in

ಮಹಾಶಿವನಿಂದ ನೂರು ಮಕ್ಕಳ ವರ ಪಡೆದ ಗಾಂಧಾರಿ

ಗಾಂಧಾರಿ
ಗಾಂಧಾರಿ

ಸುಬಲ ರಾಜನ ಮಗಳು. ಮೋಸಮಾಡುವ ರಾಜನೀತಿಯಲ್ಲಿ ಚತುರನಾದ ಶಕುನಿ ಅವಳ ಅಣ್ಣ. ನೂರೊಂದು ಮಕ್ಕಳ ತಾಯಿ. ‘ಗಾಂಧಾರದೇಶ’ ಎಂಬ ಹೆಸರಿತ್ತು. ಮಹಾಭಾರತದ ಕಾಲದಲ್ಲಿ ಅದು ಭಾರತದ ಆಶ್ರಯದಲ್ಲಿತ್ತು. ಅಲ್ಲಿಯ ರಾಜ ಸುಬಲ. ಅವನ ಗಂಡು ಮಕ್ಕಳಲ್ಲಿ ಹಿರಿಯವನು ಶಕುನಿ. ಹೆಣ್ಣುಮಕ್ಕಳಲ್ಲಿ ಹಿರಿಯವಳು ಗಾಂಧಾರಿ. ಆ ದೇಶದ ರಾಜಕುಮಾರಿ ಎಂಬ ಅರ್ಥ ಬರುವ ಹಾಗೆ ಆಕೆಗೆ ಆ ಹೆಸರನ್ನು ಇಟ್ಟಿದ್ದರು. ಅವಳು ಬಹು ಚೆಲುವಾಗಿದ್ದಳು. ಗುರುಹಿರಿಯರಿಗೆ ವಿಧೇಯಳು. ಭಕ್ತಿ, ನೀತಿ, ವಿನಯಗಳಿಂದ ನಡೆಯುತ್ತಿದ್ದಳು. ವಿದ್ಯಾವಂತೆಯೂ ಆಗಿದ್ದಳು. ಚಿಕ್ಕಂದಿನಲ್ಲೇ ದೊಡ್ಡ ದೊಡ್ಡ ಆಸೆಗಳನ್ನು ಇಟ್ಟುಕೊಂಡಿದ್ದಳು. ‘ತಾನು ಒಬ್ಬ ಮಹಾರಾಜನ ಪಟ್ಟದ ರಾಣಿಯಾಗಬೇಕು. ಹೊಕ್ಕ ಮನೆಯನ್ನು ಬೆಳೆಸಿ ಎರಡು ಕುಲಗಳಿಗೂ ಕೀರ್ತಿ ತರಬೇಕು. ನೂರು ಮಕ್ಕಳ ತಾಯಿಯಾಗಿ, ಬೇರೆ ಹೆಂಗಸರಿಗಿಂತ ಮೇಲೆನಿಸಬೇಕು’ ಎಂದು ಭಾವಿಸಿದ್ದಳು.ಅದಕ್ಕಾಗಿಯೇ ಅವಳು ಶಿವನನ್ನು ಆರಾಧಿಸಿದಳು. ನಿತ್ಯವೂ ಭಕ್ತಿಯಿಂದ ಧ್ಯಾನ ಮಾಡಿದಳು, ಪೂಜೆ ಸಲ್ಲಿಸಿದಳು. ದೇವರು ಮೆಚ್ಚಿ ಕನಸಿನಲ್ಲಿ ಅವಳಿಗೆ ಕಾಣಿಸಿದನು. ‘ನಿನಗೆ ಏನು ಬೇಕು? ವರವನ್ನು ಕೇಳು’ ಎಂದ ಹಾಗಾಯಿತು. ಆಗ ಅವಳು ಭಾವಿಸಿದ್ದು ಇಷ್ಟೆ-‘ನಾನು ಮಹಾರಾಜನ ಮಡದಿಯಾಗಬೇಕು. ನೂರು ಗಂಡು ಮಕ್ಕಳನ್ನು ಪಡೆಯಬೇಕು’ ಎಂದು. ‘ಹಾಗೆಯೇ ಆಗಲಿ’ ಎಂದಂತಾಯಿತು. ಹೀಗೆ ಚಿಕ್ಕಂದಿನಲ್ಲೇ ದೇವರನ್ನು ಭಕ್ತಿಯಿಂದ ಒಲಿಸಿದ್ದಳು.

ಹಸ್ತಿನಾವತಿ ಅಲ್ಲಿ ಅರಸನಾಗಿದ್ದ ಶಂತುನುವಿಗೆ ಗಂಗಾದೇವಿಯಲ್ಲಿ ಹುಟ್ಟಿದ ಭೀಷ್ಮನೆಂಬ ಮಗನಿದ್ದನು. ಅವನು ಮದುವೆಯಾಗುವುದಿಲ್ಲವೆಂದೂ ಅರಸನಾಗುವುದಿಲ್ಲವೆಂದೂ ಮೊದಲೇ ಪ್ರತಿಜ್ಞೆ ಮಾಡಿದ್ದನು. ಅವನ ಚಿಕ್ಕಮ್ಮ ಸತ್ಯವತಿ. ಅವಳಲ್ಲಿ ಹುಟ್ಟಿದ ಇಬ್ಬರಲ್ಲಿ ಚಿತ್ರಾಂಗದ ಮೊದಲೇ ಸತ್ತಿದ್ದನು. ಇನ್ನೊಬ್ಬನಾದ ವಿಚಿತ್ರವೀರ‍್ಯನಿಗೆ ಭೀಷ್ಮನು ಕಾಶೀರಾಜನ ಕುಮಾರಿಯರಾದ ಅಂಬಿಕೆ, ಅಂಬಾಲಿಕೆ ಎಂಬ ಇಬ್ಬರನ್ನೂ ತಂದು ಮದುವೆ ಮಾಡಿಸಿದ್ದನು. ವಿಚಿತ್ರ ವೀರ‍್ಯನು ರೋಗಕ್ಕೆ ಬಲಿಯಾಗಿ ಸತ್ತನು. ವೇದವ್ಯಾಸರ ವರದಿಂದ ಅಂಬಿಕೆಯಲ್ಲಿ ಧೃತರಾಷ್ಟ್ರನು ಹುಟ್ಟಿದನು. ಅಂಬಾಲಿಕೆಯಲ್ಲಿ ಪಾಂಡುವೂ ದಾಸಿಯೊಬ್ಬಳಲ್ಲಿ ವಿದುರನೂ ಹುಟ್ಟಿದರು. ಅವರಲ್ಲಿ ಧೃತರಾಷ್ಟ್ರ ಹುಟ್ಟುವಾಗಲೇ ಕುರುಡ.

ಭೀಷ್ಮನು ಈ ಕುಮಾರರಿಗೆ ಅವಶ್ಯವಾದ ವಿದ್ಯೆಗಳನ್ನೆಲ್ಲಾ ಕಲಿಸಿ, ಅವರನ್ನು ಬೆಳೆಸಿದನು. ಧೃತರಾಷ್ಟ್ರನು ಹೆಚ್ಚಿನ ಗರಡಿ ಸಾಧನೆ ಮಾಡಿ ದೇಹಬಲದಲ್ಲಿ ಎಲ್ಲರನ್ನೂ ಮೀರಿಸಿದನು; ಬಹಳ ಸುಂದರನೂ ಆದನು. ಅವನು ಕುರುಡನಾದುದರಿಂದ ಪಾಂಡುವೇ ರಾಜ್ಯವನ್ನು ಆಳತೊಡಗಿದನು. ಭೀಷ್ಮನು ಇವರಿಗೆ ಯೋಗ್ಯ ಕನ್ಯೆಯರನ್ನು ಮದುವೆ ಮಾಡಿಸಬೇಕೆಂದು ಯೋಚಿಸಿದನು.

ಧೃತರಾಷ್ಟ್ರನಿಗೆ ಯೋಗ್ಯ ಕನ್ಯೆಯರನ್ನು ಹುಡುಕುವು ದಕ್ಕಾಗಿ ಭೀಷ್ಮನು ಹಲವು ಪ್ರತಿನಿಧಿಗಳನ್ನು ಬೇರೆ ಬೇರೆ ದೇಶಗಳಿಗೆ ಕಳುಹಿಸಿದನು. ಅವರಲ್ಲಿ ಗಾಂಧಾರ ದೇಶಕ್ಕೆ ಹೋದವರು ಆ ದೇಶದ ರಾಜಕುಮಾರಿ ಓರ್ವ ಯೋಗ್ಯ ಕನ್ಯೆಯೆಂದು ಭೀಷ್ಮನಿಗೆ ಬಂದು ತಿಳಿಸಿದರು. ಆಕೆ ಶಿವನನ್ನು ಮೆಚ್ಚಿಸಿ ತನಗೆ ನೂರು ಗಂಡು ಮಕ್ಕಳಾಗುವಂತೆ ವರ ಪಡೆದ ಸಂಗತಿಯನ್ನು ಹೇಳಿದರು. ಭೀಷ್ಮನಿಗೆ ಈ ಸಂಬಂಧ ಮೆಚ್ಚಿಕೆಯಾಯಿತು. ಅವನು ಮದುವೆಯ ಮಾತುಕತೆಗಾಗಿ ಮಾತಿನಲ್ಲಿ ಚತುರರಾದ ವಿದ್ವಾಂಸರನ್ನು ಗಾಂಧಾರಕ್ಕೆ ಕಳುಹಿಸಿದನು.

ಮಹಾಶಿವನಿಂದ ನೂರು ಮಕ್ಕಳ ವರ ಪಡೆದ ಗಾಂಧಾರಿ
ಗಾಂಧಾರಿ ಧೃತರಾಷ್ಟ್ರ

ಸುಬಲನು ಯೋಚನೆಗೆ ಈಡಾದನು. ‘‘ಕುರುವಂಶವು ಕೀರ್ತಿ, ಶೌರ‍್ಯ, ಸದ್ಗುಣಗಳಿಂದ ಹಿರಿದೆನಿಸಿ ಮೆರೆಯುತ್ತಿದೆ. ಆ ವಂಶದ ರಾಜ ಧೃತರಾಷ್ಟ್ರ. ಅವನ ರೂಪ, ಶಕ್ತಿ, ಗುಣ, ವಿದ್ಯೆ, ಜ್ಞಾನ ಇವು ಬೇರೆ ಯಾರಿಗುಂಟು? ಆದರೆ ಕುರುಡನು. ಕುರುಡನನ್ನು ಮದುವೆಯಾಗಲು ಮಗಳು ಒಪ್ಪುವಳೆ? ಬಂಧುಗಳು ಏನೆಂದಾರು?’’
ಈ ವಿಚಾರ ಗಾಂಧಾರಿಗೆ ತಿಳಿದಾಗ ಮೊದಲು ಸ್ವಲ್ಪ ಬೇಸರವೇ ಆಯಿತು. ಆದರೇನು? ‘‘ನಾನು ಜಗತ್ತಿನಲ್ಲೇ ಉತ್ತಮವೆನಿಸಿರುವ ವಂಶವನ್ನು ಸೇರುತ್ತೇನೆ. ಗಂಡ ಕುರುಡನಾದರೂ ಅವನ ಬುದ್ಧಿ, ನೀತಿ, ವರ್ತನೆಗಳು ಕುರುಡಲ್ಲ. ಅವನು ಅರಸನಾಗಿ ಆಳದಿದ್ದರೂ ಹಿರಿಯನಾದುದರಿಂದ ನನ್ನ ಮಕ್ಕಳಲ್ಲಿ ಹಿರಿಯನು ಅರಸನಾಗುತ್ತಾನೆ. ನೂರು ಮಕ್ಕಳನ್ನು ಪಡೆದು ಇತರರು ಹೊಟ್ಟೆಕಿಚ್ಚು ಪಡುವಂತೆ ನಾನು ಮೆರೆಯುತ್ತೇನೆ. ಈ ಮದುವೆಗೆ ನಾನು ಒಪ್ಪದಿದ್ದರೆ, ತಂದೆಯೂ ಒಪ್ಪಲಾರ, ನಿಜ. ಆಗ ಭೀಷ್ಮನು ಯುದ್ಧ ಮಾಡಿ ಗೆದ್ದು ನನ್ನನ್ನು ಒಯ್ದರೆ ಗಾಂಧಾರ ದೇಶಕ್ಕೇ ಅಪಮಾನ. ಈ ಅಪಮಾನಕ್ಕೆ ನಾನೇ ಕಾರಣಳಾಗುತ್ತೇನೆ. ವ್ಯಕ್ತಿಗಿಂತ ದೇಶ ದೊಡ್ಡದಲ್ಲವೆ?’’ ಹೀಗೆ ಯೋಚಿಸಿದ ಗಾಂಧಾರಿ ಧೃತರಾಷ್ಟ್ರನನ್ನು ಮದುವೆಯಾಗಲು ಒಪ್ಪಿದಳು.

ವಿವಾಹದ ವೇಳೆಗೆ ಗಾಂಧಾರಿಗೆ ಒಂದು ಯೋಗ್ಯವಾದ ಯೋಚನೆ ಹೊಳೆಯಿತು. ‘ಪತಿಯಂತೆ ಸತಿ ಇರಬೇಕು. ನನ್ನ ಗಂಡನಿಗೆ ಕಣ್ಣು ಕಾಣಿಸದು. ಹೀಗಿರುವಾಗ ನಾನು ಕಣ್ಣುಗಳನ್ನು ನೋಡುವುದಕ್ಕಾಗಿ ಉಪಯೋಗಿಸಬಾರದು’ ಎಂದುಕೊಂಡು, ಒಂದು ಬಟ್ಟೆಯನ್ನು ಪಟ್ಟಿಯಾಗಿ ಮಡಚಿ ಕಣ್ಣುಗಳಿಗೆ ಕಟ್ಟಿಕೊಂಡಳು. ಗಾಂಧಾರಿಯ ಪತಿಭಕ್ತಿಗೆ ಎಲ್ಲರೂ ತಲೆದೂಗಿದರು.

ಗಾಂಧಾರ ದೇಶದ ರಾಜನಾದ ಸುಬಲನ ಪುತ್ರಿಯಾದ ಈಕೆ ಕುರುವಂಶದ ಮಹಾರಾಜನಾದ ಧೃತರಾಷ್ಟ್ರನನ್ನು ವರಿಸುತ್ತಾಳೆ. ಹುಟ್ಟು ಕುರುಡನಾದ ತನ್ನ ಪತಿ ಧೃತರಾಷ್ಟ್ರನಿಗೆ ಕಾಣದ ಹೊರಜಗತ್ತು ತನಗೂ ಸಹ ಕಾಣುವುದು ಬೇಡವೆಂದು ನಿರ್ಧರಿಸಿ ತನ್ನ ಕಣ್ಣಿಗೆ ಪಟ್ಟಿಯನ್ನು ಕಟ್ಟಿಕೊಳ್ಳುತ್ತಾಳೆ. ದುರ್ಯೋಧನ, ದುಶ್ಯಾಸನರು ಸೇರಿದಂತೆ ೧೦೦ ಮಂದಿ ಕೌರವರು ಹಾಗೂ ದುಶ್ಯಲೆ ಈಕೆಯ ಮಕ್ಕಳು.

ಕನ್ಯೆಯಾಗಿ, ಗಾಂಧಾರಿ ಅವರ ಧರ್ಮನಿಷ್ಠೆ ಮತ್ತು ಸದ್ಗುಣಶೀಲತೆಗೆ ಹೆಸರುವಾಸಿಯಾಗಿದ್ದಾರೆ. ಗಾಂಧಾರಿಯನ್ನು ಬುದ್ಧಿವಂತಿಕೆಯ ದೇವತೆಯಾದ ಮಾತಿಯ ಅವತಾರವೆಂದು ಪರಿಗಣಿಸಲಾಗಿದೆ. ಗಾಂಧಾರ ರಾಜನಾದ ಸುಬಲನ ಮಗಳಾಗಿ ಅವಳು ಭೂಮಿಯಲ್ಲಿ ಜನಿಸಿದಳು ಮತ್ತು ಅವಳ ತಂದೆಯಿಂದ ‘ಗಾಂಧಾರಿ’ ಎಂದು ನಾಮಕರಣ ಮಾಡಲಾಯಿತು. ಅವಳನ್ನು ಯಾವಾಗಲೂ ಗಾಂಧಾರಿ ಎಂದು ಕರೆಯಲಾಗುತ್ತದೆ ಮತ್ತು ಮಹಾಕಾವ್ಯದಲ್ಲಿ ಅವಳ ಗುರುತನ್ನು ಸಂಕೇತಿಸುವ ಮಹಾಕಾವ್ಯದಲ್ಲಿ ಬೇರೆ ಯಾವುದೇ ಹೆಸರುಗಳನ್ನು ಉಲ್ಲೇಖಿಸಲಾಗಿಲ್ಲ. ಧೃತರಾಷ್ಟ್ರನನ್ನು ಮದುವೆಯಾಗುವ ಮೊದಲು, ಅವಳನ್ನು ಗಾಂಧಾರ-ರಾಜ-ದುಹಿತಾ (ಗಾಂಧಾರ ರಾಜನ ಮಗಳು), ಸೌಬಲೇಯಿ, ಸೌಬಲಿ, ಸುಬಲಜ, ಸುಬಲ-ಪುತ್ರಿ ಮತ್ತು ಸುಬಲಾತ್ಮಜ ಎಂದು ಹೆಸರುಗಳು ಇದ್ದವು.
ಕುರು ಸಾಮ್ರಾಜ್ಯದ ಹಿರಿಯ ರಾಜಕುಮಾರನಾದ ಧೃತರಾಷ್ಟ್ರನ ಜೊತೆ ಗಾಂಧಾರಿಯ ವಿವಾಹವನ್ನು ಏರ್ಪಡಿಸಲಾಯಿತು. ಮಹಾಭಾರತ ಕಾವ್ಯವು ಅವಳನ್ನು ಸುಂದರ ಮತ್ತು ಸದ್ಗುಣಶೀಲ ಮಹಿಳೆ ಮತ್ತು ತುಂಬಾ ಸಮರ್ಪಿತ ಹೆಂಡತಿ ಎಂದು ಚಿತ್ರಿಸಿದೆ. ಅವರ ಮದುವೆಯನ್ನು ಭೀಷ್ಮ ಏರ್ಪಡಿಸಿದ್ದನು. ತನ್ನ ಗಂಡ ಕುರುಡನಾಗಿ ಜನಿಸಿದನೆಂದು ತಿಳಿದಾಗ, ಅವಳು ತನ್ನ ಗಂಡನಂತೆ ಇರಲು ತನ್ನ ಗಂಡನಂತೆ ಅಜೀವನ ಕಣ್ಣನ್ನು ಬಟ್ಟೆಯಿಂದ ಮುಚ್ಚಿಕೊಳ್ಳಲು ನಿರ್ಧರಿಸಿದಳು.
ಮಹಾಭಾರತವು ಕೌರವರನ್ನು ಖಳನಾಯಕರಂತೆ ಚಿತ್ರಿಸಿದ್ದರೂ ಗಾಂಧಾರಿಗೆ ಮಾತ್ರ ಮಹತ್ವದ ಸ್ಥಾನವನ್ನು ನೀಡಿದೆ. ತನ್ನ ಪುತ್ರರಾದ ಕೌರವರಿಗೆ ಬುಧ್ಧಿಹೇಳಿ ಯುಧ್ಧವನ್ನು ತಪ್ಪಿಸಿ ಪಾಂಡವರೊಂದಿಗೆ ರಾಜಿ ಮಾಡಿಸಲು ಪದೇ ಪದೇ ಯತ್ನಿಸಿ ವಿಫಲಳಾಗುತ್ತಾಳೆ. ಪುರಾಣದ ಪ್ರಕಾರ ಆಕೆ ಶಿವನ ಭಕ್ತೆಯಾಗಿದ್ದು ಪತಿಗೋಸ್ಕರ ತಾನು ಮಾಡಿದ ತ್ಯಾಗದಿಂದಾಗಿ ಆಕೆ ವಿಶೇಷವಾದ ಶಕ್ತಿಯನ್ನು ಪಡೆದಿರುತ್ತಾಳೆ. ಸದಾ ಮುಚ್ಚಿಕೊಂಡೆ ಇರುವ ಆಕೆಯ ಚಕ್ಷುಗಳಿಗೆ ಅಗಾಧವಾದ ಶಕ್ತಿಯಿತ್ತು ಎಂಬುದಾಗಿ ಕಥೆ ಹೇಳುತ್ತದೆ.
ಮಹಾಭಾರತದ ಪ್ರಕಾರ ಮದುವೆಯ ನಂತರ ಕೇವಲ ಒಂದೇ ಒಂದು ಬಾರಿ ಮಾತ್ರ ಗಾಂಧಾರಿಯು ತನ್ನ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ಬಿಚ್ಚುತ್ತಾಳೆ. ಅದು ಕುರುಕ್ಷೇತ್ರ ಮಹಾಸಮರದ ಸಂದರ್ಭದಲ್ಲಿ. ವಿಶೇಷ ಶಕ್ತಿಯನ್ನು ಹೊಂದಿರುವ ತನ್ನ ಕಣ್ಣುಗಳಿಂದ ದುರ್ಯೋಧನನ ದೇಹವನ್ನು ವಜ್ರಕಾಯವನ್ನಾಗಿಸುವ ಸಲುವಾಗಿ ತನ್ನ ಮುಂದೆ ನಿರ್ವಸ್ತ್ರನಾಗಿ ಬಂದು ನಿಲ್ಲಲು ಮಗನಿಗೆ ಹೇಳುತ್ತಾಳೆ.
ಇದನ್ನರಿತ ಕೃಷ್ಣನು ನಗ್ನನಾಗಿ ಹೋಗುವ ದುರ್ಯೋಧನನನ್ನು ಕಂಡು ನಕ್ಕು ಆತನು ನಾಚಿಕೆಪಡುವಂತೆ ಮಾಡುತ್ತಾನೆ. ನಾಚಿಕೆಗೊಂಡ ದುರ್ಯೋಧನನು ಸಂಪೂರ್ಣ ವಿವಸ್ತ್ರನಾಗಿ ಹೋಗುವ ಬದಲು ಸೊಂಟದಿಂದ ತೊಡೆಯವರೆಗೂ ಮುಚ್ಚಿಕೊಂಡು ಹೋಗಿ ತನ್ನ ತಾಯಿ ಗಾಂಧಾರಿಯ ಎದುರಿಗೆ ನಿಲ್ಲುತ್ತಾನೆ. ಗಾಂಧಾರಿಯು ಹಾಗಾಗಿ ಆತನ ತೊಡೆಯ ಭಾಗವನ್ನು ಬಿಟ್ಟು ಉಳಿದ ಭಾಗವನ್ನು ಮಾತ್ರ ವಿವಸ್ತ್ರವಾಗಿ ನೋಡುತ್ತಾಳೆ.
ಈ ರಹಸ್ಯವನ್ನರಿತಿದ್ದ ಶ್ರೀಕೃಷ್ಣನು ಗದಾಯುಧ್ಧದ ಸಂದರ್ಭದಲ್ಲಿ ಭೀಮನಿಗೆ ತನ್ನ ತೊಡೆಯನ್ನು ತಟ್ಟಿ ತೋರಿಸಿ ಆತನು ದುರ್ಯೋಧನನ ತೊಡೆಗೆ ಪ್ರಹಾರ ಮಾಡುವಂತೆ ಮಾಡುತ್ತಾನೆ. ಮಹಾಭಾರತ ಯುಧ್ದದಲ್ಲಿ ತನ್ನೆಲ್ಲಾ ಕುವರರ ಸಾವಿಗೆ ಕೃಷ್ಣನೇ ಕಾರಣನೆಂಬ ಕೋಪದಿಂದ ಗಾಂಧಾರಿಯು ಯದುವಂಶವೂ ಸಹ ಸರ್ವನಾಶವಾಗಲಿ ಎಂದು ಕೃಷ್ಣನನ್ನು ಶಪಿಸುತ್ತಾಳೆ.

ಮಹಾಭಾರತದಲ್ಲಿ ಬರುವ ತಾಯಂದಿರಲ್ಲಿ ಗಾಂಧಾರಿಯ ಹೆಸರು ಎದ್ದು ಕಾಣುತ್ತದೆ. ಆಕೆಯ ಗಂಡ ಧೃತರಾಷ್ಟ್ರ ರಾಜ. ಹುಟ್ಟು ಕುರುಡ, ಮೊದಲೇ ಗೊತ್ತಿದ್ದರೂ ಈ ವರನು ಬೇಡವೆಂದು ಆಕ್ಷೇಪಿಸಿದೆ ಅವನನ್ನು ಮದುವೆಯಾದಳು. ಅವನಿಗೆ ಇಲ್ಲದ ಅನುಕೂಲತೆಯನ್ನು ತಾನು ಅನುಭವಿಸಬಾರದೆಂದು ಅವಳು ತನ್ನ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿಕೊಂಡೇ ಇದ್ದಳು. ಅಂತಹ ಪತಿವ್ರತೆ ,ಧರ‍್ಮದಲ್ಲಿ ಶ್ರದ್ಧೆ ಇದ್ದವಳು. ಪತಿಯ ಜೊತೆಯಲ್ಲೇ ಇದ್ದು ಅವನಿಗೆ ಅನುಕೂಲೆಯಾಗಿಯೇ ನಡೆದಳು. ಮಕ್ಕಳ ಮೇಲಿನ ಮಮತೆ ಅವಳಿಗಿದ್ದಷ್ಟು ಯಾರಿಗೂ ಇರದು! ಹೊಟ್ಟೆ ಕಿಚ್ಚಿನಲ್ಲಿ ಅಬ್ಬಬ್ಬಾ! ಅವಳಿಗೆ ಅವಳೇ ಸಾಟಿ.

ಧೃತರಾಷ್ಟ್ರ ಗಾಂಧಾರಿಯರ ಮದುವೆ ಆದಮೇಲೆ ಪಾಂಡುವಿಗೆ ಕುಂತಿ, ಮಾದ್ರಿಯರೊಡನೆ ಮದುವೆ ನಡೆಯಿತು. ವಿದುರನಿಗೂ ಮದುವೆ ನೆರವೇರಿತು.

ವ್ಯಾಸರ ಆಶೀರ್ವಾದದಿಂದ ಗಾಂಧಾರಿಗೆ ಒಂದು ನೂರು ಜನ ಗಂಡುಮಕ್ಕಳೂ ಒಬ್ಬ ಹೆಣ್ಣು ಮಗಳೂ ಹುಟ್ಟಿದರು. ಗಂಡು ಮಕ್ಕಳಲ್ಲಿ ದೊಡ್ಡವನು ದುರ್ಯೋಧನ, ಅವನ ನಂತರ ದುಶ್ಶಾಸನ; ಮಗಳು ದುಶ್ಶಲೆ. ಪಾಂಡುವಿನ ಐವರು ಗಂಡುಮಕ್ಕಳು ಪಾಂಡವರು ಎಂದು ಪ್ರಸಿದ್ಧರಾದರು

ಮಹಾಶಿವನಿಂದ ನೂರು ಮಕ್ಕಳ ವರ ಪಡೆದ ಗಾಂಧಾರಿ
ಗಾಂಧಾರಿ

ಗಾಂಧಾರಿಯ ಮೊದಲನೆಯ ಶಿಶು ಹುಟ್ಟಿದ ಕೂಡಲೇ ಅದು ಕತ್ತೆಯ ಸ್ವರದಿಂದ ಅತ್ತಿತು. ಇನ್ನೂ ಹಲವು ಅಪಶಕುನಗಳಾದವು. ಈ ಕೆಟ್ಟ ಶಕುನಗಳಿಂದ ಧೃತರಾಷ್ಟ್ರನಿಗೆ ಭಯವಾಯಿತು. ಅವನು ಶಕುನ ಬಲ್ಲವರನ್ನೂ ಜೋಯಿಸರನ್ನೂ ವಿದುರನನ್ನೂ ಕರೆಸಿದನು. ಅವರೆಲ್ಲಾ ಹೀಗೆಂದರು:
‘‘ಈ ಮಗು ಅವಲಕ್ಷಣವುಳ್ಳದ್ದು. ಇದರಿಂದ ಭರತವಂಶಕ್ಕೇ ಕೇಡು. ಇದನ್ನು ಒಯ್ದು ಮಣ್ಣೊಳಗೆ ಹಾಕಿಸು.’’
ವಿದುರ ಮುಂತಾದವರು ಹೀಗೆ ಹೇಳಿದಾಗ ಧೃತರಾಷ್ಟ್ರನು ‘ಈಗೇನು ಮಾಡಲಿ?’ ಎಂಬ ಯೋಚನೆಗೆ ಈಡಾದನು. ಮಕ್ಕಳ ಮೇಲೆ ಅತಿ ಮಮತೆಯುಳ್ಳ ಗಾಂಧಾರಿ ತನ್ನ ನೂರೊಂದು ಮಕ್ಕಳಲ್ಲಿ ಒಂದನ್ನು ಕೂಡ ಕಳೆದುಕೊಳ್ಳಲು ಸಿದ್ಧಳಾಗಲಿಲ್ಲ. ಎಷ್ಟಾದರೂ ಹೆತ್ತ ಕರುಳು!

ಗಾಂಧಾರಿಯ ಅಪೇಕ್ಷೆ ತನ್ನ ಮಕ್ಕಳು ನೀತಿವಂತರಾಗಿ ಧರ‍್ಮನಿಷ್ಠರಾಗಿ ಬಾಳಬೇಕೆಂಬುದೇ. ಆದರೆ ಎಷ್ಟು ಯತ್ನಿಸಿದರೂ ಯಾವ ಸಂದರ್ಭದಲ್ಲಿಯೂ ದುರ‍್ಯೋಧನನನ್ನು ತಿದ್ದಲು ಅವಳಿಗೆ ಸಾಧ್ಯವಾಗಲಿಲ್ಲ. ಚಿಕ್ಕಂದಿನಿಂದಲೇ ಅವಳ ಮಕ್ಕಳೂ ಕುಂತೀ ಮಾದ್ರಿಯರ ಮಕ್ಕಳಾದ ಐವರು ಪಾಂಡವರೂ ಜಗಳವಾಡಿಕೊಂಡೇ ಇದ್ದರು. ಪಾಂಡುರಾಜನು ಹಿಂದೆಯೇ ಸತ್ತು ಹೋಗಿದ್ದನು. ರಾಜಪ್ರತಿನಿಧಿಯಾಗಿ ಭೀಷ್ಮನು ಆಳುತ್ತಿದ್ದನು. ಈ ಸಾಮ್ರಾಜ್ಯ ಮುಂದೆ ಪಾಂಡವರ ಕೈಗೆ ಹೋಗಬಹುದೆಂದು ದುರ‍್ಯೋಧನನಿಗೆ ಹೊಟ್ಟೆಕಿಚ್ಚು! ಆದುದರಿಂದ ಅವನು ಮಾವ ಶಕುನಿಯ ದುರ್ಬೋಧನೆಗೆ ಕಿವಿ ಕೊಟ್ಟನು. ಪಾಂಡವರನ್ನು ಕುಂತೀ ಸಮೇತ ವಾರಣಾವತಕ್ಕೆ ಕಳುಹಿಸಿ ಅರಗಿನ ಮನೆಯಲ್ಲಿ ಅವರನ್ನು ಸುಟ್ಟುಬಿಡಲು ಏರ್ಪಡಿಸಿದನು. ಆದರೆ ಪಾಂಡವರು ಅಲ್ಲಿಂದ ಪಾರಾದರು. ದ್ರೌಪದೀ ಸ್ವಯಂವರದ ವೇಳೆಗೆ ಅವರು ಬದುಕಿ ಉಳಿದಿರುವುದು ಗೊತ್ತಾಯಿತು. ಅನಂತರ ಪಾಂಡವರು ಇಂದ್ರಪ್ರಸ್ಥದಲ್ಲಿಯೂ ಕೌರವರು ಹಸ್ತಿನಾವತಿಯಲ್ಲಿಯೂ ರಾಜ್ಯವಾಳಿಕೊಂಡು ಇರುವಂತೆ ಭೀಷ್ಮ ಮುಂತಾದ ಹಿರಿಯರು ಏರ್ಪಾಡು ಮಾಡಿದರು.

ಮಹಾಯುದ್ಧದಲ್ಲಿ ತನ್ನ ತಮ್ಮಂದಿರು, ಮಕ್ಕಳು, ಹನ್ನೊಂದು ಅಕ್ಷೋಹಿಣಿ ಸೈನ್ಯ ಇವೆಲ್ಲ ನಾಶವಾದರೂ ಕೌರವನು ಯುದ್ಧದ ಯೋಚನೆಯನ್ನೇ ಮುಂದುವರಿಸಿದನು. ಕೌರವನ ಕಡೆಯಲ್ಲಿ ಉಳಿದ ಇತರರೆಂದರೆ ಕೃಪ, ಕೃತವರ‍್ಮ, ಅಶ್ವತ್ಥಾಮ- ಈ ಮೂವರು ವೀರರು ಮಾತ್ರ. ಯುದ್ಧಮಾಡುವುದನ್ನೇ ನಿಶ್ಚಯಿಸಿಕೊಂಡು ಕೌರವನೊಬ್ಬನೇ ಕುರುಕ್ಷೇತ್ರದಲ್ಲಿ ನಡೆದುಕೊಂಡು ಹೋಗುತ್ತಿದ್ದನು. ತನ್ನ ಹೆಗಲ ಮೇಲೆ ಗದೆಯನ್ನು ಇಟ್ಟುಕೊಂಡಿದ್ದನು.

ಧೃತರಾಷ್ಟ್ರ ಗಾಂಧಾರಿಯರಿಗೆ ದುರ‍್ಯೋಧನನದೇ ಚಿಂತೆ. ಬದುಕಿ ಉಳಿದರೆ ಇವನೊಬ್ಬನಾದರೂ ಉಳಿಯಲಿ ಎಂಬುದೇ ಆಸೆ. ಅವರ ಆಸೆಗೆ ಅನುಗುಣವಾಗಿ ಸಂಜಯನು ದುರ‍್ಯೋಧನನ ಜೊತೆಯಲ್ಲಿಯೇ ಇದ್ದು ಅವನು ಪಾಂಡವರೊಡನೆ ಸಂಧಿ ಮಾಡಿಕೊಳ್ಳುವಂತೆ ಪ್ರೇರೇಪಣೆ ಮಾಡುತ್ತಿದ್ದನು. ದುರ‍್ಯೋಧನನು ಯುದ್ಧ ಭೂಮಿಯಲ್ಲಿ ಇದ್ದಾನೆ ಎಂಬುದು ಅವನ ತಂದೆ ತಾಯಿಗಳಿಗೆ ಸೇವಕರ ಮೂಲಕ ತಿಳಿಯಿತು. ಅವರು ವ್ಯಥೆಪಡುತ್ತ ಮಗನ ಯೋಗಕ್ಷೇಮವನ್ನು ವಿಚಾರಿಸುವುದ ಕ್ಕಾಗಿಯೂ ಸಮಾಧಾನ ಪಡಿಸುವುದಕ್ಕಾಗಿಯೂ ಕೌರವನನ್ನು ಹುಡುಕುತ್ತಾ ಬಂದರು. ‘‘ಮಗನೇ, ನೀನೆಲ್ಲಿರುವೆಯೆಂಬುದು ನಮಗೆ ತಿಳಿಯದಾಯಿತಲ್ಲಾ’’ ಎಂದು ಗೋಳಿಡುವ ಸ್ವರವು ಸಂಜಯನಿಗೆ ಕೇಳಿಸಿತು. ‘‘ಅಗೋ ನಿನ್ನ ತಂದೆತಾಯಿಗಳು ನಿನ್ನನ್ನು ಹುಡುಕಿಕೊಂಡು ಬರುತ್ತಿದ್ದಾರೆ!’’ ಎಂದು ಸಂಜಯನು ತಿಳಿಸಿದ್ದೇ ತಡ, ಕೌರವನ ಹೃದಯವು ದುಃಖದಿಂದ ಕುದಿಯಿತು. ‘‘ಅಯ್ಯೋ ನನ್ನ ತಾಯಿ ಗಾಂಧಾರಿ ಬಂದು ನಿನ್ನ ತಮ್ಮ ದುಶ್ಶಾಸನ ಎಲ್ಲಿದ್ದಾನೆ? ಎಂದು ಕೇಳಿದರೆ ನಾನೇನು ಹೇಳಲಿ!’’ ಎನ್ನುತ್ತ ಮೂರ್ಛೆ ಹೋದನು. ಸಂಜಯನು ಉಪಚರಿಸುತ್ತಿದ್ದನು. ದುರ‍್ಯೋಧನ ನೆಲದಲ್ಲಿ ಬಿದ್ದಿರುವನೆಂದು ಸೇವಕರು ಹೇಳಿದರು. ಆಗ ಗಾಂಧಾರಿ ಕೇಳಿ, ದುರ‍್ಯೋಧನನು ಮಡಿದನೆಂದೇ ಭಾವಿಸಿದಳು.

‘‘ಮಗನೇ, ಚಂದ್ರವಂಶವೆಂಬ ಬಳ್ಳಿ ಹಬ್ಬಿ ಬೆಳೆಯಲು ನೀನೇ ಕಾರಣನಾದೆ. ನಿನ್ನನ್ನು ಭೀಮನು ನುಂಗಿದನೇ? ಮುದುಕರೂ ಕುರುಡರೂ ಆದ ನಮಗೆ ನೀನು ಊರು ಗೋಲಾಗಿದ್ದೆ. ನೀನಿದ್ದರೆ ಇತರರೆಲ್ಲ ಇದ್ದಹಾಗೆಯೇ. ಅಂತಹ ನಿನ್ನನ್ನು ಯಮನು ತಿಂದುಬಿಟ್ಟನೇ? ನಿತ್ಯವೂ ನೀನು ತಂದೆತಾಯಿಗಳ ಪಾದಕ್ಕೆ ನಮಿಸುತ್ತಿದ್ದೆ. ಆಶೀರ್ವಾದ ಪಡೆಯುತ್ತಿದ್ದೆ. ಈಗೇಕೆ ಸುಮ್ಮನಿರುವೆ? ನೀನು ಮಾತಾಡಿಸದಿದ್ದರೆ ನಮ್ಮನ್ನು ಬೇರೆ ಯಾರು ಮಾತಾಡಿಸುವವರು? ಮಗನೇ ಮಾತಾಡು’’ ಎಂದು ಗಾಂಧಾರಿ ಗೋಳಾಡಿದಳು. ಮಗನು ಮಡಿದನೆಂದೇ ಭಾವಿಸಿ ಧೃತರಾಷ್ಟ್ರನೂ ಅತ್ತನು. ಆಗ ಸಂಜಯನು ‘‘ಕೌರವನಿಗೆ ಜ್ಞಾನ ತಪ್ಪಿದೆ. ಈಗ ಚೇತರಿಸುವನು’’ ಎಂದು ಧೈರ‍್ಯ ಹೇಳಿದನು.

ಸ್ವಲ್ಪ ಹೊತ್ತಿನಲ್ಲೇ ಕೌರವನು ಎಚ್ಚೆತ್ತು ತಂದೆ ತಾಯಿಗಳಿಗೆ ವಂದಿಸಿದನು. ಸಂಧಿಗೆ ಒಪ್ಪುವಂತೆ ಧೃತರಾಷ್ಟ್ರನು ಮಗನಿಗೆ ಹೇಳಿದನು. ಗಾಂಧಾರಿ ಅದನ್ನೇ ಅನುಮೋದಿಸಿ ಹೀಗೆ ಹೇಳಿದಳು:

‘‘ಮಗನೇ, ಮುದುಕರೂ ಕಣ್ಣು ಕಾಣದವರೂ ಆದ ನಮ್ಮ ಮಾತಿನಂತೆ ನಡೆದುಕೋ. ತಂದೆಯ ಮಾತನ್ನು ಮೀರಬಾರದು. ಯುದ್ಧದ ಯೋಚನೆ ಇನ್ನು ಬೇಡ. ಶಿಬಿರಕ್ಕೆ ಹಿಂತಿರುಗು. ಸತ್ತವರು ಸತ್ತರು, ನೀನೊಬ್ಬನಾದರೂ ಉಳಿದರೆ ನಮಗೆ ಸಾಕು’’ ಹೀಗೆಂದು ಕಣ್ಣೀರು ಸುರಿಸಿದಳು. ಆಗ ಸಂಜಯನು ‘‘ನೀನು ಹೀಗೆ ಅತ್ತರೆ ದುರ‍್ಯೋಧನನನ್ನೂ ಧೃತರಾಷ್ಟ್ರನನ್ನೂ ಸಂತೈಸುವವರು ಯಾರು?’’ ಎಂದು ಗದರಿಸಿದನು. ಗಾಂಧಾರಿ ಕೊನೆಗಳಿಗೆಯಲ್ಲಿಯೂ ದುರ‍್ಯೋಧನನನ್ನು ತಿದ್ದಿ ಸರಿಪಡಿಸಲು ಅಸಮರ್ಥಳಾದಳು. ಆದುದರಿಂದ ಅವಳೂ ಧೃತರಾಷ್ಟ್ರನೂ ದುರ‍್ಯೋಧನನಿಗೆ ‘‘ಮಗನೇ, ನೀನು ಹೇಗಿದ್ದರೂ ನಮ್ಮ ಮಾತನ್ನು ಕೇಳುವುದಿಲ್ಲವಾದರೆ, ಅಜ್ಜನಾದ ಭೀಷ್ಮನನ್ನು ಕಂಡು, ಅವನು ಹೇಳಿದಂತೆ ಮಾಡು’’ ಎಂದರು. ಅದಕ್ಕೆ ಕೌರವನು ಒಪ್ಪಿದನು. ಧೃತರಾಷ್ಟ್ರ ಗಾಂಧಾರಿಯರು ಅರಮನೆಗೆ ಹಿಂತಿರುಗಿದರು.

ಮಹಾಶಿವನಿಂದ ನೂರು ಮಕ್ಕಳ ವರ ಪಡೆದ ಗಾಂಧಾರಿ
ದುರ‍್ಯೋಧನ,ಭೀಮ

ಕುರುಕ್ಷೇತ್ರದಲ್ಲಿ ಹದಿನೆಂಟು ದಿನಗಳ ಮಹಾಯುದ್ಧ ನಡೆಯಿತು. ಕೊನೆಯದು ಭೀಮನಿಗೂ ದುರ‍್ಯೋಧನನಿಗೂ ನಡೆದ ಗದಾಯುದ್ಧ. ಅದರಲ್ಲಿ ದುರ‍್ಯೋಧನನು ಮಡಿದನು. ಈ ಸುದ್ದಿ ಧೃತರಾಷ್ಟ್ರಗಾಂಧಾರಿಯರಿಗೆ ತಲುಪಿತು. ದುಃಖವನ್ನು ಸಹಿಸಲಾರದೆ ಧೃತರಾಷ್ಟ್ರನು ನೆಲದ ಮೇಲೆ ಹೊರಳಿ ಹೊರಳಿ ಗೋಳಾಡಿದನು. ಗಾಂಧಾರಿ ತನ್ನ ದುಃಖವನ್ನು ವಿವೇಕದಿಂದ ತಡೆಯಲು ಪ್ರಯತ್ನಿಸಿದಳು. ಆದರೂ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಕೌರವನ ಹೆಂಡತಿ ಭಾನುಮತಿ, ಇನ್ನಿತರ ಕೌರವರ ಮಡದಿಯರು, ದ್ರೋಣ ಶಲ್ಯ ಕರ್ಣರ ಪತ್ನಿಯರು, ಯುದ್ಧದಲ್ಲಿ ಮಡಿದ ವೀರರ ಹೆಂಡತಿಯರು ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದರು. ಕಣ್ಣೀರಿನ ಹೊಳೆ ಹರಿಸುತ್ತ, ಹೊಟ್ಟೆ ಬಡಿದುಕೊಳ್ಳುತ್ತ, ತಲೆ ಕೆದರಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಾ ಧೃತರಾಷ್ಟ್ರನ ಅರಮನೆಗೆ ಬಂದರು.

ಕೌರವರ ಅಂತ್ಯದ ತರುವಾಯ ತನ್ನ ಪತಿ ಮತ್ತು ಕುಂತಿಯೊಡನೆ ವಾನಪ್ರಸ್ಥಕ್ಕೆ ತೆರಳುವ ಗಾಂಧಾರಿಯು ನಂತರ ಅಲ್ಲಿ ಉಂಟಾಗುವ ಕಾಳ್ಗಿಚ್ಚಿನಿಂದ ತನ್ನ ಅಂತ್ಯವನ್ನು ಕಾಣುತ್ತಾಳೆಂಬುದು ಪುರಾಣ ಹೇಳುತ್ತದೆ.
ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಕ್ಕರೆ ಖಾಯಿಲೆ

ಮಧುಮೇಹ /ಸಕ್ಕರೆ ಖಾಯಿಲೆ ಕೆಲವೊಂದು ಸಲಹೆಗಳು

ಡ್ರೈ ಫ್ರೂಟ್ಸ್

ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಲಾಭಗಳು