in

ಭೃಂಗರಾಜ ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ

ಭೃಂಗರಾಜ
ಭೃಂಗರಾಜ

ಕನ್ನಡದಲ್ಲಿ ಗರುಗ, ಗರುಗದ ಸೊಪ್ಪು, ಕಾಡಿಗ್ಗರುಗ ಎಂದು ಕರೆಯಲ್ಪಡುವ ಭೃಂಗರಾಜ ಎಲ್ಲೆಡೆ ಕಳೆಯಂತೆ ಬೆಳೆಯುವ ಸಸ್ಯ. ಕೂದಲಿಗೆ ಬಣ್ಣ ಕೊಡುವ ಮತ್ತು ತಲೆಗೂದಲನ್ನು ಸೊಂಪಾಗಿ ಬೆಳೆಸುವ ಗುಣವುಳ್ಳವಾದ್ದರಿಂದ ಸಂಸ್ಕೃತದಲ್ಲಿ ಕೇಶರಂಜನ, ಕೇಶರಾಜ ಎಂಬ ಹೆಸರೂ ಇದೆ. ಅರ್ಧ ತಲೆನೋವಿಗೆ ಉತ್ತಮ ಔಷಧಿಯಾಗಿರುವುದರಿಂದ ಸೂರ್ಯಾವರ್ತ ಎಂಬ ಹೆಸರೂ ಇದೆ. ಭೃಂಗರಾಜ ತನ್ನಲ್ಲಿರುವ ಅಮೂಲ್ಯ ಗುಣಗಳಿಂದಾಗಿ ಪ್ರಾಚೀನ ಕಾಲದಿಂದಲೂ ಸೌಂದರ್ಯವರ್ಧಕ ಗಿಡಮೂಲಿಕೆಯಾಗಿ ಬಳಸಲ್ಪಡುತ್ತಿತ್ತೆಂದು ಶೌನಕೇಯ, ಅಥರ್ವ ಮತ್ತು ಕೌಶಿಕ ಸೂತ್ರಗಳಲ್ಲಿ ಉಲ್ಲೇಖ ದೊರೆಯುತ್ತದೆ. 

ಅಷ್ಟಾಂಗ ಹೃದಯದಲ್ಲಿ ವಾಗ್ಭಟ ಭೃಂಗರಾಜವನ್ನು ದಿನನಿತ್ಯ ಸೇವನೆ ಮಾಡವುದರಿಂದ ರಸಾಯನ (ಬಲದಾಯಕ ಔಷಧಿ)ವಾಗಿ ಕಾರ್ಯ ಮಾಡುತ್ತದೆಂದು ತಿಳಿಸಿದ್ದಾನೆ. ರಾಜನಿಘಂಟುವಿನಲ್ಲಿ ಕೃಷ್ಣವರ್ಣ (ನೀಲಿ) ಭೃಂಗರಾಜ ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆಯೆಂದು ವಿವರಿಸಲಾಗಿದೆ. ಕಹಿರಸ ಹೊಂದಿದ್ದು ಚರ್ಮಕ್ಕೆ ಹಿತಕರವಾಗಿದೆ. ಇದರ ಎಲೆಗಳನ್ನು ಸಂಕಷ್ಟಹರ ಚತುರ್ಥಿ ವ್ರತದಲ್ಲಿ ಗಣಪತಿಗೆ, ನಿತ್ಯ ಸೋಮವಾರ ವ್ರತದಲ್ಲಿ ಶಿವ ಮತ್ತು ಗೌರಿಗೆ, ಶ್ರೀ ನರಸಿಂಹ ಜಯಂತಿ ವ್ರತದಲ್ಲಿ ವಿಷ್ಣುವಿಗೆ ಮತ್ತು ಶ್ರೀ ಉಮಾ-ಮಹೇಶ್ವರರಿಗೆ ಪೂಜಿಸುತ್ತಾರೆ.

ಎಕ್ ಲಿಪ್ಟ ಆಲ್ಬ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಭೃಂಗರಾಜ ಕಾಂಪೋಸಿಟೆ ಕಟುಂಬಕ್ಕೆ ಸೇರಿದೆ. ಇದು ಎರಡು ಅಡಿ ಬೆಳೆಯುವ ಪುಟ್ಟ ಏಕವಾರ್ಷಿಕ ಸಸ್ಯ. ಕಾಂಡವು ತುಂಬಾ ಮೃದುವಾಗಿದ್ದು. ಆಚೆ ಈಚೆ ಕವಲುಗಳು ಆಕ್ರಮಿಸಿ ನೆಲದ ಮೇಲೆ ತೆವಳಿ ಬೆಳೆಯುತ್ತದೆ. ಹೂವು ಬಿಳಿಯದಾಗಿದ್ದು ಚಿಕ್ಕದಾಗಿರುತ್ತದೆ. ಒಣಗಿದಾಗ ಅದರೊಳಗಿರುವ ಕಪ್ಪು ಬಣ್ಣದ ಬೀಜಗಳು ಹೊರಗೆ ಬರುತ್ತವೆ.

ಭೃಂಗರಾಜ ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ
ಭೃಂಗರಾಜದ ಪುಡಿ ಮಾರ್ಕೆಟ್ ನಲ್ಲಿ ಸಿಗುತ್ತೆ

ಎಲ್ಲಾ ತರಹದ ಮಣ್ಣಿನಲ್ಲೂ ಬೆಳೆಯಬಹುದಾದಂತಹ ಗಡುತರ ಸಸ್ಯ. ಸ್ವಾಭಾವಿಕವಾಗಿ ಈ ಗಿಡವು ಭತ್ತದ ಗದ್ದೆಗಳಲ್ಲಿ ಮತ್ತು ನೀರು ಹರಿದು ಹೋಗುವ ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತದೆ. ಫಲವತ್ತಾದ ಕೆಂಪುಗೋಡು ಮಣ್ಣಿನಲ್ಲಿ ಈ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆ.

ಇದು ಉಷ್ಣಶೀತ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಉತ್ತಮವಾಗಿ ಬೆಳೆಯಬಲ್ಲದು. ಉಷ್ಣಾಂಶ ೨೫-೩೦ ಡಿಗ್ರಿ ಸೆ. ಹಾಗೂ ಕಡಿಮೆ ತೇವಾಂಶ ಇರುವ ಪ್ರದೇಶವು ಈ ಬೆಳೆಗೆ ಒಳ್ಳೆಯದು.

ಪುಷ್ಪಗಳ ಬಣ್ಣಗಳಿಗನುಗುಣವಾಗಿ ಬಿಳಿ, ನೀಲಿ, ಹಳದಿ ಬಣ್ಣದ ಮೂರು ವಿಧಗಳಿವೆ. ಕೇರಳದಲ್ಲಿ ವೈದ್ಯರು ಹೆಚ್ಚಾಗಿ ಹಳದಿಬಣ್ಣದ ಬೃಂಗರಾಜವನ್ನು ಔಷಧಿಯಲ್ಲಿ ಉಪಯೋಗಿಸುತ್ತಾರೆ. ನೀಲಿಬಣ್ಣದ ಭೃಂಗರಾಜ ಪಶ್ಚಿಮ ಬಂಗಾಳದಲ್ಲಿ ಭೀಮರಾಜ ಎಂಬ ಹೆಸರಿನಲ್ಲಿ ಪ್ರಸಿದ್ಧವಿದೆ.

ಪಂಚಂಗಗಳು ಅಂದರೆ ಬೇರು, ಕಾಂಡ, ಎಲೆ, ಹೂ, ಬೀಜ ಎಲ್ಲವೂ ಔಷಧೀಯ ಗುಣ ಹೊಂದಿವೆ.

ಔಷಧೀಯ ಗುಣಗಳು :

ಅಜೀರ್ಣದಿಂದಾಗಿ ಹೊಟ್ಟೆಯುಬ್ಬರ ಉಂಟಾಗಿದ್ದರೆ ಭೃಂಗರಾಜವನ್ನು ಸಣ್ಣಗೆ ಹೆಚ್ಚಿಕೊಂಡು ಸ್ವಲ್ಪ ಎಣ್ಣೆಯಲ್ಲಿ ಹುರಿದು ಮೊಸರಿನಲ್ಲಿ ಜೀರಿಗೆ ಪುಡಿಯೊಂದಿಗೆ ಬೆರೆಸಿ ತಿನ್ನಬೇಕು.

ಚರ್ಮರೋಗಗಳಲ್ಲಿ ಭೃಂಗರಾಜದ ಬೇರನ್ನು ಕುಟ್ಟಿ ಪುಡಿ ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಲೇಪಿಸಬೆಕು.

ತಲೆನೋವಿನಿಂದ ಬಳಲುವವರು ಭೃಂಗರಾಜದ ರಸವನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ಹಣೆಗೆ ಲೇಪಿಸಿಕೊಳ್ಳಬೇಕು.

ಎಲ್ಲ ದೇಶೀಯ ಯಕೃತ್ತಿನ ಟಾನಿಕ್ಗಳು ಈ ಸಸ್ಯದ ಅಂಶ ಹೊಂದಿರುತ್ತದೆ.

ಭೃಂಗರಾಜ ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ
ಕೂದಲಿಗೆ ಭೃಂಗರಾಜ ಎಣ್ಣೆ ಹಚ್ಚಿಕೊಂಡರೆ ಆಗ ಕೂದಲು ತುಂಬಾ ಬಲಗೊಳ್ಳುವುದು

ಕೂದಲುದುರುವಿಕೆ : ತಲೆಗೂದಲು ಉದುರುತ್ತಿದ್ದಲ್ಲಿ ಮತ್ತು ಚಿಕ್ಕವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗಲು ಆರಂಭವಾಗಿದ್ದಲ್ಲಿ ಭೃಂಗರಾಜದಿಂದ ತಯಾರಿಸಿದ ತೈಲವನ್ನು ಪ್ರತಿದಿನ ತಲೆಗೆ ಹಚ್ಚಿಕೊಂಡಲ್ಲಿ ಕೂದಲುದುರುವುದು ನಿಲ್ಲುವುದಲ್ಲದೇ ಸೊಂಪಾಗಿ ಆರೋಗ್ಯಪೂರ್ಣವಾಗಿ ಬೆಳೆಯುತ್ತದೆ.

ಕೂದಲಿಗೆ ಎಣ್ಣೆ ಹಚ್ಚಿಕೊಂಡರೆ ಆಗ ಕೂದಲು ತುಂಬಾ ಬಲಗೊಳ್ಳುವುದು ಮತ್ತು ಸುಂದರವಾಗುವುದು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುವುದು ಹೆಚ್ಚಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದ್ದಂತೆ. ಕೂದಲು ತುಂಡಾಗುವುದು, ಕೂದಲು ಉದುರುವಿಕೆ ಮತ್ತು ತಲೆಹೊಟ್ಟಿಗೆ ಇದು ಪರಿಹಾರ ನೀಡುವುದು. ಭೃಂಗರಾಜ ಎಣ್ಣೆಯ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ ಮತ್ತು ಇದು ಕೂದಲಿಗೆ ಹಲವಾರು ರೀತಿಯ ಲಾಭಗಳನ್ನು ನೀಡುವುದು. ಇದು ಕೂದಲು ಮತ್ತು ತಲೆಬುರುಡೆಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆಯುರ್ವೇದದಲ್ಲಿ ಭೃಂಗರಾಜ ಎಣ್ಣೆಯು ಕೂದಲಿಗೆ ವರ ಎಂದು ಹೇಳಲಾಗಿದೆ. ಭೃಂಗರಾಜ ಎಣ್ಣೆಯು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವುದು. ಆದರೆ ಇದರಲ್ಲಿ ಕಲಬೆರಕೆ ಕೂಡ ಇರುವುದು. ಕೂದಲಿಗೆ ಪೋಷಣೆ ನೀಡಬೇಕಿದ್ದರೆ ನೀವು ನೈಸರ್ಗಿಕವಾಗಿ ಸಿಗುವಂತಹ ಭ್ರಿಂಗರಾಜ್ ಎಣ್ಣೆ ಬಳಸಿಕೊಳ್ಳಿ. ಇದನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು.

ಸುಲಭವಾಗಿ ತಯಾರಿಸಿಕೊಳ್ಳುವುದು ಹೇಗೆ?

ಭೃಂಗರಾಜ ಎಣ್ಣೆ ಮಾಡಲು ಮೊದಲು ಭ್ರಿಂಗರಾಜ್ ಎಲೆಗಳ ರಸ ತೆಗೆಯಿರಿ. ಈ ರಸಕ್ಕೆ ಇಷ್ಟೇ ಪ್ರಮಾಣದಲ್ಲಿ ತೆಂಗಿನ ಎಣ್ಣೆ ಹಾಕಿಕೊಳ್ಳಿ.

ಎಣ್ಣೆ ಮತ್ತು ರಸವನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಕಡಿಮೆ ಬೆಂಕಿಯಲ್ಲಿ ಬಿಸಿ ಮಾಡಿ

ರಸ ಮತ್ತು ಎಣ್ಣೆಯು ಸರಿಯಾಗಿ ಮಿಶ್ರಣವಾದರೆ ಮಾತ್ರ ಬೆಂಕಿ ನಂದಿಸಿ

ಕೂದಲು ಉದುರುವಿಕೆ ಸಮಸ್ಯೆಯಿದ್ದರೆ ಆಗ ನೀವು ಇದನ್ನು ಬಿಸಿ ಮಾಡುವ ಮೊದಲು ನೆಲ್ಲಿಕಾಯಿ ರಸವನ್ನು ಇದಕ್ಕೆ ಹಾಕಿಕೊಳ್ಳಿ.

ಭೃಂಗರಾಜ ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ
ಹಳದಿ ಭೃಂಗರಾಜ

ಒಣ ಹಾಗೂ ತುರಿಕೆಯ ತಲೆಬುರುಡೆಗೆ

ಕೂದಲು ಒಣ ಹಾಗೂ ನಿಸ್ತೇಜವಾಗಿದ್ದರೆ ಆಗ ನೀವು ಭೃಂಗರಾಜ ತೈಲವನ್ನು ಕೂದಲಿನ ಬುಡಕ್ಕೆ ವಾರದಲ್ಲಿ ಎರಡು ಸಲ ಹಚ್ಚಿಕೊಳ್ಳೀ ಮತ್ತು ನಿಧಾನವಾಗಿ ಮಸಾಜ್ ಮಾಡಿ. ಇದು ಕೂದಲಿಗೆ ಪೋಷಣೆ ನೀಡುವುದು ಮತ್ತು ಕೂದಲಿಗೆ ಮೊಶ್ಚಿರೈಸರ್ ನೀಡುವುದು. ಇದರಿಂದ ಒಣ ಕೂದಲಿನ ಸಮಸ್ಯೆ ನಿವಾರಣೆ ಆಗುವುದು. ಇದರ ಹೊರತಾಗಿ ಕೂದಲನ್ನು ಸರಿಯಾಗಿ ಕಟ್ಟಿಕೊಳ್ಳಿ. ಹೊರಗೆ ಧೂಳು, ಕೊಳೆ ಮತ್ತು ಕಲುಷಿತ ವಾತಾವರಣಕ್ಕೆ ಹೋಗುವ ವೇಳೆ ಕೂದಲನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ.

ಧನ್ಯವಾದಗಳು.

What do you think?

-2 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಗನಿ ಬೆಟ್ಟ

ಅಗನಿ ಬೆಟ್ಟದಿಂದ ನೋಡಬಹುದು ಸುತ್ತಲಿನ ಸುಂದರ ಪರಿಸರ

ಕಣ್ಣು ಉರಿ ಸಮಸ್ಯೆ

ಕಣ್ಣು ಉರಿ ಸಮಸ್ಯೆ ಇದ್ದರೆ ಕೆಲವೊಂದು ಮನೆ ಮದ್ದು ಉಪಯೋಗಿಸಿ