in

ಮಧ್ಯಮ ಪಾಂಡವ

ಮಹಾಭಾರತದ ಮಹಾಕಾವ್ಯದ ಪ್ರಮುಖ ಪಾತ್ರಗಳಾದ ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಎಂಬ ಐದು ಸಹೋದರರು. ಪಂಚಪಾಂಡವರಲ್ಲಿ ಮಧ್ಯದವ ಅರ್ಜುನ ಹಾಗಾಗಿ ಮಧ್ಯಮ ಪಾಂಡವ ಎಂದು ಕರೆಯುತ್ತಾರೆ. ದ್ರೋಣಾಚಾರ್ಯರ ಮೆಚ್ಚಿನ ಶಿಷ್ಯ. ಪಾಂಡುರಾಜನ ಮೊದಲ ಹೆಂಡತಿಯಾದ ಕುಂತಿಯಲ್ಲಿ ಇಂದ್ರನ ವರಪ್ರಸಾದದಿಂದ ಹುಟ್ಟಿದವ.  ಕರ್ಣನಿಗೆ  ಬಿಲ್ವಿದ್ಯೆಯಲ್ಲಿ   ಸಮಾನವಾದವ. ಚಕ್ರವ್ಯೂಹವನ್ನು ಭೇದಿಸುವಲ್ಲಿ ಪ್ರವಿಣನಾಗಿದ್ದ. ವನವಾಸ ಮುಗಿದು ಅಜ್ಞಾತವಾತ ಸಮಯದಲ್ಲಿ, ತಮ್ಮ ನಿಜ ರೂಪ ತೋರಿಸದೆ  ವಿರಾಟ ರಾಜನ ಬಳಿ ಬೃಹನ್ನಳೆ ಯಾಗಿ ಇರುತ್ತಾನೆ. ಗಂಗಾ ನದಿಯಲ್ಲಿ ಸ್ನಾನಕ್ಕಿಳಿದ ದ್ರೋಣಾಚಾರ್ಯರ ಕಾಲನ್ನು ಹಿಡಿದುಕೊಂಡ ಮೊಸಳೆಯನ್ನು ಕೊಂದವ. ಗುರುಗಳಾದ ದ್ರೋಣಾಚಾರ್ಯರ ಆದೇಶದ ಮೇರೆಗೆ ಗುರುದಕ್ಷಿಣೆಯಾಗಿ  ದ್ರುಪದನನ್ನು ಬಂಧಿಸಿ ತಂದು  ಅರ್ಪಿಸಿದ. ಸ್ವತಃ ತಂದೆಯಾದ ಇಂದ್ರ ದೇವನೊಂಡದಿಗೆ ಯುದ್ಧಕ್ಕೆ ನಿಂತಿದ್ದನು. ಕೃಷ್ಣ ಪರಮಾತ್ಮನ ಅಚ್ಚುಮೆಚ್ಚು ಆಗಿದ್ದನು ಅರ್ಜುನ.

ಅರ್ಜುನ, ನರ, ಫಲ್ಗುಣ, ಪಾರ್ಥ, ಕಿರೀಟಿ, ಶ್ವೇತವಾಹನ, ಭೀಭತ್ಸು, ವಿಜಯ, ಕೃಷ್ಣ, ಸವ್ಯಸಾಚಿ, ಧನಂಜಯ-ಎಂಬ ಹನ್ನೊಂದು ಹೆಸರುಗಳು ಅರ್ಜುನನಿಗಿವೆ.

ದ್ರೌಪದಿ ಸ್ವಯಂವರಕ್ಕಾಗಿ ಹೋಗುತ್ತಿದ್ದಾಗ ಗಂಗಾ ತೀರದಲ್ಲಿ ರಾತ್ರಿಯ ವೇಳೆ ಅಡ್ಡಗಟ್ಟಿದ ಗಂಧರ್ವ ಅಂಗಾರಪರ್ಣನನ್ನು ಸೋಲಿಸಿ ಅವನಿಂದ ಚಾಕ್ಷುಷೀ ವಿದ್ಯೆಯನ್ನು ಗಳಿಸಿ ಅವನ ಸೂಚನೆಯಂತೆ ತಮ್ಮ ಪುರೋಹಿತನನ್ನಾಗಿ ಧೌಮ್ಯಾಚಾರ್ಯರನ್ನು ಒಪ್ಪಿಕೊಂಡ. ಬ್ರಾಹ್ಮಣವೇಷದಲ್ಲಿದ್ದು ಮತ್ಸ್ಯಯಂತ್ರವನ್ನು ಭೇದಿಸಿ ದ್ರೌಪದಿಯನ್ನು ವರಿಸಿದ. ದ್ರೌಪದಿಯು ಪಂಚಪಾಂಡವರಲ್ಲಿ ಅರ್ಜುನನ್ನು ಅತಿಯಾಗಿ ಪ್ರೀತಿಸುತ್ತಿದ್ದಳು. ಅದೇ ಕಾರಣಕ್ಕಾಗಿ ದ್ರೌಪದಿ ಎಲ್ಲರಿಗಿಂತ ಮೊದಲು ನರಕ ಪ್ರವೇಶಿಸುತ್ತಾಳೆ.

ಹಸ್ತಿನಾವತಿಯಲ್ಲಿದ್ದಾಗ ಅನಿವಾರ್ಯವಾಗಿ ಆಯುಧಶಾಲೆಗೆ ಹೋಗಬೇಕಾಗಿ ಬಂದು ಅಲ್ಲಿಗೆ ಹೋಗಿ ಧರ್ಮರಾಯ ದ್ರೌಪದಿಯರು ಏಕಾಂತದಲ್ಲಿದ್ದುದನ್ನು ಕಂಡು ಪಾಪಪರಿಹಾರಕ್ಕಾಗಿ ತೀರ್ಥಯಾತ್ರೆ ಕೈಗೊಂಡ. ನಾರದರಿಂದ ತೀರ್ಥ ಮಾಹಾತ್ಮೆಗಳನ್ನು ತಿಳಿದುಕೊಂಡ. ನಾರೀ ತೀರ್ಥದಲ್ಲಿ ಮೀಯುತ್ತಿದ್ದಾಗ ಹಿಡಿದುಕೊಂಡ ಒಂದು ಮೊಸಳೆಯನ್ನು ಹೊರೆಗೆಳೆದು ಶಾಪವಿಮೋಚನೆ ನೀಡಿದ. ಶಾಪವಿಮೋಚನೆ ಹೊಂದಿದ ಅಪ್ಸರೆ ನಿಜರೂಪ ತಳೆದಳು. ಹಾಗೆಯೇ ನೆರೆಹೊರೆಯ ತೀರ್ಥಗಳಲ್ಲಿ ಶಾಪಗ್ರಸ್ಥರಾಗಿದ್ದ ಇತರ ಅಪ್ಸರೆಯರನ್ನು ವಿಮೋಚನೆಗೊಳಿಸಿದ. ಕೃಷ್ಣನ ಸೂಚನೆಯಂತೆ ಯತಿವೇಷವನ್ನು ಧರಿಸಿ ಸುಭದ್ರೆಯನ್ನು ವರಿಸಿದ.

ಅಗ್ನಿಯಿಂದ ದಿವ್ಯಧನುಸ್ಸಾದ ಗಾಂಡೀವ, ಅಕ್ಷಯ ತೂಣೀರಗಳು, ಬಿಳಿಯ ಕುದುರೆಗಳನ್ನು ಹೂಡಿದ ದಿವ್ಯರಥ-ಇವುಗಳನ್ನು ಪಡೆದ. ಯುದ್ಧಕ್ಕೆ ಬಂದ ಇಂದ್ರನನ್ನು ಸೋಲಿಸಿ ಮಾಯಾಸುರನಿಗೆ ಅಭಯ ಪ್ರಧಾನ ಮಾಡಿದ. ಮಾಯಾಸುರನಿಂದ ದೇವದತ್ತ ಎಂಬ ಶಂಖವನ್ನು ಗಳಿಸಿದ.

ಅರ್ಜುನ  ಶಿವನಿಂದ ಪಾಶುಪತಾಸ್ತ್ರ ಪಡೆದನು.

ಪಾಶುಪತಾಸ್ತ್ರ
ಪಾಶುಪತಾಸ್ತ್ರ

ಕಾಮ್ಯಕವನದಿಂದ ಪಾಂಡವರು ದ್ವೈತವನಕ್ಕೆ   ಬಂದರು. ಅಲ್ಲಿಗೆ ವೇದವ್ಯಾಸರು ಆಗಮಿಸಿದರು.   ಧರ್ಮರಾಜನು ಬಹಳ ಗೌರವದಿಂದ ಅವರನ್ನು   ಬರಮಾಡಿಕೊಂಡನು.  ವೇದವ್ಯಾಸರು ಅವರಿಗೆ   ಆಶೀರ್ವಾದ ಮಾಡಿ, ಕೃಷ್ಣನೇ ನಿಮ್ಮ ಜೊತೆಗೆ   ಇರುವಾಗ ಯಾವುದೇ ಸಂಕಷ್ಟ ನಿಮ್ಮ ಬರುವುದಿಲ್ಲ   ಎಂದು ಹೇಳುತ್ತಾರೆ.

ವೇದವ್ಯಾಸರು  ಅರ್ಜುನನಿಗೆ ಪಾಶುಪತಾಸ್ತ್ರವನ್ನು ದೊರಕಿಕೊಡುವ ಬೀಜಾಕ್ಷರ ಮಂತ್ರವನ್ನು ಉಪದೇಶಿಸಿದರು. ಅರ್ಜುನ ಇಂದ್ರಕೀಲ ಪರ್ವತಕ್ಕೆ ಪರಮೇಶ್ವರನನ್ನು ಕುರಿತು ತಪಸ್ಸು ಮಾಡಲು ಹೊರಟ,  ಅರ್ಜುನನು ಕೈಲಾಸ ಪರ್ವತದಲ್ಲಿ ಬಹಳ ಶ್ರದ್ಧೆಯಿಂದ ಪರಶಿವನನ್ನು ಕುರಿತು ತಪಸ್ಸು ಮಾಡಿದನು. ಆದರೆ ಶಿವನಿಗೆ ಅರ್ಜುನನನ್ನು ಪರೀಕ್ಷಿಸುವ ಬಯಕೆಯಾಯಿತು. ಶಿವನು ಕಿರಾತಕ ರೂಪ, ಪಾರ್ವತಿಯು ಕಿರಾತಿನಿಯ ರೂಪವನ್ನು ಧರಿಸಿದರು. ಶಿವನ ಪರಿವಾರ ಕಿರಾತಕ ಪರಿವಾರವಾಗಿ ಬದಲಾಯಿತು. ಎಲ್ಲರೂ ಬಿಲ್ಲು, ಬಾಣಗಳ ಸಮೇತ ಅರ್ಜುನ ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿದರು. ದೈತ್ಯನೊಬ್ಬ ಮೂಕ ಎಂಬ ಹೆಸರಿನಲ್ಲಿ ಹಂದಿ ರೂಪದಲ್ಲಿ ವಾಸವಾಗಿದ್ದನು. ಪರಮೇಶ್ವರನು ಹಂದಿಗೆ ಒಂದು ಬಾಣವನ್ನು ಹೊಡೆದನು. ಹಂದಿ ಸಾಯಲಿಲ್ಲ. ಅರ್ಜುನ ತಪಸ್ಸು ಮಾಡುತ್ತಿರುವ ಸ್ಥಳಕ್ಕೆ ಬಂದು ಭಯಂಕರ ಶಬ್ದ ಮಾಡಿತು. ಅರ್ಜುನನ ತಪಸ್ಸಿಗೆ ಭಂಗ ಬಂದು, ಕಣ್ಣು ತೆರೆದನು. ದಾನವ ರೂಪದಲ್ಲಿರುವ ಹಂದಿಗೆ ತನ್ನ ಗಾಂಢೀವದಿಂದ ಹೊಡೆದನು. ಹಂದಿಯು ಪ್ರಾಣ ಬಿಟ್ಟಿತು.

ಕಿರಾತಕ ವೇಷದಲ್ಲಿದ್ದ ಶಿವನು ಓಡಿ ಬಂದು ತಾನು ಹಂದಿಯ ಮೇಲೆ ಬಾಣ ಪ್ರಯೋಗ ಮಾಡಿದ್ದರಿಂದ ಸತ್ತಿದೆ. ಅದು ತನಗೆ ಸೇರಬೇಕು ಎಂದು ವಾದಿಸಿದ. ಅರ್ಜುನನೂ ಹಂದಿ ತನಗೆ ಸೇರಬೇಕು ಎಂದು ವಾದಿಸಿದ. ಕೊನೆಗೆ  ಯಾರು ಯುದ್ಧ ಮಾಡಿ ಗೆಲ್ಲುತ್ತಾರೋ, ಅವರೇ ಹಂದಿಯನ್ನು ತೆಗೆದುಕೊಳ್ಳಬಹುದು ಎಂದು ಒಪ್ಪಂದ ಮಾಡಿಕೊಂಡರು. ಇಬ್ಬರ ನಡುವೆ ಘನ-ಘೋರ ಕದನ ನಡೆಯಿತು. ಅರ್ಜುನನ ಬತ್ತಳಿಕೆಯಲ್ಲಿದ್ದ ಬಾಣಗಳು ಮುಗಿದವು. ಮಲ್ಲಯುದ್ಧ ಪ್ರಾರಂಭವಾಯಿತು. ಆಗ ಶಿವನು ಪಾರ್ವತಿಯನ್ನು ನೋಡಿ ನಗುತ್ತಾ, “ನೋಡು ಇವನ ಸಾಹಸ. ತಪಸ್ಸು ಮಾಡುತ್ತಾ ಅನ್ನಾಹಾರಗಳನ್ನು ತೊರೆದಿರುವನು. ಆದರೆ ಎಷ್ಟೊಂದು ಶಕ್ತಿ” ಎಂದನು. ಆಗ ಅರ್ಜುನನಿಗೆ ಅನುಮಾನ ಬಂತು.  ಅರ್ಜುನನು “ಮಹಾನುಭಾವ, ಯಾರು ನೀನು? ನೀನು ಬ್ರಹ್ಮ, ವಿಷ್ಣು ಪರಮೇಶ್ವರನೇ ಇರಬೇಕು. ನೀನು ನನ್ನನ್ನು ಪರೀಕ್ಷಿಸಲು ಬಂದಿರಬಹುದು. ನಾನು ಶಿವನ ಪ್ರಾರ್ಥನೆ ಮಾಡಿ ಬರುವೆನು.” ಅರ್ಜುನನು ಶಿವಾರ್ಚನೆಗೆ ಕುಳಿತ. ಪುಷ್ಪಾರ್ಚನೆ ಮಾಡುತ್ತಿದ್ದ ಪುಷ್ಪಗಳು ಬಂದು ಕಿರಾತನ ಕಾಲ ಮೇಲೆ ಬೀಳುತ್ತಿದ್ದನ್ನು ಕಂಡು ಆಶ್ಚರ್ಯಗೊಂಡ. ತಾನು ಯುದ್ಧ ಮಾಡಿದ್ದು ಪರಶಿವನ ಜೊತೆ ಎಂದು ತಿಳಿದು ತನ್ನ ಅವಿವೇಕಕ್ಕೆ ನಾಚಿಕೊಂಡು ಕ್ಷಮೆ ಯಾಚಿಸಿದ. ಶಿವನು ತನ್ನ ಭಕ್ತನನ್ನು ಪ್ರೀತಿಯಿಂದ ಅಪ್ಪಿಕೊಂಡ. “ಅರ್ಜುನ, ನಾನು ನಿನ್ನ ಇಷ್ಟಾರ್ಥವನ್ನು ಪೂರೈಸಿದ್ದೇನೆ. ನಿನಗೆ ಪಾಶುಪತಾಸ್ತ್ರವನ್ನು ಕರುಣಿಸಿದ್ದೇನೆ.” ಪಾರ್ವತಿಯು ತನ್ನ ಬಳಿ ಇದ್ದ ಅಂಜನಾಸ್ತ್ರವನ್ನು ಕೂಡ ನೀಡಿದಳು.

ಜಯದ್ರಥನ ಸಂಹಾರ

ಜಯದ್ರಥನ ಸಂಹಾರ
ಜಯದ್ರಥನ ಸಂಹಾರ

ಮಹಾಭಾರತ ಮಹಾಕಾವ್ಯದಲ್ಲಿ, ಜಯದ್ರಥನು ಸಿಂಧೂ ರಾಜ್ಯದ ರಾಜನಾಗಿದ್ದನು. ಅವನನ್ನು ಸೈಂಧವನೆಂದೂ ಕರೆಯಲಾಗುತ್ತದೆ. ಅವನು ೧೦೦ ಕೌರವ ಸಹೋದರರ ಏಕೈಕ ಸಹೋದರಿಯಾದ ದುಶ್ಯಲೆಯನ್ನು ಮದುವೆಯಾಗಿದ್ದನು. ಅವನು ರಾಜ ವೃಧಕ್ಷತ್ರನ ಮಗನಾಗಿದ್ದನು. ಅವನ ಸಾವು ಅಷ್ಟು ಸುಲಭ ಇರಲಿಲ್ಲ ಅವನ ತಂದೆಯ ವರ ಇತ್ತು ಅವನ ತಲೆ ಬಿದ್ದ ಕಡೆ ಬೂದಿಯಾಗುತ್ತದೆ ಎಂದು. ಮಹಾಭಾರತದಲ್ಲಿ ಕೌರವರಿಗೂ ಪಾಂಡವರಿಗೂ ಯುದ್ಧ ನಡೆಯುವ ಸಂದರ್ಭದಲ್ಲಿ ಅರ್ಜುನನ ಮಗ ಅಭಿಮನ್ಯುವಿನ ಸಾವಿಗೆ ಕಾರಣವಾಗುತ್ತಾನೆ.ನಂತರ ಅರ್ಜುನನಿಂದ ಹತನಾಗುವನು. ಅವನ ತಲೆ ಅವನ ತಂದೆಯ ತೊಡೆಯ ಮೇಲೆ ಹೋಗಿ ಬೀಳುತ್ತದೆ. ತಂದೆಯ ಸಾವಿಗೆ ಅವನೇ ಕಾರಣವಾಗುತ್ತಾನೆ.

ಧನ್ಯವಾದಗಳು

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮಕ್ಕಳ ಆಹಾರ ಕ್ರಮಗಳು ಹೇಗಿರಬೇಕು?

ಸರ್ದಾರ್ ವಲ್ಲಭಭಾಯ್ ಪಟೇಲ್

ಭಾರತ ರತ್ನ ಉಕ್ಕಿನ ಮನುಷ್ಯ ಭಾರತ ಏಕೀಕರಣದ ಪಿತಾಮಹ ನಮ್ಮ ಸರ್ದಾರ್ ವಲ್ಲಭಭಾಯ್ ಪಟೇಲ್