in

ಮುಖದ ಸೌಂದರ್ಯ ಹೆಚ್ಚಿಸಲು ಕೆಲವೊಂದು ಸಲಹೆಗಳು

ಮುಖದ ಸೌಂದರ್ಯ ಹೆಚ್ಚಿಸಲು ಕೆಲವೊಂದು ಸಲಹೆಗಳು

ಚಂದದ ಮುಖ ಯಾರು ತಾನೆ ಬಯಸಲ್ಲ , ಪ್ರತಿಯೊಬ್ಬರಿಗೂ ತಾನು ಸೌಂದರ್ಯವಾಗಿ ಕಾಣಬೇಕೆಂಬ ಬಯಕೆ ಇದ್ದೇ ಇರುತ್ತದೆ. ಅದರಲ್ಲೂ ಸೌಂದರ್ಯವನ್ನು ನಿರ್ಧರಿಸುವುದೇ ಮುಖ .ಆದರೆ ಮೊಡವೆ, ಕಪ್ಪು ಕಲೆಗಳಿದ್ದರೆ ಮುಖವು ಕಳಾಹೀನವಾಗಿ ಕಾಣುತ್ತದೆ. ಮುಖದ ಸಾಮಾನ್ಯ ಸಮಸ್ಯೆಗಳಾದ ಮೊಡವೆ, ಕಪ್ಪು ಕಲೆ ಮುಂತಾದ ಚಿಂತೆಗಳಿಗೆ ಅಡುಗೆ ಮನೆಯಲ್ಲಿರುವ ವಸ್ತುಗಳ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು.

ರಾಸಾಯನಿಕ ವಸ್ತುಗಳನ್ನು ಬಳಸಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ಮುಖಕ್ಕೆ ಹಚ್ಚುವುದನ್ನು ನಿಲ್ಲಿಸಿ, ನೈಸರ್ಗಿಕವಾಗಿ ದೊರೆಯುವ ಅಂದರೆ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ವಸ್ತುಗಳನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಕೆಲವೊಂದು ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ತಯಾರಿಸಬಹುದಾದ ಸೌಂದರ್ಯ ಹೆಚ್ಚಿಸುವ ರೆಮಿಡಿಗಳ್ಳನ್ನು ತಿಳಿಸಲು ಇಚ್ಛಿಸುತ್ತೇನೆ.

ಮುಖದ ಸೌಂದರ್ಯ ಹೆಚ್ಚಿಸಲು ಕೆಲವೊಂದು ಸಲಹೆಗಳು

ಕಹಿಬೇವಿನ ಎಲೆಗಳು: ಕಹಿಬೇವಿನ ಎಲೆಗಳನ್ನು ಅರಿಶಿನದೊಂದಿಗೆ ಅರೆದು ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಸೌಂದರ್ಯ ಹೆಚ್ಚುತ್ತದೆ. ಹೀಗೆ ಪ್ರತಿದಿನ 20-30 ನಿಮಿಷಗಳ ಕಾಲ ಹಚ್ಚುವುದರಿಂದ ಮೊಡವೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಹಾಲು ಮತ್ತು ಅರಿಶಿನ: ಚರ್ಮದ ಕಾಂತಿ ಹೆಚ್ಚಿಸುವಲ್ಲಿ ಅರಿಶಿನದ ಪಾತ್ರ ಮಹತ್ತರವಾಗಿದ್ದು ಭಾರತದಲ್ಲಿ ನೂರಾರು ವರ್ಷಗಳಿಂದ ಬಳಸಲ್ಪಡುತ್ತಾ ಬರಲಾಗಿದೆ. ಒಂದು ಚಿಕ್ಕ ಚಮಚ ಅರಿಶಿನ ಪುಡಿಯನ್ನು ಕೊಂಚವೇ ಹಸಿಹಾಲಿನೊಂದಿಗೆ ಬೆರೆಸಿ. ಹಾಲು ಮತ್ತು ಅರಿಶಿನ ಇದಕ್ಕೆ ಕೆಲವು ಹನಿ ಕೊಬ್ಬರಿ ಎಣ್ಣೆ ಬೆರೆಸಿ. ಇದು ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪ ಇರಬೇಕು. ಈ ಲೇಪವನ್ನು ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿ ಸುಮಾರು ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ. ಈ ವಿಧಾನ ಒಣಚರ್ಮಕ್ಕೆ ಹೆಚ್ಚು ಒಳ್ಳೆಯದು.

ಚಕ್ಕೆ ಅಥವಾ ದಾಲ್ಚಿನ್ನಿ ಪುಡಿ: ಚಕ್ಕೆ ಅಥವಾ ದಾಲ್ಚಿನ್ನಿ ಪುಡಿಯನ್ನು ಜೇನಿನಲ್ಲಿ ಕಲಸಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ ಬೆಳ್ಳಿಗ್ಗೆ ತೊಳೆಯಿರಿ. ಇದರಿಂದ ಕೂಡ ಮೊಡವೆಗಳು ಸಂಪೂರ್ಣ ಮಾಯವಾಗುತ್ತವೆ.

ಕಡ್ಲೆಹಿಟ್ಟು ಮತ್ತು ಹಾಲು: ಒಂದು ವೇಳೆ ಚರ್ಮದ ಹೊರಪದರದಲ್ಲಿ ತೆಳುವಾದ ಪದರ ಆವರಿಸಿದ್ದರೆ ಇದು ಸತ್ತ ಜೀವಕೋಶಗಳು ಗಟ್ಟಿಯಾಗಿ ಅಂಟಿಕೊಂಡಿದ್ದಿದ್ದಿರಬಹುದು. ಇದನ್ನು ನಿವಾರಿಸಲು ಕಡ್ಲೆಹಿಟ್ಟು ಮತ್ತು ಕೊಂಚ ಹಸಿಹಾಲನ್ನು ಬೆರೆಸಿ ಲೇಪನ ತಯಾರಿಸಿ ಮುಖದ ಮೇಲೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಸತ್ತಜೀವಕೋಶಗಳು ಸುಲಭವಾಗಿ ನಿವಾರಣೆಯಾಗಿ ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ.

ಬಾದಾಮಿ ಬೀಜ:  ಬಾದಾಮಿ ಬೀಜವನ್ನು ಅರೆದು ಅದಕ್ಕೆ ಸ್ವಲ್ಪ ಜೇನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಬಳಿಕ ಅದನ್ನು ಮಸಾಜ್ ಮಾಡುತ್ತಾ ತೊಳೆಯುವುದರಿಂದ ಸಹ ಮೊಡವೆಯ ಸಮಸ್ಯೆಯನ್ನು ದೂರ ಮಾಡಬಹುದು. ಮುಖದ ಕಾಂತಿ ಕೂಡ ಹೆಚ್ಚುತ್ತದೆ.

ಲಿಂಬೆ ಮತ್ತು ಜೇನು: ಬಿಸಿಲಿನಿಂದ ಚರ್ಮ ಕಪ್ಪಗಾಗಿದ್ದರೆ ಈ ವಿಧಾನ ಅತ್ಯುತ್ತಮವಾಗಿದೆ. ಲಿಂಬೆಯ ಬಿಳಿಚುಕಾರಕ ಗುಣ ಮತ್ತು ಜೇನಿನ ತಂಪೊಗೊಳಿಸುವ ಗುಣಗಳು ಒಟ್ಟಾಗಿ ಚರ್ಮದ ಬಣ್ಣವನ್ನು ಸಹಜವರ್ಣದತ್ತ ತರಲು ನೆರವಾಗುತ್ತವೆ. ಇದರಿಂದ ಕಳೆಗುಂದಿದ್ದ ಚರ್ಮ ಮತ್ತೆ ಕಾಂತಿ ಪಡೆಯುತ್ತದೆ. ಸಮಪ್ರಮಾಣದಲ್ಲಿ ಲಿಂಬೆಸರ ಮತ್ತು ಜೇನನ್ನು ಬೆರೆಸಿ ಕೊಂಚವೇ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಹತ್ತಿಯಿಂದ ಒರೆಸಿಕೊಳ್ಳುವ ಮೂಲಕ  ಮುಖದ ಕಾಂತಿಯನ್ನು ಪಡೆಯಬಹುದು.

ಮೊಟ್ಟೆ: ಮೊಟ್ಟೆಯ ಹಳದಿ ಲೋಳೆಯನ್ನು ಮುಖಕ್ಕೆ ಹತ್ತಿಯಿಂದ ಹಚ್ಚಿ ಸ್ವಲ್ಪ ಸಮಯದ ಬಳಿಕ ತೊಳೆಯಿರಿ. ಇದರಿಂದ ಮುಖದ ಮೇಲಿನ ಎಣ್ಣೆಯಂಶ ಕಡಿಮೆಯಾಗುತ್ತದೆ. ಹಾಗೆಯೇ ಚರ್ಮದ ರಂಧ್ರಗಳಿಗೆ ಇಳಿದು ಮೊಡವೆ ಉಂಟಾಗದಂತೆ ತಡೆಯುತ್ತದೆ.ಮೊಟ್ಟೆಯ ಬಿಳಿ ಭಾಗ ಕೂಡ ಫೇಶಿಯಲ್ ರೀತಿಯ ಗ್ಲೋ ಕೊಡುತ್ತದೆ.

ಜೀರಿಗೆ: ಜೀರಿಗೆ ಬರೀ ತೂಕ ಕಳೆದುಕೊಳ್ಳಲು  ಅಂತ ತಿಳಿದಿದೆ,ಆದರೆ ಮುಖದ ಖಾಂತಿಗೆ ಕೂಡ ಉಪಯೋಗಕರವಾಗಿದೆ. ಜೀರಿಗೆ ನೀರಿನಿಂದ ಮುಖ ತೊಳೆಯಿರಿ ಜೀರಿಗೆಯನ್ನು ನೀರಿನಲ್ಲಿ ಅರ್ಧಗಂಟೆ ಕುದಿಸಿ. ನಂತರ ಈ ನೀರಿನಲ್ಲಿ ಮುಖ ತೊಳೆಯುವುದರಿಂದ ಹೊಳೆಯುವ ಚರ್ಮವನ್ನು ಪಡೆಯಬಹುದು. ಕಾಂತಿಯುತವಾದ ತ್ವಚೆಯನ್ನು ಪಡೆಯಲು ಇದು ಸುಲಭ ವಿಧಾನ.

ಸೌತೆಕಾಯಿ: ಮುಖ, ಕತ್ತು, ಕುತ್ತಿಗೆ ಹಾಗ ಕಣ್ಣಿನ ಸುತ್ತಲೂ ಕಪ್ಪು ಕಲೆಗಳನ್ನು ಹೋಗಲಾಡಿಸಿ ಕಾಂತಿ ಹೆಚ್ಚಿಸಲು ಉತ್ತಮ ಮನೆಮದ್ದು ಸೌತೆಕಾಯಿ ರಸ. ಸೌತೆಕಾಯಿ ರಸವನ್ನು ಚರ್ಮದ ಭಾಗಗಳಿಗೆ ಹಚ್ಚುವುದರಿಂದ ತ್ವಚೆಯನ್ನು ತೇಜೋಭರಿತವನ್ನಾಗಿಸುತ್ತದೆ. ಅಲ್ಲದೆ ಇದು ಮೊಡವೆ, ಕಲೆಗಳನ್ನು ಹೋಗಲಾಡಿಸುತ್ತದೆ.ಒಂದು ವೇಳೆ ನಿಮ್ಮ ಚರ್ಮ ಬಿಸಿಲು ಅಥವಾ ಇನ್ನಾವುದೋ ಕಾರಣಕ್ಕೆ ತನ್ನ ಸಹಜ ಕಳೆ ಮತ್ತು ವರ್ಣವನ್ನು ಕಳೆದುಕೊಂಡಿದ್ದರೆ ಸೌತೆಯ ಲೇಪನದ ಸತತ ಬಳಕೆಯಿಂದ ನಿಮ್ಮ ಸಹಜ ವರ್ಣವನ್ನು ಮರಳಿ ಪಡೆಯಬಹುದು. ಇದಕ್ಕಾಗಿ ಅರ್ಧ ಎಳೆ ಸೌತೆಕಾಯಿಯನ್ನು ಸಿಪ್ಪೆಸಹಿತ ತುರಿದು ಎರಡು ಚಮಚ ನೀರು ಸೇರಿಸಿ ಅರೆಯಿರಿ. ಈ ಲೇಪನವನ್ನು ಪ್ರತಿದಿನ ಸ್ವಚ್ಛವಾಗಿ ಮುಖ ತೊಳೆದುಕೊಂಡ ಬಳಿಕ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡು ಕೊಂಚ ಸಮಯ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಲೇಬೇಡಿ. ಕೆಲವೇ ದಿನಗಳಲ್ಲಿ ನಿಮ್ಮ ಚರ್ಮ ತನ್ನ ಸಹಜ ವರ್ಣವನ್ನು ಪಡೆಯತೊಡಗುತ್ತದೆ.

ಹಸಿರು ಟೀ ಕುದಿಸಿ ಸೋಸಿದ ನೀರು: ಒಂದು ಚಿಕ್ಕ ಚಮಚ ಮೊಸರಿಗೆ ಒಂದು ಚಿಕ್ಕ ಚಮಚ ಲಿಂಬೆಹಣ್ಣಿನ ರಸ ಸೇರಿಸಿ  ಇದಕ್ಕೆ ಒಂದರಿಂದ ಎರಡು ಚಿಕ್ಕ ಚಮಚ ಹಸಿರು ಟೀ ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ಲೇಪನವನ್ನು ಮುಖದ ಮೇಲೆ ನಯವಾಗಿ ಒಮ್ಮುಖವಾಗಿ ಹಚ್ಚಿರಿ. ಸುಮಾರು ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ. ಅತ್ಯದ್ಭುತ ಪರಿಣಾಮ ಕಾಣಬಹುದು ಮುಖದ ಮೇಲೆ.

ಬಾಳೆಹಣ್ಣು ಮತ್ತು ಜೇನು: ದಿನಕ್ಕೆ ಒಂದು ಬಾಳೆಹಣ್ಣು ತಿನ್ನುವುದು  ಕೂಡ ಒಳ್ಳೆಯದು. ಏಕೆಂದರೆ ಇದರಲ್ಲಿ ಮ್ಯಾಗ್ನಿಷಿಯಂ ಮತ್ತು ಪೊಟ್ಯಾಷಿಯಂ ಇರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆ ಹೊಳಪು ಹೆಚ್ಚುವುದು. ಬಾಳೆಹಣ್ಣು ಕೂಡ ನಿಮ್ಮ ಮುಖಕ್ಕೆ ಒಂದು ಒಳ್ಳೆಯ ಫೇಶಿಯಲ್ನಂತೆ ಕೆಲಸ ಮಾಡುತ್ತದೆ. ಬಾಳೆಹಣ್ಣನ್ನು ಜೇನಿನೊಂದಿಗೆ ಚೆನ್ನಾಗಿ ಕಿವುಚಿ ನುಣ್ಣನೆ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆದುಕೊಳ್ಳಿ. ನಿಮ್ಮ ಮುಖದ ಕಾಂತಿ ವೃದ್ದಿಸುವುದರಲ್ಲಿ ಸಂದೇಹವೇ ಇಲ್ಲ. ಸಮಯ ಇಲ್ಲ ಅನ್ನುವವರು ಬಾಳೆಹಣ್ಣಿನ ಸಿಪ್ಪೆಯಿಂದ ಚರ್ಮಕ್ಕೆ ಮಸಾಜ್ ಮಾಡಿದರೆ ಕೂಡ ಸಾಕು.

ಟೊಮೆಟೋ ಮತ್ತು ಜೇನುತುಪ್ಪ: ಟೊಮೆಟೋವು ಚರ್ಮಕ್ಕೆ ಶಕ್ತಿ ನೀಡಿ ಬಿಗಿಗೊಳಿಸುವುದು. ಇದು ಎಲ್ಲಾ ರೀತಿಯ ಚರ್ಮಕ್ಕೆ ಒಳ್ಳೆಯದು. ಜೇನುತುಪ್ಪದೊಂದಿಗೆ ಸೇರಿಸಿದಾಗ ಚರ್ಮಕ್ಕೆ ಒಳ್ಳೆಯ ಕಾಂತಿ ಸಿಗುವುದು. ಜೇನುತುಪ್ಪ ಮತ್ತು ಟೊಮೆಟೋ ಜ್ಯೂಸ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿಕೊಳ್ಳಿ. ಈ ಮಿಶ್ರಣ ಮುಖಕ್ಕೆ ಹಚ್ಚಿಕೊಳ್ಳಿ. ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ಮುಖ ತೊಳೆಯಿರಿ. ಸನ್ ಟ್ಯಾನ್ ಆದರೆ ಕೂಡ ಟೊಮೋಟೊ ಹಚ್ಚಿಕೊಳ್ಳಬಹುದು.

ಆಲೂಗಡ್ಡೆ: ಆಲೂಗಡ್ಡೆಯಲ್ಲಿ ಮನುಷ್ಯನ ಚರ್ಮಕ್ಕೆ ಬೇಕಾಗಿರುವಂತಹ ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ಇದರಿಂದ ನಿಮ್ಮ ಚರ್ಮ ಹೊಳಪು ಕಾಯ್ದುಕೊಳ್ಳುವುದು ಮಾತ್ರವಲ್ಲದೆ ಯಾವುದೇ ರೀತಿಯ ಚರ್ಮ ರೋಗದ ಸಮಸ್ಯೆಯಿಂದ ಸಹ ಮುಕ್ತಿ ಪಡೆಯುತ್ತದೆ. ಒಂದು ಮೀಡಿಯಂ ಗಾತ್ರದ ಆಲೂಗಡ್ಡೆಯಲ್ಲಿ ಅರ್ಧದಷ್ಟು ಆಲೂಗಡ್ಡೆಯನ್ನು ಚೆನ್ನಾಗಿ ತುರಿದು ಮಸ್ಲಿನ್ ಬಟ್ಟೆಯ ಸಹಾಯದಿಂದ ತುರಿದ ಆಲೂಗಡ್ಡೆಯಿಂದ ರಸ ತೆಗೆದುಕೊಳ್ಳಿ. ಈ ರಸವನ್ನು ನಿಮ್ಮ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಒಣಗಲು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನ ಸಹಾಯದಿಂದ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ಆಲೂಗಡ್ಡೆ ಸಿಪ್ಪೆ ಕತ್ತಿನ ಸುತ್ತ ಇರುವ ಕಪ್ಪು ಕಲೆಗೆ ಹಚ್ಚಿಕೊಂಡರೆ ಕಮ್ಮಿ ಆಗುತ್ತದೆ.

ದಾಳಿಂಬೆ, ಬಾದಾಮಿ ಮತ್ತು ರಾಸ್ಪ್ಬೆರಿ ಆಯಿಲ್: ನಿಮ್ಮ ಮುಖದ ಚರ್ಮ ನೈಸರ್ಗಿಕವಾಗಿ ಸುಂದರವಾಗಿ ಕಾಣಬೇಕಾದರೆ ಈ ಮೂರೂ ಆಹಾರ ಪದಾರ್ಥಗಳ ಮಿಶ್ರಣದ ಆಯಿಲ್ ನ ಉಪಯೋಗ ಮಾಡುವುದು ಒಳ್ಳೆಯದು. ಇದು ನಿಮ್ಮ ಒಣ ಚರ್ಮಕ್ಕೆ ತೇವಾಂಶವನ್ನು ಒದಗಿಸುವುದಲ್ಲದೆ, ಚರ್ಮದ ಮೇಲ್ಭಾಗದಲ್ಲಿ ಹೆಚ್ಚಿನ ಹೊಳಪನ್ನು ತಂದುಕೊಡುತ್ತದೆ. ನಂತರ ಮೂರರಿಂದ ಆರು ಹನಿಗಳಷ್ಟು ಆಯಿಲ್ ಮಿಶ್ರಣವನ್ನು ಅಂಗೈಯ ಮೇಲೆ ಹಾಕಿಕೊಂಡು ಸ್ವಲ್ಪ ಬಿಸಿ ಬರುವವರೆಗೆ ಎರಡು ಕೈಗಳನ್ನು ಉಜ್ಜಿ ನಂತರ ಮುಖದ ಮೇಲೆ ಅಪ್ಲೈ ಮಾಡಿ. ನಿಮ್ಮ ಕೈ ಬೆರಳುಗಳ ತುದಿಯಿಂದ ಮೆತ್ತಗೆ ಒತ್ತಿ ಮಸಾಜ್ ಮಾಡಿ. ಇದರಿಂದ ಮುಖದ ಮೇಲಿನ ಗೆರೆಗಳು ಮತ್ತು ಸುಕ್ಕುಗಳು ಮಾಯವಾಗುತ್ತವೆ.

ಅರಿಶಿನ ಪುಡಿ : ಶುದ್ಧ ಅರಿಶಿನವು ನಂಜು ನಿರೋಧಕವಾಗಿದೆ. ಮೊಡವೆಗಳ ವಿರುದ್ಧ ಹೋರಾಡುವ ಶಕ್ತಿ ಇರುವುದೂ ಅರಿಶಿನಕ್ಕೆ. ಇದು ಮುಖದ ಮೇಲೆ ಬೆಳೆವ ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ. ಅಷ್ಟೇ ಏಕೆ, ಅಂಡರ್ ಆರ್ಮ್ ಗೆ ಅರಿಶಿನ ಹಚ್ಚುವುದರಿಂದ ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ. ಜೊತೆಗೆ, ಇದು ಸೋಂಕು ಉಂಟಾಗದಂತೆ ತಡೆಯುತ್ತದೆ, ಜೊತೆಗೆ ವಾಸನೆಯನ್ನು ತೊಲಗಿಸುತ್ತದೆ. ಮಜ್ಜಿಗೆ ಅಥವಾ ಕಬ್ಬಿನ ರಸದ ಜೊತೆಗೆ ಅರಿಶಿನ ಪುಡಿ ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಕಣ್ಣಿನ ಕೆಳಗೆ, ಮುಖದ ಮೇಲೆ ಚೆನ್ನಾಗಿ ಹಚ್ಚಿ. ಇದು ಕಣ್ಣಿನ ಕೆಳಗಿನ ಡಾರ್ಕ್ ಸರ್ಕಲ್ ಹೋಗಲಾಡಿಸಿ ಮುಖ ಸುಕ್ಕಗಾದಂತೆ ನೋಡಿಕೊಳ್ಳುತ್ತದೆ.

ಕಡ್ಲೆಹಿಟ್ಟು: ಎರಡು ದೊಡ್ಡ ಚಮಚ ಕಡ್ಲೆಹಿಟ್ಟು, ಕೆಲವು ತೊಟ್ಟು ಲಿಂಬೆರಸ ಮತ್ತು ಒಂದು ದೊಡ್ಡ ಚಮಚ ಹಾಲಿನ ಕೆನೆ  ಮಿಶ್ರಣ ಮಾಡಿ  ಮುಖ ಚೆನ್ನಾಗಿ ತೊಳೆದುಕೊಂಡು ಗುಲಾಬಿ ನೀರಿನಿಂದ ಅಥವಾ ಕ್ಲೆನ್ಸರ್ ದ್ರಾವಣದಿಂದ ಒರೆಸಿ ,ಲೇಪವನ್ನು ಮುಖದ ತುಂಬಾ ಹಚ್ಚಿಕೊಳ್ಳಿ, ಹೊರಕಿವಿಯ ಸಹಿತ. ಸುಮಾರು ಹದಿನೈದರಿಂದ ಮೂವತ್ತು ನಿಮಿಷ ಹಾಗೇ ಒಣಗಲು ಬಿಡಿ. ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ  ಟವೆಲ್ಲಿನಿಂದ ಒತ್ತಿ ಒರೆಸಿಕೊಂಡು ಹೊಳೆಯುವ ತ್ವಚೆಯನ್ನು ಗಮನಿಸಿ.

ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಹಲವು ರೀತಿಯ ಔಷಧಿ ಗುಣಗಳಿವೆ. ಇದು ಮೊಡವೆಗೂ ಉತ್ತಮ ಮನೆಮದ್ದಾಗಿದೆ. ಬೆಳ್ಳುಳ್ಳಿಯಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮುಖದ ಮೇಲಿರುವ ಚುಕ್ಕೆಗಳು ಮತ್ತು ಮೊಡವೆಗಳು ಬೇಗನೆ ಮಾಯವಾಗುತ್ತದೆ.

ಕಿತ್ತಳೆಯ ಸಿಪ್ಪೆ: ಮೊಡವೆ ಸಮಸ್ಯೆಗಳಿದ್ದರೆ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದು ಉತ್ತಮ.

ಕೊತ್ತಂಬರಿ ಸೊಪ್ಪು ಮತ್ತು ಪುದಿನ ಸೊಪ್ಪು: ಮೊಡವೆ ತೊಂದರೆಗೆ ಕೊತ್ತಂಬರಿ ಸೊಪ್ಪು ಮತ್ತು ಪುದಿನ ಸೊಪ್ಪಿನ ಪೇಸ್ಟ್ ಕೂಡ ಉತ್ತಮ ಮನೆಮದ್ದು. ಈ ಪೇಸ್ಟ್ ತಯಾರಿಸಿದಾಗ ಅದಕ್ಕೆ ಚಿಟಿಕೆಯಷ್ಟು ಅರಿಶಿನ ಸೇರಿಸಬೇಕು. ಈ ಮೂರರ ಮಿಶ್ರಣವನ್ನು ಪ್ರತಿದಿನ ರಾತ್ರಿ ಹಚ್ಚುವುದರಿಂದ ಮೊಡವೆಯ ತೊಂದರೆಯಿಂದ ಪರಿಹಾರ ಕಾಣಬಹುದು.

ಸೌಂದರ್ಯ ಹೆಚ್ಚಿಸಲು ಬರೀ ಅದು ಇದು ಹಚ್ಚಿಕೊಂಡರೆ ಮಾತ್ರ ಸಾಲದು, ಮನಸ್ಸನ್ನು ಸಂತೋಷವಾಗಿ ಇಟ್ಟುಕೊಳ್ಳಬೇಕು, ಉತ್ತಮವಾದ ಆಹಾರ ಕೂಡ ಮುಖ್ಯವಾಗಿರುತ್ತದೆ. ಒಳ್ಳೆಯ ನಿದ್ರೆ ,ಮಲಗುವಾಗ ಮೆತ್ತನೆಯ ದಿಂಬು ಉಪಯೋಗಿಸಿ. ಎಳನೀರಿನ ಸೇವನೆಯಿಂದ ಮುಖದ ಕಾಂತಿ ಹೆಚ್ಚುತ್ತದೆ. ಹೌದು ಇದು ಕೇಳಲು ಆಶ್ಚರ್ಯವೆನಿಸಿದರೂ ಸತ್ಯ. ಎಳನೀರು ನಮ್ಮ ದೇಹಕ್ಕೆ ತಂಪನ್ನು ಒದಗಿಸುತ್ತದೆ. ಜೊತೆಗೆ ನಮ್ಮ ದೇಹವನ್ನು ಹೆಚ್ಚಿನ ನೀರಿನ ಅಂಶ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ದೇಹದಲ್ಲಿ ಸಾಕಷ್ಟು ನೀರಿನ ಪ್ರಮಾಣವಿದ್ದರೆ, ದೇಹದ ದಿನ ನಿತ್ಯದ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವುದರ ಜೊತೆಯಲ್ಲಿ ದೇಹದ ಮೇಲಿನ ಚರ್ಮದಲ್ಲಿ ನೀರಿನ ಅಂಶದ ಕೊರತೆ ಕಾಣುವುದಿಲ್ಲ. ಇದರಿಂದ ಚರ್ಮ ಒಣ ಚರ್ಮವಾಗಿ ಬದಲಾಗುವುದು ತಪ್ಪುತ್ತದೆ. ಮುಖದ ಮೇಲೂ ಅಷ್ಟೇ ಯಾವುದೇ ಸುಕ್ಕುಗಳು ಅಥವಾ ಚರ್ಮ ಸಂಬಂಧಿತ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಗಂಗೆ ಭಗವಂತ ಶಿವನ ಪತ್ನಿಯೋ ಅಥವಾ ಮಾನವನಾದ ಶಂತನು ಪತ್ನಿಯೋ, ಗಂಗೆ ಭೂಮಿಗೆ ಬರಲು ಭಗೀರಥ ಪ್ರಯತ್ನ ಎನ್ನುವರು ಯಾಕೆ?

ಗಂಗೆ ಭಗವಂತ ಶಿವನ ಪತ್ನಿಯೋ ಅಥವಾ ಮಾನವನಾದ ಶಂತನು ಪತ್ನಿಯೋ, ಗಂಗೆ ಭೂಮಿಗೆ ಬರಲು ಭಗೀರಥ ಪ್ರಯತ್ನ ಎನ್ನುವರು ಯಾಕೆ?

ನಮ್ಮ ದೇಹಕ್ಕೆ ಪ್ರೋಟಿನ್ ಎಷ್ಟು ಅಗತ್ಯ? ಯಾವ ಯಾವ ಆಹಾರ ಪದಾರ್ಥಗಳಲ್ಲಿ ಪ್ರೋಟಿನ್ ಅಧಿಕವಾಗಿದೆ?

ನಮ್ಮ ದೇಹಕ್ಕೆ ಪ್ರೋಟಿನ್ ಎಷ್ಟು ಅಗತ್ಯ? ಯಾವ ಯಾವ ಆಹಾರ ಪದಾರ್ಥಗಳಲ್ಲಿ ಪ್ರೋಟಿನ್ ಅಧಿಕವಾಗಿದೆ?