ಉತ್ತರ ಕುಮಾರ
ಮಹಾಭಾರತ ಮಹಾಕಾವ್ಯದಲ್ಲಿ, ಉತ್ತರ ಮತ್ಸ್ಯ ರಾಜ್ಯದ ರಾಜಕುಮಾರ ಮತ್ತು ವಿರಾಟ ರಾಜನ ಪುತ್ರ, ಇವರ ಆಸ್ಥಾನದಲ್ಲೇ ಪಾಂಡವರು ತಮ್ಮ ವನವಾಸದ ಅವಧಿಯಲ್ಲಿ ಗೌಪ್ಯತೆಯಲ್ಲಿ ಒಂದು ವರ್ಷ ಕಳೆದರು. ಅವನು ಉತ್ತರೆಯ ಸಹೋದರ ಮತ್ತು ಶ್ರೀಲಾಜನ್ ರಾಜನ ಮಗಳು ಕೀಸವಿಯ ಪತಿ. ಪಾಂಡವರ ಅಜ್ಞಾತವಾಸದ ಕೊನೆಯ ದಿನಗಳಲ್ಲಿ ದುರ್ಯೋಧನನು ಮತ್ಸ್ಯ ರಾಜ್ಯದ ಮೇಲೆ ದಾಳಿ ಮಾಡಿದಾಗ ಉತ್ತರನು ಬೃಹನ್ನಳೆಯೊಂದಿಗೆ ದುರ್ಯೋಧನನ ಸೇನೆಯನ್ನು ಎದುರಿಸಲು ಹೋಗಿದ್ದನು. ದ್ರೌಪದೀ ಸ್ವಯಂವರ ಕಾಲದಲ್ಲಿ ಈತ ಪಾಂಚಾಲ ದೇಶಕ್ಕೂ ಹೋಗಿದ್ದ. ಭೂಮಿಂಜಯ, ವಿರಾಟಪುತ್ರ, ಮತ್ಸ್ಯಪುತ್ರ ಎಂಬ ಹೆಸರುಗಳೂ ಈತನಿಗೆ ಇದ್ದವು. ಕೌರವರು ಉತ್ತರದ ದಿಕ್ಕಿನಲ್ಲಿ ಗೋಹರಣ ಮಾಡಿದ್ದನ್ನು ತಿಳಿದ ಉತ್ತರ ಕುಮಾರ ಅವರ ಮೇಲೆ ಯುದ್ಧಕ್ಕೆ ಹೋಗಲು ತನಗೆ ಸರಿಯಾದ ಸಾರಥಿಯಿಲ್ಲವೆಂದು ಚಡಪಡಿಸುತ್ತಾನೆ. ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನನ್ನು ಸಾರಥಿಯನ್ನಾಗಿ ನೇಮಿಸಿಕೊಳ್ಳಬೇಕೆಂದು ಸೈರಂಧ್ರಿ ಸೂಚಿಸುತ್ತಾಳೆ. ಬೃಹನ್ನಳೆಯನ್ನು ಸಾರಥಿಯಾಗೆಂದು ಕೇಳಿದಾಗ ಬೇಕೆಂದೇ ಬೃಹನ್ನಳೆ ಯುದ್ಧಭೂಮಿಯಲ್ಲಿ ಸಾರಥಿಯಾಗಲು ತನ್ನ ಅಸಮರ್ಥತೆಯನ್ನು ಹೇಳಿಕೊಂಡಾಗ ಉತ್ತರ ಕುಮಾರ ತನ್ನಲ್ಲಿ ಇಲ್ಲದ ಪೌರುಷವನ್ನು ಅರಮನೆಯ ಹೆಂಗೆಳೆಯರ ಮುಂದೆ ಕೊಚ್ಚಿಕೊಳ್ಳುವುದು ಮಹಾಭಾರತದಲ್ಲಿ ಒಂದು ಸ್ವಾರಸ್ಯ ಪ್ರಸಂಗ. ಈ ಪ್ರಸಂಗವನ್ನು ಕುಮಾರವ್ಯಾಸ ತನ್ನ ಗದುಗಿನ ಭಾರತದಲ್ಲಿ ರಸಪೂರ್ಣವಾಗಿ ಚಿತ್ರಿಸಿದ್ದಾನೆ. ಅನಂತರ ಬೃಹನ್ನಳೆಯ ಸಾರಥ್ಯವನ್ನು ಪಡೆದ ಉತ್ತರ ಕುಮಾರ ಯುದ್ಧ ಭೂಮಿಯನ್ನು ನೋಡಿದ ಕೂಡಲೇ ಹೆದರಿ ನಿಲ್ಲುತ್ತಾನೆ. ಆತನಿಗೆ ಧೈರ್ಯ ತುಂಬಿ ಅರ್ಜುನ ತಾನೇ ಯುದ್ಧ ಮಾಡುತ್ತಾನೆ. ಆ ಸಮಯದಲ್ಲಿ ಉತ್ತರಕುಮಾರ ಅರ್ಜುನನ ಸಾರಥಿಯಾಗಿ ರಥವನ್ನು ನಡೆಸುತ್ತಾನೆ. ಮುಂದೆ ಮಹಾಭಾರತ ಯುದ್ಧದಲ್ಲಿ ಶಲ್ಯನಿಂದ ಹತನಾಗುತ್ತಾನೆ. ಶೌರ್ಯವಿಲ್ಲದೆ ಬಡಾಯ ಕೊಚ್ಚುವವರನ್ನು ಸಾಮಾನ್ಯವಾಗಿ ಉತ್ತರಕುಮಾರನೆನ್ನುವುದು ರೂಢಿ. ಉತ್ತರನ ಪೌರುಷ ಒಲೆಯ ಮುಂದೆ, ನಿನ್ನ ಪೌರುಷ ಎಲೆಯ ಮುಂದೆ ಎನ್ನುವುದು ಗಾದೆ ಮಾತಾಗಿದೆ.
ಉತ್ತರಾ
ಉತ್ತರಾ(ವಿರಾಟರಾಜನ ಮಗಳು): ಉತ್ತರಾ ವಿರಾಟರಾಜನ ಮಗಳು. ಅಭಿಮನ್ಯುವಿನ ಹೆಂಡತಿ. ಉತ್ತರಕುಮಾರನ ತಂಗಿ. ಅರ್ಜುನ ಸುಭದ್ರೆಯರ ಸೊಸೆ. ಪರೀಕ್ಷಿತ್ ರಾಜನ ತಾಯಿ. ತ್ರಿಗರ್ತರು ವಿರಾಟರಾಜನ ಗೋವುಗಳನ್ನು ಹಿಡಿಯಲು ಅವರಿಗೆ ಸಹಾಯಕರಾಗಿ ಬಂದ ಕೌರವ ಸೇನೆಯನ್ನು ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನ ಎದುರಿಸಿದ. ಸಂತೋಷಗೊಂಡ ವಿರಾಟರಾಜ ಅರ್ಜುನನಿಗೆ ಉತ್ತರೆಯನ್ನು ಕೊಡಲು ಹೋದಾಗ ಅದುವರೆಗೂ ತನ್ನ ಮಗಳಂತೆ ನೋಡಿದ ಉತ್ತರೆಯನ್ನು ಮದುವೆಯಾಗಲು ಅರ್ಜುನ ನಿರಾಕರಿಸಿ ಆಕೆಯನ್ನು ತನ್ನ ಮಗ ಅಭಿಮನ್ಯುವಿಗೆ ತಂದುಕೊಂಡ. ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ ಪದ್ಮವ್ಯೂಹ ಭೇದಿಸಿ ಹೊರಬರಲಾರದೆ ಅಭಿಮನ್ಯು ಮಡಿದ. ಬಸುರಿಯಾಗಿದ್ದ ಉತ್ತರೆ ವಿಧವೆಯಾದಳು. ಕುರುಕ್ಷೇತ್ರ ಯುದ್ಧಮುಗಿದಾಗ ಪಾಂಡವರ ಮೇಲಿನ ಸೇಡಿನ ಕಿಡಿ ಸಿಡಿದು ಅಶ್ವತ್ಥಾಮ ಬ್ರಹ್ಮಶಿರಾಸ್ತ್ರವನ್ನು ಪ್ರಯೋಗಿಸಿದ. ಅದು ಪಾಂಡವರ ಸಂತತಿಯನ್ನು ನಾಶಮಾಡುವುದೆಂದು ತಿಳಿದ ಶ್ರೀಕೃಷ್ಣ ಅಸ್ತ್ರವನ್ನು ಹಿಂದಕ್ಕೆ ಕರೆಯುವಂತೆ ಕೋರಿದಾಗ ಅಶ್ವತ್ಥಾಮ ನಿರಾಕರಿಸಿದ. ಆದರೂ ಕೃಷ್ಣನ ಕೃಪೆಯಿಂದ ಮಗು ಬದುಕಿತು. ಪರೀಕ್ಷಿತ್ ಎಂಬ ಹೆಸರಿನಿಂದ ಖ್ಯಾತವಾಗಿ ಕುರುಸಂತತಿಯ ಕುಡಿಯಾಗಿ ವಂಶವನ್ನು ಬೆಳೆಸಿತು.
ಪರೀಕ್ಷಿತ
ಮಹಾಭಾರತ ಮಹಾಕಾವ್ಯದಲ್ಲಿ ಹಸ್ತಿನಾಪುರದ ರಾಜ ಯುಧಿಷ್ಠಿರನ ಉತ್ತರಾಧಿಕಾರಿ ಪರೀಕ್ಷಿತ. ಇವನನ್ನು ಕುರುವಂಶದ ರಾಜನೆಂದು ಕರೆಯಲಾಗುತ್ತಿತ್ತು.
ಪರೀಕ್ಷಿತನು ಅರ್ಜುನನ ಮಗನಾದ ಅಭಿಮನ್ಯು ಮತ್ತು ಮತ್ಸ್ಯ ರಾಜಕುಮಾರಿ ಉತ್ತರೆಯ ಮಗನು. ಕುರುಕ್ಷೇತ್ರ ಯುದ್ಧದ ನಂತರವಷ್ಟೇ ಇವನ ಜನನವಾಗುತ್ತದೆ. ಅಭಿಮನ್ಯುವನ್ನು ಕೌರವರು ಮೋಸದಿಂದ ನಿರ್ದಯವಾಗಿ ಕುರುಕ್ಷೇತ್ರ ಯುದ್ಧದಲ್ಲಿ ಕೊಂದಾಗ ಉತ್ತರೆ ಇನ್ನೂ ಗರ್ಭಿಣಿ. ಇದರ ನಂತರ ಅಶ್ವತ್ಥಾಮನು ಗರ್ಭದಲ್ಲಿರುವ ಮಗುವನ್ನು ಕೊಲ್ಲುವ ಸಲುವಾಗಿ ಬ್ರಹ್ಮಾಸ್ತ್ರವನ್ನು ಉಪಯೋಗಿಸಿದಾಗ ಅಭಿಮನ್ಯುವಿನ ಸೋದರಮಾವನಾದ ಕೃಷ್ಣನು ಮಗುವನ್ನು ಉಳಿಸುತ್ತಾನೆ.
ಕಲಿ ಯುಗದ ಪ್ರಾರಂಭವಾಗಿ ಕೃಷ್ಣನ ಅವತಾರ ಮತ್ತು ಪಾಂಡವರ ಕಣ್ಮರೆಯಾದ ಬಳಿಕ ಯುವ ಪರೀಕ್ಷಿತನಿಗೆ ರಾಜ್ಯಭಾರದ ಹೊರೆ. ಕೃಪಾಚಾರ್ಯರ ನೇತೃತ್ವದಲ್ಲಿ ಮೂರು ಅಶ್ವಮೇಧ ಯಜ್ಞಗಳನ್ನು ಪೂರೈಸುತ್ತಾನೆ.
ಈತ ಉತ್ತರನ ಮಗಳಾದ ಭದ್ರವತಿ ಅಥವಾ ಇರಾವತಿ ಎಂಬ ತರುಣಿಯನ್ನು ಮದುವೆಯಾಗಿ ಜನಮೇಜಯ,ಶ್ರುತಸೇನ,ಉಗ್ರಸೇನ ಮತ್ತು ಭೀಮಸೇನ ಎಂಬ ನಾಲ್ವರು ಪುತ್ರರನ್ನು ಪಡೆದ.
ಒಮ್ಮೆ ಬೇಟೆಗ ಹೋಗಿದ್ದಾಗ ಶಮೀಕಮುನಿಯ ಆಶ್ರಮವನ್ನು ಹೊಕ್ಕ. ಸಮಾಧಿಸ್ಥನಾಗಿದ್ದ ಮುನಿ ಈತನನ್ನು ಸತ್ಕರಿಸಲಿಲ್ಲವಾದ ಕಾರಣ,ಕೋಪಗೊಂಡು ಸತ್ತು ಬಿದ್ದಿದ್ದ ಒಂದು ಹಾವನ್ನು ಮುನಿಯ ಕೊರಳಿಗೆ ಹಾಕಿ ಹೊರಟುಹೋದ. ನಂತರ ಅಲ್ಲಿಗೆ ಬಂದ ಮುನಿಪುತ್ರ ಶೃಂಗಿ ಕ್ರೋಧವಶನಾಗಿ “ನಮ್ಮ ತಂದೆಯ ಕೊರಳಿಗೆ ಸತ್ತ ಹಾವನ್ನು ಹಾಕಿ ಅಪಮಾನ ಮಾಡಿದವನು ಇಂದಿನಿಂದ ಏಳು ದಿನಗಳೊಳಗಾಗಿ ಸರ್ಪದಂಶದಿಂದ ಸಾಯಲಿ” ಎಂದು ಶಪಿಸಿದನು.ಮುನಿಶಾಪದಿಂದಾಗಿ ತನ್ನ ಸಾವನ್ನು ಎದುರಿಸಿದ ಪರೀಕ್ಷಿತನು ತನ್ನ ಪುತ್ರ ಜನಮೇಜಯನಿಗೆ ಸಿಂಹಾಸನವನ್ನು ಬಿಟ್ಟುಕೊಟ್ಟು. ಸರ್ಪಗಳಿಗೆ ಅಗಮ್ಯವಾದ ರೀತಿಯಲ್ಲಿ ಸಮುದ್ರದ ನಡುವೆ ಒಂದು ಎತ್ತರವಾದ ಸೌಧವನ್ನು ನಿರ್ಮಿಸಿ, ತನ್ನ ಕೊನೆ ದಿನಗಳನ್ನು ಭಾಗವತ ಪುರಾಣಗಳನ್ನು ಕೇಳುವುದರಲ್ಲಿ ಕಳೆದನು.ನಿರೀಕ್ಷೆಯಂತೆ ಸರ್ಪರಾಜ ತಕ್ಷಕನಿಂದ ಪರೀಕ್ಷಿತನ ಮರಣವಾಯಿತು.
ಆಂಗೀರಸ
ಆಂಗೀರಸ ಒಬ್ಬ ವೈದಿಕ ಋಷಿ. ಅಥರ್ವನ ಮುನಿಯೊಡನೆ ನಾಲ್ಕನೇ ವೇದವಾದ ಅಥರ್ವಣವೇದವನ್ನು ರಚಿಸಿದಾತ. ಈತ ಸಪ್ತರ್ಷಿಗಳಲ್ಲಿ ಒಬ್ಬ. ಅಂಗಿರಸಮಹರ್ಷಿ. ದೇವತೆಗಳಿಗೆ ಪುರೋಹಿತ. ಯಾಗಗಳಲ್ಲಿ ಇವನ ಪಾತ್ರ ಹಿರಿದು. ಬ್ರಹ್ಮಮಾನಸ ಪುತ್ರನೆಂದೂ ಅಗ್ನಿಯ ತಂದೆಯೆಂದೂ ಅಗ್ನಿಯ ಮಗಳಾದ ಆಗ್ನೇಯಿಯ ಪುತ್ರನೆಂದೂ ಈತನ ಕುಲ ಗೋತ್ರದ ವಿಚಾರವಾಗಿ ನಾನಾ ಅಭಿಪ್ರಾಯಗಳಿವೆ. ಸತಿ ಎಂಬ ಪತ್ನಿಯಲ್ಲಿ ಅಥರ್ವಾಂಗಿರಸರನ್ನು ಪಡೆದ. ಒಮ್ಮೆ ಅಗ್ನಿ ಕೋಪಗೊಂಡು ಎಲ್ಲೋ ಅವಿತುಕೊಂಡಾಗ ಬ್ರಹ್ಮ ಅವನ ಸ್ಥಾನಕ್ಕೆ ಅಂಗಿರಸನನ್ನು ನಿಯಮಿಸಿದನೆಂದೂ ಕೊಂಚ ಕಾಲದ ಅನಂತರ ಅಗ್ನಿ ಪಶ್ಚಾತ್ತಾಪದಿಂದ ಹಿಂತಿರುಗಿದಾಗ ಅವನ ಸ್ಥಾನವನ್ನು ಬಿಟ್ಟುಕೊಟ್ಟನೆಂದೂ ಮಹಾಭಾರತದ ವನಪರ್ವದಲ್ಲಿ ಹೇಳಿದೆ.
ಧನ್ಯವಾದಗಳು.
GIPHY App Key not set. Please check settings