in

ಹತ್ತಿ ಬಟ್ಟೆ ಬೇಕು ಅನ್ನುವವರು ಹತ್ತಿ ಬೆಳೆಯ ಬಗ್ಗೆ ತಿಳಿಯಬೇಕು

ಹತ್ತಿ ಬೆಳೆ
ಹತ್ತಿ ಬೆಳೆ

ಹತ್ತಿ ಗಾಸಿಪಿಯಮ್ ಜಾತಿಯ ಗಿಡಗಳ ಬೀಜದ ಸುತ್ತಲು ಬೆಳೆಯುವ ಮೃದು ನಾರು. ಗಾಸಿಪಿಯಮ್ ಗಿಡಗಳು ಅಮೇರಿಕ, ಭಾರತ ಮತ್ತು ಆಫ್ರಿಕಗಳ ಮೂಲದವು. ಆದರೆ ಇಂದು ಪ್ರಪಂಚದಾದ್ಯಂತ ಸಾಗುವಳಿಗೆ, ಮೂಲತಃ ಅಮೇರಿಕ ಖಂಡದ ಗಾಸಿಪಿಯಮ್ ಹಿರ್ಸುಟಮ್ ಮತ್ತು ಗಾಸಿಪಿಯಮ್ ಬಾರ್ಬಡೆನ್ಸ್ ತಳಿಗಳು ಉಪಯೋಗಿಸಲ್ಪಡುತ್ತವೆ. ಹತ್ತಿಯ ನಾರಿನಿಂದ ಸೆಣೆದ ದಾರದಿಂದ ಮೃದುವಾದ, ಗಾಳಿ ತೂರಬಲ್ಲ ಬಟ್ಟೆ ತಯಾರಿಸಲಾಗುತ್ತದೆ. ಹತ್ತಿ ನಾರು ಪರಿಷ್ಕರಣೆಯ ನಂತರ ಶುದ್ಧ ಸೆಲ್ಲ್ಯುಲೊಸ್ ಮಾತ್ರ ಉಳಿಯುತ್ತದೆ. ಈ ಸೆಲ್ಲ್ಯುಲೊಸ್‍ನ ರಚನೆ ಹತ್ತಿಗೆ ಅದರ ತ್ರಾಣ ಮತ್ತು ಹೀರುವಿಕೆಯನ್ನು ನೀಡುತ್ತದೆ. ಹತ್ತಿ ಪ್ರಪಂಚದಲ್ಲಿ ಬಟ್ಟೆಗಾಗಿ ಅತ್ಯಂತ ಹೇರಳವಾಗಿ ಉಪಯೋಗಿಸಲ್ಪಡುವ ನೈಸರ್ಗಿಕ ಪದಾರ್ಥ.

ವಿಶ್ವದಲ್ಲಿ ಒಟ್ಟು ೩೯ ಹತ್ತಿ ಪ್ರಜಾತಿಗಳಿದ್ದರೂ, ಬಟ್ಟೆ ಕೈಗಾರಿಕೆಗೆ ಸರಿಹೊಂದುವ ಹತ್ತಿ ಪ್ರಜಾತಿಗಳು ಕೇವಲ ೪.

ಇದು ಮೂಲತಃ ಭಾರತ ಉಪಖಂಡದ ವಾಯವ್ಯ ಪ್ರದೇಶದ್ದು. ಇದು ಇಂದಿಗೂ ಇಲ್ಲಿ ವಾರ್ಷಿಕ ಬೆಳೆ. ಹರಪ್ಪ ಹಾಗೂ ಸಿಂಧೂನದಿ ತೀರದ ಸಭ್ಯತೆಯ ಕಾಲದಲ್ಲಿ, ಇದು ಅತ್ಯಂತ ಭಾರಿ ಪ್ರಮಾಣದಲ್ಲಿದ್ದಿತೆಂಬುದು ತಜ್ಞರ ಅಭಿಪ್ರಾಯ. ಕ್ರಿ.ಪೂ. ೨೦ನೇ ಶತಮಾನದಲ್ಲೇ ಪೂರ್ವ ಆಫ್ರಿಕದ ನ್ಯೂಬಿಯದ ’ಮೆರೋ’ ಜನಸಮುದಾಯ ಇದರಿಂದ ಹತ್ತಿಬಟ್ಟೆಗಳನ್ನು ತಯಾರಿಸುವಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದರು. ೯ನೇ ಶತಮಾನದಲ್ಲಿ ನೈಜೀರಿಯ ಕೂಡ ಹತ್ತಿ ಸಂಬಂಧದ ಉದ್ಯೋಗದಲ್ಲಿ ಮುಂದಿತ್ತು.

ಹತ್ತಿ ಬಟ್ಟೆ ಬೇಕು ಅನ್ನುವವರು ಹತ್ತಿ ಬೆಳೆಯ ಬಗ್ಗೆ ತಿಳಿಯಬೇಕು
ಹತ್ತಿ ಬೆಳೆ

ಅಮೆರಿಕದಲ್ಲಿ ಬೆಳೆದ ಹತ್ತಿ ಬೆಳೆಯ ಸುಮಾರು ಪಾಲು, ಅಲ್ಲಿನ ಗುಲಾಮ ಕೂಲಿಗಾರರ ಸಹಾಯದಿಂದ ಆಗುತ್ತಿತ್ತು. ಇದು ‘ಜಿನ್ನಿಂಗ್ ಯಂತ್ರ’ ದ ಆವಿಷ್ಕಾರದ ತರುವಾಯ, ಇನ್ನೂ ಹೆಚ್ಚಾಯಿತು. ಇದರಿಂದ ಮಾರುಕಟ್ಟೆಯಲ್ಲಿ ಮಾರಾಟಾವಾಗುತ್ತಿದ್ದ ಹತ್ತಿಬಟ್ಟೆಗಳ ಪಾಲು ಮೊದಲು ಶೇ. ೫ % ಇದ್ದದ್ದು ಶೇ ೭೫ % ಕ್ಕೆ ಏರಿತು. ೧೮೩೫ರಲ್ಲಿ, ಅಮೆರಿಕದ ದಕ್ಷಿಣ ಪ್ರಾಂತ್ಯಗಳು ಗುಲಾಮಗಿರಿಯನ್ನು ಬಹಿಷ್ಕರಿಸಿದ್ದವು. ಆದರೆ, ಅಮೆರಿಕದ ಆಗ್ನೇಯ ರಾಜ್ಯಗಳಲ್ಲಿ ಇದರ ಪ್ರಭಾವ ಮುಂದುವರೆಯಿತು. ೧೮೫೦ರಲ್ಲಿ, ಇಂಗ್ಲೆಂಡಿಗೆ ಸರಬರಾಜುಮಾಡುತ್ತಿದ್ದ ೮೦% ಹತ್ತಿ ರಫ್ತು , ಈ ರಾಜ್ಯಗಳಿಂದ ಹೋಗುತ್ತಿತ್ತು. ಆದರೆ ೧೯೬೫ರ, ಅಮೇರಿಕದ ಅಂತಃಕಲಹದ ನಂತರ, ಗುಲಾಮ ಕೂಲಿಗಾರರಿಗೆ ಸ್ವಾತಂತ್ರ್ಯ ಬಂದಿತು. ಈ ಕಾರಣಗಳಿಂದಾಗಿ ಹತ್ತಿ- ಬೆಳೆ, ಸ್ವಲ್ಪ ಕಾಲ ನಿಂತೇ ಹೋಯಿತು. ನಂತರ, ಕೂಲಿಗಾರರ ಸಹಾಯವಿಲ್ಲದೆ, ಯಂತ್ರಗಳ ಮುಖೇನ ಹತ್ತಿ ಬಿಡಿಸುವುದರಿಂದ ಹಿಡಿದು, ದಾರ ನೂಲುವ, ಬಟ್ಟೆತಯಾರಿಸುವ ಎಲ್ಲಾ ಪರಿಕ್ರಮಗಳೂ ಯಂತ್ರದ ಮೂಲಕವೇ ನಡೆಯುವ ಪರಿಪಾಠ ಪ್ರಾರಂಭವಾಯಿತು. ಈ ಎಲ್ಲಾ ಬೆಳವಣಿಗೆಗಳೂ ಇಂಗ್ಲೆಂಡಿನ ಹತ್ತಿ ಕಾರ್ಖಾನೆಗಳಿಗೆ ಸರಬರಾಜುಮಾಡುವ ಕಚ್ಚಾಹತ್ತಿಯ ಪ್ರಮಾಣವನ್ನು ನಿಯಂತ್ರಿಸಿದವು.

ಹತ್ತಿಯು ಪ್ರಮುಖವಾಗಿ ಬಟ್ಟೆಯ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ. ಹೆಚ್ಚು ಹೀರುವಿಕೆಯ ಟೆರಿಕ್ಲಾತ್, ಜೀನ್ಸ್ ಅನ್ನು ತಯಾರಿಸುವ ಡೆನಿಮ್ ಬಟ್ಟೆ, ಕಾರ್ಡುರಾಯ್, ಇತ್ಯಾದಿ ಪ್ರಕಾರಗಳಲ್ಲಿ ಹತ್ತಿಯನ್ನು ಉಪಯೋಗಿಸಲಾಗುತ್ತದೆ. ಕೃತಕ ಪದಾರ್ಥಗಳಾದ ರೆಯಾನ್ ಮತ್ತು ಪಾಲಿಯೆಸ್ಟರ್ಗಳ ಜೊತೆಗೂ ಹತ್ತಿಯನ್ನು ಮಿಶ್ರಿಸಿ ಬಟ್ಟೆಯನ್ನು ತಯಾರಿಸುತ್ತಾರೆ. ಆಸ್ಪತ್ರೆಗೆ ಬೇಕಾಗುವ ಬ್ಯಾಂಡೇಜ್ ಹತ್ತಿ, ಬ್ಯಾಂಡೇಜ್ ಕಟ್ಟಲು ಬಳಸುವ ಸರ್ಜಿಕಲ್ ಹತ್ತಿ ಬಟ್ಟೆ, ಹೆಣ್ಣುಮಕ್ಕಳು ಬಳಸುವ ‘ಸ್ಯಾನಿಟರಿವೇರ್‍ಗಳು’ ಹತ್ತಿಯ ಇತರ ಉಪಯೋಗಗಳು.

ಬಟ್ಟೆ ಕೈಗಾರಿಕೆಯಲ್ಲದೆ ಮೀನು ಜಾಲ, ಕಾಫಿ ಫಿಲ್ಟರ್, ಸಿಡಿಮದ್ದುಗಳ ತಯಾರಿಕೆಯಲ್ಲೂ ಹತ್ತಿಯ ಉಪಯೋಗವಿದೆ. ಹಾಸಿಗೆಗಳನ್ನು ತುಂಬಲು ಕೂಡ ಹತ್ತಿಯನ್ನು ಉಪಯೋಗಿಸಲಾಗುತ್ತದೆ.

ಹತ್ತಿ ಬಟ್ಟೆ ಬೇಕು ಅನ್ನುವವರು ಹತ್ತಿ ಬೆಳೆಯ ಬಗ್ಗೆ ತಿಳಿಯಬೇಕು
ಹತ್ತಿಯ ಬೀಜಗಳಿಂದ ಅಡಿಗೆ ಎಣ್ಣೆ

ಹತ್ತಿಯ ಬೀಜಗಳಿಂದ ಅಡಿಗೆ ಎಣ್ಣೆಯನ್ನು ತಯಾರಿಸಲಾಗುತ್ತದೆ. ಎಣ್ಣೆ ತಯಾರಕೆಯಿಂದ ಉಳಿಯುವ ಹಿಂಡಿಯನ್ನು ಪ್ರಾಣಿಗಳ ಆಹಾರವಾಗಿ ಬಳಸಲಾಗುತ್ತದೆ. ಹತ್ತಿ ಕಾರ್ಖಾನೆಗಳಲ್ಲಿ ಶೇಖರವಾಗುವ ತೀರ ನುಸಿಯಂತಹ ಪುಡಿಯಿಂದ ಬಯೋಗ್ಯಾಸ್ ತಯಾರಿಸಬಹುದು. ತಿನ್ನಲು ಯೋಗ್ಯವಾದ ಅಣಬೆಗಳನ್ನು ಬೆಳೆಸಲು ಕೂಡ ಹತ್ತಿಯ ಉಪಯೋಗವಿದೆ. ಪಾರ್ಟಿಕಲ್ ಬೋರ್ಡ್‍, ವಿಧ-ವಿಧದ ಕಾಗದಗಳು, ಪ್ಯಾಕಿಂಗ್ ಮಾಡಲು ದಪ್ಪಕಾಗದ, ಕಾರುಗೇಟೆಡ್ ಪೆಟ್ಟಿಗೆಗಳು, ಮುಂತಾದವುಗಳ ತಯಾರಿಕೆಯಲ್ಲೂ ಹತ್ತಿಯ ಬಳಕೆಯಿದೆ.

ಹತ್ತಿಯು ಭಾರತದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅನಾದಿಕಾಲದಿಂದಲೂ ಹತ್ತಿ ಭಾರತದ ಜನಜೀವನದಲ್ಲಿ ಹಾಸು-ಹೊಕ್ಕಾಗಿದೆ. ಭಾರತದಲ್ಲೇ ಇದನ್ನು ತಮ್ಮ ಜೀವನಾವಲಂಬನೆಗೆ ಆರಿಸಿಕೊಂಡ ಜನರ ಸಂಖ್ಯೆ -೬೦ ಮಿಲಿಯನ್ ಎಂದು ಅಂದಾಜು ಮಾಡಲಾಗಿದೆ. ನಮ್ಮ ದೇಶದ ಹತ್ತಿಯನ್ನು “ದೇಸಿ ಹತ್ತಿ” ಎಂದು ಕರೆಯುತ್ತಾರೆ. ಇದು ಗಾ. ಆರ್ಬೊರಿಯಮ್ ಮತ್ತು ಗಾ. ಹರ್ಬೆಸಿಯಮ್ ಪ್ರಜಾತಿಯ ಹತ್ತಿಗಳನ್ನು ಒಳಗೊಂಡಿದೆ. ಇದರ ತಂತುಗಳು ಚಿಕ್ಕದಾಗಿಯೂ ಸ್ವಲ್ಪ ಒರಟಾಗಿಯೂ ಇರುತ್ತವೆ. ತಂತು-ಶಕ್ತಿಯೂ ಕಡಿಮೆ. ಆದ್ದರಿಂದ ತಯಾರಾದ ಬಟ್ಟೆಗಳು ಒರಟಾಗಿರುವುದು ಸ್ವಾಭಾವಿಕ.

ಪ್ರಾಚೀನ ಭಾರತದ ಹತ್ತಿ ತಂತ್ರಜ್ಞಾನ ಕೌಶಲ ವಿಶ್ವಪ್ರಸಿದ್ಧವಾಗಿತ್ತು. ಯುರೋಪ್ನ ಸಮುದ್ರನಾವಿಕರು ನಮ್ಮ ದೇಶದ ಹತ್ತಿಬಟ್ಟೆಗಳ ಮತ್ತು ಕರಕುಶಲ ವಸ್ತುಗಳ ಬಗ್ಗೆ ತಿಳಿದುಕೊಂಡರು. ಮೊಘಲರ ಕಾಲದಲ್ಲಿ ಹತ್ತಿ – ವಸ್ತ್ರೋದ್ಯಮ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ೧೮೨೮ರಲ್ಲಿ, ಈಸ್ಟ್ ಇಂಡಿಯ ಕಂಪನಿಯ ಕೆಲವು ಅಧಿಕಾರಿಗಳು ಹತ್ತಿಯ ಬೀಜಗಳನ್ನು ಧಾರವಾಡದ ರೈತರಿಗೆ ತಲುಪಿಸಿದರು. ಆ ಹತ್ತಿ ತಳಿಗಳು- ಬೊರ್ಬೊನ್ ಎಂಬ ಬಹುವಾರ್ಷಿಕ ಮರಹತ್ತಿ. ಮುಂದೆ ನ್ಯೂ ಆರ್ಲಿಯನ್ಸ್ ಮತ್ತು ಜಾರ್ಜಿಯದಿಂದ ಆಗಮಿಸಿದ ಇನ್ನೆರಡು ತಳಿಗಳು ಮುಂದೆ ಧಾರವಾಡ್ ಅಮೆರಿಕನ್-೧ ಹತ್ತಿಗಳೆಂದು ಹೆಸರುವಾಸಿಯಾದವು. ಇದೇ ರೀತಿ, ೧೯೦೬ರಲ್ಲಿ ಇಂಡೋಚೈನದಿಂದ ಹಡಗಿನಲ್ಲಿ ತಂದ ಹತ್ತಿಬೀಜಗಳನ್ನು ಮದ್ರಾಸಿನ ತರಿಭೂಮಿಯಲ್ಲಿ ಬಿತ್ತಿ ಸಾಗುವಳಿಮಾಡಲಾಯಿತು. ಇದನ್ನು “ಕ್ಯಾಂಬೋಡಿಯ ಹತ್ತಿ”ಯೆಂದು ಕರೆಯಲಾಯಿತು. ನಮ್ಮ ದೇಶಕ್ಕೆ ಚೆನ್ನಾಗಿ ಹೊಂದಿಕೊಂಡ ಈ ಹತ್ತಿ ತಳಿಯನ್ನು ಉಪಯೋಗಿಸಿಕೊಂಡು, ಮಧ್ಯ ಪ್ರದೇಶ, ಗುಜರಾತ್ನ ಕಾಥೆವಾಡ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಇದನ್ನು ವಿಸ್ತರಿಸಲಾಯಿತು. ಇದೇ ತಳಿ, ಮದ್ರಾಸ್ ರಾಜ್ಯದ ಪ್ರಖ್ಯಾತ ಎಮ್.ಸಿ.ಯು. ಹತ್ತಿಯ ಶ್ರೇಣಿಗೆ ಪ್ರೇರಣೆಯಾಗಿ ಎಮ್.ಸಿ.ಯು-೫ ಇಂದಿಗೂ ಪ್ರಚಾರದಲ್ಲಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚಾಮರಾಜ ಒಡೆಯರ್

ತಲಕಾಡಿನ ಬಗ್ಗೆ ಇನ್ನೂ ತಿಳಿಯುವ ವಿಶೇಷತೆ ಇದೆ

ವೀರ ಕೇಸರಿ ಪೃಥ್ವಿರಾಜ್ ಚೌಹಾಣ್

ವೀರ ಕೇಸರಿ ಪೃಥ್ವಿರಾಜ್ ಚೌಹಾಣ್