in

ಜ್ವರ ಹೇಗೆ ಬರುತ್ತದೆ?

ಜ್ವರ
ಜ್ವರ

ಜ್ವರವು ದೇಹದ ಉಷ್ಣಾಂಶದ ನಿಯಂತ್ರಕ ಉದ್ದೇಶಿತ ಬಿಂದುವಿನ ಹೆಚ್ಚಳದ ಕಾರಣ ಸಾಮಾನ್ಯ ಪರಿಮಿತಿಯಾದ ೯೮-೧೦೦ °ಎಫ್‌ಕಿಂತ ಏರಿದ ಉಷ್ಣತೆಯ ಲಕ್ಷಣವಿರುವ ಒಂದು ಸಾಮಾನ್ಯವಾದ ವೈದ್ಯಕೀಯ ಚಿಹ್ನೆ. ಉದ್ದೇಶಿತ ಬಿಂದುವಿನಲ್ಲಿನ ಹೆಚ್ಚಳವು ಹೆಚ್ಚಿದ ಸ್ನಾಯುಕರ್ಷಣ ಮತ್ತು ನಡುಕವನ್ನು ಪ್ರಚೋದಿಸುತ್ತದೆ. ಒಬ್ಬ ವ್ಯಕ್ತಿಯ ಉಷ್ಣಾಂಶ ಹೆಚ್ಚಿದಂತೆ, ದೇಹದ ಉಷ್ಣಾಂಶ ಹೆಚ್ಚುತ್ತಿದ್ದರೂ, ಸಾಮಾನ್ಯವಾಗಿ ಚಳಿಯ ಅರಿವಾಗುತ್ತದೆ. ಇದರ ಲಕ್ಶಣಗಳು ತಲೆನೋವು, ಮೈಕೈನೋವು, ಬಳಲಿಕೆ, ಬೇಸರ, ಹಸಿವು ಇಲ್ಲದಿರುವುದು. ಚಳಿ ಹೀಗೆ ಎಷ್ಟೋ ವಿಧಗಳು ಶರೀರವನ್ನು ಕಾಡಿಸುತ್ತದೆ. ಇವೆಲ್ಲವು ವೈರಸ್, ಫ೦ಗಸ್ ಅ೦ತಹ ಸೂಕ್ಶ್ಮ ಜೀವಿಗಲಳಿ೦ದ ಬರುತ್ತದೆ. ೧೦೦ ರಿಂದ ೧೦೨ ಡಿಗ್ರಿಗಳ ಫ್ಯಾರಿನ್ ಹೀಟ್ನಲ್ಲಿದ್ದರೇ ಅದು ಮಾಧ್ಯಮಜ್ವರ. ೧೦೩ ರಿಂದ ೧೦೬ ಡಿಗ್ರಿಗಳ ಫ್ಯಾರಿನ್ ಹೀಟ್ನಲ್ಲಿದ್ದರೆ ಹೈ ಫೀವರ್. ಇದಕ್ಕೆ ಅತ್ಯವರಸರದ ಚಿಕಿತ್ಸೆ ಅಗತ್ಯ. ರೆಮಿನೆಂಟ್ ಫೀವರ್ : ಇದು ೨೪ ಗಂಟೆಗಳಲ್ಲಿ ಜ್ವರ ೩ ಡಿಗ್ರಿಗಳ ಫಾರಿನ್ ಹೀಟ್ವರೆಗೂ ಕಡಿಮೆ ಆಗುವುದು, ಹೆಚ್ಛಾಗುವುದು. ಈಗ ಚಿಕುನ್ಗುನ್ಯಾ, ಡೆಂಗ್ಯೂ, ಫೀವರ್ಗಳುಹ ಹೆಚ್ಚಾಗಿ ಬರುತ್ತದೆ.

ವಾಸ್ತಾವವಾಗಿ ಅನೇಕ ವೇಳೆ ಜ್ವರ ಒಂದು ನಿರ್ದಿಷ್ಟ ರೋಗವೇ ಅಲ್ಲ. ಇನ್ನಾವುದೇ ರೋಗದ ಆನುಷಂಗಿಕ ಲಕ್ಷಣ ಮಾತ್ರ. ಬಹುವೇಳೆ ಇದು ಒಂದು ಅನುಕೂಲ ಪರಿಸ್ಥಿತಿ. ದೇಹ ಕಾವೇರಿದಾಗ ವಿಷಾಣುರೋಧಕಗಳು ಹಾಗೂ ವಿಷಹಾರಿಗಳ ಉತ್ಪನ್ನ ಹೆಚ್ಚುವುದು ತಿಳಿದುಬಂದಿದೆ. ಆದ್ದರಿಂದ ಜ್ವರಮಟ್ಟ ಅಧಿಕವಾಗಿಲ್ಲದಿದ್ದಾಗ ಜ್ವರವನ್ನು ಕೃತಕವಾಗಿ ಇಳಿಸಲು ಪ್ರಯತ್ನಪಡಬಾರದು. ಜ್ವರ ಮಿತಿಮೀರಿದರೆ ಆಸ್ಪಿರಿನ್ ಮುಂತಾದ ಔಷಧಗಳಿಂದಲೋ ತಣ್ಣೀರಿನಲ್ಲಿ ಅದ್ದಿದ ಬಟ್ಟೆಯನ್ನು ಹಣೆಮೇಲೆ ಹಾಕಿಯೋ ಅದನ್ನು ಕಡಿಮೆ ಮಾಡಬಹುದು. ಸಾಮಾನ್ಯ ಮಟ್ಟದ ಜ್ವರ ದೇಹಕ್ಕೆ ಅನುಕೂಲವಾಗಿಯೂ ಕೆಲವು ವಿಷಾಣುಗಳಿಗೆ ಪ್ರತಿಕೂಲವಾಗಿಯೂ ಇರುವುದರಿಂದ ಕೀಲುವಾಯು, ಫರಂಗಿ ರೋಗ ಇತ್ಯಾದಿಗಳ ಚಿಕಿತ್ಸೆಗೆ ಕೃತಕವಾಗಿ ಜ್ವರ ಬರಿಸುವುದುಂಟು. ಹೀಗೆ ಮಾಡಲು ದೇಹಕ್ಕೆ ಹೊರತಾದ ಜಡ ಪ್ರೋಟೀನನ್ನು ಚುಚ್ಚುಮದ್ದಾಗಿ ಕೊಡುವುದು ವಾಡಿಕೆ. ಜ್ವರದ ತೀವ್ರತೆಗೂ ಸೋಂಕಿನ ತೀವ್ರತೆಗೂ ಸಂಬಂಧ ಖಚಿತವಿಲ್ಲ. ಸೋಂಕು ಉಂಟಾದಾಗ ಜ್ವರ ಬಾರದಿರುವುದು ದೇಹದ ರೋಗವಿರುದ್ಧ ರಕ್ಷಣೆಯ ಸಾಮರ್ಥ್ಯ ಕುಗ್ಗಿರುವುದರ ಚಿಹ್ನೆ.

ಜ್ವರ ಹೇಗೆ ಬರುತ್ತದೆ?
ಜ್ವರ ಲಕ್ಷಣಗಳು

ಜ್ವರದಲ್ಲಿ ಮೈ ಕಾವೇರುವುದು ಮಾತ್ರವಲ್ಲ. ಇರಸುಮುರಸು (ಮೆಲೈಸ್), ತಲೆನೋವು, ಮೈಕೈ ಕೀಲುನೋವುಗಳು, ಅರೋಚಿಕ ಅಗ್ನಿಮಾಂದ್ಯ, ಸುಸ್ತು ಸಂಕಟ, ನಾಲಗೆ ಮೇಲೆ ಅಗ್ರ, ಮೂತ್ರ ಪ್ರಮಾಣ ಕಡಿಮೆ ಆಗಿ ಮೂತ್ರ ಕೆಂಪಾಗಿರುವುದು. ಚರ್ಮ ಶುಷ್ಕತೆ, ಚಳಿ, ನಡುಕ, ಬೆವರುವುದು, ಬೆವರುಸಲೆ ಬೊಕ್ಕೆಗಳುಂಟಾಗುವುದು. ಮಲಬದ್ಧತೆ ಇಂಥ ಹಲವಾರು ಲಕ್ಷಣಗಳು ಹೆಚ್ಚು ಕಡಿಮೆ ಕಂಡುಬರಬಹುದು. ದೇಹದ ಉಷ್ಣತೆ ಹೆಚ್ಚುವುದುರಿಂದ ನಾಡಿಮಿಡಿತ ಹಾಗೂ ಶ್ವಾಸಕ್ರಮಗಳ ದರಗಳು ಹೆಚ್ಚುವುವು. ಧರ್ಮ, ಮೂತ್ರಪಿಂಡ, ಜಠರ, ಕರುಳು ಇವುಗಳ ಸ್ರಾವ ಕಡಿಮೆ ಆಗುವುದೂ ಸಾಮಾನ್ಯ. ಜ್ವರ ಅಧಿಕವಾಗಿ ಇರುವಾಗ ಇಲ್ಲವೇ ವಿಷಮಿಸಿದಾಗ (ಟಾಕ್ಸಿಕ್) ಜ್ಞಾನ, ಸನ್ನಿ, ಸೆಟೆವಾಯುಗಳು ತಲೆದೋರಬಹುದು. ಜ್ವರಕಾಲದಲ್ಲಿ ಬಾಯಾರಿ ನೀರಡಿಕೆ ಆಗುವುದು ಸಾಮಾನ್ಯ. ಈ ಕಾಲದಲ್ಲಿ ತಕ್ಕಷ್ಟು ನೀರು ಕೊಡಬೇಕಾದ್ದು ಅಗತ್ಯ. ಇಲ್ಲದಿದ್ದರೆ ದೇಹದಲ್ಲಿ ದ್ರವಾಂಶ ಕಡಿಮೆ ಆಗಿ ಜ್ವರ ಇನ್ನೂ ಹೆಚ್ಚು ಹಚ್ಚಾಗುವ ಸಂಭಾವ್ಯತೆ ಉಂಟು. ಶೀತವಾಗುತ್ತದೆ ಎಂದು ಜ್ವರಗ್ರಸ್ತರಿಗೆ ನೀರನ್ನು ನಿಷೇದಿಸುವುದು ಜನತೆಯಲ್ಲಿ ಸಾಮಾನ್ಯವಾಗಿರುವ ರೂಢಿ. ಆದರೆ ಇದರಿಂದ ಅಪಾಯ ಉಂಟು. ಜ್ವರ 100 ಈ ನಷ್ಟು ಇರುವಾಗ ನಾಡಿಮಿಡಿತವೂ ಮಿನಿಟಿಗೆ ಸುಮಾರು 100 ಇರುವುದು ಸಾಮಾನ್ಯ. ಪ್ರತಿ 1 ಈ ಜ್ವರ ಏರಿಕೆಗೆ 10 ನಾಡಿ ಮಿಡಿತಗಳು ಏರುತ್ತವೆ. ಶ್ವಾಸಕ್ರಮದ ವೇಗವೂ ಅಧಿಕವಾಗುತ್ತದೆ. ಇದು ಎಲ್ಲ ಜ್ವರಗಳಲ್ಲೂ ಸಾಧಾರಣವಾಗಿ ಪ್ರಕಟವಾಗುವ ಲಕ್ಷಣ. ವೈಯಕ್ತಿಕವಾಗಿ ಅಲ್ಪ ಸ್ವಲ್ಪ ವ್ಯತ್ಯಾಸಗಳು ಕಂಡುಬರುವುದು ಸಹಜ. ಕೆಂಡಾಮಂಡಲ (ಸ್ಕಾರ್ಲೆಟ್ ಫೀವರ್), ಕ್ಷಯ ಇವುಗಳಲ್ಲಿ ನಿರೀಕ್ಷೆಗಿಂತಲೂ ಅಧಿಕವಾಗಿ ನಾಡಿ ಬಡಿಯುವುದೂ ಟೈಫಾಯಿಡ್ ಜ್ವರದಲ್ಲಿ ನಿರೀಕ್ಷೆಗಿಂತ ಕಡಿಮೆ ನಾಡಿ ಮಿಡಿತವಿರುವುದೂ ನ್ಯೂಮೋನಿಯದಲ್ಲಿ ನಿರೀಕ್ಷೆಗಿಂತ ಬಲು ಹೆಚ್ಚಾಗಿ ಶ್ವಾಸಕ್ರಮ ಕಂಡುಬರುವುದೂ ಆಯಾ ರೋಗಗಳ ವೈಶಿಷ್ಟ್ಯ. ಹೆಚ್ಚಿನ ಜ್ವರಗಳಲ್ಲಿ ಉಷ್ಣತೆ ರಾತ್ರಿಕಾಲದಲ್ಲಿ ಸ್ವಲ್ಪ ಹೆಚ್ಚಾಗುವುದೂ ಬೆಳಗಾದಮೇಲೆ ಕಡಿಮೆ ಆಗುವುದೂ ತಿಳಿದಿದೆ. ಆದರೆ ಕ್ಷಯ, ಟೈಫಾಯಿಡ್, ಮಿದುಳಿನ ಜ್ವರಗಳಲ್ಲಿ ಉಷ್ಣತೆ ಹಗಲು ಹೆಚ್ಚು, ರಾತ್ರಿ ಕಡಿಮೆ ಯಕೃತ್ತಿನ ರಕ್ತನಾಳಗಳು ಕೀವಿನಿಂದ ಆವೃತವಾಗಿ ಜ್ವರ ಬಂದಿದ್ದರೆ ಸಾಮಾನ್ಯವಾಗಿ ದಿನದಿನವೂ ಎರಡು ಸಾರಿ ಏರಿಳಿತಗಳು ಕಂಡುಬರುತ್ತವೆ. ಆರೋಗ್ಯಸ್ಥಿತಿಯಲ್ಲಿ ಮಿದುಳಿನಲ್ಲಿರುವ ಉಷ್ಣತಾ ನಿಯಂತ್ರಣ ಕೇಂದ್ರ ದೇಹೋಷ್ಣತೆಯ ಉತ್ಪಾದನೆ ಮತ್ತು ವ್ಯಯಗಳನ್ನು ನಿಯಂತ್ರಿಸಿ ಸಮತೋಲವನ್ನು ಉಂಟುಮಾಡುತ್ತದೆ ಮತ್ತು ಉಷ್ಣತೆಯ ಸಾಮಾನ್ಯ ಮಟ್ಟ ಸುಮಾರು 37 ಅ ಅಥವಾ 98.6 ಈ ನಷ್ಟು ಇರುವುದಕ್ಕೆ ಕಾರಣವಾಗಿದೆ. ಸಮತೋಲ ಇದ್ದರೂ ದೇಹದ ಉಷ್ಣತೆ ಸಾಮಾನ್ಯಮಟ್ಟಕ್ಕಿಂತ ಹೆಚ್ಚಾಗಿರುವುದು ಜ್ವರಸ್ಥಿತಿ.

ಸೋಂಕು ಪರಿಸ್ಥಿತಿಯಲ್ಲಿ ವಿಷಾಣುಗಳ ಉತ್ಪನ್ನವಾದ ಜೀವಿವಿಷಗಳಿಂದ ಇಲ್ಲವೇ ಶ್ವೇತಕಣಗಳ ಛಿಧ್ರತೆಯಿಂದ ಬಿಡುಗಡೆಯಾದ ದಸ್ತುಗಳಿಂದ ಉಷ್ಣತಾ, ನಿಯಂತ್ರಣ ಕೇಂದ್ರ ಪ್ರಭಾವಿತವಾಗಿ ದೇಹೋಷ್ಣತೆ ಸಾಮಾನ್ಯ ಮಟ್ಟಿಕ್ಕಿಂತ ಮೇಲ್ಮಟ್ಟದಲ್ಲಿರುದಂತೆ ಏರ್ಪಡುತ್ತದೆ. ಬೆಲ್ಲಡೋನ್ನ ಕೊಕೆಯ್ನ್ ಮುಂತಾದ ರಾಸಾಯನಿಕಗಳ ಇಲ್ಲವೇ ತಲೆಗೆ ತೀವ್ರ ಪೆಟ್ಟುಬಿದ್ದುದರ ಇಲ್ಲವೇ ಶಸ್ತ್ರಚಿಕಿತ್ಸೆಯ ಪರಿಣಾಮವಾಗಿ ಹೀಗಾಗುವುದುಂಟು. ದೇಹಕ್ಕೆ ಹೊರತಾದ ಪ್ರೋಟೀನುಗಳು ರಕ್ತಗತವಾದಾಗ ಜ್ವರ ಬರುವುದನ್ನು ಮೇಲೆ ಹೇಳಿದೆ.

ಗುಂಡಿಗೆ ಆಘಾತದಲ್ಲಿ. ದೇಹದಲ್ಲಿ ದ್ರವಾಂಶ ಕಡಿಮೆ ಆದಾಗ ದೇಹಕ್ಕೆ ಒಗ್ಗದ ಔಷಧಿಗಳನ್ನು ಸೇವಿಸಿದಾಗ ಕೂಡ ಜ್ವರ ಬರುವುದುಂಟು. ಜ್ವರ ಇರುವ ಕಾಲದಲ್ಲಿ ಉಷ್ಣತಾನಿಯಂತ್ರಣ ಕೇಂದ್ರದ ಕ್ರಿಯೆಗೆ ಧಕ್ಕೆ ಉಂಟಾಗಿರುವುದಿಲ್ಲ. ಈಗಲೂ ಅದು ದೇಹದಲ್ಲಿ ಉಷ್ಣತೆಯ ಉತ್ಪನ್ನ ಮತ್ತು ವ್ಯಯಗಳನ್ನು ಸಮವಾಗಿರುವಂತೆ ನಿಯಂತ್ರಿಸುವುದು. ಆದರೆ ದೇಹೋಷ್ಣತೆ ಮಾತ್ರ ಏರಿದ ಮಟ್ಟದಲ್ಲಿರುತ್ತದೆ. ಈ ಏರುವಿಕೆಗೆ ಕಾರಣ ಪ್ರಾರಂಭಕಾಲದಲ್ಲಿ ದೇಹದಿಂದ ಉಷ್ಣತೆಯ ವ್ಯಯ ಕುಂಠಿತಗೊಳ್ಳುವುದೂ. ಸೋಂಕು ರೋಗಗಳಲ್ಲಿ ವಿಷಾಣುಜನಿತ ವಿಷಗಳು ಚರ್ಮದ ರಕ್ತನಾಳಗಳನ್ನು ಸಂಕೋಚಿಸುವುದೂ, ಜ್ವರ ಏರುವುದಕ್ಕೆ ಮುನ್ನ ಚಳಿಯಾಗುವುದು ಈ ಕಾರಣದಿಂದಲೇ ದೇಹದಲ್ಲಿ ದ್ರವಾಂಶ ಕಡಿಮೆ ಆಗಿ ಸ್ವೇದಗ್ರಂಥಿಗಳು ಸ್ಥಗಿತಗೊಂಡು ಬೆವರಾಡದಿರುವುದೂ ಇವುಗಳಿಂದ ಉಷ್ಣತೆಯ ವ್ಯಯ ಕುಂಠಿತಗೊಳ್ಳುವುದು ತಿಳಿದಿದೆ. ಜ್ವರ ಬಿಡುವ ಕಾಲದಲ್ಲಿ ಅನುಗುಣವಾಗಿ ಉಷ್ಣತೆಯ ವ್ಯಯ ಅಧಿಕಗೊಳ್ಳುವುದು ಬೆವರಾಡಿ ಅದು ಆರುವುದರಿಂದ ಕಂಡುಬಂದಿದೆ. ಜ್ವರ ಏರುವುದಕ್ಕೆ ಮತ್ತು ಇಳಿಯುವುದಕ್ಕೆ ಕಾರಣ ಸಾಮಾನ್ಯವಾಗಿ ಉಷ್ಣದ ಉತ್ಪನ್ನ ಅಧಿಕವಾಗುವುದು ಅಥವಾ ಕಡಿಮೆ ಆಗುವುದು ಅಲ್ಲ.

ಸೋಂಕಿನ ಜ್ವರಗಳಲ್ಲಿ ಸಾಮಾನ್ಯವಾಗಿ 5 ಘಟ್ಟಗಳು ಇವೆ :

1.ಹೊದಗುವಿಕೆ (ಇನ್‍ಕ್ಯುಬೇಷನ್)-ರೋಗಾಣುಗಳು ದೇಹದಲ್ಲಿ ನೆಲೆಗೊಳ್ಳುವ ಕಾಲ
2.ಜ್ವರ ಹೊಮ್ಮುವಿಕೆ
3.ಜ್ವರ ಸ್ಥಿತಿ

4.ಜ್ವರ ಆರುವಿಕೆ
5.ಸ್ವಾಸ್ಥ್ಯ ಲಾಭ

ಜ್ವರ ಹೇಗೆ ಬರುತ್ತದೆ?
ಸೋಂಕಿನ ಜ್ವರ

ಜ್ವರ ಹೊಮ್ಮುವಾಗ ಆರಂಭ ಕ್ಷಿಪ್ರವಾಗಿರಬಹುದು ನ್ಯೂಮೋನಿಯ, ಸಿಡುಬು, ಇನ್‍ಫ್ಲೂಎನ್‍ಜಾ, ಸ್ಟ್ರೆಪ್ಟೊಕಾಕಸ್ ಸೋಂಕುಗಳು ಇಲ್ಲವೇ ನಿಧಾನವಾಗಿರಬಹುದು. ನೆಗಡಿ, ಜ್ವರ, ಬ್ರಾಂಕೋನ್ಯೂಮೋನಿಯ, ವಿಷಮಶೀತ ಜ್ವರ ಅಥವಾ ಟೈಫಾಯಿಡ್, ಕ್ಷಯ, ದಡಾರ, ನಾಯಿಕೆಮ್ಮು. ಜ್ವರ ಆರುವುದೂ ವಿಧಾನವಾಗಿರಬಹುದು ಬಹು ಜ್ವರಗಳಲ್ಲಿ ಇದು ಸಾಮಾನ್ಯ. ಇಲ್ಲವೇ ಜ್ವರ ಹಠಾತ್ತಾಗಿ ಇಳಿಯಬಹುದು. ನ್ಯೂಮೋನಿಯ, ಟೈಫಸ್. ಟೈಫಾಯಿಡ್ ಜ್ವರದಲ್ಲಿ ಹೀಗೆ ಹಠಾತ್ತಾಗಿ ಇಳಿಯುವುದು ಕರುಳಿನಲ್ಲಿ ರಕ್ತಸ್ರಾವ ಇಲ್ಲವೇ ರಂಧ್ರೀಕರಣವಾಗಿರುವಂಥ ಅಪಾಯ ಚಿಹ್ನೆ. ಹಠಾತ್ತಾಗಿ ಜ್ವರ ಏರುವುದೂ ಅಪಾಯ ಚಿಹ್ನೆಯೇ. ಧನುರ್ವಾಯು, ಏಡಿಗಂತಿ, ಕಾಲರಾ, ಮೂರ್ಛಾರೋಗ ಮುಂತಾದ ರೋಗಗಳಲ್ಲಿ ಸಾವಿಗೆ ಮುನ್ನ ಹೀಗಾಗುವುದುಂಟು. ಜ್ವರ ಸ್ಥಿತಿಯಲ್ಲಿ ನಿರಂತರ ಜ್ವರ, ಬಿಟ್ಟು ಬಿಟ್ಟು ಬರುವ ಜ್ವರ, ಅನಿರ್ದಿಷ್ಟ ಜ್ವರಗಳೆಂಬ ಭೇದಗಳಿರುವುದನ್ನು ಕಾಣಬಹುದು. ನಿರಂತರ ಜ್ವರಗಳಲ್ಲಿ ಸಮಾನ ಸ್ಥಿತಿಯ ನಿರಂತರ ಜ್ವರ, ಕಂಟಿನ್ಯೂಯಿಸ್ ಫೀವರ್ ಮತ್ತು ಏರಿಳಿತವಿರುವ ನಿರಂತರ ಜ್ವರ ರೆಮಿಟ್ಟೆಂಟ್ ಫೀವರ್ ಎಂದು ಎರಡು ಬಗೆ. ನಿರಂತರ ಜ್ವರದಲ್ಲಿ ಜ್ವರ ದಿನಪೂರ್ತಿ ಒಂದೇ ಸಮವಾಗಿ ಇಲ್ಲವೇ ಕೇವಲ 1/4 -1/2 ಈನಷ್ಟು ವ್ಯತ್ಯಾಸ ಉಳ್ಳದ್ದಾಗಿ ಇರುತ್ತದೆ. ಏರಿಳಿತವಿರುವ ಜ್ವರದಲ್ಲಿ 1-2 ನಷ್ಟು ಹೆಚ್ಚು ಕಡಿಮೆ ಆಗುತ್ತದೆ. ಆದರೆ ದೇಹೋಷ್ಣತೆ ಸಹಜ ಮಟ್ಟಕ್ಕೆ ಬರದೆ ಜ್ವರ ಇದ್ದೇ ಇರುತ್ತದೆ. ವಿಷಮಶೀತಜ್ವರದಲ್ಲಿ ಜ್ವರ ನಿರಂತರವಾಗಿರುತ್ತದೆ. ಮೊದಲ ವಾರದಲ್ಲಿ ದಿನದಿನವೂ ಏಣಿಮೆಟ್ಟಲಿನಂತೆ ಜ್ವರ ಏರುವುದೂ ಎರಡನೆಯ ಮೂರನೆಯ ವಾರಗಳಲ್ಲಿ ಅದರ ಮಟ್ಟ 1-2 ಈನಷ್ಟು ಏರಿ ತಗ್ಗುವುದೂ ನಾಲ್ಕನೆಯ ವಾರದಲ್ಲಿ ಜ್ವರ ಕಡಿಮೆ ಆಗುತ್ತ ಕೊನೆಗೆ ಪೂರ್ಣವಾಗಿ ನಿಲ್ಲುವುದೂ ಇದರ ವೈಶಿಷ್ಟ್ಯ. ಪ್ಯಾರಾಟೈಫಾಯಿಡ್, ನ್ಯೂಮೋನಿಯ, ಕೆಂಡಾಮಂಡಲಜ್ವರ (ಸ್ಕಾರ್ಲೆಟ್ ಫೀವರ್) ಇವು ಇತರ ನಿರಂತರ ಜ್ವರಗಳು. ಬಿಟ್ಟು ಬಿಟ್ಟು ಬರುವ ಜ್ವರದಲ್ಲಿ (ಇನ್‍ಟರ್‍ಮಿಟೆಂಟ್ ಫೀವರ್) ಬಂದ ಜ್ವರ ಬಿಟ್ಟು ಪುನಃ ಜ್ವರ ಬರುತ್ತದೆ. ದಡಾರ, ಡೆಂಗೆ ಇವುಗಳಲ್ಲಿ ಹೀಗೆ. ಟೈಫಾಯಿಡ್ ಜ್ವರದಲ್ಲೂ ಬಂದ ಜ್ವರ ಬಿಟ್ಟು ಕೆಲವು ದಿವಸಗಳಾದ ತರುವಾಯ ಪುನಃ ಜ್ವರ ಬರುವುದುಂಟು. ಆದರೆ ಇದನ್ನು ಬಿಡುವಿನ ಜ್ವರ ಅಲ್ಲ, ಮರುಕಳಿಸಿದ ಟೈಫಾಯಿಡ್ ಎಂದೇ ಪರಿಗಣಿಸಿದೆ. ರೋಗಕಾಲದಲ್ಲಿ ಅನೇಕ ಸಾರಿ ಬಿಟ್ಟು ಬಿಟ್ಟು ಬರುವ ಜ್ವರಗಳು ಚಿಕಿತ್ಸೆಗೆ ಒಳಪಡದಿದ್ದರೆ, ತಿಂಗಳು ವರ್ಷಗಟ್ಟಲೆ ಚಳಿಸಬಹುದು. ಬಹುವಾಗಿ ಇವು ಗಡುವಿನ ಜ್ವರಗಳು. ಜ್ವರ ಬಿಟ್ಟು ಪುನಃ ಜ್ವರ ಬರುವುದು ಹೆಚ್ಚು ಕಡಿಮೆ ನಿರ್ದಿಷ್ಟ ಗಡು ಮುಗಿದಮೇಲೆ. ಮಲೇರಿಯದಲ್ಲಿ ಗಡು ಒಂದು ಅಥವಾ ಎರಡು ದಿವಸ ಇರಬಹುದು. ಬ್ರೂಸೆಲ್ಲ ಸೋಂಕಿನಲ್ಲಿ (ಮಾಲ್ಟ ಜ್ವರ ಇತ್ಯಾದಿ) ಗಡು 5-6 ದಿವಸಗಳಿರಬಹುದು. ಮರುಕಳಿಸುವ ಜ್ವರದಲ್ಲಿ (ರಿಲ್ಯಾಪ್ಸಿಂಗ್ ಫೀವರ್) ಗಡು 6-8 ದಿವಸಗಳಿರುತ್ತವೆ. ಗಡುವಿನ ಜ್ವರಗಳಲ್ಲಿ ಜ್ವರ ಬಿಟ್ಟ ಕಾಲದಲ್ಲಿ ವ್ಯಕ್ತಿ ಹೆಚ್ಚು ಕಡಿಮೆ ಆರೋಗ್ಯವಾಗಿರುವಂತೆ ಕಾಣಬಹುದು. ಅನಿರ್ದಿಷ್ಟ ಜ್ವರಗಳಲ್ಲಿ ಯಾವ ಕ್ರಮವೂ ಕಾಣಬರುವುದಿಲ್ಲವೆಂಬುದು ಸ್ಪಷ್ಟವಾಗಿಯೇ ಇದೆ.

ಜ್ವರದ ಪ್ರಾರಂಭ ಕಾಲದಲ್ಲಿ ಚಳಿ, ಮೈನಡುಕ ಉಂಟಾಗಬಹುದು. ನ್ಯೂಮೋನಿಯದಲ್ಲಿ ರೋಗಾವಸ್ಥೆಯ ಪ್ರಾರಂಭದಲ್ಲಿ ಮಾತ್ರ ಚಳಿ ಉಂಟಾಗುವುದು ವೈಶಿಷ್ಟ್ಯ. ಬ್ಯಾಸಿಲ್ಲಸ್‍ಕೋಲೈ ಎಂಬ ಅಣು, ಸಾಮಾನ್ಯವಾಗಿ ನಿರುಪದ್ರವಿ ವಿಷಮಿಸಿ ಮೂತ್ರಮಾರ್ಗದಲ್ಲಿ ಸೋಂಕನ್ನು ಉಂಟುಮಾಡಿದಾಗ ದಿನದಿನವೂ ಚಳಿ ಬರುವುದು ಸಾಮಾನ್ಯ. ಪಿತ್ತನಾಳಗಳ ಊತದಲ್ಲಿ ಚಳಿ ಅನಿರ್ದಿಷ್ಟ. ಮಲೇರಿಯದಲ್ಲಿ ಚಳಿ ಬಂದು ಜ್ವರ ಕಾಣಿಸಿಕೊಳ್ಳುವುದು ಖಚಿತ ಲಕ್ಷಣ. ಆದ್ದರಿಂದ ಅದಕ್ಕೆ ಜನ ಚಳಿಜ್ವರವೆಂದೇ ಕರೆದಿದ್ದಾರೆ. ಮೊದಲು ಚಳಿ ಅನುಭವ, ಅನಂತರ ನಡುಕ : ಮೈನಡುಗುವುದಲ್ಲದೆ ಹಲ್ಲುಗಳೂ ಗಡಗಡನೆ ನಡುಗುವುವು : ಇಷ್ಟು ಹೊದಿಸಿದರೂ ಅಡಗದ ಚಳಿ : ಚರ್ಮದ ರಕ್ತನಾಳಗಳು ಕುಗ್ಗಿ ಮೈ ತಣ್ಣಗಿರುವುದು : ಮುಖ ಬಿಳಿಚಿಕೊಂಡು ತುಟಿ ನೀಲಿಗಟ್ಟಿರುವುದು : ಇತ್ಯಾದಿಗಳು ಮಲೇರಿಯ ಜ್ವರ ಪ್ರಾರಂಭವಾದ ಕಾಲದಲ್ಲಿ ಕಾಣಬರುವ ಲಕ್ಷಣಗಳು. ನಿಜವಾಗಿ ಈ ಕಾಲದಲ್ಲಿ ಕೇಹೋಷ್ಣತೆ ಹೆಚ್ಚಾಗಿ ಜ್ವರ ಬಂದಿರುತ್ತದೆ. ವೈದ್ಯಕೀಯ ಉಷ್ಣತಾಮಾಪಕವನ್ನು ಕ್ಲಿನಿಕಲ್ ಧರ್ಮಾಮೀಟರ್ ನಾಲಿಗೆ ಕೆಳಗೆ ಸುಮಾರು ಒಂದು ಮಿನಿಟು ಇಟ್ಟು ನೋಡಿ ಇದನ್ನು ಅರಿಯಬಹುದು. ಚಳಿ ಸುಮಾರು 1/4-1/2 ಗಂಟೆ ಇರಬಹುದು. ಅನಂತರ ಚರ್ಮದ ರಕ್ತನಾಳಗಳು ಹಿಗ್ಗಿ ಅಧಿಕ ರಕ್ತಪ್ರವಾಹದಿಂದ ಚರ್ಮ ಬಿಸಿಯಾಗುತ್ತದೆ. ಜ್ವರವೂ ಏರುತ್ತದೆ. ಹೊದಿಸಿದ್ದನ್ನೆಲ್ಲ ಕಿತ್ತು ಹಾಕುವಂತಾಗುತ್ತದೆ. ಇದು ಜ್ವರ ಏರುವ ಮುನ್ನ ಚಳಿ ಬರುವ ಸಂದರ್ಭಗಳಲ್ಲೆಲ್ಲ ಸಾಮಾನ್ಯ. ಮಲೇರಿಯ ಒಂದರಲ್ಲೆ ಅಲ್ಲ, ಮಲೇರಿಯದಲ್ಲಿ ಚಳಿ ಕಳೆದ ಬಳಿಕ ಏರಿದ ಜ್ವರ ಒಂದೆರಡು ಗಂಟೆಗಳಲ್ಲಿ ಥಟ್ಟನೆ ಇಳಿದು ಹೋಗುತ್ತದೆ. ಜ್ವರ ಇಳಿಯುವುದಕ್ಕೆ ಮುನ್ನ ಜಿಲ್ಲೆಂದು ಬೆವರುವುದು ಸಾಮಾನ್ಯ. ಜ್ವರದ ಪ್ರಾರಂಭದ ಮುನ್ನ ಕಾಣಬರುವ ಚಳಿಯ ಬದಲು ಮಕ್ಕಳಲ್ಲಿ ಸೆಳವು ಕನ್‍ವಲ್ಷನ್ ಕಾಣಿಸಿಕೊಳ್ಳಬಹುದು.

ಜ್ವರದಲ್ಲಿ ದೇಹೋಷ್ಣತೆ ಹೆಚ್ಚುವಂತೆ ಉಷ್ಣಾಘಾತದಲ್ಲೂ (ಹೀಟ್ ಸ್ಟ್ರೋಕ್) ಹೆಚ್ಚುತ್ತದೆ. ಶ್ರಮಕೆಲಸ ವ್ಯಾಯಾಮಗಳನ್ನು ತಕ್ಕಷ್ಟು ದೀರ್ಘಕಾಲ ಮಾಡಿದಾಗ ಕೂಡ ದೇಹೋಷ್ಣತೆ ಹೆಚ್ಚುವುದು. ಈ ಸಂದರ್ಭಗಳಲ್ಲಿಯೂ ಬಹುಶಃ ದೇಹದಿಂದ ಉಷ್ಣತೆಯ ವ್ಯಯ ಕುಂಠಿತಗೊಳ್ಳುವುದರಿಂದ ದೇಹೋಷ್ಣತೆ ಹೆಚ್ಚುತ್ತದೆ. ಆದರೆ ಉಷ್ಣಾಘಾತದಲ್ಲಿ ಈ ಸ್ಥಿತಿ ತೀವ್ರವಾಗಿ ಮುಂದುವರಿಯುತ್ತ ದೇಹೋಷ್ಣತೆ 107-108 ಈಗಿಂತ ಹೆಚ್ಚು ಮಟ್ಟಕ್ಕೆ ಏರಬಹುದು. ಇದು ಸಾಮಾನ್ಯವಾಗಿ ಸಹನಾತೀನ ಸ್ಥಿತಿ. ಆಲಸ್ಯ, ಬುದ್ಧಿಮಾಂದ್ಯ, ಮೂರ್ಛೆ ಮುಂತಾದವು ಶೀಘ್ರವಾಗಿ ಕಂಡುಬಂದು, ಕೊನೆಗೆ ರಕ್ತಪರಿಚಲನೆ ನಿಂತು ಸಾವು ಸಂಭವಿಸುತ್ತದೆ. ಜ್ವರವೇ ಉಲ್ಬಣಿಸಿ ಈ ಸ್ಥಿತಿ ಉಂಟಾಗುವುದು ಅಪರೂಪ. ಬಿಸಿಲು ಹೆಚ್ಚಾಗಿ ಹಾಗೂ ವಾತಾವರಣದಲ್ಲಿ ಜಲಾಂಶ ಹೆಚ್ಚಾಗಿರುವ ಸ್ಥಳಗಳಲ್ಲಿ ಉಷ್ಣಾಘಾತ ಸಾಮಾನ್ಯ. ಬೆವರು ದೇಹದಿಂದ ಆರಿಹೋಗಲು ಸಾಧ್ಯವಾಗದೆ ಇಲ್ಲವೇ ಬೆವರು ಗ್ರಂಥಿಗಳ ಕ್ರಿಯೆ ಕಾರಣಾಂತರದಿಂದ ಸ್ಥಗಿತಗೊಂಡು ದೇಹೋಷ್ಣತೆಯ ವ್ಯಯಕ್ಕೆ ಮಾರ್ಗವಿಲ್ಲದೆ ಉಷ್ಣ ಸಂಚಯನವಾಗಿ ಉಂಟಾಗುವ ಸ್ಥಿತಿ ಇದು. ರೋಗಲಕ್ಷಣವಾಗಿಲ್ಲದಿರುವ ಇದನ್ನು ಜ್ವರವೆಂದು ಗಣಿಸದೆ ಪ್ರತ್ಯೇಕ ಅನಾರೋಗ್ಯ ಸ್ಥಿತಿಯೆಂದು ಕಾಣುವುದು ರೂಢಿ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕೇದಗೆ ಹೂವು

ಕೇದಗೆ ಹೂವು

ಜೈವಿಕ ಕೀಟನಾಶಕಗಳ ಮಹತ್ವ

ಜೈವಿಕ ಕೀಟನಾಶಕ : ಏನಿದರ ಮಹತ್ವ?