ನಮ್ಮದು ಮೂಲತಃ ಆಯುರ್ವೇದ ಪದ್ಧತಿಯ ದೇಶ. ಋುಷಿ ಮುನಿಗಳ ಹಾದಿಯಿಂದಾಗಿ ಎಲ್ಲರೂ ಅದನ್ನೇ ಅಳವಡಿಸಿಕೊಂಡಿದ್ದೆವು. ಆದರೆ, ಕಾಲ ಕಳೆದಂತೆ ಅಲೋಪತಿ ಹಾಸು ಹೊಕ್ಕಾಗಿದ್ದು, ಈ ಪದ್ಧತಿಯಿಂದ ಬಡವರ ಶೋಷಣೆ ನಡೆಯುತ್ತಿದೆ. ಹಾಗಾಗಿ ಮೊದಲಿನಂತೆ ಆಯುರ್ವೇದದತ್ತ ಸಾಗಬೇಕು, ಎಂದು ಸಲಹೆ.
ನಾವು ಹಿತ್ತಲಲ್ಲಿ ಸ್ವಲ್ಪ ಜಾಗ ಇದ್ದರೆ ಸಾಕು, ಕೆಲವೊಂದಿಷ್ಟು ಗಿಡಗಳನ್ನು ಬೆಳೆಯುತ್ತೇವೆ. ಹೂವಿನ ಗಿಡಗಳು, ಹಣ್ಣಿನ ಗಿಡಗಳು, ಕೆಲವರು ತರಕಾರಿ ಕೂಡ ಬೆಳೆಯುತ್ತಾರೆ. ಇದರೆ ಜೊತೆ ಕೆಲವೊಂದು ಔಷಧಿ ಗುಣವನ್ನು ಹೊಂದಿರುವ ಗಿಡಗಳನ್ನು ಬೆಳೆದರೆ ಕೂಡ ಉಪಯೋಗಕರವಾಗಿರುತ್ತದೆ ಎಂದು ನನ್ನ ಅಭಿಪ್ರಾಯ. ಇಲ್ಲಿ ಕೆಲವೊಂದು ಹಿತ್ತಲ ಗಿಡಗಳ ಉಪಯೋಗಗಳನ್ನು ತಿಳಿಯೋಣ.
ದೊಡ್ಡಪತ್ರೆ ಗಿಡ :
ನಮ್ಮ ನಿಮ್ಮ ಮನೆಯ ಹಿತ್ತಲಲ್ಲೇ ಇರುವ ಈ ಆರ್ಯುವೇದ ಸಂಜೀವಿನಿ ಯಾವುದೆಂದರೆ “ದೊಡ್ಡಪತ್ರೆ” ಅಥವಾ ಆಡು ಭಾಷೆಯಲ್ಲಿ ಕರೆಯಾಲಾಗುವ “ಸಾಂಬ್ರಾಣಿ ಸೊಪ್ಪು”. ಹಿಂದೆ ಜ್ವರ, ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ತಮ್ಮ ಹಿತ್ತಲಿನಲ್ಲಿದ್ದ ಗಿಡವನ್ನೇ ಮದ್ದಾಗಿ ಬಳಸಿಕೊಳ್ಳುತ್ತಿದ್ದರು. ತಮ್ಮ ಹಿತ್ತಲಿನಲ್ಲಿ ಹೂವಿನ ಗಿಡಗಳೊಂದಿಗೆ ಔಷಧೀಯ ಸಸ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದರು. ಔಷಧೀಯ ಗಿಡಗಳಲ್ಲಿ ದೊಡ್ಡಪತ್ರೆ ಗಿಡಕ್ಕೆ ಮಹತ್ವದ ಸ್ಥಾನ ಇದೆ. ಇದನ್ನು ಸಂಬಾರ ಬಳ್ಳಿ ಅಂತಲೂ ಕರೆಯುತ್ತಾರೆ. ಒಂದು ಚಿಕ್ಕ ಬಳ್ಳಿ ತಂದು ನೆಟ್ಟರೆ ಸಾಕು. ತೇವ ಮಣ್ಣಿನಲ್ಲಿ ಸ್ವಲ್ಪ ಜಾಸ್ತಿ ಇರಬೇಕು, ಚೆನ್ನಾಗಿ ಬೆಳೆಯುತ್ತದೆ. ಒಂದು ಹೂವಿನ ಕುಂಡದಲ್ಲಿ ನೆಟ್ಟರೂ ಸಾಕು. ಮಕ್ಕಳು ಇರುವ ಮನೆಯಲ್ಲಿ ಖಂಡಿತಾ ಸಂಬಾರ ಬಳ್ಳಿ ಇರಲೇಬೇಕು. ದೊಡ್ಡಪತ್ರೆ ಎಲೆ ದಪ್ಪ ಇರುತ್ತದೆ. ಆದರೆ ನೀರಿನ ಅಂಶ ಜಾಸ್ತಿ ಇರುತ್ತದೆ. ಶೀತ, ಜ್ವರ, ಕಫ, ಗಂಟಲು ಕಟ್ಟುವಿಕೆ ಎಲ್ಲದಕ್ಕೂ ರಾಮಬಾಣ. ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆ ಎಲೆಯನ್ನು ಸ್ವಲ್ಪ ಬಾಡಿಸಿ ಹಣೆಯ ಮೇಲೆ ಇಟ್ಟರೆ ಜ್ವರ ಕಮ್ಮಿಯಾಗುತ್ತದೆ. ದೊಡ್ಡಪತ್ರೆ ಎಲೆಗಳನ್ನು ಜಜ್ಜಿ ರಸ ತೆಗೆದು ಜೇನು ತುಪ್ಪದೊಂದಿಗೆ ಸೇರಿಸಿ ಕುಡಿಯುದರಿಂದ ಕಫ, ಬೇಧಿ ಕಮ್ಮಿಯಾಗುತ್ತದೆ. ದೊಡ್ಡಪತ್ರೆ ಎಲೆ ರಸ ಸೇವಿಸಿದರೆ ಹಳದಿ ರೋಗ ಕಮ್ಮಿಯಾಗುತ್ತದೆ. ಪದೆ ಪದೇ ಮಕ್ಕಳ್ಳಲ್ಲಿ ಕಫ, ಕೆಮ್ಮು ಇದ್ದರೆ ದೊಡ್ಡಪತ್ರೆ ಎಲೆ ಬಾಡಿಸಿ ರಸ ತೆಗೆದು,ಜೇನುತುಪ್ಪದೊಂದಿಗೆ ಕೊಡುತ್ತಾ ಬರಬೇಕು. ದೊಡ್ಡಪತ್ರೆ ಎಲೆಯನ್ನು ಉಪ್ಪು ಸೇರಿಸಿ ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ. ಹುಳುಕಡ್ಡಿ ಆದ ಭಾಗಕ್ಕೆ ದೊಡ್ಡಪತ್ರೆ ಎಲೆ ಹಚ್ಚುತ್ತಾ ಬಂದರೆ ಕಮ್ಮಿಯಾಗುತ್ತದೆ. ದೊಡ್ಡಪತ್ರೆ ಎಲೆಗಳಿಂದ ಬರೀ ಔಷಧಿ ಅಲ್ಲ ,ರುಚಿಯಾದ ಅಡುಗೆಗಳನ್ನು ತಯಾರಿಸಬಹುದು. ದೊಡ್ಡಪತ್ರೆಯಿಂದ ತಂಬುಳಿ ಮಾಡಬಹುದು. ಮಲೆನಾಡುಭಾಗದಲ್ಲಿ ಈ ತಂಬುಳಿಯನ್ನು ಹೆಚ್ಚಾಗಿ ಮಾಡುತ್ತಾರೆ. ದೊಡ್ಡಪತ್ರೆ ಎಲೆಯಿಂದ ಬಜ್ಜಿ ಕೂಡ ಮಾಡಬಹುದು.
ತುಂಬೆ ಗಿಡ:
ತುಂಬೆ ಶಿವನಿಗೆ ತುಂಬಾ ಇಷ್ಟವಾದ ವಸ್ತು. ತುಂಬೆ ಹೂವೂ ಪೂಜೆಗೆ ತುಂಬಾ ಶ್ರೇಷ್ಠ. ತುಂಬೆಹೂವನ್ನು ಬಳಸಿ ಅನೇಕ ಖಾಯಿಲೆಗಳನ್ನು ಗುಣಪಡಿಸಬಹುದು. ವಿಷಮ ಜ್ವರಕ್ಕೆ ರಾಮಬಾಣವಾಗಿದೆ. ಆಗಾಗ ಬರುವ ಜ್ವರಕ್ಕೆ ಲಿಂಬೆ ರಸ, ತುಂಬೆ ಸೊಪ್ಪಿನ ರಸ, ಕರಿಮೆಣಸಿನ ಪುಡಿ ಸೇರಿಸಿ ಕುಡಿಯುತ್ತಾ ಬಂದರೆ ವಿಷಮ ಜ್ವರ ಕಮ್ಮಿಯಾಗುತ್ತದೆ. ತಲೆನೋವು ಬಂದಾಗ ತುಂಬೆ ಗಿಡದ ಕಾಂಡ , ಸೊಪ್ಪಿನ ಜೊತೆಗೆ ಕುದಿಸಿ ಹಬೆ (ಸ್ಟೀಮ್) ತೆಗೆದುಕೊಳ್ಳಬೇಕು. ಇನ್ನು ತುಂಬೆ ರಸವನ್ನು ಹಾವು ಕಚ್ಚಿದಾಗ ಆ ಜಾಗಕ್ಕೆ ಹಚ್ಚಿದರೆ ರಕ್ತದಲ್ಲಿ ವಿಷ ಬೆರೆಯುವ ಸಾಧ್ಯತೆ ಕಮ್ಮಿಯಾಗುತ್ತದೆ. ತುಂಬೆ ಎಲೆ ಪೇಸ್ಟ್ ಅಲರ್ಜಿಯಾದ ಜಾಗಕ್ಕೆ ಹಚ್ಚಿದರೆ ಅಲರ್ಜಿ ಕಮ್ಮಿಯಾಗುತ್ತದೆ. ಹೆಣ್ಣುಮಕ್ಕಳಿಗೆ ಋತಸ್ರಾವದ ಸಮಯದಲ್ಲಿ ರಕ್ತ ಸ್ರಾವ ಜಾಸ್ತಿ ಇದ್ದರೆ ತುಂಬೆ ಎಲೆ ಪೇಸ್ಟ್, ಲಿಂಬೆ ರಸ, ಎಳ್ಳೆಣ್ಣೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಜೇನು ತುಪ್ಪದೊಂದಿಗೆ ತುಂಬೆ ಹೂ ರಸ ಕುಡಿಸಿದರೆ, ಮಕ್ಕಳ ಹೊಟ್ಟೆಯ ಜಂತುಹುಳ ಕಮ್ಮಿಯಾಗುತ್ತದೆ.
ತುಳಸಿ ಗಿಡ:
ತುಳಸಿ ಗಿಡದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಪೂಜಿಸುತ್ತೇವೆ. ತುಳಸಿ ಗಿಡ ಲಕ್ಷ್ಮಿ ಸ್ವರೂಪ ಎಂದು ನಂಬುತ್ತೇವೆ. ಅಷ್ಟೇ ಔಷಧಿ ಗುಣ ಕೂಡ ಇದೆ ತುಳಸಿ ಗಿಡದಲ್ಲಿ. ಬಾಯಿ ದುರ್ವಾಸನೆಗೆ ತುಳಸಿ ಎಲೆ ಉತ್ತಮವಾದ ಮನೆಮದ್ದು. ತುಳಸಿ ಎಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ಸೇವಿಸಿದ್ರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ದೇಹದಲ್ಲಿ ಶೀತದ ಕಾರಣದಿಂದ ಅನೇಕ ಸಮಸ್ಯೆ ಅಂದರೆ ಕಫ, ಕೆಮ್ಮು, ದಮ್ಮು, ಶುರುವಾಗುತ್ತದೆ. ಇದರಿಂದ ಶ್ವಾಸಕೋಶದ ಕಫ ಹೊರಗೆ ಬರಲು ತುಳಸಿ ಎಲೆ ಸಹಾಯ ಮಾಡುತ್ತದೆ. ರಕ್ತ ಶುದ್ಧಿಯಾಗುತ್ತದೆ. ಒಣಕೆಮ್ಮಿಗೆ ತುಳಸಿ ಎಲೆಗಳನ್ನು ಅಗಿದು ತಿಂದರೆ ಒಳ್ಳೆಯದು.
ವೀಳ್ಯದೆಲೆ:
ವೀಳ್ಯದೆಲೆ ಊಟ ಆದ ಮೇಲೆ ತಿನ್ನೋಕೆ ಮಾತ್ರ ಅಲ್ಲ, ಆರೋಗ್ಯಕ್ಕೆ ಬೇಕಾದ ಅನೇಕ ಉಪಯೋಗ ಕೂಡ ಇದೆ. ವೀಳ್ಯದೆಲೆ ರಸ ತೆಗೆದು ಜೇನುತುಪ್ಪದೊಂದಿಗೆ ಸೇರಿಸಿ ಕುಡಿಯುವುದರಿಂದ ಮಕ್ಕಳಿಗೆ ಎಂತಹ ಕಫ, ಕೆಮ್ಮು ಇದ್ದರೂ ಸಹ ಕಮ್ಮಿಯಾಗುತ್ತದೆ. ಗರ್ಭಿಣಿಯರಿಗೆ ವಾಕರಿಕೆ ಅಥವಾ ವಾಂತಿ ಇದ್ದರೆ ವೀಳ್ಯದೆಲೆಯನ್ನು ಒಂದು ಚಿಕ್ಕ ಅಡಿಕೆ ಜೊತೆ ಜಗಿದರೆ ಕಮ್ಮಿಯಾಗುತ್ತದೆ. ವೀಳ್ಯದೆಲೆ ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಹಲ್ಲು ನೋವು ಇದ್ದರೆ ವೀಳ್ಯದೆಲೆ ರಸ, ಲವಂಗ ಜಜ್ಜಿ ಹತ್ತಿಯಲ್ಲಿ ಅದ್ದಿ, ನೋವು ಇರುವ ಜಾಗಕ್ಕೆ ಇಟ್ಟರೆ ನೋವು ಕಮ್ಮಿಯಾಗುತ್ತದೆ.
ಒಂದೆಲಗ :
ಒಂದೆಲಗ ನೆನಪಿನ ಶಕ್ತಿ ಹಾಗೂ ಬುದ್ಧಿ ಹೆಚ್ಚಿಸಿ, ಖಿನ್ನತೆ ಮತ್ತು ಆತಂಕ ಇತ್ಯಾದಿ ದೂರ ಮಾಡಲು ನೆರವಾಗುವುದು. ಒಂದೆಲಗವನ್ನು ತುಂಬಾ ಹಿಂದಿನಿಂದಲೂ ಕೂದಲು ಉದುರುವಿಕೆ ತಡೆಯಲು ಬಳಸಲಾಗುತ್ತಿದೆ. ಇದು ಕೂದಲಿನ ಮರುಬೆಳವಣಿಗೆಗೆ ನೆರವಾಗುವುದು. ಒಂದೆಲಗ ಪುಡಿಯನ್ನು ಹಾಲಿನೊಂದಿಗೆ ಬೆರೆಸಿಕೊಂಡು ಕುಡಿಯುವುದು ಪ್ರಯೋಜನಕಾರಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆಲಗ ಎಲೆಯನ್ನು ಸೇವಿಸಿ. ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸುತ್ತಾರೆ. ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಾಶಕ್ತಿಯನ್ನು ವೃದ್ದಿಸುತ್ತದೆ ಎಂಬ ನಂಬಿಕೆಯಿದೆ. ಇದನ್ನು ನಿತ್ಯ ತಿಂದರೆ ಬುದ್ಧಿ ಚುರುಕಾಗುತ್ತದೆ. ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದೆಲಗ ಸೊಪ್ಪಿನ ಒಂದು ಎಲೆಯನ್ನು ಸೇವಿಸುವುದು ಒಳ್ಳೆಯದು. ಒಂದೆಲಗ ಪುಡಿಯನ್ನು ತುಪ್ಪ ಮತ್ತು ಹಾಲಿನೊಂದಿಗೆ ಬೆರೆಸಿ ಬಳಸುವುದು ಸಹ ಪ್ರಯೋಜನಕಾರಿಯಾಗಿದೆ.
ಹೀಗೆ ಅನೇಕ ಹಿತ್ತಲ ಗಿಡಗಳು ನಮ್ಮಲ್ಲಿ ಇವೆ. ಕೆಲವೊಂದು ನಾವು ಬೇಡ ಎಂದರೂ ಬೆಳೆಯುತ್ತವೆ. ಇನ್ನು ಕೆಲವನ್ನು ನಾವು ಬೆಳೆದರೆ ಚೆನ್ನ. ನಮ್ಮಅಂಗೈಯಲ್ಲೆ ಔಷಧಿಯಿರುವಾಗ, ಇನ್ನು ಚಿಂತೆ ಯಾಕೆ ಬೇಕು.