in ,

ಕರಂಡೆ ಹಣ್ಣು : ಚಿಕ್ಕ ವಯಸ್ಸಿನಲ್ಲಿ ಉಚಿತವಾಗಿ ಸಿಗುತ್ತಿದ್ದ ದ್ರಾಕ್ಷಿ

ಕರಂಡೆ ಹಣ್ಣು
ಕರಂಡೆ ಹಣ್ಣು

ಕರಂಡೆ ಹಣ್ಣು, ನಾವಂತೂ ಚಿಕ್ಕ ವಯಸ್ಸಿನಲ್ಲಿ ಈ ಹಣ್ಣನ್ನು ತಿಂದಿರುವುದಕ್ಕೆ ಲೆಕ್ಕವಿಲ್ಲ. ಬೇಸಿಗೆ ರಜೆ ಬಂದರೆ ಸಾಕು, ಗುಡ್ಡದ ಕಡೆ,ಗದ್ದೆ ಕಡೆ, ಪಕ್ಕ ಪೊದೆಯಲ್ಲಿ ಇರುತ್ತದೆ. ಕರಂಡೆ ಹಣ್ಣು ತಿಂತೀವಿ ಅಂದರೆ ಬಿಡಲ್ಲ, ಆಡುವ ನೆಪ ಹೇಳಿ ಹೋಗಿ ತಿಂದು ಬರುತ್ತಿದ್ದೆವು. ಹೆಸರು ಕೇಳಿದ ತಕ್ಷಣ ಬಾಯಿಯಲ್ಲಿ ನೀರು ಬರುವುದು.

ಒಣಭೂಮಿ, ಬೆಟ್ಟಗಳಲ್ಲಿ ಹೆಚ್ಚಿನ ನೀರಿನ ಅಗತ್ಯವಿಲ್ಲದೆ ಬೆಳೆಯುವ ಹಣ್ಣಿನ ಗಿಡ ಕರಂಡೆ. ನೆಲದಿಂದ ಹೆಚ್ಚೇನೂ ಎತ್ತರವಿಲ್ಲದ, ಮುಳ್ಳನ್ನು ಹೊಂದಿರುವ ಚಿಕ್ಕ ಗಿಡಗಳಲ್ಲಿ ಬೆಳೆಯುವ ಕರಂಡೆ ಹಣ್ಣು, ಇದು ಬೆಳೆಯುವ ಪ್ರದೇಶಗಳಲ್ಲಿನ ಜನರಿಗೆ ಚಿರ ಪರಿಚಿತ ಮತ್ತು ಅತ್ಯುಪಯೋಗಿ ಹಣ್ಣು. ಜೀವಸತ್ವಗಳು, ಶರ್ಕರ ಪಿಷ್ಟಗಳು, ಸಸಾರ ಜನಕ, ಕೊಬ್ಬು, ಖನಿಜಾಂಶ ಹೀಗೆ ಮನುಕುಲಕ್ಕೆ ಅತ್ಯಾವಶ್ಯಕವಾದ ಆಹಾರಾಂಶಗಳ ಗಣಿ ಈ ಸ್ವಾದಿಷ್ಟ ಫಲಗಳು ದೊರಕಿಸಿಕೊಡುತ್ತವೆ.

ಕರಂಡೆಯ ವೈಜ್ಞಾನಿಕ ಹೆಸರು ಕ್ಯಾರಿಸ್ಸಾ ಕರಂಡಾಸ್. ಹೂ ಬಿಡುವ ಸಸ್ಯ ವರ್ಗಕ್ಕೆ ಸೇರಿದ ಕರಂಡೆ ಅಪೋಸೈನೇಸಿಯೇ ಕುಟುಂಬದ ಸದಸ್ಯ. ಈ ಹಣ್ಣಿಗೆ ಕವಳೆ ಕಾಯಿ, ಗರಜಲ ಕಾಯಿ ಎಂದೂ ಕರೆಯುತ್ತಾರೆ. ಪಶ್ಚಿಮ ಘಟ್ಟಗಳ ಹಾಗೂ ತಪ್ಪಲಿನ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಕರಂಡೆಯ ಗಿಡ ಬೆಳೆಯುತ್ತದೆ. ಹಿಮಾಲಯದ ಬೆಟ್ಟಗಳಲ್ಲೂ ಈ ಗಿಡವನ್ನು ಕಾಣಬಹುದು. ಭಾರತವಲ್ಲದೆ ನೇಪಾಳ, ಅಫ್ಘಾನಿಸ್ಥಾನ, ಶ್ರೀಲಂಕಾ ದೇಶಗಳಲ್ಲೂ ಈ ಗಿಡ ಬೆಳೆಯುತ್ತದೆ. ಕರಂಡೆ ಹಣ್ಣು ಮಾಗಿದಾಗ ಹುಳಿಮಿಶ್ರಿತ ಸಿಹಿ ಇರುತ್ತದೆ. ಇದರ ಕಾಯಿಯನ್ನು ಉಪ್ಪಿನಕಾಯಿ ಮಾಡಲು ಬಳಸುತ್ತಾರೆ.

ಕರಂಡೆ ಹಣ್ಣು : ಚಿಕ್ಕ ವಯಸ್ಸಿನಲ್ಲಿ ಉಚಿತವಾಗಿ ಸಿಗುತ್ತಿದ್ದ ದ್ರಾಕ್ಷಿ
ಕರಂಡೆ ಹಣ್ಣಿನ ಗಿಡ

ಕರಂಡೆ ಹಣ್ಣಿನ ಗಿಡ ಚಿಕ್ಕ ಪೊದೆಯಂತಹ ಸಸ್ಯ. ನೆಲದಿಂದ ಸುಮಾರು ೫-೭ ಅಡಿಗಳಷ್ಟು ಬೆಳೆದಿರುವುದು ಸಾಮಾನ್ಯ. ಹೆಚ್ಚು ನೀರಿನ ಅಗತ್ಯವಿಲ್ಲದ ಇದು, ಬಿಸಿಲು ಪ್ರದೇಶಗಳಲ್ಲಿ ಸುಲಭವಾಗಿ ಬೆಳೆಯುತ್ತದೆ. ಗಿಡವು ನೀಳವಾದ ಕೊಂಬೆಗಳನ್ನು ಹೊಂದಿದ್ದು ಹೆಚ್ಚಾಗಿ ಎರಡು ಕವಲುಗಳಾಗಿ ಚಿಗುರೊಡೆದು ಬೆಳೆಯುತ್ತದೆ. ಗೆಲ್ಲುಗಳ ಮೇಲೆ ಅಲ್ಲಲ್ಲಿ ಸುಮಾರು ಒಂದು ಇಂಚು ಉದ್ದವಿರುವ ಮುಳ್ಳುಗಳಿರುತ್ತವೆ. ಎಲೆಗಳು ಎರಡರಿಂದ ಮೂರು ಇಂಚು ಉದ್ದವಿದ್ದು, ತಿಳಿ ಹಸಿರಿನಿಂದ ಗಾಢ ಹಸಿರು ಬಣ್ಣವಿರುತ್ತವೆ. ಗೆಲ್ಲುಗಳ ಮೇಲೆ ಮುಳ್ಳುಗಳ ಗಂಟಿನೊಡನೆಯೇ ಬೆಳೆದ ಎಲೆಗಳು ಒಂದಕ್ಕೊಂದು ಅಭಿಮುಖವಾಗಿರುತ್ತವೆ. ಯಾವುದೇ ಆರೈಕೆಯಿಲ್ಲದೆ ಗುಡ್ಡಗಳ ಮೇಲೆ ಬೆಳೆಯುವ ಈ ಗಿಡವನ್ನು ರೈತರು ಬೇಲಿಗಾಗಿಯೂ ಉಪಯೋಗಿಸುತ್ತಾರೆ. ಬೀಜದಿಂದ ಹೊಸ ಗಿಡವನ್ನು ಪಡೆಯಬಹುದು.

ಬೇಸಿಗೆಯ ಕಾಲದಲ್ಲಿ ಮಾರ್ಚ್ ತಿಂಗಳಿನಿಂದ ಮೇ-ಜೂನ್ ವರೆಗೂ ಕರಂಡೆ ಹಣ್ಣು ದೊರೆಯುತ್ತದೆ. ಕರಂಡೆ ಹಣ್ಣು ನೋಡಲು ಕಪ್ಪು ದ್ರಾಕ್ಷಿಯನ್ನು ಹೋಲುತ್ತದೆ. ಗಾತ್ರದಲ್ಲಿ ದ್ರಾಕ್ಷಿಗಿಂತ ಸ್ವಲ್ಪ ಸಣ್ಣಗಿರುವ ಈ ಹಣ್ಣು ಆಕಾರದಲ್ಲಿ ಗುಂಡಗಿರುತ್ತದೆ. ಸುಮಾರು ೫-೬ ಕಾಯಿಗಳ ಗೊಂಚಲು ಅಲ್ಲಲ್ಲಿ ಬೆಳೆದಿರುತ್ತದೆ. ಗೊಂಚಲಲ್ಲದೆ ಒಂದು, ಎರಡು ಕಾಯಿಗಳೂ ಇರಬಹುದು. ಚಿಕ್ಕದಿರುವಾಗ ಎಲೆಯಂತಹುದೇ ಹಸಿರು ಬಣ್ಣವಿರುವ ಕಾಯಿಗಳು ಬೆಳೆಯುತ್ತಿದ್ದಂತೆ ಹಸಿರು ಮಿಶ್ರಿತ ಗುಲಾಬಿ-ಕೆಂಪು ಬಣ್ಣಕ್ಕೆ ತಿರುಗುತ್ತವೆ. ಪೂರ್ತಿ ಮಾಗುವ ಮೊದಲು ಕಂದು-ಕೆಂಪು ಬಣ್ಣವಿರುವ ಕಾಯಿ ಮಾಗಿದಾಗ ಪೂರ್ತಿ ಕಪ್ಪಾಗುತ್ತದೆ. ಕಾಯಿ ಇದ್ದಾಗ ಕೊಯ್ದರೆ ತೊಟ್ಟಿನಿಂದ ಬಿಳಿಯಾದ ಹಾಲು ಒಸರುತ್ತದೆ. ಹಣ್ಣಿನ ತೊಟ್ಟಿನಿಂದಲೂ ಸ್ವಲ್ಪವಾಗಿ ಈ ಹಾಲು ಒಸರುವುದು. ಹಣ್ಣಿನೊಳಗಡೆ ಅರ್ಧ ಚಂದ್ರಾಕೃತಿಯ, ಒಂದರ ಪಕ್ಕ ಒಂದು ಒತ್ತಾಗಿರುವ ಅನೇಕ ತೆಳ್ಳನೆಯ ಚಿಕ್ಕ ಬೀಜಗಳಿರುತ್ತವೆ.

ಕಾಯಿಯು ಪೂರ್ತಿ ಒಗರಾಗಿದ್ದು ತಿನ್ನಲು ಅಷ್ಟೇನೂ ಹಿತಕರವಲ್ಲ. ಮಾಗುತ್ತಿದ್ದಂತೆಯೇ ಹುಳಿಯಾಗುವ ಇದು ತಿನ್ನಲು ಯೋಗ್ಯವಾಗುತ್ತದೆ. ಪೂರ್ತಿ ಮಾಗಿದ ಹಣ್ಣು ಮಧುರವಾದ ಸಿಹಿ ರುಚಿಯನ್ನು ಹೊಂದಿದ್ದು ಸ್ವಲ್ಪ ಹುಳಿಯ ಛಾಯೆಯೂ ಇದ್ದು ತಿನ್ನಲು ಹಿತವಾಗಿರುತ್ತದೆ. ಕಾಯಿ-ಹಣ್ಣು ಕೊಯ್ದಾಗ ಒಸರುವ ಅಂಟಾಗಿರುವ ಹಾಲು ತಿನ್ನಲು ಅಡ್ಡಿಯಾಗದು. ಕೈಗೆ, ಹಲ್ಲಿಗೆ ಅಂಟಿದರೂ ನೀರಿನಿಂದ ತೊಳೆದರೆ ಸುಲಭವಾಗಿ ಬಿಟ್ಟುಹೋಗುವುದು.

ಕರಂಡೆ ಹಣ್ಣು : ಚಿಕ್ಕ ವಯಸ್ಸಿನಲ್ಲಿ ಉಚಿತವಾಗಿ ಸಿಗುತ್ತಿದ್ದ ದ್ರಾಕ್ಷಿ
ಕರಂಡೆ ಹಣ್ಣು

ಹಣ್ಣನ್ನು ತಿನ್ನಲು ಉಪಯೋಗಿಸುತ್ತಾರೆ. ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಈ ಹಣ್ಣು ಪಿತ್ಥ ನಿವಾರಕವೂ ಹೌದು. ಆದರೆ ಉಷ್ಣ ಗುಣವಿರುವ ಈ ಹಣ್ಣನ್ನು ಜಾಸ್ತಿ ತಿಂದರೆ ಹೊಟ್ಟೆ ನೋವು, ಅಜೀರ್ಣವಾಗುವ ಸಂಭವವಿದೆ. ಕರಂಡೆಯ ಹೆಚ್ಚಿನ ಉಪಯೋಗವಾಗುವುದು ಉಪ್ಪಿನಕಾಯಿ ತಯಾರಿಸಲು. ಕಾಯಿಯು ಹುಳಿಯಾಗಿರುವುದರಿಂದ ಇದರ ಉಪ್ಪಿನಕಾಯಿಯು ರುಚಿಕರವಾಗಿರುತ್ತದೆ.

ಹಣ್ಣಿನಲ್ಲಿ ಪೆಕ್ಟಿನ್ ಎಂಬ ರಾಸಾಯನಿಕವಿರುವುದರಿಂದ ಇದನ್ನು ಜಾಮ್, ಜೆಲ್ಲಿಗಳ ತಯಾರಿಯಲ್ಲಿಯೂ ಉಪಯೋಗಿಸುತ್ತಾರೆ. ಕರಂಡೆಯ ಉಪಯೋಗವನ್ನು ಮನಗಂಡ ರಾಜಸ್ಥಾನ, ಬಿಹಾರ, ಗುಜರಾತ್, ಉತ್ತರಪ್ರದೇಶ ರಾಜ್ಯಗಳ ಕೆಲವು ರೈತರು ಇದನ್ನು ವಾಣಿಜ್ಯ ಬೆಳೆಯಾಗಿಯೂ ಅಲ್ಪ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ.

ವಾಂತಿ, ಯಕ್ರತ್ತಿನ ತೊಂದರೆ, ಹೊಟ್ಟೆನೋವು, ಹೃದಯದ ಕಾಯಿಲೆಗಳಿಗೆ ಕವಳಿಹಣ್ಣಿನ ಔಷಧಿ. ಕಾಯಿಯ ರಸದಿಂದ ಅಜೀರ್ಣ ನಿವಾರಣೆ.ಎಲೆಯ ರಸ ಮತ್ತು ತೊಗಟೆಯ ಕಷಾಯ ಜ್ವರಕ್ಕೆ ಗುಣಕಾರಿ. ಹೊಟ್ಟೆಹುಣ್ಣು, ಬಾಯಿಹುಣ್ಣು ಮತ್ತು ತುರಿಕೆಗೆ ಬೇರಿನ ಉಪಯೋಗವಾಗುತ್ತದೆ. ಚರ್ಮ ಹದಗೊಳಿಸಲು ಮತ್ತು ಬಣ್ಣ ಹಾಕಲು ಕಾಯಿ ಬಳಸುತ್ತಾರೆ.

ಭಾರತದಲ್ಲಿ ಹುಟ್ಟಿ ಬೆಳೆದ ಈ ಗಿಡಗಳು ಸುಮಾರು ೩-೫ ಮೀಟರ್ ಎತ್ತರವಾಗಿವೆ. ಹೊಳೆಯುವ ಹಸಿರೆಲೆಗಳ ಮುಳ್ಳು ಪೊದೆ. ಎಲೆ, ಕಾಯಿ ಕಿತ್ತರೆ ಬಿಳಿ ಅಂಟುದ್ರವ ಸೂಸುವಿಕೆ. ಕೆಂಪು ಬಣ್ಣದ ಎಳೆ ಕಾಯಿ ಬಲಿತಾಗ ಹಸಿರು ಬಣ್ಣಕ್ಕೆ ತಿರುಗುತ್ತದೆ. ಗೋಲಿಯಾಕಾರದ, ಕಪ್ಪು ಬಣ್ಣದ ಕಳಿತ ಹಣ್ಣು ಹುಳಿಮಿಶ್ರಿತ ಸಿಹಿ. ಸಮುದ್ರಮಟ್ಟದಿಂದ ಹಿಮಾಲಯದವರೆಗೆ ಮರುಳುಗಾಡು, ಗುಡ್ಡಬೆಟ್ಟ, ಪಾಳುಜಮೀನಿನಲ್ಲಿ ಬೆಳೆಯಬಲ್ಲ ದಾಡಸಿ ಸಸ್ಯ. ಇದು ಒಂದು ಬೀಜದಿಂದ ಸಸ್ಯಾಭಿವೃಧ್ದಿ ಯಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

75 Comments

ಏಲಕ್ಕಿ ಮತ್ತು ಲವಂಗ

ಏಲಕ್ಕಿ ಮತ್ತು ಲವಂಗ ಬೆಳೆ

ಕೊತ್ತಂಬರಿ ಸೊಪ್ಪು

ಅಡಿಗೆ ಘಮಕ್ಕೆ ಹಾಕುವ ಕೊತ್ತಂಬರಿ ಸೊಪ್ಪು