ನಮ್ಮ ಭಾರತವೇ ಒಂದು ಅಧ್ಭುತವಾದ ಪುಣ್ಯಭೂಮಿ. ಅನೇಕ ಇತಿಹಾಸಗಳನ್ನು ಹೊಂದಿದ ಬೀಡು. ಹಾಗೆ ಕರ್ನಾಟಕ ಕೂಡ ಒಂದು ಪ್ರವಾಸಿ ತಾಣ ಅನ್ನುವುದರಲ್ಲಿ ಸಂಶಯ ಇಲ್ಲ. ಕರ್ನಾಟಕದಲ್ಲಿ ಕೂಡ ಅನೇಕ ಪ್ರಸಿದ್ದವಾದ ಐತಿಹಾಸಿಕ ಸ್ಥಳಗಳಿವೆ. ಅವುಗಳಲ್ಲಿ ಒಂದು . ಈ ಸಾಮ್ರಾಜ್ಯದ ಬಗ್ಗೆ ಚುಟುಕಾಗಿ ತಿಳಿಯೋಣ, ಮುಂದಿನ ಪೀಳಿಗೆಗೆ ಕೂಡ ತಿಳಿಸೋಣ.
ಹಂಪಿ:
ಹಂಪಿ ವಿಜಯನಗರ ಸಾಮ್ರಾಜ್ಯದ ಮಧ್ಯಕಾಲೀನ ಹಿಂದೂ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ತುಂಗಭದ್ರಾ ನದಿಯ ದಡದಲ್ಲಿರುವ ಈ ನಗರವನ್ನು ಈಗ ‘ಹಂಪಿ’ ಎಂದು ಕರೆಯಲಾಗುತ್ತದೆ. ಕ್ರಿ.ಶ. ೧೩೩೬ರ ಏಪ್ರಿಲ್ ೧೮ , ಇತಿಹಾಸ ಮರೆಯಲಾರದ ಒಂದು ಸುದಿನ. ಪವಿತ್ರ ತುಂಗಭದ್ರಾ ನದಿ ತೀರದಲ್ಲಿ ಕನ್ನಡ ಸಾಮ್ರಾಜ್ಯ ವಿಜಯನಗರ ಸ್ಥಾಪನೆಯಾದ ದಿನ. ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂದೇ ಹೆಸರಾದ ಶ್ರೀವಿದ್ಯಾರಣ್ಯರ ಮಾರ್ಗದರ್ಶನದಲ್ಲಿ (ಹರಿಹರ) ಹಕ್ಕ -ಬುಕ್ಕರು ಕಟ್ಟಿದ ವಿಜಯನಗರ ಎಂಬ ಪುಟ್ಟದೊಂದು ಸಂಸ್ಥಾನ, ವಿಜಯೋತ್ಸವವನ್ನೇ ಆಚರಿಸುತ್ತಾ ಅನತಿ ಕಾಲದಲ್ಲಿಯೇ ಬೃಹತ್ ಕನ್ನಡ ಸಾಮ್ರಾಜ್ಯವಾಯಿತು. ಕೃಷ್ಣಾನದಿಯಿಂದ ಕನ್ಯಾಕುಮಾರಿಯವರೆಗೂ ಹಬ್ಬಿತ್ತು. ಈ ಕನ್ನಡ ಸಾಮ್ರಾಜ್ಯ ಕೊನೆಗೊಂಡಿದ್ದು ೧೫೬೫ರಲ್ಲಿ.೫೦೦ ವರ್ಷಗಳ ಹಿಂದೆ, ವೈಭವದಿಂದ ಮೆರೆದ ಈ ಕನ್ನಡ ರಾಜಧಾನಿಯಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ರಸ್ತೆಯ ಬದಿಯಲ್ಲಿ ರಾಶಿ ಹಾಕಿ ಮಾರುತ್ತಿದ್ದ ಇತಿಹಾಸವಿದೆ. ಸಾಂಸ್ಕೃತಿಕ ನೆಲೆಯಿದೆ, ನಾಗರಿಕತೆಯ ನಂಟಿದೆ. ಹಂಪೆಗೆ ಸರಿಸಮವಾದ ಮತ್ತಾವುದೇ ಪ್ರದೇಶ ಭಾರತದಲ್ಲಿರಲಿಲ್ಲ ಎಂಬ ಖ್ಯಾತಿಯೂ ಇದಕ್ಕಿದೆ. ಈ ಮಾತುಗಳನ್ನು ಭಾರತೀಯರು ಯಾರೋ ಉತ್ಪೇಕ್ಷೆಗಾಗಿ ಅಥವಾ ಸ್ವಾಭಿಮಾನದಿಂದ ಹೇಳಿದ ನುಡಿಗಳಲ್ಲ. ಇದು ವಿದೇಶೀ ಯಾತ್ರಿಕರು ಮುಕ್ತಕಂಠದಿಂದ ಮಾಡಿದ ಪ್ರಶಂಸೆ. ಇಂಥ ಸುಂದರ ರಾಜಧಾನಿಯ ಮೇಲೆ ನಡೆದಂಥ ಆಕ್ರಮಣ ಮತ್ತಾವ ನಗರಿಯ ಮೇಲೂ ನಡೆದಿಲ್ಲ ಎಂದರೆ ಉತ್ಪ್ರೇಕ್ಷೆಯ ಮಾತಾಗಲಾರದು.
ಸ್ತಂಭಗಳು. ಹಂಪಿಯ ಪ್ರಮುಖ ದೇಗುಲಗಳಲ್ಲೊಂದು ವಿಜಯ ವಿಠ್ಠಲ ದೇಗುಲ. ಈ ದೇವಾಲಯವು ಅದ್ಭುತ ವಾಸ್ತುಶಿಲ್ಪಕ್ಕೆ, ಕಲ್ಲಿನ ಕುಸುರಿ ಕೆಲಸಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಈ ಸಂಗೀತ ಸ್ತಂಭಗಳಿವೆ. ಈ ಸ್ತಂಭಗಳು ವಾಸ್ತುಶಿಲ್ಪದ ಮಹಾನ್ ಅದ್ಭುತಗಳಲ್ಲೊಂದು. ಇಲ್ಲಿ ೫೬ ಸಂಗೀತ ಸ್ತಂಭಗಳು ಇವೆ. ಈ ಸ್ತಂಭಗಳನ್ನು ಅತ್ಯಂತ ಸೂಕ್ಷ್ಮವಾಗಿ ತಟ್ಟಿದಾಗ (ಟ್ಯಾಪ್ ಮಾಡಿದಾಗ) ಸುಮಧುರ ಶಬ್ದಗಳ ಅಲೆ ಸೃಷ್ಟಿಯಾಗುತ್ತವೆ. ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ ಕಲ್ಲುಗಳನ್ನು ಬಳಸಿ ಈ ಸ್ತಂಭಗಳನ್ನು ನಿರ್ಮಿಸಲಾಗಿದೆ. ಈ ಕಾರಣದಿಂದ ವಿಜಯ ವಿಠ್ಠಲ ದೇವಾಲಯದ ಮುಖ್ಯ ಸ್ತಂಭಗಳನ್ನು ಸ ರೇ ಗ ಮಾ ಸ್ತಂಭಗಳು ಎಂದೂ ಬಣ್ಣಿಸಲಾಗುತ್ತದೆ.
ಆಘಾತಗಳ ಹೊರತಾಗಿಯೂ ಇಂದಿಗೂ ಹಂಪೆ ಚಿತ್ರಕಾರರಿಗೆ, ಛಾಯಾಗ್ರಾಹಕರಿಗೆ ಸ್ಫೂರ್ತಿಯ ತಾಣವಾಗಿ, ಇತಿಹಾಸ ಅಧ್ಯಯನಿಗಳಿಗೆ ಆಕರ ಗ್ರಂಥವಾಗಿದೆ. ವೈಭವ -ದುರವಸ್ಥೆಗಳಿಗೆ ಹಂಪೆಗಿಂತ ಮಿಗಿಲಾದ ಉದಾಹರಣೆ ಇತಿಹಾಸದ ಪುಟಗಳಲ್ಲಿ ಮತ್ತೊಂದು ಸಿಗಲು ಸಾಧ್ಯವಿಲ್ಲವೇನೋ? ೫೦೦ ವರ್ಷಗಳ ಹಿಂದೆ ಮುಸಲ್ಮಾನ ದೊರೆಗಳ ಹಾಗೂ ಆಂತರಿಕ ಸಂಕುಚಿತವಾದಿಗಳ ದಾಳಿಗೆ ಒಳಗಾಗಿ ಹಾಳಾದ ಹಂಪೆಯಲ್ಲಿ ವ್ಯಗ್ರನಾಗದೆ ಶಾಂತನಾಗಿ ನಿಂತ ಉಗ್ರನರಸಿಂಹ, ನಿಸ್ತೇಜವಾಗಿ ನೀರಿನಲ್ಲಿ ನಿಂತ ಲಿಂಗ, ಛಿದ್ರ ಛಿದ್ರವಾದ ಶಿಲಾಶ್ರೀಮಂತಿಕೆ ಇನ್ನೂ ದಾಳಿಗೆ ಮೂಕಸಾಕ್ಷಿಯಾಗಿ ಪರಂಪರಾಗತವಾಗಿ ಉಳಿದುಕೊಂಡು ಬಂದಿದೆ. ತುಂಗಭದ್ರಾ ನದಿಯ ದಂಡೆಯ ಮೇಲೆ ಪಂಪಾ ಪರಿಸರದಲ್ಲಿ ಮೂರ್ತಿವೆತ್ತ ಈ ಸುಂದರ ತಾಣ ಹಂಪೆ. ಪುರಾಣಕ್ಕೆ ಸಾಕ್ಷಿಯಾಗಿ, ಇತಿಹಾಸದ ಮೆಲುಕಾಗಿ ನೆಲೆನಿಂತ ಈ ನಾಡಿಗೆ ಶ್ರೀರಾಮನೂ ಬಂದಿದ್ದನೆನ್ನುತ್ತದೆ ಪುರಾಣ. ರಾಮಾಯಣದಲ್ಲಿ ಬರುವ ಕಿಷ್ಕಿಂದೆಯೇ ಇಂದಿನ ಆನೆಗೊಂದಿ, ಇಲ್ಲಿಯೇ ಶ್ರೀರಾಮದೂತ ಹನುಮ ಹುಟ್ಟಿದ್ದು ಎನ್ನುತ್ತದೆ ಸ್ಥಳ ಪುರಾಣ. ಕನ್ನಡ ರಾಜರಾಜೇಶ್ವರಿ ಭುವನೇಶ್ವರಿ ಇರುವುದೂ ಈ ಊರಿನಲ್ಲೇ. ಹಂಪೆ ದ್ವಾದಶ ಭಾಸ್ಕರ ಕ್ಷೇತ್ರಗಳಲ್ಲಿ ಒಂದು ಎಂದು ಗೋಕರ್ಣ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ನಾಲ್ಕು ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದ ಈ ನಾಡು ಪ್ರವರ್ಧಮಾನಕ್ಕೆ ಬಂದಿದ್ದು ರಾಯರಾಯರ ಗಂಡ ಕೃಷ್ಣದೇವರಾಯರ ಕಾಲದಲ್ಲಿ. ಇಂದು ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹಂಪೆಯಲ್ಲಿ ನೋಡಲೇ ಬೇಕಾದ ಹತ್ತು ಹಲವು ಪ್ರಮುಖ ಸ್ಥಳಗಳಿವೆ. ನಿರ್ಮಲವಾಗಿ ಹರಿವ ತುಂಗಭದ್ರಾನದಿ, ಗಜಗಾತ್ರವಿರುವ ಸಾಸಿವೆ ಕಾಳು ಗಣಪ, ಕೃಷ್ಣ ದೇಗುಲ, ಶಿಲ್ಪಕಲಾ ವಿಮರ್ಶಕರಾದ ಫರ್ಗ್ಯುಸನ್, ಲಾಂಗ್‌ಹರ್ಸ್ಟ್‌ರಿಂದ ಮುಕ್ತಕಂಠದಿಂದ ಹೊಗಳಿಸಿಕೊಂಡ ವಿಜಯವಿಠ್ಠಲ ಮಂದಿರ, ಕನ್ನಡಿಗರ ಕಣ್ಣಲ್ಲಿ ನೀರೂರಿಸುವ ಭಗ್ನಗೊಂಡು ದುರಸ್ತಿಯಾದ ಉಗ್ರ ನರಸಿಂಹ, ಬಟವಿ ಲಿಂಗ , ಉದ್ಯಾನ ವೀರಭದ್ರಸ್ವಾಮಿ, ಅಕ್ಕ ತಂಗಿ ಗುಂಡು, ಅಂತಃಪುರವಾಸಿಗಳಿಗಾಗಿಯೇ ನಿರ್ಮಿಸಲಾಗಿದ್ದ ಕಮಲಮಹಲ್ ಎಂಬ ಈಜುಕೊಳ, ಹಂಪಿಯ ಆರಾಧ್ಯದೈವ ವಿರೂಪಾಕ್ಷ ದೇಗುಲದ ಎದುರು ಇಕ್ಕೆಲಗಳಲ್ಲೂ ಇರುವ ಬಜಾರು ರಸ್ತೆ, ನದಿಯ ದಂಡೆಯಲ್ಲಿರುವ ಪುರಂದರ ಮಂಟಪ, ಅರಸನ ತುಲಾಭಾರ, ಕೋದಂಡರಾಮ, ವರಾಹ ದೇವಸ್ಥಾನ, ಮಾತಂಗಪರ್ವತ, ಅಚ್ಚುತರಾಯ ದೇವಾಲಯ, ಸುಂದರ ಶಿಲ್ಪಕಲಾ ವೈಭವದ ಪಟ್ಟಾಭಿರಾಮ ದೇಗುಲ, ಗಾಣಿಗಿತ್ತಿ ದೇಗುಲ, ಕಾವಲು ಗೋಪುರ, ಹಜಾರಿರಾಮ ಮಂದಿರ, ಗಜಶಾಲೆ, ಕನ್ನಡಿಗರ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯ, ಎಲ್ಲಕ್ಕಿಂತ ಮಿಗಿಲಾಗಿ ವಿಶ್ವವಿಖ್ಯಾತವಾದ ಕಲ್ಲಿನ ತೇರು ಹಾಗೂ ಮಹಾನವಮಿ ದಿಬ್ಬ. ಇದರ ಜೊತೆಗೆ ಬೆಟ್ಟವನ್ನೇರಿದರೆ ಸಂಜೆಯ ವೇಳೆ ಕಾಣಸಿಗುವ ಸುಂದರ ಸೂರ್ಯಾಸ್ತಮಾನ.
ಹಂಪಿಯ ಅತಿ ಪ್ರಮುಖ ಆಕರ್ಷಣೆಯಾದ ವಿರೂಪಾಕ್ಷ ದೇವಸ್ಥಾನದ ಎಡಭಾಗದ ಎರಡನೇ ಗೋಪುರವನ್ನು ಪ್ರವೇಶಿಸಿದಾಗ ನಾವು ಒಂದು ಮರಿಯಾನೆಯನ್ನು ನೋಡ ಬಹುದಾಗಿದೆ. ಇದಕ್ಕೆ ನಾವು ಒಂದು ರೂಪಾಯಿ ನಾಣ್ಯವನ್ನು ನೀಡಿದರೆ, ಅದು ತನ್ನ ಸೊಂಡಿಲಿನಿಂದ ಹಣ ಸಂಗ್ರಹಿಸಿ ಆಶೀರ್ವಾದದ ರೂಪದಲ್ಲಿ ತಲೆಯನ್ನು ಚುಂಬಿಸುತ್ತದೆ.
ಈಗಲೂ ಇಲ್ಲಿ ಉತ್ಖನನ ಕಾರ್ಯ ನಿರಂತರವಾಗಿ ಸಾಗಿದೆ. ಇತ್ತೀಚೆಗಷ್ಟೇ ಕಲ್ಲಿನ ರಥವಿರುವ ದೇಗುಲ ಪ್ರಾಕಾರದಲ್ಲಿ ರಾಯರು ಯಾಗಮಾಡುತ್ತಿದ್ದ ಹೋಮಕುಂಡ ಪತ್ತೆಯಾಗಿದೆ. ರಾಯರ ಅರಮನೆ ಇದ್ದ ತಳಹದಿ ಪತ್ತೆಯಾಗಿದೆ. ೨೦೦೬ರ ಏಪ್ರಿಲ್‌ನಲ್ಲಿ ಮುತ್ತುರತ್ನಗಳು ಕುದುರೆಯ ಅಸ್ತಿಪಂಜರ ಮುಂತಾದವು ದೊರೆತಿವೆ. ರಾಜಧಾನಿಯನ್ನು ಕಣ್ಣಾರೆ ಕಾಣದಿದ್ದರೆ ಆಗಲ್ಲ, ಒಂದು ಸಲ ಹೊರಡಿ ಹಂಪೆಗೆ. ನೋಡಿ ಬನ್ನಿ ಹಂಪಿಯ ಸೌಂದರ್ಯವನ್ನು .
ಧನ್ಯವಾದಗಳು.
GIPHY App Key not set. Please check settings