in

ಕುರಿಗಳಿಗೆ ಬರುವ ರೋಗಗಳು

ಕುರಿಗಳು
ಕುರಿಗಳು

ಕುರಿಗಳಿಗೆ ನೂರಕ್ಕೂ ಮೇಲ್ಪಟ್ಟು ಸೋಂಕು ರೋಗಗಳೂ ದೇಹದ ಅಂತರಿಕ ಪರಿಸ್ಥಿತಿಯಿಂದ ಉಲ್ಬಣಿಸುವ ಅನೇಕ ಬೇನೆಗಳೂ ಕಾಣಿಸಿಕೊಳ್ಳುವುದಾಗಿ ತಿಳಿದುಬಂದಿದೆ. ಅವುಗಳ ಸಾಂಕ್ರಾಮಿಕ ರೋಗಗಳಿಗೆ ಬ್ಯಾಕ್ಟೀರಿಯ, ವೈರಸ್, ಬೂಷ್ಟು, ಏಕಾಣುಜೀವಿಗಳ, ಹುಳುಗಳು, ಕೀಟಗಳು ಮುಂತಾದವು ಕಾರಣವೆನಿಸಿವೆ.

ರೋಗಕಾರಕ ಬ್ಯಾಕ್ಟೀರಿಯಗಳು ಅನೇಕ ರೀತಿಯಲ್ಲಿ ಕುರಿಯ ದೇಹವನ್ನು ಹೊಕ್ಕು ಅಲ್ಲಿ ವೃದ್ಧಿಯಾಗಿ ವಿವಿಧ ರೀತಿಯ ರೋಗಗಳನ್ನು ತರುವುವು. ಪ್ರತಿಯೊಂದು ರೋಗಕ್ಕೂ ಒಂದೊಂದು ವಿಶಿಷ್ಟ ಏಕಾಣು ಜೀವಿ ಕಾರಣ. ಇವು ದೇಹದ ವಿವಿಧಭಾಗಗಳಲ್ಲಿ ಪಸರಿಸಬಲ್ಲವು. ಆದ್ದರಿಂದ ದೇಹದ ಸಂಪೂರ್ಣಭಾಗ ರೋಗದ ಛಾಯೆಗೆ ಒಳಗಾಗುವುದು. ಜ್ವರ, ಭೇದಿ, ಕೆಮ್ಮು ಇತ್ಯಾದಿ ರೋಗಲಕ್ಷಣಗಳೂ ದೇಹದ ಒಳಗಡೆ ವಿವಿಧ ಅಂಗಾಂಗಗಳಲ್ಲಿ ವಿಶಿಷ್ಟ ಬದಲಾವಣೆಗಳೂ ಕಾಣಿಸಿಕೊಳ್ಳುವುವು.

ನೆರಡಿ ರೋಗ

ನೆರಡಿ ರೋಗ ಕುರಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು. ಇದಕ್ಕೆ ಬ್ಯಾಸಿಲಸ್ ಆಂತ್ರಾಸಿಸ್ ಎಂಬ ಬ್ಯಾಕ್ಟೀರಿಯ ಕಾರಣ. ಈ ರೋಗಕ್ಕೆ ತುತ್ತಾದ ಕುರಿಗಳು ಒಮ್ಮೆಲೆ ರಕ್ತಕಾರಿ ಸಾಯುವುವು. ಸತ್ತ ಕುರಿಯ ದೇಹದಲ್ಲೆಲ್ಲ ರೋಗಾಣುಗಳು ತುಂಬಿರುವುದರಿಂದ ಅದರ ದೇಹವನ್ನು ಸೀಳದೆ ಆಳವಾದ ಗುಂಡಿಯಲ್ಲಿ ಸುಡಬೇಕು. ಇಲ್ಲದೆ ಹೋದರೆ ರೋಗಾಣುಗಳು ದೇಹದಿಂದ ಹೊರಗೆ ಚೆಲ್ಲಿ ಅನೇಕ ವರ್ಷಗಳ ಕಾಲ ಜೀವಂತವಾಗಿದ್ದು ಇತರ ಕುರಿಗಳಿಗೆ ಸುಲಭವಾಗಿ ಹರಡಬಹುದು.

ಕುರಿಗಳಿಗೆ ಬರುವ ರೋಗಗಳು
ನೆರಡಿ ರೋಗ

ಚಪ್ಪೆರೋಗದಲ್ಲಿ ಕುರಿ ಹಿಂಗಾಲು ಮುಂಗಾಲಿನ ಮಾಂಸ ಖಂಡದ ಉಬ್ಬರದಿಂದ ನರಳಿ ಸಾಯುವುದು. ಅತ್ಯುಗ್ರ ಊತದ ರೋಗದಲ್ಲಿ ದೇಹದಲ್ಲೆಲ್ಲ ಊತ ಕಾಣಬರುವುದು. ಬ್ರ್ಯಾಕ್ಸಿಯಂತೂ ಆರೋಗ್ಯವಂತ ಕುರಿಮರಿಯಲ್ಲಿ ಒಮ್ಮಿಂದೊಮ್ಮೆಗೆ ಕಾಣಿಸಿಕೊಳ್ಳುವ ರೋಗ. ಅದರ ಜಠರದ ನಾಲ್ಕನೆಯ ಕೋಣೆಯಲ್ಲಿ ಊರಿಯೂತವಾಗಿ ರೋಗಾಣುಗಳು ವೃದ್ಧಿಯಾಗಿ, ಮರಿಗಳಿಗೆ ಒಮ್ಮೆಗೆ ಸಾವನ್ನು ಉಂಟುಮಾಡುವುವು. ಕಪ್ಪು ರೋಗದಲ್ಲಿ ಕಾರಲು ಹುಳುವಿನ ಶೈಶವ ರೂಪ ಯಕೃತ್ತನ್ನು ಭೇದಿಸುವುದರಿಂದ ಅಲ್ಲಿ ರೋಗಾಣುಗಳು ವೃದ್ಧಿಯಾಗಿ ಕಪ್ಪುರೋಗವುಂಟಾಗುವುದು. ಕುರಿಮರಿಗಳಿಗೆ ಹುಟ್ಟಿದಾಗಲೆ ಭೇದಿರೋಗ ಸಾಮಾನ್ಯ. ಕ್ಲಾಸ್ಟ್ರಿಡಿಯಂ ಪರ್‍ಫ್ರಿಂಜಿಸ್ ಟೈಪ್ ಎಂಬ ರೋಗಾಣು ಈ ರೋಗ ತರುವುದು. ವಯಸ್ಕ ಕುರಿಗಳಲ್ಲೂ ಈ ಭೇದಿರೋಗ ಬರುವುದುಂಟು. ಕರುಳಿನಲ್ಲಿ ಕ್ಲಾಸ್ಟ್ರಿಡಿಯಂ ಪರ್‍ಫ್ರಿಂಜಿಸ್ ಟೈಪ್ ಸಿ ಮತ್ತು ಡಿ ಎಂಬ ರೋಗಾಣುಗಳಿಂದ ವಿಷ ಉತ್ಪಾದನೆಯಾಗಿ ಕರುಳಿನ ವಿಷಬೇನೆ ಬರುವುದು. ಇದರಿಂದ ಭೇದಿಕಾರಕ ಲಕ್ಷಣಗಳು ತಲೆದೋರಿ ಕುರಿಗಳು ಸಾಯುವುವು.

ಕುರಿಗಳಿಗೆ ಬರುವ ಇನ್ನೊಂದು ರೋಗ ಧನುರ್ವಾಯು. ಮಾಂಸಖಂಡಗಳು ಬಿಗಿದು ದೇಹ ಬಿಲ್ಲಿನಾಕಾರವಾಗುವ ಈ ರೋಗಕ್ಕೆ ಕ್ಲಾಸ್ಟ್ರಿಡಿಯಂ ಟೆಟನಿ ಎಂಬ ರೋಗಾಣು ಕಾರಣ. ಮುಂದೆ ಈ ರೋಗದಿಂದ ಕುರಿ ಸಾಯುವುದು. ಕುರಿಯ ದೇಹದಲ್ಲಿ ರಂಜಕದ ಅಂಶ ಕಡಿಮೆಯಾದಾಗ ಸತ್ತಪ್ರಾಣಿಗಳ ದೇಹವನ್ನು ತಿನ್ನಬೇಕೆಂಬ ಆಸೆಯಾಗಿ ತಿಂದಾಗ ಅದರಲ್ಲಿರುವ ಕ್ಲಾಸ್ಟ್ರಿಡಿಯಂ ಬಾಟೂಲಿನಂ ಟೈಪ್ ಎಂಬ ರೋಗಾಣು ಕುರಿಯ ದೇಹವನ್ನು ಸೇರಿ ವಿಷ ಉತ್ಪತ್ತಿಮಾಡುದರಿಂದ ಕುರಿಗಳು ಸಾಯುವುವು. ಪ್ಯಾಸ್ಚುರೆಲ್ಲ ಮಲ್ಟೋಸಿಡ ಎಂಬ ರೋಗಾಣುವಿನಿಂದ ವಿಶಿಷ್ಟ ರೀತಿಯ ಆಂತರಿಕ ಬೇನೆ ಬರುವುದು. ಶ್ವಾಸಕೋಶ, ಹೃದಯ ಹಾಗೂ ಕೀಲುಗಳಲ್ಲಿ ಈ ರೋಗದ ಛಾಯೆ ಕಂಡುಬರುವುದು. ಕುರಿಗಳ ದೇಹದ ಮೇಲೆ ವಾಸಮಾಡುವ ಉಣ್ಣೆಗಳ ಮೂಲಕ ಪ್ಯಾಸ್ಚುರೆಲ್ಲ ಟುಲರೆನ್ನಿಸ್ ಎಂಬ ರೋಗಾಣು ದೇಹಕ್ಕೆ ಸೇರಿ ಟ್ಯುಲರೀಮಿಯ ಎಂಬ ರೋಗವನ್ನು ತರುವುದು. ಕುರಿಗಳ ಮೊಲೆಯ ಮೂಲಕ ಅನೇಕ ರೀತಿಯ ರೋಗಾಣುಗಳು ಕೆಚ್ಚಲನ್ನು ಸೇರಿ ವೃದ್ಧಿಯಾಗಿ ಕೆಚ್ಚಲುಬಾವು ಬರುವುದು. ಸ್ಟ್ಯಾಫಿಲೊಕಾಕಸ್ ಸ್ಟ್ರಪ್ಟೊಕಾಕಸ್ ಪ್ಯಾಸ್ಚುರೆಲ್ಲ, ಕೊರಿನಿ ಬ್ಯಾಕ್ಟೀರಿಯಂ ಮುಂತಾದವು ಈ ರೋಗಕ್ಕೆ ಕಾರಣ. ಈ ಬೇನೆ ಕುರಿಸಾಕಣಿಗೆ ಒಂದು ಮಾರಕವಾಗಿದೆ. ಕೆಚ್ಚಲು ಊದಿ ಹಾಲು ರಕ್ತಮಯವಾಗುವುದು. ಕೆಚ್ಚಲಿನಲ್ಲಿ ಉರಿಯೂತ ಉಲ್ಬಣಿಸಿ ಕೊನೆಗೆ ಕೆಚ್ಚಲು ಒಣಗಿ ಹೋಗುವುದು. ಕುರಿಗಳು ಗರ್ಭಧರಿಸಿದ ಮೇಲೆ ಮೇಲೆ ಕಂದು ಹಾಕುವುದು ಸಾಮಾನ್ಯ. ಬ್ರುಸೆಲ್ಲ ವಿಬ್ರಿಯೊ ಮತ್ತು ಸಾಲ್ಮೊನೆಲ್ಲ ಎಂಬ ರೋಗಾಣುಗಳಿಂದ ಈ ರೋಗ ಬರುವುದು. ಅದರ ಫಲವಾಗಿ ಸಂತಾನಹರಣವಾಗುವುದು. ಲಿಸ್ಟಿರಿಯ ಮಾನೊಸೈಟೊಜೀನ್ಸ್ ಎಂಬ ರೋಗಾಣುವಿನಿಂದ ಪ್ರಧಾನವಾಗಿ ತಲೆತಿರುಗಿ ಬಂದು ಇತರ ರೋಗಲಕ್ಷಣಗಳಿಂದ ಕುರಿಗಳು ಸಾಯುವುವು. ಲೆಪ್ಟೊಸ್ಟೈರ ಎಂಬ ರೋಗಾಣು ಯಕೃತ್ತು, ಮೂತ್ರಪಿಂಡಗಳಲ್ಲಿ ರೋಗಛಾಯೆಯನ್ನು ಬರಿಸಿ ರಕ್ತರೋಗಮಯವಾಗಿ ಕುರಿಗಳು ಸಾಯುವುವು. ಮುಖ್ಯ ಕೆನ್ನೆ , ತುಟಿ, ಒಸಡುಗಳಲ್ಲಿ ವ್ರಣಗಳನ್ನು ಉಂಟುಮಾಡುವ ಆಕ್ಟಿನೊಬ್ಯಾಸಿಲಸ್ ಎಂಬ ರೋಗಾಣುವಿನಿಂದ ಕುರಿ ದೀರ್ಘಕಾಲ ನರಳಿ ಸಾಯುವುದು. ಕ್ಷಯರೋಗವೂ ಕುರಿಗಳಲ್ಲಿ ಕಾಣಿಸಿಕೊಳ್ಳುವುದುಂಟು. ಇದು ದೀರ್ಘಾವಧಿಯ ರೋಗ. ಯಕೃತ್ತು, ಮೂತ್ರಪಿಂಡ, ಗುಲ್ಮ, ಶ್ವಾಸಕೋಶ ಹಾಗೂ ದೇಹದ ಇತರ ಭಾಗಗಳಲ್ಲಿ ಕ್ಷಯದ ಗೆಡ್ಡೆಗಳಾಗಿ ಅದರಿಂದ ಸಾವು ಬರುವುದು ಎರಿಸೆಫೆಲೊತ್ರಿಕ್ಸ್ ಎಂಬ ರೋಗಾಣುವಿನಿಂದ ಕೀಲುಗಳಲ್ಲಿ ರೋಗುವುಂಟಾಗಿ ಸಂಧಿವಾತ ಬರುವುದು. ಕುರಿ ಕುಂಟುತ್ತ ನರಳುತ್ತ ಸಾಯುವುದು. ಈ ರೀತಿಯಾಗಿ ಬ್ಯಾಕ್ಟೀರಿಯಗಳು ವಿವಿಧರೀತಿಯ ರೋಗಗಳನ್ನು ತರುವುವು.

ಕುರಿಗಳಿಗೆ ಬರುವ ರೋಗಗಳು
ಕುರಿಗಳಲ್ಲಿ ಅನೇಕ ರೋಗಗಳು ಉಂಟಾಗುವುವು

ಬ್ಯಾಕ್ಟೀರಿಯಗಳಿಗಿಂತ ದೊಡ್ಡದಾದ ರಿಕೆಟ್‍ಸಿಯದಿಂದ ಕುರಿಗಳಲ್ಲಿ ಅನೇಕ ರೋಗಗಳು ಉಂಟಾಗುವುವು. ಸಾಂಕ್ರಾವಿಕ ಕಣ್ಣಿನ ಉರಿಯೂತ ತೀವ್ರತರವಾದ ರೋಗ. ಕಣ್ಣಿನ ಪೊರೆಯಲ್ಲಿ ಉರಿಯೂತವಾಗುವುದು. ಕುರಿ ಇರುವೆಡೆಯಲ್ಲಿ ಈ ರೋಗ ಕಂಡುಬರುವುದು. ಈ ರೋಗದಲ್ಲಿ ಕುರಿಯ ಕಣ್ಣು ಕೆಂಪಾಗಿ ಸದಾ ನೀರು ಹರಿಯುತ್ತಿರುವುದು. ಒಮ್ಮೊಮ್ಮೆ ಕುರುಡು ಸಂಭವಿಸುವುದು. ನೊಣಗಳು ರೋಗದ ಹರಡುವಿಕೆಗೆ ಕಾರಣ. ಕುರಿಗಳ ದೇಹದ ಮೇಲೆ ವಾಸಿಸುವ ಉಣ್ಣೆಗಳು ರಿಕೆಟ್‍ಸಿಯ ರೋಗಾಣುಗಳನ್ನು ಕುರಿಯ ದೇಹದೊಳಗೆ ಸೇರಿಸುವುದರಿಂದ ಉಣ್ಣೆಯ ಮೂಲಕ ಬರುವ ಜ್ವರ ಕ್ಯೂಜ್ವರ, ಎಪೆರಿಟ್ರೊಜೊವನ್ ಇತ್ಯಾದಿ ರೋಗಗಳು ಬರುವುವು. ಕುರಿಗಳು ಈ ಜ್ವರಗಳಿಂದ ನರಳಿ ಸಾಯುವುವು.

ಬ್ಯಾಕ್ಟೀರಿಯಗಳಿಗಿಂತ ಚಿಕ್ಕದಾಗಿರುವ ವೈರಸ್ ರೋಗಾಣುಗಳು ಕುರಿಗಳಲ್ಲಿ ಅನೇಕ ರೀತಿಯ ರೋಗಗಳನ್ನು ಉಂಟುಮಾಡುವುವು. ಅವುಗಳಲ್ಲಿ ಸಿಡುಬು, ಕಾಲುಬಾಯಿರೋಗ, ಸಾಂಕ್ರಾಮಿಕ ಚರ್ಮರೋಗ, ಸಿಡುಬುರೋಗ ಬಂದಾಗ ಚರ್ಮದ ಮೇಲೆ ದದ್ದು ಹಾಗೂ ವ್ರಣಗಳೇಳುವುವು. ಜ್ವರ ಬರುವುದು, ದೇಹದ ಒಳಗಡೆ ರೋಗದ ಛಾಯೆಯ ಫಲದಿಂದ ಜ್ವರವೂ ಇರುವುದು. ಇತರ ಕುರಿಗಳಿಗೆ ಬೇಗನೆ ಹರಡುವುದು, ಆದ್ದರಿಂದ ಇದು ಬಹಳ ಮಾರಕವಾದುದು ಕಾಲು ಮತ್ತು ಬಾಯಿ ರೋಗ ಕುರಿಗಳಲ್ಲೂ ಬರುವುದು. ಬಾಯಿಯಲ್ಲಿ ನಾಲಗೆಯ ಮೇಲೆ ವ್ರಣಗಳೇಳುವುವು. ಇದರಿಂದ ಎನನ್ನೂ ತಿನ್ನಲಾಗುವುದಿಲ್ಲ. ಕಾಲಿನ ಗಾಯಗಳು ಅಷ್ಟೇನೂ ಕಾಣಬರುವುದಿಲ್ಲ. ಜ್ವರದ ತಾಪದಿಂದ ಕುರಿಗಳು ಬಳಲುವುವು. ಇದರಂತೆ ಕುರಿಗಳ ತುಟಿಯ ಮೇಲೆ, ನಾಲಗೆಯ ಮೇಲೆ ಬೊಕ್ಕೆಗಳೇಳುವುವು. ಬಾಯಿ ಹಾಗೂ ಮೂಗಿನ ದ್ವಾರದ ಅದಿಬದಿಯಲ್ಲಯೂ ವ್ರಣಗಳೇಳುವುವು. ನೀಲಿನಾಲಗೆ ರೋಗ ಇತರ ದೇಶದ ಕುರಿಗಳಲ್ಲಿ ಸಾಮಾನ್ಯ. ಹಲವು ಕೀಟಗಳು ಈ ರೋಗವನ್ನು ಹರಡುವುವು. ನಾಲಗೆಯ ಮೇಲೆ ಸೂಕ್ಷ್ಮವಾಗಿ ವ್ರಣಗಳಾಗುವುವು. ಕುರಿಗಳು ಮಂಕಾಗಿ ಜೊಲ್ಲುಸುರಿಸಿ, ಮೂಗಿನ ಮೂಲಕ ದ್ರವ ಹರಿಸುವುವು. ತುಟಿಗಳು ಊದಿಕೊಳ್ಳುವುವು. ಬಾಯಿಯ ಮೃದುಪೊರೆ ಊದಿಕೊಳ್ಳುವುದಲ್ಲದೆ ಮುಖವನ್ನೆಲ್ಲ ವ್ಯಾಪಿಸಿಕೊಳ್ಳವುದು. ಹಸುಗಳಿಗೆ ಬರುವ ದೊಡ್ಡರೋಗ ಕುರಿಗಳಲ್ಲೂ ಬಂದು ಸಾವು ನೋವನ್ನುಂಟು ಮಾಡುವುದು. ಈ ರೋಗದ ವಿಷಾಣು ರಕ್ತದಲ್ಲಿ ಹಾಗೂ ದೇಹದಲ್ಲೆಲ್ಲ ಇರುತ್ತದೆ. ಸೋಂಕು ಪ್ರಾಣಿಯಿಂದ ಪ್ರಾಣಿಗೆ ತಗುಲಿ ರೋಗ ಹರಡುವುದು. ಕಣ್ಣುಮೂಗಿನಿಂದ ದ್ರವ ಹರಿಯುವುದಲ್ಲದೆ ಬಾಯಿಯಿಂದ ಅಪಾರವಾಗಿ ಜೊಲ್ಲು ಸುರಿಯುವುದು. ಕುರಿಗಳಿಗೆ ಹುಚ್ಚುರೋಗ ಸಹ ಬರುವುದು. ಈ ರೋಗಗಳಲ್ಲದೆ ವೈರಸ್‍ಗಳು ಮಿದುಳನ್ನು ಭೇದಿಸಿ ನರಮಂಡಲಕ್ಕೆ ವ್ಯಾಪಿಸಿ ಲೂಪಿಂಗ್ ಇಲ್, ಸ್ಕ್ರೇಪಿಸಿ, ರೈಡ್ ಬೋರ್ನ ಎಂಬ ರೋಗಗಳನ್ನು ತರುವುದು ಸಹ ಉಂಟು. ಈ ರೋಗವನ್ನು ತಡೆಯಲು ಚುಚ್ಚು ಮದ್ದು ಹಾಕಿಸಬೇಕು.

ಇನ್ನೂ ಹಲವು ಬಗೆಯ ರೋಗಗಳು ಕುರಿಗಳಿಗೆ ಬರುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಂಗ್ರಾಮ್ ಸಿಂಗ್

ಭಾರತೀಯ ಆಡಳಿತಗಾರ ಸಂಗ್ರಾಮ್ ಸಿಂಗ್

ತುಳಸಿ ಗಿಡ

ತುಳಸಿ ಗಿಡ