in ,

ಏಲಕ್ಕಿ ಮತ್ತು ಲವಂಗ ಬೆಳೆ

ಏಲಕ್ಕಿ ಮತ್ತು ಲವಂಗ
ಏಲಕ್ಕಿ ಮತ್ತು ಲವಂಗ

ಲವಂಗ ಖಾರದಿಂದ ಕೂಡಿದ ಪರಿಮಳಯುಕ್ತ ಸಾಂಬಾರ ವಸ್ತು. ಅನೇಕ ವಿಧದಲ್ಲಿ ಉಪಯುಕ್ತ. ಮೂಲತ: ಇಂಡೋನೇಷ್ಯಾದ್ದಾಗಿದ್ದು ಅಲ್ಲಿ ಈಗಲೂ ಕಾಡುಮರವಾಗಿ ಕಂಡುಬರುತ್ತದೆ. ಪೋರ್ಚುಗೀಸರು ಇದನ್ನು ಯುರೋಪಿಗೆ ಒಯ್ದರು. ಭಾರತಕ್ಕೆ ಮಾರಿಷಸ್ ಮೂಲದಿಂದ ಬಂದಿದೆ.

ಸಸ್ಯಶಾಸ್ತ್ರೀಯ ವರ್ಗೀಕರಣ
ಲವಂಗ ಮಿರ್ಟೀಸೀ ಕುಟುಂಬಕ್ಕೆ ಸೇರಿದ್ದು, ಸಿಝಿಯಮ್ ಅರೋಮಾಟಿಕಮ್ ಎಂದು ಸಸ್ಯಶಾಸ್ತ್ರೀಯ ಹೆಸರು. ಯೂಜಿಯ ಕ್ಯಾರಿಯೊಪಿಲ್ಲೇಟ ಎಂದೂ ಕರೆಯುತ್ತಾರೆ. ಇದು ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯುತ್ತದೆ.

ಹಲ್ಲು ನೋವಿಗೆ ಉತ್ತಮ ಔಷಧಿ. ಕೆಮ್ಮಿಗು ತೆಗೆದುಕೊಳ್ಳಬಹುದು. ಸಾಂಬಾರ್ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುವ ಲವಂಗಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಕಾರಣ ಇದನ್ನು ಆಯುರ್ವೇದ ಔಷಧ, ಟೂಥ್ ಪೌಡರ್, ಪೇಸ್ಟ್ ತಯಾರಿಕೆಯಲ್ಲಿ ಯಥೇಚ್ಛವಾಗಿ ಬಳಸುತ್ತಾರೆ. ಲವಂಗವನ್ನು ಕರ್ನಾಟಕದ ರಾಜ್ಯದ ಮಲೆನಾಡು, ಕರಾವಳಿ ಪ್ರದೇಶದಲ್ಲಿ ಬೆಳೆಯುತ್ತಾರೆ.

ಲವಂಗ ದೀರ್ಘಕಾಲೀನ ಬೆಳೆ. ಇದನ್ನು ಹೆಚ್ಚಾಗಿ ಅಂತರ ಬೆಳೆಯಾಗಿ ಬೆಳೆಯುತ್ತಾರೆ. ಇತರ ಬೆಳೆಗಳ ಮಧ್ಯೆ ಅಥವಾ ಬದುಗಳಲ್ಲಿ ಸಸಿ ನಾಟಿ ಮಾಡುತ್ತಾರೆ. ವರ್ಷದ ಯಾವುದೇ ತಿಂಗಳಲ್ಲೂ ನಾಟಿ ಮಾಡಬಹುದು. ಸಸಿಗಳನ್ನು 20:20 ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಗುಂಡಿ ಆಳ ಒಂದೂವರೆ ಅಡಿ ಇದ್ದರೆ ಸಾಕು. ಗುಂಡಿಗೆ ಅಗತ್ಯಕ್ಕೆ ತಕ್ಕಷ್ಟು ಕೊಟ್ಟಿಗೆ ಗೊಬ್ಬರ ಹಾಕಬೇಕು. ಆಗಾಗ ನೀರು ಹಾಯಿಸುತ್ತಿರಬೇಕು. ಸಸಿ ನಾಟಿ ಮಾಡಿದ 5 ವರ್ಷದ ನಂತರ ಫಸಲು ನೀಡಲಾರಂಭಿಸುತ್ತದೆ. ಸಾಮಾನ್ಯ ಇದಕ್ಕೆ ಎಲೆಚುಕ್ಕೆ ರೋಗ ಹೆಚ್ಚು ಬಾಧಿಸುವುದು. ಇದು ಬಿಟ್ಟರೆ ಬೇರೆ ಯಾವ ರೋಗ ಬಾಧಿಸುವುದು ಕಮ್ಮಿ. ಇದರಲ್ಲಿ ಔಷಧಿಯ ಗುಣವಿರುವುದರಿಂದ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಹಾಗಾಗಿ ರೋಗಬಾಧೆ ಕಮ್ಮಿ ಎಂಬುದು ಅನುಭವಿ ಕೃಷಿಕರ ಮಾತು. ಚೆನ್ನಾಗಿ ನಿರ್ವಹಣೆ ಮಾಡಿದರೆ ಗಿಡವೊಂದರಿಂದ 1- 10 ಕೆ.ಜಿ.ವರೆಗೆ ಇಳುವರಿ ಪಡೆಯಬಹುದು.

ಏಲಕ್ಕಿ ಮತ್ತು ಲವಂಗ ಬೆಳೆ
ಲವಂಗ ಗಿಡ

ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯುತ್ತದೆ. ಆದರೂ ಮರಳು ಮಿಶ್ರಿತ ಕೆಂಪು ಮಣ್ಣು ಚೆನ್ನಾಗಿ ಬೆಳೆಯುತ್ತದೆ. ಅದೇ ರೀತಿ ಲವಂಗ ಗಿಡ ಜಾಸ್ತಿ ಉಷ್ಣ ತಾಳದು. ಹಾಗಾಗಿ ಇದನ್ನು ಬೆಳೆಯಲು ಮಲೆನಾಡು ಪ್ರದೇಶ ಉತ್ತಮ.

ಏಲಕ್ಕಿ

ಏಲಕ್ಕಿ ಒಂದು ಸಾಂಬಾರು ಬೆಳೆ. ಇದನ್ನು ಔಷಧೀಯ ಸಸ್ಯವಾಗಿಯೂ ಉಪಯೋಗಿಸುತ್ತಾರೆ. ಇದು ತನ್ನ ಪರಿಮಳದಿಂದಾಗಿ ಜಗತ್ಪ್ರಸಿದ್ಧವಾಗಿದೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ ಉಪಯೋಗಿಸಲಾಗುತ್ತದೆ. ಇದನ್ನು ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯಲಾಗುತ್ತದೆ. ಏಷ್ಯ ಖಂಡದ ಉಷ್ಣವಲಯವೇ ಮೂಲಸ್ಥಾನ. ಕೇರಳವನ್ನು ಪೂರ್ವಪ್ರಾಂತ್ಯದ “ಏಲಕ್ಕಿ ನಾಡು” ಎಂದು ಕರೆಯಲಾಗುತ್ತಿತ್ತು.

ಇವು ಬಹುವಾರ್ಷಿಕ ಸಸ್ಯ ಮೂಲಿಕೆಗಳು. ಕಾಂಡವು ಎಲೆಗಳಿಂದ ಕೂಡಿದ್ದು,ಮೃದುವಾಗಿದೆ. ಎಲೆಯು ಮೂಲ ಬೇರಿನ ಬಳಿ ಅಥವಾ ಕಾಂಡದ ಮೇಲೆ ಬೆಳೆಯುತ್ತದೆ. ಇದರ ಹೂವುಗಳು ದ್ವಿಲಿಂಗಿಗಳಾಗಿರುತ್ತವೆ.

ಏಲಕ್ಕಿಯನ್ನು ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ, ಕೊಡಗು ಮತ್ತು ಸಕಲೇಶಪುರಗಳಲ್ಲಿ ಬೆಳೆಯಲಾಗುತ್ತದೆ.

ದೊಡ್ಡ ಏಲಕ್ಕಿ

ಇದರ ವೈಜ್ಞಾನಿಕ ಹೆಸರು ಎಲೆಟ್ಟೇರಿಯ ಕಾರ್ಡಮೊಮಂ ಮೇಜರ್. ಸಣ್ಣ ಏಲಕ್ಕಿಯ ಮೂಲವು ದೊಡ್ಡ ಏಲಕ್ಕಿ ಎಂದು ಸಸ್ಯವಿಜ್ಞಾನಿಗಳು ಹೇಳುತ್ತಾರೆ. ಪಶ್ಚಿಮಘಟ್ಟ ಪ್ರದೇಶದಲ್ಲಿ, ಶ್ರೀಲಂಕಾದ ಕಾಡುಗಳಲ್ಲಿ ವನ್ಯ ಸಸ್ಯವಾಗಿ ಬೆಳೆಯುತ್ತದೆ. ಇದರ ಗಿಡವು ೯ ಅಡಿಯಷ್ಟು ಎತ್ತರ ಬೆಳೆಯುತ್ತದೆ. ಇದರ ಸುವಾಸನೆ ಸಣ್ಣ ಏಲಕ್ಕಿಗಿಂತ ಕಡಿಮೆ.

ಸಣ್ಣ ಏಲಕ್ಕಿ

ಏಲಕ್ಕಿ ಮತ್ತು ಲವಂಗ ಬೆಳೆ
ಸಣ್ಣ ಏಲಕ್ಕಿ

ನಾವು ಸಾಮಾನ್ಯವಾಗಿ ಬಳಸುವ ಏಲಕ್ಕಿ ಇದಾಗಿದೆ. ಇದರ ಬೀಜಗಳು ಗಾತ್ರದಲ್ಲಿ ತುಂಬಾ ಸಣ್ಣಗಿರುತ್ತದೆ. ಸಾಂಬಾರ ಪದಾರ್ಥವಾಗಿ ಇದನ್ನು ಉಪಯೋಗಿಸುತ್ತಾರೆ.

ಹವಾಗುಣ ಮತ್ತು ಮಣ್ಣು

ಸಮುದ್ರ ಮಟ್ಟದಿಂದ ೬೦೦ ರಿಂದ ಸುಮಾರು ೧೫೦೦ ಮೀಟರ್ ಎತ್ತರದವರೆಗಿನ ಪ್ರದೇಶದಲ್ಲಿ ಏಲಕ್ಕಿ ಬೆಳೆಯನ್ನು ಬೆಳೆಯಬಹುದಾಗಿದೆ. ವಾರ್ಷಿಕ ಮಳೆಯು ೨೫೦ ರಿಂದ ೩೦೦ ಸೆಂ.ಮೀ. ಇರುವ ಪ್ರದೇಶದಲ್ಲಿ ಉತ್ತಮ ಇಳುವರಿ ದೊರೆಯುತ್ತದೆ. ಬಿಸಿಲು ನೇರವಾಗಿ ಗಿಡದ ಮೇಲೆ ಬೀಳದಂತಹ ವಾತಾವರಣದಲ್ಲಿ ಈ ಗಿಡವನ್ನು ಬೆಳೆಸುವುದು ಉತ್ತಮ. ವಾತಾವರಣದ ಉಷ್ಣತೆಯು ೧೨ ರಿಂದ ೩೫ ಡಿಗ್ರಿ ಉಷ್ಣಾಂಶವನ್ನು ಹೊಂದಿರುವುದು ಈ ಬೆಳೆಗೆ ಸೂಕ್ತ.

ನೀರು ಸರಿಯಾಗಿ ಹರಿದುಹೊಗುವಂತಹ ಕೆಂಪು ಮಣ್ಣು, ಮೆಕ್ಕಲುಮಣ್ಣು ಏಲಕ್ಕಿ ಕೃಷಿಗೆ ಒಳ್ಳೆಯದು. ಸಾವಯವ ಪದಾರ್ಥಗಳು ಹೇರಳವಾಗಿದ್ದರೆ ಏಲಕ್ಕಿಯು ಉತ್ತಮ ಇಳುವರಿಯನ್ನು ನೀಡುತ್ತದೆ. ಇದು ಹೆಚ್ಚಾಗಿ ನೆರಳನ್ನು ಬಯಸುವುದರಿಂದ ಮರದ ಅಡಿಯಲ್ಲಿ ಬೆಳೆಸುವುದು ಸೂಕ್ತ. ಹೆಚ್ಚಾಗಿ ಇದನ್ನು ಉಪಬೆಳೆಯಾಗಿ ಬೆಳೆಯುತ್ತಾರೆ.

ವಿಶ್ವದ ಒಟ್ಟು ಏಲಕ್ಕಿ ಉತ್ಪಾದನೆಯಲ್ಲಿ, ಶೇ.೭೫ ರಷ್ಟು ಭಾರತದಲ್ಲಿ ಆಗುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಏಲಕ್ಕಿ ಉತ್ಪಾದನೆಯು ಸಾಕಷ್ಟು ಕಡಿಮೆಯಾಗಿದೆ. ಇದಕ್ಕೆ ಕಾರಣ, ಮಳೆಯ ಅಭಾವ, ಪ್ರತಿಕೂಲ ಹವಮಾನ ಇಂತಹ ಹಲವಾರು ಪರಿಸ್ಥಿತಿಗಳು. ಏಲಕ್ಕಿ ಬೇಸಾಯ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದೆ. ಈ ರಾಜ್ಯಗಳಲ್ಲಿ ೯೪೦೦ ಹೆಕ್ಟೇರ್ ಪ್ರದೇಶವಿದೆ. ರಾಜ್ಯಾವಾರು ಬೆಳೆ ಪ್ರದೇಶ ಹಾಗೂ ಶೇಕಡಾ ಪ್ರಮಾಣ ಈ ರೀತಿ ಇದೆ.

ಭಾರತದ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಏಲಕ್ಕಿ ಬೆಳೆಯುತ್ತದೆ. ಈ ಕಾಡುಗಳ ಹೆಮ್ಮರಗಳ ನೆರಳಡಿಯಲ್ಲಿ ಬೆಚ್ಛಗಿನ ಹವೆಯಿದ್ದು, ತೇವಾಂಶವಿರುವ ವಾತಾವರಣದಲ್ಲಿ 10 ಡಿಗ್ರಿ ಸೆಂಟಿಗ್ರೇಡ್ನಿನಿಂದ 35 ಡಿಗ್ರಿ ಸೆಂಟಿಗ್ರೇಡ್ ಉಷ್ಣವಿರುವ ಹವಾಮಾನದಲ್ಲಿ ಏಲಕ್ಕಿ ಉತ್ತಮವಾಗಿ ಬೆಳೆಯುತ್ತದೆ. ವರ್ಷಕ್ಕೆ ೧೫೦ ಸೆಂ.ಮೀ. ಮಳೆ ಎಲ್ಲ ಕಾಲಕ್ಕೂ ಚೆನ್ನಾಗಿ ವಿಸ್ತರಿಸಿ ಬೀಳುವ ಪ್ರದೇಶದಲ್ಲಿ ಏಲಕ್ಕಿ ಉತ್ತಮವಾಗಿ ಬೆಳೆಯುತ್ತದೆ. ಈ ಬೆಳೆಗೆ ಗಾಳಿ ಹೆಚ್ಚಾಗಿ ಬೇಕಿಲ್ಲ. ಬಿಸಿಲನ್ನು ಸಹಿಸಲಾರದು. ಇಳಿಜಾರು ಪ್ರದೇಶ, ಅಧಿಕ ಪೌಷ್ಟಿಕಾಂಶವಿರುವ ಕಾಡಿನ ಎಲೆ, ತರಗು ಮಿಶ್ರಿತ ಗೊಬ್ಬರ ಮಣ್ಣಿನ ಪ್ರದೇಶ ಸೂಕ್ತ. ಅಂತಹ ಪ್ರದೇಶವು ೬೦೦ ರಿಂದ ೧೫೦೦ ಮೀ. ಎತ್ತರದಲ್ಲಿರಬೇಕು.

ಏಲಕ್ಕಿ ಸಸಿಗಳ ಬೆಳವಣಿಗೆ

ಏಲಕ್ಕಿ ಮತ್ತು ಲವಂಗ ಬೆಳೆ
ಸಸಿಗಳ ಬೆಳವಣಿಗೆ


ಕಂದು ಅಥವ ಬೇರು ಸಸಿಗಳಿಂದ ಎಲಕ್ಕಿ ಸಸಿಗಳನ್ನು ಉತ್ಪತ್ತಿ ಮಾಡುವುದೇ ಸರಳ ಮಾರ್ಗ. ಆದರೆ, ಉತ್ತಮ ಫಲಿತಾಂಶ ಬೀಜ ಮೊಳೆಯಿಸಿ ಸಸಿ ತೆಗೆದಾಗ ಸಿಗುವುದು. ಏಕೆಂದರೆ, ಕಟ್ಟೆ ರೋಗ ಹರಡುವಿಕೆಯನ್ನು ತಡೆಗಟ್ಟಬಹುದು. ಹಾಗಿದ್ದರು ಕೂಡ ಬೀಜಗಳಿಂದ ಮೊಳೆತ ಸಸಿ ಉತ್ಪಾದನೆ ಸ್ವಲ್ಪ ಕಷ್ಟವೇ ಎನ್ನಬಹುದು. ಬೀಜಗಳು ಮೊಳೆಯುವ ಪ್ರಮಾಣ ಕಡಿಮೆ ಮಟ್ಟದಲ್ಲಿರುವುದು, ರೋಗರುಜಿನ, ಕ್ರಿಮಿಕೀಟ ಉಪದ್ರವ ಹೆಚ್ಚಾಗಿರುವುದು ಇದಕ್ಕೆ ಕಾರಣ. ಸರಿಯಾದ ಬೀಜದ ಆಯ್ಕೆ ಹಾಗು ಕಾಲ ಕಾಲಕ್ಕೆ ಸೂಕ್ತ ಕೃಷಿ ಕ್ರಮ ಇವುಗಳಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದು.

ಬೀಜ ಸಂಗ್ರಹಣೆಯನ್ನು ಅತ್ಯಂತ ಜಾಗರೂಕತೆಯಿಂದ ಮಾಡಬೇಕು. ಅವು ರೋಗಗಳಿಗೆ ತುತ್ತಾಗಿಲ್ಲವೆಂಬುದನ್ನು ಖಚಿತಪಡಿಸಿಕೊಂಡು, ಅಂಥ ಹಣ್ಣುಗಳ ಬೀಜ ಸಂಗ್ರಹಿಸಬೇಕು. ಆಯ್ಕೆ ಮಾಡಿದ ಹಣ್ಣುಗಳನ್ನು ನೀರಿನಲ್ಲಿ ನೆನೆಸಿ ನಯವಾಗಿ ಹಿಚುಕಿ ಬೀಜವನ್ನು ಹೊರ ತೆಗೆಯಬೇಕು. ಆ ಬೀಜಗಳನ್ನು ತಣ್ಣೀರಿನಲ್ಲಿ ನಾಲ್ಕು ಬಾರಿ ತೊಳೆದು ಬೀಜದ ಮೇಲಿನ ತೊಳೆಯನ್ನು ತೆಗೆಯಬೇಕು. ನಂತರ ನೀರನ್ನು ಬಸಿದು ಬೀಜಗಳನ್ನು ಬೂದಿಯೊಡನೆ ಬೆರೆಸಿ, ನೆರಳಿನಲ್ಲಿ ಮೂರು ದಿನಗಳ ಕಾಲ ಒಣಗಲು ಬಿಡಬೇಕು. ಬೀಜಗಳಿಂದ ಮೊಳಕೆ ಚೆನ್ನಾಗಿ ಬರಲು ಮತ್ತು ಏಕಕಾಲದಲ್ಲಿ ಮೊಳಕೆಯಾಗಲು ಬೀಜಗಳನ್ನು ಕೋಶದಿಂದ ತೆಗೆದ ಕೂಡಲೇ ಬಿತ್ತಬೇಕು.

ಆಯ್ಕೆಯಾದ ಸ್ಥಳಗಳಲ್ಲಿ ಬೆಳೆದಿರುವ ಗಿಡಮರಗಳನ್ನು ಬೇರು ಸಮೇತ ಕಿತ್ತು ೩೦ ಸೆಂ. ಮೀ. ಆಳಕ್ಕೆ ಅಗೆತ ಮಾಡಿ , ಮಣ್ಣನ್ನು ಹದಗೊಳಿಸಿ ಅನುಕೂಲಕ್ಕೆ ತಕ್ಕಂತೆ ಪಾತಿಗಳನ್ನು ಏರ್ಪಡಿಸಬೇಕು. ಈ ಪಾತಿಗಳಲ್ಲಿ ಕಾಡು ಮಣ್ಣನ್ನು ಹರಡಬೇಕು. ಬೀಜಗಳನ್ನು ಎರಚಬಹುದು ಇಲ್ಲವೆ ಸಾಲಾಗಿ ಬಿತ್ತಬಹುದು. ನಂತರ ಬೆಳಿಗ್ಗೆ ಮತ್ತು ಸಾಯಂಕಾಲ ನೀರನ್ನು ಹಾಕಬೇಕು. ಮೊಳಕೆಯೊಡೆಯಲು ಪ್ರಾರಂಭಿಸಿದಾಗ ತರಗನ್ನು ತೆಗೆಯಬೇಕು. ಬಿಸಿಲು ತಗಲದಂತೆ ಚಪ್ಪರ ಹಾಕಿ ಗಿಡಗಳನ್ನು ರಕ್ಷಿಸಬೇಕು.

ಏಲಕ್ಕಿಯನ್ನು ಔಷಧವಾಗಿ ಉಪಯೋಗಿಸುತ್ತಾರೆ. ಹಾಗೂ ಸಾಂಬಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆ. ಫ್ಲೂವಿನಂತಹ ಜ್ವರಕ್ಕೆ ಇದನ್ನು ಔಷಧವಾಗಿ ಬಳಸುತ್ತಾರೆ. ದನಗಳಲ್ಲಿ ಹೊಟ್ಟೆ ಉಬ್ಬರ ಸಮಸ್ಯೆಯು ಕಂಡುಬಂದಾಗಲು ಇದರ ಬಳಕೆಯನ್ನು ಮಾಡಬಹುದಾಗಿದೆ. ಮಕ್ಕಳ ಬಿಕ್ಕಳುವಿಕೆಗೆ ಇದನ್ನು ಸಕ್ಕರೆಯೊಂದಿಗೆ ಉಪಯೋಗಿಸಬಹುದು. ಅಜೀರ್ಣ ಮತ್ತು ವಾಕರಿಕೆಗೂ ಔಷಧವಾಗಿ ಬಳಸುತ್ತಾರೆ. ಅನಾರೋಗ್ಯದ ಸಂದರ್ಭದಲ್ಲಿನ ಬಾಯಿಯ ವಾಸನೆಗೆ ಏಲಕ್ಕಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಬಹುದು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಏಲಕ್ಕಿಯನ್ನು ಬಳಸುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಭೀಮನು ತನ್ನ ಪತ್ನಿಯಾದ ದ್ರೌಪದಿಗೆ ತಂದುಕೊಟ್ಟ ಸೌಗಂಧಿಕಾ ಪುಷ್ಪ

ಭೀಮನು ತನ್ನ ಪತ್ನಿಯಾದ ದ್ರೌಪದಿಗೆ ತಂದುಕೊಟ್ಟ ಪುಷ್ಪ ಸೌಗಂಧಿಕಾ

ಕರಂಡೆ ಹಣ್ಣು

ಕರಂಡೆ ಹಣ್ಣು : ಚಿಕ್ಕ ವಯಸ್ಸಿನಲ್ಲಿ ಉಚಿತವಾಗಿ ಸಿಗುತ್ತಿದ್ದ ದ್ರಾಕ್ಷಿ