ಚಿಕ್ಕವಯಸ್ಸಿನಲ್ಲಿ ತೆಂಗಿನಮರದ ಒಂದು ಪದ್ಯ ಪಾಠ ಇತ್ತು.”ನಾರಿ ಕೇಳ ಕಲ್ಪವೃಕ್ಷ ತೆಂಗಿನಮರ ನೀನು ,ರೆಂಬೆ ಇಲ್ಲ, ಕೊಂಬೆ ಇಲ್ಲ ತಲೆಯ ತುಂಬಾ ಗರಿ”.ತೆಂಗಿನ ಮರದ ಎಲ್ಲ ವಿಶೇಷತೆಗಳನ್ನು ಪದ್ಯ ಪಾಠದಲ್ಲಿ ವರ್ಣಿಸಿದ್ದರು ಕವಿ. ಹೌದು ತೆಂಗಿನ ಮರದಲ್ಲಿ ವೇಸ್ಟ್ ಅಂತ ಯಾವ ಭಾಗನೂ ಇಲ್ಲ.ತಲೆಯಿಂದ ಹಿಡಿದು ಬೇರಿನವರೆಗೂ ಉಪಯೋಗಕ್ಕೆ ಬರುವ ಮರ ತೆಂಗು.
ನಮ್ಮಲ್ಲಿ ತೆಂಗು ನಮ್ಮ ಜೀವನದ ಭಾಗ. ಅದಿಲ್ಲದ ಜೀವನವನ್ನು ಊಹಿಸಲೂ ಸಾಧ್ಯವಿಲ್ಲ. ಕನಿಷ್ಠ ಪಕ್ಷ ಅಡುಗೆಗಾದರೂ ಅದು ಬೇಕೇ ಬೇಕು. ದಕ್ಷಿಣ ಭಾರತದಲ್ಲಂತು ತೆಂಗಿನ ಕಾಯಿ ಬಳಸದೇ ದಿನ ನಿತ್ಯದ ಆಹಾರ ತಯಾರಿಸುವುದನ್ನು ಕಲ್ಪಿಸುವುದೂ ಸಾಧ್ಯವಿಲ್ಲ. ತೆಂಗಿನ ಮರವನ್ನು ‘ಉಷ್ಣವಲಯದ ಆಭರಣ’ ಎಂದು ಕರೆಯಲಾಗುತ್ತದೆ. ಉಷ್ಣವಲಯದ ರಾಷ್ಟ್ರಗಳಲ್ಲಿ ಇದು ಪ್ರಮುಖ ಬೆಳೆ. ಸಾವಿರಾರು ವರ್ಷಗಳ ಹಿಂದೆಯೇ ತೆಂಗಿನ ಮರ ಮತ್ತು ಅದರ ಉತ್ಪನ್ನಗಳ ಬಳಕೆಯ ಬಗ್ಗೆ ಜನರಿಗೆ ಅರಿವಿತ್ತು.
ತೆಂಗಿನಕಾಯಿ ಮರ ಪಾಮೇ ಅಥವಾ ಅರೆಕೆಸಿಯಾ ಸಸ್ಯ ಕುಟುಂಬಕ್ಕೆ ಸೇರಿದ ಮರ. ಕೊಂಬೆಗಳು ಇರುವುದಿಲ್ಲ. ಗರಿಗಳು ಹಸ್ತಾಕಾರದಲ್ಲಿರುತ್ತವೆ. ಪಾಮೇಸಸ್ಯ ಕುಟುಂಬದಲ್ಲಿ ಈ ಮರ ಕೊಕಸ್ ಜಾತಿಗೆ ಸೇರಿದ ಮರ. ಈ ಜಾತಿಯಲ್ಲಿ ಇರುವ ಒಂದೇ ಮರ ತೆಂಗಿನಮರ.ಗರಿಗಳು ಹರಿತವಾಗಿ ಹಚ್ಚ ಹಸಿರಾಗಿರುತ್ತವೆ. ಈ ಮರದ ಸಸ್ಯ ಶಾಸ್ತ್ರ ಹೆಸರು ಕೊಕಸ್ ನ್ಯುಸಿಫೆರಾ.ಮರದ ಮೇಲಿನ ಭಾಗದಲ್ಲಿ ವೃತ್ತಾಕಾರ ರೂಪದಲ್ಲಿ ಗರಿಗಳು ವ್ಯಾಪ್ತಿಸಿರುತ್ತವೆ. ತೆಂಗಿನ ಕಾಯಿಗಳು ದೊಡ್ಡದಾಗಿರುತ್ತವೆ. ಕಾಯಿಯ ಹೊರಭಾಗದಲ್ಲಿ ದಪ್ಪವಾಗಿ ಕತ್ತ/ನಾರು ಇರುತ್ತದೆ. ಕತ್ತದ ಒಳಗೆ ದಪ್ಪವಾದ, ಗಟ್ಟಿಯಾದ ಸಿಪ್ಪೆ ಇರುತ್ತದೆ. ಈ ಸಿಪ್ಪೆ ಒಳಗೆ ತಿರುಳು ಕಂಡು ಬರುತ್ತದೆ. ತಿರುಳು ಬೆಳ್ಳಗೆ ಇರುತ್ತದೆ.
ತೆಂಗು ಇಂಗ್ಲಿಷ್‌ನಲ್ಲಿ ಕೋಕೊನಟ್ ಎಂದೇ ಚಿರಪರಿಚಿತ. ಆಡುಮಾತಿನಲ್ಲಿ ‘ಕಲ್ಪವೃಕ್ಷ’ ಎಂದೂ ಕರೆಯುವವರಿದ್ದಾರೆ. ಬಹುಶಃ ತೆಂಗಿನ ಮರದ ಬಹೂಪಯೋಗಿ ಗುಣಗಳು ಅದಕ್ಕೆ ಆ ಹೆಸರನ್ನು ತಂದಿರಬಹುದು. ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ಒಂದಲ್ಲ ಒಂದು ರೀತಿ ಅವನ ಉಪಯೋಗಕ್ಕೆ ಬರುವ ಮರಗಳಲ್ಲಿ ತೆಂಗಿನ ಮರ ಮುಂಚೂಣಿಯಲ್ಲಿ ನಿಲ್ಲುತ್ತದೆ. ಎಳನೀರು, ತೆಂಗಿನಕಾಯಿ, ಕೊಬ್ಬರಿ, ಎಣ್ಣೆ, ಮಡಲಿನಿಂದ ಪೊರಕೆ, ಉರುವಲು, ಗೆರಟೆಯಿಂದ ಕಲ್ಲಿದ್ದಲು, ಗೊಬ್ಬರಕ್ಕೆ ವಸ್ತು, ನಾರಿನ ಹಗ್ಗ, ಗೃಹೋಪಯೋಗಿ ವಸ್ತುಗಳು, ಕಟ್ಟಡಗಳಿಗೆ ಚಾವಣಿ ನಿರ್ಮಾಣದಲ್ಲಿ ಪಕ್ಕಾಸು… ಹೀಗೆ ತೆಂಗಿನಿಂದಾಗುವ ಪ್ರಯೋಜನವನ್ನು ಪಟ್ಟಿ ಮಾಡುತ್ತಾ ಹೋದರೆ ಇನ್ನೂ ಹಲವಾರು ಅಂಶಗಳನ್ನು ಸೇರಿಸಬಹುದು.
ಅಧ್ಯಯನದ ಮೂಲಕ ತೆಂಗಿನ ಮರದ ಮೂಲ ಕಂಡು ಹಿಡಿಯುವ ಕೆಲಸ ನಡೆದಿದೆ. ಇದಕ್ಕಾಗಿ ವಿಜ್ಞಾನಿಗಳ ತಂಡವೊಂದು 1,300 ತೆಂಗಿನ ಕಾಯಿಗಳ ಡಿಎನ್‌ಎ ಅಧ್ಯಯನ ನಡೆಸಿದೆ. ಈ ಹಿಂದೆ ಭೂಮಿಯ ಎರಡು ಪ್ರದೇಶಗಳಲ್ಲಿ ತೆಂಗನ್ನು ಪ್ರಮುಖವಾಗಿ ಬೆಳೆಯಲಾಗುತ್ತಿತ್ತು ಎಂಬುದನ್ನು ಅವರು ಕಂಡು ಕೊಂಡಿದ್ದಾರೆ.
ಒಂದು ಹಿಂದೂ ಮಹಾಸಾಗರದ ಅಂಚಿನಲ್ಲಿರುವ ಭೂ ಪ್ರದೇಶ ಮತ್ತು ಇನ್ನೊಂದು ಪೆಸಿಫಿಕ್ ಜಲಾನಯನ ಪ್ರದೇಶದಲ್ಲಿರುವ ಭೂ ಭಾಗ. ಪೆಸಿಫಿಕ್ ಸಾಗರಕ್ಕೆ ಹೊಂದಿಕೊಂಡಿರುವ ಮಲೇಷ್ಯಾ, ಫಿಲಿಪ್ಪೀನ್ಸ್ ಮತ್ತು ಇಂಡೋನೇಷ್ಯಾ ರಾಷ್ಟ್ರಗಳಲ್ಲಿ ತೆಂಗನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರು. ಹಿಂದೂ ಮಹಾ ಸಾಗರದ ಕಡೆಯಲ್ಲಿ ಭಾರತ, ಅದರಲ್ಲೂ ವಿಶೇಷವಾಗಿ ಅದರ ದಕ್ಷಿಣ ಭಾಗ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಲಕ್ಷದೀಪಗಳಲ್ಲಿ ಇದನ್ನು ಹೆಚ್ಚು ಬೆಳೆಯುತ್ತಿದ್ದರು. ಈಗಲೂ ಈ ಪ್ರದೇಶಗಳಲ್ಲಿ ತೆಂಗೇ ಪ್ರಮುಖ ಬೆಳೆ.
ಅಂದ ಹಾಗೆ, ತೆಂಗಿನ ಕಾಯಿಗೆ ಕೋಕೊನಟ್ ಎಂದು ಹೆಸರಿಟ್ಟವರು ಪೋರ್ಚುಗೀಸರು. 16ನೇ ಶತಮಾನದಲ್ಲಿ ಪೋರ್ಚುಗೀಸರು ಭಾರತಕ್ಕೆ ಬಂದಿದ್ದಾಗ ಇದನ್ನು ಆ ಹೆಸರಿನಿಂದ ಕರೆದರು. ಸದ್ಯ, ಜಾಗತಿಕ ಮಟ್ಟದಲ್ಲಿ ತೆಂಗು ಉತ್ಪಾದನೆಯಲ್ಲಿ ಭಾರತಕ್ಕೆ ಮೂರನೇ ಸ್ಥಾನ. ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್‌ಗಳಿವೆ.
ತೆಂಗಿನ ಕಾಯಿಯಿಂದ ಆಗುವ ಪ್ರಯೋಜನಗಳು
ತೂಕ ಇಳಿಸಿಕೊಳ್ಳಲು : ತೆಂಗಿನ ಹಾಲು ಬೊಜ್ಜಿನ ಸಮಸ್ಯೆಯನ್ನು ತೆಗೆದುಹಾಕುತ್ತದೆ. ಇದು ವಿಶೇಷ ರೀತಿಯ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತೆಂಗಿನ ಹಾಲಿನಲ್ಲಿ ಫೈಬರ್ ಇರುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದ, ತೂಕವನ್ನು ಕಡಿಮೆ ಮಾಡಲು, ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬಹುದು.
ಮಲಬದ್ದತೆ ಮತ್ತು ವಾಯುವಿನ ಸಮಸ್ಯೆಯನ್ನು ಕೂಡಾ ನಿವಾರಿಸುತ್ತದೆ :
ಸಾಮಾನ್ಯವಾಗಿ ಬಹುತೇಕ ಮಂದಿ ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಾರೆ. ಮಲಬದ್ಧತೆ ನಿವಾರಣೆಗೆ ತೆಂಗಿನ ಕಾಯಿ ಹೇಳಿ ಮಾಡಿಸಿರುವಂಥದ್ದು. ತೆಂಗಿನ ಕಾಯಿಯಲ್ಲಿ ಅಧಿಕ ಪ್ರಮಾಣದ ನಾರಿನ ಅಂಶ ಇರುತ್ತದೆ. ಹಾಗಾಗಿ ಇದು ಮಲಬದ್ದತೆ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ.
ಚರ್ಮ ಮೃದುವಾಗಿರುತ್ತದೆ : ಚರ್ಮದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದರಿಂದ, ದೇಹದ ಮೇಲೆ ವಯಸ್ಸಿನ ರೇಖೆಗಳು ಕಡಿಮೆ ಗೋಚರಿಸುತ್ತದೆ. ತೆಂಗಿನಕಾಯಿ ಹಾಲನ್ನು ಬಳಸಿ ಚರ್ಮದ ಶುಷ್ಕತೆಯನ್ನು ತೊಡೆದುಹಾಕಬಹುದು. ತೆಂಗಿನ ಹಾಲು ಕುಡಿಯುವುದರಿಂದ ಚರ್ಮದ ಮೃದುತ್ವವನ್ನು ಕಾಪಾಡುತ್ತದೆ.
ದೇಹದ ತಂಪಿಗೆ : ಬೇಸಿಗೆ ಶುರುವಾಗಿಯೇ ಬಿಟ್ಟಿದೆ. ಬೇಸಿಗೆ ಕಾಲದಲ್ಲಿ ದೇಹದ ಶಾಖವೂ ಕೂಡಾ ಹೆಚ್ಚುತ್ತದೆ. ಈ ಸಮಯದಲ್ಲಿ ತೆಂಗಿನ ಕಾಯಿ ಸೇವನೆ ನಮ್ಮ ದೇಹವನ್ನು ತಂಪಾಗಿಡಲು ಸಹಕರಿಸುತ್ತದೆ. ತೆಂಗಿನಕಾಯಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದನ್ನು ತಪ್ಪಿಸುತ್ತದೆ. ಈ ಕಾರಣದಿಂದಲೇ ಬೇಸಿಗೆಯಲ್ಲಿ ಹೆಚ್ಚು ಎಳನಿರು ಸೇವಿಸುವಂತೆ ಸೂಚಿಸಲಾಗುತ್ತದೆ.
ತೆಂಗಿನ ಕಾಯಿ ವಿವಿಧ ಬಗೆಯಲ್ಲಿ ಉಪಯೋಗ:
ತೆಂಗಿನ ಕಾಯಿಯ ಅಂಶ ರಕ್ತವನ್ನು ಶುದ್ಧಗೊಳಿಸಿ ಮೂತ್ರನಾಳವೂ ಸರಾಗವಾಗುತ್ತದೆ.ವಾತ, ಪಿತ್ತ, ಕಫ ಎಂಬ ಮೂರು ದೋಷಗಳೂ ನಿವಾರಣೆಯಾಗುತ್ತದೆ.
ದಿನವೂ ತೆಂಗಿನ ತುರಿಯನ್ನು ಜಿಗಿಯುವುದರಿಂದ ಬಾಯಿಗೆ ತಗುಲುವ ಹಲವು ಸಮಸ್ಯೆಗಳನ್ನು ತಡೆಯಬಹುದು.ತೆಂಗಿನ ತುರಿಯನ್ನು ಗರ್ಭಿಣಿಯರು ತಿನ್ನುತ್ತಿದ್ದರೆ ಮಗುವಿನ ಆರೋಗ್ಯ ಹೆಚ್ಚುತ್ತದೆ.
ಎಳನೀರು ಕುಡಿಯುವುದೂ ಎದೆ ಹಾಲಿನಷ್ಟು ಶುದ್ಧ. ಇದನ್ನು ಮಕ್ಕಳು ನಿರಂತರವಾಗಿ ಕುಡಿಯುತ್ತಿದ್ದರೆ ಆರೋಗ್ಯ ವೃದ್ಧಿಯಾಗುವುದಲ್ಲದೆ ಹೊಟ್ಟೆ ಹುಣ್ಣು, ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಹೆಚ್ಚಿಸುತ್ತದೆ.
ತೆಂಗಿನ ನಾರಿನಿಂದ:
ಒಂದು ವೇಳೆ ನೀವು ಹಲ್ಲುಗಳಿಗೆ ಸಂಬಂಧ ಪಟ್ಟ ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ, ತೆಂಗಿನ ನಾರಿನ ಬೂದಿಯನ್ನು ಹಲ್ಲುಜ್ಜಲು ಬಳಕೆ ಮಾಡಬಹುದು. ಇದರಿಂದ ಹಲ್ಲುಗಳ ಹೊಳಪು ಹೆಚ್ಚಾಗುತ್ತದೆ. ಇದರಿಂದ ಹಳದಿ ಬಣ್ಣದಲ್ಲಿ ಕರೆಗಟ್ಟಿದ ಹಲ್ಲುಗಳು ಬಿಳಿ ಬಣ್ಣಕ್ಕೆ ತಿರುಗುವ ಸಾಧ್ಯತೆ ಸಹ ಇರುತ್ತದೆ.
ತೆಂಗಿನ ಕಾಂಡ:
ತೆಂಗಿನ ಕಾಂಡವನ್ನು ಮನೆಕಟ್ಟಲು ಉಪಯೋಗಿಸುತ್ತಾರೆ. ಹಿಂದಿನ ಛಾವಣಿ ಮನೆಯಲ್ಲಿ ಕಾಣಬಹುದು.
ತೆಂಗಿನ ಗರಿ:
ತೆಂಗಿನ ಗರಿಯಿಂದ ಪೊರಕೆ ಮಾಡಬಹುದು.ನಮ್ಮ ಅಜ್ಜಿಯರಿಗೆ ಅದೇ ಕೆಲಸ ಇಡೀ ದಿನ. ಈಗ ಅಂಗಡಿಯಿಂದ ದುಡ್ಡು ಕೊಟ್ಟು ಪೊರಕೆ ತರುತ್ತೇವೆ.ಆದರೆ ಹಳ್ಳಿಗಳಲ್ಲಿ ಪೊರಕೆ ನಾವೇ ಮಾಡಿಕೊಳ್ಳುವುದು.
ಮೊದಲೇ ಹೇಳಿದ ಹಾಗೆ ತೆಂಗಿನ ಮರದಲ್ಲಿ ಹಾಳಾಗುವ ಅಂದರೆ ವೇಸ್ಟ್ ಅಂತ ಯಾವ ಭಾಗವು ಇಲ್ಲ. ಎಲ್ಲವೂ ಉಪಯೋಗಕ್ಕೆ ಬರುವಂಥದ್ದು.ಒಂದು ತೆಂಗಿನ ಮರ ಒಂದು ವೇಳೆ ಸತ್ತರೂ ಅದರ ಜೀವನ ಸಾರ್ಥಕ,ಆದರೆ ನಮಗೆ ತುಂಬಾ ನಷ್ಟ.
ಧನ್ಯವಾದಗಳು.
GIPHY App Key not set. Please check settings