in

ಹೊಯ್ಸಳ ಸಾಮ್ರಾಜ್ಯ

ಹೊಯ್ಸಳ ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ

ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ ಹಳೇಬೀಡು), ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ಬಂದದ್ದು.ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ವಿಸ್ತರಿಸಿದ ಅರಸರಲ್ಲಿ ಮೊದಲಿಗ ವಿನಯಾದಿತ್ಯ.

ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ, ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು. ಹಾಗೆಯೇ ಬೇಲೂರಿನ ಚನ್ನಕೇಶವ ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ.

ಹೊಯ್ಸಳ ಸಾಮ್ರಾಜ್ಯ
ಹೊಯ್ಸಳ ಶಿಲ್ಪಕಲೆ ದ್ರಾವಿಡ ಶೈಲಿ

ಹೊಯ್ಸಳ ಶಿಲ್ಪಕಲೆ ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರ ಗುಣಗಳನ್ನೂ ತನ್ನದಾಗಿಸಿಕೊಂಡಿದೆ. ಹೊಯ್ಸಳ ದೇವಾಲಯಗಳಲ್ಲಿ ಸಹಸ್ರಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ರಾಮಾಯಣ ಮಹಾಭಾರತಗಳ ದೃಶ್ಯಗಳು, ಸುಂದರ ನರ್ತಿಸುವ ಶಿಲಾಬಾಲಿಕೆಯರಿಂದ ಕೂಡಿದ ಈ ದೇವಾಲಯಗಳು ಹೊಯ್ಸಳ ಸಾಮ್ರಾಜ್ಯ ಬಿಟ್ಟು ಹೋದ ಮುಖ್ಯ ಸಂಪ್ರದಾಯ.

ವೀರ ಬಲ್ಲಾಳನ (ಆಡಳಿತ: ೧೧೭೩-೧೨೨೦) ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ದಕ್ಷಿಣ ಭಾರತದಲ್ಲಿ ಅತ್ಯಂತ ಬಲಿಷ್ಠವಾದುದೆಂದು ಹೆಸರಾಯಿತು. ನಂತರದ ದಶಕಗಳಲ್ಲಿ ಹೊಯ್ಸಳ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ ಮತ್ತು ದೆಹಲಿಯ ಸುಲ್ತಾನೇಟ್‍ಗಳೊಂದಿಗೆ ಪೈಪೋಟಿಗೆ ಸಿಲುಕಿತು. ಅಂತಿಮವಾಗಿ ಹೊಯ್ಸಳ ವಂಶದ ಆಡಳಿತ ಕ್ರಿ.ಶ. ೧೩೪೬ ರಲ್ಲಿ ಕೊನೆಗೊಂಡಿತು.

ದಂತಕತೆಯ ಪ್ರಕಾರ ಜೈನ ಗುರು ಸುದತ್ತನು , ಸೊಸೆವೂರಿನ ವಾಸಂತಿಕಾ ದೇವಿಯ ಮಂದಿರದಲ್ಲಿ ಹುಲಿಯು ಬರಲು, ಅದನ್ನು ಹೊಡೆಯಲು ತನ್ನ ಶಿಷ್ಯ ಸಳನಿಗೆ “ಹೊಯ್ ಸಳ” ಎಂದು ಆಜ್ಞಾಪಿಸಿದರು.. ಇದು ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ. ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆ. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ.ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಷಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು. ಹೊಯ್ಸಳರ ಲಾಂಛನವು ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಾಗಿದ್ದು, ಚೋಳರ ಲಾಂಛನವು ಹುಲಿಯಾಗಿತ್ತು ಎಂಬ ಅಂಶಗಳು ಈ ಊಹೆಗೆ ಕಾರಣ.

೧೦೭೮ ಮತ್ತು ೧೭೯೦ರ ಶಾಸನಗಳು ಹೊಯ್ಸಳರನ್ನು ಯಾದವ ವಂಶದವರು ಎಂದು ಸಂಬೋಧಿಸಿವೆ. ಆದರೆ ಹೊಯ್ಸಳರಿಗೂ ಉತ್ತರದ ಯಾದವರಿಗೂ ಸಂಬಂಧ ಕಲ್ಪಿಸುವ ಯಾವುದೇ ದಾಖಲೆಗಳಿಲ್ಲ.

ಹೊಯ್ಸಳ ಆಡಳಿತದ ಮುಖ್ಯ ಆದಾಯ ಮೂಲ ಕೃಷಿ ಆಧಾರಿತ ಅರ್ಥವ್ಯವಸ್ಥೆಯಾಗಿತ್ತು. ತಮಗೆ ಸಲ್ಲಿಸಿದ ಸೇವೆಗೆ ಪ್ರತಿಯಾಗಿ ರಾಜರುಗಳು ಜಮೀನುಗಳನ್ನು ಜಹಗೀರು ನೀಡುತ್ತಿದ್ದರು. ಈ ಜಹಗೀರದಾರರು ಆ ಜಮೀನಿನ ಒಕ್ಕಲುಗಳು ಉತ್ಪಾದಿಸಿದ ಕೃಷಿ ಮತ್ತು ವನೋತ್ಪನ್ನಗಳ ಒಡೆತನ ಗಳಿಸಿಕೊಳ್ಳುತ್ತಿದ್ದರು. ಈ ಜಮೀನುದಾರರಲ್ಲಿ ಎರಡು ವಿಧಗಳಿದ್ದವು. ಪ್ರಜಾ ಗವುಂಡರು ಅಂತಸ್ತಿನಲ್ಲಿ , ಧನಾಡ್ಯ ಪ್ರಭು ಗವುಂಡರಿಗಿಂತ ಕೆಳಗಿದ್ದರು. ಮಲೆನಾಡು ಪ್ರದೇಶದಲ್ಲಿ , ಸೂಕ್ತ ಹವಾಮಾನದ ಕಾರಣ, ಪಶುಪಾಲನೆ, ತೋಟಗಾರಿಕೆ ಮತ್ತು ಸಾಂಬಾರ ಪದಾರ್ಥಗಳ ಕೃಷಿ ನಡೆಯುತ್ತಿತ್ತು. ಬಯಲುನಾಡಿನಲ್ಲಿ ಭತ್ತ ಮತ್ತು ಜೋಳವನ್ನು ಬೆಳೆಯಲಾಗುತ್ತಿತ್ತು. ಸ್ಥಳೀಯರ ಖರ್ಚಿನಲ್ಲಿ ಕಟ್ಟಿ , ದುರಸ್ತಿ ಮಾಡಲಾಗುತ್ತಿದ್ದ ಕೆರೆ ಕಟ್ಟೆಗಳು, ಕಾಲುವೆಗಳು , ಬಾವಿಗಳು ಇವುಗಳ ಮೇಲೆ ಹೊಯ್ಸಳ ರಾಜರು ಸುಂಕ ವಿಧಿಸಿದ್ದರು. ದೊಡ್ಡ ನೀರಾವರಿಗೆ ವಿಷ್ಣುಸಾಗರ,ಶಾಂತಿಸಾಗರ, ಬಲ್ಲಾಳರಾಯಸಾಗರ ಇತ್ಯಾದಿ ಕೆರೆಗಳನ್ನು ರಾಜ್ಯದ ಖರ್ಚಿನಲ್ಲಿ ಕಟ್ಟಿಸಲಾಗಿತ್ತು.

ಪಶ್ಚಿಮ ಕರಾವಳಿಯಲ್ಲಿ , ಜನಸಾಮಾನ್ಯರ ಪ್ರಯಾಣಕ್ಕೆ ಮತ್ತು ಅಶ್ವಸೇನೆಗಳಿಗೆ , ಕುದುರೆಗಳನ್ನು ಆಮದು ಮಾಡಿ ಸರಬರಾಜು ಮಾಡುವುದು ದೊಡ್ಡ ವ್ಯಾಪಾರೋದ್ಯಮವಾಗಿತ್ತು. ಕಾಡುಗಳಲ್ಲಿನ ಬೆಲೆಬಾಳುವ ತೇಗವೇ ಮೊದಲಾದ ಮರಗಳ ನಾಟಾ ತಯಾರಿಸಿ , ಇಂದಿನ ಕೇರಳದಲ್ಲಿದ್ದ ಬಂದರುಗಳ ಮೂಲಕ ರಫ್ತು ಮಾಡಲಾಗುತ್ತಿತ್ತು. ಚೀನಾದಲ್ಲಿ ದೊರೆತ ಶುಂಗ ಸಾಮ್ರಾಜ್ಯದ ದಾಖಲೆಗಳ ಪ್ರಕಾರ, ಉತ್ತರ ಚೀನಾದಲ್ಲಿ ಭಾರತದ ವ್ಯಾಪಾರಿಗಳು ಕಾಣಸಿಗುತ್ತಿದ್ದು , ಇದು ಸಮುದ್ರದಾಚೆಯ ಪ್ರದೇಶಗಳೊಂದಿಗೆ ಸಕ್ರಿಯ ವ್ಯಾಪಾರ ಸಂಪರ್ಕವಿದ್ದುದನ್ನು ಸೂಚಿಸುತ್ತದೆ. ದಕ್ಷಿಣ ಭಾರತದಿಂದ ಜವಳಿ, ಸಾಂಬಾರ ಪದಾರ್ಥಗಳು, ಔಷದೀಯ ಸಸ್ಯಗಳು, ರತ್ನಗಳು, ಮಣ್ಣಿನ ಸಾಮಗ್ರಿಗಳು, ಉಪ್ಪು, ಆಭರಣಗಳು, ಬಂಗಾರ, ದಂತ, ಖಡ್ಗಮೃಗದ ಕೊಂಬು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಕರ್ಪೂರ ಮೊದಲಾದ ವಸ್ತುಗಳು ಚೀನಾ, ಧೋಫರ್, ಏಡನ್ ಮತ್ತು ಸಿರಾಫ್ ಗಳಿಗೆ ರಫ್ತಾಗುತ್ತಿತ್ತು. ವಾಸ್ತುತಜ್ಞರು (ವಿಶ್ವಕರ್ಮರು), ಶಿಲ್ಪಿಗಳು, ಕಲ್ಲು ಕಡೆಯುವವರು, ಚಿನಿವಾರರು ಇತ್ಯಾದಿ ದೇವಾಳಯಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಕುಶಲಕರ್ಮಿಗಳು, ಬಿರುಸಿನಿಂದ ನಡೆಯುತ್ತಿದ್ದ ದೇವಾಲಯ ನಿರ್ಮಾಣದ ಕಾರ್ಯದಿಂದ , ಸಾಕ್ಡು ಸ್ಥಿತಿವಂತರಾಗಿದ್ದರು.

ನೆಲಗಂದಾಯವನ್ನು ಒಟ್ಟುಮಾಡುವ ಜವಾಬ್ದಾರಿ ಗ್ರಾಮ ಪಂಚಾಯತಿಗಳದ್ದಾಗಿತ್ತು. ಸಿದ್ಧಾಯ ಎಂದು ಕರೆಯಲಾಗುತ್ತಿದ್ದ ನೆಲಗಂದಾಯದಲ್ಲಿ ಕುಲ ಎಂಬ ಮೂಲತಃ ಬೆಲೆಕಟ್ಟಿದ್ದಲ್ಲದೇ, ವಿವಧ ಮೇಲುಗಂದಾಯವೂ ಅಡಕವಾಗಿತ್ತು. ವಿವಿಧ ವ್ಯವಸಾಯಗಳು, ವಿವಾಹಗಳು, ಗಾಡಿ ಅಥವಾ ರಥಗಳ ಮೇಲೆ ಒಯ್ಯಲಾಗುತ್ತಿದ್ದ ಸರಕುಗಳು, ಸಾಕುಪ್ರಾಣಿಗಳು ಇವೆಲ್ಲದರ ಮೇಲೂ ಸುಂಕ ಹೇರಲಾಗಿತ್ತು. ಬಂಗಾರ, ರತ್ನಗಳು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಹಗ್ಗಗಳು, ನಾರು, ಮನೆ, ಕುಲುಮೆ, ಅಂಗಡಿ, ಪಶುಮಂದೆಗಳು, ಕಬ್ಬಿನ ಗಾಣಗಳು ಇಂಥಾ ಪದಾರ್ಥಗಳಲ್ಲದೆ ಕರಿಮೆಣಸು, ವೀಳ್ಯದೆಲೆ, ತುಪ್ಪ, ಭತ್ತ,ಸಾಂಬಾರ ದಿನಸಿಗಳು, ತಾಳೆಗರಿ, ತೆಂಗಿನಕಾಯಿ, ಸಕ್ಕರೆ ಇತ್ಯಾದಿ ಕೃಷ್ಯುತ್ಪನ್ನಗಳ ಮೇಲೂ ಸುಂಕ ವಸೂಲಿ ಮಾಡಿದ ಹಳ್ಳಿ ದಾಖಲೆಗಳು ದೊರೆಯುತ್ತವೆ. ಕೆರಗಳ ನಿರ್ಮಾಣ ಮೊದಲಾದ ನಿರ್ದಿಷ್ಟ ಕೆಲಸಗಳಿಗಾಗಿ ಗ್ರಾಮ ಪಂಚಾಯತಿಗೆ ಸುಂಕ ವಿಧಿಸುವ ಹಕ್ಕಿತ್ತು.

ಹೊಯ್ಸಳ ಸಾಮ್ರಾಜ್ಯ
ಹೊಯ್ಸಳ ಆಡಳಿತ

೧೧ನೆಯ ಶತಮಾನದ ಮೊದಲಭಾಗದಲ್ಲಿ ಚೋಳರಿಂದ ಜೈನಧರ್ಮೀಯರಾಗಿದ್ದ ಪಶ್ಚಿಮ ಗಂಗರ ಪರಾಭವ ಹಾಗೂ ೧೨ನೆಯ ಶತಮಾನದಲ್ಲಿ ವೀರಶೈವ ಮತ್ತು ವೈಷ್ಣವ ಮತಗಳಲ್ಲಿ ಅನುಯಾಯಿಗಳ ಏರುತ್ತಿದ್ದ ಸಂಖ್ಯೆ , ಇವುಗಳಿಂದಾಗಿ ಜೈನಧರ್ಮದಲ್ಲಿ ಆಸಕ್ತಿ ಇಳಿಮುಖವಾಯಿತು. ಕಂಬದಹಳ್ಳಿ ಮತ್ತು ಶ್ರವಣಬೆಳಗೊಳ ಹೊಯ್ಸಳ ರಾಜ್ಯದ ಎರಡು ಉಲ್ಲೇಖನಾರ್ಹ ಜೈನ ಧರ್ಮಕೇಂದ್ರಗಳು. 8ನೆಯ ಶತಮಾನದಲ್ಲಿ ಆದಿ ಶಂಕರರ ಅದ್ವೈತ ಮತ ಪ್ರಸಾರದೊಂದಿಗೆ ದಕ್ಷಿಣ ಭಾರತದಲ್ಲಿ ಬೌದ್ಧಧರ್ಮದ ಅವನತಿ ಪ್ರಾರಂಭವಾಯಿತು. ಹೊಯ್ಸಳರ ಕಾಲದಲ್ಲಿ ಬಳ್ಳಿಗಾವಿ ಮತ್ತು ಡಂಬಳ ಇವೆರಡೇ ಬೌದ್ಧರ ಧಾರ್ಮಿಕ ಸ್ಥಳಗಳಾಗಿದ್ದವು. ವಿಷ್ಣುವರ್ಧನನ ರಾಣಿ ಶಾಂತಲಾದೇವಿ ,ಸ್ವತಃ ಜೈನಧರ್ಮೀಯಳಾಗಿದ್ದರೂ , ವಿಷ್ಣುವಿನ ಕಪ್ಪೆ ಚೆನ್ನಿಗರಾಯನ ದೇವಾಲಯವನ್ನು ಕಟ್ಟಿಸಿದ್ದು , ರಾಜಮನೆತನದ ಪರಮತ ಸಹಿಷ್ಣುತೆಗೆ ಉದಾಹರಣೆಯಾಗಿದೆ. ಬಸವಣ್ಣ, ಮಧ್ವಾಚಾರ್ಯ ಮತ್ತು ರಾಮಾನುಜಾಚಾರ್ಯರಿಂದ ಪ್ರೇರಿತರಾದ ಮೂರು ಮುಖ್ಯ ಧಾರ್ಮಿಕ ಬೆಳವಣಿಗೆಗಳು ಹೊಯ್ಸಳರ ಆಡಳಿತದ ಕಾಲದಲ್ಲಿ ಘಟಿಸಿದವು.

ಹೊಯ್ಸಳ ಆಡಳಿತದ ಕಾಲದಲ್ಲಿ ಸಂಸ್ಕೃತ ಸಾಹಿತ್ಯ ಜನಪ್ರಿಯವಾಗಿದ್ದರೂ, ಕನ್ನಡ ವಿದ್ವಾಂಸರಿಗೆ ರಾಜಾಶ್ರಯ ಹೆಚ್ಚಾಯಿತು. ೧೨ನೆಯ ಶಶತಮಾನದಲ್ಲಿ ಕೆಲ ಸಾಹಿತ್ಯ ಕೃತಿಗಳು ಚಂಪೂ ಶೈಲಿಯಲ್ಲಿ ಬರೆಯಲ್ಪಟ್ಟರೂ , ಇತರ ವಿಶಿಷ್ಟ ಶೈಲಿಗಳೂ ಜನಪ್ರಿಯವಾಗಿದ್ದವು. ಸಾಂಗತ್ಯ, ಷಟ್ಪದಿ, ತ್ರಿಪದಿ ಮತ್ತು ರಗಳೆ ಶೈಲಿಗಳು ಆಧುನಿಕವೆನಿಸಿದ್ದವು. ತೀರ್ಥಂಕರ ಮಹಿಮೆಯನ್ನು ಎತ್ತಿಹಿಡಿಯುವುದನ್ನು ಜೈನ ಕೃತಿಗಳು ಮುಂದುವರಿಸಿದವು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕರ್ನಾಟಕದ ಪ್ರಮುಖ ನದಿಗಳು

ಕರ್ನಾಟಕದ ಪ್ರಮುಖ ನದಿಗಳು

ರಕ್ತದ ಒತ್ತಡದ ಸಮಸ್ಯೆ

ಹೈ ಬಿಪಿ ಆಗಲಿ ಲೋ ಬಿಪಿ ಆಗಲಿ ಇದ್ದರೆ ಅನುಸರಿಸಬೇಕಾದ ಕ್ರಮಗಳು