ನಮ್ಮ ದೇಶದ ಬಹುಪಾಲು ಜನರಿಗೆ ರಕ್ತಹೀನತೆ ಕಂಡುಬರುತ್ತದೆ. ಇವರ ರಕ್ತ ಹೀನತೆಗೆ ಮುಖ್ಯ ಕಾರಣ ಅವರ ಕರುಳಿನಲ್ಲಿ ನೆಲೆಸಿರುವ ಪುಟ್ಟ ಹುಳುವಾಗಿರುತ್ತದೆ.
ಮಾನವನಿಗೆ ಕೊಕ್ಕೆ ಹುಳುಗಳ ಹಿಂಸೆ ಹೊಸತೇನಲ್ಲ. ಕ್ರಿ.ಪೂ. ೧೬೦೦ ರಲ್ಲಿಯೇ ಇವುಗಳ ಉಪಟಳವಿತ್ತೆಂದು ಇತಿಹಾಸ ಹೇಳುತ್ತದೆ. ಮುಂದುವರಿದ ದೇಶಗಳಲ್ಲಿ ಈಗ ಕೊಕ್ಕೆ ಹುಳುವಿನ ಭಾದ್ಯತೆಯನ್ನು ಹಿಡಿತದಲ್ಲಿರಿಸಲಾಗಿದೆ. ಆದಾಗ್ಯೂ ಇಂದಿಗೂ ಜಗತ್ತಿನ ೯೦೦ ಮಿಲಿಯನ್ ಜನರು ಹುಳುವಿನ ಹಾವಳಿಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಪ್ರತಿವರ್ಷ ಕನಿಷ್ಟ ಅರ್ಧ ಲಕ್ಷದಷ್ಟು ಜನರಾದರೂ ಹುಳುವಿನಿಂದ ಉಂಟಾದ ರಕ್ತಹೀನತೆಯಿಂದ ಅಸುನೀಗುತ್ತಿದ್ದಾರೆ.
ಕೊಕ್ಕೆ ಹುಳುವಿನ ಹುಟ್ಟು
ಇಟಲಿ ದೇಶದಲ್ಲಿ ಏನ್ಹಿಲೋ ಡಬಿನ್ ಎಂಬುವವರು ೧೮೩೮ ರಲ್ಲಿ ಈ ಹುಳುವನ್ನು ಮೊದಲಬಾರಿಗೆ ಕಂಡರಾದರೂ ಈಜಿಪ್ಟ್ ನ ಲಾಸ್ ೧೮೯೮ ರಲ್ಲಿ ಹುಳುಗಳ ಬಗ್ಗೆ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ್ದಾರೆ. ಈ ಹುಳುವು ಅಂಕುಡೊಂಕಾಗಿದ್ದು ಆಕಾರದಲ್ಲಿ ಕೊಂಡಿಯನ್ನು ಹೋಲುತ್ತದೆ. ಆದುದರಿಂದ ಈ ಹುಳುವಿಗೆ ಅನ್ ಕಿಲೋಸ್ಟೋಮ ಎಂದು ನಾಮಕರಣವಾಗಿದೆ. ಸ್ಟಿಲ್ಸ ಎಂಬುವವರು ೧೯೦೨ ರಲ್ಲಿ ಕೊಕ್ಕೆ ಹುಳುವಿನ ಮತ್ತೊಂದು ಉಪಜಾತಿಯನ್ನು ಅಮೇರಿಕದಲ್ಲಿ ಪತ್ತೆ ಹಚ್ಚಿ ಇವಕ್ಕೆ ಅಮೇರಿಕದ ಕೊಲೆಪಾತಕ ಎಂದು ಕರೆದಿದ್ದಾರೆ, ಬಹಶಃ ಈ ಹುಳುಗಳ ಉಗಮಸ್ಥಾನ ಆಫ್ರಿಕಾವಾಗಿದ್ದು, ಅಲ್ಲಿನ ಜೀತದಾಳುಗಳೊಂದಿಗೆ ಇವು ಅಮೇರಿಕಾವನ್ನು ಪ್ರವೇಶಿಸಿವೆ ಎಂದು ಭಾವಿಸಲಾಗಿದೆ. ಈಗ ಕೊಕ್ಕೆ ಹುಳುಗಳು ವಿಶ್ವವ್ಯಾಪಿಯಾಗಿಬಿಟ್ಟಿವೆ.
ಚಿಲುಮೆ ಹುಳುಗಳಿಗೆ ಹಾಲು ಬಿಳುಪಿನ ಬಣ್ಣವಿದೆ. ಇವು ಕೇವಲ ಎಂಟು ಹತ್ತು ಮಿ.ಮೀ. ಉದ್ದ ಮತ್ತು ಅರ್ದ ಮಿ.ಮೀ ದಪ್ಪ ಇರುತ್ತದೆ. ಇಡಿ ದೇಹ ಅಂಕು ಡೊಂಕಾಗಿದೆ. ಬಾಯಿಯ ಭಾಗ ಕೊಕ್ಕೆಯಂತೆ ಬಾಗಿದೆ. ಇವುಗಳ ಬಾಯಿಯಲ್ಲಿ ರಕ್ತ ಹೀರಲು ಅನುಕೂಲವಾಗಿರುವ ಗಟ್ಟಿಯಾದ ಆರು ಹಲ್ಲುಗಳಿವೆ. ಇವುಗಳಲ್ಲೂ ಲಿಂಗಬೇದವಿದ್ದು ಗಂಡಿಗಿಂತ ಹೆಣ್ಣು ಸ್ವಲ್ಪ ದೊಡ್ಡದಾಗಿದೆ ಇವುಗಳ ಜೊಲ್ಲಿನಲ್ಲಿರುವ ರಸಾಯನಿಕಕ್ಕೆ ರಕ್ತವನ್ನು ಹೆಪ್ಪುಗಟ್ಟದಂತೆ ಇರಿಸುವ ಗುಣವಿದೆ. ಹೀಗಾಗಿ ಬಾಯಿಯ ಹಲ್ಲುಗಳಿಂದ ಆಶ್ರಯದಾತನ ಕರುಳನ್ನು ಚುಚ್ಚಿ ರಕ್ತ ಹೀರುತ್ತಾ ಬದುಕುತ್ತವೆ.
ಇತರೆ ಜಂತುಗಳಂತೆ ಕೊಕ್ಕೆ ಹುಳುಗಳು ಆಹಾರದ ಮೂಲಕ ದೇಹ ಸೇರದೆ ಲಾರ್ವಾಗಳು ತಮ್ಮ ಸೂಜಿಯಂತಹ ದೇಹವನ್ನು ಚರ್ಮದಲ್ಲಿ ತೂರಿಸಿಕೊಂಡು ದೇಹದೊಳಗೆ ಪ್ರವೇಶಿಸುತ್ತದೆ. ಬರಿಗಾಲಿನಲ್ಲಿ ಓಡಾಡುವವರನ್ನು ಕಂಡರೆ ಅವುಗಳಿಗೆ ಸಂಭ್ರಮ. ಮಾನವ ದೇಹದ ಉಷ್ಣದಿಂದ ಆಕರ್ಷಿತವಾದ ಲಾರ್ವಾಗಳು ಚರ್ಮ ತೂರಿಕೊಂಡು ಒಳ ಪ್ರವೇಶಿಸಿ ರಕ್ತವನ್ನು ಸೇರಿಕೊಳ್ಳುತ್ತದೆ. ಹೊಸ ಆಶ್ರಯ ಸ್ಥಾನದಲ್ಲಿ ಚೂಟಿಯಾಗಿ ಚಲಿಸುತ್ತ ಯಕೃತ್, ಹೃದಯ, ಶ್ವಾಸಕೋಶ, ಶ್ವಾಸನಾಳಗಳಲ್ಲೆಲ್ಲಾ ಸಂಚರಿಸಿ ಕೊನೆಗೆ ಅನ್ನ ನಾಳದ ಮೂಲಕ ಕರುಳನ್ನು ಸೇರಿ ಚಿಕ್ಕ ಕರುಳಿನ ಆದಿ ಭಾಗದಲ್ಲಿ ನೆಲಸುತ್ತವೆ. ಕರುಳಿನ ಗೋಡೆಗೆ ಬಾಯಿಹಚ್ಚಿ ರಕ್ತವನ್ನು ಹೀರುತ್ತಾ ಬೆಳೆಯುತ್ತವೆ. ಬಲಿತ ಹೆಣ್ಣು ಮೊಟ್ಟೆಗಳನ್ನಿಡಲಾರಂಭಿಸುತ್ತ¸ದೆ. ಲಾರ್ವ ಚರ್ಮದ ಮೂಲಕ ದೇಹ ಸೇರಿದ ಆರು ವಾರಗಳ ಅನಂತರ ಬೆಳೆದು ದೊಡ್ಡದಾಗಿ ಮೊಟ್ಟೆ ಇಡುವ ಹಂತವನ್ನು ತಲುಪುತ್ತದೆ. ಹುಳುಗಳ ಆಯುಷ್ಯ ೩ ರಿಂದ ೪ವರ್ಷಗಳು.
ಕೊಕ್ಕೆ ಹುಳುವಿನಿಂದಾಗುವ ತೊಂದರೆ
ಯಾವುದೇ ವಯಸ್ಸಿನವರಿಗೆ ಕೊಕ್ಕೆಹುಳುವಿನ ಬಾಧೆ ತಗುಲಬಹುದಾದರೂ ೧೫ ರಿಂದ ೨೫ ವರ್ಷದ ಗ್ರಾಮೀಣ ಕೃಷಿರಿಗೆ ಹುಳುಗಳ ಉಪಟಳ ಅಧಿಕ. ಹುಳುವಿನ ಬಾಧೆಗೊಳಗಾದವರಿಗೆ ರಕ್ತಹೀನತೆ ಉಂಟಾಗುತ್ತದೆ. ರಕ್ತಹೀನತೆಯಿಂದ ಅಶಕ್ತತೆ, ಆಯಸ ಮುಖಬಿಳಿಚಿಕೊಳ್ಳುವಿಕೆ, ದೇಹದಲ್ಲಿ ಬಾವು ಹೃದಯ ದೌರ್ಬಲ್ಯ ಮುಂತಾದ ತೊಂದರೆಗಳು ಉದ್ಬವಿಸುತ್ತವೆ. ದುಡಿವ ಸಾಮಥ್ರ್ಯ ಕಡಿಮೆಯಾಗುತ್ತದೆ. ಆರ್ಥಿಕ ಪರಿಸ್ತಿಥಿಯೂ ಹದಗೆಡುತ್ತದೆ. ರಕ್ತ ಹೀನತೆಯಿಂದ ಬಳಲುವವರಿಗೆ ರೋಗಗಳನ್ನೆದುರಿಸುವ ಸಾಮಥ್ರ್ಯ ಕುಗ್ಗುತ್ತದೆ. ಹೀಗಾಗಿ ಇವರು ಪದೇ ಪದೇ ಕಾಯಿಲೆ ಬೀಳುತ್ತಾರೆ. ರಕ್ತಹೀನತೆಗೊಳಗಾದ ಗರ್ಬಿಣಿಯರು ಅಪೌಷ್ಟಿಕ ಮಗುವನ್ನು ಹೆರುತ್ತಾರೆ. ಮಕ್ಕಳು ಆಟ ಪಾಠದಲ್ಲಿ ಹಿಂದೆ ಬೀಳುತ್ತಾರೆ. ಇವರ ಬೆಳವಣಿಗೆಯೂ ಸಮರ್ಪಕವಾಗಿರಲಾರದು.
ಕೊಕ್ಕೆಹುಳುವಿನ ಮರಿಗಳು ಚರ್ಮವನ್ನು ತೂರಿಕೊಂಡು ದೇಹವನ್ನು ಪ್ರವೇಶಿಸುವುದರಿಂದ ಅವು ಹೊಕ್ಕ ಜಾಗದಲ್ಲಿ ನವೆ, ಉರಿ, ಕೀವಿನ ಗುಳ್ಳೆ ಉಂಟಾಗುವುದಿದೆ. ಕಾಲ್ಬೆರಳುಗಳ ಸಂದಿಯಲ್ಲಿ ಹೀಗಾಗುವುದು ಹೆಚ್ಚು. ಹುಳುಗಳು ಶ್ವಾಸಕೋಶದಲ್ಲೂ ಕೆಲಕಾಲ ಕಳೆದು ಆಶ್ರಯದಾತನನ್ನು ಕೆಮ್ಮಿಸುತ್ತವೆ. ಕೆಲವರಿಗೆ ಹುಳುವಿನಿಂದ ಅಲರ್ಜಿಯಾಗಿ ಮೈ ಕಡಿತ, ದದ್ದು ಉಂಟಾಗುತ್ತದೆ.
ಕೊಕ್ಕೆ ಹುಳುಗಳನ್ನು ಸಂಹರಿಸಲು ಪರಿಣಾಮಕಾರಿಯಾದ ಔಷಧಿ ಇದೆ. ನಮ್ಮ ದೇಶದಲ್ಲಿ ಹುಳುಗಳ ಹಾವಳಿ ವ್ಯಾಪಕವಾಗಿರುವುದರಿಂದ ಪ್ರತಿಯೊಬ್ಬರೂ ಆರು ತಿಂಗಳಿಗೊಮ್ಮೆ ಔಷಧಿ ತೆಗೆದುಕೊಂಡು, ಹುಳುವಿನ ಭಾದೆಯಿಂದ ಪಾರಾಗಬೇಕಾದ ಅನಿವಾರ್ಯತೆ ಇದೆ. ಕೊಕ್ಕೆ ಹುಳುಗಳು ದೇಹಕ್ಕೆ ಸೇರದಂತೆ ಮಾಡಲು ಎಲ್ಲರೂ ಕಾಲಿಗೆ ಚಪ್ಪಲಿ ಧರಿಸಿಕೊಳ್ಳುವುದನ್ನು ರೂಡಿಮಾಡಿಕೊಳ್ಳಬೇಕಾಗಿದೆ. “ಚಪ್ಪಲಿ ಧರಿಸಿದಲ್ಲಿ ಚಿಲುಮೆ ಹುಳುವಿನ ಬಾಧೆಯಿಲ್ಲ” ಎಂಬ ಹೊಸ ಗಾದೆಯನ್ನು ಮಾನವರು ಮನದಟ್ಟು ಮಾಡಿಕೊಳ್ಳಬೇಕು. ರೈತರು ಮಣ್ಣು ಮತ್ತು ಗೊಬ್ಬರವನ್ನು ಮುಟ್ಟುವಾಗ ಕೈ ಮತ್ತು ಕಾಲಿಗೆ ರಕ್ಷಕ ಕವಚ ಹಾಕಿಕೊಂಡರೆ ಚಿಲುಮೆ ಹುಳುಗಳಿಂದ ರಕ್ಷಣೆ ದೊರೆಯುತ್ತದೆ. ಹುಳುಗಳನ್ನು ಶಾಶ್ವತವಾಗಿ ಹೊರಗಟ್ಟಬೇಕಾದರೆ ಸರ್ವರಿಗೂ ಶೌಚಾಲಯದ ಸೌಲಭ್ಯ ಸಿಗಬೇಕು. ನೆಲದಲ್ಲಿ ಮಲ ವಿಸರ್ಜಿಸುವ ಪದ್ದತಿ ನಿಲ್ಲುವವರೆಗೆ ನಮಗೆ ಕೊಕ್ಕೆ ಹುಳುಗಳ ಬಾಧೆ ತಪ್ಪುವುದೇ ಅಸಾಧ್ಯ. ಶೌಚಾಲಯದ ಕ್ರಾಂತಿಯಿಂದ ಕೊಕ್ಕೆ ಹುಳುವಿಗೆ ವಿದಾಯ ಕೋರಲೆಂದೇ “ರಾಕ್ ಫಿಲರ್ ಫೌಂಡೇಶನ್” ಎಂಬ ಸಂಸ್ಥೆ ೧೯೧೩ ರಲ್ಲಿ ಸ್ಥಾಪಿತಗೊಂಡಿದೆ. ಈ ಸಂಸ್ಥೆ ವಿಶ್ವದಾದ್ಯಂತ ತನ್ನ ಚಟುವಟಿಕೆಗಳನ್ನು ನಡೆಸುತ್ತಿದೆ.
ಧನ್ಯವಾದಗಳು.
GIPHY App Key not set. Please check settings