in

ಕಸ್ತೂರಿ ಪರಿಮಳ

ಕಸ್ತೂರಿ ಪರಿಮಳ
ಕಸ್ತೂರಿ ಪರಿಮಳ

ಕಸ್ತೂರಿಯು ಗಂಡು ಕಸ್ತೂರಿಮೃಗದ ಉದರ ಮತ್ತು ಜನಕಾಂಗಗಳ ಮಧ್ಯೆ ಸ್ಥಿತವಾಗಿರುವ ಒಂದು ಗ್ರಂಥಿಯಲ್ಲಿ ಉತ್ಪಾದನೆಗೊಳ್ಳುವ ಸುವಾಸನೆ ಉಳ್ಳ ಪದಾರ್ಥ. ಅಂಗಡಿಯಲ್ಲಿ ಮಾರುವ ಕಸ್ತೂರಿ ಎಂಬ ವಸ್ತು ಈ ಪ್ರಾಣಿಯಿಂದಲೇ ಬಂದುದು. ಆದರೆ ಇತರ ಕೆಲವು ಬಗೆಯ ಪ್ರಾಣಿಗಳೂ ಇದೇ ವಾಸನೆಯನ್ನು ಹೊರಸೂಸುತ್ತವೆ. ಉದಾಹರಣೆಗೆ ಕಸ್ತೂರಿ ದನ, ಕಸ್ತೂರಿ ಇಲಿ, ಕಸ್ತೂರಿ ಬಾತು, ಕಸ್ತೂರಿ ಮೂಗಿಲಿ ಇತ್ಯಾದಿ. ಅಲ್ಲದೆ ಕೆಲವು ಸಸ್ಯಗಳಲ್ಲೂ ಈ ಬಗೆಯ ವಾಸನೆ ಸೂಸುವ ಗ್ರಂಥಿಗಳಿವೆ. ಆ ಸಸ್ಯಗಳನ್ನು ಕಸ್ತೂರಿ ಗಿಡಗಳೆಂದು ಕರೆಯಲಾಗುತ್ತದೆ.

ಕಸ್ತೂರಿ ಮೃಗವನ್ನು ಕೊಂದು ಅದರ ಹೊಟ್ಟೆಯಲ್ಲಿನ ಕಸ್ತೂರಿ ಗ್ರಂಥಿಯನ್ನು ಹೊರತೆಗೆದು ಬಿಸಿಲಿನಲ್ಲೋ, ಬಿಸಿ ಎಣ್ಣೆಯಲ್ಲಿ ಅದ್ದಿಯೋ, ಒಣಗಿಸುತ್ತಾರೆ. ಕೆಲವು ಸಾರಿ ಕಸ್ತೂರಿ ಗ್ರಂಥಿಯಿಂದ ಕಸ್ತೂರಿಯನ್ನು ಹೊರತೆಗೆದು ಶುದ್ಧೀಕರಿಸಿ ಮಾರುವುದೂ ಉಂಟು.

ಕಸ್ತೂರಿಯಲ್ಲಿ ಮೂರು ಬಗೆಗಳುಂಟು : 1) ಟಾಂಕಿಂಗ್ ಅಥವಾ ಚೀನೀ ಕಸ್ತೂರಿ, 2) ಅಸ್ಸಾಮ್ ಅಥವಾ ನೇಪಾಳದ ಕಸ್ತೂರಿ, 3) ಕಬಾರ್ಡಿನ್ ಅಥವಾ ರಷ್ಯದ ಕಸ್ತೂರಿ. ಟಾಂಕಿಂಗ್ ಕಸ್ತೂರಿಯೇ ಇವುಗಳಲ್ಲೆಲ್ಲ ಶ್ರೇಷ್ಠವಾದುದು, ಹಾಗೂ ಹೆಚ್ಚಿನ ಬೆಲೆಯದು.

ಕಸ್ತೂರಿ ಹೊಚ್ಚ ಹೊಸದಾಗಿರುವಾಗ ಮೃದುವಾಗಿಯೂ ಜಿಡ್ಡುಜಿಡ್ಡಾಗಿಯೂ ಇರುತ್ತದೆ. ಅದರ ಬಣ್ಣ ಕೆನ್ನೀಲಿ. ವಾಸನೆ ಸಹಿಸಲಾಗದಷ್ಟು ಕಟು, ರುಚಿ ಕಹಿ. ಕುದಿಯುವ ನೀರಿನಲ್ಲಿ ಸ್ವಲ್ಪ ಕರಗುತ್ತದೆ. ಇದು ಸುಗಂಧ ದ್ರವ್ಯಗಳನ್ನು ತಯಾರಿಸಲು ಉಪಯೋಗಿಸುವ ಶ್ರೇಷ್ಠತಮ ಮೂಲದ್ರವ್ಯವೆಂದು ಹೆಸರಾಗಿದೆ.

ಕಸ್ತೂರಿ ಪರಿಮಳ
ಕಸ್ತೂರಿ ಗ್ರಂಥಿ

ಔಷಧೀಯ ಗುಣಗಳು :
ಕಸ್ತೂರಿಗೆ ಔಷಧೀಯ ಗುಣಗಳೂ ಉಂಟು. ಇದನ್ನು ಉತ್ತೇಜಕ, ಕಾಮೋದ್ದೀಪಕ, ಕಫಹಾರಕ, ಸ್ವೇದಕಾರಿಯಾಗಿ ಉಪಯೋಗಿಸುತ್ತಾರೆ.

ಸುಗಂಧದ ಕಾರಣ :
ಕಸ್ತೂರಿಯ ವೈಶಿಷ್ಟ್ಯಪೂರ್ಣ ಸುಗಂಧಕ್ಕೆ ಕಾರಣ ಅದರಲ್ಲಿನ ಮಸ್ಕೋನ್‍ ಎಂಬ ವಸ್ತು. ವಾಲ್ಬಾಮ್ ಎಂಬಾತ 1906ರಲ್ಲಿ ಮೊದಲ ಬಾರಿಗೆ ಇದನ್ನು ಕಸ್ತೂರಿಯಿಂದ ಬೇರ್ಪಡಿಸಿ ಶುದ್ಧೀಕರಿಸಿದ. ರಾಸಾಯನಿಕವಾಗಿ ಇದು 3-ಮೀಥೈಲ್-ಸೈಕ್ಲೊಪೆಂಟ ಡಿಕಾನೋನ್ ಎಂದು ತಿಳಿದುಬಂದಿದೆ.

ಕೃತಕ ಕಸ್ತೂರಿ :
ಸ್ವಾಭಾವಿಕ ಕಸ್ತೂರಿಯಂಥ ವಾಸನೆಯಿರುವ ಹಲವಾರು ಬಗೆಯ ಸಂಯುಕ್ತಗಳನ್ನು ಕೃತಕವಾಗಿ ಸಂಶ್ಲೇಷಿಸಬಹುದಾಗಿದೆ. (1888) ರಲ್ಲಿ ಬಾರ್ ಎಂಬಾತ ಅಲ್ಯೂಮಿನಿಯಮ್ ಕ್ಲೋರೈಡಿನೊಡನೆ ಟಾಲೀನ್ ಮತ್ತು ಐಸೊಬ್ಯೂಟೈಲ್ ಬ್ರೋಮೈಡುಗಳನ್ನು ಸಂಘನನ (ಕಂಡೆನ್ಸೇಷನ್) ಕ್ರಿಯೆಗೊಳಪಡಿಸಿ ಅದರಿಂದ ಬಂದ ವಸ್ತುವನ್ನು ನೈಟ್ರೀಕರಣ ಮಾಡಿ ಕೃತಕ ಕಸ್ತೂರಿಯನ್ನು ತಯಾರಿಸಿದ. ಇದಕ್ಕೆ ಬಾರ್‍ಮಸ್ಕ್ ಎಂದು ಹೆಸರು. ಇದಲ್ಲದೆ ಕಸ್ತೂರಿಯನ್ನು ಹೋಲುವ ಜ಼ೈಲೀನ್ ಮಸ್ಕ್, ಮಸ್ಕ್‌ಕೀಟೋನ್, ಮಾಸ್ಕೀನ್, ಫ್ಯಾಂಟೋಲಿಡ್ ಎಂಬ ಸಂಯುಕ್ತಗಳನ್ನು ಕೃತಕವಾಗಿ ತಯಾರಿಸಬಹುದಾಗಿದೆ. ಇವೆಲ್ಲವನ್ನು ಸಾಬೂನು ಇತ್ಯಾದಿ ವಸ್ತುಗಳಿಗೆ ಸುವಾಸನೆ ಕೊಡಲು ಬಳಸುತ್ತಾರೆ.

ಕಸ್ತೂರಿಮೃಗವು ಜಿಂಕೆಗಳ ವರ್ಗಕ್ಕೆ ಸೇರಿದ ಒಂದು ಪ್ರಾಣಿ. ಪ್ರಾಣಿಶಾಸ್ತ್ರದ ಪ್ರಕಾರ ಕಸ್ತೂರಿಮೃಗವನ್ನು ಮೋಷಿಡೇ ಕುಟುಂಬದಲ್ಲಿರಿಸಲಾಗಿದೆ. ಇವು ಸಾಮಾನ್ಯ ಜಿಂಕೆಗಿಂತ ಪ್ರಾಚೀನ ಪ್ರಾಣಿಗಳು. ಕಸ್ತೂರಿಮೃಗಕ್ಕೆ ಕೊಂಬು ಇರುವುದಿಲ್ಲ. ಕೆಚ್ಚಲಿನಲ್ಲಿ ಒಂದು ಜೊತೆ ತೊಟ್ಟುಗಳು ಮಾತ್ರ ಇರುತ್ತವೆ. ಅಲ್ಲದೆ ಒಂದು ಜೊತೆ ಕೋರೆದಾಡೆಗಳು ಮತ್ತು ಒಂದು ಕಸ್ತೂರಿ ಗ್ರಂಥಿಯು ಇರುವುವು. ಈ ದೈಹಿಕ ರಚನೆಗಳು ಇತರ ಜಿಂಕೆಗಳಿಗೂ ಕಸ್ತೂರಿಮೃಗಕ್ಕೂ ಇರುವ ಮುಖ್ಯ ವ್ಯತ್ಯಾಸಗಳಾಗಿವೆ.

ಕಸ್ತೂರಿ ಪರಿಮಳ
ಕಸ್ತೂರಿಮೃಗ

ಕಸ್ತೂರಿಮೃಗವು ಒಂದು ಸಣ್ಣ ಗಾತ್ರದ ಜಿಂಕೆಯನ್ನು ಹೋಲುತ್ತದೆ. ಆದರೆ ಅದಕ್ಕಿಂತ ಕೊಂಚ ಸ್ಥೂಲಕಾಯವನ್ನು ಹೊಂದಿರುವುದು. ಕಸ್ತೂರಿಮೃಗವು ೮೦ ರಿಂದ ೧೦೦ ಸೆಂ.ಮೀ. ಉದ್ದವಿದ್ದು ಭುಜದ ಮಟ್ಟದಲ್ಲಿ ೫೦ ರಿಂದ ೭೦ ಸೆಂ.ಮೀ. ಗಳಷ್ಟು ಎತ್ತರವಾಗಿರುತ್ತವೆ. ಶರೀರದ ತೂಕ ೭ ರಿಂದ ೧೭ ಕಿ.ಗ್ರಾಂ. ವರೆಗೆ. ಇವುಗಳ ಹಿಂಗಾಲುಗಳು ಮುಂಗಾಲುಗಳಿಗಿಂತ ಉದ್ದವಾಗಿರುತ್ತವೆ. ಭೂಮಿಯ ಒರಟು ಮೇಲ್ಮೈ ಪ್ರದೇಶಗಳಲ್ಲೂ ಸರಾಗವಾಗಿ ಹತ್ತಲು ಸಾಧ್ಯವಾಗುವಂತಹ ಪಾದರಚನೆಯನ್ನು ಕಸ್ತೂರಿಮೃಗವು ಹೊಂದಿದೆ. ಗಂಡು ಕಸ್ತೂರಿಮೃಗವು ಒಂದು ಜೊತೆ ಉದ್ದನೆಯ ಕೋರೆದಾಡೆಗಳನ್ನು ಹೊಂದಿರುತ್ತವೆ. ಕಸ್ತೂರಿ ಗ್ರಂಥಿಯು ಕೇವಲ ಪ್ರೌಢ ಗಂಡುಗಳಲ್ಲಿ ಮಾತ್ರ ಕಂಡು ಬರುತ್ತದೆ. ಹೊಕ್ಕಳು ಮತ್ತು ಜನನಾಂಗಗಳ ನಡುವೆ ಇರುವ ಸಣ್ಣ ಚೀಲದಂತಹ ರಚನೆಯೊಳಗೆ ಈ ಗ್ರಂಥಿಯು ಇರುವುದು. ಈ ಗ್ರಂಥಿಯಿಂದ ಒಸರುವ ದ್ರವ್ಯದ ಮುಖ್ಯ ಬಳಕೆ ಹೆಣ್ಣನ್ನು ಆಕರ್ಷಿಸುವಲ್ಲಿ.

ಕಸ್ತೂರಿಮೃಗಗಳು ಪರ್ವತ ಕಾಡುಗಳ ಪ್ರಾಂತ್ಯದಲ್ಲಿ ಜೀವಿಸುವ ಸಸ್ಯಾಹಾರಿ ಪ್ರಾಣಿಗಳು. ಇವು ಸಾಮಾನ್ಯವಾಗಿ ಮಾನವವಸತಿಯಿಂದ ಬಲು ದೂರದಲ್ಲಿ ನೆಲೆಸುತ್ತವೆ. ಜಿಂಕೆಯಂತೆ ಕಸ್ತೂರಿಮೃಗಗಳು ಸಹ ಹುಲ್ಲು, ಎಲೆ, ಮತ್ತು ಹೂವುಗಳನ್ನು ತಿನ್ನುತ್ತವೆ. ಕಸ್ತೂರಿಮೃಗಗಳು ಒಂಟಿಜೀವಿಗಳು. ಪ್ರತಿ ಕಸ್ತೂರಿಮೃಗವು ತನ್ನ ಪ್ರಾಂತ್ಯವನ್ನು ಸ್ಪಷ್ಟವಾಗಿ ಗುರುತು ಮಾಡಿರುತ್ತದೆ. ಇವು ಸಂಕೋಚ ಸ್ವಭಾವದ ನಿಶಾಚರಿ ಜೀವಿಗಳು.

ಹೆಣ್ಣುಗಳು ಬೆದೆಗೆ ಬರುವ ಋತುವಿನಲ್ಲಿ ಗಂಡು ಕಸ್ತೂರಿಮೃಗಗಳು ತಮ್ಮ ಪ್ರಾಂತ್ಯದಿಂದ ಹೊರಬಂದು ಸಂಗಾತಿಗಾಗಿ ಪರಸ್ಪರರಲ್ಲಿ ಪೈಪೋಟಿ ನಡೆಸುತ್ತವೆ. ಈ ಕಾದಾಟದಲ್ಲಿ ಕಸ್ತೂರಿಮೃಗಗಳು ತಮ್ಮ ಕೋರೆದಾಡೆಗಳನ್ನು ಶಸ್ತ್ರವನ್ನಾಗಿ ಬಳಸುತ್ತವೆ. ೧೫೦ ರಿಂದ ೧೮೦ ದಿನಗಳ ಗರ್ಭಧಾರಣೆಯ ನಂತರ ಹೆಣ್ಣು ಕಸ್ತೂರಿಮೃಗವು ಒಂದು ಮರಿಗೆ ಜನ್ಮವೀಯುವುದು. ನವಜಾತ ಮರಿಯು ಅತಿ ಚಿಕ್ಕ ಗಾತ್ರದ್ದಾಗಿದ್ದು ಸುಮಾರು ಒಂದು ತಿಂಗಳವರೆಗೆ ನಿಶ್ಚಲಸ್ಥಿತಿಯಲ್ಲಿರುತ್ತದೆ.

ಹಿಮಾಲಯ ಪರ್ವತಗಳ ತಪ್ಪಲಿನಲ್ಲಿ ಹೆಚ್ಚಾಗಿ ಕಂಡುಬರುವ ಕಸ್ತೂರಿಮೃಗದಿಂದ ಪಡೆಯಲಾಗುವ ಕಸ್ತೂರಿಯು ಬೆಲೆಬಾಳುವ ದ್ರವ್ಯವಾಗಿದೆ. ಔಷಧಿಗಳಲ್ಲಿ ಮತ್ತು ಸುಗಂಧದ್ರವ್ಯಗಳಲ್ಲಿ ಇದರ ಬಳಕೆಯಾಗುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಂಡಮಾನ್ ಮತ್ತು ನಿಕೊಬಾರ್

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು

ವಿಷ್ಣು ದಾದ ಮತ್ತು ಕರ್ಪೂರದ ಗೊಂಬೆ, ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮ

ವಿಷ್ಣು ದಾದ ಮತ್ತು ಕರ್ಪೂರದ ಗೊಂಬೆ, ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಸಂಭ್ರಮ