ಹೊಟ್ಟೆ ನೋವು ಹಲವಾರು ಕಾರಣಗಳಿಂದ ಬರುತ್ತದೆ. ಮಕ್ಕಳಿಗೆ, ಮಹಿಳೆಯರಿಗೆ, ದೊಡ್ಡವರಿಗೆ, ವಯಸ್ಸಾದವರಿಗೆ, ಆರೋಗ್ಯ ಸರಿ ಇಲ್ಲದೆ ಇರುವವರಿಗೆ ಒಂದೊಂದು ಬಗೆಯ ಹೊಟ್ಟೆ ನೋವು ಒಂದೊಂದು ರೀತಿಯಲ್ಲಿ ಕಂಡು ಬರುತ್ತದೆ. ಈ ಹೊಟ್ಟೆ ನೋವು ಯಾವಾಗ ಹೇಗೆ ಬರುತ್ತದೆ ಎಂಬುದನ್ನು ಊಹಿಸಲು ಬಹಳ ಕಷ್ಟ. ಹೊಟ್ಟೆನೋವು ಬಂದರೆ ಯಾವ ಕೆಲಸ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಯಾವಾಗ ಹೋಗುತ್ತದೋ ಎಂಬುದೊಂದೇ ಮೊದಲು ನಮ್ಮ ಮನಸ್ಸಿಗೆ ಬರುವುದು.
ಪುಟ್ಟ ಮಕ್ಕಳಿಗೆ ಹೊಕ್ಕಳಿನ ಭಾಗದಲ್ಲಿ ನೋವು ಬಂದು ಹೊಟ್ಟೆ ನೋವಿಗೆ ಕಾರಣವಾಗುತ್ತದೆ. ಮಹಿಳೆಯರಿಗೆ ಮುಟ್ಟಿನ ಪ್ರಭಾವದಿಂದ ಹೊಟ್ಟೆ ನೋವು ಬರುತ್ತದೆ. ಇದೇ ರೀತಿ ವಯಸ್ಸಾದವರಿಗೆ ಮಲಬದ್ಧತೆಯ ಕಾರಣದಿಂದ ಹೊಟ್ಟೆ ನೋವು ಬರುತ್ತದೆ.
ನಮ್ಮ ಮನೆಯಲ್ಲೇ ಬಳಸುವ ಸಾಮಾನ್ಯ ವಸ್ತುಗಳನ್ನು ಬಳಸಿ ನಮ್ಮ ರೋಗಗಳಿಗೆ ನಾವೇ ಚಿಕಿತ್ಸೆ ಪಡೆದುಕೊಳ್ಳಬಹುದು ಮತ್ತು ಆರೋಗ್ಯವಾಗಿವನ್ನು ಕಾಪಾಡಿಕೊಳ್ಳಬಹುದು.
ಓಂ ಕಾಳುಗಳು ನಿಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚು ಮಾಡುತ್ತವೆ. ಜಾಸ್ತಿ ಊಟ ಮಾಡಿ ಹೊಟ್ಟೆ ಭಾರ ಆಗಿದ್ದರೆ ಅದನ್ನು ಕಡಿಮೆ ಮಾಡಲು ಓಂ ಕಾಳುಗಳು ಸಹಾಯಕಾರಿಯಾಗಿದೆ.
ಒಂದು ಲೋಟ ನೀರನ್ನು ಒಲೆಯ ಮೇಲೆ ಇಟ್ಟು ಅದಕ್ಕೆ 1 ಟೀ ಚಮಚ ಓಂ ಕಾಳುಗಳನ್ನು ಹಾಕಿ ಸುಮಾರು ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ನಂತರ ಸೋಸಿಕೊಂಡು ಉಗುರು ಬೆಚ್ಚಗಿನ ತಾಪಮಾನಕ್ಕೆ ಬಂದ ಮೇಲೆ ಆರಿಸಿ ಕುಡಿಯಿರಿ. ಇದರಿಂದ ನಿಮ್ಮ ಅಜೀರ್ಣತೆ ಸಮಸ್ಯೆ ದೂರ ಆಗುವುದರ ಜೊತೆಗೆ ಹೊಟ್ಟೆ ನೋವು ಕೂಡ ಕಡಿಮೆಯಾಗುತ್ತದೆ.
ಕೊತ್ತಂಬರಿ (ದನಿಯಾ)ಬೀಜ ಮತ್ತು ಒಣಶುಂಠಿಯನ್ನು ಚೆನ್ನಾಗಿ ಜಜ್ಜಿಕೊಂಡು ಕುದಿಯುವ ನೀರಿಗೆ ಹಾಕಿ ಒಂದೆರಡು ನಿಮಿಷ ಒಲೆಯ ಮೇಲಿಟ್ಟು ನಂತರ ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಶೋಧಿಸಬೇಕು. ಈ ಕಷಾಯವನ್ನು ಕುಡಿದರೆ ಹೊಟ್ಟೆನೋವು ಮಾಯವಾಗುತ್ತದೆ.
ತುಳಸಿ ರಸ, ಬೆಳ್ಳುಳ್ಳಿ ರಸ ಹಾಗೂ ಜೇನುತಪ್ಪವನ್ನು ಸಮಭಾಗ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಿದರೆ ಹೊಟ್ಟೆಯಲ್ಲಿನ ಉರಿ ಕಡಿಮೆಯಾಗುತ್ತದೆ.
ಒಂದು ಲೋಟಕ್ಕೆ ಸ್ವಲ್ಪ ನಿಂಬೆ ರಸ, ಉಪ್ಪು ಹಾಗೂ ಅಡುಗೆ ಸೋಡ, ನೀರು ಹಾಕಿ ಕುಡಿಯುವುದರಿಂದ ಅಜೀರ್ಣಕ್ಕೆ ಬಂದ ಹೊಟ್ಟೆನೋವು ಹೋಗುತ್ತದೆ.
ಮಕ್ಕಳಲ್ಲಿ ಹೊಟ್ಟೆ ನೋವು ಬಂದರೆ, ಮಗುವಿಗೆ ಹೊಟ್ಟೆಯ ಭಾಗದಲ್ಲಿ ಇಂಗು ಪುಡಿ ನೀರಿನಲ್ಲಿ ಕಲಸಿ ಪೇಸ್ಟ್ ಮಾಡಿ ವೃತ್ತಾಕಾರದಲ್ಲಿ ಹೊಕ್ಕಳಿನ ಸುತ್ತಲೂ ಮಸಾಜ್ ಮಾಡುತ್ತಾರೆ. ಸಾಧಾರಣವಾಗಿ ಇದು ಕರುಳಿನ ಭಾಗದಲ್ಲಿ ಕಂಡುಬರುವ ನೋವು ಆಗಿರುತ್ತದೆ ಎಂದು ಹೇಳಬಹುದು. ಹಾಗಾಗಿ ಇಂಗು ಬಳಕೆಯಿಂದ ಪರಿಣಾಮಕಾರಿಯಾಗಿ ನೋವು ನಿವಾರಣೆ ಆಗುತ್ತದೆ.
ಸೇಬು, ಕ್ಯಾರೆಟ್ ಬೀಟ್ ರೂಟ್ ಜ್ಯೂಸ್ ಹಾಗೂ ನಾರು ಪದಾರ್ಥವಿರುವ ಆಹಾರ ಸೇವಿಸಿದರೆ ಹೊಟ್ಟೆ ಸಂಬಂಧ ಖಾಯಿಲೆಗಳು ಮಾಯವಾಗುತ್ತವೆ.
ಮುಟ್ಟಿನ ಕಾರಣದಿಂದ ಹೊಟ್ಟೆ ನೋವು ಅನುಭವಿಸುತ್ತಿರುವ ಮಹಿಳೆಯರಿಗೆ ಪರಂಗಿ ಹಣ್ಣಿನ ಜ್ಯೂಸ್ ಅತ್ಯಂತ ಪರಿಣಾಮಕಾರಿ. ಹೊಟ್ಟೆನೋವು ಬಂದ ಸಂದರ್ಭದಲ್ಲಿ ಪರಂಗಿಹಣ್ಣನ್ನು ಬೇಕಾದರೂ ತಿನ್ನಬಹುದು ಅಥವಾ ಪರಂಗಿ ಹಣ್ಣಿನ ಜೂಸ್ ಸಹ ಸೇವನೆ ಮಾಡಬಹುದು.
ಪರಂಗಿ ಹಣ್ಣಿನಲ್ಲಿ ಪಪ್ಪಾಯಿನ್ ಎಂಬ ಅಂಶ ಇರುವ ಕಾರಣ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರ ದೇಹದಲ್ಲಿ ಅಚ್ಚುಕಟ್ಟಾದ ರಕ್ತಸಂಚಾರಕ್ಕೆ ಇದು ಅನುವುಮಾಡಿಕೊಡುತ್ತದೆ. ಇದರಿಂದ ಹೊಟ್ಟೆ ನೋವಿನ ಸಮಸ್ಯೆ ಶೀಘ್ರವೇ ಪರಿಹಾರವಾಗಲಿದೆ.
ಸಾಮಾನ್ಯವಾಗಿ ಕಿಬ್ಬೊಟ್ಟೆಯ ನೋವು ಬಂದಾಗ ಅಥವಾ ಮಲಬದ್ಧತೆಯ ಕಾರಣದಿಂದ ಹೊಟ್ಟೆನೋವು ಬಂದಿದ್ದರೆ 1 ಟೇಬಲ್ ಚಮಚ ಜೀರಿಗೆ ಕಾಳುಗಳನ್ನು ಚೆನ್ನಾಗಿ ಹುರಿದು ಪುಡಿ ಮಾಡಿಕೊಂಡು ಸಕ್ಕರೆ ಹಾಲು ಹಾಕದೆ ಕೇವಲ ನೀರಿನಲ್ಲಿ ಚಹಾ ತಯಾರು ಮಾಡಿಕೊಂಡು ಕುಡಿದರೆ ಹೊಟ್ಟೆ ನೋವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.
ಅತಿ ಹೆಚ್ಚು ಆಮ್ಲೀಯತೆಯ ಕಾರಣ ಹೊಟ್ಟೆ ನೋವು ಕಂಡುಬಂದರೆ ಚೆನ್ನಾಗಿ ಕಾಯಿಸಿ ಆರಿಸಿದ ಹಾಲಿಗೆ ಸ್ವಲ್ಪ ನೀರು ಬೆರೆಸಿ ಹಾಲು ತಂಪಾಗಿರುವ ಸಂದರ್ಭದಲ್ಲಿ ಸೇವನೆ ಮಾಡಿದರೆ ಹೊಟ್ಟೆ ನೋವು ಬಹಳ ಬೇಗನೆ ಪರಿಹಾರವಾಗುತ್ತದೆ.
7-8 ಚಮಚ ನೀರಿಗೆ ಉಪ್ಪು ಮಿಶ್ರಿತ ಬೆಳ್ಳುಳ್ಳಿ ರಸವನ್ನು ಮಿಶ್ರಣ ಮಾಡಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ನೋವು ಶಮನಗೊಳ್ಳುತ್ತದೆ.
ಹೊಟ್ಟೆಯಲ್ಲಿ ಹುಳುಗಳ ಕಾರಣದಿಂದ ಹೊಟ್ಟೆ ನೋವು ಕಂಡು ಬಂದರೆ ಅತ್ಯಂತ ಪರಿಣಾಮಕಾರಿಯಾಗಿ ದಾಳಿಂಬೆ ಹಣ್ಣಿನ ಸಿಪ್ಪೆಯಿಂದ ಹೊಟ್ಟೆ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು.
ಒಂದು ಚಮಚ ಸೋಂಪು, ನಿಂಬೆ ರಸ ಹಾಗೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನಪುಡಿಯನ್ನು ಬೆಚ್ಚಗಿನ ನೀರಿಗೆ ಹಾಕಿ ಕುಡಿಯುವುದರಿಂದ ಹೊಟ್ಟೆನೋವು ಶೀಘ್ರದಲ್ಲಿಯೇ ಶಮನಗೊಳ್ಳುತ್ತದೆ.
ಹೊಟ್ಟೆನೋವು ಬಂದ ಸಂದರ್ಭದಲ್ಲಿ ಅರ್ಧ ಇಂಚು ಶುಂಠಿಯನ್ನು ತೆಗೆದುಕೊಂಡು ಅದರ ಮೇಲ್ಭಾಗದ ಸಿಪ್ಪೆ ತೆಗೆದು, ಶುಂಠಿಯನ್ನು ಚೆನ್ನಾಗಿ ಜಜ್ಜಿ ರಸತೆಗೆದು ಅದಕ್ಕೆ ಸ್ವಲ್ಪ ನೀರು ಮಿಶ್ರಣ ಮಾಡಿ ಸೇವಿಸಿದರೆ ತಕ್ಷಣವೇ ಹೊಟ್ಟೆ ನೋವಿನ ಪರಿಹಾರ ಆಗುತ್ತದೆ.
ನಿಂಬೆರಸಕ್ಕೆ ಸ್ವಲ್ಪ ಪುದೀನಾ ರಸ, ಶುಂಠಿ ರಸ ಹಾಗೂ ಸ್ವಲ್ಪ ಮೆಣಸುಪುಡಿ ಹಾಕಿ ಕುಡಿಯುವುದರಿಂದ ಹೊಟ್ಟೆನೋವು ಶಮನಗೊಳ್ಳುತ್ತದೆ.
ಧನ್ಯವಾದಗಳು.
GIPHY App Key not set. Please check settings