in ,

ಕವಿ ರತ್ನ ಕಾಳಿದಾಸ

ಕವಿ ರತ್ನ ಕಾಳಿದಾಸ
ಕವಿ ರತ್ನ ಕಾಳಿದಾಸ

ಯಾವುದೇ ಸೌಂದರ್ಯ ವರ್ಣಿಸಬೇಕಾದರೆ ಮೊದಲು ಹೇಳುವುದು ಕಾಳಿದಾಸ ಕಲ್ಪನೆ ಎಂದು. ಕಾಳಿದಾಸನು ಭಾರತ ದೇಶದ ಒಬ್ಬ ಮಹಾಕವಿ. ಸಂಸ್ಕೃತ ಭಾಷೆಯಲ್ಲಿ ಕಾವ್ಯಗಳನ್ನೂ, ನಾಟಕಗಳನ್ನೂ ರಚಿಸಿದ್ದಾರೆ. “ಕವಿಕುಲಗುರು” ಎಂದು ಪ್ರಖ್ಯಾತನಾದವನು. ಇವನು ಸಂಸ್ಕೃತದ ಇನ್ನೊಬ್ಬ ಶ್ರೇಷ್ಠಕವಿ ಅಶ್ವಘೋಷನ ನಂತರ ಸಾಹಿತ್ಯವಲಯದಲ್ಲಿ ಹೆಸರು ಪಡೆದವನು.

ಕವಿ ರತ್ನ ಕಾಳಿದಾಸ
ಕವಿ ರತ್ನ ಕಾಳಿದಾಸ

ಕಾಳಿದಾಸನ ಜನನದ ಕುರಿತು ಇರುವ ಮಾಹಿತಿ ಹೀಗೆಯೇ, ಕುರುಬರ ವಂಶದಲ್ಲಿ ಹುಟ್ಟಿ, ಕುರಿ ಮೇಯಿಸುತ್ತಾ ಇದ್ದ ಸುಂದರಾಂಗನಾಗಿದ್ದನೆಂದು ಪ್ರತೀತಿ. ಯಾವ ರೀತಿಯ ವಿದ್ಯೆಯನ್ನೂ ಕಲಿಯದವನಾಗಿದ್ದು ಮುಗ್ಧನೂ ಮೂಢನೂ ಆಗಿದ್ದನಂತೆ. ನೀಚಬುದ್ಧಿಯ ಮಂತ್ರಿಯ ಕುತಂತ್ರಕ್ಕೊಳಗಾಗಿ ರಾಜಕುಮಾರಿಯೊಬ್ಬಳಿಗೆ ಅವನ ಮದುವೆ ಮಾಡಿಸಿದರಂತೆ. ನಿಜಾಂಶವನ್ನು ತಿಳಿದ ಬಳಿಕ ಅವಳು ಅವನಿಗೆ ರಾತ್ರಿಯಿಡೀ ಅವ್ಯಾಹತವಾಗಿ ಕಾಳಿಕಾದೇವಿಯ ನಾಮಸ್ಮರಣೆಯನ್ನು ಮಾಡುವಂತೆ ಆದೇಶಿಸಿದ್ದರಿಂದ ಪ್ರಸನ್ನಳಾದ ದೇವಿಯ ವರದಿಂದ ಸಕಲ ವಿದ್ಯಾ ಪಾರಂಗತನಾದನಂತೆ. ಹಾಗಾಗಿ ಕಾಳಿದಾಸನೆಂಬ ಹೆಸರಾಯಿತು ಎಂದೆಲ್ಲಾ ದಂತಕತೆ. ಅವನ ಜನ್ಮ, ಅವಿದ್ಯೆ, ಮೌಢ್ಯ, ಇತ್ಯಾದಿಗಳು ನಿಜವಿರಬಹುದು; ಮಂತ್ರಿಯ ಕುತಂತ್ರದಿಂದ ರಾಜಕುಮಾರಿಯೊಡನೆ ಮದುವೆಯೂ ಆಗಿರಬಹುದು. ಕಾಳಿಯ ವರದಿಂದ ಸಕಲವಿದ್ಯಾಪಾರಂಗತನಾದನೆನ್ನುವದಕ್ಕಿಂತ ಬಹುಶಃ ಕೈಹಿಡಿದ ಆ ರಾಜಕುಮಾರಿಯಿಂದಲೇ ಕಲಿತು ವಿದ್ಯಾವಂತನಾಗಿರಬಹುದು ಎನ್ನುವದು ನಂಬಬಹುದು. ಹೀಗೆಯೇ ಅವನು ವಿದೇಶೀಯನೆಂದೂ, ಅವನ ವೈಜ್ಞಾನಿಕ, ಭೌಗೋಳಿಕ, ಜ್ಯೋತಿಷ್ಯ, ಮೊದಲಾದ ಜ್ಞಾನವೆಲ್ಲ ಗ್ರೀಕ್ ಹಿನ್ನೆಲೆಯಿಂದ ಬಂತೆನ್ನುವ ಕತೆಯೂ ಇದೆ. ಆದರೆ ಇದಕ್ಕೆ ಯಾವ ರೀತಿಯ ಆಧಾರವೂ ಎಲ್ಲೂ ದೊರೆತಿಲ್ಲ.

ಈತನು ಧಾರಾಪುರದ ಅರಸ ಭೋಜರಾಜನ ಆಸ್ಥಾನ ಕವಿಯಾಗಿದ್ದು, ರಾಜನ ಅಂತರಂಗದ ಗೆಳೆಯನಾಗಿ, ಅವನ ಅನೇಕ ಕಠಿಣ ಸಮಸ್ಯೆಗಳನ್ನು ಪೂರ್ಣ ಮಾಡುತ್ತಿದ್ದನಂತೆ. ಧಾರಾಪುರದ ಭೋಜರಾಜನು ಹನ್ನೊಂದನೆಯ ಶತಮಾನದವನು. ಕಾಳಿದಾಸನು ಅವನಿಂತಲೂ ಐದಾರು ಶತಮಾನಗಳಿಗೆ ಮೊದಲಿದ್ದವನು. ಆದ್ದರಿಂದ ಈ ಕತೆಯೂ ನಿಜ ಅನಿಸಲ್ಲ.

ಇನ್ನು ಕುಮಾರಗುಪ್ತನ ಕಾಲದಲ್ಲಿ ಕಾಳಿದಾಸನು ಲಂಕಾದ್ವೀಪಕ್ಕೆ ಹೋಗಿ ಅಲ್ಲಿ ವೇಶ್ಯೆಯೊಬ್ಬಳ ಮೋಸದಿಂದ ವಿಷಪ್ರಾಶನದಿಂದ ಹತನಾದನಂತೆ. ಈ ಕತೆಯು ಅವನ ಶೃಂಗಾರಪ್ರಿಯತೆಯಿಂದಾಗಿ ಹುಟ್ಟಿರಬಹುದೆಂಬುದು ವಿದ್ವಾಂಸರ ಅಭಿಪ್ರಾಯ.
ಕ್ರಿಸ್ತ ಪೂರ್ವ ಒಂದನೇ ಶತಮಾನದಲ್ಲಿಯೇ ಈತನು ಇದ್ದನು ಎಂಬುದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವು ವಿದ್ವಾಂಸರು ಈತನು ೬ನೇ ಶತಮಾನದಲ್ಲಿ ಉಜ್ಜಯಿನಿಯ ರಾಜ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದನು ಎಂದು ಹೇಳುತ್ತಾರೆ.

ಕಾಳಿದಾಸನ ಕುರಿತ ಮೊಟ್ಟ ಮೊದಲ ಉಲ್ಲೇಖ ಕ್ರಿಸ್ತಶಕ ೬೩೪ರ ಶಿಲಾಲೇಖವೊಂದರಲ್ಲಿ ಸಿಗುತ್ತದೆ. ಕಾಳಿದಾಸನು ತಾನು ವಿಕ್ರಮ ರಾಜನ ಆಸ್ಥಾನದಲ್ಲಿದ್ದವನೆಂದು ಬರೆದಿದ್ದಾನೆ. ಆದರೆ ವಿಕ್ರಮ ಎಂಬ ಹೆಸರಿದ್ದ ಕೆಲವಾರು ರಾಜರಲ್ಲಿ ಯಾರೆಂದು ನಿರ್ಣಯಿತವಾಗಿಲ್ಲ. ಪ್ರಚಲಿತವಾಗಿರುವಂತೆ ವಿಕ್ರಮ ಶಕೆಯು ಕ್ರಿಸ್ತಪೂರ್ವ ೫೬ರಲ್ಲಿ ಆರಂಭವಾಗಿದೆ. ಕಾಳಿದಾಸನು ಉಜ್ಜಯಿನಿಯಲ್ಲಿದ್ದ ಈ ವಿಕ್ರಮನ ಆಸ್ಥಾನದಲ್ಲಿದ್ದನೆಂದರೆ ಅವನು ಕ್ರಿಸ್ತಪೂರ್ವ ಒಂದನೆಯ ಶತಾಬ್ಧಿಯಲ್ಲಿದ್ದನೆನ್ನಬಹುದು.

ಕವಿ ರತ್ನ ಕಾಳಿದಾಸ
ಕವಿ ರತ್ನ ಕಾಳಿದಾಸ

ಆದರೆ ಇತ್ತೀಚೆಗೆ ಕೆಲವು ವಿದ್ವಾಂಸರು ವಿಕ್ರಮಶಕೆಯು ಕೋರೂರಿನ ಮಹಾಯುದ್ಧವನ್ನು ಆಧರಿಸಿರುವುದಾಗಿ ತೀರ್ಮಾನಿಸಿದ್ದಾರೆ. ಕ್ರಿಸ್ತಶಕ ೫೪೪ರಲ್ಲಿ ವಿಕ್ರಮನು ಮ್ಲೇಚ್ಛರನ್ನು ಸೋಲಿಸಿದ್ದ. ಆ ಸಮಯದ ೬೦೦ ವರ್ಷಗಳ ಹಿಂದಿನಿಂದ ವಿಕ್ರಮಶಕೆಯನ್ನು ಆರಂಭಿಸಲಾಗಿದೆಯೆಂದೂ ನಿರ್ಧರಿಸಿದ್ದಾರೆ. ಇದು ನಿಜವಾದರೆ ಕಾಳಿದಾಸನು ಆರನೇ ಶತಮಾನದಲ್ಲಿದನೆಂದು ತಿಳಿಯಬೇಕು.

ಬಹಳಷ್ಟು ವಿದ್ವಾಂಸರು ಇಮ್ಮಡಿ ಚಂದ್ರಗುಪ್ತ ವಿಕ್ರಮಾದಿತ್ಯ ಮತ್ತು ಅವನ ಉತ್ತರಾಧಿಕಾರಿಯಾದ ಕುಮಾರಗುಪ್ತನ ಕಾಲದಲ್ಲಿ, ಅಂದರೆ ಕ್ರಿಸ್ತಶಕ ನಾಲ್ಕನೇ ಮತ್ತು ಐದನೇ ಶತಮಾನಗಳ ನಡುವಿನ ಕಾಲದಲ್ಲಿ ಕಾಳಿದಾಸನಿದ್ದನೆಂದು ಅಭಿಪ್ರಾಯಪಡುತ್ತಾರೆ.

ಇಮ್ಮಡಿ ಚಂದ್ರಗುಪ್ತ(ಕ್ರಿಸ್ತಶಕ ೩೫೭ -೪೧೩)ನಿಗೂ ಸ್ಕಂದಗುಪ್ತ(ಕ್ರಿಸ್ತಶಕ ೪೫೫-೪೮೦)ನಿಗೂ ವಿಕ್ರಮಾದಿತ್ಯನೆಂಬ ಬಿರುದಿತ್ತು. ಕಾಳಿದಾಸನು ಇವರ ಕಾಲದಲ್ಲಿದ್ದನೆಂದೂ ಹೇಳುತ್ತಾರೆ.ಆದರೆ ಈಗ ಕಾಳಿದಾಸನ ಕಾಲವು ಕ್ರಿಸ್ತಶಕ ೫ನೇ ಮತ್ತು ೬ನೇ ಶತಕಗಳ ನಡುವೆಯಿತ್ತೆಂಬುದನ್ನು ಅಂಗೀಕರಿಸಲಾಗಿದೆ.

ಧನ್ವಂತರಿ, ಕ್ಷಪಣಕ, ಅಮರಸಿಂಹ, ಶಂಕು, ವೇತಾಲಭಟ್ಟ, ಘಟಕರ್ಪರ, ಕಾಳಿದಾಸ, ವರಾಹಮಿಹಿರ ಮತ್ತು ವರರುಚಿ ಎಂಬವರು ವಿಕ್ರಮಾದಿತ್ಯನ ಆಸ್ಥಾನದಲ್ಲಿ ನವರತ್ನಗಳೆಂದು ಪ್ರಸಿದ್ಧರಾಗಿದ್ದರು.

ಸಂಸ್ಕೃತ ಸಾಹಿತ್ಯದಲ್ಲಿ ಮಹೋತ್ತಮನೆಂದು ಹೆಸರು ಪಡೆದವರಲ್ಲಿ ಮೊಟ್ಟಮೊದಲನೆಯವನು ಅಶ್ವಘೋಷ. ಇವನ ಕಾಲದ ಸುಮಾರು ಮೂರು ಶತಮಾನಗಳ ನಂತರ ಬಂದನೆನ್ನಲಾದ ಕಾಳಿದಾಸನ ಕೃತಿಗಳಲ್ಲಿ ಇವನ ಪ್ರಭಾವವು ಗಾಢವಾಗಿ ಬೀರಿರುವುದನ್ನು ಗಮನಿಸಲಾಗಿದೆ. ಅಗಣಿತ ಸಾಹಿತ್ಯರಚನೆಗಳನ್ನು ಕಾಳಿದಾಸನ ಹೆಸರಿನೊಂದಿಗೆ ಜೋಡಿಸಲ್ಪಟ್ಟಿರುವದು ಗೋಚರವಾದರೂ, ಕಾರಣಾಂತರಗಳಿಂದ ಹಲವು ಅನಾಮಧೇಯ ಕೃತಿಕಾರರ ಹಾಗೂ ಅವನ ಹೆಸರನ್ನೇ ಹೋಲುವವರ ರಚನೆಗಳವು ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಏಳು ಕೃತಿಗಳನ್ನು ಮಾತ್ರ ಅವನಿಂದ ರಚಿತವಾದವೆಂದು ತೀರ್ಮಾನವಾಗಿದೆ.

ಒಂದು- ಮಹಾಕಾವ್ಯ ‘ರಘುವಂಶ’. ಮತ್ತೊಂದು ಹಾಗೂ ಕೊನೆಯದೆಂದೆಣಿಸಲಾದ ನಾಟಕ ‘ಅಭಿಜ್ಞಾನ ಶಾಕುಂತಲ’. ಇದು ವಿಶ್ವದ ಅತ್ಯುತ್ತಮ ನಾಟಕಗಳಲ್ಲೊಂದು ಎಂದು ಪ್ರಸಿದ್ಧ. ಇದನ್ನು ಓದಿದ ಜರ್ಮನ್ ಪ್ರಸಿದ್ಧ ಕವಿ ಗೋಏಟೇ ಅತ್ಯಂತ ವಿಮುಗ್ಧನೂ ಪರಮಾನಂದಿತನೂ ಆಗಿದ್ದುದು ಸರ್ವಶ್ರುತ. ಈ ನಾಟಕವು ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ಈ ನಾಟಕವನ್ನು ಬರೆಯುವ ವೇಳೆಗೆ ಕವಿಗೆ ತನ್ನ ಶಕ್ತಿಯಲ್ಲಿ ಅಪಾರ ಆತ್ಮವಿಶ್ವಾಸ ವಿದ್ದು, ತನ್ನ ಬದುಕು ಧನ್ಯವಾಯಿತೆಂಬ ಭಾವನೆ ಮೂಡಿದೆ. ಇದರ ಫಲವಾಗಿ, “ಈ ಭವದಿಂದ ನನಗೆ ಬಿಡುಗಡೆಯಾಗಲಿ; ಮರುಹುಟ್ಟನು ನನಗೆ ಆ ಮಹೇಶನು ಕರುಣಿಸದಿರಲಿ” ಎಂದು ಪ್ರಾರ್ಥಿಸುತ್ತಾ ನಾಟಕವನ್ನು ಕವಿಯು ಮುಗಿಸುತ್ತಾನೆ.

ಕಾಳಿದಾಸನನ್ನು ಕುರಿತು ಅನೇಕ ರಚನೆಗಳು ಕನ್ನಡದಲ್ಲಿವೆ.
ಶಾಕುಂತಳ ನಾಟಕ ವಿಮರ್ಶೆ – ಬಿ. ಕೃಷ್ಣಪ್ಪ
ಶಾಕುಂತಳ ನಾಟಕದ ವಿಮರ್ಶೆ – ಡಾ ಎಸ್ ವಿ ರಂಗಣ್ಣ. ಶಾರದಾ ಮಂದಿರ, ರಾಮಯ್ಯರ್ ರಸ್ತೆ, ಮೈಸೂರು.
ಕಾಳಿದಾಸ ಮಹಾಕವಿ – ಸಿ ಕೆ ವೆಂಕಟರಾಮಯ್ಯ
ಕಾಳಿದಾಸ – ಎಮ್ ಲಕ್ಷ್ಮೀನರಸಿಂಹಯ್ಯ
ಕಾಳಿದಾಸ – ಆದ್ಯ ರಂಗಾಚಾರ್ಯ
ಕಾವ್ಯ ಸಮೀಕ್ಷೆ – ತೀ ನಂ ಶ್ರೀಕಂಠಯ್ಯ. ಕಾವ್ಯಾಲಯ, ಜಯನಗರ, ಮೈಸೂರು.
ಮಾಲವಿಕಾಗ್ನಿಮಿತ್ರ ನಾಟಕ ವಿಮರ್ಶೆ – ಡಾ ಎಸ್ ವಿ ರಂಗಣ್ಣ. ಶಾರದಾ ಮಂದಿರ, ರಾಮಯ್ಯರ್ ರಸ್ತೆ, ಮೈಸೂರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

38 Comments

ಕಬ್ಬು ಬೆಳೆ

ಕಬ್ಬು ಬೆಳೆ ಬೆಳೆಯುವ ವಿಧಾನಗಳು

ಅಶ್ವತ್ಥ ಮರ

ಅಶ್ವತ್ಥ ಮರದ ವಿಶೇಷತೆ