ಪ್ರತಿಯೊಬ್ಬರ ಪುರುಷನ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿ ಪ್ರಮುಖ ಪಾತ್ರ ವಹಿಸುತ್ತಿರುವ ಹೆಣ್ಣನ್ನು ಗೌರವಿಸುವುದಕ್ಕಾಗಿ ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಅದುವೇ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ.
ಭಾರತದಲ್ಲಿ ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಇದಕ್ಕೆಲ್ಲ ಕಾರಣ ಇಂದಿರಾ ಗಾಂಧಿ. ಇಂದಿರಾ ಗಾಂಧಿಯವರು 1966 ರಲ್ಲಿ ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಜನವರಿ 24 ಭಾರತದ ಇತಿಹಾಸದಲ್ಲಿ ಮತ್ತು ಮಹಿಳಾ ಸಬಲೀಕರಣದಲ್ಲಿ ಮಹತ್ವದ ದಿನಾಂಕವಾಗಿದೆ.
ಹೆಣ್ಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಅವರ ಶಿಕ್ಷಣ, ಆರೋಗ್ಯ, ಪೋಷಕಾಂಶಕ್ಕೆ ಪ್ರಾ,ಮುಖ್ಯತೆ ನೀಡುವುದು ಈ ಆಚರಣೆಯ ಹಿಂದಿರುವ ಉದ್ದೇಶವಾಗಿದೆ.

ಹೆಣ್ಣು ಮಕ್ಕಳ ದಿನದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಹೆಣ್ಣು ಮಕ್ಕಳ ಹಕ್ಕುಗಳು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಕಳೆದ 2008ರಲ್ಲಿ ಮೊದಲ ಬಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವಾಲಯವು ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲು ನಿರ್ಧರಿಸಿತು.
ಭಾರತೀಯ ಸಂಸ್ಕತಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನವಿದೆ. “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ” ಅಂದಿದ್ದಾರೆ ಹಿರಿಯರು. “ಬೇಟಿ ಬಚಾವೋ ಬೇಟಿ ಪಡಾವೋ” ಅಂತ ಕರೆ ಕೊಟ್ಟವರು ಪ್ರಧಾನಿ ನರೇಂದ್ರ ಮೋದಿ. ಇಷ್ಟೆಲ್ಲಾ ಇದ್ದರೂ, ನಮ್ಮ ಸಮಾಜ ಆಧುನಿಕತೆಗೆ ಅದೆಷ್ಟೇ ತೆರೆದುಕೊಂಡಿದ್ದರೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಂತಿಲ್ಲ. ಹೆಣ್ಣು ಮಗುವನ್ನು ಭಾಗ್ಯಲಕ್ಷ್ಮೀ ಎಂದು ಕರೆಯುವ ಅದೇ ಜನ, ಮನೆಯಲ್ಲಿ ಹೆಣ್ಣು ಹುಟ್ಟಿದರೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾರೆ. ಹೆಣ್ಣು ಭ್ರೂಣ ಹತ್ಯೆ ತಡೆಯಲು ಕಠಿಣ ಕಾನೂನಿದ್ದರೂ ಅದನ್ನು ಸಂಪೂರ್ಣವಾಗಿ ತೊಡೆದು ಹಾಕಲು ಆಗೇ ಇಲ್ಲ. ಹೀಗಾಗಿ ಮನೆಯ ದೀಪ ಅಂತಾನೇ ಕರೆಸಿಕೊಳ್ಳುವ ಹೆಣ್ಣು ಮಕ್ಕಳ ರಕ್ಷಣೆ, ಸುರಕ್ಷತೆಗಾಗಿ ಹಾಗೂ ಲಿಂಗ ತಾರತಮ್ಯ ಹೋಗಲಾಡಿಸಲು ಪ್ರತಿ ವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ.
2019ರಿಂದ ಪ್ರತೀವರ್ಷ ಈ ದಿನವನ್ನು ಒಂದೇ ಧ್ಯೇಯ ಇಟ್ಟುಕೊಂಡು ಆಚರಿಸಲಾಗುತ್ತಿದೆ. ‘ನಾಳೆಯ ಉಜ್ವಲ ಭವಿಷ್ಯಕ್ಕಾಗಿ ಹೆಣ್ಣು ಮಕ್ಕಳನ್ನು ಸಬಲೀಕರಣ ಮಾಡುವುದು’ ಎಂಬುವುದೇ ಆ ಧ್ಯೇಯವಾಗಿದೆ.
2022ರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಗುರಿ ಇನ್ನೂ ಘೋಷಣೆಯಾಗಿಲ್ಲ. ಹಾಗಿದ್ದರೂ 2021ರ ಹೆಣ್ಣು ಮಕ್ಕಳ ದಿನಾಚರಣೆಯ ಉದ್ದೇಶವಾಗಿರುವ ‘ಡಿಜಿಟಲ್ ಪೀಳಿಗೆಯೇ, ನಮ್ಮ ಪೀಳಿಗೆ ಆಗಿತ್ತು. ಅದೇ ರೀತಿ 2020ರಲ್ಲಿ ಹೆಣ್ಣು ಮಕ್ಕಳ ದಿನದ ಘೋಷವಾಕ್ಯ ‘ನನ್ನ ಧ್ವನಿಯೇ ನಮ್ಮ ಸಾಮಾನ್ಯ ಭವಿಷ್ಯ ಎಂಬುದಾಗಿತ್ತು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಮುಖ ಉದ್ದೇಶಗಳು
* ಹೆಣ್ಣು ಮಕ್ಕಳು ಎದುರಿಸುತ್ತಿರುವ ಶೋಷಣೆ ಬಗ್ಗೆ ಜಾಗೃತಿ ಮೂಡಿಸುವುದು.
* ಅವರ ಹಕ್ಕುಗಳ ಬಗ್ಗೆ ಜಗೃತಿ ಮೂಡಿಸುವುದು.
* ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಇವುಗಳ ಪ್ರಾಮುಖ್ಯತೆ ಬಗ್ಗೆ ತಿಳಿಸುವುದು.
* ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವುದು.
* ಕುಟುಂಬ, ಕೆಲಸದ ಸ್ಥಳ, ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ನಿರ್ದೇಶನಗಳು:
*ಹೆಣ್ಣು ಮಕ್ಕಳ ಜನ್ಮ ದಿನಾಚರಣೆಯನ್ನು ಕುಟುಂಬ ಮತ್ತು ಸಮುದಾಯದಲ್ಲಿ ಆಚರಿಸುವುದು.
*ಹೆಣ್ಣು ಎಂದರೆ ಬೇರೆ ಮನೆಯ ವಸ್ತು ಎಂಬ ಭಾವನೆಯಿಂದ ಹೊರಬಂದು ಅವರ ಬಗ್ಗೆ ಹೆಮ್ಮೆಯ ಭಾವವಿರಲಿ.
* ಹುಡುಗರು ಮತ್ತು ಹುಡುಗಿಯರ ನಡುವೆ ಸಮಾನತೆ ಉತ್ತೇಜಿಸುವ ಮಾರ್ಗಗಳನ್ನು ಕಂಡುಕೊಳ್ಳಿ.
*ಶಾಲೆಗಳಲ್ಲಿ ಹೆಣ್ಣು ಮಗುವಿಗೆ ಸುರಕ್ಷಿತ ಪ್ರವೇಶ ನೀಡುವುದು.
* ಸಮಾಜದ ಸಮಾನ ಸದಸ್ಯರಾಗಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಗೌರವಿಸಲು ಗಂಡು ಮಕ್ಕಳಿಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸಿ.
*ಲಿಂಗ ಪತ್ತೆ ಪರೀಕ್ಷೆಯ ಯಾವುದೇ ಘಟನೆಗಳು ಕಂಡು ಬಂದರೆ ತಿಳಿಸಿರಿ.
*ನೆರೆಹೊರೆಯ ಮಹಿಳೆಯರು ಮತ್ತು ಹುಡುಗಿಯರ ಸುರಕ್ಷಿತ ಮತ್ತು ಹಿಂಸೆ-ಮುಕ್ತಗೊಳಿಸಲು ಶ್ರಮಿಸಿ.
ಧನ್ಯವಾದಗಳು.
GIPHY App Key not set. Please check settings