in

ಮದರಂಗಿ ಸೊಪ್ಪಿನಲ್ಲಿ ಇದೆ ಹಲವಾರು ಬಗೆಯ ಉಪಯೋಗಗಳು

ಮದರಂಗಿ ಸೊಪ್ಪಿನಲ್ಲಿ ಇದೆ ಹಲವಾರು ಬಗೆಯ ಉಪಯೋಗಗಳು

ಮದರಂಗಿ ಅಥವಾ ಗೋರಂಟಿ ಅಂತಲೂ ಕರೆಯುತ್ತಾರೆ. ಈ ಗಿಡ ವಿಪುಲವಾಗಿ ಕವಲೊಡೆದು ಬೆಳೆಯುವ ಪೊದೆಸಸ್ಯ. ಬೂದು ಕಂದು ಮಿಶ್ರಿತ ಬಣ್ಣದ ತೊಗಟೆ, ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿರುವ ಸರಳ, ಅಖಂಡ ಹಾಗೂ ಅಂಡಾಕಾರದ ಎಲೆಗಳು ಇದರ ಮುಖ್ಯ ಲಕ್ಷಣಗಳಲ್ಲಿ ಕೆಲವು. ಹೂಗಳು ಚಿಕ್ಕ ಗಾತ್ರದವು ಮತ್ತು ಬಿಳಿ ಇಲ್ಲವೆ ಗುಲಾಬಿ ಬಣ್ಣದವು.ಇವಕ್ಕೆ ಸುವಾಸನೆಯಿದೆ. ಫಲ ಸಂಪುಟ ಮಾದರಿಯದು. ಹಣ್ಣಿನೊಳಗೆ ನಯವಾದ ಅಸಂಖ್ಯಾತ ಬೀಜಗಳಿವೆ.
ಗೋರಂಟಿ ಗಿಡವನ್ನು ಉಷ್ಣ ಹಾಗೂ ಸಮಶೀತೋಷ್ಣ ವಲಯಗಳ ಅನೇಕ ಪ್ರದೇಶಗಳಲ್ಲಿ ಬೆಳೆಸುತ್ತಾರೆ. ಭಾರತ, ಈಜಿಪ್ಟ್‌, ಪರ್ಷಿಯ, ಪಾಕಿಸ್ತಾನ, ಸೂಡಾನ್, ಮಡಗಾಸ್ಕರ್ಗಳಲ್ಲಿ ಇದರ ಎಲೆಗಳಿಂದ ದೊರೆಯುವ ಬಣ್ಣಕ್ಕಾಗಿ ಗೋರಂಟಿ ಗಿಡವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲಾಗುತ್ತಿದೆ. ಭಾರತದಲ್ಲಿ ಬಣ್ಣಕ್ಕಾಗಿ ಬೆಳೆಸುವ ಪ್ರದೇಶಗಳಲ್ಲಿ ಮುಖ್ಯವಾದವು ಪಂಜಾಬ್,ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ತಾನಗಳು. ಅದರಲ್ಲೂ ಪಂಜಾಬಿನ ಫರೀದಾಬಾದ್ ಮತ್ತು ಗುಜರಾತಿನ ಬಾರ್ದೋಲಿ ಹಾಗೂ ಮಾಧಿಗಳು ಗೋರಂಟಿ ಉತ್ಪಾದನೆಯ ಮುಖ್ಯ ಕೇಂದ್ರಗಳಾಗಿವೆ.
ಇನ್ನು ಗೋರಂಟಿ ಗಿಡ ಯಾವ ರೀತಿಯ ಮಣ್ಣಿನಲ್ಲಾದರೂ ಬೆಳೆಯಬಲ್ಲದು. ಆದರೆ ನೆಲ ಜವುಗಾಗಿರಬಾರದು. ಗೋರಂಟಿಯನ್ನು ಬೀಜಗಳಿಂದ ಅಥವಾ ಕಾಂಡತುಂಡು ಗಳಿಂದ ವೃದ್ಧಿಸಬಹುದು. ಗೋರಂಟಿಯ ಎಲೆಗಳನ್ನು ವರ್ಷಕ್ಕೆ ಎರಡು ಸಲ (ಏಪ್ರಿಲ್-ಮೇ ಮತ್ತು ಅಕ್ಟೋಬರ್-ನವೆಂಬರ್) ಕಟಾಯಿಸುತ್ತಾರೆ. ಒಂದು ಎಕರೆಗೆ ಸುಮಾರು 350-750 ಕಿಗ್ರಾಂ ಒಣ ಎಲೆಗಳನ್ನು ಪಡೆಯಬಹುದು. ನೀರಾವರಿ ಭೂಮಿಯಲ್ಲಿ ಇಳುವರಿ 920 ಕಿಗ್ರಾಂನಷ್ಟು ಹೆಚ್ಚಾಗಿರಬಹುದು.

ಮದರಂಗಿಯನ್ನು ಕೈಗಳಿಗೆ ಹಚ್ಚಿಕೊಳ್ಳುವುದಾದರೆ, ಮದರಂಗಿಯ ಸೊಪ್ಪು, ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಅರೆದು, ಕೈಗಳಿಗೆ ಹಚ್ಚಬೇಕು. ಜನರು ಮದರಂಗಿಯನ್ನು ಬೇರೆ ವಿಧಾನದಲ್ಲಿ ಸುಲಭವಾಗಿ ತಯಾರಿಸಿಕೊಳ್ಳಲು ದಾರಿಯನ್ನು ಕಂಡುಕೊಂಡಿದ್ದಾರೆ. ಹೇಗೆಂದರೆ,ಮದರಂಗಿ ಸೊಪ್ಪನ್ನು ಒಣಗಿಸಿ ಪುಡಿಮಾಡಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಸೇರಿಸಿ ಕಲಸಿ ಹಚ್ಚುವ ವಿಧಾನವನ್ನು ಬಳಸಿದ್ದಾರೆ. ಹೀಗೆ ಮದರಂಗಿಯಲ್ಲಿ ಚಿತ್ರಗಳನ್ನು ಬಿಡಿಸಿಕೊಳ್ಳುವ ರೂಢಿಯನ್ನು ಮಾಡಿಕೊಂಡಿದ್ದಾರೆ. ಹೀಗೆ ಸಣ್ಣ ಸಣ್ಣ ಚಿತ್ರಗಳನ್ನು ಬರೆದು ಅದಕ್ಕೆ ಡಿಸೈನ್ ಎಂದು ಹೆಸರಿಸಿಕೊಂಡಿದ್ದಾರೆ. ಮದರಂಗಿಯ ಡಿಸೈನ್ ಗಳಿಗೆ ಕೆಲವು ಹೆಸರುಗಳಿವೆ, ಇಂಡಿಯನ್ ಡಿಸೈನ್, ಅರೇಬಿಕ್ ಡಿಸೈನ್, ಶೈಲಿ ಅರೇಬಿಕ್ ಡಿಸೈನ್ ಇತ್ಯಾದಿ…

ಮದರಂಗಿ ಸೊಪ್ಪಿನಲ್ಲಿ ಇದೆ ಹಲವಾರು ಬಗೆಯ ಉಪಯೋಗಗಳು

ಗೋರಂಟಿ ಎಲೆಗಳಿಗೆ ಔಷಧೀಯ ಗುಣಗಳಿವೆ. ಕಷಾಯದ ರೂಪದಲ್ಲಿ ಇಲ್ಲವೆ ಸರಿಯ ರೂಪದಲ್ಲಿ ಇವನ್ನು ಹುಣ್ಣು, ತರಚು ಹಾಗೂ ಸುಟ್ಟಗಾಯಗಳು ಮತ್ತು ಕೆಲವು ಚರ್ಮರೋಗಗಳಿಗೆ ಬಳಸುತ್ತಾರೆ. ಕಷಾಯ ಗಂಟಲುನೋವಿಗೆ ಒಳ್ಳೆಯ ಮದ್ದು. ಗೋರಂಟಿಯ ಹೂವನ್ನು ಆವಿ ಅಸವೀಕರಣಕ್ಕೊಳಪಡಿಸಿ ಒಂದು ಬಗೆಯ ಪರಿಮಳಯುಕ್ತ ಚಂಚಲ ತೈಲವನ್ನು ಪಡೆಯಬಹುದು. ಇದಕ್ಕೆ ಮೆಹಂದಿ ಎಣ್ಣೆ ಎಂದು ಹೆಸರು. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಗೋರಂಟಿಯ ಚೌಬೀನೆಯನ್ನು ಉಪಕರಣಗಳ ಹಿಡಿ, ಗೂಟ ಮುಂತಾದವುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಎಳೆಯ ಕಡ್ಡಿಗಳನ್ನು ಹಲ್ಲುಜ್ಜಲು ಇಂಡೋನೇಷ್ಯದಲ್ಲಿ ಬಳಸುತ್ತಾರೆ. ಗೋರಂಟಿಯನ್ನು ವಾಣಿಜ್ಯ ದೃಷ್ಟಿಯಿಂದ ದೆಹಲಿ, ಗುಜರಾತ್ ಮತ್ತು ಮಾಲ್ವ ಎಂಬ ಮೂರು ಬಗೆಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ದೆಹಲಿ ಗೋರಂಟಿ ಅತ್ಯುತ್ತಮವಾದ್ದು.

ಮದರಂಗಿ ಸೊಪ್ಪಿನಲ್ಲಿ ಇರುವ ಔಷಧಿ ಗುಣಗಳು

ಮದರಂಗಿ ಸೊಪ್ಪಿನಲ್ಲಿ ಇದೆ ಹಲವಾರು ಬಗೆಯ ಉಪಯೋಗಗಳು

೧. ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು 2ಗ್ರಾಂ ಆರತಿ ಕರ್ಪೂರವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ತಲೆಗೆ ಹಚ್ಚುವುದು. ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ಕರ್ಪೂರ ಮತ್ತು ಆಲಿವ್ ಎಣ್ಣೆಯನ್ನು ಬೆರಿಸಿ ತಲೆ ಕೂದಲಿಗೆ ಹಚ್ಚುವುದು. ಇದರಿಂದ ಹೇನುಗಳು, ಸೀರುಗಳು ನಾಶವಾಗುವುವು.

೨. ಮೆಹಂದಿ ಕೂದಲಿಗೆ ಅತ್ಯುತ್ತಮ ಕಂಡೀಷನರ್ ಆಗಿದೆ. ಇದು ಕಾಂತಿ ಮತ್ತು ವಾಲ್ಯೂಮ್ ಅನ್ನು ಹೆಚ್ಚಿಸುವುದಲ್ಲದೇ, ಅದರ ಮೇಲೆ ಲೇಪನವನ್ನು ರಚಿಸುವ ಮೂಲಕ ಮತ್ತಷ್ಟು ಹಾನಿಯನ್ನು ತಡೆಯುತ್ತದೆ.

೩. ಚರ್ಮದ ಮೇಲೆ ಮೆಹೆಂದಿ ಬಳಸುವುದರಿಂದ ಅನೇಕ ಔಷಧೀಯ ಪ್ರಯೋಜನಗಳಿವೆ. ಹೆನ್ನಾ ನೈಸರ್ಗಿಕ ಪ್ರಯೋಜನಗಳನ್ನು ಹೊಂದಿದೆ. ಇದು ದೇಹಕ್ಕೆ ತಂಪು ಬೀರುವುದರಿಂದ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ವಿಶೇಷ ಗುಣದಿಂದಲೇ ಇದನ್ನು ಮದುಮಗಳ ಕೈಗಳಿಗೆ ಹಚ್ಚಲಾಗುತ್ತದೆ.

೪. ಮೆಹೆಂದಿ ಎಲೆಗಳನ್ನು ನೀರಿನಿಂದ ಸುತ್ತಿ ಕೈಯಲ್ಲಿ ಇಡುವುದರಿಂದ, ಅನಾರೋಗ್ಯದ ಸಮಯದಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಭಾರತದಲ್ಲಿ ಧಾರ್ಮಿಕ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಕೋಪ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ ಇದು ವೈರಲ್ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ.

೫. ಮೆಹಂದಿಯಲ್ಲಿ ಕಪ್ಪು ಅಥವಾ ಕಂದು ಬಣ್ಣದ ಒಂದು ಅಂಶವಿದ್ದು, ಇದನ್ನು ಎಲ್ಲಿ ಲೇಪಿಸುತ್ತೇವೆಯೋ ಅಲ್ಲಿ ಕೆಂಪು ಅಥವಾ ಕಂದು ಬಣ್ಣದ ಕಲೆ ಮೂಡುತ್ತದೆ. ಹಾಗಾಗಿ ಇದನ್ನು ಸೌಂದರ್ಯ ಪ್ರಸಾದನ ಸಾಮಾಗ್ರಿಗಳಲ್ಲಿ ಬಳಸುತ್ತಾರೆ. ಹೆಚ್ಚಾಗಿ ಇದನ್ನು ಕೈಗಳಿಗೆ ಅಥವಾ ಚರ್ಮದ ಮೇಲೆ ವಿನ್ಯಾಸಗಳನ್ನು ರೂಪಿಸಲು ಹಾಗು ಕೂದಲಿಗೆ ಬಣ್ಣವನ್ನು ತರಲು ಬಳಸುತ್ತಾರೆ. ಇದರ ಜೊತೆಗೆ ಮೆಹಂದಿಯಲ್ಲಿ ಹಲವಾರು ಆರೋಗ್ಯಯುತ ಪ್ರಯೋಜನಗಳು ಇವೆಯೆಂದು ತಿಳಿದು ಬಂದಿದೆ.

೬. ಮೆಹಂದಿಯಲ್ಲಿ ತಂಪನ್ನುಂಟು ಮಾಡುವ ಅಂಶಗಳು ಅಡಕಗೊಂಡಿವೆ. ಇದೊಂದು ಪರಿಣಾಮಕಾರಿ ಮೊಡವೆ ನಿರೋಧಕ ಮೂಲಿಕೆಯಾಗಿದೆ. ಏಕೆಂದರೆ ಇದು ಮೊಡವೆಗಳ ಕಾರಕಗಳನ್ನು ನಾಶ ಮಾಡಿ ಮೊಡವೆಗಳುಂಟಾಗದಂತೆ ತಡೆಯುತ್ತದೆ. ಮೆಹಂದಿಯನ್ನು ಹಚ್ಚಿಕೊಂಡರೆ ದೇಹದಲ್ಲಿರುವ ಉಷ್ಣವು ಇಳಿದು ಹೋಗುತ್ತದೆ. ಮೆಹಂದಿಯನ್ನು ಕಾಲಿಗೆ ಹಚ್ಚಿಕೊಂಡರೆ ಅದು ರಾತ್ರೋ ರಾತ್ರಿ ದೇಹಕ್ಕೆ ಅಗತ್ಯವಾದ ತಂಪನ್ನು ನೀಡುತ್ತದೆ.

೭. ಮೆಹಂದಿಯು ಸುಟ್ಟಗಾಯಗಳಿಗೆ ಅತ್ಯುತ್ತಮವಾದ ಔಷಧಿಯಾಗಿರುತ್ತದೆ. ಏಕೆಂದರೆ ಮೆಹಂದಿಯಲ್ಲಿ ತಂಪಿನ ಅಂಶ ಇರುವುದರಿಂದ, ಮೆಹಂದಿ ಎಲೆಗಳನ್ನು ಸುಟ್ಟಗಾಯಗಳ ಮೇಲೆ ಉಜ್ಜಿದರೆ ನೋವು ತಕ್ಷಣ ಉಪಶಮನಗೊಳ್ಳುತ್ತದೆ.

೯. ಆಮಶಂಕೆಯಿಂದ ಬಳಲುತ್ತಿರುವವರಿಗೆ ಇದು ಪರಿಣಾಮಕಾರಿ ಪ್ರಭಾವ ಬೀರುತ್ತದೆ. ಮೆಹಂದಿ ಬೀಜಗಳನ್ನು ಪುಡಿ ಮಾಡಿ ತುಪ್ಪದೊಂದಿಗೆ ಬೆರೆಸಿ ಸಣ್ಣ ಉಂಡೆ ಮಾಡಿಕೊಂಡು ನೀರಿನೊಂದಿಗೆ ಸೇವಿಸಬೇಕು.

೧೦. ಜಾಂಡೀಸ್ ಮತ್ತು ಲಿವರ್ ತೊಂದರೆಯಿಂದ ಬಳಲುತ್ತಿರುವವರು ಮೆಹಂದಿ ಗಿಡದ ಬೇರಿನ ತುಂಡನ್ನು ನೀರಿನಲ್ಲಿ ಬೇಯಿಸಿ ಡಿಕಾಕ್ಷನ್ ತಯಾರಿಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಪರಿಣಾಮಕಾರಿಯಾಗಿರುತ್ತದೆ.

೧೧. ಗಂಟಲು ಬೇನೆಗೆ ಒಳಗಾದವರು ಮೆಹಂದಿ ಎಲೆಯ ಡಿಕಾಕ್ಷನ್ ಅನ್ನು ಗಂಟಲಿಗೆ ಹಾಕಿಕೊಂಡು ಮುಕ್ಕಳಿಸಿದರೆ ಆದಷ್ಟು ಬೇಗ ಗುಣಹೊಂದುತ್ತಾರೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು

ಅಳಿದು ಹೋಗಿರುವ ಕೆಲವೊಂದು ಹಳ್ಳಿ ಆಟಗಳು

ತುಳುನಾಡಿನಲ್ಲಿ ಬಲೀಂದ್ರ ಕರೆಯುವ ಪದ್ಧತಿ ಇದೆ

ತುಳುನಾಡಿನಲ್ಲಿ ಬಲೀಂದ್ರ ಕರೆಯುವ ಪದ್ಧತಿ ಇದೆ