ಆಯುರ್ವೇದ ಪಂಡಿತರು ಸಂಸ್ಕೃತದಲ್ಲಿ ಇದಕ್ಕೆ ನೀಡಿದ ಹೆಸರು ವಾಜೀಗಂಧಾ, ಹಯಗಂಧಾ, ವರಾಹಕರ್ಣೀ ಇತ್ಯಾದಿ. ಈ ಸಸ್ಯದ ಬೇರಿನಿಂದ ಕುದುರೆ ಮೂತ್ರದಂತಹ ವಾಸನೆ ಹೊರಡುತ್ತದೆಯಾದ್ದರಿಂದ ಅಲ್ಲದೆ ಇದರ ಬೇರನ್ನು ಸ್ವಚ್ಚಗೊಳಿಸಿ ಪುಡಿ ಮಾಡಿ ಸೇವಿಸಿದರೆ ಅಶ್ವದಂತೆ ಶಕ್ತಿಬಲ-ಉತ್ಸಾಹ ಬರುತ್ತದೆಯಾದ್ದರಿಂದ ಇದಕ್ಕೆ ಅಶ್ವಗಂಧಾ ಎಂಬ ನಾಮವು ಬಂದಿದೆ.
ಅಶ್ವಗಂಧಾ ಎಂಬುದು ಒಂದು ಔಷಧಿಗಿಡ. ಹಿರಿಯರಿಂದ ‘ಹಿರೇಮದ್ದು’ ಎಂದೇ ಕರೆಸಿಕೊಳ್ಳುವ ಈ ಸಸ್ಯ, ನರಸಂಬಂಧಿ, ಕಫ ವಾತ ಸಂಬಂಧಿ ದೋಷಗಳನ್ನು ಕಿತ್ತು ಕಳೆಯಬಲ್ಲ ಗುಣವಿದೆ. ಈ ಗಿಡದ ಬೇರಿಗೆ ಲೈಂಗಿಕ ದೌರ್ಬಲ್ಯ ನಿವಾರಿಸುವ ಅದ್ಬುತ ಸಾಮರ್ಥ್ಯವಿದೆ. ಹಾವು, ಚೇಳು ಕಚ್ಚಿದಾಗ ಇದರ ಬೇರನ್ನು ನಿಂಬೇ ರಸದೊಂದಿಗೆ ಹಚ್ಚಲು ಉಪಯೋಗಿಸುತ್ತಾರೆ.
ಅಶ್ವಗಂಧ ಬೆಳೆಯಿಂದ ದೊರೆಯುವ ಆಲ್ಕಲಾಯ್ಡ್‌ಗಳಲ್ಲಿ ಮಿಥಾನಿನ್ ಮತ್ತು ಸಾಮ್ನಿಫೆರಿನ್ ಸಸ್ಯಕ್ಷಾರ ಮುಖ್ಯವಾದುವು. ಆಯುರ್ವೇದ ಹಾಗೂ ಯುನಾನಿ ಔಷಧಿಗಳ ತಯಾರಿಕೆಯಲ್ಲಿ ಇದರ ಬೇರು, ತೊಗಟೆ, ಎಲೆ, ಹಣ್ಣು ಮತ್ತು ಬೀಜಗಳು ಅನೇಕ ರೋಗಗಳ ನಿವಾರಣೆಗೆ ಉಪಯುಕ್ತವಾಗಿವೆ.

ಅಶ್ವಗಂಧದ ಎಲೆಗಳು ಹಂದಿಯ ಕಿವಿಯ ರೀತಿ ಇರುವುದರಿಂದ ವರಾಹಕರ್ಣಿ ಎಂದೂ ಹೆಸರಿದೆ. ಕಣ್ಮರೆಯಾಗುತ್ತಿರುವ ಗಿಡಮೂಲಿಕೆಯಲ್ಲಿ ಒಂದಾಗಿರುವ ಅಶ್ವಗಂಧದ ಔಷಧೀಯ ಗುಣ ಹಿರಿದಾದದ್ದು.
ಎಲೆ ಹಣ್ಣು ಮತ್ತು ಬೇರು ಚಿಕಿತ್ಸೆಗಳಲ್ಲಿ ಉಪಯೋಗಿಸುವರು. ಬಹು ಹಿಂದಿನ ಕಾಲದಿಂದಲೂ ಬಳಕೆಯಲ್ಲಿರುವ ಔಷಧಿ. ಬೇರಿನಲ್ಲಿ ಸೋಮ್ನಿಫೆರಸ್ ಅನ್ನುವ ಕ್ಷಾರವಿರುವುದು. ಈ ಕ್ಷಾರವು ನಿದ್ದೆ ಬರಿಸುವ ಸಾಮರ್ಥ್ಯ ಹೊಂದಿದೆ.
100 ಗ್ರಾಂ ಅಶ್ವಗಂಧ ಬೇರನ್ನು ತಂದು ಹಾಲಿನಲ್ಲಿ ಬೇಯಿಸಿ ಶುದ್ಧ ಮಾಡಿ, ಒಣಗಿಸಿ, ಚೂರ್ಣಿಸಿ, ಗಾಜಿನ ಭರಣಿಯಲ್ಲಿಡುವುದು. ಸಮ ಪ್ರಮಾಣ ಸಕ್ಕರೆ ಸೇರಿಸಿ ಹೊತ್ತಿಗೆ 5 ಗ್ರಾಂನಷ್ಟು ಚೂರ್ಣವನ್ನು ತಿಂದ ಮೇಲೆ ಸಕ್ಕರೆ ಬೆರೆಸಿದ ಹಾಲನ್ನು ಪಾನ ಮಾಡುವುದು.
ಕಫ, ಕೆಮ್ಮು, ನಿತ್ರಾಣ ಹಾಗೂ ಸ್ತ್ರೀಯರ ದೈಹಿಕ ಸಮಸ್ಯೆಗಳಿಗೆ ಅಶ್ವಗಂಧ ತತ್‌ಕ್ಷಣಕ್ಕೆ ಸಿಗುವ ಮನೆಮದ್ದು. ಇದರ ಎಲೆಗಳಲ್ಲಿ ಖನಿಜಾಂಶ ಹಾಗೂ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮೂಳೆಗಳಲ್ಲಿ ಟೂಳ್ಳು ಉಂಟಾಗದಂತೆ ತಡೆಯುತ್ತದೆ. ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಹೆಚ್ಚು ಪರಿಣಾಮಕಾರಿಯಾಗಿರುವ ಅಶ್ವಗಂಧ, ಉರಿಯೂತ ನಿವಾರಕ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ನಿದ್ರಾ ಹೀನತೆ, ಕ್ಯಾನ್ಸರ್, ಸಂಧಿವಾತ, ಮಧುಮೇಹವನ್ನು ಹತೋಟಿಗೆ ತರಲು ಅಶ್ವಗಂಧದ ಬೇರಿನಿಂದ ತಯಾರಿಸಿದ ಚೂರ್ಣವನ್ನು ನಿರಂತರವಾಗಿ ಸೇವಿಸುವುದು ಒಳಿತು. ಇದು ಮಾನಸಿಕ ಖಿಯನ್ನು ದೂರ ಮಾಡಿ ನಮ್ಮ ನರಮಂಡಲವನ್ನು ಸದೃಢವಾಗಿರುವಂತೆ ಮಾಡುತ್ತದೆ.
ಅಶ್ವಗಂಧದ ಬೇರನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ, ತುಪ್ಪ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ದೃಷ್ಟಿ ದೋಷವನ್ನು ನಿವಾರಣೆ ಮಾಡಬಹುದು ಎನ್ನುತ್ತಾರೆ ಆಯುರ್ವೇದ ಪಂಡಿತರು.

ಅಶ್ವಗಂಧದ ನಿಯಮಿತ ಸೇವನೆಯಿಂದ ಚರ್ಮದಲ್ಲಿ ಸುಕ್ಕುಗಳು, ನೆರಿಗೆಗಳು, ಸಡಿಲವಾಗುವುದು ಮೊದಲಾದ ಚಿಹ್ನೆಗಳು ಎದುರಾಗುವುದನ್ನು ಆದಷ್ಟೂ ತಡವಾಗಿಸಬಹುದು. ಜೀವಕೋಶಗಳಿಗೆ ಹಾನಿ ಎಸಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ಅಶ್ವಗಂಧ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ತನ್ಮೂಲಕ ತಾರುಣ್ಯದ ಚರ್ಮದ ಕಾಂತಿ ಮತ್ತು ಆರೋಗ್ಯವನ್ನು ಆದಷ್ಟೂ ಹೆಚ್ಚು ಕಾಲ ಕಾಪಾಡಿಕೊಳ್ಳುತ್ತದೆ.
ಈ ವನೌಷಧವು ಎಲ್ಲಾ ರೀತಿಯ ಬಾವು ಮತ್ತು ನೋವುಗಳನ್ನು ನಿವಾರಿಸುವುದು. ಕೀಲುಗಳಲ್ಲಿ ನೋವು ಮತ್ತು ಊತವಿದ್ದರೆ ಇದರ ಎಲೆಗಳಿಗೆ ಎಣ್ಣೆ ಸವರಿ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟುವುದು.
ಶುದ್ಧಿ ಮಾಡಿದ ಅಶ್ವಗಂಧ ಚೂರ್ಣ, ಲೋದ್ರ ಚಕ್ಕೆ ಚೂರ್ಣ ಮತ್ತು ನೆಲಗುಂಬಳದ ಗಡ್ಡೆ ಚೂರ್ಣ ಸಮ ಭಾಗ ಸೇರಿಸಿ, ಹೊತ್ತಿಗೆ 2.50 ಗ್ರಾಂ ಸೇವಿಸಿ, ಮೇಲೆ ಕಲ್ಲುಸಕ್ಕರೆ ಬೆರೆಸಿದ ಹಸುವಿನ ಹಾಲು ಒಂದು ಲೋಟ ಸೇವಿಸುವುದು. ಈ ರೀತಿ ದಿನಕ್ಕೆ ಬೆಳಿಗ್ಗೆ ಸಾಯಂಕಾಲ ಎರಡು ಬಾರಿ ಸೇವಿಸುವುದು. ಈ ಔಷಧಿಯನ್ನು ಸೇವಿಸುವ ಅವಧಿಯಲ್ಲಿ ನಿರ್ಮಲಚಿತ್ತ, ಶಾಂತಸ್ವಭಾವ ಮತ್ತು ಶುಭಯೋಚನೆಗಳಿರಲಿ, ಇದರಿಂದ ಮಾನಸಿಕ ಚಂಚಲತೆ ಜೀವನದಲ್ಲಿ ಜಿಗುಪ್ಸೆ ಶಮನವಾಗುವುವು.

ಅಶ್ವಗಂಧದ ಸೇವನೆಯಿಂದ ಚರ್ಮದ ಒಳಪದರದಲ್ಲಿ ನೈಸರ್ಗಿಕ ತೈಲಗಳು, ಕೊಲ್ಯಾಜೆನ್ ಮತ್ತು ಎಲಾಸ್ಟಿನ್ ಗಳ ಉತ್ಪತ್ತಿ ಹೆಚ್ಚುತ್ತದೆ. ಇವೆಲ್ಲವೂ ಮೃದು, ಕಾಂತಿಯುಕ್ತ ಹಾಗೂ ಆರೋಗ್ಯಕರ ತ್ವಚೆಗೆ ಅಗತ್ಯವಾಗಿವೆ. ಇಂದು ಲಭ್ಯವಿರುವ ಹಲವಾರು ಚರ್ಮ ಪ್ರಸಾದನಗಳಲ್ಲಿ ಅಶ್ವಗಂಧದ ತ್ವಚೆಯನ್ನು ಕಾಪಾಡಿ ಪೋಷಿಸುವ ಗುಣದಿಂದಾಗಿ ಕೊಂಚಪ್ರಮಾಣದಲ್ಲಿಯಾದರೂ ಅಶ್ವಗಂಧದ ಅಂಶವಿರುತ್ತದೆ.
ಅಶ್ವಗಂಧದ ಸೇವನೆಯಿಂದ ಚರ್ಮದ ಅಡಿಭಾಗದಲ್ಲಿ ಉತ್ತಮ ಪ್ರಮಾಣದ ರಕ್ತಪರಿಚಲನೆ ದೊರಕುತ್ತದೆ ಹಾಗೂ ಕೂದಲ ಬುಡಗಳಿಗೆ ಉತ್ತಮ ಪ್ರಮಾಣದ ಪೋಷಕಾಂಶಗಳೂ ದೊರಕುತ್ತವೆ. ರಕ್ತಪರಿಚಲನೆ ಕೂದಲನ್ನು ಬೆಳೆಸಲು ಪ್ರಚೋದಿಸುತ್ತದೆ. ಅಲ್ಲದೇ ಚರ್ಮದಲ್ಲಿ ಮೆಲನಿನ್ ಅಂಶವನ್ನು ಹೆಚ್ಚಿಸಲೂ ಪ್ರಚೋದಿಸುತ್ತದೆ. ಕೂದಲ ಆರೊಗ್ಯಕ್ಕೆ ಈ ಮೆಲನಿನ್ ಅಗತ್ಯವಾದ ಪ್ರೋಟೀನ್ ಅನ್ನು ಒದಗಿಸುತ್ತದೆ. ತನ್ಮೂಲಕ ಕೂದಲ ಆರೋಗ್ಯವೂ ಉತ್ತಮಗೊಳ್ಳುತ್ತದೆ.
ಕೆಲವು ಕಾರಣಗಳಿಂದ ಸ್ತ್ರೀಯರಿಗೆ ಸಂತಾನವಿರುವುದಿಲ್ಲ. ದೋಷಗಳು ಸ್ತ್ರೀ ಪುರುಷರಿಬ್ಬರದು ಇರಬಹುದು. ಆದುದರಿಂದ ಶುದ್ಧ ಮಾಡಿದ ಅಶ್ವಗಂಧದ ಚೂರ್ಣವನ್ನು ಸ್ತ್ರೀ ಪುರುಷರಿಬ್ಬರೂ ಸೇವಿಸಬಹುದು. ಭಗವಂತನ ದಯೆಯಿಂದ ಮಕ್ಕಳಾಗುವವು. ಹಾಲು, ಅನ್ನ ಮತ್ತು ಮಧುರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು.
25 ಗ್ರಾಂ ಶುದ್ಧ ಮಾಡಿದ ಅಶ್ವಗಂಧದ ಚೂರ್ಣಕ್ಕೆ ಅರ್ಧ ಲೀಟರ್ ಹಾಲು ಹಾಕಿ ಕಾಯಿಸುವುದು. ಅಷ್ಟಾಂಷ ಕಷಾಯ ಮಾಡಿ ಇಟ್ಟುಕೊಳ್ಳುವುದು. ಮುಟ್ಟಿನ ಸ್ನಾನದ ನಂತರ 4 ಟೀ ಚಮಚ ಕಷಾಯವನ್ನು ಹಸುವಿನ ಹಾಲಿಗೆ ಸಕ್ಕರೆ, ತುಪ್ಪವನ್ನು ಸೇರಿಸಿ ಸೇವಿಸುವುದು. ಹೀಗೆ ಮೂರು ಮುಟ್ಟಿನಲ್ಲಿ ಕ್ರಮವಾಗಿ ಮಾಡುವುದು.
ವಯಸ್ಸಾದಂತೆ ಮರೆಗುಳಿತನ ಹಾಗೂ ಇತರ ತೊಂದರೆಗಳು ಎದುರಾಗಲು ಪ್ರಮುಖ ಕಾರಣವೆಂದರೆ ಮೆದುಳಿನ ಜೀವಕೋಶಗಳು ಶಾಶ್ವತವಾಗಿ ನಷ್ಟವಾಗುವುದು. ಅಶ್ವಗಂಧದ ನಿಯಮಿತ ಸೇವನೆಯಿಂದ ಈ ಸಾಯುವಿಕೆಯನ್ನು ಆದಷ್ಟೂ ತಡವಾಗಿಸಬಹುದು ಹಾಗೂ ನಿಧಾನಗೊಳಿಸಬಹುದು. ತನ್ಮೂಲಕ ಉತ್ತಮ ಮಾನಸಿಕ ಆರೋಗ್ಯವನ್ನು ವೃದ್ದಾಪ್ಯದಲ್ಲಿಯೂ ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ.
ವಾತಕ್ಕೆ, ಅಶ್ವಗಂಧದ ಬೇರು ಮತ್ತು ಒಣಶುಂಠಿಯ ನಯವಾದ ಚೂರ್ಣ ಮತ್ತು ಕಲ್ಲಸಕ್ಕರೆ ಸೇರಿಸಿ ಬೆಳಿಗ್ಗೆ, ಸಂಜೆ ಸೇವಿಸುವುದು.
ಧನ್ಯವಾದಗಳು.
GIPHY App Key not set. Please check settings