ಅಳಲೆ ಕಾಯಿ ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುವ ಸಸ್ಯ. ಅದೇ ವೈಜ್ಞಾನಿಕವಾಗಿ, “ಟರ್ಮಿನಲಿಯ ಚೇಬುಲ” ವೆಂದು ಕರೆಯಲ್ಪಡುವ ಈ ಸಸ್ಯ ಪ್ರಭೇದ, ‘ಕಾಂಬ್ರೆಟೇಸಿ’ ವೆಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಅಡುಗೆಮನೆಯ ವೈದ್ಯೆ ಎಂದು ಹೆಸರಾದ ಸಕಲರೋಗಗಳಿಗೂ ಬಳಸಬಹುದಾದ, ನಿರುಪದ್ರವಿ ಅಳಲೆ ಕಾಯಿ (ಹರೀತಕಿ-ಸಂಸ್ಕೃತ) ನಮ್ಮಲ್ಲೆರ ಅಡುಗೆ ಮನೆಯ ವೈದ್ಯನಾಗಿ ಹಲವಾರು ಶತಮಾನಗಳಿಂದ ಬಳಕೆಯಲ್ಲಿದೆ. ತೊಟ್ಟಿಲಿನಲ್ಲಿ ಮಲಗಿರುವ ಕಂದನಿಂದ ಆದಿಯಾಗಿ ವಯೋಮಾನದ ಮನೆಯ ಸದಸ್ಯರಿಗೂ, ಎಲ್ಲಾ ವಿಧದ ಜಡ್ಡಿಗೂ ಅಳಲೆ ಕಾಯಿಯೇ ಮದ್ದು.
ಆಯುರ್ವೇದ ಶಾಸ್ತ್ರದಲ್ಲಿ ಔಷಧಿಗಳ ರಾಜನೆಂದೇ ಹೆಸರುವಾಸಿಯಾದ ಸಸ್ಯ. ಕರ್ನಾಟಕದ ಮನೆಮನೆಗಳಲ್ಲಿ ಜನಜನಿತವಾಗಿರುವ ‘ಅಳಲೆಕಾಯಿ’ ಭಾರತದಾದ್ಯಂತ ಕಂಡುಬರುತ್ತದೆ. ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ ಇದಾಗಿದೆ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ. ದೊಡ್ಡ ಮರವಾಗಿ ಬೆಳೆಯುವ ವೃಕ್ಷವಾಗಿದೆ. ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಇದು 10ರಿಂದ 15 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು. ಇದು ಚಿಕಿತ್ಸೆಗೂ ಕೂಡಾ ಸಹಕಾರಿಯಾಗಿದೆ.

ಸಂಸ್ಕೃತದಲ್ಲಿ ‘ಹರೀತಕೀ’ ಎಂದು ಕರೆಯಲ್ಪಡುವ ಅಳಲೇಕಾಯಿಯ ಬಗ್ಗೆ ೧೮ನೇ ಶತಮಾನದಲ್ಲಿ ವಿರಚಿತವಾದ ರಾಜವಲ್ಲಭ ನಿಘಂಟು ಎಂಬ ಆಯುರ್ವೇದೀಯ ಆಕರಗ್ರಂಥದಲ್ಲಿ ಹೀಗೆ ಪ್ರಶಂಸಾತ್ಮಕವಾಗಿ ಒಕ್ಕಣಿಸಲಾಗಿದೆ:
ಯಸ್ಯ ಮಾತಾ ಗೃಹೇ ನಾಸ್ತಿ ತಸ್ಯ ಮಾತಾ ಹರೀತಕೀ |
ಕದಾಚಿತ್ಕುಪ್ಯತೇ ಮಾತಾ ನೋದರಸ್ಥಾ ಹರೀತಕೀ ||
ಯಾರಿಗೆ ಮನೆಯಲ್ಲಿ ತಾಯಿಯಿಲ್ಲವೋ ಅವರಿಗೆ ಹರೀತಕಿಯೇ ತಾಯಿಯು; ತಾಯಿಯಾದರೂ ಒಮ್ಮೊಮ್ಮೆ ಕೋಪಮಾಡಿಕೊಳ್ಳುತ್ತಾಳೆ, ಆದರೆ ಹೊಟ್ಟೆಯಲ್ಲಿರುವ ಹರೀತಕಿಯು ಎಂದೂ ಹಾಗೆ ಕೋಪಗೊಳ್ಳುವುದಿಲ್ಲ.
‘ಆಯುರ್ವೇದ ಶಾಸ್ತ್ರ’ಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತ, ಪಿತ್ತ, ಕಫಗಳ ಸಮಸ್ಯೆಗಳನ್ನು ನಿವಾರಿಸುವ ಪರಮ ಮದ್ದಾಗಿ ಬಳಕೆಯಲ್ಲಿ ಇದೆ. ನೆಗಡಿ, ಕೆಮ್ಮು, ಜ್ವರ ಮುಂತಾದ ಸಾಮಾನ್ಯ ಜಡ್ಡುಗಳಿಂದ ಹಿಡಿದು, ಕಾಮಾಲೆ, ಅಸ್ತಮಾ, ಮೂಲವ್ಯಾಧಿ, ಮತ್ತು ಹೃದ್ರೋಗದಂತಹ ಗಂಭೀರ ಬೇನೆಗಳಿಗೆ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯೆಂದು ಬಳಕೆಯಲ್ಲಿತ್ತು. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಉಪಶಮನ ಮಾಡಲಾಗುತ್ತಿತ್ತು. ಬಹುತೇಕ ಚರ್ಮರೋಗಗಳಾದ, ಬ್ಯಾಕ್ಟೀರಿಯಾ ಮತ್ತು ಫಂಗಸ್ ಗಳಂತಹ ರೋಗಾಣುಗಳನ್ನು ನಿಯಂತ್ರಿಸಲು ಅಳಲೆ ಕಾಯಿ ಹೇಳಿಮಾಡಿಸಿದ ವೈದ್ಯ ಪದ್ಧತಿಯಾಗಿತ್ತು.
ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ, ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳಿಗೆ ರಾಮಬಾಣ.
ಜೀರ್ಣಶಕ್ತಿಯನ್ನು ವ್ರದ್ದಿಸಲು ಮಲಬದ್ಧತೆಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ.
ಎಲ್ಲಾ ಪ್ರಕಾರದ ಕಣ್ಣುಗಳ ಬೇನೆಗೂ,ಅಳಲೆ ಕಾಯಿ ಉಪಯೋಗಕಾರಿಯಾಗಿದೆ.
ಪ್ರತಿದಿನ ಮುಂಜಾನೆ ಅಳಲೆ ಕಾಯಿ ಕಷಾಯವನ್ನು ಕುಡಿಯುವುದರಿಂದ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ.
ಲೈಂಗಿಕ ತೊಂದರೆ ಹಾಗೂ ನರದೌರ್ಬಲ್ಯಕ್ಕೆ ಮದ್ದು.
ಗರ್ಭಿಣಿಯರು ಅಳಲೆ ಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವನೆಯಿಂದ ಗರ್ಭಪಾತದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು, ಚೆನ್ನಾಗಿ ಬಲಿತಿರುವ ಹಾಗೂ ದಪ್ಪವಾದ ಅಳಲೆ ಕಾಯನ್ನು ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು ಕಡಿಮೆಯಾಗುತ್ತದೆ.
ಇಂದಿಗೂ ಮನೆಯಲ್ಲಿ ಕೆಲವು ಹಳೆಯಕಾಲದ ವೈದ್ಯರನ್ನು ಅಳಲೆ ಕಾಯಿ ಪಂಡಿತರೆಂದು ಕರೆಯುವುದುಂಟು. ಏಕೆಂದರೆ, ವಿಪುಲವಾದ ಶಕ್ತಿಯನ್ನು ಹೊಂದಿದ ಅಳಲೆ ಕಾಯಿಯನ್ನು ಅವರು, ಚೂರ್ಣಮಾಡಿ, ತಮಗೆ ತಿಳಿದ ಹಾಗೂ ತಿಳಿಯದ ಕಾಯಿಲೆಗಳಿಗೂ ಮದ್ದಾಗಿ ಬಳಸುತ್ತಿದ್ದರಿಂದ. ಇದರ ಸೇವನೆಯಿಂದ ದುಷ್ಪರಿಣಾಮವಿಲ್ಲದಿರುವುದು ಇದರ ವೈಶಿಷ್ಟ್ಯ.
ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ 10-10 ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿಮಾಡಿ ಶೇಖರಿಸುವುದು. 10 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ 2 ಗ್ರಾಂ ಯವಕ್ಷಾರವನ್ನು ಸೇರಿಸಿ ಸೇವಿಸುವುದರಿಂದಾಗಿ ಮೂಲದ ಮೊಳೆಗಳು ನಿಧಾನವಾಗಿ ಕರಗಿ ಹೋಗುವುದು ಮತ್ತು ರಕ್ತಸ್ರಾವ, ಉರಿ ಶಮನವಾಗುವುದು.

ತಲೆನೋವು
ತ್ರಿಫಲ ಚೂರ್ಣ, ಶುಂಠಿ, ದನಿಯ ಮತ್ತು ವಾಯು ವಿಳಂಗಗಳ ಸಮತೂಕದ ಚೂರ್ಣ ಮಾಡುವುದು. ಇದರಲ್ಲಿ 20 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯವನ್ನು ಅರ್ಧಭಾಗ ಕೆಳಗಿಳಿಸಿ ತಣ್ಣಗಾದ ಮೇಲೆ ದಿವಸಕ್ಕೆ ಎರಡುಬಾರಿ ಸೇವಿಸುವುದು.
ಕಣ್ಣುಗಳ ಮುಂದೆ ಕತ್ತಲೆ ಹಾಯುವುದು
10 ಗ್ರಾಂ ತ್ರಿಫಲ ಚೂರ್ಣವನ್ನು ( ಅಳಲೆಕಾಯಿ ಸಿಪ್ಪೆ, ನೆಲ್ಲಿ ಚೆಟ್ಟು, ಮತ್ತು ತಾರೆಕಾಯಿ) ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೆಳಗ್ಗೆ ಸೇವಿಸುವುದರಿಂದ ಕಣ್ಣುಗಳ ಮುಂದೆ ಕತ್ತಲೆ ಹಾಯುವುದು ಕಡಿಮೆಯಾಗುತ್ತದೆ.
ದಾಹ ಜ್ವರ, ಶೋಭೆ
ಬೇವಿನ ತೊಗಟೆಯ ಒಳನಾರು, ಮರದರಸಿನ ಮತ್ತು ತ್ರಫಲೆ ಚೂರ್ಣವನ್ನು ಚೆನ್ನಾಗಿ ಕಲ್ಪತ್ತಿನಲ್ಲಿ ಅರೆದು ನೀರಿಗೆ ಹಾಕಿ ಚತುರಾಂಷ ಕಷಾಯ ಮಾಡುವುದು. ಈ ಕಷಾಯಕ್ಕೆ ಶುದ್ಧಿ ಮಾಡಿದ ಮಹಿಷಾಸುರ ಗುಗ್ಗಲು ಮತ್ತು ಒಂದು ಬೆಳ್ಳಿಯ ವರಕು ಸೇರಿಸಿ ಸೇವಿಸುವುದು.
ಪಿತ್ತದ ಕೆಮ್ಮು
ಜ್ಯೇಷ್ಟಮಧು, ಅಳಲೆಕಾಯಿ, ನೆಲ್ಲಿಚೆಟ್ಟು ಸಮಭಾಗ ಚೂರ್ಣಿಸಿ ಹೊತ್ತಿಗೆ ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಟೀ ಚಮಚ ಸಕ್ಕರೆ ಪುಡಿ ಸೇರಿಸಿ ಹಾಲಿನಲ್ಲಿ ಹಾಕಿ ಸೇವಿಸುವುದರಿಂದ ಪಿತ್ತದ ಕೆಮ್ಮು ಗುಣವಾಗುತ್ತದೆ.
ಸ್ತ್ರೀಯರ ಶ್ವೇತ ಪ್ರದರದಲ್ಲಿ
10 ಗ್ರಾಂ ಅಳಲೆಕಾಯಿಯ ಒಳಗಡೆಯ ಬೀಜಗಳನ್ನು ನುಣ್ಣಗೆ ಚೂರ್ಣಿಸಿ ಸಮಭಾಗದ ಕಲ್ಲು ಸಕ್ಕರೆ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಕಾಯಿಲೆ ಗುಣಮುಖವಾಗುತ್ತದೆ.
ಕಿರುನಾಲಿಗೆ ಬೀಳುವುದು
ಅಳಲೆಕಾಯಿ ಸಿಪ್ಪೆಯ ವಸ್ತ್ರಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುವುದರಿಂದ ಈ ಕಾಯಲೆ ಗುಣಮುಖವಾಗುತ್ತದೆ.
ಗುಲ್ಮ ಮತ್ತು ಹೊಟ್ಟೆಯೊಳಗಡೆ ಗಂಟುಗಳು
ಅಳಲೆಕಾಯಿ ಸಿಪ್ಪೆಯ ನಯವಾದ ಚೂರ್ಣವನ್ನು 10 ಗ್ರಾಂ ಒಂದು ಬಟ್ಟಲು ಕಬ್ಬಿನ ರಸದಲ್ಲಿ ಕದಡಿ ದಿವಸಕ್ಕೆರಡು ವೇಳೆ ಸೇವಿಸುವುದು.
ಮೂತ್ರ ತಡೆ ಮತ್ತು ಮೂತ್ರದಲ್ಲಿ ಕಲ್ಲು
ಕಕ್ಕೆಯ ತಿರುಳು, ಕುರಿಟಿಗನ ಬೇರು, ಅಳಲೆಕಾಯಿ ಸಿಪ್ಪೆ, ಪಾಷಾಣ ಬೇಧಿ, ನೆಗ್ಗಿಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಎಂಟು ಬಟ್ಟಲು ನೀರಿಗೆ ಹಾಕಿ ಕಾಯಿಸಿ ಒಂದು ಬಟ್ಟಲು ಕಷಾಯ ಮಾಡಿಕೊಳ್ಳುವುದು ಹಾಗೂ ದಿವಸಕ್ಕೆ ಎರಡು ಟೀ ಚಮಚ ಸೇವಿಸುವುದು.
ಪ್ರಯಾಣದಲ್ಲಿ ಪರ ಊರುಗಳ ನೀರು ಕುಡಿಯುವುದರಿಂದ ಆಗುವ ದೋಷಗಳಿಗೆ
ಅಳಲೆಕಾಯಿ ಸಿಪ್ಪೆ, ಶುಂಠಿ, ಮತ್ತು ಜೀರಿಗೆಯ ಸಮತೂಕ ಅರೆದು ವಸ್ತ್ರಗಾಳಿತ ಪುಡಿ ಮಾಡುವುದು. ಪ್ರಯಾಣದಲ್ಲಿ ಕಾಲು ಚಮಚ ಪುಡಿಯನ್ನು ಜೇನಿನೊಂದಿಗೆ ಸೇರಿಸಿ ನೆಕ್ಕುವುದು.
ಧನ್ಯವಾದಗಳು.
GIPHY App Key not set. Please check settings