in ,

ಮೃದಂಗ ಲಯ ವಾದ್ಯ

ಮೃದಂಗ
ಮೃದಂಗ

ಮೃದಂಗವು ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಉಪಯೋಗಿಸುವ, ಅವನದ್ಧ ವಾದ್ಯಗಳ ಗುಂಪಿಗೆ ಸೇರಿದ ಒಂದು ಪ್ರಮುಖ ಲಯ ವಾದ್ಯವಾಗಿದೆ. ಇದನ್ನು ತಾಳ ವಾದ್ಯ ಎನ್ನುವುದಕ್ಕಿಂತಲೂ ಲಯವಾದ್ಯ ಎನ್ನುವುದೇ ಹೆಚ್ಚು ಸೂಕ್ತ. ಮೃದಂಗವನ್ನು ತಯಾರಿಸಲು ಬೇಕಾಗುವ ಕಚ್ಚಾ ಸಾಮಗ್ರಿಗಳು ಮರ, ಚರ್ಮ ಮತ್ತು ಕರಣೆ ಕಲ್ಲು.

ಒಳಗೆ ಟೊಳ್ಳಾಗಿರುವ ಮರದ ಭಾಗಕ್ಕೆ ಹೊಳವು ಅಥವಾ ಕಳಸಿಗೆ ಎಂದು ಹೆಸರು. ಮೃದಂಗಕ್ಕೆ ಆ ಹೆಸರು ಬಂದದ್ದು “ಮೃತ್” ಮತ್ತು “ಅಂಗ” ಎಂಬ ಎರಡು ಸಂಸ್ಕೃತ ಪದಗಳಿಂದ. ಮೃತ್ ಎಂದರೆ ಮಣ್ಣು. ಪ್ರಾಚೀನ ಕಾಲದಲ್ಲಿ ಕಳಸಿಗೆಯನ್ನು ಮಣ್ಣಿನಿಂದಲೇ ತಯಾರಿಸುತ್ತಿದ್ದರು. ದೀರ್ಘ ಬಾಳಿಕೆಯ ದೃಷ್ಟಿಯಿಂದ ಈಗ ಹಲಸು, ಹೆಬ್ಬಲಸು, ಸಂಪಿಗೆ, ತೇಗ,ಬೇವು, ಬಿಲ್ವರ ಮುಂತಾದ ಮರಗಳಿಂದ ತಯಾರಿಸಲಾಗುತ್ತಿದೆ. ಹೊಳವು ಒಳಗೆ ಖಾಲಿ ಇದ್ದು, ಮಧ್ಯದಲ್ಲಿ ಉಬ್ಬಿ, ಕಡೆಯ ಭಾಗಗಳಲ್ಲಿ ಚಿಕ್ಕದಾಗಿರುತ್ತದೆ. ಕಡೆಯ ಭಾಗಗಳನ್ನು ಎಡ ಮತ್ತು ಬಲ ಎಂದು ಕರೆಯುತ್ತಾರೆ. ಬಲ ಭಾಗದ ವ್ಯಾಸವು ಎಡ ಭಾಗಕ್ಕಿಂತ ಕಡಿಮೆ ಇರುತ್ತದೆ. ಉಬ್ಬಿದ ಭಾಗವನ್ನು “ಹರಡ” ಅಥವಾ “ಕಡಗ” ಎಂದು ಕರೆಯುತ್ತಾರೆ. ಹೊಳವಿನ ಉದ್ದ ಹಾಗೂ ಎರಡು ಮುಖಗಳ ವ್ಯಾಸ ನೇರವಾಗಿ ಮೃದಂಗದ ಶ್ರುತಿಗೆ ಸಂಬಂಧಿಸಿದೆ. ಉದ್ದ ಹಾಗೂ ಬಲದ ವ್ಯಾಸ ಹೆಚ್ಚಿದ್ದರೆ ತಗ್ಗು ಶ್ರುತಿಗೆ ಹೊಂದಿಸಬಹುದು. ಕಡಿಮೆಯಿದ್ದರೆ ಹೆಚ್ಚು ಶ್ರುತಿಗೆ ಹೊಂದಿಸಬಹುದು.

ಬಲ ಮುಚ್ಚಿಗೆಗೆ ಮೇಕೆ ಹಾಗೂ ಹಸುವಿನ ಚರ್ಮ ಬೇಕಾಗುತ್ತದೆ. ಮೇಕೆ ಮತ್ತು ಹಸುವಿನ ಚರ್ಮಗಳನ್ನು ಹದಮಾಡಿ ವೃತ್ತಾಕಾರದಲ್ಲಿ ಕತ್ತರಿಸುತ್ತಾರೆ. ಬಲ ಮುಚ್ಚಿಗೆಯಲ್ಲಿ ಮೂರು ಪದರಗಳು ಇವೆ. ಮೊದಲನೆಯ ಪದರವಾದ ಮೇಕೆ ಚರ್ಮವನ್ನು “ಒತ್ತು ಚರ್ಮ”ವೆಂದು ಕರೆಯುತ್ತಾರೆ. ಎರಡನೆಯ ಪದರವಾದ ಮೇಕೆ ಚರ್ಮವನ್ನು “ಜೀವಾಳಿ” ಅಥವಾ “ಛಾಪು ಪದರ”ವೆಂದು ಕರೆಯುತ್ತಾರೆ. ಮೂರನೆಯ ಮತ್ತು ಹೊರಗಿನ ಪದರವಾದ ಹಸುವಿನ ಚರ್ಮವನ್ನು “ಮೀಟು ರೆಪ್ಪೆ” ಎಂದು ಕರೆಯುತ್ತಾರೆ. ವೃತ್ತಾಕಾರದಲ್ಲಿ ಕತ್ತರಿಸಲ್ಪಟ್ಟ ಈ ಮೂರೂ ಪದರಗಳನ್ನು ಒಂದರ ಮೇಲೊಂದಿಟ್ಟು ಹೊಳವಿನ ಬಲಭಾಗದ ಮೇಲಿರಿಸಿ, ಬಾರುಗಳ ಮೂಲಕ ತುದಿಗಳನ್ನು ಎಳೆದು ಬಿಗಿಯುತ್ತಾರೆ. ಚರ್ಮದ “ಬಾರ್”ಅನ್ನು ಎಮ್ಮೆಯ ಚರ್ಮದಿಂದ ತಯಾರಿಸುತ್ತಾರೆ. ಇದಾದ ಬಳಿಕ ಮುಚ್ಚಿಗೆಯ ಅಂಚಿನ ಸುತ್ತಲೂ ರಂಧ್ರಗಳನ್ನು ಮಾಡಿ, ಎಮ್ಮೆಯ ಚರ್ಮದಿಂದ ಹೆಣೆಯುತ್ತಾರೆ. ಇದನ್ನು “ಇಂಡಿಗೆ” ಎಂದು ಕರೆಯುತ್ತಾರೆ. ನಂತರ ಇದನ್ನು ಬಿಸಿಲಿನಲ್ಲಿ ಒಣಗಿಸಿ, ಉಳಿದ ಭಾಗಗಳನ್ನು ಕತ್ತರಿಸುತ್ತಾರೆ. ಈ ಪ್ರಕಾರವಾಗಿ ಬಲ ಮುಚ್ಚಿಗೆಯು ತಯಾರಾಗುತ್ತದೆ.

ಮೃದಂಗ ಲಯ ವಾದ್ಯ
ಮೃದಂಗ

ಎಡ ಮುಚ್ಚಿಗೆಗೂ ಮೇಕೆ ಮತ್ತು ಹಸುವಿನ ಚರ್ಮಗಳು ಅಗತ್ಯ. ಇದರಲ್ಲಿ ಎರಡೇ ಪದರಗಳು ಇರುತ್ತವೆ. ಒಳಗಿನ ಪದರವಾದ ಮೇಕೆ ಚರ್ಮವನ್ನು “ಜೀವಾಳಿ ಚರ್ಮ” ಅಥವಾ “ತೊಪ್ಪಿ” ಎಂದು ಕರೆಯುತ್ತಾರೆ. ಹೊರಗಿನ ಪದರವಾದ ಹಸುವಿನ ಚರ್ಮವನ್ನು “ರೆಪ್ಪೆ ಚರ್ಮ”ಎಂದು ಕರೆಯುತ್ತಾರೆ. ವೃತ್ತಾಕಾರದಲ್ಲಿ ಕತ್ತರಿಸಲ್ಪಟ್ಟ ಈ ಎರಡೂ ಪದರಗಳನ್ನು ಒಂದರ ಮೇಲೊಂದಿಟ್ಟು ಹೊಳವಿನ ಎಡಭಾಗದ ಮೇಲಿರಿಸಿ, ಬಾರುಗಳ ಮೂಲಕ ತುದಿಗಳನ್ನು ಎಳೆದು ಬಿಗಿಯುತ್ತಾರೆ. ನಂತರ ಮುಚ್ಚಿಗೆಯ ಅಂಚಿನ ಸುತ್ತಲೂ ರಂಧ್ರಗಳನ್ನು ಮಾಡಿ, ಎಮ್ಮೆಯ ಚರ್ಮದಿಂದ ಹೆಣೆಯುತ್ತಾರೆ. ಬಿಸಿಲಿನಲ್ಲಿ ಒಣಗಿಸಿದ ನಂತರ, ಹೊರಪದರದ ಮಧ್ಯದಲ್ಲಿ ವೃತ್ತಾಕಾರವಾಗಿ ಸುಮಾರು ನಾಲ್ಕು ಅಂಗುಲ ವ್ಯಾಸದಷ್ಟು ಕತ್ತರಿಸಿ, ಮೇಕೆಯ ಚರ್ಮವನ್ನು ಒಳಗೆ ಇಂಡಿಗೆಯ ಹತ್ತಿರ ಚರ್ಮದ ಸಣ್ಣ ಪಟ್ಟಿಗಳ ಸಹಾಯದಿಂದ ಕಟ್ಟುತಾರೆ. ಈ ಪ್ರಕಾರವಾಗಿ ಎಡ ಮುಚ್ಚಿಗೆಯು ತಯಾರಾಗುತ್ತದೆ.

ಬಾರ್ ಅನ್ನು ಎಮ್ಮೆಯ ಚರ್ಮವನ್ನು ಸುಮಾರು ಕಾಲು ಅಂಗುಲ ಅಗಲ ಮತ್ತು ಇಪ್ಪತ್ತು ಮೀಟರ್ ಉದ್ದ ಕತ್ತರಿಸಿ ತಯಾರಿಸುತ್ತಾರೆ. ತಯಾರಾದ ಎಡ ಮತ್ತು ಬಲ ಮುಚ್ಚಿಗೆಗಳನ್ನು ಹೊಳವಿನ ಮೇಲೆ ಕೂಡಿಸಿ, ಇವುಗಳನ್ನು ಬಾರಿನ ಸಹಾಯದಿಂದ ಇಂಡಿಗೆಯ ಮೂಲಕ ಹಾದುಹೋಗುವಂತೆ ಬಿಗಿಯಾಗಿ ಕಟ್ಟುತ್ತಾರೆ.

ಕರಣೆಯು ಒಂದು ವಿಶಿಷ್ಟವಾದ ಕಲ್ಲಿನಿಂದ ತಯಾರಿಸಲ್ಪಡುತ್ತದೆ. ಇದು ಕಪ್ಪು ಬಣ್ಣದ್ದಾಗಿದ್ದು, ಮ್ಯಾಂಗನೀಸ್ ಮತ್ತು ಕಬ್ಬಿಣದ ಅಂಶಗಳನ್ನು ಹೊಂದಿದೆ. ಈ ಕಲ್ಲನ್ನು ಅರೆದು, ನುಣುಪಾದ ಪುಡಿ ತಯಾರಿಸಿ, ಅನ್ನದ ಜೊತೆಗೆ ಹದವಾಗಿ ಕಲಸಿ ಉಂಡೆ ಮಾಡಲಾಗುತ್ತದೆ. ಬಲ ಮುಚ್ಚಿಗೆಯ ಮಧ್ಯದಲ್ಲಿ ಮೊದಲು ಅನ್ನದ ಅಂಟನ್ನು ಲೇಪಿಸಿ, ಅದರ ಮೇಲೆ ಈ ಉಂಡೆಯ ಸಣ್ಣ ಸಣ್ಣ ಗುಳಿಗೆಗಳನ್ನು ಒಂದೊಂದಾಗಿ ಚಪ್ಪಟೆಯಾಗಿ ಇಡಲಾಗುತ್ತದೆ. ಪ್ರತಿ ಗುಳಿಗೆ ಪದರವನ್ನು ಲೇಪಿಸಿದ ನಂತರ ನಯವಾದ ಒಂದು ಕಲ್ಲಿನಿಂದ ಉಜ್ಜಲಾಗುತ್ತದೆ. ಹೀಗೆ ವೃತ್ತಾಕಾರವಾಗಿ ಹಚ್ಚುವಾಗ ಮಧ್ಯ ಭಾಗವು ಸ್ವಲ್ಪ ದಪ್ಪವಾಗಿಯೊ, ಸುತ್ತಲೂ ತೆಳುವಾಗಿ ಇದ್ದು, ಸಣ್ಣ ಸಣ್ಣ ಬಿರುಕುಗಳು ಏರ್ಪಡುತ್ತವೆ. ಮೃದಂಗದಿಂದ ಒಳ್ಳೆಯ ನಾದ ಬರಲು ಈ ಬಿರುಕುಗಳೇ ಕಾರಣ. ಈ ರೀತಿ ಕರಣೆಯನ್ನು ಹಾಕಿದ ನಂತರ ಪೊರಕೆಯ ಕಡ್ಡಿಗಳನ್ನು ಸಣ್ಣ ಸಣ್ಣ ಚೂರು ಮಾಡಿ (ಹದಿನಾರು), ರೆಪ್ಪೆ ಮತ್ತು ಛಾಪು ಪದರಗಳ ಮಧ್ಯೆ ಸೇರಿಸಲಾಗುತ್ತದೆ. ಕಡ್ಡಿಗಳ ಬದಲಾಗಿ ಕರಣೆ ಕಲ್ಲಿನ ತರಿಯನ್ನು ಕೂಡಾ (ಕಪ್ಪಿ) ಹಾಕುವ ರೂಢಿ ಇದೆ. ಮೃದಂಗ ವಾದಕರು ತಮ್ಮ ಇಚ್ಛೆಯಂತೆ ಕಡ್ಡಿ ಅಥವಾ ಕಪ್ಪಿ ಹಾಕಿದ ಮೃದಂಗವನ್ನು ಬಳಸುತ್ತಾರೆ.

ಮೃದಂಗದ ಶ್ರುತಿ ಸೇರಿಸುವ ಕ್ರಮ

ಆಧಾರ ಶ್ರುತಿಯನ್ನು ಅವಲಂಭಿಸಿ ಮೃದಂಗವನ್ನು ಶ್ರುತಿ ಮಾಡಲಾಗುತ್ತದೆ. ಇದಕ್ಕೆ ಒಂದು ಕಲ್ಲು ಗುಂಡು ಮತ್ತು ಒಂದು ಗಟ್ಟಿ ಮರದ ತುಂಡು (ಗಟ್ಟ ಅಥವಾ ಕುಟ್ಟಿ) ಅಗತ್ಯ. ಮೃದಂಗದ ಶ್ರುತಿ ಹೆಚ್ಚಿಸಲು ಬಲ ಮುಚ್ಚಿಗೆಯ ಇಂಡಿಗೆಯ ಮೇಲೆ ಗಟ್ಟವನ್ನು ಇಟ್ಟು, ಕಲ್ಲಿನಿಂದ ಗಟ್ಟಕ್ಕೆ ಹೊಡೆಯಲಾಗುತ್ತದೆ. ಶ್ರುತಿಯನ್ನು ತುಂಬಾ ಹೆಚ್ಚಿಸಬೇಕಾದರೆ ಬಾರುಗಳ ಮಧ್ಯೆ ಗಟ್ಟಗಳನ್ನು ಸೇರಿಸಲಾಗುತ್ತದೆ. ಶ್ರುತಿಯನ್ನು ಕಡಿಮೆ ಮಾಡಲು ಇಂಡಿಗೆಯ ಕೆಳಗೆ ಗಟ್ಟವನ್ನು ಇಟ್ಟು ಕಲ್ಲಿನಿಂದ ಗಟ್ಟಕ್ಕೆ ಹೊಡೆಯಲಾಗುತ್ತದೆ. ಆಧಾರ ಶ್ರುತಿಯನ್ನು ಕೇಳುತ್ತಾ, “ಛಾಪು” ಮತ್ತು “ಧೀಂ” ಶಬ್ದಾಕ್ಷರಗಳನ್ನು ನುಡಿಸಿ ಶ್ರುತಿ ಸೇರಿಸಲಾಗುವುದು.

ಎಡ ಭಾಗದ ಶ್ರುತಿ ಸೇರಿಸುವುದಕ್ಕೆ ರವೆ ಮತ್ತು ನೀರು ಅಗತ್ಯ. ರವೆಯನ್ನು ನೀರಿನಲ್ಲಿ ಹದವಾಗಿ ಕಲೆಸಿ ಎಡ ಭಾಗದ ಜೀವಾಳಿ ಚರ್ಮದ ಮಧ್ಯದಲ್ಲಿ ಅಂಟಿಸಲಾಗುತ್ತದೆ. ರವೆಯನ್ನು ಹಾಕಿದಾಗ ಶ್ರುತಿಯು ಕಡಿಮೆಯಾಗುತ್ತದೆ, ತೆಗೆದರೆ ಶ್ರುತಿ ಹೆಚ್ಚಾಗುತ್ತದೆ. ರವೆ ಮತ್ತು ನೀರಿನ ಬದಲಿಗೆ ಎಡ ಭಾಗಕ್ಕೂ ಕರಣೆ ಹಾಕುವ ಪದ್ಧತಿ ಇದೆ. ಇತ್ತೀಚೆಗೆ ಒಂದು ವಿಶೇಷ ಮಾದರಿಯ ಅಂಟನ್ನು (ಗ್ಲಾಸ್ ಪುಟ್ಟಿ) ರವೆಯ ಬದಲಿಗೆ ಉಪಯೋಗಿಸುತ್ತಾರೆ.

ಪ್ರಸಿದ್ಧ ಮೃದಂಗ ವಾದಕರು
ಮೃದಂಗ ವಾದನದಲ್ಲಿ ಅನೇಕ ಮಹಾನ್ ವಿಧ್ವಾಂಸರುಗಳು ತಮ್ಮ ಕೈಚಳಕವನ್ನು ತೋರಿಸಿದ್ದಾರೆ, ತೋರಿಸುತ್ತಿದ್ದಾರೆ.

ಇವರಲ್ಲಿ ಕೆಲವರ ಹೆಸರುಗಳು

ಮೃದಂಗ ಲಯ ವಾದ್ಯ
ಮೃದಂಗ ವಿದ್ವಾಂಸರು ತಿರುವಾರೂರು ಭಕ್ತವತ್ಸಲ

ಗೋಪಾಲರಾವ್ ಅಪ್ಪ, ಶಿವಸ್ವಾಮಿ ಅಪ್ಪ, ನಾರಾಯಣಸ್ವಾಮಿ ಅಪ್ಪ, ಮಾನ್ಪೂಂಡಿಯಾ ಪಿಳ್ಳೆ, ಪುದುಕ್ಕೋಟ್ಟೈ ದಕ್ಷಿಣಾಮೊರ್ತಿ ಪಿಳ್ಳೆ, ಮುತ್ತುಸ್ವಾಮಿ ತೇವರ್, ಕುಂಞುಮಣಿ ಅಯ್ಯರ್, ಹೆಚ್.ಪುಟ್ಟಾಚಾರ್, ಟಿ.ಎಂ.ಪುಟ್ಟಸ್ವಾಮಯ್ಯ, ಪಾಲಕ್ಕಾಡ್ ಸುಬ್ಬಯ್ಯರ್, ಪಾಲ್ಘಾಟ್ ಮಣಿ ಅಯ್ಯರ್, ಸಿ.ಕೆ.ಅಯ್ಯಾಮಣಿ ಅಯ್ಯರ್.

ವೆಲ್ಲೂರು ರಾಮಭದ್ರನ್, ಉಮಯಾಳಪ್ಪುರಮ್ ಶಿವರಾಮನ್, ಕಾರೈಕುಡಿ ಮಣಿ, ತಿರುವಾರೂರು ಭಕ್ತವತ್ಸಲನ್, ಮನ್ನಾರ್ಗುಡಿ ಈಶ್ವರನ್, ಟಿ.ಕೆ.ಮೊರ್ತಿ, ಪಾಲ್ಘಾಟ್ ರಘು, ಶ್ರೀಮುಷ್ಣಂ ರಾಜಾರಾವ್, ಟಿ.ವಿ.ಗೋಪಾಲಕೃಷ್ಣನ್.

ಗರುವಾಯುರ್ ದೊರೆ, ಟಿ.ಎ.ಎಸ್.ಮಣಿ, ಟಿ.ವಿ.ಭದ್ರಾಚಾರ್, ಪಿ.ಜಿ.ಲಕ್ಷ್ಮೀನಾರಾಯಣ, ಎ.ವಿ.ಆನಂದ್, ಎಮ್.ಟಿ.ರಾಜಕೇಸರಿ, ಟಿ.ಎ.ಎಸ್.ಮಣಿ, ಎಮ್.ವಾಸುದೇವರಾವ್, ಕೆ.ವಿ.ಪ್ರಸಾದ್, ಚೆಲುವರಾಜ, ಎಚ್.ಎಸ್.ಸುಧೀಂದ್ರ, ಅರ್ಜುನ್ ಕುಮಾರ್, ಆನೂರು ಅನಂತಕೃಷ್ಣ ಶರ್ಮ,ಜಿ ಎಸ್ ರಾಮಾನುಜಮ್, ಹೆಚ್. ಎಲ್. ಶಿವಶಂಕರ ಸ್ವಾಮಿ,ತುಮಕೂರು ರವಿಶಂಕರ, ನಿಕ್ಶಿತ್ ಪುತ್ತೂರು

ಉಡುಪಿಯ ಮೃದಂಗ ವಾದಕರು : ಬಾಲಚಂದ್ರ ಆಚಾರ್ಯ, ಬಾಲಚಂದ್ರ ಭಾಗವತ, ದೇವೇಶ ಭಟ್.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

23 Comments

ಭಾರತದ ವಾಯುಗುಣ

ಭಾರತದ ವಾಯುಗುಣ ವಿಧಗಳು

ಭೀಮಸೇನ

ಪಾಂಡವ ಭೀಮಸೇನನ ವರ್ಣನೆ