in

ಜರಾಸಂಧ ಅತಿ ದೊಡ್ಡ ಶಿವಭಕ್ತ

ಜರಾಸಂಧ
ಜರಾಸಂಧ

ಜರಾಸಂಧ ಇವನು ಮಗಧ ದೇಶದ ಅರಸ. ದೊಡ್ಡ ಶಿವಭಕ್ತ. ಇವನ ತಂದೆ ಬೃಹದ್ರಥ. ಯಾದವರೊಂದಿಗೆ ಶತ್ರುತ್ವ ಇದ್ದುದರಿಂದ ಕೃಷ್ಣನು ಭೀಮಸೇನನ ಮೂಲಕ ಇವನ ಸಂಹಾರ ಮಾಡುತ್ತಾನೆ. ಜರಾಸಂಧ ಒಂದು ದೊಡ್ಡ ನಗಾರಿಯನ್ನು ಮಾಡಿಸಿ ತನ್ನ ರಾಜಧಾನಿಯ ಹೆಬ್ಟಾಗಿಲಿನಲ್ಲಿ ತೂಗುಹಾಕಿದ್ದ. ಆ ನಗಾರಿಯನ್ನು ಬಡಿದರೆ ಅದರಿಂದ ಹೊರಡುವ ಶಬ್ಧ ಶತೃಗಳ ಎದೆಯಲ್ಲಿ ಬಹುದೊಡ್ಡ ಕಂಪನವನ್ನುಂಟು ಮಾಡುತ್ತಿತ್ತು. ಆ ನಗಾರಿಯ ಶಬ್ಧಕ್ಕೇ ಶತೃಗಳು ಹೃದಯ ಒಡೆದು ಸತ್ತುಹೋಗುತ್ತಿದ್ದರು. ಆ ನಗಾರಿಯನ್ನು ಯಾರು ಒಡೆದು ಹಾಕುತ್ತಾರೋ ಅವರಿಂದ ಜರಾಸಂಧನ ಮರಣ ಎಂಬ ಒಂದು ನಂಬಿಕೆಯಿತ್ತು. ಯುಧಿಷ್ಠಿರನು ಇಂದ್ರಪ್ರಸ್ಥದಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಅವನಿಗೆ ರಾಜಸೂಯ ಯಾಗ ಮಾಡಬೇಕೆನಿಸಿತು. ಅದನ್ನು ಮಾಡಬೇಕೆಂದರೆ ಭೂಮಂಡಲದ ರಾಜರೆಲ್ಲರೂ ಯುಧಿಷ್ಠಿರನಿಗೆ ಸಾಮಂತರಾಗಬೇಕು. ಸ್ನೇಹದಿಂದ ಕೆಲವರು, ಭಕ್ತಿ ಗೌರವಗಳಿಂದ ಕೆಲವರು, ಭಯದಿಂದ ಕೆಲವರು ಪಾಂಡವರ ಸಾಮಂತರಾದರು. ಕೆಲವು ಬಲಿಷ್ಠ ರಾಜರನ್ನು ಯುದ್ಧ ಮಾಡಿಯೇ ಮಣಿಸಬೇಕಾಯ್ತು. ಈ ಪೈಕಿ ಜರಾಸಂಧನೂ ಪಾಂಡವರ ಪಟ್ಟಿಯಲ್ಲಿದ್ದ.

ಜರಾಸಂಧನ ಹುಟ್ಟಿನ ಗುಟ್ಟು:

ಜರಾಸಂಧ ಅತಿ ದೊಡ್ಡ ಶಿವಭಕ್ತ
ಜರಾಸಂಧನ ಹುಟ್ಟಿನ ಗುಟ್ಟು

ಮಗಧರಾಜ್ಯವನ್ನು ಬೃಹದ್ರಥನೆಂಬ ರಾಜನು ಆಳುತ್ತಿದ್ದನು. ಗುಣಶಾಲಿ ಕ್ಷತ್ರಿಯನೆಂದು ಕೀರ್ತಿವಂತನಾದ ಅವನ ರಾಜಧಾನಿ ಗಿರಿವಜ್ರ. ಕಾಶಿರಾಜನ ಅವಳಿ ಪುತ್ರಿಯರನ್ನು ಮದುವೆಯಾಗಿದ್ದ ಅವನು ಮಕ್ಕಳಿಲ್ಲದ್ದರಿಂದ ಬೇಸರಿಸಿ ವಾನಪ್ರಸ್ಥನಾದನು. ಆ ಕಾಡಿನಲ್ಲಿ ಚಂದ್ರಕೌಶಿಕನೆಂಬ ಋಷಿಯಿದ್ದನು. ಬೃಹದ್ರಥನು ಅವನನ್ನು ಭಕ್ತಿಯಿಂದ ಸೇವಿಸುತ್ತಿರಲು. ಋಷಿಗೆ ಅವನ ಮೇಲೆ ಅನುಕಂಪವುಂಟಾಯಿತು. ಅಷ್ಟರಲ್ಲಿ ಮರದ ಮೇಲಿಂದ ಮಾವಿನ ಹಣ್ಣೊಂದು ಬೀಳಲು, ಅದನ್ನು ಅಭಿಮಂತ್ರಿಸಿ ಕೊಟ್ಟು, ಇದನ್ನು ತಿಂದ ನಿನ್ನ ಪತ್ನಿಯು ಪುತ್ರನನ್ನು ಪಡೆಯುವಳು. ನೀನು ಪುನಃ ಹಿಂದಿರುಗಿ ರಾಜ್ಯವನ್ನಾಳು ಹೋಗು” ಎಂದು ಹೇಳಿದನು. ರಾಜನು ಅದನ್ನು ಎರಡು ಭಾಗ ಮಾಡಿ ತನ್ನ ಇಬ್ಬರು ಪತ್ನಿಯರಿಗೂ ಕೊಡಲು, ಕಾಲಕ್ರಮದಲ್ಲಿ ಇಬ್ಬರೂ ಅರ್ಧರ್ಧ ಮಗುವನ್ನು ಹೆತ್ತರು. ಇದನ್ನು ನೋಡಿ ಅರಮನೆಯಲ್ಲಿ ಎಲ್ಲರೂ ಹೆದರಿದರು.
ದಾಸಿಯು ಈ ಎರಡು ಅರ್ಧ ಮಗುಗಳನ್ನೂ ರಾಜಧಾನಿಯಿಂದಾಚೆ ಕಸದ ತೊಟ್ಟಿಯಲ್ಲಿ ಎಸೆಯುತ್ತಾಳೆ. ಆ ರಾತ್ರಿ ಆಹಾರವನ್ನು ಹುಡುಕುತ್ತಿದ್ದ ‘ಜರೆ’ಯೆಂಬ ರಾಕ್ಷಸಿಯು ಇವುಗಳನ್ನು ಆರಿಸಿ ಒಟ್ಟಿಗೆ ಇಟ್ಟುಕೊಳ್ಳಲು, ಪವಾಡವೆಂಬಂತೆ ಎರಡು ಅರ್ಧಗಳೂ ಒಟ್ಟುಗೂಡಿ ಜೀವಂತ ಶಿಶುವಾಯಿತು. ಅದನ್ನು ಕೊಲ್ಲಲು ಮನಸ್ಸು ಬಾರದೆ ಅವಳು ರಾಜನ ಬಳಿಗೆ ಹೋಗಿ ನಡೆದುದನ್ನು ತಿಳಿಸಿ ಮಗುವನ್ನು ಒಪ್ಪಿಸಿದಳು. ಸಂತೋಷದಿಂದ ರಾಜನು ಆ ಮಗುವಿಗೆ ಜರಾಸಂಧನೆಂದೇ ಹೆಸರಿಟ್ಟನು. ಚಂದ್ರಕೌಶಿಕ ಮುನಿಯು ಬಂದು, ವಿಶಿಷ್ಟ ಶಕ್ತಿಗಳೊಡನೆ ಹುಟ್ಟಿರುವ ಹಾಗೂ ಭವಿಷ್ಯದಲ್ಲಿ ಶಿವಭಕ್ತನೆನಿಸುವ ಈ ಮಗುವನ್ನು ಸಾಮಾನ್ಯರಾರೂ ಕೊಲ್ಲಲಾರರೆಂದು ತಿಳಿಸಿದನು.

ಜರಾಸಂಧನನ್ನು ಕೊಲ್ಲಲು ಶ್ರೀಕೃಷ್ಣನ ಸಂಚು ಹೀಗಿತ್ತು:

ಜರಾಸಂಧನು ದೇಹಧಾರಿಯಾದ ಶಂಕರನನ್ನು ನೋಡಿರುವನು ಎಂದು ಹೇಳುವರು. ಅಂಥವನನ್ನು ಯಾರು ಸೋಲಿಸಬಲ್ಲರು? ಎಂದು ಕೃಷ್ಣ ಹೇಳಿದಾಗ ಯುಧಿಷ್ಠಿರನು ಮೌನ ತಾಳಿದನು. ಗಿರಿವ್ರಜದಿಂದ ದ್ವಾರಕೆಯ ಹತ್ತಿರಕ್ಕೆ ಗದೆಯನ್ನು ಎಸೆದನೆಂದು ಹೇಳಿದೆನಲ್ಲವೆ? ಈ ಗದೆಯೇ ಅವನ ಮುಖ್ಯ ಶಕ್ತಿಯಾಗಿತ್ತು. ಭೂಮಿಯೊಳಕ್ಕೆ ಹೊಕ್ಕ ಅದನ್ನು ಮೇಲೆತ್ತಲು ಅವನು ಪ್ರಯತ್ನಿಸಿದನಾದರೂ ಸಾಧ್ಯವಾಗಲಿಲ್ಲ. ಆ ಗದೆಯಿಲ್ಲದ ಅವನನ್ನು ಈಗ ಸೋಲಿಸಬಹುದು. ಅವನೊಂದಿಗೆ ಹೋರಾಡುವುದು ಯುಧಿಷ್ಠಿರನಿಗೆ ಬೇಕಿರಲಿಲ್ಲ. ಆದರೆ ಭೀಮಾರ್ಜುನರು ಬಿಡಲಿಲ್ಲ. ಕೃಷ್ಣನೆಂದನು : ಅವನು ಸ್ಯೆನ್ಯವನ್ನು ಇಂದ್ರನೂ ಸಹ ಸೋಲಿಸಲಾರನು. ಅದರೆ ಭೀಮನು ಮಲ್ಲಯುದ್ಧದಲ್ಲಿ ಅವನನ್ನು ಮಣಿಸಬಹುದೆಂದು ನನಗನ್ನಿಸುತ್ತದೆ. ಯುಧಿಷ್ಠಿರ, ನಾವು ಮೂವರನ್ನು ಕಳುಹಿಸು. ನಿನ್ನ ಸೋದರರ ಜವಾಬ್ದಾರಿ ನನ್ನದು. ನಾವು ವಿಜಯಿಗಳಾಗಿ ಹಿಂದಿರುಗುತ್ತೇವೆ. ಕೊನೆಗೂ ಯುಧಿಷ್ಠಿರನನ್ನು ಒಪ್ಪಿಸಿ ಮೂವರೂ ಮಗಧಕ್ಕೆ ಹೊರಟರು. ಸರಯೂ ಗಂಡಕಿ ನದಿಗಳನ್ನು ದಾಟಿದರು. ಮಿಥಿಲೆಯನ್ನೂ ಗಂಗಾನದಿಯನ್ನೂ ದಾಟಿದರು. ದೂರದಿಂದ ಗಿರಿವ್ರಜ ಪರ್ವತ ಕಾಣಿಸಿತು. ಮಗಧ ರಾಜಧಾನಿಗೆ ಬಂದರು.

ಅರ್ಧರಾತ್ರಿಯಲ್ಲಿ ನಗರ ಪ್ರವೇಶ ಮಾಡಿದ ಈ ಮೂವರೂ ಸೇರಿ ರಾಜಧಾನಿಯ ಹೆಬ್ಟಾಗಿಲಿನಲ್ಲಿದ್ದ ಆ ಬೃಹತ್‌ ಗಾತ್ರದ ನಗಾರಿಯನ್ನು ಒಡೆದುಹಾಕಿದರು. ಗಸ್ತಿನ ಸೈನಿಕರು ಇದನ್ನು ನೋಡಿ ದಿಗಿಲುಗೊಂಡರು. ರಾಜ್ಯಕ್ಕೆ ಯಾವುದೋ ಆಪತ್ತು ಬಂತೆಂದು ಮನಗಂಡರು. ಜರಾಸಂಧನಿಗೆ ಈ ವಿಷಯ ಮುಟ್ಟಿಸಿದರು. ಜರಾಸಂಧ ಕೂಡಲೇ ಕೃಷ್ಣಾರ್ಜುನ ಭೀಮರನ್ನು ತನ್ನ ಬಳಿಗೆ ಕರೆಸಿದ. ಮೂವರೂ ಮಾರುವೇಷದದಲ್ಲಿದ್ದರು.

ಮೂವರನ್ನು ಕುರಿತು ನೀವ್ಯಾರು, ಇಲ್ಲೀಗೇಕೆ ಬಂದಿರಿ, ನಿಮಗೇನು ಬೇಕು?ಎಂದು ಕೇಳಿದ. ಶ್ರೀಕೃಷ್ಣನು ನಾವು ಯಾರಾದರೇನು ನಿನ್ನೊಡನೆ ಯುದ್ಧ ಮಾಡಲು ಬಂದಿದ್ದೇವೆ, ಅನಗತ್ಯ ರಕ್ತಪಾತ ನಮಗಿಷ್ಟವಿಲ್ಲ ಆದ್ದರಿಂದ ನೀನು ನಮ್ಮಲ್ಲಿ ಯಾರಾದರೂ ಒಬ್ಬರನ್ನು ಆಯ್ದುಕೊಂಡು ಮಲ್ಲಯುದ್ಧ ಮಾಡಬಹುದು ಎಂದು ಹೇಳಿದ. ಇದಕ್ಕೆ ಒಪ್ಪಿದ ಜರಾಸಂಧ ಕೃಷ್ಣನನ್ನು ನೋಡಿ ನೀನು ಪೀಚು ನನಗೆ ಸಾಟಿಯಾಗುವುದಿಲ್ಲ, ಅರ್ಜುನನನ್ನು ಕುರಿತು ಇವನಿನ್ನೂ ಶಿಶುವಿನ ಹಾಗಿದ್ದಾನೆ ಇವನೂ ನನಗೆ ಸಾಟಿಯಾಗಲಾರ, ಎನ್ನುತ್ತ ಭೀಮನ ಬಳಿಬಂದು ಅವನ ದಷ್ಟಪುಷ್ಟವಾದ ಮಾಂಸಲ ಶರೀರವನ್ನು ನೋಡುತ್ತಾ ಇವನೇನೋ ಗೂಳಿಯ ಹಾಗಿದ್ದಾನೆ ನನಗೆ ಇವನೇ ಸರಿ ಇವನೊಂದಿಗೆ ಮಲ್ಲಯುದ್ಧ ಮಾಡುತ್ತೇನೆ ಎಂದ. ಸರಿ ಯುದ್ಧ ಪ್ರಾರಂಭವಾಯಿತು. ಅನೇಕ ದಿನಗಳವರೆಗೂ ಇಬ್ಬರೂ ದಣಿವಿಲ್ಲದೆ ಯುದ್ಧ ಮಾಡಿದರು.

ಜರಾಸಂಧ ಅತಿ ದೊಡ್ಡ ಶಿವಭಕ್ತ
ಜರಾಸಂಧ ಸೋಲು

ಆದರೆ ಯುವಕನಾದ ಭೀಮನ ಮುಂದೆ ಮುದುಕನಾದ ಜರಾಸಂಧ ಸೋಲುತ್ತ ಬಂದ. ಒಮ್ಮೆ ಭೀಮ ಜರಾಸಂಧನನ್ನು ಮೇಲೆತ್ತಿ ಗಿರಗಿರನೆ ತಿರುಗಿಸಿ ನೆಲಕ್ಕೆ ಒಗೆದು ಅವನ ದೇಹವನ್ನು ಎರಡಾಗಿ ಸೀಳಿ ಬೀಸಾಡಿದ. ಆದರೆ ಆಶ್ಚರ್ಯವೆಂಬಂತೆ ಎರಡೂ ದೇಹವೂ ಒಂದಾಗಿ ಜರಾಸಂಧ ಮತ್ತೆ ಬದುಕಿದ. ಈ ರೀತಿ ಹಲವಾರು ಬಾರಿ ನಡೆಯಿತು. ಜರಾಂಧನನ್ನು ವಧಿಸುವ ಉಪಾಯ ಕಾಣದೆ ಭೀಮ ಕಕ್ಕಾಬಿಕ್ಕಿಯಾದ. ಎರಡಾಗಿ ಸೀಳಿದಷ್ಟೂ ಅವನು ಮತ್ತೆ ಹುಟ್ಟಿಬರುತ್ತಿದ್ದ. ಕೃಷ್ಣನಿಗೆ ಜರಾಂಸಂಧನ ಹುಟ್ಟಿನ ಹಿನ್ನೆಲೆ ಗೊತ್ತಿತ್ತು.

ತಕ್ಷಣ ಚುರುಕಾಗಿ ತಲೆ ಓಡಿಸಿದ ಕೃಷ್ಣ ಒಂದು ಹಂಚಿಕಡ್ಡಿಯನ್ನು ಎರಡಾಗಿ ಸೀಳಿ ಅದನ್ನು ಉಲ್ಟಾ ಮಾಡಿ ಬಿಸಾಡಿದ. ಇದನ್ನು ಕಂಡ ಭೀಮನಿಗೆ ಅರ್ಥವಾಯಿತು. ಅವನು ಈಗ ಜರಾಸಂಧನನ್ನು ಎರಡಾಗಿ ಸೀಳಿ ಎರಡು ಭಾಗವನ್ನೂ ತಲೆಯನ್ನು ಕಾಲಿಗೆ ಕಾಲನ್ನು ತಲೆಗೆ ಜೋಡಿಸಿ ಬಿಸಾಡಿದ. ಜರಾಸಂಧ ಸತ್ತುಬಿದ್ದ. ಅವನ ಶರೀರ ಬೃಹದಾಕಾರದ ಪರ್ವತದಂತೆ ಭೂಮಿಯಲ್ಲಿ ಬಿತ್ತು. ಜರಾಸಂಧ ಸೆರೆಯಲ್ಲಿಟ್ಟಿದ್ದ ರಾಜರನ್ನೆಲ್ಲಾ ಕೃಷ್ಣಾರ್ಜುನಭೀಮರು ಬಿಡಿಸಿದರು. ಯುಧಿಷ್ಠಿರನ ಸಾರ್ವಭೌಮತ್ವವನ್ನು ಅವರೆಲ್ಲರೂ ಒಪ್ಪಿಕೊಂಡರು. ರಾಜಸೂಯಾಗಕ್ಕೆ ಬಂದು ಸಹಕರಿಸುವುದಾಗಿ ವಚನವಿತ್ತರು. ಲೋಕಕ್ಕೆ ಜರಾಸಂಧನ ಕಂಟಕ ನಿವಾರಣೆಯಾಯಿತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹಸ್ತಿನಾಪುರದ ರಾಜ ಧೃತರಾಷ್ಟ್ರ

ಹಸ್ತಿನಾಪುರದ ರಾಜ ಧೃತರಾಷ್ಟ್ರ

ಯಶ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದ ಹೊಂಬಾಳೆ ತಿರುಗಿಬಿದ್ದ ದರ್ಶನ್ ಫ್ಯಾನ್ಸ್.

ಯಶ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದ ಹೊಂಬಾಳೆ ತಿರುಗಿಬಿದ್ದ ದರ್ಶನ್ ಫ್ಯಾನ್ಸ್.