in

ಗೃಹ ಸಾಲ ಎಂದರೆ ಏನು? ಇದಕ್ಕಾಗಿ ಏನು ಬೇಕು?

ಗೃಹ ಸಾಲ ಎಂದರೆ ಏನು?
ಗೃಹ ಸಾಲ ಎಂದರೆ ಏನು?

‘ಗೃಹ ಸಾಲ’ ಈ ದಿನಗಳಲ್ಲಿ ಎಲ್ಲರ ಮನದಲ್ಲಿ ಅನೇಕ ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಮನೆ ಕಟ್ಟಲು ಅಥವಾ ಕೊಳ್ಳಲು ಬಂಡವಾಳದ ಅಗತ್ಯವಿದೆ. ಇದು ಸ್ವಂತದ್ದಾಗಿರಬಹುದು ಇಲ್ಲವೇ ಸಾಲ ರೂಪದಲ್ಲಿರಬಹುದು. ಸಾಲವನ್ನು ಪಡೆಯುವ ಅನೇಕ ಮಾರ್ಗಗಳಿವೆ. ಇದರಲ್ಲಿ ಪ್ರಮುಖವಾದದ್ದು ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆ ಗಳಿಂದ ಪಡೆಯುವುದಾಗಿದೆ. ಮನೆ ಕಟ್ಟಲು ಅಥವಾ ಕೊಳ್ಳಲು ಅಗತ್ಯವಿರುವ ಒಟ್ಟು ಮೊತ್ತದಲ್ಲಿ ಒಂದು ಕಿರು ಭಾಗವನ್ನು ಸಾಲ ಪಡೆಯುವ ವ್ಯಕ್ತಿ ತನ್ನ ಭಾಗವಾಗಿ ತುಂಬಬೇಕಾಗುತ್ತದೆ.ಉಳಿದ ಭಾಗವನ್ನು ಸಾಲವಾಗಿ ಹಣಕಾಸು ಸಂಸ್ಥೆ ಕೊಡುತ್ತದೆ. ಈ ಹಣವನ್ನು ಸಾಲಗಾರನು ಕಂತುಗಳಲ್ಲಿ ಪರಸ್ಪರ ನಿರ್ಧಾರಿತ ದರದಲ್ಲಿ ಬಡ್ಡಿ ಸೇರಿಸಿ ಪಾವತಿ ಮಾಡ ಬೇಕಾಗುತ್ತದೆ. ಕಂತು ನಿರ್ಧರಿಸುವಾಗ ಸಾಲಗಾರನ ಮಾಸಿಕ ಆದಾಯದಲ್ಲಿರುವ ಹೆಚ್ಚಳ, ಸಾಲದ ಆವಧಿ ಇವುಗಳ ಮೇಲೆ ನಿರ್ದರಿತವಾಗುತ್ತದೆ.

ಮನೆ ಖರೀದಿ ಬಹುತೇಕರ ಜೀವನದ ಬಹುದೊಡ್ಡ ಕನಸು. ಕೆಲವರು ಸಾಲ ಪಡೆಯದೆ ಸ್ವಂತ ಮನೆ ಕಟ್ಟಬಹುದು ಅಥವಾ ಖರೀದಿಸಬಹುದು. ಆದರೆ, ಬಹುತೇಕರ ಪಾಲಿಗೆ ಮನೆ ಖರೀದಿ ಕನಸು ಈಡೇರಿಸಿಕೊಳ್ಳಲು ಗೃಹಸಾಲ ಪಡೆಯುವುದು ಅನಿವಾರ್ಯ. ಗೃಹಸಾಲಕ್ಕೆ ಅರ್ಜಿ ಸಲ್ಲಿಸುವ ಸಮಯದಿಂದ ಸಾಲ ಮರುಪಾವತಿಸುವವರೆಗೆ ಹತ್ತು ಹಲವು ಸಮಸ್ಯೆಗಳು, ಸವಾಲುಗಳು ಎದುರಾಗುತ್ತವೆ.

ಮನೆ ಖರೀದಿ ಈಗ ದುಬಾರಿ ವಿಚಾರವೇ ಸರಿ. ಸ್ವಂತ ಮನೆ ಖರೀದಿಯ ಕನಸು ಹೊತ್ತು, ದುಡ್ಡಿಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ‘ಗೃಹಸಾಲ’ ಎಂಬುದು ಮೋಡದ ನಡುವಿನಿಂದ ಬರುವ ಬೆಳ್ಳಿ ಕಿರಣದಂತೆ ಆಶಾಭಾವನೆ ಮೂಡಿಸುತ್ತದೆ. ನೀವು ಸಾಲ ಪಡೆದು ಮನೆ ಖರೀದಿಸಲು ಮುಂದಾಗಿದ್ದು, ಸಾಲ ಪಡೆಯುವ ಪ್ರಕ್ರಿಯೆ ಏನೆಂಬುದು ಗೊತ್ತಿಲ್ಲದಿದ್ದರೆ ಈ ಲೇಖನದಲ್ಲಿ ಹೇಳಿರುವ ಕೆಲವು ಅಂಶಗಳತ್ತ ಗಮನಹರಿಸುವುದು ಅಗತ್ಯ.

ಗೃಹ ಸಾಲ ಎಂದರೆ ಏನು? ಇದಕ್ಕಾಗಿ ಏನು ಬೇಕು?
ಮನೆ ಖರೀದಿ ಬಹುತೇಕರ ಜೀವನದ ಬಹುದೊಡ್ಡ ಕನಸು

ಗೃಹಸಾಲದ ಪ್ರಕ್ರಿಯೆ ಆರಂಭವಾಗುವುದು ಸಾಲ ಪಡೆಯುವವನ ‘ಅರ್ಹತೆ’ಯಿಂದ. ಅರ್ಹತೆ ನಿರ್ಧರಿಸುವಲ್ಲಿ ಮುಖ್ಯ ಪಾತ್ರವಹಿಸುವುದು ‘ಕ್ರೆಡಿಟ್‌ ಸ್ಕೋರ್‌’. ವ್ಯಕ್ತಿಯೊಬ್ಬ ಪಡೆಯಬಹುದಾದ ಗರಿಷ್ಠ ಸಾಲದ ಮೊತ್ತವನ್ನು ನಿರ್ಧಾರ ಮಾಡುವಲ್ಲಿ ಕ್ರೆಡಿಟ್‌ ಸ್ಕೋರ್‌ ಬಹುಮುಖ್ಯ ಪಾತ್ರ ವಹಿಸುತ್ತದೆ. 300ರಿಂದ 900 ಅಂಶಗಳವರೆಗೆ ಈ ಸ್ಕೋರ್‌ ಅನ್ನು ನಿರ್ಧರಿಸಲಾಗುತ್ತದೆ. ನೀವು ಎಲ್ಲಾ ಪಾವತಿಗಳನ್ನು ಸಕಾಲದಲ್ಲಿ ಮಾಡುತ್ತಿದ್ದರೆ ನಿಮ್ಮ ಕ್ರೆಡಿಟ್‌ ಸ್ಕೋರ್‌ ಉತ್ತಮವಾಗಿಯೇ ಇರುತ್ತದೆ. ಸ್ಕೋರ್‌ 750ರಷ್ಟಿದ್ದರೆ ಅದನ್ನು ಉತ್ತಮ ಸ್ಕೋರ್‌ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಗೃಹಸಾಲಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಮುನ್ನ, ನಿಮ್ಮ ಕ್ರೆಡಿಟ್‌ ಸ್ಕೋರ್‌ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತ.

ಸಾಲಗಳಲ್ಲಿ ಗೃಹಸಾಲ ಬಹಳ ಮುಖ್ಯವಾದುದು. ಸ್ವಂತ ಸೂರಿನ ಕನಸು ಹೊಂದಿರುವವರು ಲಕ್ಷ, ಕೋಟಿಗಟ್ಟಲೆ ಗೃಹ ಸಾಲ ಪಡೆಯುತ್ತಾರೆ. ಇವುಗಳ ಇಎಂಐ ಏನಿಲ್ಲವೆಂದರೂ ತಿಂಗಳಿಗೆ 15 ಸಾವಿರದಿಂದ 60 ಸಾವಿರ ರೂವರೆಗೂ ಇರಬಹುದು. ಗೃಹ ಸಾಲ ಪೂರ್ತಿ ತೀರಿಸುವ ಹೊತ್ತಿಗೆ ಎರಡು ಪಟ್ಟು ಹೆಚ್ಚು ಮೊತ್ತದ ಬಡ್ಡಿಯನ್ನೇ ಕಟ್ಟಿರುತ್ತೇವೆ.

ಸಾಲದ ‘ಮರುಪಾವತಿ ಸಾಮರ್ಥ್ಯ’ವನ್ನು ನಿರ್ಧರಿಸುವುದು ನಿಮ್ಮ ಆದಾಯ. ಕುಟುಂಬದಲ್ಲಿ ನಿಮ್ಮ ಅವಲಂಬಿತರು ಎಷ್ಟು ಮಂದಿ ಇದ್ದಾರೆ, ನಿಮ್ಮ ಮಾಸಿಕ ಖರ್ಚುವೆಚ್ಚ ಎಷ್ಟು ಬರಬಹುದು ಎಂಬುದನ್ನು ಲೆಕ್ಕಾಚಾರ ಹಾಕಿದ ಬಳಿಕ ನಿಮ್ಮ ಮರುಪಾವತಿಯ ಸಾಮರ್ಥ್ಯವನ್ನು ಬ್ಯಾಂಕ್‌ ನಿರ್ಧರಿಸುತ್ತದೆ. ಯಾವ ಸ್ಥಿತಿಯಲ್ಲೂ ನಿಮ್ಮ ಮಾಸಿಕ ಮರುಪಾವತಿ ಮೊತ್ತವು ಒಟ್ಟಾರೆ ಮಾಸಿಕ ವೇತನದ ಶೇ 50ನ್ನು ಮೀರಬಾರದು.

ಭಾರತದಲ್ಲಿ ಗೃಹ ಸಾಲಗಳ ವಿಧಗಳು :

*ಗೃಹ ವಸತಿ ಸಾಲ

ಈ ರೀತಿಯ ಗೃಹ ಸಾಲವು ಅತ್ಯಂತ ಸಾಮಾನ್ಯವಾದ ಗೃಹ ಸಾಲವಾಗಿದೆ. ಅನೇಕ ವಸತಿ ಹಣಕಾಸು ಕಂಪನಿಗಳು, ಸಾರ್ವಜನಿಕ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳು ವಸತಿ ಸಾಲಗಳನ್ನು ನೀಡುತ್ತವೆ, ಇದು ನಿಮ್ಮ ಆಯ್ಕೆಯ ಮನೆಯನ್ನು ಖರೀದಿಸಲು ಹಣವನ್ನು ಎರವಲು ಪಡೆಯಲು ಮತ್ತು ಮಾಸಿಕ ಕಂತುಗಳಲ್ಲಿ ಸಾಲವನ್ನು ಮರುಪಾವತಿಸಲು ಅನುವು ಮಾಡಿಕೊಡುತ್ತದೆ.

*ಮನೆ ನಿರ್ಮಾಣ ಸಾಲ

ನೀವು ಈಗಾಗಲೇ ಭೂಮಿಯನ್ನು ಹೊಂದಿದ್ದೀರಿ ಮತ್ತು ಅದರಲ್ಲಿ ಮನೆಯನ್ನು ನಿರ್ಮಿಸಲು ಬಯಸಿದರೆ, ಇದು ನಿಮಗೆ ಸರಿಯಾದ ಸಾಲದ ಪ್ರಕಾರವಾಗಿದೆ.

*ಮನೆ ವಿಸ್ತರಣೆ ಸಾಲ

ನಿಮ್ಮ ಬೆಳೆಯುತ್ತಿರುವ ಕುಟುಂಬಕ್ಕೆ ಅವಕಾಶ ಕಲ್ಪಿಸಲು ನೀವು ಇನ್ನೊಂದು ಕೋಣೆ ಅಥವಾ ಇನ್ನೊಂದು ಮಹಡಿಯನ್ನು ಸೇರಿಸಲು ಬಯಸುವ ಮನೆಯನ್ನು ನೀವು ಈಗಾಗಲೇ ಹೊಂದಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ಗೃಹ ವಿಸ್ತರಣೆ ಸಾಲವು ಇದಕ್ಕೆ ನಿಮಗೆ ಸಹಾಯ ಮಾಡುತ್ತದೆ.

*ಮನೆಯ ಸುಧಾರಣೆ ಸಾಲ

ಮನೆಯ ಒಳಭಾಗ ಅಥವಾ ಹೊರಭಾಗಕ್ಕೆ ಬಣ್ಣ ಬಳಿಯುವುದು, ವಿದ್ಯುತ್ ವ್ಯವಸ್ಥೆಯನ್ನು ನವೀಕರಿಸುವುದು, ಸೀಲಿಂಗ್ ಅನ್ನು ಜಲನಿರೋಧಕ ಮಾಡುವುದು ಇತ್ಯಾದಿಗಳಂತಹ ಮನೆಯ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಸರಿಪಡಿಸಲು ಅಥವಾ ನವೀಕರಿಸಲು ಅಗತ್ಯವಿದ್ದರೆ, ಮನೆ ಸುಧಾರಣೆ ಸಾಲವು ಸಹಾಯ ಮಾಡುತ್ತದೆ.

*ಹೋಮ್ ಲೋನ್ ಬ್ಯಾಲೆನ್ಸ್ ವರ್ಗಾವಣೆ

ಪ್ರಸ್ತುತ ಬಡ್ಡಿ ದರವು ಅಗಾಧವಾಗಿದ್ದರೆ ಅಥವಾ ನಿಮ್ಮ ಪ್ರಸ್ತುತ ಸಾಲದಾತರ ಸೇವೆಯಿಂದ ನೀವು ಅತೃಪ್ತರಾಗಿದ್ದರೆ ಕಡಿಮೆ ಬಡ್ಡಿ ದರ ಮತ್ತು ಉತ್ತಮ ಸೇವೆಯನ್ನು ನೀಡುವ ಬೇರೆ ಸಾಲದಾತರಿಗೆ ನಿಮ್ಮ ಹೋಮ್ ಲೋನಿನ ಬಾಕಿ ಉಳಿದಿರುವ ಬ್ಯಾಲೆನ್ಸ್ ಅನ್ನು ನೀವು ವರ್ಗಾಯಿಸಬಹುದು. ವರ್ಗಾವಣೆಯ ನಂತರ, ನಿಮ್ಮ ಅಸ್ತಿತ್ವದಲ್ಲಿರುವ ಸಾಲದ ಮೇಲಿನ ಟಾಪ್-ಅಪ್ ಲೋನಿನ ಸಾಧ್ಯತೆಯನ್ನು ನೀವು ಪರಿಶೀಲಿಸಬಹುದು.

*ಸಂಯೋಜಿತ ಗೃಹ ಸಾಲ

ಈ ರೀತಿಯ ಗೃಹ ಸಾಲವು ನೀವು ಮನೆ ನಿರ್ಮಿಸಲು ಬಯಸುವ ಭೂಮಿಗೆ ಮತ್ತು ನಿರ್ಮಾಣಕ್ಕಾಗಿ ಒಂದೇ ಸಾಲದೊಳಗೆ ಹಣಕಾಸು ಒದಗಿಸುತ್ತದೆ.

ಗೃಹ ಸಾಲ ಎಂದರೆ ಏನು? ಇದಕ್ಕಾಗಿ ಏನು ಬೇಕು?
ಓವರ್​ಡ್ರಾಫ್ಟ್ ಸೌಲಭ್ಯ ಪಡೆಯಬಹುದು

ಸಾಲ ಪಡೆಯುವ ಅರ್ಹತೆ ನಿರ್ಧರಿಸುವುದು ಹೇಗೆಂದು ತಿಳಿದ ಮೇಲೆ, ಮುಂದಿನ ಹೆಜ್ಜೆ ಸಾಲ ಪಡೆಯಲು ಸರಿಯಾದ ಹಣಕಾಸು ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವುದು. ಇದಕ್ಕೆ ಒಳ್ಳೆಯ ವಿಧಾನವೆಂದರೆ, ಬೇರೆ ಬೇರೆ ಸಂಸ್ಥೆಗಳಿಂದ ಕೊಟೇಶನ್‌ಗಳನ್ನು ಪಡೆಯುವುದು. ಹೀಗೆ ಸಾಲದ ಕುರಿತಾಗಿ ವಿವಿಧ ಸಂಸ್ಥೆಗಳ ಜತೆ ಮಾತುಕತೆ ನಡೆಸುವಾಗ ಬಡ್ಡಿ ದರ, ಪರಿಷ್ಕರಣಾ ಶುಲ್ಕ, ಅವಧಿ ಪೂರ್ವ ಮರುಪಾವತಿ ಶುಲ್ಕ, ಮಾಸಿಕ ಕಂತು ಹಾಗೂ ಮರುಪಾವತಿ ಅವಧಿಯ ಬಗ್ಗೆ ಪ್ರಶ್ನೆಗಳನ್ನು ಕೇಳಲು ಮರೆಯಬೇಡಿ.

ಸಾಲ ನೀಡುವ ಸಂಸ್ಥೆಗೆ ಸಲ್ಲಿಸಬೇಕಾದ ದಾಖಲೆಗಳಲ್ಲಿ ಫಾರಂ–16 ಅಥವಾ ಆದಾಯತೆರಿಗೆ ಪಾವತಿಸಿರುವುದಕ್ಕೆ ಸಂಬಂಧಿಸಿದ ಇತ್ತೀಚಿನ ಎರಡು ವರ್ಷಗಳ ದಾಖಲೆಯ ಪ್ರತಿ (ಆದಾಯ ತೆರಿಗೆ ಇಲಾಖೆಯಿಂದ ಪ್ರಮಾಣೀಕರಿಸಿದ), ವೇತನ ಪ್ರಮಾಣ ಪತ್ರದ ಮೂಲ ಪ್ರತಿ ಅಥವಾ ಬ್ಯಾಂಕ್‌ ಸ್ಟೇಟ್‌ಮೆಂಟ್‌ ಅಥವಾ ಕೊನೆಯ ಆರು ತಿಂಗಳ ಅವಧಿಯ ವ್ಯವಹಾರಗಳ ದಾಖಲೆಗಳನ್ನು ಹೊಂದಿರುವ ಬ್ಯಾಂಕ್‌ ಪಾಸ್‌ಬುಕ್‌ನ ಪ್ರತಿ ಹಾಗೂ ವೈಯಕ್ತಿಕ ಸೊತ್ತು ಹಾಗೂ ಬಾಧ್ಯತೆಗಳನ್ನು ಕುರಿತ ಪ್ರಮಾಣ ಪತ್ರ.

ಗುರುತು ಪತ್ರಗಳ ರೂಪದಲ್ಲಿ ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌, ವಾಹನ ಚಾಲನಾ ಪರವಾನಗಿ ಮತ್ತು ಪ್ಯಾನ್‌ ಕಾರ್ಡಗಳನ್ನು ನೀಡಬೇಕು. ಈ ಹಂತದಲ್ಲಿಯೇ ಪರಿಷ್ಕರಣಾ ಶುಲ್ಕವನ್ನು ನೀಡುವಂತೆ ಬ್ಯಾಂಕ್‌ ನಿಮಗೆ ಸೂಚಿಸಬಹುದು. ಅಗತ್ಯ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಸ್ವೀಕರಿಸಿದ ಬಳಿಕ, ನಿಮ್ಮ ಮರುಪಾವತಿಯ ಸಾಮರ್ಥ್ಯ ಏನೆಂಬುದನ್ನು ಬ್ಯಾಂಕ್‌ ಮೌಲ್ಯಮಾಪನ ಮಾಡುತ್ತದೆ. ಬ್ಯಾಂಕ್‌ಗೆ ಸಂಪೂರ್ಣ ಭರವಸೆ ಮೂಡಿದ ಬಳಿಕ ಸಾಲವನ್ನು ಮಂಜೂರು ಮಾಡಿ, ನಿಮಗೆ ಮಂಜೂರಾತಿ ಪತ್ರವನ್ನು ನೀಡುತ್ತದೆ. ನೀವು ಬ್ಯಾಂಕ್‌ನ ಪ್ರಸ್ತಾಪವನ್ನು ಒಪ್ಪುವುದಾದರೆ ಆ ಪತ್ರದ ಪ್ರತಿಯ ಮೇಲೆ ಸಹಿಮಾಡಿ ಬ್ಯಾಂಕ್‌ಗೆ ಸಲ್ಲಿಸಬೇಕಾಗುತ್ತದೆ.

ಆರ್​ಬಿಐ ಆಗಾಗ ರೆಪೋ ದರಗಳನ್ನು ಏರಿಳಿಕೆ ಮಾಡುತ್ತಿರುತ್ತದೆ. ಬಡ್ಡಿ ದರ ಇಳಿದಾಗ ನೀವು ಸಾಲ ತೆಗೆದುಕೊಂಡಿರುವ ಬ್ಯಾಂಕ್ ಕೂಡ ಬಡ್ಡಿ ದರ ಇಳಿಸಿದೆಯಾ ಎಂದು ಖಾತ್ರಿಪಡಿಸಿಕೊಳ್ಳಿ. ಅಗತ್ಯಬಿದ್ದರೆ ಬ್ಯಾಂಕ್ ಮ್ಯಾನೇಜರನ್ನು ಸಂಪರ್ಕಿಸಿ ವಿಚಾರಿಸಿ.

ಇಎಂಐ ಮೊತ್ತ ಹೆಚ್ಚಿಸಿ : ನಿಮ್ಮಲ್ಲಿ ಆದಾಯ ಹೆಚ್ಚಾಗಿ ಹೆಚ್ಚು ಹಣವನ್ನು ಸಾಲದ ಕಂತುಗಳಿಗೆ ಕಟ್ಟಲು ಸಮರ್ಥರಿದ್ದರೆ ಆಗ ಇಎಂಐ ಮೊತ್ತವನ್ನು ಹೆಚ್ಚಿಸಿಕೊಳ್ಳಿ. ಇದರಿಂದ ಬೇಗ ಕಂತುಗಳು ಮುಗಿಯುತ್ತವೆ. ಹೆಚ್ಚು ಬಡ್ಡಿ ಕಟ್ಟುವುದೂ ತಪ್ಪುತ್ತದೆ.

ಗೃಹ ಸಾಲ ಎಂದರೆ ಏನು? ಇದಕ್ಕಾಗಿ ಏನು ಬೇಕು?
ಕ್ರೆಡಿಟ್‌ ಸ್ಕೋರ್‌ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತ

ಇಎಂಇ ಕಡಿಮೆ ಮಾಡಿ : ಒಂದು ವೇಳೆ ನಿಮಗೆ ಇತರ ಅಗತ್ಯ ಕಮಿಟ್ಮೆಂಟ್​ಗಳು ಬಂದುಬಿಟ್ಟು ಸಾಲದ ಕಂತು ಕಟ್ಟುವುದು ಕಷ್ಟ ಎನಿಸಿದರೆ ಬ್ಯಾಂಕ್ ಮ್ಯಾನೇಜರ್ ಜೊತೆ ಮಾತನಾಡಿ ಇಎಂಐ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾ ಎಂದು ಕೇಳಿ. ಕಂತುಗಳು ಹೆಚ್ಚಾದರೆ ಇಎಂಐ ಮೊತ್ತ ತುಸು ಕಡಿಮೆ ಆಗುತ್ತದೆ.

ಹೆಚ್ಚುವರಿ ಹಣ ಇದ್ದರೆ ಸಾಲಕ್ಕೆ ಕಟ್ಟಿ : ನಿಮಗೆ ದಿಢೀರನೇ ಒಂದಷ್ಟು ಹಣ ಲಭ್ಯವಾದರೆ ಅದನ್ನು ಸಾಲಕ್ಕೆ ಕಟ್ಟುವುದು ಹೆಚ್ಚು ಸೂಕ್ತ. ಇದರಿಂದ ಸಾಲದ ಹೊರೆ ತಗ್ಗುತ್ತದೆ. ನೀವು ಸಾಲ ಪಡೆಯುವ ಮುನ್ನ ಬ್ಯಾಂಕ್ ಜೊತೆ ಈ ವಿಚಾರ ಮಾಡಿ ಇಂಥ ಸಾಧ್ಯತೆಯನ್ನು ವಿಚಾರಿಸಿದ್ದರೆ ಉತ್ತಮ. ಈಗಲೂ ಬ್ಯಾಂಕ್ ಸಂಪರ್ಕಿಸಿ ವಿಚಾರಿಸಿ.

ಕ್ರೆಡಿಟ್ ಸ್ಕೋರ್ ಗಮನದಲ್ಲಿರಲಿ : ನಿಮ್ಮೆಲ್ಲಾ ಸಾಲದ ಕಂತುಗಳನ್ನು ನಿಗದಿತ ಅವಧಿಯಲ್ಲಿ ಕಟ್ಟಿದರೆ ಮತ್ತು ಕ್ರೆಡಿಟ್ ಕಾರ್ಡ್ ಬಿಲ್ಲುಗಳನ್ನೂ ನಿಯಮಿತವಾಗಿ ಕಟ್ಟುತ್ತಾ ಬಂದಿದ್ದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಸಹಜವಾಗಿ ಉತ್ತಮವಾಗಿರುತ್ತದೆ. ಬ್ಯಾಂಕ್​ನಿಂದ ನಿಮಗೆ ಅತ್ಯುತ್ತಮ ಬಡ್ಡಿ ದರದಲ್ಲಿ ಸಾಲದ ಆಫರ್ ಸಿಗುತ್ತದೆ. ನೀವು ಈಗಾಗಲೇ ಗೃಹಸಾಲ ಪಡೆದಿದ್ದು, ಕ್ರೆಡಿಟ್ ಸ್ಕೋರ್ ಕೂಡ ಉತ್ತಮವಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಬಲ್ಲ ಇತರ ಬ್ಯಾಂಕ್​ಗೆ ನಿಮ್ಮ ಈಗಿನ ಸಾಲವನ್ನು ಟ್ರಾನ್ಸ್​ಫರ್ ಮಾಡಬಹುದು. ಈ ರೀತಿಯ ಲೋನ್ ಟ್ರಾನ್ಸ್​ಫರ್ ಈಗ ಸಾಮಾನ್ಯ.

ಓವರ್​ಡ್ರಾಫ್ಟ್ ಸೌಲಭ್ಯ : ನಿಮ್ಮಲ್ಲಿ ಹೆಚ್ಚುವರಿ ಆದಾಯದ ನಿರೀಕ್ಷೆ ಇದ್ದರೆ ಗೃಹ ಸಾಲ ಪಡೆಯುವಾಗ ಓವರ್​ಡ್ರಾಫ್ಟ್ ಸೌಲಭ್ಯ ಪಡೆಯಬಹುದು. ಈ ಸೌಲಭ್ಯದಲ್ಲಿ ಸಾಲಕ್ಕೆ ತುಸು ಹೆಚ್ಚಿನ ಬಡ್ಡಿ ದರ ಇರುತ್ತದೆಯಾದರೂ ನಿಮ್ಮಲ್ಲಿನ ಹೆಚ್ಚುವರಿ ಹಣವನ್ನು ಓವರ್​ಡ್ರಾಫ್ಟ್ ಖಾತೆಯಲ್ಲಿ ಇರಿಸಬಹುದು. ಇದರಿಂದ ಬಡ್ಡಿ ಉಳಿಸಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

ವಿಶ್ವ ಮಾತೃಭಾಷಾ ದಿನಾಚರಣೆ

ಫೆಬ್ರುವರಿ 21ರಂದು, ವಿಶ್ವ ಮಾತೃಭಾಷಾ ದಿನಾಚರಣೆ

ಭಾಷೆಗಳ ಇತಿಹಾಸ

ನಾವು ಬಳಸುವ ಬೇರೆ ಬೇರೆ ಭಾಷೆಗಳ ಇತಿಹಾಸ