ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ.
ಇವರಲ್ಲಿ ೫.೫ ಕೋಟಿ ಜನರ ಮಾತೃಭಾಷೆ ಕನ್ನಡವಾಗಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ರಾಜಾಶ್ರಯ ಪಡೆಯಿತು. ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ. ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.

ಅಶೋಕನ ಶಿಲಾಶಾಸನಗಳ ಮೂಲಕ ಭಾರತದೆಲ್ಲೆಡೆ ಆರಂಭಿಕ ಲಿಪಿಯಾಗಿ ಜನಪ್ರಿಯಗೊಂಡು, ಎಲ್ಲ ಆಧುನಿಕ ಭಾರತೀಯ ಭಾಷೆಗಳಿಗೆ ಮೂಲ-ಲಿಪಿಯಾದ ಬ್ರಾಹ್ಮೀ ಲಿಪಿಯಿಂದ ಕನ್ನಡ ಭಾಷೆಯ ಲಿಖಿತ ಲಿಪಿರೂಪಗಳನ್ನೂ ಪಡೆದುಕೊಳ್ಳಲಾಗಿದೆ. ಕ್ರಿ.ಶ. ೪೫೦ಕ್ಕೆ ಸೇರಿದ ಹಲ್ಮಿಡಿ ಶಾಸನದಲ್ಲಿ ಕನ್ನಡ ಲಿಪಿಯ ಪ್ರಾರಂಭಿಕ ರೂಪವು ದೊರೆತಿದೆ. ಬಾದಾಮಿ ಚಾಲುಕ್ಯರ ಸಂಸ್ಕೃತದ ಅನೇಕ ಶಾಸನಗಳನ್ನು ಈ ಲಿಪಿಯಲ್ಲೆ ಬರೆಯಲಾಗಿದೆ. ಕನ್ನಡ ಲಿಪಿಯು ನಿರಂತರವಾಗಿ ಬದಲಾವಣೆ ಆಗುತ್ತಲೇ ಇದ್ದು ಇಂದಿನ ಕನ್ನಡ ಲಿಪಿಯು, ಸುಮಾರು ೨,೦೦೦ ವರ್ಷಗಳ ಕಾಲಾವಧಿಯಲ್ಲಿ ಇಂತಹ ವಿಕಸನೀಯ ಬದಲಾವಣೆಗಳಿಂದ ಉಂಟಾದುದು. ಬದಲಾಗದ ಏಕರೂಪ ದೊಂದಿಗೆ ಯಾಂತ್ರಿಕವಾಗಿ ನಕಲಾಗುವ ಅಕ್ಷರ ರೂಪಗಳನ್ನು ನೀಡುವ ಮುದ್ರಣವನ್ನು ಪರಿಚಯಿಸಿದ ಮೇಲೆ, ಪ್ರಸ್ತುತ ಲಿಪಿರೂಪವನ್ನು ಪ್ರಮಾಣೀಕೃತಗೊಳಿಸಲಾಯಿತು.
ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳು ದ್ರಾವಿಡಭಾಷಾ ಗುಂಪಿಗೆ ಸೇರಿರುವುದರಿಂದ, ಎಲ್ಲ ಮೂರು ಭಾಷೆಗಳೂ ಒಂದೇ ರೀತಿಯ ಬಾಹ್ಯ ರಚನೆಯನ್ನು ಹೊಂದಿವೆ. ದ್ರಾವಿಡ ಗುಂಪಿಗೆ ಸೇರಿದ ಉಪಭಾಷೆಯಾಗಿ ಆರಂಭವಾಗಿ, ತನ್ನದೇ ಆದ ಲಿಪಿಯನ್ನು ಹೊಂದಿದ ಸುಸಂಸ್ಕೃತ ಭಾಷೆಯ ಸ್ಥಾನಮಾನಗಳನ್ನು ಪಡೆಯುವ, ವಿವಿಧ ಹಂತಗಳ ಅಭಿವೃದ್ಧಿಯನ್ನು ಅವು ಹಾದು ಬಂದಿದ್ದರೂ, ತಾಂತ್ರಿಕ, ವೈಜ್ಞಾನಿಕ ಹಾಗೂ ತತ್ವಚಿಂತಕ ಶಬ್ದಸಂಪತ್ತು, ಸಂಸ್ಕೃತ ಭಾಷೆಯಿಂದ ಪೋಷಿತವಾಗಿದೆ. ಭಾಷೆಯ ಪ್ರಾರಂಭಿಕ ರೂಪವನ್ನು ಹಳೆಗನ್ನಡ ಹಾಗೂ ನಂತರದ ನಡುಗನ್ನಡ ಎಂದು ಕರೆಯಲಾಗಿದ್ದು, ಅದು ಹೊಸಗನ್ನಡಕ್ಕೆ ದಾರಿ ಮಾಡಿಕೊಟ್ಟಿತು. ಹಳೆಗನ್ನಡವು ಪ್ರಾಚೀನ ಸಾಹಿತ್ಯವನ್ನು ಪೋಷಿಸಿದ್ದರೆ, ಬಹುಪಾಲು ಜನಪ್ರಿಯ ಸಾಹಿತ್ಯವು ನಡುಗನ್ನಡ ಅಥವಾ ಹೊಸಗನ್ನಡಕ್ಕೆ ಸೇರಿವೆ.
ಆಡಳಿತ ಭಾಷೆಯಾಗಿ ಕನ್ನಡ
ಕ್ರಿ.ಶ. ಆರನೆಯ ಶತಮಾನದಿಂದ ಕನ್ನಡದಲ್ಲಿ ಹೊರಡಿಸಿದ ಅನೇಕ ರಾಜಾಜ್ಞೆಗಳನ್ನು ನೋಡಿದಾಗ, ಪ್ರಾಕೃತ ಹಾಗೂ ಕನ್ನಡ ಭಾಷೆಗಳನ್ನು ಪ್ರಾರಂಭಿಕ ಮತ್ತು ನಂತರದ ಕಾಲಗಳಲ್ಲಿ ಕ್ರಮವಾಗಿ ಬಳಸಿದರೂ, ನಂತರ ಬಂದ ಕರ್ನಾಟಕದ ಅರಸರು ಆಡಳಿತ ಉದ್ದೇಶಕ್ಕಾಗಿ ಕನ್ನಡವನ್ನೂ ಬಳಸುತ್ತಿದ್ದರು ಎಂದು ತಿಳಿದು ಬರುತ್ತದೆ. ಕದಂಬರ ಹಲ್ಮಿಡಿ ಶಿಲಾಶಾಸನ ಹಾಗೂ ಚಾಲುಕ್ಯರ ಬಾದಾಮಿ ಗುಹಾ ಶಾಸನೆಗಳು ರಾಜಾನುದಾನಗಳನ್ನು ಘೋಷಿಸುವ ಅತ್ಯಂತ ಪುರಾತನ ಕನ್ನಡ ದಾಖಲೆಗಳಾಗಿವೆ. ಕಲ್ಯಾಣದ ಚಾಳುಕ್ಯರ ಆಳ್ವಿಕೆಯಲ್ಲಿ ಹಾಗೂ ಆನಂತರದ ಹೊಯ್ಸಳ ಹಾಗೂ ಸೇವುಣರ ಆಡಳಿತಾವಧಿಯಲ್ಲೂ, ಆಡಳಿತ ಉದ್ದೇಶಗಳಿಗಾಗಿ ಕನ್ನಡ ಭಾಷೆಯನ್ನು ಬಳಸುವುದು ಹೆಚ್ಚಿತು. ಈ ರಾಜಮನೆತನಗಳಿಗೆ ಸೇರಿದ ಬಹುತೇಕ ಶಾಸನಗಳು ಕನ್ನಡದ ಹಲವಾರು ಆಡಳಿತಾತ್ಮಕ ಪದಗಳನ್ನೂ ಕನ್ನಡ ಹಾಗೂ ಸಂಸ್ಕೃತ ವಾಕ್ಯಭಾಗಗಳನ್ನೂ ಹೊಂದಿವೆ.

ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳಾದ ಕೆಳದಿಯ ನಾಯಕರು ಹಾಗೂ ಮೈಸೂರಿನ ಒಡೆಯರೂ ಕೂಡ, ರಾಜ್ಯದ ಏಕೈಕ ಆಡಳಿತ ಭಾಷೆಯಾಗಿ ಕನ್ನಡವನ್ನು ಬಳಸಿದರು. ಬಿಜಾಪುರದ ಅರಸರು, ಶಾಹಜಿ, ಏಕೋಜಿ ಹಾಗೂ ಶಿವಾಜಿಯ ಶಾಸನ ಹಾಗೂ ರಾಜಾಜ್ಞೆಗಳು ಕನ್ನಡದಲ್ಲಿವೆ. ಆಡಳಿತ ಹಾಗೂ ಸಾಮಾನ್ಯ ಉದ್ದೇಶಗಳೆರಡಕ್ಕೂ ಬ್ರಿಟಿಷರು ಕೊಡಗಿನ ಅರಸರು ಹಾಗೂ ಮೈಸೂರು ಒಡೆಯರು ಕನ್ನಡವನ್ನು ವಿಸ್ತೃತವಾಗಿ ಬಳಸಿದರು. ಪ್ರಸ್ತುತದಲ್ಲಿ, ಕರ್ನಾಟಕ ಸರ್ಕಾರವು ಕನ್ನಡವನ್ನು ಅಧಿಕೃತ ಆಡಳಿತ ಭಾಷೆಯಾಗಿ ಮಾಡಿದ್ದು ಭಾಷೆಯನ್ನು ಉತ್ತೇಜಿಸಲು ಹಾಗೂ ರಾಜ್ಯ ವ್ಯವಸ್ಥೆಯ ಎಲ್ಲ ಸ್ಥರಗಳಲ್ಲೂ ಅದರ ಬಳಕೆಯನ್ನು ಅನುಷ್ಠಾನಕ್ಕೆ ತರಲು ಹಾಗೂ ಭಾಷೆಯನ್ನು ಬಳಸಲು ಹಲವಾರು ಯೋಜನೆ ಹಾಗೂ ಕ್ರಮಗಳನ್ನು ಅನುಷ್ಠಾನ ಮಾಡಿದೆ.
ಕನ್ನಡ ಸಾಹಿತ್ಯದ ಪ್ರಾಚೀನತೆ
ಹಲ್ಮಿಡಿ ಶಾಸನ
ಹಲ್ಮಿಡಿ ಶಾಸನವು ಸುಮಾರು ಕ್ರಿ.ಶ. ೪೫೦ಕ್ಕೆ ಸೇರಿದ ಪ್ರಾಚೀನ ಕನ್ನಡ ಶಾಸನ. ಗದ್ಯ ರೂಪದಲ್ಲಿರುವ ಈ ಶಾಸನವು, ಪ್ರಬುದ್ಧ ಅಭಿವ್ಯಕ್ತತೆಯಿಂದ ಕೂಡಿದೆ. ಹಾಗಾಗಿ ಈ ಅವಧಿಯ ವೇಳೆಗೆ, ಕನ್ನಡವು ಸಾಹಿತ್ಯಕ ಭಾಷೆಯಾಗಿ ಅಭಿವೃದ್ಧಿ ಹೊಂದಿತ್ತೆಂದು ಅನೇಕ ವಿದ್ವಾಂಸರು ನಂಬಿದ್ದಾರೆ. ಭಾಷೆ ಹಾಗೂ ಸಾಹಿತ್ಯದ ಪ್ರಾರಂಭಿಕ ಹಂತಗಳು ಹಾಗೂ ಕನ್ನಡದ ಮೇಲೆ ಅದಾಗಲೇ ಸ್ಥಾಪಿತವಾಗಿದ್ದ ಸಂಸ್ಕೃತದ ಪ್ರಭಾವದ ಮೇಲೆ ಇದು ಬೆಳಕು ಚೆಲ್ಲುತ್ತದೆ. ಅಷ್ಟೇ ಅಲ್ಲ, ಶಾಸನದ ಮಂಗಳ ಶ್ಲೋಕವೂ ಸಂಸ್ಕೃತದಲ್ಲಿದೆ.
ರಾಷ್ಟ್ರಕೂಟ ರಾಜನಾದ ನೃಪತುಂಗನ ಆಸ್ಥಾನ ಕವಿಯಾದ ಶ್ರೀವಿಜಯನು ಬರೆದ ಅಥವಾ ಸಂಪಾದಿಸಿರುವ ಕವಿರಾಜಮಾರ್ಗವು, ಕನ್ನಡ ಸಾಹಿತ್ಯದಲ್ಲಿ ಲಭ್ಯವಿರುವ ಪ್ರಥಮ ಕೃತಿ.
ಕ್ರಿ.ಶ. ೧೦ನೆಯ ಶತಮಾನದಿಂದ, ಭಾಷೆ ಹಾಗೂ ಸಾಹಿತ್ಯಗಳೆರಡರ ವಿವಿಧ ಸಾಹಿತ್ಯ ಸ್ವರೂಪಗಳನ್ನೂ ನಿರಂತರ ಅಭಿವೃದ್ಧಿಯನ್ನೂ ಕನ್ನಡ ಭಾಷೆಯು ಕಂಡಿತು. ನಂತರದ ಕಾಲದಲ್ಲಿ ಕರ್ನಾಟಕದ ಇತಿಹಾಸವನ್ನು ಕಾಲಾನುಕ್ರಮದಲ್ಲಿ ವ್ಯಾಪಿಸಿಕೊಂಡ ಧರ್ಮಗಳನ್ನು ಆಧರಿಸಿದ ಜೈನ, ವೀರಶೈವ ಹಾಗೂ ವೈಷ್ಣವ ಯುಗಗಳಾಗಿ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೂರು ಹಂತಗಳೆಂದು ಕೆಲವು ವಿದ್ವಾಂಸರು ಗುರುತಿಸಿದ್ದಾರೆ. ಮತ್ತೊಂದು ಶೈಲಿಯು, ವೀರೋಚಿತ ಹಾಗೂ ಮಹಾಕಾವ್ಯದ ಯುಗ, ಧಾರ್ಮಿಕ ಪ್ರಚಾರದ ಯುಗ, ದಂಗೆಯ ಯುಗ, ವೈಭವದ ಯುಗ ಹಾಗೂ ಪುನರುತ್ಥಾನದ ಯುಗವೆಂದು ಗುರುತಿಸಿದೆ.
ಧಾರ್ಮಿಕ ಮಹಾಕಾವ್ಯವಾದ ‘ಆದಿಪುರಾಣ’ವನ್ನೂ ಪಂಪನು ಬರೆದನು. ಜೈನ ಮತದ ಧಾರ್ಮಿಕ ಹಾಗೂ ತತ್ವಚಿಂತನೆಯ ಸಿದ್ಧಾಂತಗಳಿಗೆ ಅನುಗುಣವಾಗಿ, ಕೃತಿಯು ಶಾಂತರಸದ ಮೇಲೆ ಕೇಂದ್ರೀಕೃತವಾಗಿದೆ. ಹಾಗಾಗಿ, ಕರ್ನಾಟಕದ ಬ್ರಾಹ್ಮಣೀಯ ಹಾಗೂ ಜೈನ ಸಂಸ್ಕೃತಿಗಳೆರಡರ ಅಪರೂಪದ ಸಂಯೋಜನೆಯನ್ನು ಪಂಪನು ಪ್ರತಿನಿಧಿಸುವನೆಂದು ಸರಿಯಾಗಿಯೇ ಹೇಳಲಾಗಿದೆ.

ರಾಷ್ಟ್ರಕೂಟ ರಾಜನಾದ ಮೂರನೆಯ ಇಂದ್ರನ ಅಧೀನದಲ್ಲಿ ಸೇನಾಧಿಪತಿಯಾಗಿದ್ದ ಶ್ರೀವಿಜಯನು, ಸ್ವತಃ ಮಹಾನ್ ಕವಿಯಾಗಿದ್ದನು. ಆತನ ಕೃತಿಗಳು ಲಭ್ಯವಿಲ್ಲದಿದ್ದರೂ, ಆತನು ರಚಿಸಿದ ಮಣ್ಣೆ ತಾಮ್ರ ಫಲಕದ ದಾಖಲೆಯು ಮಹಾನ್ ಮೌಲ್ಯವುಳ್ಳದಾಗಿದ್ದು, ಕಿರು ಮಹಾಕಾವ್ಯವೆಂದು ಪರಿಗಣಿಸಲ್ಪಟ್ಟುದ್ದ, ಆತನ ಸಮಕಾಲೀನರು ಆತನ ಕುರಿತಾಗಿ ನುಡಿದ ಹೊಗಳಿಕೆಯ ಮಾತುಗಳು ಸಮಂಜಸವೆಂದೆನಿಸಿವೆ.
ವೈಭವದ ಯುಗ
ಕ್ರಿ.ಶ. ೧೪ – ೧೬ನೆಯ ಶತಮಾನಗಳ ನಡುವಣ ಅವಧಿಯನ್ನು ವಿಜಯನಗರ ಸಾಮ್ರಾಜ್ಯದ ಸುವರ್ಣ ಯುಗವೆಂದು ಸ್ಮರಿಸಿಕೊಳ್ಳಲಾಗುತ್ತದೆ. ಈ ಅವಧಿಯಲ್ಲಿ, ಎಲ್ಲ ಮತಗಳ ಕವಿಗಳೂ, ತಮ್ಮ ಕೃತಿಗಳೊಂದಿಗೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಆ ಅವಧಿಯ ಜನಪ್ರಿಯ ಕವಿಯಾದ ಕುಮಾರವ್ಯಾಸನು ಗದುಗಿನ ಭಾರತವೆಂದು ಜನಪ್ರಿಯವಾದ ಕರ್ನಾಟಕ-ಭಾರತ ಕಥಾಮಂಜರಿಯನ್ನು ಬರೆದನು. ಷಟ್ಪದಿ ಎಂಬ ನಿರ್ದಿಷ್ಟ ಕನ್ನಡ ಛಂದಸ್ಸನ್ನು ಬಳಸಿ ರಚಿಸಲಾದ ಈ ಕೃತಿಯು ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಒಳಗೊಂಡಿದೆ.
ಮಧ್ವ ಸಂತರಾದ ಪುರಂದರದಾಸ ಹಾಗೂ ಕನಕದಾಸರು, ವ್ಯಾಸರಾಜರ ಪ್ರೇರಣೆಯಿಂದ, ಸರಳ ಮಾತನಾಡುವ ಕನ್ನಡವನ್ನು ತಮ್ಮ ಅಭಿವ್ಯಕ್ತತೆಯ ಮಾಧ್ಯಮವಾಗಿ ಬಳಸಿ, ಅನೇಕ ಭಕ್ತಿ ಗೀತೆಗಳನ್ನು ರಚಿಸಿದರು. ಕರ್ನಾಟಕದಲ್ಲಿ ಭಕ್ತಿ ಚಳವಳಿಯ ಒಂದು ಭಾಗವಾದ ದಾಸಕೂಟಕ್ಕೆ ಅವರು ಪ್ರೇರಣೆ ನೀಡಿದರು.
ಕಿಟೆಲ್ ಶಬ್ದಕೋಶದ ಹೆಗ್ಗಳಿಕೆ
ಫರ್ಡಿನೆಂಡ್ ಕಿಟೆಲ್ ಕನ್ನಡ ಶಬ್ದಕೋಶ ರಚಿಸಿದ್ದು ಎಲ್ಲ ಕನ್ನಡಿಗರಿಗೂ ಗೊತ್ತಿರುವ ವಿಷಯ. ಆದರೆ ಹೀಗೆ ವಿದೇಶಿಯರೊಬ್ಬರು ಭಾರತೀಯ ಪ್ರಾದೇಶಿಕ ಭಾಷೆಯೊಂದರ ಶಬ್ದಕೋಶ ರಚಿಸಿದ್ದು ಕನ್ನಡದಲ್ಲಿ ಮಾತ್ರ ಎಂಬುದು ಕನ್ನಡದ ಹೆಗ್ಗಳಿಕೆಗೆ ಮೇರುಗರಿ!
ಧನ್ಯವಾದಗಳು.
GIPHY App Key not set. Please check settings