in

ಕಬ್ಬು ಬೆಳೆ ಬೆಳೆಯುವ ವಿಧಾನಗಳು

ಕಬ್ಬು ಬೆಳೆ
ಕಬ್ಬು ಬೆಳೆ

ಕಬ್ಬು ಬಹುವಾರ್ಷಿಕ ದೈತ್ಯಾಕಾರದ ಹುಲ್ಲು. ಬೆಲ್ಲ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಬೇಕಾಗುವ ಕಚ್ಚಾ ವಸ್ತು. ಸಿಹಿ ಪದಾರ್ಥಗಳು ನೇಕವಿದ್ದರೂ ಮಾನವರಿಗೆ ಇಷ್ಟವಾದಂಥ ಸಿಹಿ ಪದಾರ್ಥಗಳನ್ನು ತಯಾರಿಸಲು ಬೆಲ್ಲ ಮತ್ತು ಸಕ್ಕರೆಯೇ ಮುಖ್ಯ. ಸಕ್ಕರೆ ಹೊಂದಿರುವ ಸಸ್ಯಗಳು ಹಲವು ಇವೆ. ಆದರೆ ಸಕ್ಕರೆಯ ಅಧಿಕ ಉತ್ಪನ್ನಕ್ಕೆ ಸಹಾಯಕವಾಗುವುದು ಕಬ್ಬು ಮತ್ತು ಸಕ್ಕರೆ ಬೀಟ್ ಗೆಡ್ಡೆಗಳು ಮಾತ್ರ. ತಾಳೆ, ತೆಂಗು ಮುಂತಾದ ಮರಗಳ ಹೊಂಬಾಳೆಗಳನ್ನು ಕಡಿದು, ರಸ ಶೇಖರಿಸಿ, ಅದರಿಂದಲೂ ಬೆಲ್ಲ ತಯಾರಿಸಲಾಗುತ್ತದೆಯಾದರೂ ಪರಿಮಾಣದಲ್ಲಿ ಅದು ಅತಿ ಸ್ವಲ್ಪ. ಪ್ರಪಂಚದ ಒಟ್ಟು ಸಕ್ಕರೆ ಉತ್ಪತ್ತಿಯ ಶೇ.67-68 ಭಾಗ ಕಬ್ಬಿನಿಂದಲೇ ಆಗುತ್ತದೆ.

ಭೂ ವೈವಿಧ್ಯಕ್ಕೆ ಹೊಂದಿಕೊಂಡು ಬೆಳೆಯಬಲ್ಲ ಉಷ್ಣವಲಯದ ಸಸ್ಯವೆನಿಸಿದೆ. ಸಮಭಾಜಕ ವೃತ್ತದ ಇಕ್ಕೆಡೆಗಳಲ್ಲೂ ಸು. 350 ವರೆಗಿನ ಪ್ರದೇಶದಲ್ಲಿ ಎರಡು ಗೋಳಗಳಲ್ಲೂ ನೂರಾರು ಬಗೆಯ ಕಬ್ಬನ್ನು ಬೆಳೆಯಲಾಗುತ್ತಿದೆ. ಏಷ್ಯಾದ ಬೆಚ್ಚಗಿನ ಸಮಶೀತೋಷ್ಣ ಹಾಗೂ ಉಷ್ಣವಲಯದ ಪ್ರದೇಶಗಳಿಗೆ ಸ್ಥಳೀಯವಾದ ಇವು, ಸಕ್ಕರೆಭರಿತ, ಸ್ಥೂಲವಾದ, ಸಂಧಿಗಳಿರುವ, ನಾರುಳ್ಳ ಕಾಂಡಗಳನ್ನು ಹೊಂದಿರುತ್ತವೆ ಮತ್ತು ಎರಡರಿಂದ ಆರು ಮೀಟರ್‌ಗಳಷ್ಟು ಎತ್ತರಕ್ಕೆ ಬೆಳೆಯುತ್ತವೆ. ಎಲ್ಲ ಕಬ್ಬುಜಲ್ಲೆ ಜಾತಿಗಳು ಸಂಕರಿಸಬಲ್ಲವಾಗಿವೆ ಮತ್ತು ಪ್ರಮುಖ ವಾಣಿಜ್ಯ ಕೃಷಿ ಪ್ರಭೇದಗಳು ಸಂಕೀರ್ಣವಾದ ಮಿಶ್ರತಳಿಗಳಾಗಿವೆ.

ಶತಮಾನಗಳಲ್ಲೇ ಮಧ್ಯ ಮತ್ತು ದಕ್ಷಿಣ ಅಮೆರಿಕಗಳ ಬಹುತೇಕ ಭಾಗದಲ್ಲಿ ಅದರ ಬೆಳೆಸು ವಿಸ್ತರಿಸಿತು. ಇದರಿಂದ ಬ್ರೆಜಿಲ್, ಪೆರು ಮತ್ತು ಮಧ್ಯ ಅಮೆರಿಕ ಹಾಗೂ ವೆಸ್ಟ್‌ ಇಂಡೀಸಿನ ವಿವಿಧ ದ್ವೀಪಗಳಲ್ಲಿ ಅದು ಮುಖ್ಯ ಬೆಳೆಯಾಯಿತು. ಅದೇ ಶತಮಾನದ ಅಂತ್ಯದಲ್ಲಿ ಮಾರಿಷಸ್ ಮತ್ತು ಆಸ್ಟ್ರೇಲಿಯದ ವಿವಿಧ ಪ್ರದೇಶಗಳಿಗೆ ಹರಡಿತು. ಹೀಗೆ ಪ್ರಪಂಚದ ಉಷ್ಣವಲಯದ ಎಲ್ಲ ಮುಖ್ಯ ರಾಷ್ಟ್ರಗಳಲ್ಲೂ ಕಬ್ಬು ಒಂದು ಮುಖ್ಯ ಬೆಳೆಯಾಯಿತು.

ಇತ್ತೀಚಿನ ಹಲವು ಸಂಶೋಧನೆಗಳು, ಕಬ್ಬಿನ ವಿವಿಧ ಜಾತಿಗಳು ಎರಡು ಮುಖ್ಯ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿ ಅಭಿವೃದ್ಧಿ ಹೊಂದಿ ಅಲ್ಲಿಂದ ಉಳಿದೆಡೆಗೆ ಹರಡಿರಬಹುದೆಂಬ ಊಹೆ.ಸ್ಯಾಕರಂ ಅಫಿಸಿನೇರಂ ಪ್ರಭೇದದ ದಪ್ಪಗಾತ್ರದ ಕಬ್ಬಿನ ಬಗೆಗಳು ಪಾಲಿನೇಷಿಯದಲ್ಲಿ ಇದ್ದು ಅಲ್ಲಿಂದ ಜಾವ, ಮಾರಿಷಸ್ ಮತ್ತು ಭಾರತಗಳಲ್ಲಿ ಹರಡಿರಬಹುದೆಂದೂ ಸಣ್ಣ ಕಬ್ಬು ಪ್ರಭೇದಗಳಾದ ಸಾ.ಬರ್ಬೆರಿ ಮತ್ತು ಸಾ.ಸೈನೆನ್ಸಿ ಭಾರತದಲ್ಲಿದ್ದು ಇತರ ಪ್ರದೇಶಗಳಿಗೆ ಪಸರಿಸಿರಬಹುದೆಂದೂ ಅಭಿಪ್ರಾಯಪಡಲಾಗಿದೆ.

ಕಬ್ಬು ಬೆಳೆ ಬೆಳೆಯುವ ವಿಧಾನಗಳು
ಕಬ್ಬು ಬೆಳೆ

ಸಾಮಾನ್ಯವಾಗಿ ಕಬ್ಬನ್ನು ಕಬ್ಬು ಜಲ್ಲೆಯ ತುಂಡಿನಿಂದಲೇ ಬೆಳೆಸಿ ವೃದ್ಧಿಪಡಿಸುತ್ತಾರೆ. 19ನೆಯ ಶತಮಾನದ ಮಧ್ಯಾವಧಿಯವರೆಗೂ ಕಬ್ಬಿಗೆ ಬೀಜವಿದೆಯೆಂದು ಯಾರಿಗೂ ತಿಳಿದಿರಲಿಲ್ಲ. ಬಾರ್ಬಡಾಸಿನ ಪಾರಿಸ್ ಮತ್ತು ಆತಸ್ ಹಾಗೂ ಜಾವದ ನೋಟೋಹಾಮಿಪ್ರಾಡ್ಜೋ ಎಂಬುವರು ಕಬ್ಬಿಗೆ ಬೀಜವಿದೆಯೆಂದು ಮೊದಲು ವಿವರಿಸಿದ್ದರೂ ಯಾರೂ ಅದಕ್ಕೆ ಹೆಚ್ಚಿನ ಗಮನವೀಯಲಿಲ್ಲ. ಮುಂದೆ ಜಾವದ ಸೋಲ್ಟವೇಡೆಲ್ ಎಂಬಾತ ಬೀಜಗಳನ್ನು ಶೇಖರಿಸಿ ಹೊಸ ಕಬ್ಬುಜಾತಿಯನ್ನು ಬೆಳೆಸಿ ತೋರಿಸಿದಾಗಲೇ ಇದರಲ್ಲಿ ಜನರಿಗೆ ನಂಬಿಕೆಯಾದದ್ದು. ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಕಬ್ಬಿನ ತುದಿಯಲ್ಲಿ ಸುಂದರವಾದ ನೀಳವಾದ ಗರಿಯಂತೆ ಕಂಡುಬರುವ ಸೂಲಂಗಿಯೇ ಅದರ ಪುಷ್ಪಗುಚ್ಛ. ಬೀಜ ಮತ್ತು ಹೊಸ ಕಬ್ಬು ತಳಿ ಉತ್ಪಾದನೆಗೆ ತಳಹದಿ. ಆದರೆ ಬೀಜ ಶೇಖರಿಸಿ ಬಿತ್ತುವುದು ಹೊಸ ತಳಿಗಳ ಉತ್ಪನ್ನಕ್ಕಾಗಿ ಮಾತ್ರ. ಇತ್ತೀಚೆಗೆ ವಿವಿಧ ಉತ್ತಮ ತಳಿಗಳ ನಡುವೆ ಅಡ್ಡತಳಿಯೆಬ್ಬಿಸಿ ಬೀಜೋತ್ಪಾದನೆ ಮಾಡಿ ಹೊಸ ತಳಿಗಳನ್ನು ಪಡೆಯಲಾಗುತ್ತಿದೆ. ತಂದೆ ತಾಯಿಗಳ ಗುಣಗಳೆಲ್ಲ ಪೂರ್ಣ ತಿಳಿದಿರುವುದರಿಂದ ನಮಗೆ ಆವಶ್ಯಕವಾದ ಗುಣಗಳುಳ್ಳ ಹೊಸತಳಿಗಳ ಉತ್ಪಾದನೆಗೆ ಇದು ಅನುಕೂಲ ಮಾರ್ಗ. ಆದರೆ ಬೀಜದ ಮುಖಾಂತರ ಕಬ್ಬನ್ನು ಬೆಳೆಸುವ ವಿಧಾನದಲ್ಲಿನ ಮುಖ್ಯ ಅನಾನುಕೂಲತೆಯೆಂದರೆ ಪ್ರತಿ ಬೀಜದ ಗಿಡವೂ ಬೇರೆ ಬೇರೆಯಾಗಿದ್ದು, ಅವು ಯಾವ ರೀತಿಯವು ಮತ್ತು ಅವು ಉಪಯುಕ್ತವೇ ಅಲ್ಲವೇ ಎಂಬುದನ್ನು ಮೊದಲೇ ಹೇಳಲಾಗುವುದಿಲ್ಲ. ಕಬ್ಬಿನ ಜಲ್ಲೆಯ ತುಂಡುಗಳನ್ನು ನೆಟ್ಟು ಬೆಳೆಸುವುದು ಸುಲಭ, ಈ ಮಾರ್ಗಾನುಸರಣೆಯಿಂದ ಜಾತಿಯ ವ್ಯತ್ಯಾಸವಿಲ್ಲದೆ ಗೊತ್ತಾದ ಮಿತಿಯಲ್ಲೇ ಬೆಳೆ ಕೈಸೇರುತ್ತದೆ.

ಮೈಸೂರಿನಲ್ಲಿ ಬೆಳೆಯುತ್ತಿರುವ ಕಬ್ಬುಗಳನ್ನು ಹಳೆಯ ತಳಿ ಹಾಗೂ ಹೊಸ ತಳಿಗಳೆಂದು ವಿಂಗಡಿಸಬಹುದು. ಹಳೆಯ ಬಗೆಯ ಕಬ್ಬುಗಳು ಹೆಚ್ಚು ರಸದಿಂದ ತುಂಬಿದವು ಮತ್ತು ಮೆದುವಾದವು. ಅರೆಯುವುದು ಮತ್ತು ಅಗಿದು ತಿನ್ನುವುದು ಸುಲಭ.

ಕಬ್ಬನ್ನು ವರ್ಷದ ಯಾವ ಕಾಲದಲ್ಲಾದರೂ ನೆಡಬಹುದು. ಆದರೆ ಚಳಿ ಹೆಚ್ಚಾಗಿದ್ದಾಗ ನೆಟ್ಟರೆ ಮೊಳಕೆ ಹೊರಡುವುದು ನಿಧಾನ. ಭೂಮಿ ಬಹಳ ಫಲವತ್ತಾಗಿರಬೇಕು. ಗೊಬ್ಬರವನ್ನು ಚೆನ್ನಾಗಿ ಹಾಕಿ ಅಧಿಕಪ್ರಮಾಣದಲ್ಲಿ ನೀರು ಹಾಯಿಸಿದರೆ ಬಹಳ ಉತ್ತಮ. ಸುತ್ತಮುತ್ತಲಿನ ಉಷ್ಣತೆಯೂ 800 ಫಾ.ಗಿಂತ ಹೆಚ್ಚಾಗಿದ್ದರೆ ಚೆನ್ನ. ಭೂಮಿಯನ್ನು ಸಾಧ್ಯವಾದಷ್ಟು ಆಳವಾಗಿ ಉಳಬೇಕು. ಮೊದಲು 30-40 ಸೆಂ.ಮೀ. ಆಳಕ್ಕೆ ಉಳುಮೆಮಾಡುವುದು ಉತ್ತಮ. ಇದರಿಂದ ಕಬ್ಬಿನ ಬಿತ್ತನೆಯನ್ನು ಪುರ್ಣವಾಗಿ ಮುಚ್ಚಿದಂತೆ ನೆಡಲು ಮುಂದೆ ಅದಕ್ಕೆ ಸಾಕಷ್ಟು ಮಣ್ಣನ್ನು ವಾರಿ ಹಾಕಲು ಅನುಕೂಲ. ಹೀಗೆ ಸಾಲುತೆಗೆದ ಅನಂತರ ನೀರು ಬಸಿಯಲು ಕಡಗುಗಳನ್ನು ನೀರು ಕಟ್ಟಲು ಅನುಕೂಲವಾಗುವಂತೆ ಅಲ್ಲಲ್ಲಿ ನೀರು ಕಾಲುವೆಗಳನ್ನು ತೆಗೆಯಬೇಕು. ಸಾಲುಗಳಲ್ಲಿ ನೀರು ಬಿಟ್ಟು ನೀರು ನಿಂತಿರುವಾಗಲೇ ಕಬ್ಬಿನ ಬಿತ್ತನೆಗಳನ್ನು ಒಂದರ ಪಕ್ಕ ಒಂದರಂತೆ ಜೋಡಿಸಿ ಕೆಸರಿನಲ್ಲಿ ತುಳಿದುಬಿಡಬಹುದು. ಇದೇ ಸಾಮಾನ್ಯ ಬಳಕೆಯಲ್ಲಿರುವ ಪದ್ಧತಿ. ಕೆಲವೆಡೆ ಪುರ್ಣ ಕಬ್ಬನ್ನೇ ನೆಡಲಾಗುತ್ತದೆ. ಇತರೆಡೆ ಸಾಲಿನಲ್ಲಿ 10-15 ಸೆಂ.ಮೀ. ಅಂತರಕ್ಕೆ ಒಂದರಂತೆ 7-10 ಸೆಂ.ಮೀ. ಆಳದ ಗುಂಡಿಮಾಡಿ ಅದರಲ್ಲಿ 3-4 ಬಿತ್ತನೆ ನೆಡುವುದು ಉಂಟು. ಹಲವು ಪ್ರದೇಶಗಳಲ್ಲಿ ಗುಳಿ ಬಿತ್ತನೆ ಮಾಡುವ ಅಭ್ಯಾಸವಿದೆ. ಕಬ್ಬು ನೆಡುವ ಗದ್ದೆಗಳನ್ನು ಉತ್ತು ಹಸನುಗೊಳಿಸಿದ ಮೇಲೆ 1-1.3 ಮೀ. ಅಗಲದ ಮತ್ತು ಅನುಕೂಲಕ್ಕೆ ತಕ್ಕಂಥ ನೀಳದ ಮಡಿಗಳನ್ನು ಮಾಡಿ, ಅದರಲ್ಲಿ ಅಡಿಗೆ ಒಂದರಂತೆ ಗುಳಿ ತೋಡಿ, ಗುಳಿಗೊಂದರಂತೆ ಬಿತ್ತನೆ ಮಾಡುತ್ತಾರೆ. ಬಿತ್ತನೆ 2-5 ಸೆಂ.ಮೀ. ಆಳಕ್ಕಿಂತ ಹೆಚ್ಚಾಗಿರಕೂಡದು. ಬಿತ್ತನೆಯನ್ನು ಸರಿಯಾದ ರೀತಿಯಲ್ಲಿ ಇಟ್ಟು ತೇವಮಾಡಿದ ಸಾಲಿನಲ್ಲಿ ಕೈಯಿಂದ ಅಥವಾ ಕಾಲಿನಿಂದ ತುಂಡುಗಳನ್ನು ಅದುಮಬಹುದು. ಅವು ಒಂದು ಪಕ್ಕಕ್ಕೆ ಇರಬೇಕು. ರೀತಿ ಯಾವುದೇ ಇರಲಿ, ಗಿಣ್ಣಿನ ಕಣ್ಣು ಪಕ್ಕದಲ್ಲಿರುವಂತೆ ನೆಡುವುದು ಮುಖ್ಯ. ಇದರಿಂದ ಬಿತ್ತನೆಯಲ್ಲಿನ ಮೂರು ಕಣ್ಣುಗಳು ಅರಳಲು ಅನುಕೂಲವಾಗುತ್ತದೆ. ತುದಿಭಾಗದಲ್ಲಿರುವ ಮೊಗ್ಗು ಚೆನ್ನಾಗಿ ಬೆಳೆದು ಉತ್ತಮ ಕಬ್ಬಾಗುತ್ತದೆ. ತಳದಲ್ಲಿನ ಮೊಗ್ಗು ಬೆಳೆಯುವುದು ಬಹು ನಿಧಾನ. ಆದ್ದರಿಂದ ತುದಿಭಾಗದ ಕಬ್ಬು ತುಂಡುಗಳನ್ನು ಬಿತ್ತನೆಗಾಗಿ ಉಪಯೋಗಿಸಿದಲ್ಲಿ ಒಳ್ಳೆಯದು. ಹೆಚ್ಚು ಫಲವತ್ತಾದ ಭೂಮಿಯಲ್ಲಿ 4′ ಅಂತರದ ಸಾಲುಗಳಲ್ಲಿಯೂ ಸಾಮಾನ್ಯ ಫಲವತ್ತಾದ ಭೂಮಿಯಲ್ಲಿ ಎರಡೂವರೆ ಅಡಿ ಅಂತರದ ಸಾಲುಗಳಲ್ಲಿಯೂ ನೆಡುವುದು ಉತ್ತಮವೆಂದು ಅನುಭವದಿಂದ ಕಂಡುಬಂದಿದೆ. ಒಂದು ಎಕರೆ ಪ್ರದೇಶಕ್ಕೆ ಉತ್ತಮವಾಗಿ ಆರಿಸಿದ 10,000 ಬಿತ್ತನೆ ತುಂಡುಗಳು ಸಾಕು. ಕಬ್ಬಿನ ತಾಕು ಕಳೆರಹಿತವಾಗಿರುವುದು ಮುಖ್ಯ. ಬಿತ್ತನೆ ನೆಟ್ಟ ಎರಡು ವಾರಗಳಲ್ಲಿ ಮೊದಲ ಕಳೆತೆಗೆಯಬೇಕು. ಮುಂದೆಯೂ ಕಳೆಯಿಲ್ಲದಂತೆ ಎಚ್ಚರವಹಿಸಬೇಕು. ಹೋತುಬಂದಿದ್ದಲ್ಲಿ ಮೊಳೆತ ಬಿತ್ತನೆಗಳನ್ನು ನೆಟ್ಟು ಸರಿಪಡಿಸಬೇಕು. 6 ವಾರಗಳ ಅನಂತರ ಕಳೆ ತೆಗೆದು ನೀರು ಕಟ್ಟಿ ಹದವಿದ್ದಾಗ ಮೊದಲ ಮೇಲುಗೊಬ್ಬರ ಒದಗಿಸಿ ಸಾಲನ್ನು ಉತ್ತು ಮಣ್ಣು ಏರಿ ಹಾಕಬೇಕು. ಇದು ಬುಡಕ್ಕೆ ದೃಢತೆ ಒದಗಿಸುವುದಲ್ಲದೆ, ಗೊಬ್ಬರವನ್ನು ಮುಚ್ಚಿ, ಕಾಂಡಕೊರೆಯುವ ಹುಳದ ಬಾಧೆಯನ್ನು ಸ್ವಲ್ಪಮಟ್ಟಿಗೆ ತಡೆಗಟ್ಟಲು ಸಹಾಯಕವಾಗುತ್ತದೆ. 4 ವಾರಗಳ ಅನಂತರ ಇನ್ನೊಂದು ಸಲ ಅದೇ ರೀತಿ ಮುಂದೆ ಸೂಚಿಸಿರುವ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಒದಗಿಸಬೇಕು. ಕೊನೆಯದಾಗಿ, ಮೂರನೆಯ ಸಲ ಹೆಚ್ಚು ಪ್ರಮಾಣದಲ್ಲಿ ಸಾರಜನಕ ಗೊಬ್ಬರ ಒದಗಿಸಿ ಮಣ್ಣು ವಾರಿಹಾಕಬೇಕು. ನೀರು ಪುರೈಕೆ ಸಂಪುರ್ಣವಾಗಿರಬೇಕು. ಇಲ್ಲದಿದ್ದರೆ ಇಳುವರಿ ತಗ್ಗುತ್ತದೆ. ಅದರಲ್ಲೂ ಗೊಬ್ಬರ ಕೊಟ್ಟು, ಕೊನೆಯ ಸಲ ಮುರಿ ಮಾಡಿರುವ ಕಬ್ಬಿಗೆ ಮುಂದೆ 4-5 ತಿಂಗಳ ಕಾಲ ಹೆಚ್ಚು ನೀರಿನ ಆವಶ್ಯಕತೆ ಇದೆಯಾಗಿ ಒಣಗಲು ಬಿಡಕೂಡದು. ನೀರಿನ ಪುರೈಕೆಗೆ ಗಮನವಿತ್ತಂತೆ ಹೆಚ್ಚಿನ ನೀರು ಬಸಿಯಲು ಅನುಕೂಲವೇರ್ಪಡಿಸಿ ಕಡಗುಗಳು ಪುರ್ಣ ತೆರವಾಗಿದ್ದು, ಅಡಚಣೆಯಾಗದಂತೆ ಎಚ್ಚರವಹಿಸಬೇಕು. ಕಬ್ಬು ಬೆಳೆದಂತೆಲ್ಲಾ ತಳದ ಒಣ ತರಗನ್ನು ಕಬ್ಬಿನ ತೆಂಡೆಗೆ ಸುತ್ತಿ ಕಟ್ಟುತ್ತಾರೆ. ಇದರಿಂದ ಇಲಿಗಳ ಕಾಟ ಕಡಿಮೆಯಾಗಿ ಒಂದಕ್ಕೊಂದು ಆಸರೆಯಾಗಿ ಕಬ್ಬುಗಳು ಒರಗಿಬೀಳುವುದಿಲ್ಲ. ತಳದ ಎಲೆ ಗರಿಗಳು ಒಣಗುತ್ತಿದ್ದಂತೆಲ್ಲಾ ಅವನ್ನು ತೆಗೆದು ಕಬ್ಬು ಕಾಣುವಂತೆ ಏರ್ಪಡಿಸುವುದು ಸಾಮಾನ್ಯವಾಗಿದೆ. ನರಿ, ಇಲಿ ಮುಂತಾದುವು ಒಳಗೆ ಸೇರದಿರಲು ಇದರಿಂದ ಸಹಾಯಕವಾಗುತ್ತದೆ.

ಕಬ್ಬಿನ ಪೂರ್ಣ ಬೆಳೆವಣಿಗೆಯನ್ನು 4 ಮುಖ್ಯ ಹಂತಗಳನ್ನಾಗಿ ವಿಂಗಡಿಸಬಹುದು.

ಕಬ್ಬು ಬೆಳೆ ಬೆಳೆಯುವ ವಿಧಾನಗಳು
ಕಬ್ಬು ಬೆಳೆ

1.ಮೊಳಕೆ ಹಂತ : ಕಬ್ಬಿನ ಬಿತ್ತನೆಯಲ್ಲಿ ಸಾಧಾರಣವಾಗಿ 3 ಕಣ್ಣುಗಳಿರುತ್ತವೆ. ಬಿತ್ತನೆ ಸರಿಯಾಗಿದ್ದಲ್ಲಿ ಆ ಮೂರೂ ಮೊಳೆತು ಕಬ್ಬಾಗಿ ಬೆಳೆಯುತ್ತವೆ. ಆ ಕಣ್ಣುಗಳಲ್ಲಿ ಬೆಳೆಯುವ ಕಬ್ಬಿನ ಅಂಕುರಾಂಶವಿರುವುದರಿಂದ ಅದು ಬೆಳೆಯಲು ಸುಲಭವಾಗುತ್ತದೆ. ಬಿತ್ತನೆ ಸರಿಯಾಗಿದ್ದು, ಕಣ್ಣುಗಳು ದೃಢವಾಗಿದ್ದಲ್ಲಿ ಮೊಳಕೆ ಚೆನ್ನಾಗಿ ಹೊರಟು ಗಿಡ ಬೆಳೆಯುತ್ತದೆ. ಉಹು ಮೊಳಕೆಯನ್ನು ನಿಧಾನಗೊಳಿಸಿ ಅಡಚಣೆಯುಂಟುಮಾಡುತ್ತದೆ.

2.ತೆಂಡೆಹಂತ : ಉತ್ತಮ ಫಸಲು ದೊರಕಲು ಹೆಚ್ಚಾಗಿ ಮರಿಕಬ್ಬು ಉತ್ಪನ್ನವಾಗಬೇಕು. ಮರಿಕಬ್ಬಿನ ಉತ್ಪನ್ನವನ್ನು ತೆಂಡೆಹೊಡೆಯುವುದು ಎನ್ನುತ್ತಾರೆ. ಕಬ್ಬಿನ ಜೀವನವಿಡೀ ಸತತವಾಗಿ ಮರಿಕಬ್ಬುಗಳು ಉತ್ಪನ್ನವಾಗುತ್ತಲೇ ಇರುತ್ತವೆ. ಇವು ಭೂಮಿಯ ಒಳಗಿನ ಕಾಂಡಭಾಗದಿಂದ ಹೊರಗಾಣುತ್ತವೆ. ಮೊದಲು ಪಕ್ಕಕ್ಕೆ ಹರಡಿದಂತಿದ್ದರೂ ಮುಂದೆ ನೇರವಾಗಿ ಬೆಳೆಯುತ್ತವೆ. ಗಿಡಗಳು ಎಳೆಯ ವಯಸ್ಸಿನವಾಗಿರುವಾಗ ಈ ಹೊಸ ಕಾಂಡಗಳಿಗೆ ಬೆಳೆಯಲು ಯಾವ ತೊಡಕೂ ಇರುವುದಿಲ್ಲ. ಆದರೆ ಹೆಚ್ಚಾಗಿ ಬೆಳೆದ ಅನಂತರ ಹೊಸತಾಗಿ ಉತ್ಪನ್ನವಾಗುವ ಮರಿಕಬ್ಬುಗಳು ಸೂರ್ಯರಶ್ಮಿ ಸಾಕಾಗದೆ ನಶಿಸಬಹುದು. ಕಬ್ಬು ಮುಕ್ಕಾಲುಭಾಗ ಬೆಳೆದಿರುವಾಗ, ಹುಟ್ಟುವ ಮರಿಕಬ್ಬುಗಳು ಬಹುದಪ್ಪವಾಗಿ ಆಕರ್ಷಕವಾಗಿ ಕಂಡರೂ ಅದರಲ್ಲಿ ಸಕ್ಕರೆ ಅಂಶ ಬಹಳ ಕಡಿಮೆಯಾಗಿದ್ದು ಅವನ್ನು ನೀರುಕಬ್ಬು ಎಂದು ಕರೆಯುತ್ತಾರೆ.

3.ರಸತುಂಬುವ ಹಂತ : ಕಬ್ಬಿನ ಬೆಳೆವಣಿಗೆ ಅದರ ವಯಸ್ಸನ್ನನುಸರಿಸಿದೆ. ಪ್ರಾರಂಭದಲ್ಲಿ ಕಬ್ಬಿನ ಆಹಾರ ಉತ್ಪಾದನೆಯಲ್ಲ, ಅದರ ಬೆಳವಣಿಗೆಗಾಗಿಯೇ ಖರ್ಚಾಗುತ್ತದೆ. ಆಗ ಸಾರಜನಕಾಂಶ ಮಾತ್ರ ಹೆಚ್ಚಾಗಿದ್ದಲ್ಲಿ ಕಾಂಡಕ್ಕೆ ದೃಢತೆ ಒದಗಿ ಗಿಣ್ಣುಗಳು ದಪ್ಪನಾಗಲು ಸಹಾಯಕವಾಗುತ್ತದೆ. ಭೂಮಿಯಲ್ಲಿನ ತೇವಾಂಶ ಬೆಳೆವಣಿಗೆಗೆ ಸಹಾಯಕ. ಉಷ್ಣಾಂಶವೂ ಹೆಚ್ಚಿನ ಪ್ರಭಾವ ಬೀರುತ್ತದೆ. ಉಷ್ಣತೆ 600 ಫಾ ಗಿಂತ ಕಡಿಮೆ ಅಥವಾ 900 ಫಾ ಗಿಂತ ಹೆಚ್ಚಾಗಿದ್ದಲ್ಲಿ ಕಬ್ಬಿನ ಬೆಳವಣಿಗೆ ಕುಂಠಿತವಾಗುತ್ತದೆ. ಬಲಿತು ರಸಗೂಡುತ್ತಿದ್ದಂತೆ ಕಬ್ಬಿನ ಎಲೆಗಳಿಂದ ಉತ್ಪನ್ನವಾದ ಆಹಾರಾಂಶಗಳಲ್ಲಿ ಸ್ವಲ್ಪಭಾಗ ಹೊಸ ಅಂಗಾಂಗಳ ರಚನೆಗೂ ಸ್ವಲ್ಪ ಭಾಗ ಶಕ್ತಿರೂಪವಾಗಿ ಉಪಯುಕ್ತವಾಗಿ, ಮಿಕ್ಕಂಶವೆಲ್ಲ ಸಕ್ಕರೆಯಾಗಿ ಕಾಂಡದಲ್ಲಿ ಹೆಚ್ಚಾದಂತೆ ಕಬ್ಬು ಪಕ್ವವಾಯಿತೆಂದು ಪರಿಗಣಿಸಲಾಗುತ್ತದೆ. ಸಕ್ಕರೆಯ ಅಂಶ ಗಿಣ್ಣಿನಿಂದ ಗಿಣ್ಣಿಗೆ ವ್ಯತ್ಯಾಸಹೊಂದುತ್ತದೆ. ತಳಭಾಗದ ವಯಸ್ಸಾದ ಗಿಣ್ಣುಗಳಲ್ಲಿ ಹೆಚ್ಚು ಸಕ್ಕರೆ ಶೇಖರವಾಗುತ್ತದೆ. ಮೇಲ್ಭಾಗದ ಎಳಸು ಗಿಣ್ಣುಗಳ ಮಧ್ಯೆ ಸಕ್ಕರೆ ಹೆಚ್ಚಾಗಿರುವುದಿಲ್ಲ. ಕಬ್ಬು ಪಕ್ವವಾಗಲು ಜಾತಿ, ಗೊಬ್ಬರ ಪೂರೈಕೆ ನೀರು ಮತ್ತು ನಾಟಿಯ ಕಾಲಾವಧಿ ಸಹಾಯಕ.

4.ಸೂಲಂಗಿ ಹಂತ : ಕಬ್ಬಿನ ಬೆಳಸು ಕಾಂಡದ ತುಂಡುಗಳಿಂದಾಗುವುದರಿಂದ ಸೂಲಂಗಿ ಮುಖ್ಯವಲ್ಲ. ಅಲ್ಲದೆ, ಎಲ್ಲದರಲ್ಲೂ ಸೂಲಂಗಿ ಬರುವುದಿಲ್ಲ. ಸೂಲಂಗಿ ಬರುವ ಜಾತಿಗಳಲ್ಲಿ ಸೂಲಂಗಿ ಉಂಟಾದರೆ ಕಬ್ಬಿನ ಬೆಳೆವಣಿಗೆ ಪುರ್ಣ ನಿಂತಂತೆಯೇ. ಅದು ಕಾಲಮಿತಿಗೆ ಒಳಪಟ್ಟು, ಅಕ್ಟೋಬರ್-ನವೆಂಬರ್ ವೇಳೆ ಮಾತ್ರ ಹೊರಬೀಳುತ್ತದೆ. ಸೂಲಂಗಿ ಬರಲು ಕಬ್ಬಿನ ವಯಸ್ಸು ಮುಖ್ಯ.

ಕಬ್ಬಿನ ಬೆಳೆಗೆ ಹಲವಾರು ಬಗೆಯ ಕೀಟಗಳು ತಗಲುತ್ತವೆ. ಇವುಗಳಲ್ಲಿ ಕಾಂಡ ಕೊರೆಯುವ ಹುಳು, ಪೈರಿಲ್ಲ ಮತ್ತು ಸುಳಿ ಅಥವಾ ತುದಿ ಕೊರೆಯುವ ಹುಳುಗಳು ಮುಖ್ಯವಾದುವು. ಕಾಂಡ ಕೊರೆಯುವ ಹುಳುಗಳಲ್ಲಿ ಹಲವಾರು ಜಾತಿಗಳಿವೆ. ಮುಖ್ಯವಾದುವು ಅರ್ಗೈರಿಯ ಸ್ಟ್ರಿಕ್ಟಿಕ್ರಾಸ್ಸಿಸ್, ಡೈಯಾಟ್ರಿಯ ಮತ್ತು ಸ್ಕಿರ್ಪೊಫೇಗ ನಿವೆಲ್ಲ ಎಂಬುವು. ಇವೆಲ್ಲ ಕಬ್ಬಿನ ಕಾಂಡವನ್ನು ಕೊರೆದು, ಮಧ್ಯ ಸುಳಿ ಒಣಗುವಂತೆ ಮಾಡಿ ಎಳೆಯ ಪೈರಿಗೆ ಅತಿ ಹೆಚ್ಚಿನ ನಷ್ಟವುಂಟುಮಾಡುತ್ತವೆ. ಸುಳಿ ಕೊರೆಯುವ ಹುಳು ಸಾಮಾನ್ಯವಾಗಿ ಕಬ್ಬಿನ ಎಳೆಯ ತುದಿಗಳನ್ನು ಕೊರೆದು ಅದರ ಬೆಳೆವಣಿಗೆಯನ್ನು ಕುಂಠಿತಗೊಳಿಸುತ್ತದೆ. ತುದಿಯಲ್ಲಿರುವ ಎಲೆಗಳು ನಾಶವಾಗುವುದಲ್ಲದೆ ಮಧ್ಯ ಎಲೆಗಳಲ್ಲಿ ತೂತುಗಳು ಉಂಟಾಗಿ, ಉಳಿದೆಲ್ಲ ಎಲೆಗಳ ಅಂಚುಗಳಲ್ಲೂ ಕುಚ್ಚುಗಳು ಕಾಣಬರುತ್ತವೆ. ಸುಳಿ ಹಾಳಾಗುವುದರಿಂದ ಕಬ್ಬಿನ ತುದಿಯಲ್ಲಿರುವ ಮೊಗ್ಗುಗಳು ಮೊಳೆಯಲಾರಂಭಿಸುತ್ತವೆ. ಇದರಿಂದ ಕಬ್ಬಿನ ತುದಿ ಕುಚ್ಚಿನಂತೆ ಕಾಣುತ್ತದೆ. ಇವನ್ನು ನಿರ್ಮೂಲ ಮಾಡುವುದು ಕಷ್ಟವಾದರೂ ಇವುಗಳ ಮೇಲೆ ಪರಾವಲಂಬಿಯಾದ ಒಂದು ಬಗೆಯ ಕಣಜವನ್ನು ಕಬ್ಬಿನ ಗದ್ದೆಗಳಲ್ಲಿ ಬಿಟ್ಟು ಅದು ಈ ಹುಳುಗಳನ್ನು ತಿಂದು ನಾಶಪಡಿಸುವಂತೆ ಮಾಡುವ ಕ್ರಮವೂ ಇದೆ. ಪೈರಿಲ್ಲ ಹುಳುವೂ ಕಬ್ಬಿನ ಒಂದು ಮುಖ್ಯ ಕೀಟ ಪಿಡುಗೆನಿಸಿದೆ. ಇದು ಸಾಮಾನ್ಯವಾಗಿ ಎಲೆಗಳ ತಳಭಾಗದಲ್ಲಿದ್ದು ಸಸಿಗಳ ರಸವನ್ನು ಹೀರಿ ಜೀವಿಸುತ್ತದೆ. ಹೀಗೆ ಲಕ್ಷಾಂತರ ಕೀಟಗಳು ರಸ ಹೀರುವುದರಿಂದ ಎಲೆಗಳೆಲ್ಲ ಹಳದಿಯಾಗಿ ಸುಕ್ಕುಗಟ್ಟುತ್ತವೆ. ಅಲ್ಲದೆ ಕಬ್ಬಿನ ಮೈಯಿಂದ ರಸ ಜಿನುಗುವುದರಿಂದ ಅದರ ಮೇಲೆಲ್ಲ ಬೂಷ್ಟು ಬೆಳೆಯುವ ಸಂಭವವೂ ಉಂಟು. ಇದರಿಂದಾಗಿ ಕಬ್ಬುಗಳಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ರಸ ಹೀರಿದಾಗ ಕೀಟಗಳೂ ತಮ್ಮ ದೇಹದಿಂದ ಸಿಹಿರಸವನ್ನು ಜಿನುಗಿಸುತ್ತವೆ. ಇವನ್ನು ಹಲವು ಜಾತಿ ಇರುವೆಗಳು ಹೀರುತ್ತವೆ. ಅದಕ್ಕಾಗಿ ಇರುವೆಗಳು ಕೀಟದ ಮರಿಗಳನ್ನು ಕಬ್ಬಿನಿಂದ ಕಬ್ಬಿಗೆ ಕೊಂಡೊಯ್ಯುವುದುಂಟು. ಇವಲ್ಲದೆ ಕಬ್ಬಿನ ಮಿಡತೆ, ಬಿಳಿನೊಣ, ಗೆದ್ದಲು, ನುಸಿ ಮುಂತಾದ ಕೀಟಗಳೂ ಗಣನೀಯ ಪ್ರಮಾಣದಲ್ಲಿ ಕಬ್ಬಿನ ಬೆಳೆಯನ್ನು ನಷ್ಟಗೊಳಿಸುವುದುಂಟು. ಬರಿಯ ಕೀಟಗಳಲ್ಲದೆ ಇಲಿ, ನರಿ, ಆನೆ, ಹಂದಿ ಮುಂತಾದುವೂ ಕಬ್ಬಿನ ಬೆಳೆಯ ಪ್ರಮುಖ ಶತ್ರುಗಳೆನಿಸಿವೆ. ರೋಗಪೀಡಿತ ಕಬ್ಬನ್ನು ಸೀಳಿನೋಡಿದಲ್ಲಿ ತಳದ ಗಿಣ್ಣುಗಳ ಬಳಿ ಕೆಂಪು ಬಣ್ಣವಿದ್ದು ಕಬ್ಬಿನಿಂದ ಕೊಳೆತ ಹುಳಿವಾಸನೆ ಬರುತ್ತಿರುತ್ತದೆ. ಹೀಗಾದಾಗ ನರಿ ಹೂಸಿದೆ ಎಂದು ಹೇಳುವುದು ಹಳ್ಳಿಗರಲ್ಲಿ ವಾಡಿಕೆ. ಬಾಡುವ ರೋಗದಲ್ಲೂ ಕಬ್ಬಿನ ಮಧ್ಯೆ ಕೆಂಪು ವರ್ಣವಾಗುತ್ತದೆ. ಆದರೆ ರೋಗ ಹರಡಿ ಬಹುಬೇಗ ಕಬ್ಬಿನ ಒಳಭಾಗವೆಲ್ಲ ಪೂರ್ಣ ಕೆಂಪಾಗಿ, ಮುಂದೆ ಟೊಳ್ಳಾಗುತ್ತದೆ. ಕಬ್ಬು ಇದರಿಂದ ಹಗುರವಾಗುತ್ತದೆ. ಕಂದುಚುಕ್ಕೆರೋಗ ಎಲೆಯ ಅಲಗುಗಳಲ್ಲಿ ಮಾತ್ರ ಕಂಡುಬರುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

49 Comments

ತುಳಸಿ

ತುಳಸಿ ಮಹತ್ವ ಮತ್ತು ಪೂಜೆ ಮಾಡಲು ಕಾರಣ

ಕವಿ ರತ್ನ ಕಾಳಿದಾಸ

ಕವಿ ರತ್ನ ಕಾಳಿದಾಸ