in

ಹರಳು ಅಥವಾ ಔಡಲ ಮರ, ಆರೋಗ್ಯಕರ ಉಪಯೋಗಗಳು

ಹರಳು ಅಥವಾ ಔಡಲ ಸಸ್ಯ
ಹರಳು ಅಥವಾ ಔಡಲ ಸಸ್ಯ

ರಿಸಿನಸ್ ಕಮ್ಯೂನಿಸ್ ಎಂಬುದು ವೈಜ್ಞಾನಿಕ ಹೆಸರು. ಹರಳು ಪರ್ಯಾಯ ನಾಮ.

ಇದು ಮೂಲತಃ ಆಫ್ರಿಕದ್ದೆಂದು ಕೆಲವರೂ ಭಾರತದ್ದೆಂದು ಮತ್ತೆ ಕೆಲವರೂ ಅಭಿಪ್ರಾಯಪಡುತ್ತಾರೆ. ಈಚೆಗೆ ಉಷ್ಣ ಮತ್ತು ಸಮಶೀತೋಷ್ಣವಲಯದ ದೇಶಗಳಲ್ಲಿ ಇದನ್ನು ಹೇರಳವಾಗಿ ಬೆಳೆಸುತ್ತಾರೆ.

ಇದು ಪೊದರು ಸಸ್ಯವಾಗಿಯೊ ಮರವಾಗಿಯೊ ಬೆಳೆಯುವುದು. ಉಷ್ಣವಲಯದಲ್ಲಿ ಅನೇಕ ಕಡೆ ಇದು 40´ಗಳಷ್ಟು ಎತ್ತರದ ಮರವಾಗಿ ಬೆಳೆಯುವುದೂ ಉಂಟು. ಸಾಮಾನ್ಯವಾಗಿ ಹೊಲಗಳಲ್ಲಿ ಬೆಳೆಸುವ ಔಡಲ ಸುಮಾರು 15´ಗಳಷ್ಟು ಎತ್ತರವಿರುತ್ತದೆ. ಕಾಂಡ ನಯ, ಬಣ್ಣ ನಸು ಊದಾ ಅಥವಾ ಹಸಿರು. ಕೆಲವು ತಳಿಗಳಲ್ಲಿ ಕಾಂಡದ ಮೇಲೆಲ್ಲ ಬಿಳಿಯ ಮೇಣದಂಥ ಲೇಪವಿರುತ್ತದೆ. ಗಿಡಕ್ಕೆ ವಯಸ್ಸಾದಂತೆಲ್ಲ ಕಾಂಡ ಟೊಳ್ಳಾಗುವುದು. ಎಲೆಗಳು ಅಗಲ, ಹಸ್ತಾಕಾರ ಪರ್ಯಾಯವಾಗಿ ಜೋಡಣೆಗೊಂಡಿವೆ. ಅಂಚು ಗರಗಸದ ಹಲ್ಲಿನಂತೆ, ಹೂಗಳು ಏಕಲಿಂಗಗಳು. ಗಂಡು ಮತ್ತು ಹೆಣ್ಣು ಹೂಗಳೆರಡೂ ದೊಡ್ಡದಾದ ಒಂದೇ ಸಂಕೀರ್ಣ ಪುಷ್ಪಗುಚ್ಛದಲ್ಲಿ ಜೋಡಣೆಗೊಂಡಿವೆ. ಕೆಲವು ಬಗೆಗಳಲ್ಲಿ ಕೇವಲ ಹೆಣ್ಣು ಹೂಗಳನ್ನು ಮಾತ್ರ ಒಳಗೊಂಡ ಪುಷ್ಪಗುಚ್ಛವಿರುತ್ತದೆ. ಈ ಗುಣವನ್ನು ಅಡ್ಡತಳಿಯೆಬ್ಬಿಕೆ ಪ್ರಯೋಗಗಳಲ್ಲಿ ಬಳಸಿಕೊಳ್ಳುವರು. ಹೂಗಳಿಗೆ ದಳಗಳಿಲ್ಲ, ಬರಿಯ ಪುಷ್ಪಪತ್ರ ಮಾತ್ರ ಉಂಟು. ಗಂಡು ಹೂವಿನಲ್ಲಿ ಕವಲೊಡೆದು ಹಲವಾರು ಕೇಸರಗಳಿವೆ. ಹೆಣ್ಣು ಹೂವಿನಲ್ಲಿ ಉಚ್ಚಸ್ಥಾನದ ಮೂರು ಕಾರ್ಪೆಲ್ಲುಗಳನ್ನೊಳಗೊಂಡ ಅಂಡಾಶಯವಿದೆ. ಅಂಡಕೋಶದಲ್ಲಿ ಮೂರು ಕೋಣೆಗಳಿವೆಯಲ್ಲದೆ ಒಂದೊಂದು ಕೋಣೆಯಲ್ಲಿ ಒಂದೊಂದರಂತೆ ಅಂಡಕಗಳಿವೆ. ಕಾಯಿ ಸಂಪುಟ ಮಾದರಿಯದು. ಮೇಲೆಲ್ಲ ಮುಳ್ಳುಗಳು, ಒಳಗೆ ಮೂರು ಬೀಜಗಳು ಇವೆ. ಬೀಜಗಳ ಮೇಲೆ ನಯವಾದ ಸಿಪ್ಪೆಯೂ ಅದರ ಮೇಲೆ ವಿವಿಧ ವರ್ಣವಿನ್ಯಾಸಗಳೂ ಇವೆ. ಕಾಯಿ ಬಲಿತಾಗ ಫಟ್ಟನೆ ಸಿಡಿದು ಬೀಜಗಳನ್ನು ಹೊರಕ್ಕೆ ಚಿಮ್ಮಿಸುತ್ತದೆ. ಅಲ್ಲದೆ ಕಾಯಿಗಳು ಒಂದೇ ಬಾರಿಗೆ ಬಲಿಯದೆ ಒಂದಾದಮೇಲೊಂದರಂತೆ ನಿಧಾನವಾಗಿ ಬಲಿತು ಬೀಜಗಳನ್ನು ಸಿಡಿಸುತ್ತವೆ. ಇದರಿಂದ ಬೀಜಸಂಗ್ರಹಣೆ ಕಷ್ಟ. ಈ ತೊಂದರೆಯನ್ನು ನಿವಾರಿಸಲೋಸುಗ ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ ತಾವಾಗಿಯೇ ಒಡೆಯದ ಕಾಯಿಗಳುಳ್ಳ, ಗಿಡದ ಎಲ್ಲ ಕಾಯಿಗಳೂ ಏಕಕಾಲದಲ್ಲಿ ಬಲಿಯುವಂಥ ಗುಣವುಳ್ಳ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುತ್ತಾರೆ.

ಹರಳು ಅಥವಾ ಔಡಲ ಮರ, ಆರೋಗ್ಯಕರ ಉಪಯೋಗಗಳು
ಹರಳು ಅಥವಾ ಔಡಲ ಮರ

ಔಡಲ ತನ್ನ ಬೀಜದಲ್ಲಿರುವ ಎಣ್ಣೆಯಿಂದಾಗಿ ಬಹಳ ಉಪಯುಕ್ತ ಬೆಳೆಯೆನಿಸಿದೆ. ಹಸಿಬೀಜಗಳನ್ನು ನೆಗ್ಗಿ ಅಥವಾ ಗಾಣಕ್ಕೆ ಕೊಟ್ಟು ಎಣ್ಣೆ ತೆಗೆಯುವುದು. ಹರಳುಬೀಜಗಳನ್ನು ಕುಟ್ಟಿ ಬೇಯಿಸಿ ಎಣ್ಣೆ ತೆಗೆಯುವುದೂ ಹಿಂದಿನಿಂದ ರೂಢಿಯಲ್ಲಿರುವ ಗೃಹಕೈಗಾರಿಕೆ. ಹಸಿಬೀಜಗಳಿಂದ ತೆಗೆದ ಎಣ್ಣೆ ಬಣ್ಣರಹಿತ ಅಥವಾ ನಸುಹಳದಿ ಬಣ್ಣದ್ದಾಗಿರುತ್ತದೆ. ವಾಸನೆಯೂ ಕಡಿಮೆ. ಔಷಧಿ ರೂಪದಲ್ಲಿ ಬಳಸುವುದಕ್ಕೆ ಹಸಿಬೀಜದ ಎಣ್ಣೆಯೇ ಉತ್ತಮ. ಈಚೆಗೆ ಯಂತ್ರಗಳಿಂದ ಹಸಿ ಎಣ್ಣೆಯನ್ನು ಹಿಂಡಿ, ಶುದ್ಧೀಕರಿಸಿ, ಸ್ನಿಗ್ಧತೆಯನ್ನು ಕಡಿಮೆ ಮಾಡಿ, ಸುಗಂಧಗಳನ್ನೂ ಬಣ್ಣಗಳನ್ನೂ ಕೂಡಿಸಿ ಮನೋಹರವಾದ ಕೇಶತೈಲಗಳನ್ನು ಸಿದ್ಧಪಡಿಸುವ ಉದ್ಯಮ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಬೇಯಿಸಿ ತೆಗೆದ ಎಣ್ಣೆ ಸ್ವಲ್ಪ ಕೆಂಪಾಗಿರುತ್ತದೆ. ಔಡಲ ಎಣ್ಣೆಗೆ ಓಕರಿಕೆ ತರುವ ವಿಶಿಷ್ಟ ರುಚಿ ಉಂಟು. ಇದರ ಉಪಯೋಗಗಳು ಹಲವಾರು. ಆಯುರ್ವೇದ, ಸಿದ್ಧ ಹಾಗೂ ಯುನಾನಿ ಔಷಧಿ ಪದ್ಧತಿಗಳಲ್ಲೆಲ್ಲ ಹರಳೆಣ್ಣೆಯ ಉಪಯೋಗ ಇದ್ದೇ ಇದೆ. ಎಣ್ಣೆಯನ್ನು ಮೈಗೆ, ತಲೆಗೆ ಹಚ್ಚಿಕೊಂಡು ಅಭ್ಯಂಜನ ಸ್ನಾನ ಮಾಡುವುದು ಎಲ್ಲರಿಗೂ ತಿಳಿದದ್ದೇ. ಹಿಂದಿನ ಕಾಲದಲ್ಲಿಯೂ ಹರಳೆಣ್ಣೆ ಸುಖರೇಚಕವೆಂದು ಹೆಸರಾಗಿದೆ. ಎಳೆಯ ಮಕ್ಕಳಾಗಲಿ, ಮುದುಕರಾಗಲಿ ಇದನ್ನು ತೆಗೆದುಕೊಂಡರೆ ದೇಹದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮವಾಗದು. ಹರಳೆಣ್ಣೆ ಜಠರರಸದೊಡನೆ ವರ್ತಿಸಿದಾಗ ರಿಸಿನೋಲಿಯಿಕ್ ಆಮ್ಲವೆಂಬ ಚುರುಗುಟ್ಟಿಸುವ ವಸ್ತು ಉತ್ಪತ್ತಿಯಾಗಿ ಕರುಳಿನ ಗೋಡೆ ಇರುಕಿಸುವಂತೆ ಮಾಡಿ ಭೇದಿಯುಂಟಾಗುತ್ತದೆ. ಎಣ್ಣೆ ಸೇವಿಸಿದ ನಾಲ್ಕು ಐದು ಗಂಟೆಗಳ ಅನಂತರ ವಿರೇಚನಕಾರ್ಯ ಆರಂಭವಾಗುತ್ತದೆ. ಗ್ಲಿಸರೀನಿನೊಂದಿಗೆ ಹರಳೆಣ್ಣೆ ಮಿಶ್ರಮಾಡಿ ಸೇವಿಸಿದರೆ ಪರಿಣಾಮ ಹೆಚ್ಚು. ಎಣ್ಣೆಯನ್ನು ಅತಿಸಾರ, ಮೂಲವ್ಯಾಧಿ, ಸಂಧಿವಾತ, ಕಟಿವಾಯು, ಹೊಟ್ಟೆನುಲಿತ ಮುಂತಾದ ರೋಗಗಳಿಗೂ ಬಳಸುತ್ತಾರೆ. ಕೆಲವು ಬಗೆಯ ಕಣ್ಣಿನ ಊತಗಳಿಗೆ ಹರಳೆಣ್ಣೆಯ ಬಳಕೆಯಿಂದ ತಾತ್ಕಾಲಿಕ ಪರಿಹಾರ ಸಿಗುತ್ತದೆ. ಎಣ್ಣೆಯಿಂದರಲ್ಲೇ ಅಲ್ಲದೆ ಬೇರು, ಬೀಜ, ಎಲೆ ಇವುಗಳಲ್ಲೂ ಔಷಧೀಯ ಗುಣಗಳಿವೆ. ಬೇರು ಮತ್ತು ಬೀಜಗಳಿಂದ ತಯಾರಿಸಿದ ಕಷಾಯವನ್ನು ಸಂಧಿವಾತ, ಕಟಿವಾಯುಗಳ ರೋಗನಿವಾರಣೆಗೆ ಉಪಯೋಗಿಸುತ್ತಾರೆ. ಹರಳೆಣ್ಣೆಯಿಂದ ಹಲವಾರು ಉತ್ಪನ್ನಗಳನ್ನು ಪಡೆಯಬಹುದು. ಎಣ್ಣೆಯನ್ನು ಆಮ್ಲಜನಕದೊಡನೆ 800-1300 ಸೆಂ. ಉಷ್ಣತೆಯಲ್ಲಿ ವರ್ತಿಸುವಂತೆಮಾಡಿ ಉತ್ಕರ್ಷಿತ ತೈಲ ತಯಾರಿಸುವರು. ಹರಳೆಣ್ಣೆಯನ್ನು ಕಾಯಿಸಿ, ವಿಭಜಿಸಿ, ಕ್ಷಾರಗಳಿಗೆ ಒಡ್ಡಿ ಸುಗಂಧದ್ರವ್ಯಗಳಿಗೆ ಬೇಕಾಗುವ ವಸ್ತುಗಳನ್ನೂ ಕೃತಕ ಗೋಂದಿನ ತಯಾರಿಕೆಗೆ ಬೇಕಾಗುವ ಡೈಬೇಸಿಕ್ ಆಮ್ಲವನ್ನೂ ಪಡೆಯಬಹುದು. ಮೆರುಗೆಣ್ಣೆ ಮುದ್ರಣ ಬಣ್ಣ, ನೈಲಾನ್ ದಾರ ಮುಂತಾದುವುಗಳ ತಯಾರಿಕೆಯಲ್ಲಿ ಬಳಸುವರು. ಸಾಮಾನ್ಯವಾಗಿ ದ್ರವರೂಪದಲ್ಲಿರವ ಹರಳೆಣ್ಣೆ ಉಚ್ಚ ಉಷ್ಣತೆಯಲ್ಲೂ ತನ್ನ ಸ್ನಿಗ್ಧತೆಯನ್ನೂ ಉಳಿಸಿಕೊಳ್ಳುವುದರಿಂದ ಬಹಳ ಉತ್ತಮವಾದ ಮೃದುಚಾಲಕವೆಂದು ಹೆಸರಾಗಿದೆ. ಇದನ್ನು ಮೃದು ಚಾಲಕಗಳ ತಯಾರಿಕೆಯಲ್ಲಿ ಬಹಳವಾಗಿ ಉಪಯೋಗಿಸುತ್ತಾರೆ. ಇದರಲ್ಲಿ ಟೋಕೊಫೆರಾಲ್ ಪ್ರತಿಉತ್ಕರ್ಷಕಗಳು ಇರುವುದರಿಂದ ಮತ್ತು ಇದರಲ್ಲಿನ ಗ್ಲಿಸರೈಡುಗಳಿಗೆ ಉತ್ಕರ್ಷಕ ಪ್ರತಿರೋಧಕ ಶಕ್ತಿಯಿರುವುದರಿಂದ ಹರಳೆಣ್ಣೆಗೆ ಅತಿಹೆಚ್ಚಿನ ಸ್ಥಿರತೆ ಇದೆ. ಬೀಜದ ತಿರುಳಿನಲ್ಲಲ್ಲದೆ ಅದರ ಸಿಪ್ಪೆಯಲ್ಲಿಯೂ ಕೊಂಚ ಪ್ರಮಾಣದಲ್ಲಿ ಎಣ್ಣೆಯಿದೆ. ಈ ಎಣ್ಣೆಯಲ್ಲಿ ತಿರುಳಿನ ಎಣ್ಣೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಓಲಿಯಕ್ ಮತ್ತು ಲಿನೋಲಿಯಿಕ್ ಆಮ್ಲಗಳೂ ಸ್ವಲ್ಪ ಪ್ರಮಾಣದಲ್ಲಿ ರಿಸಿನೋಲಿಯಿಕ್ ಆಮ್ಲವೂ ಇವೆ. ಎಣ್ಣೆ ತೆಗೆದ ಮೇಲೆ ಉಳಿಯುವ ಔಡಲ ಹಿಂಡಿ ಗೊಬ್ಬರವಾಗಿ ಬಳಕೆಯಾಗುತ್ತದೆ. ಇದರಲ್ಲಿ ರಿಸಿನ್ ಎಂಬ ರಕ್ತ ಹೆಪ್ಪುಗಟ್ಟಿಸುವಂಥ ವಿಷವಸ್ತುವಿರುವುದರಿಂದ ದನಗಳಿಗೆ ಮೇವಾಗಿ ಇದನ್ನು ಉಪಯೋಗಿಸುವುದಕ್ಕಾಗುವುದಿಲ್ಲ. ಕಾಂಡದಿಂದ ಕಾಗದ ತಯಾರಿಕೆಗೆ ಬೇಕಾದ ಮೂಲ ವಸ್ತುವನ್ನು ತಯಾರಿಸಬಹುದು. ಎಲೆಗಳನ್ನು ಎರಿ ರೇಷ್ಮೆ ಹುಳುಗಳಿಗೆ ಆಹಾರವಾಗಿ ಹಾಕುತ್ತಾರೆ.

ಹರಳೆಣ್ಣೆ ಆರೋಗ್ಯ ಪ್ರಯೋಜನಗಳು

ಹರಳು ಅಥವಾ ಔಡಲ ಮರ, ಆರೋಗ್ಯಕರ ಉಪಯೋಗಗಳು
ಹರಳೆಣ್ಣೆ

ಹೊಕ್ಕುಳದ ಮೇಲೆ ಹರಳೆಣ್ಣೆ ಲೇಪ ಅನ್ವಯಿಸುವುದು ನಿಮ್ಮ ಚರ್ಮಕ್ಕೆ ಮತ್ತು ತುಟಿಗಳಿಗೂ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ.

ಕಣ್ಣುಗಳ ಪಫಿನೆಸ್ ಅಥವಾ ಊತಕ್ಕೆ ಹರಳೆಣ್ಣೆ ಅತ್ಯುತ್ತಮ ಮದ್ದು. ಅಂಗೈ ಅಥವಾ ಬಟ್ಟಲಿನಲ್ಲಿ ಕೆಲವು ಹನಿ ಹರಳೆಣ್ಣೆ ತೆಗೆದುಕೊಂಡು, ಒಂದು ಇಯರ್‌ಬಡ್ ತೆಗೆದುಕೊಳ್ಳಿ. ಕಣ್ಣುಗಳ ಸುತ್ತ ಇಯರ್‌’ ಬಡ್‌ನಿಂದ ಅಥವಾ ಉಂಗುರ ಬೆರಳನ್ನು ಬಳಸಿ, ವೃತ್ತಾಕಾರವಾಗಿ ನಿಧಾನವಾಗಿ ಮಸಾಜ್ ಮಾಡಿ. ಇದು ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ಕಣ್ಣುಗಳಿಗೆ ವಿಶ್ರಾಂತಿ ನೀಡುತ್ತದೆ. ಹುಬ್ಬುಗಳ ಆರೋಗ್ಯಕರ ಬೆಳವಣಿಗೆಗೆ ಇದನ್ನು ಬಳಸಬಹುದು.

ಹರಳೆಣ್ಣೆಯನ್ನು ಹೊಕ್ಕುಳಕ್ಕೆ ಹಚ್ಚುವುದರಿಂದ ಮೊಡವೆಗಳು, ಅಲರ್ಜಿಗಳು ಮತ್ತು ಕಲೆಗಳಂತಹ ಅನೇಕ ಚರ್ಮದ ಸಮಸ್ಯೆಗಳನ್ನು ನಿವಾರಣೆಯಾಗುತ್ತವೆ. ಇದರ ಜೊತೆಗೆ, ನಿಮ್ಮ ತುಟಿಗಳು ಬಿರುಕು ಬಿಡುವುದನ್ನು ಇದು ತಡೆಯುತ್ತದೆ.

ಕೂದಲು ಉದುರುವುದನ್ನು ತಡೆಯಲು ಮತ್ತು ಕೂದಲು ಬೆಳವಣಿಗೆಯನ್ನು ಉತ್ತೇಜಿಸಲು, ಹರಳೆಣ್ಣೆಯನ್ನು ನೆತ್ತಿಗೆ ಮತ್ತು ಕೂದಲಿನ ಮೇಲೆ ಹಚ್ಚಿ. ಹರಳೆಣ್ಣೆ ಸ್ವಲ್ಪದಪ್ಪವಾಗಿರುತ್ತದೆ, ಆದ್ದರಿಂದ ಅದನ್ನು ಹಚ್ಚಲು ಕಷ್ಟವಾಗುತ್ತದೆ. 1 ಚಮಚ ಹರಳೆಣ್ಣೆ ಅಥವಾ ನಿಮ್ಮ ಕೂದಲಿನ ಉದ್ದವನ್ನು ಅವಲಂಬಿಸಿ ಅದಕ್ಕಿಂತ ಹೆಚ್ಚಿಗೆ ತೆಗೆದುಕೊಂಡು, ಒಂದು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ನೆತ್ತಿಯ ಮೇಲೆ ಮತ್ತು ಕೂದಲಿನ ಮೇಲೆ ಮಸಾಜ್ ಮಾಡಿ. ಇದನ್ನು ವಾರಕ್ಕೆ ಎರಡು ಬಾರಿ ಹಚ್ಚಿ. ಇದು ಕೂದಲು ಉದುರುವುದನ್ನು ತಡೆಯಲು, ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಮುಟ್ಟಿನ ಸಮಯದಲ್ಲಿ ಮಹಿಳೆಯರು ತೀವ್ರವಾದ ನೋವು ಅಥವಾ ಸೆಳೆತವನ್ನು ಎದುರಿಸುವುದು ಸಾಮಾನ್ಯ. ಇದರಿಂದಾಗಿ ದಿನವಿಡೀ ಸಾಧಾರಣ ಕೆಲಸ ಮಾಡಲು ಕೂಡ ಅವರಿಗೆ ಕಷ್ಟವಾಗುತ್ತದೆ. ಹರಳೆಣ್ಣೆಯನ್ನು ಹೊಕ್ಕುಳದ ಮೇಲೆ ಅನ್ವಯಿಸುವುದರಿಂದ ಋತುಚಕ್ರದ ಈ ಸೆಳೆತವನ್ನು ಕಡಿಮೆ ಮಾಡಲು ಮಹಿಳೆಯರಿಗೆ ಇದು ತುಂಬಾ ಪ್ರಯೋಜನಕಾರಿ ಸಾಬೀತಾಗುತ್ತದೆ.ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹರಳೆಣ್ಣೆಯನ್ನು ಹೊಕ್ಕುಳಕ್ಕೆ ಹಚ್ಚುವುದರಿಂದ ಹೊಟ್ಟೆಯ ಸಮಸ್ಯೆಗಳಾದ ಮಲಬದ್ಧತೆ, ಹೊಟ್ಟೆ ಉಬ್ಬರ, ಹೊಟ್ಟೆಯಲ್ಲಿನ ಗ್ಯಾಸ್ ಮತ್ತು ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಹರಳೆಣ್ಣೆಯನ್ನು ಹೊಕ್ಕಳಿಗೆ ಅನ್ವಯಿಸುವುದರಿಂದ ಅದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಹರಳೆಣ್ಣೆ ರಿಸಿನೋಲಿಕ್ ಆಮ್ಲವನ್ನು ಹೊಂದಿದ್ದು, ಅದು ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸಂಧಿವಾತಕ್ಕೂ ಚಿಕಿತ್ಸೆ ನೀಡಬಹುದು. ಕೀಲು ನೋವು ಮತ್ತು ಸಂಧಿವಾತವನ್ನು ನಿವಾರಿಸಲು, ಸ್ವಲ್ಪ ಹರಳೆಣ್ಣೆ ತೆಗೆದುಕೊಂಡು ಅದನ್ನು ಬಿಸಿ ಮಾಡಿ.
ಇದನ್ನು ನೋವಿನ ಜಾಗದ ಮೇಲೆ ಹಚ್ಚಿ ಮತ್ತು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ಮಸಾಜ್ ಮಾಡಿದ ನಂತರ ಬಿಸಿ ಪ್ಯಾಕ್ ಬಳಸಿ ಇದರಿಂದ ಚರ್ಮದ ಪದರಗಳಲ್ಲಿ ತೈಲವು ಆಳವಾಗಿ ಹೀರಿಕೊಳ್ಳಬಹುದು ಮತ್ತು ಹೀಟ್ ಪ್ಯಾಕ್ ಸಹ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬದನೆ ಕಾಯಿ ಬೆಳೆ

ಬದನೆ ಕಾಯಿ ಬೆಳೆ

ಪಾರ್ವತಿ ದೇವಿ

ಪಾರ್ವತಿ ದೇವಿ ಯಾರು?