in ,

ಭಾರತದ ಒಬ್ಬ ಅನುಭವಿ ಕವಿ : ಕಬೀರ್

ಕಬೀರ್
ಕಬೀರ್

ಕಬೀರ್ ಭಾರತದ ಒಬ್ಬ ಅನುಭವಿ ಕವಿ ಮತ್ತು ಸಂತರಾಗಿದ್ದರು, ಮತ್ತು ಇವರ ಬರಹಗಳು ಭಕ್ತಿ ಚಳುವಳಿಯ ಮೇಲೆ ಮಹತ್ತರ ಪ್ರಭಾವ ಬೀರಿವೆ. ಕಬೀರ್ ಹೆಸರು ಅರಬ್ಬೀ ಭಾಷೆಯ ಅಲ್-ಕಬೀರ್ ಅಂದರೆ ಮಹಾನ್‍ನಿಂದ ಬರುತ್ತದೆ. ಕಬೀರ್‌ರ ಕೊಡುಗೆಯನ್ನು ಇಂದು, ಅವರನ್ನು ಅದರ ಸ್ಥಾಪಕರೆಂದು ಗುರುತಿಸುವ ಮತ್ತು ಸಂತ ಮತ ಪಂಥಗಳಲ್ಲಿ ಒಂದಾದ ಒಂದು ಧಾರ್ಮಿಕ ಸಮುದಾಯವಾದ, ಕಬೀರ್ ಪಂಥ ಮುಂದಕ್ಕೆ ಸಾಗಿಸುತ್ತಿದೆ.

1440-1518. ಭರತ ವರ್ಷದ ಉತ್ತರ ಭಾಗಗಳಲ್ಲಿ, ಬಹಳವಾಗಿ ಪ್ರಚಾರಕ್ಕೆ ಬಂದ ಒಂದು ಧರ್ಮ ಪಂಥದ ಸ್ಥಾಪಕ. ಹುಟ್ಟಿದ್ದು ವಾರಾಣಸಿಯಲ್ಲಿ. ಅಲ್ಲಿಯ ಮುಸಲ್ಮಾನ ನೇಯ್ಗೆಕಾರ ಒಬ್ಬ ಊರಿಂದ ಕೆಲವು ಮೈಲಿಗಳ ದೂರದ ಲಹರ್ ತಲಾವ್ ಎಂಬ ಕೆರೆಯಲ್ಲಿ ತೇಲುತ್ತಿದ್ದ ಮಗುವೊಂದನ್ನು ಕಂಡು ಎತ್ತಿಕೊಂಡು ಮನೆಗೆ ತಂದನಂತೆ. ಅವನ ಹೆಂಡತಿ ಮಗುವನ್ನು ಸಾಕಿದಳು. ಅವರು ಅದಕ್ಕೆ ಕಬೀರ್ ಎಂದು ಹೆಸರಿಟ್ಟರು. ಕಬೀರ್ ಎಂದರೆ ಅರಬ್ಬೀಭಾಷೆಯಲ್ಲಿ ಮಹಾನ್ ಎಂದು ಅರ್ಥ. ಬೆಳೆಯುವ ದಿನದಲ್ಲಿ ಗೋಸಾಯಿ ಅಷ್ಟಾವಂದ್ ಎಂಬಾತನ ಪ್ರಭಾವದಿಂದ ಕಬೀರ್ ದೇವರನ್ನು ಹರಿ ಎಂದೂ ರಾಮ ಎಂದೂ ಕರೆದ. ಮುಸ್ಲಿಂ ಜನ ಇವನನ್ನು ಧರ್ಮಭ್ರಷ್ಟ ಎಂದು ದೂರಿದರು. ಧರ್ಮಭ್ರಷ್ಟ ನಾನಲ್ಲ, ಕೆಟ್ಟ ಬಾಳು ನಡೆಸುವ ಜನ ಧರ್ಮಭ್ರಷ್ಟರು ಎಂದು ಪ್ರತಿ ಹೇಳಿದ. ಜಾತಿಮುಖ್ಯವಲ್ಲ. ಗುಣ ಮುಖ್ಯ ಎಂಬ ನಂಬಿಕೆಯಲ್ಲಿ ನಡೆದು ಕಬೀರ್ ಜನರಲ್ಲಿ ಒಬ್ಬ ಪ್ರಮುಖನಾಗಿ ನಿಂತ. ಕಬೀರ್ ಒಮ್ಮೆ ಜನಿವಾರ ಹಾಕಿಕೊಂಡು ತಾನು ದ್ವಿಜನಾದೆ ಎಂದನಂತೆ. ಒಬ್ಬ ಬ್ರಾಹ್ಮಣ ಈ ನಡತೆಯನ್ನು ನಿಷೇಧಿಸಿದ. ಜನಿವಾರ ಹೃದಯದಲ್ಲಿ ದೇವರಿರುವುದರ ಗುರುತು. ನನ್ನ ಹೃದಯದಲ್ಲಿ ದೇವರಿದ್ದಾನೆ. ನಿನ್ನ ಹೃದಯದಲ್ಲಿಲ್ಲ. ಇದನ್ನು ಹಾಕಿಕೊಳ್ಳುವುದಕ್ಕೆ ನಿನಗಿಂತ ನನಗೆ ಹೆಚ್ಚು ಅಧಿಕಾರ-ಎಂದು ಕಬೀರ್ ಕೇಳಿದನಂತೆ. ದಿನ ಕಳೆದಂತೆ ಜನ ಇವನನ್ನು ಒಬ್ಬ ಸಂತನೆಂದು, ಗುರು ಎಂದು ಒಪ್ಪಿಕೊಂಡರು. ಶುಷ್ಕ ಆಚಾರ, ಭಾವಹೀನ ಪುಜನ ಇಂಥ ವ್ಯರ್ಥವರ್ತನವನ್ನು ಕಬೀರ್ ಖಂಡಿಸಿ, ನಿಷ್ಕಾಮಕರ್ಮದ ಉಪದೇಶಕನಾದ.

ಭಾರತದ ಒಬ್ಬ ಅನುಭವಿ ಕವಿ : ಕಬೀರ್
ಕಬೀರ್

ರಾಮಾನಂದನಲ್ಲಿಗೆ ಹೋಗಿ ಅವನನ್ನು ಗುರುವಾಗಿ ಸ್ವೀಕರಿಸಿದ. ದೇವರನ್ನು ರಾಮ ಎಂದು ರಹೀಮ್ ಎಂದು ಹೇಗೆ ಕರೆದರೂ ಸರಿಯೇ, ಭಕ್ತಿಯಿಂದ ಕರೆಯಿರಿ, ಎಂದು ಹೇಳಿ ಕಬೀರ್ ಆಚಾರವಂತ ಹಿಂದೂ ಆಚಾರವಂತ ಮುಸಲ್ಮಾನ ಇವರ ಎರಡು ಸಮುದಾಯವನ್ನೂ ಹಗೆ ಮಾಡಿಕೊಂಡ. ಆದರೆ ಇವನನ್ನು ಮೆಚ್ಚಿ ಅನೇಕ ಜನ ಇವನ ಅನುಯಾಯಿಗಳಾದರು. ತನ್ನ ಶುದ್ಧ ಜೀವನದಿಂದ ಕಬೀರ್ ಅನೇಕ ಸಿದ್ಧಿಗಳನ್ನು ಗಳಿಸಿದ. ಇವನ ಮಹಿಮೆಯನ್ನು ಕೇಳಿ ಬಾದಷಹ ಸಿಕಂದರ್ ಲೋದಿ ಇವನಿಗೆ ಹಣವನ್ನು, ನೆಲವನ್ನು ಕೊಡುವೆನೆಂದ. ಕಬೀರ್ ಅವನ್ನು ಸ್ವೀಕರಿಸಲಿಲ್ಲ. ಕಬೀರನನ್ನು ಕುರಿತು ಅನೇಕ ಪವಾಡ ಕಥೆಗಳಿವೆ. ಧರ್ಮವನ್ನು ಕುರಿತು ವಾದಿಸಲು ಬಂದ ಅನೇಕರನ್ನು ಕಬೀರ್ ಸೋಲಿಸಿದ. ಅದಕ್ಕೂ ಹೆಚ್ಚಿನ ಸಂಗತಿ ಇವನ ಹಗೆಗಳು ಇವನಿಗೆ ಒಡ್ಡಿದ ಪ್ರಲೋಭನ, ವಿಷಪರೀಕ್ಷೆಗಳಲ್ಲಿ ಇವನು ಸೋಲದೆ ನಿಂತದ್ದು. ವಾರಾಣಸಿ ಪುಣ್ಯಕ್ಷೇತ್ರ, ಅಲ್ಲಿ ಸತ್ತವರಿಗೆ ಮುಕ್ತಿ-ಎಂಬ ಮಾತಿನಲ್ಲಿ ಹುರುಳಿಲ್ಲ ಎಂದು ತೋರಿಸುವುದಕ್ಕೆ ಕಬೀರ್ ಇಲ್ಲಿ ಸತ್ತವರು ಕತ್ತೆಯಾಗಿ ಹುಟ್ಟುತ್ತಾರೆ ಎಂದು ಪ್ರತೀತಿ ಪಡೆದಿದ್ದ ಮಗಹರ ಎಂಬ ಸ್ಥಳದಲ್ಲಿ ನಿಂತು ಅಲ್ಲಿ ತೀರಿಕೊಂಡನಂತೆ. ಜನ ಮಹನೀಯರೆಂದು ಗಣಿಸಿರುವ ಇಂಥ ಇತರ ಹಿರಿಯರ ವಿಷಯದಲ್ಲಿ ಬೆಳೆದಿರುವಂತೆ ಇವನ ವಿಷಯದಲ್ಲೂ ಒಂದು ಕಥೆ ಬೆಳೆದಿದೆ. ಶಿಷ್ಯರಲ್ಲಿ ಹಿಂದೂಗಳಾದವರು ಇವನ ದೇಹವನ್ನು ಸುಡಬೇಕೆಂದೂ ಮುಸಲ್ಮಾನರು ಹೂಳಬೇಕೆಂದೂ ಅಪೇಕ್ಷಿಸಿದರು. ದೇಹ ಇವರಿಗೂ ಸಿಕ್ಕಲಿಲ್ಲ. ಅವರಿಗೂ ಸಿಕ್ಕಲಿಲ್ಲ. ಅದಕ್ಕೆ ಹೊದಿಸಿದ್ದ ಹಚ್ಚಡವನ್ನು ತೆಗೆದು ನೋಡಿದಾಗ ಅದರಡಿ ಒಂದಿಷ್ಟು ಹೂವಿನ ರಾಶಿ ಮಾತ್ರ ಇತ್ತು. ಶಿಷ್ಯವರ್ಗದವರು ಇದರ ಮೇಲೆ ಒಂದು ಮಂದಿರವನ್ನೂ ಒಂದು ಸಮಾಧಿಯನ್ನೂ ಅಕ್ಕಪಕ್ಕದಲ್ಲಿ ಕಟ್ಟಿದರು. ಮೃತನಾದ ಕಬೀರ್ ಆಮೇಲೆ ಮರಳಿ ಎದ್ದನೆಂದೂ ತನ್ನ ಅನಂತರ ಗುರುವಾಗಿರಲು ತಾನೇ ನೇಮಿಸಿದ ಧರ್ಮದಾಸನಿಗೆ ಇತರ ಕೆಲವು ಶಿಷ್ಯರಿಗೆ, ಕಂಡನೆಂತಲೂ ಇನ್ನೊಂದು ಕಥೆ ಹೇಳುತ್ತದೆ. ಹೀಗೆ ಕಂಡಾಗ ಅವನು ತನ್ನ ಪಂಥದ ಆಧಾರ ಸೂತ್ರಗಳೆಂದು 42 ಸಂಗತಿಗಳನ್ನು ಹೇಳಿ ಅನಂತರ ದಿವ್ಯವನ್ನು ಸೇರಿದನಂತೆ.

ಭಾರತದ ಒಬ್ಬ ಅನುಭವಿ ಕವಿ : ಕಬೀರ್
ಕಬೀರನ ಗೀತೆಗಳು

ಕಬೀರನ ಗೀತೆಗಳು ನೂರಾರು. ಕನ್ನಡ ದೇಶದಲ್ಲೂ ಭಕ್ತಜನರು ಭಜನೆಗಳಲ್ಲಿ ಇವನ ಗೀತಗಳನ್ನು ಹಾಡುತ್ತಾರೆ. ಕಹತ ಕಬೀರಾ ಸುನೋ ಭೈ ಸಾಧು-ಎಂಬ ಕೊನೆಯ ಪಲ್ಲವಿಯನ್ನುಳ್ಳ ಹಲವು ಹಾಡುಗಳು ನಮಗೆಲ್ಲ ಪರಿಚಿತವಾಗಿವೆ. ಬೆತ್ತಲೆ ನಡೆದಾಡಿ ಸಾಯುಜ್ಯ ಪಡೆಯುವುದಾದರೆ ಅರಣ್ಯದ ಮೃಗಗಳೆಲ್ಲ ಮುಕ್ತ ಜೀವಿಗಳೆ. ಬೆತ್ತಲೆ ನಡೆದೂ ಇಲ್ಲ,ತೊಗಲನ್ನು ಹೊದೆದೂ ಏನೂ ಫಲವಿಲ್ಲ. ಒಳಗೆ ದೈವಸಿದ್ಧಿ ಆಗಬೇಕು. ತಲೆ ಬೋಳಿಸಿಕೊಂಡಷ್ಟಕ್ಕೆ ಒಬ್ಬ ಪುರ್ಣನಾಗಬಹುದಾದರೆ ಉಣ್ಣೆ ಕತ್ತರಿಸಿದ ಕುರಿಗಳು ಏಕೆ ಪುರ್ಣ ಅಲ್ಲ? ಇಂದ್ರಿಯ ಸುಖವನ್ನು ಕಾಣದವ ಮುಕ್ತನೆನ್ನುವುದಾದರೆ ಷಂಡರು ಷಂಡರಾದ ಕಾರಣದಿಂದಲೆ ಬ್ರಹ್ಮವನ್ನು ಮುಟ್ಟಿರಬೇಕು. ಕಬೀರ ಹೇಳುತ್ತಾನೆ, ಕೇಳಿ, ಸಾಧು ಸಹೋದರರೆ ಭಗವಂತನ ಪಾವನ ನಾಮದ ಮೂಲಕ ಹೊರತು ಯಾರಿಗೂ ಮುಕ್ತಿ ದೊರಕಿಲ್ಲ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕೊಕ್ಕೆಹುಳು

ರಕ್ತಹೀನತೆಗೆ ಕಾರಣವಾಗಿರುವ ಕೊಕ್ಕೆಹುಳು

ಸಂಗ್ರಾಮ್ ಸಿಂಗ್

ಭಾರತೀಯ ಆಡಳಿತಗಾರ ಸಂಗ್ರಾಮ್ ಸಿಂಗ್