in

ಆದಿ ಕವಿ ಪಂಪ

ಆದಿ ಕವಿ ಪಂಪ
ಆದಿ ಕವಿ ಪಂಪ

ಆದಿ ಕವಿ ಪಂಪ

ಕನ್ನಡದ ಕಂಪನ್ನು ಸೂಸಿದ ಪಂಪ ಕವಿಯ ಪದ್ಯಗಳು ಓದುಗರ ಮನಸ್ಸನ್ನು ತಂಪಾಗಿಸುತ್ತದೆ……

ಹಳೆಗನ್ನಡ ತುಸು ಕಷ್ಟವೆನಿಸಿದರೂ ಎಚ್. ಎಸ್. ವೆಂಕಟೇಶ್ ಮೂರ್ತಿ ಅವರ ತಿಳಿಗನ್ನಡ ಅವತರಣ “ವಿಕ್ರಮಾರ್ಜುನ ವಿಜಯ ” ವನ್ನು ಓದಿದಾಗ ಕಸ್ತೂರಿಯ ಕಂಪು ಇಂಪೆನಿಸುತ್ತದೆ.

ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನು, ಪ್ರೀತಿಯಿದ್ದವನು.ಪಂಪನು ಪುಲಿಗೆರೆಯ ‘ತಿರುಳ್ ಗನ್ನಡ’ದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾನೆ.ಬನವಾಸಿ ಆತನ ತಾಯಿನಾಡು… ಪಂಪ ತನ್ನ ದೇಶಪ್ರೇಮವನ್ನು,ತಾಯ್ನಾಡನ್ನು ಬಣ್ಣಿಸುವ ಪರಿ ನೋಡಿ,

ತೆಂಕಣಗಾಳಿ ಸೋಂಕಿದೊಡಂ, ಒಳ್ನುಡಿ ಕೇಳ್ದೊಡಂ, ಇಂಪನು ಆಳ್ದ ಗೇಯಂ ಕಿವಿ ಹೊಕ್ಕೊಡಂ, ಬಿರಿದ ಮಲ್ಲಿಗೆ ಕಂಡೊಡಂ, ಆದ ಕೆಂದು ಅಲಂಪಂಗೆ ಎಡೆಗೊಂಡೊಡಂ ಮಧುಮಹೋತ್ಸವಂ ಆದೊಡಂ, ಏನನೆಂಬೆನು ಆರುಂ ಅಂಕುಸಂ ಇಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ.

ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ, ಒಳ್ಳೆಯ ಮಾತನ್ನು ಕೇಳಿದರೂ,

ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ, ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ,

ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ, ವಸಂತೋತ್ಸವ ಪ್ರಾಪ್ತವಾದರೂ, ಏನು ಹೇಳಲಿ

(ಯಾರು ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ, ನನ್ನ ಮನಸ್ಸು ಬನವಾಸಿ ದೇಶವನ್ನು ನೆನೆಯುವುದು.

ಕವಿ ಹೃದಯವನ್ನು ನೋಡಿದಾಗ “ಕೋಳು ಕೊಡುಗೆ” ಎಷ್ಟು ಸರಾಗವಾಗಿ ನೆಡೆಯುತ್ತದೆ ನೋಡಿ…,

ಕನ್ನಡ ಕಾವ್ಯ ಕಸ್ತೂರಿಯ ನೆನೆಯುವ ಮನ

ಅಂತೆಯೇ ನೆನೆಯುವುದು ಪಂಪನ.

ಪಂಪನ ನೆನೆಯುವ ಮನ

ನೆನೆ ನೆನೆ ನೆನೆಯುವುದು ಕನ್ನಡ ದೇಶಮಂ!

ಪಂಪನು ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಸಿಕೊಂಡು ಕೃತಿಯನ್ನು ರಚಿಸಿದನು. ಸಂಸ್ಕೃತ ಸಾಹಿತ್ಯದಂತಿರುವುದು ‘ಮಾರ್ಗ’, ಅಚ್ಚಕನ್ನಡದ ಶೈಲಿಯು ’ದೇಶೀ’ ಎನಿಸಿತ್ತು.

“ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದು ಒಂದಿ ದೇಸಿಯೊಳ್ ಪುಗುವುದು”

ಕವಿರಾಜಮಾರ್ಗ’ಪೂರ್ವದಲ್ಲಿಯೇ ಚಂಪೂ ಕನ್ನಡದಲ್ಲಿ ನೆಲೆಯೂರಿತ್ತು ಮಾತ್ರವಲ್ಲ, ದೊಡ್ಡ ಕವಿಗಳು ಆ ಪ್ರಕಾರದಲ್ಲಿ ಕಾವ್ಯ ರಚಿಸಿದ್ದರು ಎಂಬ ಅಂಶ. ಅದು ಕಾಲಕಾಲಕ್ಕೆ ಹೆಚ್ಚೆಚ್ಚು ಪರಿಷ್ಕರಣಗೊಳ್ಳುತ್ತ ಅಂತಸ್ಸತ್ವವನ್ನು ಹೆಚ್ಚಿಸಿಕೊಳ್ಳುತ್ತ ಪಂಪನ ಕಾವ್ಯಗಳಲ್ಲಿ ತನ್ನ ಸಾಧನೆಯ ಶಿಖರವನ್ನು ತಲುಪಿತು. ಆನಂತರ ಆ ಕಾವ್ಯದ ಸತ್ವ ಇಳಿಮುಖವಾಯಿತು. ಅಂದರೆ ಪಂಪ ಚಂಪೂ ಪ್ರಕಾರದ ಪಕ್ವಫಲ. ಪಂಪ ತನ್ನೆರಡೂ ಕಾವ್ಯಗಳಲ್ಲಿನ ವೈಶಿಷ್ಟ್ಯಗಳನ್ನು ಒಟ್ಟಾರೆಯಾಗಿ ‘ದೇಸಿ’ ಎಂದು ಬಣ್ಣಿಸಿಕೊಳ್ಳುತ್ತಾನೆ.

ನಮಗೆ ಒಂದು ಭವ್ಯ ಪರಂಪರೆ ಇದೆ! ನಾವು ಮುಂದೆ ಮುಂದೆ ಹೋಗುವ ಭರದಲ್ಲಿ ಬೆನ್ನ ಹಿಂದಿನ ಬೆಳಕಿನತ್ತ ಗಮನ ನೀಡುತ್ತಿಲ್ಲ. ಒಂದು ಪಕ್ಷ ಹಿಂತಿರುಗಿ ನೋಡಿದ್ದೇ ಆದರೆ – ಆ ಅಭಿಜಾತ ಕಾವ್ಯಗಳ ಸಾರ… ಯಾಂತ್ರಿಕ ಜೀವನಕ್ಕೆ ಅಮೃತಬಿಂದುಗಳಾಗಿ ಹೊಸ ಹೊಸ ಚೈತನ್ಯ ನೀಡಬಲ್ಲವು.

“ಬೆಳಗುವೆನಿಲ್ಲಿ ಲೌಕಿಕಮನ್ಅಲ್ಲಿ ಜಿನಾಗಮಮಂ ” ಎಂದು ಲೌಕಿಕ, ಆಗಮಿಕ ಎರಡು ಮಹಾಕಾವ್ಯಾಗಳನ್ನು ರಚಿಸಿ, ಎರಡರ ಕಥಾನಕಕ್ಕೂ ಪೂರ್ವ ಆಕರಗಳನ್ನು ಬಳಸಿಯೂ ಅಭಿವ್ಯಕ್ತಿಯಲ್ಲಿ ಅಪೂರ್ವ ಕಾವ್ಯಗಳನ್ನು ನಿರ್ಮಾಣ ಮಾಡಿದನು.

ಧರ್ಮ ದ ಜೊತೆಗೆ ಕಾವ್ಯ ಧರ್ಮದವನ್ನು ಅರಿವು ಮಾಡಿಸಿದ್ದು ಆದಿಪುರಾಣ.ಕವಿಯ ಸ್ವಧರ್ಮ ಶ್ರದ್ದೆಯ ಸಂಕೇತವಾದ ಈ ಗ್ರಂಥದ ದೇಹ ಪುರಾಣವಾಗಿದ್ದರೂ ಆತ್ಮ ಕಾವ್ಯವಾಗಿದೆ.

ಪಂಪ ಭಾರತಕ್ಕೂ ಮುನ್ನ ಭಾರತದ ಹಲವು ಕಥೆಗಳು ಹುಟ್ಟಿರಬಹುದು ಆದರೆ ಪಂಪನಂತೆ..,”ಕತೆ ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ ಮು0ಸಮಸ್ತ ಭಾರತ ಮನಪೂರ್ವ ಮಾಗೆ ಸಲೆ ಪೇಳ್ದ ಕವೀಶ್ವರರಿಲ್ಲ ” ಎಂದವರಿಲ್ಲ.

ಈ ಆತ್ಮವಿಶ್ವಾಸದ ಜೊತೆಗೆ ನಮ್ರತೆಯಿಂದ..,ವ್ಯಾಸಮುನೀ0ದ್ರ ರುಂದ್ರ ವಚನಾಮೃತ ವಾರ್ಧಿಯನ್ನೀಸುವೆ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ” ವೆಂದು ಅರುಹಿದ್ದಾನೆ.

“ಚಲದೊಳ್ ದುರ್ಯೋಧನಂ,

ನನ್ನಿಯೊಳ್ ಇನತನಯಂ,

ಗಂಡಿನೊಳ್ ಭೀಮಸೇನಂ,

ಬಲದೊಳ್ ಮದ್ರೇಶನ್,

ಅತ್ಯುನ್ನತಿಯೊಳ್ ಅಮರ ಸಿಂಧೂದ್ಭವಂ, ಚಾಪವಿದ್ಯಾ ಬಲದೊಳ್ ಕುಂಭೋದ್ಭವಂ,

ಸಾಹಸದ ಮಹಿಮೆಯೊಳ್ ಫಲ್ಗುಣಂ,

ಧರ್ಮದೊಳ್ ನಿರ್ಮಲಚಿತ್ತಂ ಧರ್ಮಪುತ್ರಂ,

ಮಿಗಿಲ್ ಇವರ್ಗಳಿನ್, ಭಾರತಂ ಲೋಕಪೂಜ್ಯಂ.🙏

ಪಂಪನು ಮಹಾಭಾರತವು ಏಕೆ ಲೋಕಪೂಜ್ಯ ಗ್ರಂಥವಾಗಿದೆ ಎನ್ನುವುದನ್ನು ಪಂಪ ಈ ಪದ್ಯದಲ್ಲಿ ಹೇಳುತ್ತಿದ್ದಾನೆ….,

ಛಲದಲ್ಲಿ-ಅಭಿಮಾನದಲ್ಲಿ ದುರ್ಯೋಧನ,

ಸತ್ಯಸಂಧತೆಯಲ್ಲಿ ಸೂರ್ಯಪುತ್ರನಾದ ಕರ್ಣ, ಗಂಡಸುತನದಲ್ಲಿ ಭೀಮಸೇನ,

ಬಲದಲ್ಲಿ ಮದ್ರೇಶನಾದ ಶಲ್ಯ,

ಅತ್ಯಂತ ಉನ್ನತವಾದ ಸಮಗ್ರ ವ್ಯಕ್ತಿತ್ವದಲ್ಲಿ ಅಮರಗಂಗಾನದಿಯ ಪುತ್ರನಾದ ಭೀಷ್ಮ, ಬಿಲ್ವಿದ್ಯಾಬಲದಲ್ಲಿ ಕುಂಭದಲ್ಲಿ ಜನಿಸಿದ ದ್ರೋಣ, ಸಾಹಸದ ಮಹಿಮೆಯಲ್ಲಿ ಫಲ್ಗುಣನಾದ ಅರ್ಜುನ, ಧರ್ಮದ ವಿಚಾರದಲ್ಲಿ ನಿರ್ಮಲಿನ ಮನಸ್ಕನಾದ ಧರ್ಮಪುತ್ರ – ಇವರುಗಳು ಅಧಿಕರು, ಇವರುಗಳಿಂದ ಭಾರತವು ಲೋಕಪೂಜ್ಯವಾಗಿದೆ.

ಭಾರತದಲ್ಲಿ ಎಲ್ಲಾ ಕಾಲದ ಸಮಾಜದ ಸಮಸ್ಯೆಗಳಿಗೂ ಸಲ್ಲುವ ಪಂಪನ ನುಡಿಗಳು ಪಂಪನನ್ನು ಸರ್ವ ಕಾಲಕ್ಕೂ ಸಲ್ಲುವ ಕವಿಯನ್ನಾಗಿ ಮಾಡಿದೆ.

ಒಂದು ಸಂದರ್ಭದಲ್ಲಿ ಕರ್ಣನನ್ನು ಹೀನಕುಲಜನೆಂದು ಅಲ್ಲಗೆಳೆಯಲು, ತನ್ನ ಜನ್ಮವೃತ್ತಾಂತವನ್ನು ಅರಿತ ಕರ್ಣ ಆಗ ಎಂದಿನಂತಲ್ಲದೆ…,

‘ಕುಲಂ ಕುಲಮಲ್ತು ಚಲಂ ಕುಲಂ ಗುಣಂ ಕುಲಮಭಿಮಾನವೊಂದೆ ಕುಲಮಣ್ಮು ಕುಲಂ ಬಗೆವಾಗಳೀ ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ’ ಎಂದು ಆತ್ಮವಿಶ್ವಾಸದಿಂದ ಕಿಡಿಕಿಡಿಯಾಗುತ್ತಾನೆ.

ಕುಲವೆಂಬುದು ಅದು ಚಲದಲ್ಲಿದೆ, ಗುಣದಲ್ಲಿದೆ, ಅಭಿಮಾನದಲ್ಲಿದೆ ಹುಟ್ಟಿನಲ್ಲಿಲ್ಲ…. ಸಾಹಸಿಗೆ ಕುಲವಿಲ್ಲ, ಆತನಿಗೆ ವೀರತ್ವವೇ ಕುಲ ಎಂದು ಪಂಪನು ತನ್ನ ಕಾವ್ಯದಲ್ಲಿ ದುರ್ಯೋಧನನ ಕೈಯಿಂದ ಹೇಳಿಸಿದ್ದಾನೆ.ಇವರ ಬಾಯಿಯಿಂದ ಹೊರಡಿಸಿದ ಪಂಪನ ಮಾತುಗಳು ಸಾರ್ವಕಾಲೀಕ🙏

ಪಂಪನು ತನ್ನ ಕೃತಿಯ ಪ್ರತಿನಾಯಕನೂ ಆದ ಕರ್ಣನನ್ನು ಕುರಿತ ಚರಮಶ್ಲೋಕವನ್ನಂತು ಎಂದೆಂದಿಗೂ ಮರೆಯುವಂತಿಲ್ಲ.

“ನೆನೆಯದಿರಣ್ಣ ಭಾರತದೊಳಿಂ ಪೆರಾರುಮನೊಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್ ದೊರೆ ಕರ್ಣನೇ ಕರ್ಣನ ಕಡುನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ”

ಅವನನ್ನು ‘ಚಾಗದ ನನ್ನಿಯ ಕಲಿತನದಾಗರಂ’ಕೊಂಡಾಡುತ್ತಾನೆ.(ತ್ಯಾಗದ, ಸತ್ಯದ ಕಲಿ ) ಎಂದು ಬಣ್ಣಿಸುತ್ತಾನೆ.

ಭಾರತದೊಳು ಬೇರಾರನ್ನೂ ನೆನೆಯಬೇಕಾಗಿಲ್ಲ, ಒಂದೇ ಮನಸ್ಸಿನಿಂದ ನೆನೆದರೆ ಕರ್ಣನನ್ನು ನೆನೆಯಿರಿ

ಕರ್ಣನಿಗಾರು ಸರಿಸಮ, ಕರ್ಣನ ಪರಾಕ್ರಮ, ಕರ್ಣನ ಸತ್ಯ ಪರತೆ, ಕರ್ಣನ ವೀರತ್ವ, ಕರ್ಣನ ತ್ಯಾಗವೆಂದು ಕರ್ಣನ ವಿಚಾರವೇ ತುಂಬಿ ಹೋಗಿ ಭಾರತವು ಕರ್ಣ ರಸಾಯನವಾಯಿತು.🙏

ಕರ್ಣನ ಪಾತ್ರ ಬಿತ್ತರಿಸುವ ಕವಿ ಕಾವ್ಯ ಸಮಾಧಿಗೆ ಏರಿ ಕಾವ್ಯ ನಾಯಕನನ್ನೇ ಮರೆತು ಬಿಡುತ್ತಾನೆ.

ತೀ. ನ0. ಶ್ರೀ ಯವರು ಹೇಳುವಂತೆ,ವಿಕ್ರಮಾರ್ಜುನ ವಿಜಯವು ಕನ್ನಡದ ಕನ್ನಡಿಯಲ್ಲಿ ಚಿಕ್ಕದಾಗಿ ಬಿದ್ದ ವ್ಯಾಸ ಭಾರತದ ನೆರಳಲ್ಲ, ಅಲ್ಲಿಯ ಚಿನ್ನವನ್ನು ತಂದು ಹೊಸದಾಗಿ ಎರಕ ಹೊಯ್ದ ಒಪ್ಪವಿಟ್ಟು ನಿಲ್ಲಿಸಿದ ನೂತನ ಪುತ್ತ್ಹಳಿ 🙏

ಸಂಸ್ಕೃತ ಕಾಳಿದಾಸನಿಗೆ ಹೋಲಿಸಲು ಕನ್ನಡದಲ್ಲಿ ಯಾರಾದರೂ ಒಬ್ಬ ಕವಿಯಿದ್ದರೆ ಆತ ಮಹಾ ಕವಿ ಪಂಪನೆಂದರೆ ಅತಿಶಯೋಕ್ತಿ ಆಗಲಾರದು.

ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆಪೂತಜಾತಿ ಸಂ

ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆನಲ್ಲರೊಳ್ಮೊಗಂ|

ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್

ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ.

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ

ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ|

ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱದುಂಬಿಯಾಗಿ ಮೇಣ್

ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್.

ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು.

“ಶರಧಿಯ ದೂರವನ್ನು ನೋಡುಗರು ತಮ್ಮ ಕಣ್ಣಳತೆಗೆ ಮೀರಿ ನೋಡಲಾರರು ಅಂತೆಯೇ ಪಂಪ ಸಾಗರ ವರ್ಣನಾತೀತ ….”

ಪಂಪ ಶರಧಿಯಿಂದ ಎಷ್ಟು ಬೊಗಸೆ ಕಾವ್ಯ ಜಲವೆತ್ತಿದರೂ ಸಹೃದಯಕ್ಕೆ ಸಮಾಧಾನವಾಗದು, ಹಾಗೆಂದ ಮಾತ್ರಕ್ಕೆ ಅ ಅಗಾಧತೆಯನ್ನು ಪೂರ್ತಿಯಾಗಿ ತಮ್ಮದಾಗಿಸಿಕೊಳ್ಳಲು ಹಿಡಿದ ವ್ರತದಂತೆ ಕಾವ್ಯ ಸರಸ್ವತಿಯ ತಪಸ್ಸು ಮಾಡಬೇಕು…. ಸಾಧ್ಯವಾದ ಮಟ್ಟಿಗೆ ಪುಟ್ಟ ಬೊಗಸೆಯಲಿ ವ್ರತಾಚರಣೆ ಮಾಡೋಣ.🙏

ಪಂಪ ಮಹಾಕಾವಿ ಸಂದು ಸಹಸ್ರ ವರ್ಷಗಳಿಗಿಂತಲೂ ಮಿಗಿಲಾದರೂ ಆತನ ಹಿರಿತನ, ಪೂಜ್ಯತೆ ಅಚ್ಚಳಿಯದೆ ನಿಂತಿವೆ….ತನ್ನ ಕಾವ್ಯದಿಂದ ಸಮಸ್ತ ಕ್ಷಿತಿಗೆ ಅಲಂಕಾರವಿತ್ತಂತೆ ಕಾವ್ಯ ಸರಸ್ವತಿಗೆ ಹೊಸ ವಿಲಸವನ್ನು0ಟು ಮಾಡಿದ ಪಂಪ ಕವಿಗೆ ಸಹೃದಯರಿಂದ ನಮನಗಳನ್ನು ಸಲ್ಲಿಸುತ್ತೇನೆ.🙏

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

101 Comments

Aadi kavi pampa

ಆದಿ ಕವಿ ಪಂಪ

ಭಗವಂತ ಶ್ರೀಕೃಷ್ಣನಿಗೆ ಇದೆ 108 ಹೆಸರುಗಳು ಹದಿನಾರು ಸಾವಿರ ಹೆಂಡತಿಯರು ಇದು ನಿಜಾನಾ?