ನನಗೆ ತುಂಬಾ ಇಷ್ಟವಾದ ಮಹಾಭಾರತದ ಪಾತ್ರ ಕರ್ಣ.
ಕರ್ಣ ಮಹಾಭಾರತದಲ್ಲಿ ಬರುವ ಅಪ್ರತಿಮ ವೀರ, ಆದರೆ ವೀರತ್ವ ಹೊಳೆಯಲ್ಲಿ ಹುಣಸೆಹಣ್ಣು ಹಿಂಡಿದಂತೆ ಆಗಿಹೋಗಿತ್ತು. ಹಸ್ತಿನಾಪುರ ಶಂತನು ಮಾಡಿದ ತಪ್ಪಿನಿಂದ ಬೀಷ್ಮರಂತ ಯೋಧನಿದ್ದರೂ ಸಿಂಹಾಸನ ಪ್ರಯೋಜನವಿಲ್ಲದಂತಾಗಿತ್ತು. ನಂತರ ಕುಂತಿಯ ಒಂದು ತಪ್ಪಿನ ನಿರ್ಧಾರದಿಂದ ಹಸ್ತಿನಾಪುರಕ್ಕೆ ಸಿಗಬಹುದಾದ ಒಬ್ಬ ವೀರ, ಧರ್ಮಿ, ಒಳ್ಳೆಯ ಆಡಳಿತ ನಡೆಸುವ ಶಕ್ತಿ ಸಾಮರ್ಥ್ಯ ಹೊಂದಿದ್ದ ಕರ್ಣನನ್ನು ಕಳೆದುಕೊಂಡಿತ್ತು. ಧರ್ಮರಾಯನಿಗಿಂತ ಯಾವುದರಲ್ಲಿ ಕಮ್ಮಿ ಇದ್ದ ಕರ್ಣ? ಸೂರ್ಯನ ಅಂಶ, ತೇಜಸ್ಸು, ರಕ್ಷಣೆಯೊಂದಿಗೆ ಜನಿಸಿದವ, ಯಾವ ಅಸ್ತ್ರಗಳ ಪ್ರಭಾವ ಅವನ ಮೇಲೆ ಸಾಧ್ಯವಿರಲಿಲ್ಲ. ಹೇಳಬೇಕೆಂದರೆ ಕರ್ಣ ಅಮರನಾಗಿದ್ದ .ಕೃಷ್ಣನ ತಂತ್ರದಿಂದ ಸಾವನ್ನು ಹೊಂದಿದನೇ ಹೊರತು ಕರ್ಣನನ್ನು ಸೋಲಿಸಲಾಗಲಿ, ಸಾಯಿಸಲಾಗಲಿ ಸಾಧ್ಯವೇ ಇಲ್ಲದ ಮಾತು.
ಹೌದು ಕರ್ಣ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಬ್ಬ. ಈತ ಕುಂತಿಯ ಮೊದಲ ಪುತ್ರ ಮತ್ತು ದುರ್ಯೋಧನನ ಆಪ್ತ ಮಿತ್ರ. ಇವನ ತಂದೆ ಸೂರ್ಯದೇವ. ಇವನನ್ನು ರಾಧೇಯನೆಂದೂ ಕರೆಯುತ್ತಿದ್ದರು. ಇವನು ಅಂಗ ದೇಶದ ಅಧಿಪತಿಯಾಗಿದ್ದನು. ಕರ್ಣನನ್ನು ದಾನ ವೀರ ಶೂರ ಕರ್ಣ ಎಂದು ಕರೆಯುತ್ತಾರೆ. ಗುರು ದೂರ್ವಾಸರು ನೀಡಿದ ಮಂತ್ರ ಮಾಹಾತ್ಮೆಯನ್ನು ಪರೀಕ್ಷಿಸಬೇಕೆಂಬ ಚಾಪಲ್ಯದಿಂದ ಸೂರ್ಯಮಂತ್ರ ಜಪಿಸಿ, ಸೂರ್ಯನಾರಾಯಣ ಆಕೆಗೆ ಗಂಡು ಮಗುವನ್ನು ಅನುಗ್ರಹಿಸಿದ. ಲೋಕಾಪವಾದಕ್ಕೆ ಹೆದರಿದ ಕುಂತಿ ತನ್ನ ಮರುಳುತನಕ್ಕಾಗಿ ಬೆದರಿ ಆ ಹಸುಗೂಸನ್ನು ಗಂಗಾನದಿಯಲ್ಲಿ ತೇಲಿಬಿಟ್ಟಳು.
ಅದು ಭೀಷ್ಮರ ಸಾರಥಿ ಅಧಿರಥನ ಕೈಗೆ ಸಿಕ್ಕಿತು. ಕವಚ ಕುಂಡಲಗಳ ಸಮೇತನಾಗಿ ಹುಟ್ಟಿದ ಶಿಶುವನ್ನು ಅಧಿರಥ ತನ್ನ ಹೆಂಡತಿ ರಾಧೆಯ ಕೈಗೆ ಕೊಟ್ಟ. ಅಪೂರ್ವ ತೇಜೋಶಾಲಿಯಾದ ಆ ಮಗುವಿಗೆ ವಸುಷೇಣನೆಂದು ಹೆಸರಿಟ್ಟರು. ದಿನ ಕಳೆದಂತೆಲ್ಲ ಆ ಹುಡುಗನ ಕೀರ್ತಿ ಕರ್ಣಾಕರ್ಣಿಕೆಯಾಗಿ ಹರಡತೊಡಗಿದ್ದರಿಂದ ಅವನಿಗೆ ಕರ್ಣನೆಂಬ ಹೆಸರೇ ಪ್ರಚಾರಕ್ಕೆ ಬಂತು. ಇದಲ್ಲದೆ ಅವನಿಗೆ ರಾಧೇಯ, ಸೂತಪುತ್ರ, ಕಾನೀನನೆಂಬ ಸಂಬೋಧನೆಯೂ ಉಂಟು.
ಬಾಲ್ಯದಿಂದಲೆ ಕರ್ಣನಿಗೆ ಶಸ್ತ್ರ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಿತ್ತು. ಆದರೆ ಅವನಿಗೆ ಅರಿವಿಲ್ಲ ತಾನು ಕ್ಷತ್ರಿಯ ರಕ್ತ ಎಂದು. ಸೂತಪುತ್ರನಾದ ಅವನಿಗೆ ಶಸ್ತ್ರ ವಿದ್ಯಾಭ್ಯಾಸ ಕಲಿಸುವ ಆಚಾರ್ಯರು ದೊರೆಯಲಿಲ್ಲ. ಆಗ ಆತ ಮೊದಲಿಗೆ ಕೌರವ, ಪಾಂಡವರ ಗುರುಗಳಾದ ದ್ರೋಣಾಚಾರ್ಯರ ಬಳಿಗೆ ಬಂದನು, ಆದರೆ ದ್ರೋಣರು ನಾನು ಸೂತ ಪುತ್ರನಿಗೆ ವಿದ್ಯೆ ಕಲಿಸಲಾರೆ, ನಾನು ರಾಜ ಪರಿವಾದವರಿಗೆ ಮಾತ್ರ ವಿದ್ಯೆ ಕಲಿಸುವುದು ಎಂದು ಹೇಳುತ್ತಾರೆ. ಅಲ್ಲಿಂದ ಪರುಶರಾಮನ ಬಳಿಗೆ ಬಂದು ತಾನು ಬ್ರಾಹ್ಮಣ ಎಂದು ಸುಳ್ಳು ಹೇಳಿ ಧನುರ್ವಿದ್ಯಾಪಾರಂಗತನಾದ.
ಒಂದು ದಿನ ಪರುಶುರಾಮ ಕರ್ಣನ ತೊಡೆಯಮೇಲೆ ತಲೆಯಿಟ್ಟು ನಿದ್ರಿಸುತ್ತಿದ್ದಾಗ, ಇಂದ್ರನ ಆಜ್ಞೆಯ ಮೇರೆಗೆ ಅಲರ್ಕವೆಂಬ ದುಂಬಿಯೊಂದು ಬಂದು ಆತನ ತೊಡೆಯನ್ನು ಬಗಿಯಲಾರಂಭಿಸಿತು. ಆಗ ತಾನು ಅಲುಗಿದರೆ ಗುರುವಿಗೆ ನಿದ್ರಾಭಂಗವಾದೀತೆಂದು ಎಣಿಸಿ ಕರ್ಣ ತನಗಾದ ಅಗಾಧ ನೋವನ್ನು ಲಕ್ಷಿಸದೆ ಹಾಗೆಯೇ ತಡೆದುಕೊಂಡಿದ್ದ. ಅವನ ರಕ್ತದ ಸೋಂಕಿನಿಂದ ಪರುಶರಾಮ ಎಚ್ಚೆತ್ತು, ಶಿಷ್ಯನ ವರ್ತನೆಯನ್ನು ಕಂಡು ಮೆಚ್ಚಿದರೂ ನೀನು ಬ್ರಾಹ್ಮಣನಲ್ಲ, ಬ್ರಾಹ್ಮಣನಲ್ಲಿ ಇಷ್ಟು ನೋವು ಸಹಿಸುಸುವ ಶಕ್ತಿ ಇಲ್ಲ. ನೀನು ಕ್ಷತ್ರಿಯನೇ ಇರಬೇಕೆಂದೂ ತಿಳಿದು ಕುಪಿತನಾದ. ನಿಜವೃತ್ತಾಂತ ತಿಳಿದಾಗ ತನ್ನ ವ್ರತಭಂಗವಾದುದಕ್ಕೆ ಕೆರಳಿದ ಪರುಶುರಾಮ ಬ್ರಾಹ್ಮಣನೆಂದು ಸುಳ್ಳುಹೇಳಿ ಶಸ್ತ್ರ ವಿದ್ಯೆ ಕಲಿತಿದ್ದಕ್ಕಾಗಿ ಅವಸಾನ ಕಾಲದಲ್ಲಿ ತಾನು ಅನುಗ್ರಹಿಸಿದ ಮಹಾಸ್ತ್ರಗಳಾವುವೂ ಫಲಿಸದಿರಲಿ ಎಂದು ಕರ್ಣನಿಗೆ ಶಾಪವಿತ್ತ. ಗುರುಶಾಪದಿಂದ ಕರ್ಣನಿಗೆ ನಿಂತ ಭೂಮಿ ಕುಸಿದಂತೆ ಅನಿಸಿತು. ಆದರೆ ಪರಶುರಾಮರು ಕ್ಷತ್ರಿಯರಿಗೆ ವಿದ್ಯೆ ಕಲಿಸುವುದಿಲ್ಲ ಎಂದು ಶಪಥ ಮಾಡಿದ್ದರೇ ಹೊರತು ಸೂತ ಎಂದು ಹೇಳಿದ್ದರೆ ಖಂಡಿತಾ ತಿರಸ್ಕರಿಸುತ್ತಿರಲಿಲ್ಲ. ಈ ವೇಳೆಗೆ ಹಸ್ತಿನಾವತಿಯಲ್ಲಿ ಪಾಂಡವರಿಗೂ, ಕೌರವರಿಗೂ ದ್ರೋಣಾಚಾರ್ಯ ಶಸ್ತ್ರವಿದ್ಯೆಯನ್ನು ಕಲಿಸುತ್ತಿದ್ದ.
ಹೀಗೆ ವಿದ್ಯೆ ಮುಗಿಸಿ ಬಂದ ಕರ್ಣ, ತನಗಾದ ಪ್ರತಿಯೊಂದು ಅವಮಾನಕ್ಕೆ ಉತ್ತರ ನೀಡುವ ಅವಸರದಲ್ಲಿ ಅಧರ್ಮಿಯರ ಪಕ್ಷಕ್ಕೆ ತನಗರಿವಿರದಂತೆ ಸೇರಿಕೊಂಡ. ಎಲ್ಲರೂ ಸೂತ ಪುತ್ರ ಎಂದು ಹಿಯಾಳಿಸಿದರೂ, ದುರ್ಯೋಧನ ಮಾತ್ರ ತನ್ನ ಮಿತ್ರನ ಸ್ಥಾನ ಕೊಟ್ಟ. ಅದರ ಋಣವೋ ಏನೋ ಕರ್ಣ ಕೌರವರ ಅಧರ್ಮಕ್ಕೆ ಸಾಕ್ಷಿಯಾಗಿ ನಿಂತ. ತನಗಾದ ಅವಮಾನದಿಂದ ತನ್ನ ಸೂತ ಕುಲಕ್ಕಾದಾರೂ ಮುಂದೆ ಗೌರವ ಸಿಗಬೇಕೆಂದು ಹೋರಾಡಿದ್ದರೆ, ಕರ್ಣನ ಬಗ್ಗೆ ಇದ್ದ ಅಸಮಾಧಾನ ಇರುತ್ತಿರಲ್ಲಿವೋ ಏನೋ.
ಈ ಕಹಿ ಭಾವನೆಯು ಮಹಾಭಾರತದ ಅದ್ಭುತ ಮನುಷ್ಯನೊಬ್ಬನನ್ನು ಕೆಟ್ಟ ಮತ್ತು ಕುರೂಪಿ ಪಾತ್ರವನ್ನಾಗಿಸಿತು. ಅವನೊಬ್ಬ ಮಹಾಪುರುಷನಾಗಿದ್ದ ಮತ್ತು ವಿಭಿನ್ನ ಪರಿಸ್ಥಿತಿಗಳಲ್ಲಿ ಅವನ ಗರಿಮೆಯನ್ನು ಪ್ರದರ್ಶಿಸಿದ್ದ, ಆದರೆ ಅವನ ಕಹಿ ಭಾವನೆಯ ಕಾರಣದಿಂದ, ಹಲವಾರು ರೀತಿಗಳಲ್ಲಿ ಅವನೇ ಎಲ್ಲವನ್ನೂ ಕೆಡಿಸಿಕೊಂಡ. ದುರ್ಯೋಧನನಿಗೆ, ಶಕುನಿ ಏನೇ ಹೇಳಿದರೂ ಅಥವಾ ಮಾಡಿದರೂ, ಯಾವಾಗಲೂ ಕರ್ಣನ ಸಲಹೆಯೇ ಅಂತಿಮವಾಗಿ ನಿರ್ಣಾಯಕವಾಗಿತ್ತು. ಎಲ್ಲವೂ ನಿರ್ಧಾರವಾದ ನಂತರ, ಅವನು ಕರ್ಣನ ಕಡೆಗೆ ನೋಡಿ “ನಾವೇನು ಮಾಡೋಣ?” ಎನ್ನುತ್ತಿದ್ದ. ಕರ್ಣ ಇಡೀ ಕಥೆಯ ದಿಕ್ಕನ್ನು ಬಹಳ ಸುಲಭವಾಗಿ ತಿರುಗಿಸಬಹುದಿತ್ತು. ಆದರೆ ಅವನಿಂದ ಅದು ಸಾದ್ಯವಾಗುತ್ತಿರಲ್ಲಿಲ್ಲ.
ದುರ್ಯೋಧನನ ಹಠ, ದುಶ್ಯಾಸನನ ಅಟ್ಟಹಾಸ, ಜರಾಸಂಧನ ಪೊಗರು ಮತ್ತು ಶಕುನಿಯ ಕುತಂತ್ರದಿಂದ ಕುರುಕ್ಷೇತ್ರ ಯುದ್ಧ ಶುರುವಾಗಿಯೇ ಬಿಡುತ್ತದೆ. ಮಹಾಭಾರತದ ಕಥೆಯ ಆರಂಭದಿಂದಲೂ ಪಾಂಡವರನ್ನು ಕ್ಷಣಕ್ಷಣವೂ ಕಾಪಾಡುವ ಶ್ರೀಕೃಷ್ಣ, ಶಿಖಂಡಿಯನ್ನು ಮುಂದೆ ಬಿಟ್ಟು ಭೀಷ್ಮನನ್ನು ನಿವಾರಿಸಿಕೊಳ್ಳುತ್ತಾನೆ. ಧರ್ಮರಾಯನಿಂದ ಒಂದು ಸುಳ್ಳು ಹೇಳಿಸಿ, ದ್ರೋಣಾಚಾರ್ಯರನ್ನು ವೈಕುಂಠಕ್ಕೆ’ ಕಳಿಸುತ್ತಾನೆ. ಆಗ ಯುದ್ಧ ರಂಗಕ್ಕೆ ಬರುತ್ತಾನೆ ಮಹಾರಥಿ ಕರ್ಣ!
ಇವನ ದೃಷ್ಟಿಯಲ್ಲಿ ದುರ್ಯೋಧನ ಎಂದರೆ ಕೇವಲ ಕುರು ಸಾರ್ವಭೌಮ, ಧೃತರಾಷ್ಟ್ರನ ಪುತ್ರ, ಹಠಮಾರಿ, ಕ್ರೂರಿ… ಇದೇನೂ ಆಗಿರಲಿಲ್ಲ. ಕರ್ಣನಿಗೆ ಆತ ಜೀವದ ಗೆಳೆಯನಾಗಿದ್ದ. ಅಂತರಂಗದ ಉಸಿರಾಗಿದ್ದ. ಅಮ್ಮನಂಥ ಗೆಳೆಯನಾಗಿದ್ದ,ಆತ್ಮಬಂಧುವಾಗಿದ್ದ. ಇಡೀ ಜಗತ್ತೇ ಹಂಗಿಸಿದ ಕ್ಷಣದಲ್ಲಿ ಅಂಗರಾಜ್ಯದ ಕಿರೀಟ ತೊಡಿಸಿದ ಧೀರನಾಗಿದ್ದ. ಅಂಥ ಗೆಳೆಯನಿಗೆ ಯುದ್ಧ ಗೆದ್ದು ಕೊಡಬೇಕು. ಆ ಮೂಲಕ ಅವನ ಋಣದಿಂದ ಸ್ವಲ್ಪ ಮಟ್ಟಿಗಾದರೂ ಮುಕ್ತನಾಗಬೇಕು. ಜೊತೆಗೆ, ಲೋಕ ಮೆಚ್ಚುವಂಥ ಬಿಲ್ವಿದ್ಯಾಪ್ರವೀಣ ಕರ್ಣನೇ ಹೊರತು ಅರ್ಜುನನಲ್ಲ ಎಂದು ಜಗತ್ತಿಗೆ ತೋರಿಸಿಕೊಡಬೇಕು ಎಂಬ ಆಸೆಯಿತ್ತು.
ಪಾಪದವನು ಕರ್ಣ! ಬದುಕಿನ ಕಡೆಯ ಕ್ಷಣದಲ್ಲಾದರೂ ತನ್ನ ಮನದೊಳಗಿನ ನೋವು, ತಳಮಳವನ್ನು ಯಾರೊಂದಿಗೂ ಹೇಳಿಕೊಳ್ಳುವ ಯೋಗ ಅವನಿಗಿರುವುದಿಲ್ಲ. ಎಲ್ಲ ಸಂಕಟವನ್ನೂ ಎದೆಯೊಳಗೇ ಹಿಂಗಿಸಿಕೊಂಡು, ತಮ್ಮನೆಂಬ ಮಮಕಾರವನ್ನು ಅಂಗೈಲಿ ಬೆಚ್ಚಗೆ ಹಿಡಿದುಕೊಂಡು ಕೃಷ್ಣನಿಗೆ ಮನದಲ್ಲೇ ಕೈಮುಗಿದು ಸರ್ಪಾಸ್ತ್ರ ಅರ್ಜುನನ ಮೇಲೆ ಪ್ರಯೋಗಿಸುತ್ತಾನೆ ಕರ್ಣ. ಆದರೆ ಕೃಷ್ಣ ಅರ್ಜುನನ್ನು ಪಾರುಮಾಡುತ್ತಾನೆ.ಮತ್ತೆ ಅವಕಾಶ ಇದ್ದರೂ, ಒಂದು ಸಲ ತೊಟ್ಟ ಬಾಣ ಇನ್ನೊಂದು ಸಲ ತೊಡಲಾರೆ, ಒಂದು ಸಲ ಇಟ್ಟ ಗುರಿ ಬದಲಾಯಿಸಾರೆ ಎಂದು ಕುಂತಿಗೆ ಮಾತು ಕೊಟ್ಟಿದ್ದ. ಇಂದ್ರನ ಅಂಶದಿಂದ ಹುಟ್ಟಿದ ಅರ್ಜುನನ ಗೆಲುವಿಗಾಗಿ ಕರ್ಣನ ಕರ್ಣ ಕುಂಡಲ, ದಿವ್ಯ ಕವಚವನ್ನು ಇಂದ್ರ ದೇವನು ದಾನವಾಗಿ ಕೇಳಿ ಪಡೆದುಕೊಂಡಿದ್ದ.ಆಗ ಇಂದ್ರನಿಂದ ಅರ್ಜುನನ ವಧೆ ಮಾಡಲು ಸ್ವತಃ ಇಂದ್ರನಿಂದಲೆ ದಿವ್ಯಾಯುಧವನ್ನು ವರವಾಗಿ ಪಡೆದಿದ್ದನು. ಅದನ್ನೂ ಕೂಡ ಕೃಷ್ಣನು ಭೀಮನ ರಾಕ್ಷಸಿ ಹೆಂಡತಿಯಿಂದ ಪಡೆದ ಮಗ ಘಟೋದ್ಗಜನ ಮೇಲೆ ಪ್ರಯೋಗಿಸುವಂತೆ ಮಾಡುತ್ತಾನೆ.
ಕೊನೆಗೆ ಒಂದು ಸಂದಿಗ್ಧ ಪರಿಸ್ಥಿಯಲ್ಲಿ ಅರ್ಜುನನ ಬಾಣ ಕರ್ಣನ ದೇಹವನ್ನು ಪ್ರವೇಶಿಸಿಯೇ ಬಿಟ್ಟಿತು. ಆ ಪರಿಸ್ಥಿತಿ ಗುರು ಪರಶುರಾಮರ ಶಾಪ, ಭೂತಾಯಿಯ ಶಾಪ ಎಲ್ಲವೂ ಒಂದಾಯಿತು. ಕರ್ಣನ ಅಂತ್ಯ ಕುರುಕ್ಷೇತ್ರ ಭೂಮಿಯಲ್ಲಿ ಆಯಿತು. ದುರ್ಯೋಧನ ಎಲ್ಲರನ್ನೂ ಕಳೆದುಕೊಂಡ ಮೇಲೆ ಕೂಡ ತನ್ನ ಹಠವನ್ನು ಬಿಡದವನು, ತನ್ನ ಪ್ರಾಣ ಸ್ನೇಹಿತ ಕರ್ಣನ ಸಾವಿನ ಸುದ್ಧಿಯಿಂದ ಎಲ್ಲವನ್ನು ಬಿಟ್ಟು ತನ್ನ ಸಾವಿಗಾಗಿ ಆಶಿಸಿದ.
GIPHY App Key not set. Please check settings