ಕೋಪ ಯಾರಿಗೆ ತಾನೆ ಬರುವುದಿಲ್ಲ? ಎಲ್ಲರಿಗೂ ಬರುತ್ತದೆ, ಕೆಲವರು ತೋರಿಸಿಕೊಳ್ಳುತ್ತಾರೆ. ಕೆಲವರು ತಡೆದು ಇಟ್ಟುಕೊಳ್ಳುತ್ತಾರೆ. ನನಗೆ ಕೋಪವೇ ಬರಲ್ಲ ಅನ್ನುವುದು ಶುದ್ಧ ಸುಳ್ಳು ನನ್ನ ಪ್ರಕಾರ. ನಮ್ಮ ಪುರಾಣದಲ್ಲೂ ಋಷಿ ಮುನಿಗಳು ಅಷ್ಟೊಂದು ತಪಸ್ಸು, ಧ್ಯಾನ ಮಾಡಿದರೂ ಅವರಿಗೆ ಬೇಗ ಕೋಪ ಬಂದು ಎದುರಿಗೆ ಇರುವವರು ಶಾಪಗ್ರಸ್ತರಾಗುತ್ತಿದ್ದರು. ದೇವಾನು ದೇವತೆಗಳು ಕೂಡ ಕೋಪದಿಂದ ಶಾಪ ನೀಡುತ್ತಿದ್ದರು. ಅಂತಹದರಲ್ಲಿ ನಾವು ಹುಳು ಮಾನವರು ಉಪ್ಪು, ಖಾರ, ಹುಳಿ ತಿಂದು ಬದುಕುವವರು ನಮಗೆ ಕೋಪ ಬರುವುದರಲ್ಲಿ ಯಾವ ತಪ್ಪೂ ಇಲ್ಲ ಅನ್ನುವುದು ನನ್ನ ಅಭಿಪ್ರಾಯ. ಕೋಪವನ್ನು ಹೊರಗೆ ಹಾಕುವುದು ಅಷ್ಟೇ ಮುಖ್ಯ, ತಡೆದು ಇಟ್ಟುಕೊಳ್ಳುವುದು ಅಷ್ಟೇ ತೊಂದರೆ. ಸುಮ್ಮ ಸುಮ್ಮನೇ ಕಿರಿಚಾಡುದು ಕೂಡ ತಪ್ಪು. ಕಾರಣ ಇದ್ದರೆ ನಮ್ಮ ಕೋಪ ತೋರಿಸುದರಲ್ಲಿ ತಪ್ಪಿಲ್ಲ.
ಹೆರಿಗೆ ಎಂದರೆ ಹೆಣ್ಣಿಗೆ ಮರುಜನ್ಮ ಬಂದತಾಗುತ್ತದೆ. ಹೆರಿಗೆಯ ನೋವನ್ನು ತಡೆಯುವುದು ಅಷ್ಟೊಂದು ಸುಲಭವಲ್ಲ. ಅದಕ್ಕೆ ದೈಹಿಕವಾಗಿಯೂ, ಮಾನಸಿಕವಾಗಿಯೂ ಸಿದ್ಧರಾಗಿರಬೇಕು. ಹೆಚ್ಚಿನವರು ನಾರ್ಮಲ್ ಡೆಲಿವರಿಯಾಗಬೇಕೆಂದು ಬಯಸಿದರೂ, ಇತ್ತೀಚಿನ ವರ್ಷಗಳಲ್ಲಿ ನಾರ್ಮಲ್ ಡೆಲಿವರಿಗಿಂತ ಸಿ ಸೆಕ್ಷನ್ ಅಂದರೆ ಸಿಸೇರಿಯನ್ ಹೆರಿಗೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಕೆಲವರು ಇಷ್ಟಪಟ್ಟು ಸಿಸೇರಿಯನ್ ಮಾಡಿಸಿಕೊಂಡರೆ, ಮತ್ತೆ ಕೆಲವರಿಗೆ ಕೆಲವು ವೈದ್ಯಕೀಯ ಕಾರಣಗಳಿಗಾಗಿ ಸಿಸೇರಿಯನ್ ಮಾಡಿಸಿಕೊಳ್ಳಬೇಕಾಗುತ್ತದೆ. ಅದರಲ್ಲೂ ಇಂದಿನ ದಿನಗಳಲ್ಲಿ ವೃತ್ತಿಯನ್ನು ಆಯ್ದುಕೊಂಡಿರುವ ಮಹಿಳೆಯರಿಗೆ ಗರ್ಭಧಾರಣೆ ಮತ್ತು ಹೆರಿಗೆಯು ಮತ್ತಷ್ಟು ಸವಾಲುಗಳನ್ನು ತಂದೊಡ್ಡಿದೆ. ಗರ್ಭಾವಸ್ಥೆ ಮುಗಿದರೆ ಸೇಫ್ ಅಂದುಕೊಳ್ಳುವಂತಿಲ್ಲ , ಪ್ರಸವದ ನಂತರವೂ ಗಂಭೀರ ಕಾಯಿಲೆ ಬೆನ್ನು ಹತ್ತಬಹುದು. ಆದ್ದರಿಂದ ಬಾಣಂತಿ ಮನಸ್ಸನ್ನು ಮೊದಲು ಶಾಂತವಾಗಿಟ್ಟುಕೊಳ್ಳಬೇಕು. ಹೆರಿಗೆಯ ನಂತರದ ಭಾವನೆಗಳ ಏರುಪೇರು ಹಾಗೆಯೇ ಮುಂದುವರೆದರೆ ಅದು ಖಿನ್ನತೆಯಾಗಿ ಮಾರ್ಪಡುತ್ತದೆ. ಹೆರಿಗೆಯ ನಂತರ ಕಾಣಿಸುವ ಕಾಯಿಲೆಗೆ ಇಂಥದ್ದೇ ಅನ್ನುವಂಥ ನಿಗದಿತ ಕಾಯಿಲೆ ಇಲ್ಲ. ಆದರೆ ಸಾಮಾನ್ಯವಾಗಿ ಹೆಸರಿಸುವ ಕಾರಣಗಳೆಂದರೆ ಗರ್ಭಾವಸ್ಥೆಯಲ್ಲಿ ಮತ್ತು ಪ್ರಸವ ನಂತರ ಮಹಿಳೆಯರಲ್ಲಿ ಉಂಟಾಗುವ ಹಾರ್ಮೋನ್ ಗಳ ಬದಲಾವಣೆ.
ಇಲ್ಲಿ ನಾವು ಹೆಣ್ಣುಮಕ್ಕಳ ದೇಹದಲ್ಲಿ ಬದಲಾವಣೆ ಆಗುತ್ತಿದ್ದಂತೆ ಮನಸ್ಸಿನಲ್ಲಿ ಕೂಡ ಬದಲಾವಣೆ ಆಗುವುದರ ಬಗ್ಗೆ ಹೇಳಲು ಇಚ್ಚಿಸುತ್ತೇನೆ. ಚಿಕ್ಕ ಪ್ರಾಯದಲ್ಲಿ ಎಲ್ಲರೂ ಸಂತೋಷವಾಗಿ ಇರುತ್ತೇವೆ. ಆದರೆ ದೊಡ್ಡವರಾಗುತ್ತಾ ಹಲವು ಬಗೆಯ ನೋವು ,ಕಷ್ಟ ಎದುರಿಸಬೇಕು. ಒಬ್ಬ ಹೆಣ್ಣು ಮಗಳಿಗೆ ಋತು ಚಕ್ರದ ಬೇನೆ, ಕೆಲವರಲ್ಲಿ ಏನೂ ತೊಂದರೆ ಇಲ್ಲದೆ ಇರುವವರು ಇರುತ್ತಾರೆ. ಇನ್ನೂ ಕೆಲವರಿಗೆ ಸತ್ತು ಹೋಗಣ, ಹೆಣ್ಣು ಜನ್ಮವೇ ಬೇಡ ಎನ್ನುವಷ್ಟು ನೋವು ಇರುತ್ತದೆ. ಮನಸ್ತಿತಿ ಕೂಡ ಸರಿ ಇರೋದಿಲ್ಲ ಆ ಸಂದರ್ಭದಲ್ಲಿ, ಅಂಥವರ ಅಕ್ಕ ಪಕ್ಕದಲ್ಲಿ ಇರುವವರು ಸ್ವಲ್ಪ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಅದರಿಂದ ಅವರ ಮನಸ್ಥಿತಿ ತುಂಬಾ ಸುಧಾರಿಸುತ್ತದೆ.
ಇನ್ನು ಹೆಣ್ಣಿನ ಜೀವನದ ಪ್ರಮುಖ ಘಟ್ಟ ಮದುವೆ ,ಮಕ್ಕಳು. ಹೌದು ಇನ್ನೊಂದು ದೊಡ್ಡ ಬದಲಾವಣೆ ಆಕೆ ಗರ್ಭವತಿ ಆಗುವುದು. ಆ ಸಂದರ್ಭದಲ್ಲಿ ಆಕೆಯ ದೇಹದಲ್ಲಿ ಮಾತ್ರ ಅಲ್ಲ ಮನಸ್ಸಿನಲ್ಲಿ ತುಂಬಾ ಬದಲಾವಣೆ ಆಗುತ್ತದೆ. ಒಂದೊಂದು ಸಲ ಒಂದೊಂದು ರೀತಿ ನಡೆದುಕೊಳ್ಳುತ್ತಾಳೆ. ಕೋಪ, ಖುಷಿ, ದುಃಖ ಈ ರೀತಿ, ಇದಕ್ಕೆಲ್ಲ ದೇಹದಲ್ಲಿನ ಹಾರ್ಮೋನ್ ಗಳು ಏರುಪೇರು ಆಗುವುದರಿಂದ ಆಗುತ್ತದೆ. ಇಂತಹ ಸಂದರ್ಭದಲ್ಲಿ ಆದಷ್ಟು ಆಕೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಬೇಕು ಸನಿಹದವರು. ಹೆರಿಗೆಯ ನಂತರ ಸಾಮಾನ್ಯವಾಗಿ ಎಲ್ಲ ಹೆಣ್ಣುಮಕ್ಕಳಿಗೆ ಕೋಪ ಜಾಸ್ತಿಯಾಗಿರುತ್ತದೆ. ಸರಿಯಾಗಿ ನಿದ್ದೆ ಮಾಡಲು ಸಾದ್ಯವಾಗುವುದಿಲ್ಲ,ತಿನ್ನಲು ಸಾದ್ಯವಿಲ್ಲ, ಮಗುವಿನ ಆರೈಕೆ, ಸ್ವಂತ ಆರೈಕೆ ಮಾಡಿಕೊಳ್ಳಲು ಸಮಯ ಸಿಗುವುದಿಲ್ಲ. ಕೆಲವರಿಗೆ ಸಹಾಯಕವಾಗಿ ಜನ ಇರುತ್ತಾರೆ. ಆದರೆ ಇನ್ನೂ ಕೆಲವರಿಗೆ ಯಾರು ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಪಾಪ ಕೋಪಕ್ಕೆ ಬಲಿಯಾಗುವುದು ಏನೂ ಅರಿಯದ ಆ ಪುಟ್ಟ ಕಂದ. ಒಬ್ಬ ತಾಯಿ ತುಂಬಾ ಪ್ರಯತ್ನ ಪಡುತ್ತಾಳೆ ತನ್ನ ಮಗುವಿಗಾಗಿ, ಮಗುವಿನ ಜೀವನಕ್ಕಾಗಿ. ಆಕೆಯ ಸಿಟ್ಟು ಕೂಡ ಆ ಮಗುವಿನ ಮೇಲೆ ಹೋಗುತ್ತದೆ.
ಒಂದು ಮಗು ತಾಯಿಯ ಬಗ್ಗೆ ಪ್ರಬಂಧ ಬರೆ ಎಂದರೆ ಏನು ಬರೆಯಿತು ಗೊತ್ತಾ? ನನ್ನ ಅಮ್ಮ ಅಂದರೆ ನನಗೆ ತುಂಬಾ ಇಷ್ಟ.ಆದರೆ ಕೆಲವೊಮ್ಮೆ ಆಕೆ ರಾಕ್ಷಸಿ ತರ ಕಿರುಚುತ್ತಾಳೆ, ಹೊಡೆಯುತ್ತಾಳೆ. ಆಗ ಅಮ್ಮ ಅಂದರೆ ಸ್ವಲ್ಪ ಭಯ ಆಗುತ್ತದೆ. ಆದರೆ ನನ್ನನ್ನು ಅವಳಷ್ಟು ಇಷ್ಟ ಪಡುವವರು ಈ ಜಗತ್ತಿನಲ್ಲಿ ಯಾರೂ ಇಲ್ಲ ಎಂದು. ಕೆಲವೊಂದು ಸಲ ನನ್ನ ಮಗು ಕೇಳುತ್ತದೆ. ಒಂದೊಂದು ಸಲ ಖುಷಿಯಲ್ಲಿ ಇರುತ್ತಿಯ. ಇನ್ನೊಂದು ಸಲ ಸಿಟ್ಟಲ್ಲಿ ಇರುತ್ತಿಯ.
ಪಾಪ ಅದಕ್ಕೇನು ಗೊತ್ತು ನನ್ನ ಅಮ್ಮನಿಗೆ ಏನು ಆಗುತ್ತಿದೆ ಎಂದು ಈಗಷ್ಟೇ ಜೀವನ ನೋಡಲು ಶುರು ಮಾಡಿರುತ್ತದೆ. ಹಿಂದಿನ ಕಾಲದಲ್ಲಿ ಈ ಕೋಪ , ಒಂಟಿತನಕ್ಕೆ ಕಾರಣ ತುಂಬಾ ಕಮ್ಮಿ, ತುಂಬು ಕುಟುಂಬ ಒಬ್ಬರಲ್ಲ ಒಬ್ಬರು ಮಕ್ಕಳನ್ನು ಆಡಿಸುತ್ತಾ ಇರುತ್ತಿದ್ದರು .ಆದರೆ ಈಗ ಎಲ್ಲವನ್ನೂ ಒಬ್ಬರೇ ನಿಭಾಯಿಸಬೇಕು. ಆಗ ಕೋಪ ಬಿಟ್ಟು ಬೇರೇನೂ ಸಾಧ್ಯ ಇಲ್ಲ. ಆದಷ್ಟು ತಿಳಿದವರು ಪರಿಸ್ಥಿತಿಯನ್ನು ಎದುರಿಸಿದವರು ಹೆರಿಗೆ ಆದ ಹೆಣ್ಣುಮಕ್ಕಳ ಪರಿಸ್ಥಿತಿ ಅರ್ಥ ಮಾಡಿಕೊಂಡು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಬಾಣಂತಿ ಆರೈಕೆ ಸರಿಯಾಗಿ ಆಗದಿದ್ದರೆ ಆಕೆಯ ಮನಸ್ಥಿತಿಯಲ್ಲಿ ತುಂಬಾ ಏರು ಪೇರು ಆಗುವ ಸಾದ್ಯತೆ ಹೆಚ್ಚು. ಈಗಿನ ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳು ತುಂಬಾ ಕಠಿಣ ಪರಿಸ್ಥಿತಿ ಎದುರಿಸುವ ಶಕ್ತಿ ಹೊಂದಿರುವುದಿಲ್ಲ. ಯಾಕೆಂದರೆ ಎಲ್ಲ ಅಪ್ಪ ಅಮ್ಮಂದಿರಿಗೆ ಒಂದು, ಎರಡು ಮಕ್ಕಳು ಪ್ರೀತಿಯಿಂದಲೇ ಸಾಕಿರುತ್ತಾರೆ.
ಹೆಣ್ಣು ಮಕ್ಕಳಲ್ಲಿ ಕೂಡ ಒಂದು ವಿನಂತಿ, ಬಡಪಾಯಿ ಮಗುವಿನ ಮೇಲೆ ನಮ್ಮ ಕೋಪ ತೀರಿಸಿಕೊಳ್ಳುವುದು ಬೇಡ, ಅದರಿಂದ ಅವುಗಳ ಎಳೆ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಅತ್ತೆ, ಮಾವ, ನಾದಿನಿಯರು, ಗಂಡನ ಮೇಲಿನ ಕೋಪಕ್ಕೆ ಮಗು ಪಾಪ ಯಾಕೆ ಬಲಿಯಾಗಬೇಕು ಅಲ್ವಾ. ಪ್ರೀತಿಯಿಂದ ನಾವು ಇದ್ದಷ್ಟು ಮಕ್ಕಳು ಕೂಡ ನಮ್ಮನ್ನು ಅಷ್ಟೇ ನಿಷ್ಕಲ್ಮಶ ಪ್ರೀತಿಯಿಂದ ಪ್ರೀತಿತಸುತ್ತವೆ. ಹಾಗಂತ ತುಂಬಾ ಸಲುಗೆ ಒಳ್ಳೇದಲ್ಲ. ತುಂಬಾ ಸಿಟ್ಟೂ ಒಳ್ಳೇದಲ್ಲ. ಅವುಗಳಿಗೆ ತಾಯಿಯನ್ನು ಬಿಟ್ಟು ಬೇರೆ ಏನು ಗೊತ್ತು ಈ ವಯಸ್ಸಲ್ಲಿ ಅಲ್ವಾ?
GIPHY App Key not set. Please check settings