in ,

ಅಶ್ವಗಂಧ ಔಷಧಿ ಗಿಡ ಬೆಳೆಯುವ ವಿಧಾನ ಮತ್ತು ಆರೋಗ್ಯಕ್ಕೆ ಹೇಗೆ ಉಪಯೋಗವಾಗುತ್ತದೆ?

ಅಶ್ವಗಂಧ ಔಷಧಿ ಗಿಡ
ಅಶ್ವಗಂಧ ಔಷಧಿ ಗಿಡ

ಅಶ್ವಗಂಧಾ ಎಂಬುದು ಒಂದು ಔಷಧಿಗಿಡ. ಹಿರಿಯರಿಂದ ‘ಹಿರೇಮದ್ದು’ ಎಂದೇ ಕರೆಸಿಕೊಳ್ಳುವ ಈ ಸಸ್ಯ, ನರಸಂಬಂಧಿ, ಕಫ ವಾತ ಸಂಬಂಧಿ ದೋಷಗಳನ್ನು ಕಿತ್ತು ಕಳೆಯಬಲ್ಲ ಗುಣವಿದೆ. ಈ ಗಿಡದ ಬೇರಿಗೆ ಲೈಂಗಿಕ ದೌರ್ಬಲ್ಯ ನಿವಾರಿಸುವ ಅದ್ಬುತ ಸಾಮರ್ಥ್ಯವಿದೆ. ಹಾವು, ಚೇಳು ಕಚ್ಚಿದಾಗ ಇದರ ಬೇರನ್ನು ನಿಂಬೇ ರಸದೊಂದಿಗೆ ಹಚ್ಚಲು ಉಪಯೋಗಿಸುತ್ತಾರೆ.

ಆಯುರ್ವೇದ ಪಂಡಿತರು ಸಂಸ್ಕೃತದಲ್ಲಿ ಇದಕ್ಕೆ ನೀಡಿದ ಹೆಸರು ವಾಜೀಗಂಧಾ, ಹಯಗಂಧಾ, ವರಾಹಕರ್ಣೀ ಇತ್ಯಾದಿ. ಈ ಸಸ್ಯದ ಬೇರಿನಿಂದ ಕುದುರೆ ಮೂತ್ರದಂತಹ ವಾಸನೆ ಹೊರಡುತ್ತದೆಯಾದ್ದರಿಂದ ಅಲ್ಲದೆ ಇದರ ಬೇರನ್ನು ಸ್ವಚ್ಚಗೊಳಿಸಿ ಪುಡಿ ಮಾಡಿ ಸೇವಿಸಿದರೆ ಅಶ್ವದಂತೆ ಶಕ್ತಿಬಲ-ಉತ್ಸಾಹ ಬರುತ್ತದೆಯಾದ್ದರಿಂದ ಇದಕ್ಕೆ ಅಶ್ವಗಂಧಾ ಎಂಬ ನಾಮವು ಬಂದಿದೆ. ಇಂಗ್ಲೀಷ್ ನಲ್ಲಿ ಇದಕ್ಕೆ ವಿಂಟರ್ ಚೆರ್ರಿ ಎನ್ನುತ್ತಾರೆ. ಗುಜರಾತ್, ರಾಜಾಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ, ವಾಯವ್ಯ ಭಾರತ, ಕರ್ನಾಟಕ ಮುಂತಾದೆಡೆಯಲ್ಲಿ ಈ ಗಿಡವನ್ನು ಕಾಣಬಹುದು. ಸೊಲನೇಸೀ ಕುಟುಂಬಕ್ಕೆ ಸೇರಿದ, ಔಷಧೀಯ ಮಹತ್ತ್ವವುಳ್ಳ ಸಸ್ಯ .

ಕನ್ನಡದಲ್ಲಿ ಹಿರೇಮದ್ದಿನ ಗಿಡ ಎಂಬ ಹೆಸರೂ ಇದಕ್ಕಿದೆ. ಇದರ ವೈಜ್ಞಾನಿಕ ಹೆಸರು ವಿತಾಸಿಯ ಸಾಮ್ನಿಫೆರ. ಸುಮಾರು 1 ಮೀ ಎತ್ತರಕ್ಕೆ ಬೆಳೆಯುವ ಮೂಲಿಕೆ. ಆಫ್ರಿಕ, ಮೆಡಿಟರೇನಿಯನ್ ಪ್ರದೇಶ ಹಾಗೂ ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಅಶ್ವಗಂಧ ಬೆಳೆಯಿಂದ ದೊರೆಯುವ ಆಲ್ಕಲಾಯ್ಡ್‌ಗಳಲ್ಲಿ ಮಿಥಾನಿನ್ ಮತ್ತು ಸಾಮ್ನಿಫೆರಿನ್ ಸಸ್ಯಕ್ಷಾರ ಮುಖ್ಯವಾದುವು. ಆಯುರ್ವೇದ ಹಾಗೂ ಯುನಾನಿ ಔಷಧಿಗಳ ತಯಾರಿಕೆಯಲ್ಲಿ ಇದರ ಬೇರು, ತೊಗಟೆ, ಎಲೆ, ಹಣ್ಣು ಮತ್ತು ಬೀಜಗಳು ಅನೇಕ ರೋಗಗಳ ನಿವಾರಣೆಗೆ ಉಪಯುಕ್ತವಾಗಿವೆ.

ಅಶ್ವಗಂಧ ಔಷಧಿ ಗಿಡ ಬೆಳೆಯುವ ವಿಧಾನ ಮತ್ತು ಆರೋಗ್ಯಕ್ಕೆ ಹೇಗೆ ಉಪಯೋಗವಾಗುತ್ತದೆ?
ಅಶ್ವಗಂಧ ಔಷಧಿ ಗಿಡ ಬೆಳೆಯುವ ವಿಧಾನ

ಇದು ಒಂದರಿಂದ ಮೂರು ಅಡಿ ಎತ್ತರಕ್ಕೆ ಬೆಳೆಯುವ ಸುಂದರ ಪೊದೆ. ಇದರ ಎಲೆಗಳು ಆಡುಸೋಗೆಯ ಎಲೆಗಳನ್ನು ಹೋಲುವವು. ಆದರೆ ಅದಕ್ಕಿಂತ ಚಿಕ್ಕವು ಮತ್ತು ಅಷ್ಟು ಉದ್ದವಿರುವುದಿಲ್ಲ. ಎಲೆಗಳನ್ನು ಕೈಗಳಲ್ಲಿ ಉಜ್ಜಿದರೆ ಕುದುರೆಯ ಮೂತ್ರದ ವಾಸನೆ ಬರುವುದು. ಆದುದರಿಂದ ಈ ಮೂಲಿಕೆಗೆ ಅಶ್ವಗಂಧ ಎನ್ನುವರು. ರುಚಿಯಲ್ಲಿ ಕಹಿ. ಎಲೆಗಳು ಬೂದು ಬಣ್ಣದ ರೋಮಗಳಿಂದ ಕೂಡಿರುವವು. ಹೂಗಳು ಹಸಿರು, ಹಳದಿ ಬಣ್ಣದ ಗೊಂಚಲುಗಳು, ಹಣ್ಣು ಕೆಂಪಾಗಿರುವುದು ಮತ್ತು ಹೊದಿಕೆಯಿಂದ ಕೂಡಿರುವುದು. ಈ ಹೊದಿಕೆಯೊಳಗಡೆಯಿಂದ ಇದರ ಹಣ್ಣು ನೋಡಲು ಮನ ಮೋಹಕವಾಗಿರುವುದು. ಬೇರುಗಳು ಬಿಳಿ ಮತ್ತು ನಸುಹಳದಿ ಬಣ್ಣದಿಂದ ಕೂಡಿರುವುವು.

ಮರಳು ಮಿಶ್ರಿತ ಗೋಡು ಮಣ್ಣು ಅಥವಾ ಕೆಂಪುಮಣ್ಣು ಈ ಬೆಳೆಗೆ ಉತ್ತಮ. ಮಣ್ಣಿನ ರಸಸಾರ 7.5-8.0 ಇದ್ದು ನೀರು ಬಸಿದು ಹೋಗುವಂತಿರಬೇಕು.

ಅಶ್ವಗಂಧ ಹಿಂಗಾರಿನಲ್ಲಿ ಬೆಳೆಯಬಹುದಾದ ಬೆಳೆ. ಈ ಬೆಳೆಗೆ ಶುಷ್ಕ ವಾತಾರಣವೂ ಉತ್ತಮ. ಬೇರುಗಳ ಬೆಳೆವಣೆಗೆಗೆ ಒಂದೆರಡು ಬಾರಿ ಮಳೆಯ ಅಗತ್ಯವೂ ಇದೆ. ವಾರ್ಷಿಕ 66-75 ಸೆಂ.ಮೀ ಮಳೆ ಬೀಳುವ ಪ್ರದೇಶಗಳು ಈ ಬೆಳೆಗೆ ಯೋಗ್ಯವಾಗಿರುತ್ತವೆ.

ರಾಗಿಯನ್ನು ಬಿತ್ತುವಂತೆ ಈ ಬೆಳೆಯ ಬೀಜವನ್ನು ಚೆಲ್ಲಿ (ಆಗಸ್ಟ್ ತಿಂಗಳು) ಬಿತ್ತನೆ ಮಾಡಬಹುದು. ಸಾಮಾನ್ಯವಾಗಿ ಇದನ್ನು ಮಳೆಗಾಲದ ಬೆಳೆಯಾಗಿ ಬೆಳೆಯುವುದರಿಂದ, ಬಿತ್ತನೆ ಮಳೆಯನ್ನು ಅವಲಂಬಿಸುತ್ತದೆ. ಮಣ್ಣಿನಲ್ಲಿ ಸಾಕಷ್ಟು ತೇವವಿದ್ದಾಗ ಬಿತ್ತನೆ ಮಾಡಬೇಕು.

ನೇರವಾಗಿ ಬೀಜ ಬಿತ್ತಿ ಬೆಳೆದ ಗಿಡಗಳನ್ನು 25-30 ದಿನಗಳ ನಂತರ ಸಾಕಷ್ಟು ಅಂತರವಿರುವಂತೆ, ಹೆಚ್ಚುವರಿ ಸಸಿಗಳನ್ನು ಕೀಳಬೇಕು. 25-30 ದಿನಗಳ ಅಂತರದಲ್ಲಿ ಕಳೆ ಕೀಳುವುದರಿಂದ ಕಳೆಗಳನ್ನು ಹತೋಟಿಯಲ್ಲಿಡುವುದು ಸಾಧ್ಯ.

ಸಮಸ್ಯೆಗಳು:
ಕೀಟಗಳು : ಸುರಳಿಹುಳು ನುಸಿ ಮತ್ತು ಕಂಬಳಿ ಹುಳು.
ರೋಗಗಳು : ಬೀಜ ಕೊಳೆತ, ಸಸಿಗಳ ಕೊಳೆಯುವಿಕೆ ಹಾಗೂ ಎಲೆಸೊರಗು ರೋಗ, ನಂಜಾಣುರೋಗ.

ಬಿತ್ತನೆಗೆ ಮೊದಲು ಪ್ರತಿ ಕಿ.ಗ್ರಾಂ ಬೀಜಕ್ಕೆ 3 ಗ್ರಾಂ ಮ್ಯಾಂಕೊಜೆಬ್ ನಿಂದ ಉಪಚರಿಸಬೇಕು. 2. 30 ದಿನಗಳ ಬೆಳೆಗೆ 1.5 ಮಿ.ಲೀ ಮಾನೊಕ್ರೊಟೋಫಾಸ್ ಮತ್ತು 3 ಗ್ರಾಂ ಮ್ಯಾಂಕೊಜೆಬ್ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಇದೇ ಸಿಂಪಡಣೆಯನ್ನು 15 ದಿನಗಳ ಅನಂತರ ಪುನರಾವರ್ತಿಸಬೇಕು.

ಜನವರಿ ತಿಂಗಳಲ್ಲಿ ಪ್ರಾರಂಭವಾಗಿ ಮಾರ್ಚ್ ತಿಂಗಳವರೆಗೂ ಮುಂದುವರೆಯುತ್ತದೆ ,ಬಿತ್ತನೆಯಾದ 150-170 ದಿನಗಳ ನಂತರ. ಎಲೆಗಳು ಹಣ್ಣಾಗಿ ಒಣಗಿ ಕೆಂಪುಬಣ್ಣಕ್ಕೆ ತಿರುಗಿದಾಗ ಬೆಳೆಯು ಕೊಯ್ಲಿಗೆ ಸಿದ್ಧವಾಗಿರುತ್ತದೆ. ಬೇರುಗಳ ಕೊಯ್ಲಿಗೆ ಪೂರ್ತಿ ಗಿಡವನ್ನೇ ಕಿತ್ತು 1-2 ಸೆಂಮೀ ಎತ್ತರಕ್ಕೆ ಕತ್ತರಿಸಬೇಕು. ಕೆಲವು ವೇಳೆ ಒಣಗಿದ ಗಿಡಗಳಿಂದ ಹಣ್ಣುಗಳನ್ನು ಕಿತ್ತು ಬೀಜಗಳನ್ನು ಸಂಗ್ರಹಿಸಬಹುದು. ಪ್ರತಿ ಹೆಕ್ಟೇರಿನಿಂದ ಸರಾಸರಿ 400-500 ಕಿ.ಗ್ರಾಂ ಬೇರು ಮತ್ತು 50 ಕಿ.ಗ್ರಾಂ ಬೀಜದ ಇಳುವರಿಯನ್ನು ನಿರೀಕ್ಷಿಸಬಹುದು.

ಆರೋಗ್ಯಕ್ಕೆ ಹೇಗೆ ಉಪಯೋಗವಾಗುತ್ತದೆ?

ಎಲೆ ಹಣ್ಣು ಮತ್ತು ಬೇರು ಚಿಕಿತ್ಸೆಗಳಲ್ಲಿ ಉಪಯೋಗಿಸುವರು. ಬಹು ಹಿಂದಿನ ಕಾಲದಿಂದಲೂ ಬಳಕೆಯಲ್ಲಿರುವ ಔಷಧಿ. ಬೇರಿನಲ್ಲಿ ಸೋಮ್ನಿಫೆರಸ್ ಅನ್ನುವ ಕ್ಷಾರವಿರುವುದು. ಈ ಕ್ಷಾರವು ನಿದ್ದೆ ಬರಿಸುವ ಸಾಮರ್ಥ್ಯ ಹೊಂದಿದೆ. ಸರ್ವ ರೋಗಕ್ಕೆ ಮದ್ದು ಹಿರೇಮದ್ದು ಎಂದು ನಾಣ್ನುಡಿ. ಸತ್ಯವೂ ಹೌದು. ಇದು ರಕ್ತ ಶುದ್ಧಿ ಮಾಡಿ, ರಕ್ತ ವೃದ್ಧಿ ಮಾಡಿ ದೇಹಕ್ಕೆ ಕಾಂತಿ ಮತ್ತು ಪುಷ್ಟಿಯನ್ನು ಕೊಡುವುದು. ನಿಶ್ಶಕ್ತಿಯನ್ನು ನೀಗುವುದು ಹಾಗೂ ಗೆಲ್ಲುವ ಶಕ್ತಿಯಿದೆ. ಈ ವನೌಷಧಿ ಸೇವನೆಯಿಂದ ಸಂವೋಹಕಾರಿ ಚಿತ್ತ ಚಂಚಲತೆ, ಗಾಬರಿ ದೂರವಾಗುವುವು. ಮಕ್ಕಳಿಗೆ ಪುಷ್ಟಿ ನೀಡಿವುದು, ವೃದ್ಧಾಪ್ಯದ ದೌರ್ಬಲ್ಯಗಳನ್ನು ನೀಗಿ ಶಕ್ತಿ, ಸ್ಫೂರ್ತಿ ಮತ್ತು ಯೌವನವನ್ನು ಕೊಡುವುದು.

ಅಶ್ವಗಂಧ ಔಷಧಿ ಗಿಡ ಬೆಳೆಯುವ ವಿಧಾನ ಮತ್ತು ಆರೋಗ್ಯಕ್ಕೆ ಹೇಗೆ ಉಪಯೋಗವಾಗುತ್ತದೆ?
ಅಶ್ವಗಂಧ

ಕಫ‌, ಕೆಮ್ಮು, ನಿತ್ರಾಣ ಹಾಗೂ ಸ್ತ್ರೀಯರ ದೈಹಿಕ ಸಮಸ್ಯೆಗಳಿಗೆ ಅಶ್ವಗಂಧ ತತ್‌ಕ್ಷಣಕ್ಕೆ ಸಿಗುವ ಮನೆಮದ್ದು. ಇದರ ಎಲೆಗಳಲ್ಲಿ ಖನಿಜಾಂಶ ಹಾಗೂ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮೂಳೆಗಳಲ್ಲಿ ಟೂಳ್ಳು ಉಂಟಾಗದಂತೆ ತಡೆಯುತ್ತದೆ. ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಹೆಚ್ಚು ಪರಿಣಾಮಕಾರಿಯಾಗಿರುವ ಅಶ್ವಗಂಧ, ಉರಿಯೂತ ನಿವಾರಕ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ನಿದ್ರಾ ಹೀನತೆ, ಕ್ಯಾನ್ಸರ್‌, ಸಂಧಿವಾತ, ಮಧುಮೇಹವನ್ನು ಹತೋಟಿಗೆ ತರಲು ಅಶ್ವಗಂಧದ ಬೇರಿನಿಂದ ತಯಾರಿಸಿದ ಚೂರ್ಣವನ್ನು ನಿರಂತರವಾಗಿ ಸೇವಿಸುವುದು ಒಳಿತು. ಇದು ಮಾನಸಿಕ ಖಿಯನ್ನು ದೂರ ಮಾಡಿ ನಮ್ಮ ನರಮಂಡಲವನ್ನು ಸದೃಢವಾಗಿರುವಂತೆ ಮಾಡುತ್ತದೆ.

ಪುಷ್ಟಿ ಮತ್ತು ಶಕ್ತಿಗಾಗಿ ,100 ಗ್ರಾಂ ಅಶ್ವಗಂಧ ಬೇರನ್ನು ತಂದು ಹಾಲಿನಲ್ಲಿ ಬೇಯಿಸಿ ಶುದ್ಧ ಮಾಡಿ, ಒಣಗಿಸಿ, ಚೂರ್ಣಿಸಿ, ಗಾಜಿನ ಭರಣಿಯಲ್ಲಿಡುವುದು. ಸಮ ಪ್ರಮಾಣ ಸಕ್ಕರೆ ಸೇರಿಸಿ ಹೊತ್ತಿಗೆ 5 ಗ್ರಾಂನಷ್ಟು ಚೂರ್ಣವನ್ನು ತಿಂದ ಮೇಲೆ ಸಕ್ಕರೆ ಬೆರೆಸಿದ ಹಾಲನ್ನು ಪಾನ ಮಾಡುವುದು.

ಅಶ್ವಗಂಧದ ಬೇರನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ, ತುಪ್ಪ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ದೃಷ್ಟಿ ದೋಷವನ್ನು ನಿವಾರಣೆ ಮಾಡಬಹುದು.

ನೋವು ಮತ್ತು ಬಾವುಗಳು,ಈ ವನೌಷಧವು ಎಲ್ಲಾ ರೀತಿಯ ಬಾವು ಮತ್ತು ನೋವುಗಳನ್ನು ನಿವಾರಿಸುವುದು. ಕೀಲುಗಳಲ್ಲಿ ನೋವು ಮತ್ತು ಊತವಿದ್ದರೆ ಇದರ ಎಲೆಗಳಿಗೆ ಎಣ್ಣೆ ಸವರಿ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟುವುದು.

ಪ್ರಜ್ವಲ ದೃಷ್ಟಿಗೆ,ಅಶ್ವಗಂಧ ಚೂರ್ಣವನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ, ತುಪ್ಪ ಮತ್ತು ಜೇನುತುಪ್ಪವನ್ನು ಅಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಬೇಕು. ದೃಷ್ಟಿದೋಷಗಳು ನಿವಾರಣೆ ಆಗಿ ಕಣ್ಣು ದೃಷ್ಟಿ ಪ್ರಜ್ವಲವಾಗುವುದು. ಕಣ್ಣುಗಳನ್ನು ತ್ರಿಫಲ ಚೂರ್ಣದ ನೀರಿನಲ್ಲಿ ತೊಳೆಯುವುದು.

ವೃದ್ಧಾಪ್ಯದ ದೌರ್ಬಲ್ಯತೆಗೆ ಮತ್ತು ಶಕ್ತಿಗೆ,ಅಶ್ವಗಂಧದ ಬೇರುಗಳನ್ನು ಹಾಲಿನಲ್ಲಿ ಶುದ್ಧ ಮಾಡಿ ಒಣಗಿಸಿ ಚೂರ್ಣ ಮಾಡಿ, ಶೋಧಿಸಿಟ್ಟುಕೊಳ್ಳುವುದು, ಹೊತ್ತಿಗೆ ಎರಡೂವರೆ ಗ್ರಾಂನಷ್ಟು ಚೂರ್ಣವನ್ನು ತಿಂದ ಮೇಲೆ ಸಕ್ಕರೆ ಸೇರಿಸಿದ ಹಾಲನ್ನು ಕುಡಿಯುವುದು.

ಸ್ತ್ರೀಯರ ಮುಟ್ಟಿನ ದೋಷಗಳು, ಶುದ್ಧಿ ಮಾಡಿದ ಅಶ್ವಗಂಧ ಚೂರ್ಣ, ಲೋದ್ರ ಚಕ್ಕೆ ಚೂರ್ಣ ಮತ್ತು ನೆಲಗುಂಬಳದ ಗಡ್ಡೆ ಚೂರ್ಣ ಸಮ ಭಾಗ ಸೇರಿಸಿ, ಹೊತ್ತಿಗೆ 2.50 ಗ್ರಾಂ ಸೇವಿಸಿ, ಮೇಲೆ ಕಲ್ಲುಸಕ್ಕರೆ ಬೆರೆಸಿದ ಹಸುವಿನ ಹಾಲು ಒಂದು ಲೋಟ ಸೇವಿಸುವುದು. ಈ ರೀತಿ ದಿನಕ್ಕೆ ಬೆಳಿಗ್ಗೆ ಸಾಯಂಕಾಲ ಎರಡು ಬಾರಿ ಸೇವಿಸುವುದು. ಈ ಔಷಧಿಯನ್ನು ಸೇವಿಸುವ ಅವಧಿಯಲ್ಲಿ ನಿರ್ಮಲಚಿತ್ತ, ಶಾಂತಸ್ವಭಾವ ಮತ್ತು ಶುಭಯೋಚನೆಗಳಿರಲಿ, ಇದರಿಂದ ಮಾನಸಿಕ ಚಂಚಲತೆ ಜೀವನದಲ್ಲಿ ಜಿಗುಪ್ಸೆ ಶಮನವಾಗುವುವು.

ಅಶ್ವಗಂಧದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಮತ್ತು ಅತಿಸೂಕ್ಷ್ಮಜೀವಿ ನಿರೋಧಕ ಗುಣಗಳಿವೆ ಹಾಗೂ ಇವು ಗಾಯಗಳಾದರೆ ಶೀಘ್ರವೇ ಮಾಗಿಸಲು ಮತ್ತು ಸೋಂಕು ಉಂಟಾಗದಂತೆ ನೋಡಿಕೊಳ್ಳಲು ನೆರವಾಗುತ್ತವೆ. ಶತಮಾನಗಳ ಹಿಂದೆಲ್ಲಾ ಗಾಯಗಳಾದರೆ, ಹುಣ್ಣು, ಬೊಬ್ಬೆ,ಚರ್ಮದ ಉರಿತ ಮೊದಲಾದವು ಎದುರಾದರೆ ಅಶ್ವಗಂಧದ ಎಲೆಗಳನ್ನು ಅರೆದು ಹಚ್ಚಲಾಗುತ್ತಿತ್ತು.

ಅಶ್ವಗಂಧ ಔಷಧಿ ಗಿಡ ಬೆಳೆಯುವ ವಿಧಾನ ಮತ್ತು ಆರೋಗ್ಯಕ್ಕೆ ಹೇಗೆ ಉಪಯೋಗವಾಗುತ್ತದೆ?
ಬಂಜೆತನ ದೂರವಾಗಲು ಅಶ್ವಗಂಧ

ಗರ್ಭಧಾರಣೆ, ಕೆಲವು ಕಾರಣಗಳಿಂದ ಸ್ತ್ರೀಯರಿಗೆ ಸಂತಾನವಿರುವುದಿಲ್ಲ. ದೋಷಗಳು ಸ್ತ್ರೀ ಪುರುಷರಿಬ್ಬರದು ಇರಬಹುದು. ಆದುದರಿಂದ ಶುದ್ಧ ಮಾಡಿದ ಅಶ್ವಗಂಧದ ಚೂರ್ಣವನ್ನು ಸ್ತ್ರೀ ಪುರುಷರಿಬ್ಬರೂ ಸೇವಿಸಬಹುದು. ಭಗವಂತನ ದಯೆಯಿಂದ ಮಕ್ಕಳಾಗುವವು. ಹಾಲು, ಅನ್ನ ಮತ್ತು ಮಧುರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದು.

ಬಂಜೆತನ ದೂರವಾಗಲು, 25 ಗ್ರಾಂ ಶುದ್ಧ ಮಾಡಿದ ಅಶ್ವಗಂಧದ ಚೂರ್ಣಕ್ಕೆ ಅರ್ಧ ಲೀಟರ್ ಹಾಲು ಹಾಕಿ ಕಾಯಿಸುವುದು. ಅಷ್ಟಾಂಷ ಕಷಾಯ ಮಾಡಿ ಇಟ್ಟುಕೊಳ್ಳುವುದು. ಮುಟ್ಟಿನ ಸ್ನಾನದ ನಂತರ 4 ಟೀ ಚಮಚ ಕಷಾಯವನ್ನು ಹಸುವಿನ ಹಾಲಿಗೆ ಸಕ್ಕರೆ, ತುಪ್ಪವನ್ನು ಸೇರಿಸಿ ಸೇವಿಸುವುದು. ಹೀಗೆ ಮೂರು ಮುಟ್ಟಿನಲ್ಲಿ ಕ್ರಮವಾಗಿ ಮಾಡುವುದು.

ಅಶ್ವಗಂಧದ ನಿಯಮಿತ ಸೇವನೆಯಿಂದ ಈ ಸಾಯುವಿಕೆಯನ್ನು ಆದಷ್ಟೂ ತಡವಾಗಿಸಬಹುದು ಹಾಗೂ ನಿಧಾನಗೊಳಿಸಬಹುದು. ತನ್ಮೂಲಕ ಉತ್ತಮ ಮಾನಸಿಕ ಆರೋಗ್ಯವನ್ನು ವೃದ್ದಾಪ್ಯದಲ್ಲಿಯೂ ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ.

ಹಳೆಯ ಅಸಾಧ್ಯ ಜ್ವರದಲ್ಲಿ,30 ಗ್ರಾಂ ಅಮೃತಬಳ್ಳಿಯ ಸತ್ವಕ್ಕೆ 40 ಗ್ರಾಂ ಶುದ್ಧ ಮಾಡಿದ ಅಶ್ವಗಂಧದ ಚೂರ್ಣವನ್ನು ಸೇರಿಸಿಟ್ಟುಕೊಳ್ಳುವುದು. ಒಂದು ವೇಳೆಗೆ ಎರಡೂವರೆ ಗ್ರಾಂನಷ್ಟು ದಿನಕ್ಕೆ ಎರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸುವುದು.

ವಾತಕ್ಕೆ, ಅಶ್ವಗಂಧದ ಬೇರು ಮತ್ತು ಒಣಶುಂಠಿಯ ನಯವಾದ ಚೂರ್ಣ ಮತ್ತು ಕಲ್ಲಸಕ್ಕರೆ ಸೇರಿಸಿ ಬೆಳಿಗ್ಗೆ, ಸಂಜೆ ಸೇವಿಸುವುದು.

ಗಂಡಸರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ,ಕೆಲವು ವೇಳೆ ಗಂಡಸರ ವೀರ್ಯದಲ್ಲಿ ವೀರ್ಯಾಣುಗಳು ಇರಲೇಬೇಕಾದ ಸಂಖ್ಯೆಗಿಂತ ಕಡಿಮೆಯಿರುವುವು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಾಗುವುದಿಲ್ಲ. ಅಶ್ವಗಂಧ, ವಿದಾರಿಕಾಂಡ, ನೆಗ್ಗಿಲು ಮತ್ತು ಕಾಮೆ ಬೀಜಗಳಿಗೆ ಚೂರ್ಣವನ್ನು ಸೇರಿಸಿ, ತಜ್ಞರ ಮೇಲ್ವಿಚಾರಣೆಯಲ್ಲಿ ಜೇನುತುಪ್ಪ ಸೇರಿಸಿ ಸೇವಿಸಬೇಕು. ಹೀಗೆ ಒಂದೆರಡು ತಿಂಗಳು ಮಾಡುವುದು ಹಾಗೂ ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸಿ ಫಲಿತಾಂಶವನ್ನು ಗಮನಿಸುವುದು. ನೈಸರ್ಗಿಕ ರೀತಿಯಲ್ಲಿ ದೋಷ ಪರಿಹಾರವಾಗಿ ಮಕ್ಕಳಾಗುವುವು.

ಅಶ್ವಗಂಧ ನರಗಳನ್ನು ಸಡಿಲಿಸಿರುವ ಮೂಲಕ ರಕ್ತಪರಿಚಲನೆಯನ್ನು ಉತ್ತಮಗೊಳಿಸಿ ಸರಾಗವಾಗಿ ಪ್ರವಹಿಸುವಂತೆ ಮಾಡುವ ಮೂಲಕ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಮೆದುಳು ನಿರಾಳತೆಯನ್ನು ಪಡೆಯುತ್ತದೆ. ತನ್ಮೂಲಕ ಸುಖಕರ ನಿದ್ದೆಯನ್ನು ಪಡೆದು ನಿದ್ರಾರಾಹಿತ್ಯದ ತೊಂದರೆಯನ್ನು ಗುಣಪಡಿಸಬಹುದು.

ಬೆನ್ನು ನೋವಿನಲ್ಲಿ,10 ಗ್ರಾಂ ಶುದ್ಧಿ ಮಾಡಿದ ಅಶ್ವಗಂಧದ ನಯವಾದ ಪುಡಿ ಮತ್ತು 10ಗ್ರಾಂ ಕೆಂಪು ಕಲ್ಲುಸಕ್ಕರೆ ಪುಡಿಯನ್ನು ಒಂದು ಬಟ್ಟಲು ಬಿಸಿ ಹಾಲಿನಲ್ಲಿ ಸೇರಿಸಿ ಬೆಳಿಗ್ಗೆ ಮತ್ತು ಸಾಯಂಕಾಲ ಸೇವಿಸುವುದು. ಅಶ್ವಗಂಧದ ಎಲೆಗಳಿಗೆ ಎಳ್ಳೆಣ್ಣೆ ಸವರಿ ಸ್ವಲ್ಪ ಬಿಸಿ ಮಾಡಿ ನೋವಿರುವ ಜಾಗದಲ್ಲಿ ಕಟ್ಟುವುದು. ಪ್ರತಿ ದಿವಸ ಎರಡು, ಮೂರು ಸಾರಿ ಈ ರೀತಿ ಮಾಡುವುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

11 Comments

ಹೊಂಗೆ ಮರ: ಹೊಂಗೆ ಎಣ್ಣೆ ಉಪಯೋಗಗಳು

ಹೊಂಗೆ ಮರ: ಹೊಂಗೆ ಎಣ್ಣೆ ಉಪಯೋಗಗಳು

ಸುರಪುರದ ವೆಂಕಟಪ್ಪನಾಯಕ

ಸುರಪುರದ ವೆಂಕಟಪ್ಪನಾಯಕ ಸುರಪುರ ಸಂಸ್ಥಾನದ ದೊರೆ