ಎಲ್ಲಾ ವಯಸ್ಕರಿಗೆ ಹೊಂದುವ ಆಹಾರ ಅಂದರೆ ಅದು ರಾಗಿ ಮಾತ್ರ. ಆರು ತಿಂಗಳ ಮಗುವಿನಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ತಿನ್ನಬಹುದು.‘ರಾಗಿ ತಿನ್ನುವವನಿಗೆ ರೋಗವಿಲ್ಲ, ರಾಗಿ ತಿಂದವ ನಿರೋಗಿ’ ಎಂಬ ಮಾತುಗಳನ್ನು ನಮ್ಮ ಗ್ರಾಮೀಣ ಜನತೆಯ ಬಾಯಲ್ಲಿ ಕೇಳುತ್ತೇವೆ, ಈ ಮಾತುಗಳು ಸತ್ಯ ಎಂಬುದನ್ನು ರಾಗಿಯು ಸಾಬೀತು ಪಡಿಸಿದೆ. ರಾಗಿಯನ್ನು ನಮ್ಮ ಕರುನಾಡಿನ ಸಾಂಪ್ರದಾಯಿಕ ಬೆಳೆ ಎಂದೇ ಹೇಳಲಾಗುತ್ತದೆ. ನಮ್ಮ ದಾಸ ಶ್ರೇಷ್ಟರಾದ ಕನಕದಾಸ ಮತ್ತು ಪುರಂದರದಾಸರು ಸಹ ರಾಗಿಯ ಮಹತ್ವವನ್ನು ತಮ್ಮ ಕೃತಿಗಳ ಮೂಲಕ ಸಾರಿದ್ದಾರೆ. ಕನಕದಾಸರು ರಾಮಧಾನ್ಯಚರಿತೆ ಕೃತಿಯ ಮೂಲಕ ಮತ್ತು ಪುರಂದರದಾಸರು “ರಾಗಿ ತಂದೀರ” ಎಂಬ ಹಾಡಿನ ಮೂಲಕ ರಾಗಿಯ ಮಹತ್ವವನ್ನು ಪಸರಿಸಿದ್ದಾರೆ.
ರಾಗಿಯು ಅದಿಕ ಕ್ಯಾಲ್ಸಿಯಂ ಮತ್ತು ಡಿ ಜೀವಸತ್ವವನ್ನು ಹೊಂದಿರುವ ಆಹಾರ ದಾನ್ಯವಾಗಿದೆ. ವೈದ್ಯರು ಸಕ್ಕರೆ ಕಾಯಿಲೆಯ ರೋಗಿಗಳಿಗೆ ರಾಗಿಯಿಂದ ತಯಾರಿಸುವ ಆಹಾರಗಳನ್ನು ತಿನ್ನಲು ಸಲಹೆ ಕೊಡುತ್ತಾರೆ. ರಾಗಿಯಿಂದ ರಾಗಿ ಅಂಬಲಿ, ರಾಗಿ ಮುದ್ದೆ, ರಾಗಿ ರೊಟ್ಟಿ, ರಾಗಿ ಉಪ್ಪಿಟ್ಟು, ಹಾಲ್ಬಾಯಿ ಮುಂತಾದ ಆಹಾರಗಳನ್ನು ತಯಾರಿಸುವರು. ಅದರಲ್ಲೂ ರಾಗಿ ಮುದ್ದೆಗೆ ನಮ್ಮ ಗ್ರಾಮೀಣ ಜನತೆಯು ಅಗ್ರಸ್ತಾನವನ್ನು ನೀಡಿರುವರು. ರಾಗಿ ಮುದ್ದೆಯು ಸೇವಿಸಲು ಮೃದುವಾಗಿದ್ದು ಸಾರಿನ ಜೊತೆ ತಿಂದರೆ ರುಚಿಯು ಅದ್ಬುತವಾಗಿದ್ದು ಹಾಗೂ ಒಂದು ಒಳ್ಳೆಯ ಪೌಶ್ಟಿಕ ಆಹಾರವಾಗಿದೆ. ರಾಗಿಮುದ್ದೆ- ನಾಟಿ ಕೋಳಿಸಾರು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದು, ಹೋಟೇಲುಗಳಲ್ಲಿ ಇದೊಂದು ಬ್ರಾಂಡ್ ಆಗಿಬಿಟ್ಟಿದೆ. ರಾಗಿ ಮುದ್ದೆಯನ್ನು ತಿನ್ನಲು ಒಂದು ರೀತಿ ಇದೆ, ಇದನ್ನು ಅಗಿಯಬಾರದು, ಬದಲಿಗೆ ಸಾರಿನಲ್ಲಿ ಹೊರಳಿಸಿ ತಿನ್ನಬೇಕು. ರಾಗಿಯಲ್ಲಿ ನಾರಿನಾಂಶ ಮತ್ತು ಅಮೈನೋ ಆಮ್ಲಗಳು ಹೆಚ್ಚಾಗಿರುವುದರಿಂದ ಒಮ್ಮೆ ತಿಂದರೆ ದಿನ ಪೂರ್ತಿ ಹಸಿವಾಗುವುದು ಕಡಿಮೆ. ರಾಗಿಯು ಹೆಚ್ಚಿನ ಕೊಬ್ಬಿನಾಂಶ ಇಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ರಾಗಿಯ ಗಂಜಿ ಸೇವಿಸುವುದು ದೇಹಕ್ಕೆ ತಂಪು. ಅತೀ ಉಷ್ಣತೆಯಿಂದ ಬಳಲುವವರಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ. ಅನಿಮಿಕ್ ರೋಗಿಗಳಿಗೆ, ಜೀರ್ಣಕ್ರಿಯೆಗೆ, ಮೆದುಳಿನ ವಿಕಾಸಕ್ಕೆ, ದೇಹದ ಪ್ರಾಬಲ್ಯತೆಗೆ, ದೇಹದ ಬೊಜ್ಜು ಇಳಿಸುವಿಕೆಗೆ, ರೋಗನಿರೋದಕ್ಕೆ ರಾಗಿಯು ಬಹಳ ಉಪಕಾರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ರಾಗಿ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಇದಕ್ಕೆ ಅದರ ಆರೋಗ್ಯಕ್ಕೆ ಸಹಾಯಕಾರಿಯಾಗಿರುವ ಅಂಶವೇ ಪ್ರಧಾನ ಕಾರಣ. ಇದನ್ನು ಭಾರತ ಸೇರಿದಂತೆ ಆಫ್ರಿಕಾ, ಈಜಿಪ್ಟ್ ಮತ್ತು ಯುರೋಪ್ನ ಕೆಲವು ಭಾಗಗಳಲ್ಲಿ ಕೂಡಾ ಬೆಳೆಯುತ್ತಾರೆ. ಇದು ದೇಹಕ್ಕೆ ತಂಪು ಮತ್ತು ಶಕ್ತಿಯನ್ನು ನೀಡುವುದರ ಜೊತೆಗೆ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ಈ ರಾಗಿಗೆ ಇದೆ.
ರಾಗಿ ಏಶ್ಯಾ ಮತ್ತು ಆಪ್ರಿಕಾದ ಹಲವಾರು ಪ್ರದೇಶಗಳಲ್ಲಿ ಬೆಳೆಯಲಾಗುವ ಒಂದು ಬಗೆಯ ಆಹಾರ ದಾನ್ಯ. ಕರ್ನಾಟಕದಲ್ಲಿ ಅತೀ ಹೆಚ್ಚು ರಾಗಿ ಬೆಳೆಯುವ ಜಿಲ್ಲೆ
ತುಮಕೂರು. ತುಮಕೂರನ್ನು ಹೊರತುಪಡಿಸಿದರೆ ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಮತ್ತಿತರ ಜಿಲ್ಲೆಗಳಲ್ಲಿ ರಾಗಿಯ ಬೆಳೆಯನ್ನು ಹೆಚ್ಚಾಗಿ ಕಾಣಬಹುದು. ಭಾರತದಲ್ಲಿ ತಮಿಳುನಾಡು, ಆಂದ್ರಪ್ರದೇಶ ,ಮಹಾರಾಶ್ಟ್ರ ರಾಜ್ಯಗಳಲ್ಲಿ ರಾಗಿಯ ಬೆಳೆಯನ್ನು ಹೆಚ್ಚಾಗಿ ಕಾಣಬಹುದು.
ರಾಗಿಯ ಪ್ರಯೋಜನಗಳು:
೧.ಚರ್ಮಕ್ಕೆ ಪ್ರಯೋಜನಕಾರಿ
ರಾಗಿ ಅಮೈನೋ ಆಮ್ಲಗಳು ಮತ್ತು ವಿಟಮಿನ್ ಡಿ ಯಲ್ಲಿ ಸಮೃದ್ಧವಾಗಿದೆ. ಈ ಕಾರಣದಿಂದಾಗಿ, ರಾಗಿ ಸೇವಿಸುವ ಮೂಲಕ ಚರ್ಮವು ಯಾವಾಗಲೂ ಹೊಳಪಾಗಿ ಕಾಣುತ್ತದೆ ಮತ್ತು ಇದು ಚರ್ಮದ ಅಂಗಾಂಶವನ್ನು ಸರಿಪಡಿಸುತ್ತದೆ, ಇದು ಸುಕ್ಕುಗಳಿಗೆ ಕಾರಣವಾಗುವುದಿಲ್ಲ.
೨.ಅಸ್ತಮಾ ತಡೆಗಟ್ಟುವಿಕೆಗೆ
ಅಸ್ತಮಾದಿಂದ ಬಳಲುತ್ತಿರುವವರಿಗೆ ರಾಗಿ ಉತ್ತಮ ಆಹಾರವಾಗಿದ್ದು, ಇದನ್ನು ಬಳಕೆ ಮಾಡುವ ಮೂಲಕ ಆರೋಗ್ಯ ವೃದ್ಧಿಗೊಳಿಸುವುದು ಮಾತ್ರವಲ್ಲದೇ ರೋಗ ಬರದಂತೆ ಕೂಡಾ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
೩.ಬೊಜ್ಜು ತೊಡೆದುಹಾಕಲು
ಭಾರತದಲ್ಲಿ ಅನೇಕ ಜನರು ಸ್ಥೂಲಕಾಯತೆಯಿಂದ ತೊಂದರೆಗೀಡಾಗಿದ್ದಾರೆ. ಆದರೆ ನಾವು ನಮ್ಮ ಆಹಾರವನ್ನು ನೋಡಿಕೊಂಡರೆ, ನಾವು ಬೊಜ್ಜು ಸುಲಭವಾಗಿ ತೊಡೆದುಹಾಕಬಹುದು. ರಾಗಿ ದೇಹದೊಳಗೆ ಕೊಬ್ಬನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದ್ದು, ಅದಕ್ಕಾಗಿಯೇ ಜನರು ಇದನ್ನು ಸೇವಿಸಬೇಕು.
೪.ಆಂಟಿಆಕ್ಸಿಡೆಂಟ್
ಆಂಟಿಆಕ್ಸಿಡೆಂಟ್ಪ್ರಾಪರ್ಟೀಸ್ಗಳನ್ನು ಹೊಂದಿದೆ ಧಾನ್ಯಗಳ ಎಲ್ಲಾ ಪ್ರಭೇದಗಳು ಪಾಲಿಫೆನೊಲ್ಸ್ ಎಂದು ಕರೆಯಲ್ಪಡುವ ಫೈಟೊಕೆಮಿಕಲ್ಗಳಲ್ಲಿ ತುಂಬಿರುತ್ತವೆ. ಅವು ಪ್ರಬಲವಾಗಿ ರೋಗನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಮನುಷ್ಯನ ದೇಹದ ಪ್ರತಿರೋಧಕತೆಯನ್ನು ಹೆಚ್ಚಿಸಬಹುದು ಮತ್ತು ವೈರಸ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ರಾಗಿಯಲ್ಲಿ ಕೂಡ ಈ ಅಂಶ ಇದೆ.
೫.ಮೂಳೆಗಳಿಗೆ ಉತ್ತಮ
ರಾಗಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. 100 ಗ್ರಾಂ ರಾಗಿಗಳಲ್ಲಿ ಸುಮಾರು 344 ಮಿಗ್ರಾಂ ಕ್ಯಾಲ್ಸಿಯಂ ಕಂಡುಬರುತ್ತದೆ, ಇದು ಮೂಳೆಗಳಿಗೆ ತುಂಬಾ ಪ್ರಯೋಜನಕಾರಿ.
೬.ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ
ಕಡಿಮೆ ಫೈಬರ್ಯುಕ್ತ ಆಹಾರದ ಸೇವನೆಯಿಂದಾಗಿ ಅತಿಸಾರ, ಮಲಬದ್ಧತೆ, ಗ್ಯಾಸ್ ಮುಂತಾದ ಜೀರ್ಣಕಾರಿ ಸಮಸ್ಯೆಯಾಗುತ್ತದೆ. ರಾಗಿಯಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ.
೭.ರಕ್ತಹೀನತೆಯನ್ನು ತಡೆಯುತ್ತದೆ
ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ರಕ್ತಹೀನತೆಯು ಬಹಳ ಅಪಾಯಕಾರಿ ಹಾಗೂ ಮಾರಣಾಂತಿಕವೂ ಹೌದು. ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶವು ಜಾಸ್ತಿ ಇರುವುದರಿಂದ ರಾಗಿಯು ರಕ್ತಹೀನತೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ.
೮.ಮಧುಮೇಹವನ್ನು ನಿಯಂತ್ರಿಸುತ್ತದೆ
ಮಧುಮೇಹವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿರುವ ರೋಗವಾಗಿದೆ. ರಾಗಿಯಲ್ಲಿ ಕಂಡುಬರುವ ಮೆಗ್ನೀಷಿಯಂ ಅಂಶವು ದೇಹದಲ್ಲಿ ಇನ್ಸುಲಿನ್ ಮತ್ತು ಗ್ಲುಕೋಸ್ಗಳ ದಕ್ಷತೆಯನ್ನು ಹೆಚ್ಚಿಸುವಂತಹ ಪ್ರಮುಖ ಖನಿಜಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿದೆ. ರಾಗಿಯನ್ನು ಸೇವಿಸುವ ಜನರಲ್ಲಿ 30% ದಷ್ಟು ಮಧುಮೇಹವು ಇಳಿಕೆ ಕಂಡುಬಂದಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
೯.ಕ್ಯಾನ್ಸರ್ನ್ನು ತಡೆಗಟ್ಟುವಲ್ಲಿ ಸಹಾಯಕಾರಿಯಾಗಿದೆ ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿರುವುದರಿಂದ ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸುವುದನ್ನು ಕಡಿಮೆಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಜಾಸ್ತಿಯಾಗಿರುವುದರಿಂದ ರಾಗಿಯಲ್ಲಿರುವ ಫೈಬರ್ ಅಂಶವು 30% ರಷ್ಟು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ ಎಂದು ಹೇಳಲಾಗುತ್ತದೆ.
೧೦.ಹೃದಯದ ಆರೋಗ್ಯ ಕಾಪಾಡುತ್ತದೆ
ಇದರಲ್ಲಿರುವ ಮೆಗ್ನೀಷಿಯಂ ಅಂಶವು ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ ಹೃದಯಾಘಾತದಿಂದ ಉಂಟಾಗುವ ಪಾರ್ಶ್ವವಾಯುಗಳ ಅಪಾಯವನ್ನು ಇದು ತಗ್ಗಿಸುತ್ತದೆ.
೧೧.ವಿಷ ಆಮ್ಲವನ್ನು ತೆಗೆದುಹಾಕುತ್ತದೆ
ನಮ್ಮ ದೇಹದಲ್ಲಿರುವ ವಿಷ ಆಮ್ಲವನ್ನು ತೆಗೆದುಹಾಕಲು ರಾಗಿ ಒಂದು ಉತ್ತಮವಾದ ಆಹಾರ ಎಂದೇ ಹೇಳಬಹುದು. ಇದರಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶವು ವಿಷ ಆಮ್ಲದ ವಿರುದ್ಧ ಹೋರಾಡಿ ಅದು ನಮ್ಮ ದೇಹದಲ್ಲಿ ಉತ್ಪತ್ತಿ ಆಗದಂತೆ ತಡೆಯುತ್ತದೆ ಇದರಿಂದ ದೇಹ ಆರೋಗ್ಯಯುತವಾಗಿರುತ್ತದೆ.
ಒಟ್ಟಿನಲ್ಲಿ ರಾಗಿಯು ವಿಶಿಷ್ಟ ಪೋಶಕಾಂಶಗಳ ವಿಶಿಷ್ಟ ಸಂಯೋಜನೆಯನ್ನು ಹೊಂದಿದೆ. ರಾಗಿಯನ್ನು ಗಂಜಿ, ರಾಗಿ ಅಂಬಲಿ, ರಾಗಿ ಮುದ್ದೆ, ಮತ್ತು ರಾಗಿಯನ್ನ ಪುಡಿ ಮಾಡಿಕೊಂಡು ಹಾಲಿನಲ್ಲಿ ಬೆರೆಸಿ ಹೀಗೆ ಹಲವಾರು ವಿಧಗಳಲ್ಲಿ ನಾವು ನಮ್ಮ ಆಹಾರದಲ್ಲಿ ಬಳಸಿಕೊಳ್ಳಬಹುದು. ಇಷ್ಟೆಲ್ಲ ಆರೋಗ್ಯಕ್ಕೆ ಅವಶ್ಯಕವಾಗಿರುವ ಅಂಶ ಹೊಂದಿರುವ ರಾಗಿಯನ್ನು ಬಳಸಿ ಉತ್ತಮವಾದ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.
ಧನ್ಯವಾದಗಳು.
GIPHY App Key not set. Please check settings