in ,

ನಾಡಪ್ರಭು ಕೆಂಪೇಗೌಡರು

ಬೆಂಗಳೂರು ಕಟ್ಟಿದ ದೊರೆ ಕೆಂಪೇಗೌಡರು. ಇವತ್ತು ಬೆಂಗಳೂರು ಅತ್ಯಂತ ಹೆಚ್ಚು ಹೆಚ್ಚು ಜನರನ್ನು ತನ್ನತ್ತ ಸೆಳೆಯುತ್ತಿದೆ. ಉದ್ಯೋಗ ಅರಸಿ ಬರುವವರು ಹೆಚ್ಚು ಮಂದಿ. ನಾಡಪ್ರಭು ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳಿಗೆ 1510ರಲ್ಲಿ ಯಲಹಂಕದಲ್ಲಿ ಜನಿಸಿದ ಮೊದಲನೆಯ ಕೆಂಪೇಗೌಡರು.
ಕುಲದೇವತೆಯಾದ ಕೆಂಪಮ್ಮ ಹಾಗೂ ಭೈರವರ ಅನುಗ್ರಹದಿಂದ ಜನಿಸಿದ ಕಾರಣ ಕೆಂಪನಂಜೇಗೌಡ ದಂಪತಿಗಳು ಮಗುವಿಗೆ ಕೆಂಪ, ಕೆಂಪಯ್ಯ, ಕೆಂಪಣ್ಣ ಎಂಬ ಹೆಸರಿನಿಂದ ಕರೆಯುತ್ತಿರುತ್ತಾರೆ. ಬಾಲಕ ಕೆಂಪಯ್ಯನನ್ನು ಪ್ರಜೆಗಳು ಗೌರವದಿಂದ, ಚಿಕ್ಕರಾಯ, ಕೆಂಪರಾಯ ಎಂದು ಕರೆಯುತ್ತಿದ್ದರು.

ಹಿರಿಯ ಕೆಂಪೇಗೌಡರು ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ.

ಹಿರಿಯ ಕೆಂಪೇಗೌಡರ ಮಗ ಇಮ್ಮಡಿ ಕೆಂಪೇಗೌಡರ ನಂತರ ಇವರ ಸಂತತಿಯವರಿಗೆ ಮಾಗಡಿ ಕೆಂಪೇಗೌಡರೆಂಬ ಹೆಸರು ಬಂದಿದೆ. ಕೆಂಪೇಗೌಡರು ನಿರ್ಮಿಸಿದ ಕೆರೆಗಳು, ದೇವಾಲಯಗಳು, ಕೋಟೆ-ಕೊತ್ತಲಗಳು ಇಂದಿಗೂ ನಮ್ಮ ಕಣ್ಣ ಮುಂದಿವೆ. ಇವರ ಕೊನೆಯ ಪೀಳಿಗೆಯವರು ಸದ್ಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿರುವ ಅರಮನೆಯಲ್ಲಿ ವಾಸಿಸುತ್ತಿದ್ದಾರೆ.

ನಾಡಪ್ರಭು ಕೆಂಪೇಗೌಡರು
ಶ್ರೀಕೃಷ್ಣದೇವರಾಯ

1509ರಲ್ಲಿ ವಿಜಯನಗರದ ಸಿಂಹಾಸನವೇರಿದ್ದ ಶ್ರೀಕೃಷ್ಣದೇವರಾಯರು ಹಲವಾರು ಯುದ್ದಗಳಲ್ಲಿ ಜಯಗಳಿಸಿ ತಮ್ಮ ಸೈನ್ಯದ ಅಸಾಧಾರಣ ಸಾಮರ್ಥ್ಯ ಹಾಗೂ ವಿಜಯನಗರದ ಸಾಮ್ರಾಜ್ಯದ ವೈಭೋಗವನ್ನು ಅನಾವರಣ ಮಾಡಲೆಂದು 1515ರಲ್ಲಿ ರಾಜಧಾನಿ ಹಂಪಿಯಲ್ಲಿ ಪ್ರಥಮ ಬಾರಿಗೆ ವಿಜಯದಶಮಿ ಉತ್ಸವವನ್ನು ಆರಂಭಿಸಿದರು. ಈ ಅಧ್ಭುತ ಸಮಾರಂಭಕ್ಕೆ ತಂದೆಯವರ ಜೊತೆ ಹೋಗಿದ್ದ ಬಾಲಕ ಕೆಂಪರಾಯನ ವಯಸ್ಸು ಆಗ ಐದು ವರ್ಷ. ಬಾಲ್ಯದಲ್ಲಿಯೇ ಚುರುಕಾಗಿದ್ದ ಕೆಂಪರಾಯನಿಗೆ ಅರಮನೆಯ ಪುರೋಹಿತರೂ, ಹಿತಚಿಂತಕರೂ ಆಗಿದ್ದ ಐಗಂಡಪುರದ ಮಾಧವಭಟ್ಟರ ಗುರುಕುಲಾಶ್ರಮದಲ್ಲಿ ಸಾಮಾನ್ಯ ವಿಧ್ಯಾರ್ಥಿಗಳ ಜೊತೆಯಲ್ಲಿಯೇ ವಿಧ್ಯಾಭ್ಯಾಸ ಮಾಡಿಸುತ್ತಾರೆ. ರಾಮಾಯಣ-ಮಹಾಭಾರತದ ಕಥೆಗಳು ಹಾಗೂ ತಮ್ಮ ವಂಶಸ್ಥರ ಪುಣ್ಯಕಾರ್ಯಗಳನ್ನು ಕೇಳಿ ಬೆಳೆದಿದ್ದ ಬಾಲಕನಿಗೆ ಸಹಜವಾಗಿಯೇ ವಿದ್ಯಾಭಾಸದ ಬಗ್ಗೆ ಗಮನವಿರುತ್ತದೆ. ಗುರುಕುಲದಲ್ಲಿ ಸಾಮಾನ್ಯ ಶಿಕ್ಷಣದ ಜೊತೆಗೆ ರಾಜೋಚಿತವಾದ ಕತ್ತಿವರಸೆ, ಕುದುರೆ ಸವಾರಿ, ಮಲ್ಲಕಾಳಗ, ರಾಜನೀತಿ, ಆರ್ಥಿಕ ತಿಳಿವಳಿಕೆಮುಂತಾದ ವಿಷಯಗಳಲ್ಲೂ ಪರಿಣತಿ ಪಡೆಯುತ್ತಾರೆ.
ಯುವಕ ಕೆಂಪರಾಯನು ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಗುರುಗಳ ಆದೇಶದಂತೆ ನಾಡಿನಾದ್ಯಂತ ಸಂಚರಿಸಿ ಲೋಕಾನುಭವ ಪಡೆದುಕೊಳ್ಳುತ್ತಾರೆ. ಗುರುಕುಲದಲ್ಲಿದ್ದಾಗ ಕೆಂಪರಾಯನಿಗೆ ಏಕಾಂಬರ ಶಾಸ್ತ್ರಿ, ಗುರು ನಂಜೇಶ ಹೀಗೆ ಹಲವು ಪಂಡಿತರ ಗೆಳೆತನವಿತ್ತು. ಇವರ ಜೊತೆಗೆ ಸಹಪಾಠಿ ವೀರಣ್ಣನ ಸ್ನೇಹವನ್ನು ಗುರುಕುಲವನ್ನು ತೊರೆದ ನಂತರವೂ ಕಾಪಾಡಿಕೊಂಡು ಬರುತ್ತಾರೆ. ಮುಂದೆ ಕೆಂಪರಾಯನು ಬೆಳೆದು ದೊಡ್ಡವನಾದಂತೆ ಕೆಂಪೇಗೌಡರೆಂಬ ಹೆಸರು ಬರುತ್ತದೆ.

ಒಮ್ಮೆ ಯುವಕರಾಗಿದ್ದ ಕೆಂಪೇಗೌಡರು ವಿಜಯದಶಮಿ ಉತ್ಸವದಲ್ಲಿ ಪಾಲ್ಗೊಂಡು ಮಲ್ಲಯುದ್ದ ಸ್ಪರ್ಧೆಯಲ್ಲಿ ಎದುರಾಳಿ ತಿರುಮಲರಾಯರನ್ನು ಸೋಲಿಸಿ ಶ್ರೀಕೃಷ್ಣ ದೇವರಾಯರಿಂದ ಮೆಚ್ಚುಗೆ ಗಳಿಸುತ್ತಾರೆ. ಅಲ್ಲಿಂದೀಚೆಗೆ ಕೆಂಪೇಗೌಡರ ಭುಜಬಲದ ಬಗ್ಗೆ ತಂದೆಯವರಿಗೆ ನಂಬಿಕೆ ಬಂದು ವಿಜಯನಗರದ ಅರಸರ ಪರವಾಗಿ ತಾವು ಭಾಗವಹಿಸುವ ಯುದ್ದಗಳಲ್ಲಿ ಮಗನನ್ನೂ ಕರೆದೊಯ್ಯುತ್ತಾರೆ. ವಿಜಯನಗರದ ಸಾರ್ವಭೌಮತೆಗೆ ಧಕ್ಕೆ ತರಲು ಹೊಂಚು ಹಾಕುತ್ತಿದ್ದ ಶತೃ ಸಾಮಂತರನ್ನು ಸದೆಬಡಿಯುತ್ತಾರೆ.

ಕೆಂಪೇಗೌಡರ ವಿವಾಹ:

ನಾಡಪ್ರಭು ಕೆಂಪೇಗೌಡರು
ಕೆಂಪನಂಜೇಗೌಡರು(ಕೆಂಪೇಗೌಡರು


ಕೆಂಪೇಗೌಡರಿಗೆ ಹಳೆ ಬೆಂಗಳೂರಿನ ಸೋದರಮಾವನ ಮಗಳಾದ ಚೆನ್ನಾಂಬೆಯವರೊಡನೆ (ಚೆನ್ನಮ್ಮ)ಮದುವೆ ಹಾಗೂ ಇದೇ ಸಂಧರ್ಭದಲ್ಲಿ ಯುವರಾಜ ಪಟ್ಟಾಭಿಷೇಕವನ್ನು ಮಾಡಲಾಗುತ್ತದೆ. ಈ ಸುಂದರ ಸಮಾರಂಭಕ್ಕೆ ಶ್ರೀಕೃಷ್ಣದೇವರಾಯರ ಪ್ರತಿನಿಧಿಗಳಾದಿಯಾಗಿ ಚೆನ್ನಪಟ್ಟಣ, ಶಿರಾ, ಸೋಲೂರು, ಕೆಳದಿ, ಚಿತ್ರದುರ್ಗ ಮುಂತಾದ ಸಂಸ್ಥಾನಗಳ ಪಾಳೆಯಗಾರರು ಆಗಮಿಸಿ ಶುಭಕೋರುತ್ತಾರೆ.

ಮುಪ್ಪಿನಲ್ಲಿದ್ದ ಕೆಂಪನಂಜೇಗೌಡರು ಮಗನಿಗೆ ರಾಜ್ಯವಾಳುವ ಎಲ್ಲಾ ಅರ್ಹತೆಯಿದೆಯೆಂದು ತಿಳಿದು ಮಗ ಕೆಂಪೇಗೌಡರಿಗೆ 1531ರಲ್ಲಿ ನಾಡಪ್ರಭುಗಳ ಅಧಿಕಾರ ವಹಿಸಿಕೊಡುತ್ತಾರೆ. ವಿಜಯನಗರದ ಅರಸರು ಹಿಂದಿನಿಂದಲೂ ತಮ್ಮ ವಂಶಸ್ಥರ ಮೇಲಿಟ್ಟಿದ್ದ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಕೆಂಪೇಗೌಡರು ಉಳಿದ ಸಾಮಂತರಂತೆ ಸ್ವತಂತ್ರರಾಗಲೊಪ್ಪುವುದಿಲ್ಲ. ಬದಲಿಗೆ ವಿಜಯನಗರ ಸಾಮ್ರಾಜ್ಯಕ್ಕೆ ತಮ್ಮ ನಿಷ್ಠೆಯನ್ನು ಮುಂದುವರೆಸುತ್ತಾರೆ.

ಗೌಡರ ಅಧಿಕಾರಕ್ಕೆ ಬಂದ ಕಾಲಕ್ಕೆ ಯಲಹಂಕನಾಡಿನಲ್ಲಿ ಗಂಭೀರ ಪರಿಸ್ಥಿತಿಯಿತ್ತು. ನೆರೆಯ ಪಾಳೇಗಾರರರು ಅಸೂಯೆಯಿಂದ ಕುದಿಯುತ್ತಿದ್ದರು. ಅತ್ತ ವಿಜಯನಗರದ ಗಡಿಯಲ್ಲಿ ಬಹಮನಿ ಸುಲ್ತಾನರ ಸೈನ್ಯದ ಕೋಟಲೆ ಹೆಚ್ಚಿತ್ತು. ವಿಜಯನಗರದ ಅಖಂಡತೆಯನ್ನು ಕಾಪಾಡಲು ಸದಾ ಸಿದ್ದವಾಗಿದ್ದ ಗೌಡರು ಸೋದರ ಸೋಮೇಗೌಡ ಮತ್ತು ಬಸವೇಗೌಡರ ಜೊತೆ ಸೇರಿ ಹಲವು ಯುದ್ದಗಳನ್ನು ಜಯಿಸುತ್ತಾರೆ.

ಬಾಲ್ಯದಿಂದ ಶ್ರೀಕೃಷ್ಣದೇವರಾಯರ ಆಡಳಿತಾವಧಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರಿಗೆ ತಮ್ಮ ನಾಡಿನಲ್ಲೂ ಈ ಎಲ್ಲಾ ವೈಭವಗಳನ್ನು ಮರು ಪ್ರತಿಷ್ಠಾಪಿಸುವ ಬಯಕೆ ಮನೆ ಮಾಡಿತ್ತು. ಇದರಿಂದಾಗಿ ಹಲವು ಬಾರಿ ಹಂಪಿಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆಗಳೆಲ್ಲವನ್ನೂ ಮನದಟ್ಟು ಮಾಡಿಕೊಂಡು ಬಂದಿದ್ದರು.

ನಗರ ನಿರ್ಮಾಣಕ್ಕೆ ಸೂಕ್ತ ಜಾಗವನ್ನರಸುತ್ತಾ ಅಮಾತ್ಯ ವೀರಣ್ಣ ಹಾಗೂ ಕೆಲ ಸೈನಿಕರೊಂದಿಗೆ ಯಲಹಂಕದಿಂದ ದಕ್ಷಿಣಕ್ಕೆ ಹತ್ತು ಮೈಲು ದೂರ ದಾಟಿ ಎತ್ತರದ ಪ್ರದೇಶವೊಂದಕ್ಕೆ ಬರುವ ಕೆಂಪೇಗೌಡರಿಗೆ ಸಣ್ಣ-ಪುಟ್ಟ ತೊರೆಗಳಿಂದ ಕೂಡಿದ ಹಸಿರಿನಿಂದ ನಳನಳಿಸುತ್ತಿದ್ದ ಕಾಡು ಎದುರಾಗುತ್ತದೆ. ಕಾಡಿನ ನಡುವೆ ಸಾಗುತ್ತಿದ್ದಂತೆ ಒಂದು ವಿಸ್ಮಯಕಾರಿ ಘಟನೆ ಕೆಂಪೇಗೌಡರ ಎದುರಿನಲ್ಲೇ ನಡೆಯುತ್ತದೆ. ಪುಟ್ಟ ಮೊಲವೊಂದು ತನ್ನನ್ನು ತಿನ್ನಲೆಂದು ಬಂದ ಬೇಟೆ ನಾಯಿಯೊಂದನ್ನು ಓಡಿಸಿಕೊಂಡು ಹೋಗುತ್ತಿರುವುದು ಕೆಂಪೇಗೌಡರಿಗೆ ಕಂಡುಬರುತ್ತದೆ.

ಇಲ್ಲಿರುವ ಸಾಮಾನ್ಯ ಮೊಲವೊಂದಕ್ಕೆ ಇಷ್ಟು ಧೈರ್ಯವಿರಬೇಕಾದರೆ ಇದು ಖಂಡಿತ ವೀರಭೂಮಿಯೇ ನಿಜ ಎನಿಸುತ್ತದೆ. ಹೀಗಾಗಿ ನಗರ ನಿರ್ಮಾಣಕ್ಕೆ ಇದೇ ಸೂಕ್ತವಾದ ಪ್ರದೇಶವೆಂದು ಕೆಂಪೇಗೌಡರು ಭಾವಿಸುತ್ತಾರೆ. ಅಲ್ಲದೆ ನಾನಾಕಡೆಗಳಿಂದ ತೊರೆಗಳಾಗಿ ಹರಿದು ಅರ್ಕಾವತಿ ನದಿಗೆ ಸೇರುತ್ತಿದ್ದ ಪ್ರದೇಶವೂ ಇದಾದ್ದರಿಂದ ನೀರಾವರಿಗೂ ಯೋಗ್ಯವಾಗಿದೆಯೆಂದು ಗೌಡರು ತೀರ್ಮಾನಿಸುತ್ತಾರೆ. ತಮ್ಮ ಪರಿವಾರದ ಹಿರಿಯರೊಂದಿಗೆ ಸಮಾಲೋಚಿಸಿ ಒಪ್ಪಿಗೆ ಪಡೆಯುತ್ತಾರೆ.

ಜ್ಯೋತಿಷಿಗಳನ್ನೂ, ಭೂಗರ್ಭ-ನೀರಾವರಿ ತಜ್ಞರನ್ನೂ ವಾಸ್ತುಶಿಲ್ಪಿಗಳನ್ನೂ ಕರೆಸಿ ಸ್ಥಳ ಮತ್ತು ಪರಿಸರದ ಪರಿಶೀಲನೆ ಮಾಡಿಸಿ ಮಾಹಿತಿ ಪಡೆಯುತ್ತಾರೆ. ರಾಜಧಾನಿಯ ನಿರ್ಮಾಣದ ಅನುಮತಿಗಾಗಿ ವಿಜಯನಗರದ ಅರಸರ ಅಚ್ಯುತರಾಯರನ್ನು ಭೇಟಿ ಮಾಡುತ್ತಾರೆ. ಸಂತಸಗೊಂಡ ಅರಸರು ಗೌಡರ ಕಾರ್ಯಕ್ಕೆ ಶುಭಕೋರಿ ಅಗತ್ಯ ನೆರವನ್ನು ಒದಗಿಸುವುದಾಗಿ ಭರವಸೆ ನೀಡಿ ಕಳುಹಿಸುತ್ತಾರೆ.
ಅಲ್ಲಿಂದ ಬೆಂಗಳೂರು ಎನ್ನುವ ಊರು ಹುಟ್ಟಿಕೊಳ್ಳುವ ಸಂದರ್ಭ ಶುರುವಾಗಿದ್ದು.


ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಿಡುಬು

ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವ ಸಿಡುಬು ರೋಗ

ಲಂಕಾದ ಅಧಿಪತಿ, ದಶಕಂಟ ರಾವಣ

ಲಂಕಾದ ಅಧಿಪತಿ, ದಶಕಂಟ ರಾವಣ