ಕರ್ಬೂಜ ಕುಕರ್ಬಿಟೇಸಿಯಿ ಕುಟುಂಬದಲ್ಲಿನ ಒಂದು ಪ್ರಜಾತಿಯಾದ ಕೂಕುಮಿಸ್ ಮೆಲೊದ ಒಂದು ವಿಧವನ್ನು ಸೂಚಿಸುತ್ತದೆ. ಕರ್ಬೂಜಗಳು ಗಾತ್ರದಲ್ಲಿ ೫೦೦ ಗ್ರಾಂ ನಿಂದ ೫ ಕೆಜಿ ವ್ಯಾಪ್ತಿಯಲ್ಲಿರುತ್ತವೆ. ಮೂಲತಃ, ಕರ್ಬೂಜ ಕೇವಲ ಯೂರೋಪ್‍ನ ಬಲೆ ವಿನ್ಯಾಸವಿರದ, ಕಿತ್ತಳೆ ತಿರುಳಿನ ಹಣ್ಣುಗಳನ್ನು ಸೂಚಿಸುತ್ತಿತ್ತು. ಆದರೆ, ಹೆಚ್ಚು ಇತ್ತೀಚಿನ ಬಳಕೆಯಲ್ಲಿ, ಅದು ಯಾವುದೇ ಕಿತ್ತಳೆ ತಿರುಳಿರುವ ಮೆಲನ್ ಅನ್ನು ಸೂಚಿಸುತ್ತದೆ.
ಕರ್ಬೂಜ ಕುಕುರ್ಬಿಟೇಸೀ ಕುಟುಂಬದ ಕುಕುಮಿಸ್ ಜಾತಿಯ ಮೆಲೊ ಪ್ರಭೇದಕ್ಕೆ ಸೇರಿದೆ. ಇದರ ಕಾಂಡ ಬಲಹೀನವಾಗಿದ್ದು ನೇರವಾಗಿ ಮೇಲಕ್ಕೆ ಬೆಳೆಯಲಾರದು. ಇದು ನೆಲದ ಮೇಲೆಯೇ ಹರಡಿ ಬೆಳೆಯುವ ಹಂಬು ಸಸ್ಯ. ಹಲವಾರು ಏಣುಗಳಿಂದ ಕೂಡಿದ ಇದರ ಮೇಲೆಲ್ಲ ಮೃದುವಾದ ಹಾಗೂ ನವುರಾದ ಕೂದಲುಗಳಿವೆ. ಎಲೆ ವೃತ್ತಾಕಾರ. ಕರನೆಯಾಕಾರ ಅಥವಾ ಮೂತ್ರ ಪಿಂಡಾಕಾರ. ಎಲೆಯಲಗು ನಿರ್ದಿಷ್ಟವಾದ ಭಾಗಗಳಾಗಿ ಸೀಳಿಲ್ಲ. ಅಂಚು ಗರಗಸದಂತೆ,ಎಲೆಯಮೇಲೆ ಕೂದಲುಗಳಿವೆ. ಎಲೆಯ ಕಂಕುಳಲ್ಲಿ ಒಂಟಿಹೂಗಳು ಅರಳುತ್ತವೆ. ಅವು ಭಿನ್ನಲಿಂಗಿಗಳು. ಹೂದಳಗಳು 5. ಪರಸ್ಪರ ಕೂಡಿಕೊಂಡಿವೆ. ಹೂದಳ ಸಮೂಹ ಗಂಟೆಯಾಕಾರದ್ದು, ಅದರ ಬಣ್ಣ ಹಳದಿ. ಗಂಡು ಹೂವಿನಲ್ಲಿ 5 ಕೇಸರಗಳಿವೆ. ಹೆಣ್ಣು ಹೂವಿನಲ್ಲಿ ನೀಚಸ್ಥಾನದ ಅಂಡಾಶಯವಿದೆ. ಮೂರು ಕಾರ್ಪೆಲುಗಳಿರುವ ಇದರಲ್ಲಿ ಹಲವಾರು ಅಂಡಕಗಳಿವೆ. ಫಲ ಗುಂಡು ಅಥವಾ ಆಯತಾಕಾರವೂ ರಸಭರಿತವೂ ಆಗಿದೆ. ಇದನ್ನು ಪೆಪು ಎನ್ನತ್ತಾರೆ. ಇದಕ್ಕೆ ಒರಟಾದ ಸಿಪ್ಪೆಯೂ ಮೆದುವಾದ ತಿರುಳೂ ಇವೆ.
ಜನಪ್ರಿಯವೆನಿಸಿರುವ ಬೇಸಗೆಯ ಹಣ್ಣಿನ ಸಸ್ಯ. ಇದರ ಕಾಯಿಗಳನ್ನು ತರಕಾರಿಯಾಗಿ ಉಪಯೋಗಿಸುವುದೂ ಉಂಟು. ಕರಬೂಜದ ಹಣ್ಣಿನಿಂದ ತಂಪಾದ ಪಾನಕ ಮಾಡುತ್ತಾರೆ. ಇದನ್ನು ಏನನ್ನೂ ಹಾಕದೆ ತಿನ್ನಬಹುದು ಅಥವಾ ಸಕ್ಕರೆಯೊಡನೆ ತಿನ್ನಬಹುದು. ಹಳದಿ ಬಣ್ಣದ ಕರಬೂಜ ತಳಿಗಳಲ್ಲಿ ಸಿ ಜೀವಸತ್ವ ಇತರ ತಳಿಗಳಿಗಿಂತ ಅಧಿಕವಾಗಿದೆ. ಇದರ ಬೀಜಗಳನ್ನೂ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಕರಬೂಜ ಕೇವಲ ಹಿತಕರ ಆಹಾರ ಮಾತ್ರವಲ್ಲದೆ, ಮನುಷ್ಯನಿಗೆ ಆರೋಗ್ಯ ಕೊಡುವ ಪುಷ್ಟಿಕರವಾದ ಆಹಾರವೂ ಹೌದು.
ಕರಬೂಜದ ಬೇಸಾಯಕ್ಕೆ ಹೆಚ್ಚು ಉಷ್ಣತೆ ಮತ್ತು ಒಣ ವಾತಾವರಣ ಅಗತ್ಯ. ಸು. 300 ಸೆಂ. ಉಷ್ಣತೆಯ ಉತ್ತಮ ತಂಪಾದ ಹವಾಗುಣದಲ್ಲಿ ಹಲವಾರು ರೋಗಗಳಿಗೆ ಬಲಿಯಾಗುತ್ತದೆ. ಕಾಯಿಗಳು ಹಣ್ಣಾಗುವ ಸಮಯದಲ್ಲಿ ಮಣ್ಣಿನಲ್ಲಿ ಅಧಿಕ ತೇವಾಂಶವಿದ್ದರೆ ಕೀಳುದರ್ಜೆಯ ಫಲವನ್ನು ಕೊಡುತ್ತದೆ. ಈ ಬೆಳೆ ಯಾವ ಹಂತದಲ್ಲಿಯೂ ಹಿಮವನ್ನು ಸಹಿಸುವುದಿಲ್ಲ. ಸಾಮಾನ್ಯವಾಗಿ ಕರಬೂಜವನ್ನು ನದಿ, ಕೆರೆ ಮುಂತಾದವುಗಳ ದಡದಲ್ಲಿರುವ ಮರಳು ಅಥವಾ ಮರಳು ಗೋಡು ಮಣ್ಣಿನಲ್ಲಿ ಬೆಳೆಸುತ್ತಾರೆ. ಆದರೆ ಇದನ್ನು ರೇವೆಗೋಡು, ಜೇಡಿ ಗೋಡು ಮಣ್ಣುಗಳಲ್ಲಿ ಸಹ ಬೆಳೆಸಬಹುದು. ಆದರೆ ಜಿಗಟಾಗಿರುವ ಜೇಡಿ ಮಣ್ಣಿನಲ್ಲಿ ಇದರ ಬೇಸಾಯ ಯಶಸ್ವಿಯಾಗುವುದಿಲ್ಲ.
ಕರ್ಬೂಜದ ಅನೇಕ ತಳಿಗಳು ಬೇಸಾಯದಲ್ಲಿವೆ. ಸ್ಥಾನೀಯ ತಳಿಗಳು ಇಳುವರಿ ದೃಷ್ಟಿಯಿಂದ ಉತ್ತಮವಲ್ಲ. ಹಣ್ಣಿನ ಗಾತ್ರ, ಆಕಾರ ಮತ್ತು ಬಣ್ಣದ ಮೇಲೆ ತಳಿಗಳ ವಿಂಗಡಣೆ ಮಾಡಿದೆ. ಪಿ. ಎಂ. ಆರ್., 45. ಜುಕುಂಬ ಕ್ಯಾಂಪೊ ಮುಂತಾದ ಹೆಚ್ಚು ಇಳುವರಿ ಕೊಡುವ ವಿದೇಶಿ ತಳಿಗಳು ಹೆಚ್ಚಿನ ಜನಪ್ರಿಯತೆಗಳಿಸಿವೆ. ಆಘ್ಘಾನಿಸ್ತಾನದ ಸರ್ದ ಮೆಲನ್ ಎಂಬ ತಳಿ ಸಿಹಿಯಾದ ದಪ್ಪ ತಿರುಳು ಮತ್ತು ಮಧುರ ವಾಸನೆಯಿಂದ ಕೂಡಿದ್ದೂ ಹೆಚ್ಚು ಇಳುವರಿ ಕೊಡುವುದರಿಂದ ಅದರ ಬೇಸಾಯ ಅಧಿಕ ಪ್ರಮಾಣದಲ್ಲಿ ನಡೆದಿದೆ. ಲಕ್ನೊ ಸಫೇದ್, ಅಲಹಾಬಾದ್, ಹರಿದ್ವಾರ್, ಫೈಜಾಬಾದ್, ಕನೂಜ್ ಮುಂತಾದವುಗಳು ಭಾರತ ದೇಶದ ತಳಿಗಳು. ಕರ್ನಾಟಕ ರಾಜ್ಯದಲ್ಲಿ ಕಾವೇರಿ, ಗಂಜಾಂ ಜಾಮ್ ಮತ್ತು ಬನಾ ಸ್ಪತ್ರಿ ಎಂಬ ತಳಿಗಳು ಬೇಸಾಯದಲ್ಲಿವೆ.
ಕರ್ಬೂಜ ಅಪ್ಪಟ ಬೇಸಗೆ ಬೆಳೆ. ಸಾಮಾನ್ಯವಾಗಿ ನವಂಬರ್-ಫೆಬ್ರವರಿ ವರೆಗೆ ಇದರ ಬೀಜವನ್ನು ಬಿತ್ತುವರು. ಉತ್ತರ ಭಾರತದಲ್ಲಿ ಹೆಚ್ಚು ಹಿಮ ಬೀಳುವುದರಿಂದ ಬಿತ್ತನೆಯ ಅವಧಿ ಫೆಬ್ರವರಿ ಮಾರ್ಚ್ ತಿಂಗಳುಗಳಿಗೆ ಸೀಮಿತವಾಗಿದೆ. ಮಣ್ಣನ್ನು 6′ ಅಂತರದಲ್ಲಿ 2′-3′ ಅಗಲ ಮತ್ತು ಅಷ್ಟೇ ಎತ್ತರದ ದಿಂಡುಗಳನ್ನು ಮಾಡಿ ಅದರ ಮೇಲೆ 1′ ಅಂತರದ ಸಾಲುಗಳಲ್ಲಿ ಬೀಜವನ್ನು ಬಿತ್ತುತ್ತಾರೆ. ಕೆರೆ ಮತ್ತು ನದಿಗಳ ಅಂಗಳದಲ್ಲಿ ಇದರ ಬೇಸಾಯ ಮಾಡುವಾಗ ಎಕರೆಗೆ 30-35 ಗಾಡಿ ಕೊಟ್ಟಿಗೆ ಗೊಬ್ಬರವನ್ನು ತಳಗೊಬ್ಬರವಾಗಿ ಹಾಕಿ, ಅನಂತರ ಮಧ್ಯವರ್ತಿ ಬೇಸಾಯ ಮಾಡುವಾಗ ಎಕರೆಗೆ 25 ಕಿಗ್ರಾಂ ಸಾರಜನಕ, 10 ಕಿಗ್ರಾಂ ರಂಜಕ, 45 ಕಿಗ್ರಾಂ ಪೊಟ್ಯಾಷ್ ಮತ್ತು 30 ಕಿಗ್ರಾಂ ಸುಣ್ಣ ಹಾಕಬೇಕು. ತೋಟಗಳಲ್ಲಿ ಬೇಸಾಯ ಮಾಡುವಾಗ 6′ ಅಂತರದ ಸಾಲುಗಳಲ್ಲಿ 4′ ಅಂತರದಲ್ಲಿ 2′ ಅಗಲದ ಗುಣಿಗಳನ್ನು ತೋಡಿ, ಪ್ರತಿ ಗುಣಿಯಲ್ಲಿ 4-5 ಬೀಜಗಳನ್ನು ಬಿತ್ತಬೇಕು. ಕರಬೂಜದ ತೋಟದಲ್ಲಿ ಕಾಲಕಾಲಕ್ಕೆ ಕಳೆ ತೆಗೆಯಬೇಕು. ಸಸಿಗಳ ಹಂಬು ಹರಿಯಲು ಪ್ರಾರಂಭಿಸಿದಾಗ ಹೆಚ್ಚು ನೀರು ನಿಲ್ಲುವಂತೆ ವಿಶಾಲವಾಗಿ ಪಾತಿಮಾಡಬೇಕು.
ಬೀಜ ಬಿತ್ತಿದ ಒಂದುವರೆ ತಿಂಗಳ ಅನಂತರ ಕರ್ಬೂಜದ ಹೂ ಬಿಡುತ್ತದೆ. ಅನಂತರ ಒಂದು ತಿಂಗಳಿಗೆ ಹಣ್ಣು ಕುಯ್ಲಿಗೆ ಬರುತ್ತದೆ. ಕಾಯಿ ಬಲಿತು ಹಣ್ಣಾಗುವ ಕಾಲ ಸಮೀಪಿಸಿದಾಗ ಕಾಯಿಗಳು ಮೊದಲಿನ ಬಣ್ಣವನ್ನು ಬದಲಾಯಿಸಿ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗುತ್ತವೆ. ಪಕ್ವವಾದಾಗ ತೊಟ್ಟಿನ ಸುತ್ತಲೂ ತಗ್ಗು ಕಾಣಿಸಿಕೊಳ್ಳುತ್ತದೆ. ಆಗ ಹರಿತವಾದ ಚಾಕುವಿನಿಂದ ತೊಟ್ಟುಗಳನ್ನು ಕೊಯ್ದು ಹಣ್ಣುಗಳನ್ನು ಹಂಬಿನಿಂದ ಬೇರ್ಪಡಿಸಬೇಕು.
ಕರ್ಬೂಜ ಹಣ್ಣಿನಲ್ಲಿ ಇತರ ಹಣ್ಣುಗಳಿಗೆ ಹೋಲಿಸಿದರೆ ಬಹಳಷ್ಟು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಆಹಾರ ಸೇವನೆಗಳ ಮಧ್ಯೆ ಹಸಿವೆಯಿಂದ ಬಳಲುವವರು ಕರ್ಬುಜ ಹಣ್ಣು ಸೇವನೆ ಮಾಡಬಹುದು. ಇದರಲ್ಲಿರುವ ಅತಿ ಹೆಚ್ಚಿನ ನೀರಿನ ಅಂಶ ಮನುಷ್ಯನ ದೇಹವನ್ನು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುತ್ತದೆ. ಜೊತೆಗೆ ಇದರಲ್ಲಿರುವ ಕಡಿಮೆ ಸಕ್ಕರೆ ಪ್ರಮಾಣದಿಂದ ನಮ್ಮ ದೇಹದ ಕ್ಯಾಲೋರಿಗಳನ್ನು ಹತೋಟಿಯಲ್ಲಿರುವಂತೆ ಮಾಡುತ್ತದೆ.
ಅತಿ ಕಡಿಮೆ ಪರ್ಯಾಪ್ತ ಕೊಬ್ಬು ಹಾಗೂ ಅತಿ ಕಡಿಮೆ ಕ್ಯಾಲೋರಿಗಳಿರುವ ಕಾರಣ ತೂಕ ಏರದಿರಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರು ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸಿ ಹೊಟ್ಟೆಯ ಹಸಿವಿನ ಭಾವನೆ ಬರದಂತೆ ನೋಡಿಕೊಳ್ಳುತ್ತದೆ.
ಕರ್ಬೂಜ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಕ್ಯಾರೊಟೆನೊಯಿಡ್ ಇದೆ. ಇದು ಕ್ಯಾನ್ಸರ್ ನಿಯಂತ್ರಿಸುತ್ತದೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇದು ನಮ್ಮ ದೇಹವನ್ನು ಪ್ರವೇಶಿಸುವ ಕ್ಯಾನ್ಸರ್ ಕಾರಕಗಳನ್ನು ಕೊಂದು, ನಮ್ಮ ದೇಹಕ್ಕೆ ರಕ್ಷಣೆ ಒದಗಿಸುತ್ತದೆ.
ಕರ್ಬೂಜ ಹಣ್ಣು ಒಂದು ಒಳ್ಳೆಯ ಔಷಧೋಪಾಯದ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದರ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಂಟಾದ ಅಸಿಡಿಟಿಯನ್ನು ದೂರ ಮಾಡಿ ಜೀರ್ಣ ಶಕ್ತಿಯನ್ನು ಹೆಚ್ಚುವಂತೆ ಮಾಡುತ್ತದೆ.
ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಎ ಮತ್ತು ಸಿ ಕಣ್ಣುಗಳಿಗೆ ಅಗತ್ಯವಾದ ಪೋಷಕಾಂಶಗಳಾಗಿದ್ದು ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿರಿಸಲು ನೆರವಾಗುತ್ತವೆ. ವಿಶೇಷವಾಗಿ ಈ ಪೋಷಕಾಂಶಗಳು ಕಣ್ಣಿನ ಪಾಪೆಯನ್ನು ಇನ್ನಷ್ಟು ಬಲಪಡಿಸುವ ಮೂಲಕ ಸ್ಪಷ್ಟವಾದ ದೃಷ್ಟಿ ಮತ್ತು ನೋಟವನ್ನು ಉತ್ತಮಗೊಳಿಸುತ್ತವೆ.
ಕರ್ಬೂಜವು ಕೊಲೆಜಿನ್ ಎಂಬ ಅಂಶವನ್ನು ಹೊಂದಿದೆ. ಇದರಲ್ಲಿರುವ ಪ್ರೊಟೀನ್ ಅಂಶಗಳು ಚರ್ಮದಲ್ಲಿರುವ ಕೋಶಗಳ ರಚನೆಯಲ್ಲಿರುವ ಐಕ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ಕೊಲ್ಲಜೆನ್ ಗಾಯವನ್ನು ಬೇಗ ಮಾಗಿಸುತ್ತದೆ ಮತ್ತು ತ್ವಚೆಯ ಶಾಶ್ವತತೆಯ ಮೇಲೆ ಸಹ ಪ್ರಭಾವ ಬೀರುತ್ತದೆ. ನೀವು ಕರ್ಬೂಜವನ್ನು ತಿನ್ನುತ್ತಿದ್ದರೆ ನಿಮ್ಮ ತ್ವಚೆಯು ಒರಟಾಗಿ ಮತ್ತು ಒಣಗಿದಂತೆ ಕಾಣುವುದಿಲ್ಲ.
ಮನುಷ್ಯನ ದೇಹದಿಂದ ವಿಷಕಾರಿ ಅಂಶಗಳನ್ನು ಮತ್ತು ಅವಶ್ಯವಿಲ್ಲದ ಹೆಚ್ಚಿನ ನೀರಿನ ಅಂಶವನ್ನು ಹೊರ ಹಾಕುತ್ತದೆ. ಇದರಿಂದ ಮೂತ್ರ ಪಿಂಡದ ಸಮಸ್ಯೆಗಳು ದೂರಾಗಿ ಕಿಡ್ನಿಗಳು ಆರೋಗ್ಯವಾಗಿ ಕೆಲಸ ಮಾಡಲು ಸಹಾಯಕವಾಗುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ನಾವು ಸೇವಿಸಿದ ಆಹಾರ ಪದಾರ್ಥಗಳು ಸರಿಯಾಗಿ ಪರಿಷ್ಕರಣೆ ಆಗದೆ ಮೂತ್ರ ಪಿಂಡಗಳಲ್ಲಿ ಘನಾಕಾರ ಪಡೆದುಕೊಂಡು ಮೂತ್ರ ಪಿಂಡದ ಕಲ್ಲುಗಳಾಗಿ ಮಾರ್ಪಾಡಾಗುತ್ತವೆ. ಇದರಿಂದಲೂ ಸಹ ನಾವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಆದರೆ ಕರ್ಬುಜ ಹಣ್ಣುಗಳ ನಿಯಮಿತ ಸೇವನೆಯಿಂದ ಇಂತಹ ಪ್ರಕರಣಗಳು ತೀರಾ ಕಡಿಮೆಯಾಗುತ್ತವೆ.
ಮಧುಮೇಹ ಆವರಿಸುವ ಸಾಧ್ಯತೆಯನ್ನು ತಡವಾಗಿಸಬಹುದು. ಈ ಅದ್ಭುತ ಹಣ್ಣಿನಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸಂತುಲಿತ ಪ್ರಮಾಣದಲ್ಲಿರಿಸಿ ಮಧುಮೇಹವನ್ನು ನಿಯಂತ್ರಿಸಲೂ ನೆರವಾಗುತ್ತದೆ.
ಧನ್ಯವಾದಗಳು.
GIPHY App Key not set. Please check settings