹಾಯಮಾಡುತ್ತವೆ.
ಜೀರ್ಣಕ್ರಿಯೆಲ್ಲಿ ನಾರಿನಾಂಶವು ಪ್ರಮುಖ ಪಾತ್ರ ವಹಿಸುವುದು. ಕರಗುವ ನಾರು ಮತ್ತು ಕರಗದ ನಾರು, ಎರಡೂ ಜೀರ್ಣಕ್ರಿಯೆ ಪ್ರಕ್ರಿಯೆಗೆ ಪ್ರಮುಖ ಪಾತ್ರ ವಹಿಸುವುದು. ನಾರಿನಾಂಶ ಇರುವಂತಹ ಕೆಲವು ಆಹಾರಗಳೆಂದರೆ ಅದು ಹಣ್ಣುಗಳು, ತರಕಾರಿಗಳು, ಗೋಧಿ ಹೊಟ್ಟು, ಇಡೀ ಧಾನ್ಯ, ಓಟ್ಸ್ ಬೀಜಗಳು, ಕಾಳುಗಳು ಮತ್ತು ಧಾನ್ಯಗಳು. ಸಂಸ್ಕರಿತ ಮತ್ತು ಜಂಕ್ ಫುಡ್ ನ್ನು ಆದಷ್ಟು ಮಟ್ಟಿಗೆಕಡೆಗಣಿಸಿ.
೧೧.ಅಜೀರ್ಣ ಸಮಸ್ಯೆಗೆ ಇದು ಉತ್ತಮ ಪರಿಹಾರ.ಪ್ರತಿದಿನ 8-10 ಲೋಟ ನೀರು ಕುಡಿಯಿರಿ ಇದು ನಿಮ್ಮ ದೇಹವನ್ನು ಕ್ಲೀನ್ ಮಾಡುತ್ತದೆ ಮತ್ತು ಅಜೀರ್ಣವಾಗದಂತೆ ನೋಡಿಕೊಳ್ಳುತ್ತದೆ. ಮುಂಜಾನೆ ಬಿಸಿ ನೀರನ್ನು ಕುಡಿಯಲು ಇಷ್ಟವಾಗದಿದ್ದಲ್ಲಿ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ.ಪ್ರತಿ ದಿನ ಇದನ್ನು ಮಾಡಿದರೆ ಇದು ನಿಮ್ಮ ದೇಹವನ್ನು ಕ್ಲೀನ್ ಮಾಡುವುದರ ಜೊತೆಗೆ ದೇಹದಲ್ಲಿರುವ ಹೆಚ್ಚಿನ ಆಮ್ಲವನ್ನು ತೆಗೆಯುತ್ತದೆ.
೧೨.ಆಹಾರವು ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಸರಾಗವಾಗಿ ಸಾಗಲು ಕೊಬ್ಬು ನೆರವಾಗುವುದು. ನಿಮ್ಮ ಆಹಾರ ಕ್ರಮದಲ್ಲಿ ಆರೋಗ್ಯಕಾರಿ ಕೊಬ್ಬು ಆಗಿರುವಂತಹ ಚೀಸ್, ಆಲಿವ್ ತೈಲ, ಮೊಟ್ಟೆ, ಬೀಜಗಳು, ಅವಕಾಡೊ ಮತ್ತು ಕೊಬ್ಬಿನಾಮ್ಲವಿರುವ ಮೀನು ಸೇರಿಸಿಕೊಳ್ಳಿ. ಒಮೆಗಾ-3 ಕೊಬ್ಬಿನಾಮ್ಲವು ಉರಿಯೂತವನ್ನು ಕಡಿಮೆ ಮಾಡುವುದು. ಇದರಿಂದ ಕರುಳಿನ ಉರಿಯೂತದ ಸಮಸ್ಯೆಉ ಕಡಿಮೆ ಆಗುವುದು. ಇದರಿಂದಾಗಿ ಸಾಲ್ಮನ್, ಟ್ಯೂನಾ, ಚಿಯಾ ಬೀಜಗಳು, ಫ್ಲೆಕ್ಸ್ ಸೀಡ್ ಮತ್ತು ಕುಂಬಳಕಾಯಿ ಬೀಜಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.
೧೩.ನೆಲ್ಲಿಕಾಯಿಯು ನಮ್ಮಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ ಎಂದು ನಾವು ಈಗಾಗಲೇ
ತಿಳಿದುಕೊಂಡಿದ್ದೇವೆ. ಇದು ಮೂತ್ರವರ್ಧಕ, ವಿರೇಚಕ, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳನ್ನು ಹೊಂದಿದೆ. ಈ ಎಲ್ಲಾ ಗುಣಗಳು ಜೀರ್ಣಕ್ರಿಯೆಯನ್ನು ವೃದ್ಧಿಸುವುದು ಮತ್ತು ಅಜೀರ್ಣ ಸಮಸ್ಯೆ ನಿವಾರಣೆ ಮಾಡುವುದು. ಅಜೀರ್ಣ ನಿವಾರಣೆ ಮಾಡಲು ಅಮ್ಲೆ ಕಾ ಮುರಬ್ಬಾ ತುಂಬಾ ಪರಿಣಾಮಕಾರಿ ಔಷಧಿಯಾಗಿದೆ.
ಧನ್ಯವಾದಗಳು.