in , ,

ಬದನೆ ಕಾಯಿ ಬೆಳೆ

ಬದನೆ ಕಾಯಿ ಬೆಳೆ
ಬದನೆ ಕಾಯಿ ಬೆಳೆ

ಬದನೆ ಸೊಲನೆಸ ಕುಟುಂಬಕ್ಕೆ ಸೇರಿರುವ ಒಂದು ಜನಪ್ರಿಯ ತರಕಾರಿ ಸಸ್ಯ, ಬ್ರಿಂಜಾಲ್, ಎಗ್‍ಪ್ಲಾಂಟ್. ಈ ಗಿಡದ ಹಣ್ಣು – ಬದನೆಕಾಯಿ, ಒಂದು ಸಾಮಾನ್ಯ ಉಪಯೋಗದಲ್ಲಿರುವ ತರಕಾರಿ. ಇದು ಮೂಲತಃ ಭಾರತ ಮತ್ತು ಶ್ರೀ ಲಂಕಾಗಳ ಸಸ್ಯ.

ಸೊಲೇನಮ್ ಮೆಲೊಂಜಿನ ಇದರ ಶಾಸ್ತ್ರೀಯ ಹೆಸರು. ಸುಮಾರು 1-2.5 ಮೀ. ಎತ್ತರ ಬೆಳೆಯುವ ಏಕವಾರ್ಷಿಕ ಪೊದೆ ಸಸ್ಯ. ಇದರ ಕಾಂಡ ಬಹುವಾಗಿ ಕವಲೊಡೆದು ನೇರವಾಗಿ ಬೆಳೆಯುತ್ತದೆ. ಎಳೆಯ ಕಾಂಡದ ಮೇಲೆ ನಯವಾದ ಬಿಳಿಯಪುಡಿಯಂಥ ರೋಮಗಳಿರುವುವು. ಎಲೆ ಸರಳಮಾದರಿಯವು. ಹೂಗಳು ಸೈಮೋಸ್ ಮಾದರಿಯ ಮಂಜರಿಗಳಲ್ಲಿ ಎಲೆಗಳ ಕಕ್ಷಗಳಲ್ಲೊ ರೆಂಬೆಗಳ ತುದಿಗಳಲ್ಲೊ ಸಮಾವೇಶಗೊಂಡಿರುವುವು. ಕೆಲವು ಬಗೆಗಳಲ್ಲಿ ಒಂಟಿಹೂಗಳಿರುವುದೂ ಉಂಟು. ಪ್ರತಿಹೂವಿನಲ್ಲಿ 5 ಪುಷ್ಪಪತ್ರಗಳು. 5 ದಳಗಳು, 5 ಕೇಸರಗಳು ಹಾಗೂ ಎರಡು ಕಾರ್ಪೆಲುಗಳಿಂದ ರಚಿತವಾಗಿರುವ ಉಚ್ಚಸ್ಥಾನದ ಅಂಡಾಶಯ ಇವೆ. ದಳ ಹಾಗೂ ಪುಷ್ಪಪತ್ರಗಳು ಸಂಯುಕ್ತ ಮಾದರಿಯವು. ಕೇಸರ ದಂಡಗಳು ದಳಸಮೂಹದ ಗಂಟಲಿಗೆ ಅಂಟಿರುವವು ಫಲ ಬೆರಿ ರೀತಿಯದು.

ಬದನೆ ಸಸ್ಯದ ತವರು ಭಾರತ ಮತ್ತು ಚೀನ ಎನ್ನಲಾಗಿದೆ. ಚೀನದಲ್ಲಿ 1500 ವರ್ಷಗಳ ಹಿಂದಿನಿಂದಲೂ ಬೇಸಾಯದಲ್ಲಿತ್ತು. ಅರಬ್ ವ್ಯಾಪಾರಿಗಳು ಬದನೆಯನ್ನು ಇರಾನ್, ಈಜಿಪ್ಟ್‍ಗಳಿಗೂ ಅಲ್ಲಿಂದ ಆಫ್ರಿಕಕ್ಕೂ ಕೊಂಡೊಯ್ದರು.

ಬದನೆಕಾಯಿಯ ಬಣ್ಣ ಮತ್ತು ಆಕಾರವನ್ನು ಅವಲಂಬಿಸಿ ಬದನೆ ತಳಿಗಳ ವಿಂಗಡಣೆ ಆಗಿದೆ. ಅಂತೆಯೇ ಸಸ್ಯಗಳಲ್ಲಿ ಮುಳ್ಳು ಇರುವುದು ಅಥವಾ ಇಲ್ಲದೆ ಇರುವುದು. ಒಂಟಿ ಅಥವಾ ಗುಂಪಾಗಿ ಕಾಯಿ ಬಿಡುವುದನ್ನು ಗಣನೆಗೆ ತೆಗೆದುಕೊಳ್ಳುವುದೂ ಉಂಟು. ಬಣ್ಣದ ಪ್ರಕಾರ ಬಳಿ, ಹಳದಿ, ಕಂದು, ಹಸುರು, ಕಪ್ಪು, ಕೆನೆಗೆಂಪು, ಊದಾ ಮುಂತಾದ ತಳಿಗಳು ಬೇಸಾಯದಲ್ಲಿವೆ. ಆಕಾರಕ್ಕೆ ಅನುಗಣವಾಗಿ ಗುಂಡು, ಉದ್ದ ಎಂದೂ ಗುಂಪು ಅಥವಾ ಒಂಟಿ ಕಾಯಿಗಳಿಗೆ ಅನುಗುಣವಾಗಿ ಗ್ರೀನ್ ಲಾಂಗ್‍ಕ್ಲಸ್ಟರ್, ಗ್ರೀನ್ ಕ್ಲಸ್ಟರ್, ಕೆಂಗೇರಿ ಪರ್ಪಲ್, ವೈನಾಡ್ ಜಯಂಟ್ ಎಂದೂ ಮುಳ್ಳು ಇಲ್ಲದ ತಳಿಗಳು ಅಮೆರಿಕನ್ ಬ್ಲಾಕ್‍ಬ್ಯೂಟಿ, ನ್ಯೂಯಾರ್ಕ್ ಜಯಂಟ್, ಪೂಸಾಪರ್ಪಲ್ ಲಾಂಗ್, ಪೂಸಾಪರ್ಪಲ್ ರೌಂಡ್ ಹಾಗೂ ಮುಳ್ಳಿರುವ ತಳಿಗಳು ಎಂದೂ ತಳಿವಿಂಗಡಣೆ ಉಂಟು.

ಬದನೆ ಕಾಯಿ ಬೆಳೆ
ಬದನೆಕಾಯಿ ಗಿಡ

ಬದನೆ ಉಷ್ಣವಲಯದ ಬೆಳೆ. ಇದು ಹಿಮವನ್ನು ಸಹಿಸುವುದಿಲ್ಲ. ಹೆಚ್ಚು ಉಷ್ಣೆತೆಯಿರುವ ದೀರ್ಘಾವಧಿ ದಿವಸಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಬದನೆ ಬೀಜ ಮೊಳೆಯಲು ಸುಮಾರು 250 ಸೆ. ಉಷ್ಣತೆ ಉತ್ತಮ. ಭಾರತದಲ್ಲಿ ಎಲ್ಲ ಹವಾಗುಣಗಳಲ್ಲಿ ಇದರ ಬೇಸಾಯವಿದೆ.

ಬದನೆಯನ್ನು ವಿವಿಧ ಮಣ್ಣುಗಳಲ್ಲಿ ಬೆಳೆಸಬಹುದು. ಆದರೆ ಇದು ಯಾವುದೇ ಹಂತದಲ್ಲಿ ಜೌಗನ್ನು ಸಹಿಸುವುದಿಲ್ಲ. ರವೆಗೋಡು ಮಣ್ಣಿನಲ್ಲಿ ಉತ್ಕ್ರಷ್ಟವಾಗಿ ಬೆಳೆಯುತ್ತದೆ. ಮರಳುಗೋಡು ಮಣ್ಣಿನಲ್ಲಿ ಸಹ ಇದನ್ನು ಯಶಸ್ವಿಯಾಗಿ ಬೆಳೆಯಬಹುದು.

ಬದನೆಯನ್ನು ಮೆಣಸಿನಕಾಯಿ, ಈರುಳ್ಳಿ ಮತ್ತು ಸೊಪ್ಪು ಇತ್ಯಾದಿಗಳೊಂದಿಗೆ ಮಿಶ್ರಬೆಳೆಯಾಗಿ ಬೆಳೆಯುವುದು ರೂಢಿಯಲ್ಲಿದೆ.

ಬದನೆಯ ಬಿತ್ತನೆಬೀಜ ಪ್ರಮಾಣ ಬೀಜದ ಗಾತ್ರ ಮತ್ತು ತೂಕ ಅನುಸರಿಸಿ ಹೆಕ್ಟೇರಿಗೆ 250 ರಿಂದ 500 ಗ್ರಾಮ್ ವರೆಗೆ ಬೇಕಾಗುತ್ತದೆ. ಬೀಜದ ಮೊಳೆಯುವ ಸಾಮರ್ಥ್ಯ 75-80%. ಬೀಜಗಳಿಗೆ ಸುಪ್ತಾವಸ್ಥೆ ಇಲ್ಲ. ಮೊಳೆಯುವ ಸಾಮರ್ಥ್ಯ ಸುಮಾರು ಮೂರು ವರ್ಷ ಪರ್ಯಂತ ಇರುತ್ತದೆ.

ಬದನೆ ಬೀಜವನ್ನು ಒಟ್ಲುಪಾತಿಯಲ್ಲಿ ಚೆಲ್ಲಿ ಸಸಿಗಳನ್ನು ಬೆಳೆಸಿ ಅನಂತರ ತೋಟದಲ್ಲಿ ನಾಟಿ ಮಾಡುವುದು ಪದ್ಧತಿ. ಶೀಘ್ರವಾಗಿ ಮತ್ತು ಸಮೃದ್ಧಿಯಾಗಿ ಸಸಿಗಳು ಹುಟ್ಟುವಂತೆ ಎತ್ತರಿಸಿದ ಒಟ್ಲುಪಾತಿಗಳಲ್ಲಿ ಬೀಜಬಿತ್ತುವುದೇ ರೂಢಿ. ಬಿತ್ತಿದ ಒಂದು ವಾರದಲ್ಲಿ ಬೀಜಗಳು ಮೊಳೆಯುತ್ತವೆ. ಚೆನ್ನಾಗಿ ಆರೈಕೆ ಮಾಡಿದರೆ ಸಸಿಗಳನ್ನು ಸುಮಾರು 6 ವಾರಗಳ ಅನಂತರ ತೋಟದಲ್ಲಿ ನಾಟಿಮಾಡಬಹುದು.

ಬದನೆ ಇತರ ತರಕಾರಿಗಳಿಗಿಂತ ಹೆಚ್ಚು ಆಳವಾಗಿ ಬೇರು ಬಿಡುವುದರಿಂದ ಭೂಮಿಯನ್ನು ಹೆಚ್ಚು ಆಳವಾಗಿ ಉಳುಮೆ ಮಾಡಬೇಕು.

ಬದನೆಯನ್ನು ಸಾಲು ಮತ್ತು ಗುಂಡಿ ಎಂಬ ಎರಡು ವಿಧಾನದಲ್ಲಿ ನೆಡಬಹುದು. ಸಾಲಾಗಿ ನೆಡುವುದರಲ್ಲಿ ಎರಡು ವಿಧಾನಗಳಿವೆ. ಮೊದಲನೆಯದು ಒಂಟಿ ವಿಧಾನ. ಈ ವಿಧಾನದಲ್ಲಿ ಸಾಲಿನಿಂದ ಸಾಲಿಗೆ 1 ಮೀಟರ್, ಸಸ್ಯದಿಂದ ಸಸ್ಯಕ್ಕೆ 0.3 ಮೀ. ಅಂತರ ಕೊಡಲಾಗುತ್ತದೆ. ಎರಡನೆಯದು ಎರಡು ಸಾಲು ವಿಧಾನ. ಎರಡು ಸಾಲುಗಳಿಗೆ 5 ಮೀಟರ್ ಅಂತರವಿದ್ದು ಪಕ್ಕ ಪಕ್ಕದ ಸಾಲುಗಳಿಗೆ 1 ಮೀಟರ್ ಅಂತರವಿರುತ್ತದೆ. ಗುಂಡಿ ವಿಧಾನದಲ್ಲಿ 1 ಮೀಟರ್ ಅಂತರದಲ್ಲಿ ಅಗಲವಾದ ಗುಂಡಿಗಳನ್ನು ತೆಗೆದು ಪ್ರತಿ ಗುಂಡಿಯಲ್ಲಿ 0.5 ಮೀಟರಿಗೆ ಒಂದರಂತೆ ನಾಲ್ಕು ಐದು ಬದನೆ ಸಸಿಗಳನ್ನು ನೆಡಬಹುದು.

ಬದನೆಗೆ ನೀರಾವರಿ ಮಾಡುವುದು ಕಾಲ ಮತ್ತು ತಳಿಗಳನ್ನು ಅನುಸರಿಸುತ್ತದೆ. ಬೇಸಿಗೆ ಕಾಲದಲ್ಲಿ ಬೆಳೆದ ಬದನೆಗೆ ದಿನ ಬಿಟ್ಟು ದಿನ ನೀರು ಹಾಯಿಸಲಾಗುತ್ತದೆ.

ಬದನೆ ಬೆಳೆಗೆ ಸೀಮೆಗೊಬ್ಬರ ಹಾಕುವುದು ಮಣ್ಣಿನಲ್ಲಿರುವ ಪೋಷಕಗಳನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಹೆಕ್ಟೇರಿಗೆ 100 ಕೆಜಿ ಸಾರಜನಕ 50 ಕೆಜಿ ರಂಜಕ ಮತ್ತು 50 ಕೆಜಿ ಪೊಟ್ಯಾಷ್ ಬಳಸುವುದು ವಾಡಿಕೆ.

ನಾಟಿ ಮಾಡಿದ ಎರಡು ತಿಂಗಳ ಅನಂತರ ಹೂ ಅರಳುವಿಕೆ ಆರಂಭ. ಹೂ ಬಿಟ್ಟು 2-3 ವಾರಗಳಲ್ಲಿ ಹೀಚು ಕಾಣಿಸಿಕೊಂಡು ತರುವಾಯ ಕಾಯಾಗುತ್ತದೆ. ಅಂದರೆ ನಾಟಿ ಮಾಡಿದ ಎರಡೂವರೆ ತಿಂಗಳಲ್ಲಿ ಫಸಲು ಕೊಯ್ಲಿಗೆ ಸಿದ್ಧ. ಬೇಸಾಯ ಕ್ರಮ ಮತ್ತು ತಳಿಗಳನ್ನು ಅನುಸರಿಸಿ ಹೆಕ್ಟೇರಿಗೆ ಸರಾಸರಿ 20,000 ದಿಂದ 25,000 ಕೆ.ಜಿ.ಗಳಷ್ಟು ಇಳುವರಿ ಸಿಕ್ಕುತ್ತದೆ.

ಬದನೆ ಕಾಯಿ ಬೆಳೆ
ಬದನೆ ಕಾಯಿ ಬೆಳೆ

ಬದನೆ ಬೆಳೆಯ ಆರಂಭದ ಮತ್ತು ಕೊನೆಯ ಅವಧಿಯಲ್ಲಿ ಬಿಟ್ಟ ಹಣ್ಣುಗಳು ಬಿತ್ತನೆ ಬೀಜೋತ್ಪಾದನೆಗೆ ಯೋಗ್ಯವಲ್ಲ. ಆದ್ದರಿಂದ ಬೆಳೆಯ ಪ್ರಾರಂಭದಲ್ಲಿ ಬಿಟ್ಟ ಕಾಯಿಗಳನ್ನು ಕುಯ್ದು ಮಾರಾಟಮಾಡಿ ಅನಂತರ ಬಿಟ್ಟ ಉಪಯೋಗಿಸುವುದು ಲೇಸು. ದಪ್ಪ ಮತ್ತು ಯೋಗ್ಯಕಾಯಿಗಳನ್ನು ಗುರ್ತಿಸಿ. ಅವನ್ನು ಕೀಳದೆ ಉಳಿಸಿ ಚೆನ್ನಾಗಿ ಹಣ್ಣಾದ ಮೇಲೆ ಯುಕ್ತರೀತಿಯಲ್ಲಿ ಕುಯ್ದು ಬೀಜ ಮಾಡಬೇಕು. ಹಣ್ಣುಗಳನ್ನು ಕುಯ್ದು ಅವುಗಳ ಒಳಗಿನ ತಿರುಳು ಸಮೇತ ಬೀಜಗಳನ್ನು ಬೇರ್ಪಡಿಸಿ ನೀರು ಇರುವ ಪಾತ್ರೆಯಲ್ಲಿ ಹಾಕಿ ಬೀಜಗಳನ್ನು ಪ್ರತ್ಯೇಕಿಸಿ ಸೆರಸಾನ್ ಅಥವಾ ಅಗ್ರಸಾನ್ ಪುಡಿಯೊಂದಿಗೆ ಮಿಶ್ರಮಾಡಿ. 3-4 ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿ ಅನಂತರ ಡಬ್ಬಗಳಲ್ಲಿ ಶೇಖರಿಸಬೇಕು.

ಬದನೆಗೆ ಹಲವಾರು ಕೀಟಪೀಡೆಗಳು ತಗಲುವ ಸಂಭವವುಂಟು. ಆ ಪೈಕಿ ಮುಖ್ಯವಾದವು. ಎಪಿಲೆಕ್ನಾ ಜೆಪ್ಪಿನ ಹುಳು: ಇದು ಎಲೆಗಳನ್ನು ಕೊರೆದು ತಿನ್ನುತ್ತದೆ. 5% ಬಿಎಚ್‍ಸಿ ಪುಡಿಯ ಬಳಕೆಯಿಂದ ಇದನ್ನು ನಿಯಂತ್ರಿಸಬಹುದು.

ಕಾಂಡಕೊರೆಯುವ ಹುಳು: ಎಳೆಯ ಬೆಳೆಯಲ್ಲಿ ಇದು ಹೆಚ್ಚಾಗಿ ಹಾವಳಿ ಮಾಡುತ್ತದೆ. ಕಾಂಡ ತುದಿಗಳನ್ನು ಕೊರೆದು ಒಣಗಿಸುತ್ತದಲ್ಲದೆ ಎಳೆಯ ಕಾಯಿಗಳನ್ನು ಕೊರೆಯುವುದೂ ಉಂಟು. 20% ಲಿಂಡೇನ್. 25% ಡಿಡಿಟಿ ದ್ರಾವಣವನ್ನು ನೀರಿನಲ್ಲಿ ಮಿಶ್ರಮಾಡಿ, ಸಿಂಪಡಿಸುವುದರಿಂದ ಇದನ್ನು ಹತೋಟಿಯಲ್ಲಿಡಬಹುದು.

ಕೆಂಪುನುಸಿ : ಅಗಾಧ ಸಂಖ್ಯೆಯಲ್ಲಿ ಎಲೆಗಳ ತಳಬಾಗದಲ್ಲಿ ಇದ್ದು ಸಸ್ಯ ರಸವನ್ನು ಹೀರಿ ತೊಂದರೆಪಡಿಸುತ್ತವೆ. ಪೀಡಿತ ಎಲೆಗಳು ಹಿಂದಕ್ಕೆ ತಿರುಗಿ ಬಟ್ಟಲಿನಂತೆ ಕಾಣಿಸುತ್ತವೆ. 0.02% ಮ್ಯಾಲಥಿಯಾನ್ ಅಥವಾ 0.03% ಫಾಲಿ ಡಾಲ್ ದ್ರಾವಣದ ಸಿಂಪಡಿಕೆ ಇದರ ನಿವಾರಣಾ ವಿಧಾನ. “

ಬದನೆಗೆ ಬೂಷ್ಟು ರೋಗಗಳೂ ಬರುವುವು. ಇವುಗಳ ಪೈಕಿ ಮುಖ್ಯವಾದವು.

ಬ್ಲೈಟ್ : ಎಲೆಗಳಲ್ಲಿ ಕಂದುಬಣ್ಣದ ಚುಕ್ಕೆಗಳು ಕಾಣಿಸಿಕೊಂಡು ಅಗಲವಾಗುತ್ತವೆ. ಬಿತ್ತನೆ ಬೀಜವನ್ನು ಅಗ್ರಸಾನ್ ಅಥವಾ ಸೆರಸಾನ್ ಪುಡಿಯಿಂದ ಸಂಸ್ಕರಿಸುವುದು, ರೋಗ ನಿರೋಧಿಸುವ ತಳಿಗಳನ್ನು ಬೇಸಾಯಮಾಡುವುದು ಮತ್ತು ಒಟ್ಲುಪಾತಿಯಲ್ಲಿರುವ ಸಸಿಗಳಿಗೆ ವಾರಕ್ಕೊಮ್ಮೆ ಶಿಲೀಂಧ್ರನಾಶಕಗಳನ್ನು ಸಿಂಪಡಿಸುವುದು ಇದರ ಹತೋಟಿಯ ಕ್ರಮಗಳು.

ವಿಲ್ಟ್ : ಈ ರೋಗ ಪೀಡಿತ ಬದನೆ ಎಲೆಗಳ ನಾಳಗಳ ಮಧ್ಯಭಾಗ ಹಳದಿ ಬಣ್ಣಕ್ಕೆ ತಿರುಗುತ್ತದೆ. ರೋಗ ಮುಂದುವರಿದಲ್ಲಿ ನಾಳಗಳ ಮಧ್ಯಭಾಗಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಕಾಂಡವನ್ನು ಕತ್ತರಿಸಿ ನೋಡಿದರೆ ಒಳಭಾಗ ಕಪ್ಪು ಬಣ್ಣ ತಳೆದಿರುವುದು ಕಂಡುಬರುತ್ತದೆ, ರೋಗ ನಿರೋಧಿ ತಳಿಗಳನ್ನು ಬೇಸಾಯ ಮಾಡುವುದರಿಂದ ಎರಡು ವಾರಗಳಿಗೆ ಒಮ್ಮೆ ಯಾವುದಾದರೂ ರೋಗನಾಶಕವನ್ನು ಸಿಂಪಡಿಸುವುದರಿಂದ ಇದನ್ನು ನಿವಾರಿಸಬಹುದು.

ಉಪಯೋಗಗಳು :
ಇದು ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ರಕ್ತದೊತ್ತಡ ನಿರ್ವಹಿಸಲು ಸಹ ಸಹಾಯ ಮಾಡುತ್ತದೆ. ಸಾಧಾರಣ ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡ ನಿಯಂತ್ರಣ ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತವೆ.

ಅಂಗೈ ಮತ್ತು ಅಂಗಾಲು ಬೆವರುತ್ತಿದ್ದರೆ ಬದನೆಯನ್ನು ಸಣ್ಣಗೆ ಹೆಚ್ಚಿ ನೀರಿಗೆ ಹಾಕಿ. ಸ್ವಲ್ಪ ಸಮಯದ ನಂತರ ಬದನೆಯನ್ನು ತೆಗೆದು ಆ ನೀರಿನಲ್ಲಿ ದಿನವೂ ಕೈ-ಕಾಲುಗಳನ್ನು 30 ನಿಮಿಷಗಳು ಮುಳುಗಿಸಿಡಬೇಕು. ಬೆವರು ನಿಲ್ಲುತ್ತದೆ.

ಮೈಯೆಲ್ಲ ವಿಪರೀತ ತುರಿಕೆಯಿಂದ ಕೂಡಿದ್ದರೆ ಬದನೆಯ ಎಲೆಗಳನ್ನು ಅರೆದು ಸಕ್ಕರೆ ಸೇರಿಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿ ಒಂದು ಗಂಟೆಯ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.
ಬದನೆ ಎಲೆಗಳನ್ನು ಕೆಂಡದಲ್ಲಿ ಬಿಸಿ ಮಾಡಿ ಏಟುಬಿದ್ದ ಗಾಯದ ಮೇಲೆ ಕಟ್ಟಿದರೆ ನೋವು ಬೇಗ ಗುಣವಾಗುತ್ತದೆ.

ಇದು ಸ್ಮರಣ ಶಕ್ತಿಯನ್ನು ಹೆಚ್ಚಿಸುವ ತರಕಾರಿಯೂ ಹೌದು.

ಬದನೆ ಕಾಯಿ ಬೆಳೆ
ಬದನೆ ಕಾಯಿ ಬೆಳೆ

ನೇರಳೆ ಬಣ್ಣದ ಬದನೆಯನ್ನು ಬೇಯಿಸಿ, ಸ್ವಲ್ಪ ಬೆಲ್ಲ ಸೇರಿಸಿ ಬೆಳಿಗ್ಗೆ ಸೇವಿಸುತ್ತಾ ಬಂದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ.

ಎಳೆಯ ಬದನೆಯನ್ನು ಹಸುವಿನ ತುಪ್ಪದಲ್ಲಿ ಹುರಿದು ಸೇವಿಸಿದರೆ ಕಣ್ಣಿನ ತೊಂದರೆ ದೂರವಾಗಿ ದೃಷ್ಟಿ ಸಾಮರ್ಥ್ಯ ಹೆಚ್ಚಿಸುತ್ತದೆ.

ಇದರ ನಿಯಮಿತ ಸೇವನೆಯಿಂದ ದೇಹದಲ್ಲಿರುವ ಹೆಚ್ಚುವರಿ ಕಬ್ಬಿಣದ ಅಂಶ ಹೊರಟುಹೋಗುತ್ತದೆ. ಇದು ಪಾಲಿಸಿಥಿಮಿಯಾ ರೋಗಿಗಳಿಗೆ ಹೆಚ್ಚು ಉಪಯುಕ್ತ. ಬದನೆಯಲ್ಲಿರುವ ನಸುಯೈನ್ ಎಂಬ ಒಂದು ಸಂಯುಕ್ತ ಪ್ರಸ್ತುತ ದೇಹದ ಅತಿಯಾದ ಕಬ್ಬಿಣದ ಅಂಶವನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ .

ಬದನೆಯಲ್ಲಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ವಿಟಮಿನ್ ‘ಸಿ’ ಅಂಶ ಅಧಿಕ ಪ್ರಮಾಣದಲ್ಲಿದೆ.

ಬದನೆ ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.

ತ್ವಚೆಯ ಹೊಳಪಿಗೆ ಅತ್ಯಗತ್ಯವಾಗಿರುವ ಖನಿಜಗಳು, ಜೀವಸತ್ವಗಳು ಮತ್ತು ನಾರಿನಾಂಶ ಬದನೆಯಲ್ಲಿದೆ. ಇದರಿಂದ ತ್ವಚೆಯನ್ನು ಬಲವಾಗಿ ಹಾಗೂ ವಯಸ್ಸಿನ ಕಳೆಯನ್ನು ತೆಗೆಯಲು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸಬಹುದು.

ಬದನೆಯಲ್ಲಿರುವ ಕೆಲವು ಕಿಣ್ವಗಳು ಕೂದಲಿನ ರಕ್ಷಕರಂತೆ ಕೆಲಸ ಮಾಡಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಕೂದಲಿನ ಆರೋಗ್ಯಕರ ವಿನ್ಯಾಸ ನಿರ್ವಹಿಸಲು ಸಹಾಯಕವಾಗಿದೆ.

ಬದನೆಯಲ್ಲಿ ನೀರನ ಅಂಶ ಅಧಿಕವಾಗಿದೆ. ಇದು ತ್ವಚೆಯನ್ನು ಅಗತ್ಯದಷ್ಟು ತೇವಾಂಶಯುಕ್ತವಾಗಿಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಶುಷ್ಕ ತ್ವಚೆಯಿಂದ ಮುಕ್ತಿ ಹೊಂದಬಹುದು ಮತ್ತು ನಿಮ್ಮ ದೇಹದ ಸಹವರ್ತಿಯಂತೆ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಲಲಿತ್ ಮಹಲ್

ಮೈಸೂರಿನ ಅರಮನೆಗಳಲ್ಲಿ ಒಂದು : ಲಲಿತ್ ಮಹಲ್

ಹರಳು ಅಥವಾ ಔಡಲ ಸಸ್ಯ

ಹರಳು ಅಥವಾ ಔಡಲ ಮರ, ಆರೋಗ್ಯಕರ ಉಪಯೋಗಗಳು