೧೪ನೆಯ ಶತಮಾನದ ಉತ್ತರಾರ್ಧದಲ್ಲಿ ತಲಕಾಡು ವಿಜಯನಗರದ ಅರಸರಿಗೆ ಸೇರಿತು. ೧೩೮೪ರಲ್ಲಿ ಸಾಳ್ವ ಮನೆತನಕ್ಕೆ ಸೇರಿದ ರಾಮದೇವ ತಲಕಾಡಿನಲ್ಲಿ ಅಧಿಕಾರಿಯಾಗಿ ರಾಜ್ಯಭಾರ ಮಾಡುತ್ತಿದ್ದನೆಂದೂ ಅವನು ಮುಸ್ಲಿಮರೊಂದಿಗೆ ಯುದ್ಧಮಾಡಿ ತೋತಕೊಂಡ ಎಂಬಲ್ಲಿ ಸತ್ತನೆಂದೂ ತಿಳಿಯುತ್ತದೆ. ಅಲ್ಲದೆ ೨ನೆಯ ದೇವರಾಯನ ಆಳ್ವಿಕೆಯಲ್ಲಿ ಇಲ್ಲಿಯ ಅಧಿಕಾರಿಯಾಗಿದ್ದ ಪೆರುಮಾಳ ದೇವರಸ ಕೀರ್ತಿನಾರಾಯಣ ದೇವಾಲಯಕ್ಕೆ ಧನಸಹಾಯ ಮಾಡಿದಂತೆ ತಿಳಿದುಬಂದಿದೆ. ವಿಜಯನಗರದ ಅಧಿಕಾರಿಗಳು ೧೭ನೆಯ ಶತಮಾನದ ಆರಂಭದ ವರೆಗೆ ತಲಕಾಡಿನಲ್ಲಿ ಆಳಿದರು. ಅವರು ಇಲ್ಲಿಯ ದೇವಾಲಯಗಳಿಗೆ ಕಾಣಿಕೆ ಮತ್ತು ಜಹಗೀರುಗಳನ್ನು ಕೊಡುವ ಸಂಪ್ರದಾಯವನ್ನಿಟ್ಟುಕೊಂಡಿದ್ದದು ಆ ಕಾಲದ ಶಾಸನಗಳಿಂದ ತಿಳಿಯುತ್ತದೆ. ವಿಜಯನಗರದ ಮಂತ್ರಿಗಳಲ್ಲೊಬ್ಬನಾದ ಮಾಧವಮಂತ್ರಿ ತಲಕಾಡಿನವನಾಗಿದ್ದ. ಆತ ತಲಕಾಡಿನ ಬಳಿಯಲ್ಲಿ ತನ್ನ ಹೆಸರಿನಲ್ಲಿ ಒಂದು ಅಣೆಕಟ್ಟೆಯನ್ನು ನಿರ್ಮಿಸಿದನಲ್ಲದೆ, ಪೂರ್ವದ ಚೋಳಲಿಂಗದ ಮೇಲೆ ಬಹುಶಃ ಈಗಿನ ವೈದ್ಯೇಶ್ವರ ದೇವಾಲಯವನ್ನು ಕಟ್ಟಿಸಿದ.
೧೬೧೦ರಲ್ಲಿ ತಿರುಮಲರಾಜ ಇವನಿಗೆ ಶ್ರೀರಂಗರಾಯನೆಂದೂ ಹೆಸರಿತ್ತು. ಶ್ರೀರಂಗಪಟ್ಟಣದಲ್ಲಿ ವಿಜಯನಗರದ ಪ್ರತಿನಿಧಿಯಾಗಿದ್ದ. ಆಗ ಮೈಸೂರಿನ ಬೆಟ್ಟದ ಚಾಮರಾಜ ಒಡೆಯನ ತಮ್ಮ ರಾಜ ಒಡೆಯನಿಗೂ ತಿರುಮಲ ರಾಜನಿಗೂ ವೈರವಿತ್ತೆಂದು ಚಿಕ್ಕದೇವರಾಜ ವಂಶಾವಳಿಯಿಂದ ತಿಳಿದು ಬರುತ್ತದೆ. ಆದರೆ ಪೆನುಕೊಂಡೆಯಲ್ಲಿ ಆಳುತ್ತಿದ್ದ ವಿಜಯನಗರ ದೊರೆ ವೆಂಕಟಪತಿರಾಯನ ಬೆಂಬಲ ರಾಜಒಡೆಯನಿಗಿತ್ತು. ರಾಜಒಡೆಯರ ಪ್ರಭಾವದಿಂದ ತಿರುಮಲರಾಜನು ಭೀತನಾದ. ಗುಣಪಡಿಸಲಸಾಧ್ಯವಾದ ರೋಗದಿಂದ ಬಳಲುತ್ತಿದ್ದ ತಿರುಮಲರಾಜ ತಾನು ಜೀವಿಸುವುದು ಕಷ್ಟವೆಂದು ತಿಳಿದು, ಸ್ವಪ್ರೀತಿಯಿಂದ ರಾಜ ಒಡೆಯನನ್ನು ಕರೆಸಿ ಶ್ರೀರಂಗಪಟ್ಟಣವನ್ನೂ ಸಿಂಹಾಸನವನ್ನೂ ವಹಿಸಿಕೊಟ್ಟು ಅಲಮೇಲಮ್ಮ, ರಂಗಮ್ಮ ಎಂಬ ಪತ್ನಿಯರ ಸಹಿತ ತಲಕಾಡಿನ ಬಳಿಯಿದ್ದ ಮಾಲಿಂಗಿಗೆ ಹೋಗಿ ಅಲ್ಲಿ ಕೆಲವು ದಿನಗಳಿದ್ದು ಮರಣ ಹೊಂದಿದನೆಂದು ಮೈಸೂರು ರಾಜವಂಶದ ಚರಿತ್ರೆ ತಿಳಿಸುತ್ತದೆ. ಆದರೆ ಅವರಿಬ್ಬರ ನಡುವೆ ಇದ್ದ ಸಂಬಂಧವನ್ನು ಲಕ್ಷ್ಯಕ್ಕೆ ತೆಗೆದುಕೊಂಡರೆ ಇದು ಅಸಂಭವವೆಂದೂ ತಿರುಮಲರಾಯ ರಾಜ ಒಡೆಯನಿಗೆ ಹೆದರಿ ಅಥವಾ ಅವನ ಒತ್ತಾಯದಿಂದ ಹಾಗೆ ಓಡಿಹೋಗಿರಬಹುದೆಂದೂ ತೋರುತ್ತದೆ.
ರಾಜ್ಯದಲ್ಲಿ ದೊರೆತ ಶಾಸನವೊಂದರ ಪ್ರಕಾರ ೧೬೧೨ರಲ್ಲಿ ರಾಜ ಒಡೆಯರ್ ಶ್ರೀರಂಗಪಟ್ಟಣವನ್ನು ವೆಂಕಟಪತಿರಾಯನಿಂದ ಕೊಡುಗೆಯಾಗಿ ಸ್ವೀಕರಿಸಿದನೆಂದು ತಿಳಿದು ಬಂದರೂ ನಿಜವಾಗಿ ಮೈಸೂರು ಅರಸ ಅದನ್ನು ಆಗಲೇ ತನ್ನದನ್ನಾಗಿ ಮಾಡಿಕೊಂಡಿದ್ದಕ್ಕೆ ವೆಂಕಟಪತಿರಾಯನ ಔಪಚಾರಿಕ ಒಪ್ಪಿಗೆ ದೊರೆತಿತ್ತು ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀರಂಗಪಟ್ಟಣದ ಶ್ರೀರಂಗನಾಯಕಿ ದೇವಿಗೆ ಅಲಂಕಾರ ಮಾಡಲು ವಾರಕ್ಕೆರಡು ಸಲ ತಾನು ಕೊಡುತ್ತಿದ್ದ ಕೆಲವು ರತ್ಮಾಭರಣಗಳನ್ನು ಅಲಮೇಲಮ್ಮ ಮಾಲಿಂಗಿಯ ಮಡುವಿಗೆ ತೆಗೆದುಕೊಂಡು ಹೋಗಿದ್ದಳು. ಕೆಲವು ದಿನಗಳ ಅನಂತರ ರಾಜ ಒಡೆಯರ್ ಆ ಆಭರಣಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನ ಮಾಡಿದರು. ಆದರೆ ಅಲಮೇಲಮ್ಮ ಅವನ್ನು ರಾಜ ಒಡೆಯರ್ ರಿಗೆ ಒಪ್ಪಿಸಲಿಲ್ಲ. ಆಲಮೇಲಮ್ಮ ಮಹಾರಾಣಿಯ ಮೇಲೆ ದಂಡು-ದಾಳಿಯ ಸಹಿತ ರಾಜ ಒಡೆಯರ್ ಆಕ್ರಮಣ ಮಾಡಿದರು ಎಂದೂ, ಸಿಟ್ಟಿನಿಂದ ಅವಳು ತಲಕಾಡು ಮರಳಾಗಲಿ, ಮಾಲಿಂಗಿ ಮಡುವಾಗಲಿ, ಮೈಸೂರು ದೊರೆಗಳಿಗೆ ಮಕ್ಕಳು ಇಲ್ಲದೆ ಹೋಗಲಿ, ಎಂದು ಶಪಿಸಿ, ಆಭರಣಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಮಾಲಿಂಗಿಯ ಮಡುವಿನಲ್ಲಿ ದುಮುಕಿ ಪ್ರಾಣ ನೀಗಿದಳು ಎಂಬುದು ಪ್ರತೀತಿ. ತಮ್ಮ ಅಚಾತುರ್ಯದಿಂದ ಸಂಭವಿಸಿದ ಈ ದುರಂತದಿಂದ ರಾಜ ಒಡೆಯರ್ ಪಶ್ಚಾತ್ತಾಪಪಟ್ಟು ಅಲಮೇಲಮ್ಮನ ರೂಪದ ಚಿನ್ನದ ಪ್ರತಿಮೆಯೊಂದನ್ನು ಮಾಡಿಸಿ ನಿತ್ಯವೂ ಅದಕ್ಕೆ ಪೂಜೆ ನಡೆಸುವಂತೆ ಏರ್ಪಡಿಸಿದ್ದು ಅಲ್ಲದೆ, ಆ ಪ್ರತಿಮೆಗೆ ಮಹಾನವಮಿಯ ದಿನ ಅರಮನೆಯಲ್ಲಿ ವಿಶೇಷ ಪೂಜೆ ನಡೆಸುವಂತೆ ಏರ್ಪಡಿಸಿದರು. ಈ ಪದ್ದತಿಯನ್ನು ಅನಂತರ ಮೈಸೂರಿನ ಅರಸರು ಅನುಸರಿಕೊಂಡು ಬಂದರು. ಅಂದಿನಿಂದ ತಲಕಾಡು ಮೈಸೂರು ರಾಜರ ವಶದಲ್ಲಿತ್ತು.
ಪ್ರಚಲಿತವಿರುವ ಇನ್ನೊಂದು ಕಥೆಯ ಪ್ರಕಾರ, ಶ್ರೀರಂಗರಾಯನಿಗೆ ತೀವ್ರವಾದ ಬೇನೆಯಾಗಲು ಅವನು ಶ್ರೀರಂಗಪಟ್ಟಣದ ರಾಜ್ಯಭಾರವನ್ನು ಹೆಂಡತಿ ರಂಗಮ್ಮನಿಗೆ ವಹಿಸಿ, ತಲಕಾಡಿನ ವೈದ್ಯೇಶ್ವರನಿಗೆ ಪೂಜೆ ಸಲ್ಲಿಸುವ ಉದ್ದೇಶದಿಂದ ಅಲ್ಲಿಗೆ ಹೋದ. ಗಂಡನಿಗೆ ಮರಣ ಸನ್ನಿಹಿತವಾಗಿದೆಯೆಂಬುದನ್ನು ತಿಳಿದ ರಂಗಮ್ಮ, ಶ್ರೀರಂಗಪಟ್ಟಣದ ಮತ್ತು ಅದರ ಆಧೀನ ಪ್ರದೇಶಗಳ ರಾಜ್ಯಭಾರವನ್ನು ರಾಜ ಒಡೆಯರ್ ರಿಗೆ ವಹಿಸಿ, ತಾನೂ ತಲಕಾಡಿಗೆ ಹೋದಳು. ಅವಳು ಧರಿಸಿದ್ದ ಮೂಗುತಿಯನ್ನು ಪಡೆದುಕೊಳ್ಳಬೇಕೆಂಬ ದುರಾಸೆಯಿಂದ ರಾಜ ಒಡೆಯರ್ ಸೈನ್ಯದೊಂದಿಗೆ ತಲಕಾಡಿಗೆ ಹೋಗಿ ತಲಕಾಡನ್ನು ಗೆದ್ದುಕೊಂಡರು, ರಂಗಮ್ಮ ಕಾವೇರಿಯ ದಡಕ್ಕೆ ಹೋಗಿ, ಮೂಗುತಿಯನ್ನು ನೀರಿನಲ್ಲಿ ಎಸೆದು ಮೇಲೆ ಹೇಳಿದಂತೆ ಶಾಪಕೊಟ್ಟು ತಾನೂ ಹೊಳೆಗೆ ಹಾರಿಕೊಂಡಳು. ತಲಕಾಡಿನ ಹಳೆಯ ಊರಿನ ಬಹುಭಾಗ ಮರಳಿನಲ್ಲಿ ಹೂತುಹೋಗಿದೆ. ಹೊಳೆಯ ಮೇಲಿನಿಂದ ಬೀಸುವ ಗಾಳಿಯಲ್ಲಿ ತೂರಿಬರುವ ಮರಳಿನಿಂದ ಊರಿಗೆ ಆ ಪರಿಸ್ಥಿತಿ ಬಂದಿದೆ. ಮಾಧವಮಂತ್ರಿ ಆಣೆಕಟ್ಟನ್ನು ನಿರ್ಮಿಸಿದ ಅನಂತರ ಅಲ್ಲಿ ಶೇಖರವಾದ ಮರಳಿನಿಂದ ಈ ಅನಾಹುತವಾಗಿದೆಯೆಂದು ಭಾವಿಸಲಾಗಿದೆ. ಏರಿಬರುತ್ತಿರುವ ಮರಳಿನ ಆಕ್ರಮಣವನ್ನು ತಡೆಗಟ್ಟಲು ಸರ್ಕಾರದವರು ಗೇರುಮರಗಳನ್ನು ನೆಡುವುದೇ ಮುಂತಾದ ಅನೇಕ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಅಲ್ಮೆಲಮ್ಮನ ಶಾಪ ಗೊತ್ತೇ ಇದೆ :
ವಿಜಯನಗರದ ರಾಜಪ್ರತಿನಿಧಿಯಾದ ಶ್ರೀರಂಗರಾಯ ಎಂಬಾತ ಶ್ರೀರಂಗಪಟ್ಟಣವನ್ನಾಳುತ್ತಿದ್ದ. ಅವನಿಗೆ ಬೆನ್ನುಪಣಿರೋಗ ಬಂದು ಯಾವ ಔಷಧದಿಂದಲೂ ಗುಣವಾಗದಿದ್ದಾಗ ವೈದ್ಯನಾಥೇಶ್ವರನಿಗೆ ಪೂಜೆ ಮಾಡಿ ತನ್ನ ರೋಗದಿಂದ ಮುಕ್ತಿಪಡೆಯಲು ತಲಕಾಡಿಗೆ ಆಗಮಿಸಿದ. ಪತಿ ಮರಣಾವಸ್ಥೆಯಲ್ಲಿರುವನೆಂದು ತಿಳಿದ ರಾಣಿ ತಾನೂ ಜೊತೆಗೆ ಬಂದಳು. ರಾಜ ತಲಕಾಡಿನಲ್ಲಿ ತನ್ನ ಕೊನೆಯುಸಿರೆಳೆದ. ಆತನ ಪತ್ನಿ ಅಲಮೇಲಮ್ಮ ತಲಕಾಡಿನ ಸನಿಹದ ಮಾಲಂಗಿ ಗ್ರಾಮದಲ್ಲಿ ನೆಲೆಸಿದಳು.
ತಲಕಾಡು ಮರಳಾಗಿ;
ಮಾಲಿಂಗಿ ಮಡುವಾಗಿ
ಮೈಸೂರು ಒಡೆಯರಿಗೆ ಮಕ್ಕಳಾಗದೆ ಹೋಗಲಿ – ಅಂದಿನಿಂದಲೂ ಅಲುಮೇಲಮ್ಮನ ಶಾಪ ಎಂದೇ ಜನಜಿನತವಾಗುತ್ತದೆ.
ಹಳೆಯ ನಗರ ತಲಕಾಡು ಸಂಪೂರ್ಣವಾಗಿ ಮರಳುಗಾಡಾಯಿತು, ಅಂದರೆ ಸುಮಾರು ೧ ಮೈಲಿನಷ್ಟು. ಕೇವಲ ಮೇಲಿನ ಎರಡು ಪಗೋಡಗಳು ಕಾಣಿಸುತ್ತದೆ. ಪ್ರಮುಖವಾಗಿ ನೈಋತ್ಯ ಮುಂಗಾರು ಅವಧಿಯಲ್ಲಿ ಅಲ್ಲಿನ ನಿವಾಸಿಗಳು ತಮ್ಮ ಮನೆಯನ್ನು ತ್ಯಜಿಸುತ್ತಾರೆ, ಕಾರಣ ಅಲ್ಲಿ ೯ ರಿಂದ ೧೦ ಅಡಿಗಳಷ್ಟು ಮರಳು ಸಂಗ್ರಹವಾಗುತ್ತದೆ. ಅದಾಗ್ಯೂ ಮಾಧನಮಂತ್ರಿ ಅಣೆಕಟ್ಟು ಮತ್ತು ಚಾನಲ್ ಗಳ ಪ್ರಭಾವದಿಂದ ಶ್ರೀಮಂತ ತೇವ ಕೃಷಿಯಿಂದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
೩೦ ದೇವಾಲಯಗಳು ಮರಳಿನಲ್ಲಿ ಅಡಗಿದೆ, ಆದರೆ ಕೀರ್ತಿ ನಾರಾಯಣ ದೇವಸ್ಥಾನವನ್ನು ಮಾತ್ರ ಯಶಸ್ವಿಯಾಗಿ, ಉತ್ಖನನ ಪ್ರಕ್ರಿಯೆಯಿಂದ ಹೊರತೆಗೆಯಲಾಗಿದೆ. ಮರಳು ಮೂಲಕ ತೆರೆದ ಅತ್ಯಂತ ಭವ್ಯವಾದ ದೇವಾಲಯ ವೈಧ್ಯನಾಥೇಶ್ವರ ಲಿಂಗದ್ದು. ಕಳೆದ ಶತಮಾನದ ಆರಂಭದಲ್ಲಿ ಎರಡು ದೇವಾಲಯಗಳು ಆನಂದೇಶ್ವರ ಮತ್ತು ಗೌರಿ ಶಂಕರ, ಇವನ್ನು ಅಗೆದು ತೆಗೆಯಲಾಯಿತು.
ನಾಲ್ಕು ತುಣುಕು ದಾಖಲೆಗಳು ಪಟಾಲೇಶ್ವರ ದೇವಾಲಯದ ಹೊರಭಾಗದಲ್ಲಿ ಕಾಣಬಹುದು.
ಧನ್ಯವಾದಗಳು.
GIPHY App Key not set. Please check settings