in

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ
ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ

ಕರ್ನಾಟಕದ, ಬಂಟ್ವಾಳತಾಲೂಕಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಊರು ವಿಟ್ಲ. ಇಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ವಿಟ್ಲ ಸೀಮೆಯ ದೇವಸ್ಥಾನಗಳಲ್ಲೆಲ್ಲ ಪ್ರಮುಖವಾದುದು ಮಾತ್ರವಲ್ಲದೇ ಗಾತ್ರದ ದೃಷ್ಟಿಯಿಂದಲೂ ಇದನ್ನು ಮೀರಿಸುವ ದೇವಾಲಯಗಳು ಸುತ್ತುಮುತ್ತಲಿನಲ್ಲಿಲ್ಲ.

ದೇವಸ್ಥಾನದ ಹಿಂಬದಿಯ ನೋಟ
ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ವಿಟ್ಲ ಸೀಮಾ ಅರಸು ಮನೆತನದ ಆಡಳಿತಕ್ಕೊಳಪಟ್ಟಿದೆ. ಸೀಮೆಯ ಮುಖ್ಯಸ್ಥರು ವಿಟ್ಲದ ಅರಸರು. ಹಲವು ಶತಮಾನಗಳ ಇತಿಹಾಸವುಳ್ಳ ಡೊಂಬಹೆಗಡೆ ಅರಸು ಮನೆತನದವರು ವಿಟ್ಲದ ಅರಸರು. ಡೊಂಬಹೆಗಡೆ ಎಂಬುದು ವಿಟ್ಲದ ಅರಸರು ಪಡೆಯುತ್ತಿದ್ದ ಬಿರುದು. ಈ ಅರಸು ವರ್ಗದವರಿಗೆ ಬಲ್ಲಾಳ ಎಂಬುದು ಉಪನಾಮ. ಸೀಮೆಯ ಅರಸರಿಗೆ ಪಂಚಲಿಂಗೇಶ್ವರ ಆರಾಧ್ಯದೇವರು. ವಿಟ್ಲದ ಜಾತ್ರೆ ಮುಖ್ಯ ಉತ್ಸವ. ವಿಟ್ಲವು ಇಷ್ಠಕಾಪುರ ಎಂಬ ಹೆಸರಿನಿಂದಲೂ ಪ್ರಸಿಧ್ಧವಾಗಿತ್ತು.

ಐತಿಹ್ಯದ ಪ್ರಕಾರ ಪುರಾತನ ಕಾಲದ ಏಕಚಕ್ರ ವರ್ಗಗಳ ಸಮೀಪದ ಕಳಂಜಿ ಮಲೆ ಕಾಡಿನಲ್ಲಿಯೇ ಬಕಾಸುರನ ಗುಹೆಯಿತ್ತು. ಭೀಮ ಅವನನ್ನು ಕೊಂದುದು ಅಲ್ಲಿಯೇ. ಅವನನ್ನು ಕೊಂದಾಗ ಹರಿದ ರಕ್ತವು ಬಂದು ತುಂಬಿಕೊಂಡುದರಿಂದ ನೆತ್ತರುಕೆರೆ ಉಂಟಾಯಿತು. ಕಳಂಜಿಮಲೆ ಹಾಗೂ ನೆತ್ತರುಕೆರೆ ವಿಟ್ಲದ ಆಸುಪಾಸಿನ ಸ್ಥಳಗಳು.

ದೇವಸ್ಥಾನಕ್ಕೆ ಸಂಬಂಧಿಸಿದ ಸ್ಥಳ ಪುರಾಣದ ಪ್ರಕಾರ ಪಾಂಡವರು ತಮ್ಮ ಸುತ್ತಾಟಕಾಲದಲ್ಲಿ ಈ ಪ್ರದೇಶದಲ್ಲಿ ವಾಸಮಾಡಿದ್ದರಂತೆ. ತಮ್ಮ ನೆನಪಿಗಾಗಿ ಶಿವನನ್ನು ಸ್ಥಾಪಿಸಲು ಇಚ್ಛಿಸಿ,ಕಾಶಿಯಿಂದ ಲಿಂಗಗಳನ್ನು ತರಲು, ವಾಯುವೇಗದಲ್ಲಿ ಗಮಿಸಬಲ್ಲ ಭೀಮನನ್ನು ಕಳುಹಿಸಿದರು. ಭೀಮನು ಲಿಂಗಗಳೊಂದಿಗೆ ಬರುವಾಗ ತಡವಾದ್ದರಿಂದ ನಿಶ್ಚಿತ ಲಗ್ನದಲ್ಲಿ ಲಿಂಗವೊಂದನ್ನು ಪ್ರತಿಷ್ಟಿಸಿ, ಪೂಜೆ ಮಾಡಿದರಂತೆ. ಇನ್ನೊಂದು ಪಾಠಾಂತರದ ಪ್ರಕಾರ ಭೀಮನು ಕಾಶಿಗೆ ಹೋದಾಗ ಅವನ ಹಿಂದೆಯೇ ಹನುಮಂತನೂ ಹೋದನಂತೆ. ವೇಗಶಾಲಿಯಾದ ಹನುಮಂತನು ಮೊದಲಿಗೆ ತಂದ ಲಿಂಗವನ್ನು ನಿಶ್ಚಿತ ಲಗ್ನದಲ್ಲಿ ಪ್ರತಿಷ್ಟಾಪಿಸಿದರಂತೆ. ಭೀಮನು ತಾನು ತಂದ ಲಿಂಗಗಳು ವ್ಯರ್ಥವಾಗಬಾರದೆಂದು ಅದಾಗಲೇ ಫ್ರತಿಷ್ಠಾಪಿಸಿದ್ದ ಲಿಂಗವನ್ನು ಕಿತ್ತೆಸೆದು ತಾನು ತಂದ ಲಿಂಗಗಳನ್ನು ಪ್ರತಿಷ್ಠಿಸಿದನಂತೆ.ನೈವೇದ್ಯಕ್ಕೆ ಬೇರೇನೂ ಇಲ್ಲದಿದ್ದುದರಿಂದ, ಅದಗಲೇ ನೈವೇದ್ಯ ಮಾಡಲಾಗಿದ್ದ ಅನ್ನಕ್ಕಿಷ್ಟು ನೀರು ಚಿಮುಕಿಸಿ ಅದನ್ನೊಮ್ಮೆ ಬೆಂಕಿಗಿರಿಸಿ ತೆಗೆದು ನೈವೇದ್ಯ ಮಾಡಿದನಂತೆ. ಆದುದರಿಂದ ವಿಟ್ಲದ ದೇವರಿಗೆ ತಂಗಳನ್ನ ನೈವೇದ್ಯವೆಂದು ಹೇಳುವುದಿದೆ. ಈಗಲೂ ಬೇಯಿಸಿ ತಂದಿರಿಸಿದ ಅನ್ನಕ್ಕೆ ನೀರು ಚಿಮುಕಿಸಿ ದೀಪದ ಬೆಂಕಿಗಾದರೂ ತೋರಿಸಿ ನೈವೇದ್ಯ ಮಾಡುವುದೆಂದು ಹೇಳಲಾಗುತ್ತದೆ. ಭೀಮನು ಕಿತ್ತೆಸೆದ ಲಿಂಗವನ್ನು ದೇವಸ್ಥಾನದ ಉತ್ತರ ಭಾಗದಲ್ಲಿರುವ ಪುಷ್ಕರಣಿಯ ನಡುವಿನ ಕಲ್ಲಿನ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಐದು ಪ್ರಾಕೃತಿಕ ಶಿಲಾಖಂಡಗಳನ್ನು ಏಕಪಾಣಿಪೀಠದ ಮೇಲೆ ಲಿಂಗಗಳಾಗಿ ಸ್ಥಾಪಿಸಿರುವುದರಿಂದ ಪಂಚಲಿಂಗೇಶ್ವರ ದೇವಾಲಯವೆನಿಸಿದೆ. ಶಿವನ ಸ್ವರೂಪಗಳಾದ ಸದ್ಯೋಜಾತ, ವಾಮದೇವ,ಅಘೋರ, ತತ್ಪುರುಷ, ಈಶಾನ.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ
ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ

ಈ ದೇವಸ್ಥಾನವು ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಪ್ರಾಚೀನವೆಂದು ಸಂಶೋಧಕರು ನಿರ್ಧರಿಸಿದ್ದಾರೆ.

ವಿಟ್ಲ ದೇವಸ್ಥಾನದ ಬಗ್ಗೆ ಸಿಗುವ ಮೊದಲ ಉಲ್ಲೇಖ ಕಾರ್ಕಳ ತಾಲೂಕಿನ ಹಚವೆಟ್ಟು ಶಿಲಾಶಾಸನದಲ್ಲಿದೆ. ಸುಮಾರು ಕ್ರಿ.ಶ.೧೪೦೫ರ ಶಾಸನ. ವಿಟ್ಲ ಡೊಂಬಹೆಗಡೆ ಮನೆತನದ ಉಲ್ಲೇಖವು ಕ್ರಿ.ಶ. ೧೨೫೭ರ ವಗೆನಾಡು ಶಾಸನದಲ್ಲಿದೆ. ಆಧಾರ- ಡಾ.ಪುಂಡಿಕಾಯಿ ಗಣಪಯ್ಯ ಭಟ್ ರವರ ’ವಗೆನಾಡು ದೇವಾಲಯದ ಒಂದನೆಯ ವೀರಪಾಂಡ್ಯನ ಶಿಲಾಶಾಸನ’ ಸ್ಕಂದ ವೈಭವ.

ಕ್ರಿ.ಶ. ೧೪೩೬, ೧೭೨೭, ೧೮೯೪ ರಲ್ಲಿ ಜೀರ್ಣೋಧ್ಧಾರವಾದ ದಾಖಲೆಗಳು ದೇಗುಲದಲ್ಲಿರುವ ಶಿಲಾಶಾಸನಗಳಲ್ಲಿವೆ. ೧೮೯೪ ರಲ್ಲಿ ಅರಮನೆಯ ಅರಸಿ ಸುಭದ್ರಮ್ಮ ಯಾನೆ ದೊಡ್ಡಮ್ಮನವರಾಗಿದ್ದಿರಬೇಕು. ಅವರ ನಂತರ ರವಿವರ್ಮ ನರಸಿಂಹ ರಾಜರು, ಆನಂತರ ಅವರ ಪುತ್ರ ರವಿವರ್ಮ ಕೃಷ್ಣರಾಜರು, ತದನಂತರ ಅವರ ತಮ್ಮ ರಾಮವರ್ಮ ರಾಜರು ಅರಸರಾದರು. ಈಗ ಅರಮನೆಯ ಹಿರಿತನದ ನೆಲೆಯಲ್ಲಿ, ಶ್ರೀ ಜನಾರ್ದನವರ್ಮರು ಅರಸರಾಗಿರುತ್ತಾರೆ.

ಪೂರ್ವಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟಂತಹ ದೇವಾಲಯಗಳು ಜೀರ್ಣಾವಸ್ಥೆಗೆ ಬಂದಂತಹ ಸಂದರ್ಭದಲ್ಲಿ, ಅಷ್ಟಮಂಗಲಪ್ರಶ್ನೆಯನ್ನಿರಿಸಿ, ದೋಷಗಳಿದ್ದರೆ ಪರಿಹರಿಸಿ, ನಂತರ ಜೀರ್ಣೋಧ್ಧಾರಕ್ಕೆ ಆರಂಭಿಸುವುದು ವಾಡಿಕೆ. ಅಂತೆಯೇ ೨೦೦೧ರಲ್ಲಿ ಅಷ್ಟಮಂಗಲ ಪ್ರಶ್ನೆ ಜರುಗಿತು. ಹೊಸದಾಗಿ ಪುನರಾರಂಭಿಸುವ ದೇವಸ್ಥಾನದ ವಾಸ್ತುಶಿಲ್ಪಿಯನ್ನಾಗಿ ಶ್ರೀ ಮಹೇಶ ಮುನಿಯಂಗಳ ಅವರನ್ನು ಆಯ್ಕೆಮಾಡಲಾಯಿತು. ದೇವಸ್ಥಾನ ಜೀರ್ಣೋಧ್ಧಾರ ಸಂಚಾಲನಾ ಸಮಿತಿಯೊಂದನ್ನು ರಚಿಸಲಾಯಿತು. ಶ್ರೀ ಎಲ್.ಎನ್.ಕೂಡೂರು ಇವರನ್ನು ಅಧ್ಯಕ್ಷರನ್ನಾಗಿ ಆರಿಸಲಾಯಿತು. ಸಮಿತಿಯಲ್ಲಿ ವಿ.ರಾಮವರ್ಮ-ವಿಟ್ಲ ಅರಮನೆ, ಎಚ್.ಜಗನ್ನಾಥ ಸಾಲಿಯಾನ್, ಯಶವಂತ-ವಿಟ್ಲ, ಜನಾರ್ದನ ಪೈ, ಬಿ. ಶಾಂತಾರಾಮ ಶೆಟ್ಟಿ, ನಿತ್ಯಾನಂದ ನಾಯಕ್, ಬಾಬು ಕೊಪ್ಪಳ, ದಯಾನಂದ ಆಳ್ವ, ಸೀತಾರಾಮ ಶೆಟ್ಟಿ ಆಯ್ಕೆಯಾದರು. ನಂತರ ೩೦೫ ಜನರ ಜೀರ್ಣೋಧ್ಧಾರ ಸಮಿತಿ ರಚನೆಯಾಯಿತು.

ನಿಧಿ ಸಂಚಯನ,ಗಣ್ಯರ- ಆಸ್ತಿಕರ ಕೊಡುಗೆ, ಕರ್ನಾಟಕ ಸರಕಾರದ ಮುಜರಾಯಿ ಖಾತೆಯಿಂದ ಒಂದು ಕೋಟಿ ರೂಗಳ ಅನುದಾನ, ಕೃಷಿಉತ್ಪನ್ನ ವಸ್ತುಸಂಗ್ರಹ, ಪಿಗ್ಮಿ ಯೋಜನೆ ಹೀಗೆ ಹಲವು ಮೂಲಗಳಿಂದ ಹಣಾ ಸಂಗ್ರಹಿಸಲಾಯಿತು. ಸುಮಾರು ಎರಡೂಕಾಲು ಕೋಟಿಗಳಷ್ಟು ಹಣ ಸಂಗ್ರಹವಾದ ನಂತರ ಪ್ರಾಚೀನ ಗರ್ಭಗುಡಿ ತೆರವುಗೊಳಿಸಲು ತೀರ್ಮಾನಿಸಿ, ಅಧಿಕೃತ ವೈದಿಕ ಕಾರ್ಯಕ್ರಮ ೨೦೦೭ ರಲ್ಲಿ ಆಲಂಪಾಡಿ ಶ್ರೀ ಪದ್ಮನಾಭ ತಂತ್ರಿಗಳ ಹಿರಿತನದಲ್ಲಿ ಜರುಗಿತು. ಪಂಚಲಿಂಗಗಳನ್ನು ಸಂಕೋಚಿಸಿ, ಏಕಲಿಂಗವನ್ನು ಹೊಸತಾಗಿ ನಿರ್ಮಿಸಿ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಗರ್ಭಗುಡಿಯ ಮುಗುಳಿಗೆ ಬಿಗಿದಹಗ್ಗವನ್ನು ಬಸವನ ಕೊಂಬಿಗೆ ಕಟ್ಟಿ ಮುಗುಳಿಯನ್ನು ತೆಗೆಯಲಾಯಿತು. ತಂತ್ರಿಯವರು ಗರ್ಭಗುಡಿಯ ತಾಮ್ರದ ತಗಡನ್ನು ತೆಗೆಯುವಮೂಲಕ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ದೇವಸ್ಥಾನದ ಕಲ್ಲಿನಕೆತ್ತನೆಯನ್ನು ಕಾರ್ಕಳದ ಶಿಲಾಶಿಲ್ಪಿ ವಿಶ್ವನಾಥ ಅವರ ಬಳಗ ಮಾಡಿದೆ. ದಾರು ಶಿಲ್ಪವನ್ನು ತ್ರಿಶೂರ‍್ ನ ಇ.ಕೆ. ವಾಸು ಆಚಾರ್ಯರವರ ತಂಡ ಮಾಡಿದೆ. ೬೫ ಅಡಿ ಎತ್ತರದ ಇಳಿಜಾರಾದ ಮೂರು ಅಂತಸ್ತಿನ ಮಾಡಿನ ಗರ್ಭಗುಡಿಯಿದೆ.ಮಾಡಿನ ತುತ್ತತುದಿಯ ದಾರುಶಿಲ್ಪದ ಜೋಡಣೆ ಸುಂದರವಾಗಿದೆ. ಕಬ್ಬಿಣದ ಮೊಳೆಗಳನ್ನಿಲ್ಲಿ ಉಪಯೋಗಿಸಿಲ್ಲ. ಗರ್ಭಗುಡಿಯೊಳಗೆ ವಿದ್ಯುತ್ ಸಂಪರ್ಕವನ್ನು ಮಾಡಲಿಲ್ಲ. ದೀಪಗಳ ಬೆಳಕೇ ಆಧಾರ. ಗರ್ಭಗುಡಿಯ ಒಳಗಿನ ಎರಡು ಕೆಂಪುಕಲ್ಲಿನ ಗೋಡೆಗಳಿಗೆ ಸಿಮೆಂಟ್ ಬಳಸಲಿಲ್ಲ. ಪ್ರಾಚೀನಕಾಲದಲ್ಲಿ ಬಳಕೆ ಮಾಡುತ್ತಿದ್ದ ಬೆಲ್ಲ ಕುಮ್ಮಾಯಿಯ ಜೊತೆಗೆ ಎರ್ಪೆ ಸೊಪ್ಪು, ಆಲದ ಕುರ್ಮದ ತೊಗಟೆಗಳಿಂದ ತೆಗೆದ ರಸವನ್ನು ಮಿಶ್ರಮಾಡಿ ಇಪ್ಪತ್ತು ದಿನ ನಾದಿಸಿ ತಯಾರಿಸಿದ ಮಿಶ್ರಣದಿಂದ ಕಲ್ಲುಗಳನ್ನು ಜೋಡಿಸಲಾಗಿದೆ.

೪೭೫೦ ಚದರ ಅಡಿ ವಿಸ್ತೀರ್ಣದ ಗಜಪೃಷ್ಠಾಕಾರದ ಗರ್ಭಗುಡಿಯನ್ನು ತೆರವುಗೊಳಿಸಿ ಅದೇ ಆಯ ಮತ್ತು ವಾಸ್ತುವಿನಲ್ಲಿ ಪುನಃ ನಿರ್ಮಿಸಲಾಗಿದೆ. ೪೫೦೦ ಕಿಲೋ ತೂಗುವ ಶಿಲಾಪಾಣಿಪೀಠವನ್ನು ಕೆತ್ತನೆಮಾಡಿ ಕ್ರೇನ್ ಮೂಲಕ ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ. ಈ ಪಾಣಿಪೀಠವು ೯ ಅಡಿ ಉದ್ದ, ೬ ಅಡಿ ಅಗಲ, ೪ ಅಡಿ ದಪ್ಪವಿದೆ. ಸುತ್ತುಪೌಳಿ ೩೪೭ ಕೋಲು ಸುತ್ತಳತೆಯನ್ನು ಹೊಂದಿದೆ. ಐದೂಕಾಲು ಅಡಿ ಎತ್ತರದ ಮೂರು ಚಿನ್ನದ ಲೇಪದ ಮುಗುಳಿಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆಯವರು ಮಂಜಯ್ಯ ಹೆಗ್ಗಡೆಯವರ ಮಂಜಯ್ಯ ಹೆಗ್ಗಡೆಯವರು ಮೂಲತಃ ವಿಟ್ಲದವರು ನೆನಪಿನಲ್ಲಿ ಕೊಡುಗೆಯಾಗಿ ನೀಡಿರುತ್ತಾರೆ.

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ
ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪೇಜಾವರಮಠ, ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯಮಠ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಶ್ರೀ ರಾಮಚಂದ್ರಾಪುರ ಮಠ, ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ಇವರ ಮಾರ್ಗದರ್ಶನದೊಂದಿಗೆ, ಸಂಘ-ಸಂಸ್ಥೆಗಳ ನೆರವು, ಊರ-ಪರವೂರ ಜನರ ತನು-ಮನ-ಧನದ ಸಹಕಾರ, ಸಾವಿರಾರು ಜನರ ಶ್ರಮದಾನ ನಿಸ್ಪೃಹ ಸೇವಾಮನೋಭಾವದೊಂದಿಗೆ ಹನ್ನೊಂದು ವರುಷಗಳಲ್ಲಿ ಸುಮಾರು ಹತ್ತು ಕೋಟಿ ರೂಗಳ ವೆಚ್ಚದಲ್ಲಿ ಭವ್ಯವಾಗಿ ದೇವಸ್ಥಾನ ನಿರ್ಮಾಣಗೊಂಡಿದೆ. ಮೂಲರಚನೆ, ಸೌಂದರ್ಯಕ್ಕೆ ಚ್ಯುತಿಬಾರದಂತೆ ಕೆಂಪುಕಲ್ಲು, ತಾಮ್ರ, ಮರಗಳನ್ನು ಬಳಸಿ ವಾಸ್ತುಶಿಲ್ಪವನ್ನೊಳಗೊಂಡು ಹಿಂದಿನಂತೆಯೇ ತನ್ನ ಕಲಾವೈಭವವನ್ನು ಮೆರೆಯುತ್ತಿದೆ.

ದೇವಾಲಯಗಳ ಗಾತ್ರಕ್ಕನುಸಾರವಾಗಿ ಅಲ್ಪಪ್ರಾಸಾದ, ಮಧ್ಯಪ್ರಾಸಾದ, ಮಹಾಪ್ರಾಸಾದ, ಜಾತಿ, ವಿಕಲ್ಪ, ಛಂದ ಎಂಬ ಆರು ಹೆಸರುಗಳಿವೆ. ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ಮಹಾಪ್ರಾಸಾದ ಅತ್ಯಂತ ದೊಡ್ಡ ಗರ್ಭಗುಡಿ ನಿಯಮದ ದೇವಾಲಯವಾಗಿದೆ.

ಪಶಿಮಾಭಿಮುಖವಾಗಿದ್ದು, ಗಜಪೃಷ್ಠಾಕೃತಿಯಲ್ಲಿದೆ. ಪಂಚಲಿಂಗಗಳ ಎದುರಿಗೆ ಒಳಾಂಗಣದಲ್ಲಿ ನಂದಿವಿಗ್ರಹ, ನವರಂಗ ಮಂಟಪ, ವಸಂತ ಮಂಟಪವಿದೆ. ೬೬ ೧/೨ ಅಡಿ ಎತ್ತರದ ೫.೫ ಅಡಿ ಸುತ್ತಳತೆಯ ಧ್ವಜ ಸ್ತಂಭವಿದೆ. ಒಳಾಂಗಣದ ವಾಯುವ್ಯ ದಿಕ್ಕಿನಲ್ಲಿ ಪಶ್ಚಿಮಾಭಿಮುಖವಾಗಿ ಕುಂತೀಶ್ವರ ಗುಡಿಯಿದೆ. ಎದುರಿಗೆ ಪುಟ್ಟ ನಂದಿ ವಿಗ್ರಹ. ಪಾಂಡವಪ್ರತಿಷ್ಠೆಯೆಂಬ ಸ್ಥಳಪುರಾಣಕ್ಕೆ ಸಂಬಂಧಿಸಿದಂತೆ ಕುಂತಿ ಪೂಜಿಸಿದಲಿಂಗ ಎಂಬುದನ್ನು ಈ ಕುಂತೀಶ್ವರಲಿಂಗ ಎಂಬ ಹೆಸರು ನೆನಪಿಸುವಂತಿದೆ. ಈಶಾನ್ಯದಲ್ಲಿ ಧೌಮ್ಯೇಶ್ವರ, ಆಗ್ನೇಯದಲ್ಲಿ ಭೈರವೇಶ್ವರ ಗುಡಿಯಿದೆ. ದಕ್ಷಿಣದಿಕ್ಕಿನಲ್ಲಿ ಪೂರ‍್ವಾಭಿಮುಖವಾಗಿ ಗಣಪತಿ ಗುಡಿಯಿದೆ. ಇಲ್ಲಿರುವ ಗಣಪತಿ ವಿಗ್ರಹವು ಸುಮಾರು ಕ್ರಿ.ಶ. ಹನ್ನೊಂದನೆಯ ಶತಮಾನದ್ದೆಂದು ಡಾ.ಪಿ.ಗುರುರಾಜ ಭಟ್ಟರು ಊಹಿಸಿದ್ದಾರೆ. ನೈಋತ್ಯ ದಿಕ್ಕಿನಲ್ಲಿ ಪಶ್ಚಿಮಾಭಿಮುಖವಾಗಿ ಅಮ್ಮನವರ ಗುಡಿಯಿದೆ. ಒಳಾಂಗಣದ ಈ ಎಲ್ಲಾ ಸ್ಥಾಪನೆಗಳಿಗೂ ಪೂಜೆ ನಡೆಯುತ್ತದೆ. ಉತ್ತರದಿಕ್ಕಿನಲ್ಲಿ ಬಾವಿ ಹಾಗೂ ಸಣ್ಣ ಕೊಳವಿದೆ. ಸುತ್ತುಪೌಳಿಯ ಸುತ್ತಲೂ ಮರದ ದರಿಯನ್ನು ನಿರ್ಮಿಸಲಾಗಿದೆ. ಜಾತ್ರೆಯ ಸಮಯದಲ್ಲಿ ಇಲ್ಲಿ ದೀಪಗಳನ್ನು ಉರಿಸಲಾಗುತ್ತದೆ. ಒಳಪ್ರಾಕಾರದಲ್ಲಿ ಉಳ್ಳಾಲ್ತಿಭಂಡಾರವನ್ನಿಡುವ ವ್ಯವಸ್ಥೆಯಿದೆ.

ಹೊರಾಂಗಣದ ನೈಋತ್ಯ ದಿಕ್ಕಿನಲ್ಲಿ ದಕ್ಷಿಣಕ್ಕೆ ತೆರೆದಂತೆ ದೇವಾಲಯದ ಆವರಣದ ಪ್ರವೇಶದ್ವಾರವಿದೆ ನೈಋತ್ಯದಿಕ್ಕಿನ ಮೂಲೆಯಲ್ಲಿ ಓಕುಳಿಕುಂಡ, ದೀಪಸ್ತಂಭ ಮತ್ತು ಕಟ್ಟೆಯಿದೆ. ಜಾತ್ರೆಯ ಸಮಯದಲ್ಲಿ ವಿಟ್ಲದ ಅರಸರು ಈ ಕಟ್ಟೆಯಲ್ಲಿ ಕುಳಿತುಕೊಳ್ಳುವ ಪಧ್ಧತಿಯಿದೆ. ನಾಗ, ರಕ್ತೇಶ್ವರಿ, ಗುಳಿಗ, ಬ್ರಹ್ಮರಾಕ್ಷಸ ಕಟ್ಟೆಗಳಿವೆ. ಉತ್ತರಭಾಗದಲ್ಲಿ ವಿಸ್ತಾರವಾದ ಪಂಚಲಿಂಗ ಪುಷ್ಕರಣಿಯಿದೆ.

ಸೀಮೆಯ ಮುಖ್ಯ ದೈವಸ್ಥಾನ ಕೇಪು ಎಂಬಲ್ಲಿರುವ ’ಉಳ್ಳಾಲ್ತಿ’ಯದು, ಸೀಮೆಯ ಮುಖ್ಯ ಭೂತ ’ಮಲರಾಯ’ ಎಂದು ಹೇಳಲಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹರಿವೆ ಸೊಪ್ಪು

ಹರಿವೆ ಸೊಪ್ಪಿನಲ್ಲಿದೆ ಸಾಕಷ್ಟು ಆರೋಗ್ಯ ಲಾಭ

ಕಡಲೆಕಾಯಿ

ಬಡವರ ಬಾದಮಿ ಕಡಲೆಕಾಯಿ