in

ಸುರಪುರದ ವೆಂಕಟಪ್ಪನಾಯಕ ಸುರಪುರ ಸಂಸ್ಥಾನದ ದೊರೆ

ಸುರಪುರದ ವೆಂಕಟಪ್ಪನಾಯಕ
ಸುರಪುರದ ವೆಂಕಟಪ್ಪನಾಯಕ

ಕನ್ನಡ ನಾಡಿನ ಒಂದು ಪುಟ್ಟ ರಾಜ್ಯದ ಶೂರ ರಾಜ. ಪ್ರಬಲ ಬ್ರಿಟಿಷ್ ಸರ್ಕಾರವನ್ನು ವಿರೋಧಿಸಿ ಬ್ರಿಟಿಷ್ ಸೈನ್ಯದೊಡನೆ ಹೋರಾಡಿದ. ಬ್ರಿಟಿಷರು ದ್ರೋಹಿಗಳ ನೆರವಿನಿಂದಲೇ ಇವನನ್ನು ಸೋಲಿಸಬೇಕಾಯಿತು. ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ವೀರ.

ಸುರಪುರ ಈಗ ಒಂದು ಸಣ್ಣ ಊರು. 1841 ರಲ್ಲಿ ಸುರಪುರದಲ್ಲಿ ಅಪ್ರಾಪ್ತ ವೆಂಕಟಪ್ಪನಾಯಕ ದೊರೆಯಾಗಿದ್ದ. ವೆಂಕಟಪ್ಪನಾಯಕ ಪ್ರಾಪ್ತವಯಸ್ಕನಾದ ಮೇಲೆ ಬ್ರಿಟಿಷ್ ನಿಯೋಜಿತ ಅಧಿಕಾರಿಯನ್ನು ಹಿಂತಿರುಗಿಸಿದ. ಆಗ ಗವರ್ನರ್-ಜನರಲ್ ಡಾಲ್ ಹೌಸಿ ಇನ್ನೂ ಕೆಲಕಾಲ ಬ್ರಿಟಿಷ್ ಅಧಿಕಾರಿಯನ್ನು ನೇಮಿಸಬೇಕೆಂದು ದೊರೆಗೆ ತಿಳಿಸಿದ. ಇದು ಸಾಧ್ಯವಿಲ್ಲವೆಂದು ವೆಂಕಟಪ್ಪನಾಯಕ ನಿರಾಕರಿಸಿದ್ದ. ಒಂದು ಕಡೆ ನಿಜಾಮ ಹಾಗೂ ಬ್ರಿಟಿಷರ ಸುಲಿಗೆಯಿಂದಾಗಿ ಸುರಪುರದ ಖಜಾನೆ ಬರಿದಾಗಿತ್ತು. ಆಗ ವೆಂಕಟಪ್ಪನಾಯಕ ಬ್ರಿಟಿಷರ ವಿರುದ್ಧ ಸೈನ್ಯವನ್ನು ಬಲಗೊಳಿಸಲೆತ್ನಿಸಿದ. ಇದೆಲ್ಲವೂ ಬ್ರಿಟಿಷ್ ಅಧಿಕಾರಿಗಳಿಗೆ ತಿಳಿಯದಿರಲಿಲ್ಲ. ಆದರೆ ವೆಂಕಟಪ್ಪನ ಆಪ್ತ ಸಲಹೆಗಾರನೇ ಬ್ರಿಟಿಷರ ಸಹಾಯಕ್ಕೆ ನಿಂತ. ಶತ್ರುಗಳು ಕೋಟೆ ಒಳಗೆ ನುಗ್ಗಿದರು.

ವೆಂಕಟಪ್ಪನಾಯಕ ಊರು ಬಿಟ್ಟು ಹೈದರಾಬಾದ್ ಕಡೆ ಹೊರಟ. ಬಳಿಕ ಆತನ ಗುರುತು ಸಿಕ್ಕಿ, ಅವನನ್ನು ಸಿಕಂದರಾಬಾದಿನಲ್ಲಿ ಬಂಧನದಲ್ಲಿಟ್ಟರು. ಒಮ್ಮೆ ಜೈಲಿಗೆ ಕೊಂಡೊಯ್ಯುತ್ತಿದ್ದಾಗ ದಾರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎನ್ನುತ್ತಾರೆ.

ಸುರಪುರದ ವೆಂಕಟಪ್ಪನಾಯಕ ಸುರಪುರ ಸಂಸ್ಥಾನದ ದೊರೆ
ಸುರಪುರದ ವೆಂಕಟಪ್ಪನಾಯಕ

ಜೀವನ:
ಸುರಪುರದ ವೆಂಕಟಪ್ಪನಾಯಕ ಸುರಪುರ ಸಂಸ್ಥಾನದ ದೊರೆ (1842-58). ಸುರಪುರದ ನಾಯಕ ರಾಜವಂಶದ ಈತನು ಪ್ರಮುಖ ಮತ್ತು ಕೊನೆಯ ಆಡಳಿತಗಾರ. ಅವನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಸಾರ್ವಭೌಮತ್ವವನ್ನು ಸ್ವೀಕರಿಸಲು ನಿರಾಕರಿಸಿದರ ಮತ್ತು ಅವರ ವಿರುದ್ಧ ಯುದ್ಧ ಮಾಡಿದರ. ಸುರಪುರ ಪ್ರಸ್ತುತ ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿದೆ.

ಕೃಷ್ಣಪ್ಪನಾಯಕ ಮತ್ತು ಈಶ್ವರಮ್ಮ ಇವರ ತಂದೆತಾಯಿಗಳು. ಬಾಲ್ಯದಲ್ಲೆ ತಂದೆಯನ್ನು ಕಳೆದುಕೊಂಡು ತಾಯಿಯ ಪೋಷಣೆಯಲ್ಲಿ ಬೆಳೆದರು. ಅಪ್ರಾಪ್ತವಯಸ್ಕನಾಗಿದ್ದುದರಿಂದ ಇವರ ಹೆಸರಿನಲ್ಲಿ ಇವರ ತಾಯಿ ಸುರಪುರ ಸಂಸ್ಥಾನವನ್ನು ಆಳುತ್ತಿದ್ದರು. ಈ ಸಂದರ್ಭದಲ್ಲಿ ಕೃಷ್ಣಪ್ಪನಾಯಕನ ತಮ್ಮ ಪಿಡ್ಡನಾಯಕನನ್ನು ವೆಂಕಟಪ್ಪನಾಯಕನ ಪಾಲಕನನ್ನಾಗಿ ನೇಮಿಸಬೇಕೆಂಬ ಪ್ರಯತ್ನಗಳು ನಡೆದವು. ರಾಣಿಯ ವಿರೋಧವನ್ನೂ ಕಡೆಗಣಿಸಿ ಬ್ರಿಟಿಷ್ ಸರ್ಕಾರವೂ ಪಿಡ್ಡನಾಯಕನನ್ನೆ ಪಾಲಕನನ್ನಾಗಿ ನೇಮಿಸಬೇಕೆಂಬ ನಿರ್ಧಾರ ತಳೆಯಿತು. ಈ ಕಾಲದಲ್ಲಿ ಮೆಡೋಸ್ ಟೇಲರ್ ಎಂಬಾತ ಇಲ್ಲಿಗೆ ಬ್ರಿಟಿಷ್ ಪ್ರತಿನಿಧಿಯಾಗಿ ಬಂದ. ಅಧಿಕಾರಕ್ಕಾಗಿ ನಡೆಯುತ್ತಿದ್ದ ಒಳಜಗಳಗಳನ್ನು ನಿವಾರಿಸಲು ಯತ್ನಿಸುತ್ತ ಸಂಸ್ಥಾನದ ಸುಧಾರಣೆಗೆ ದುಡಿದು ಸ್ಥಳೀಯ ಜನರ ವಿಶ್ವಾಸ ಗಳಿಸಿದ. ಈತ ವೆಂಕಟಪ್ಪನಾಯಕನ ಶಿಕ್ಷಣದ ಸಲುವಾಗಿ ಮುರ್ರೆ ಎಂಬ ವಿದ್ವಾಂಸನನ್ನು ನೇಮಿಸಿ ಇಂಗ್ಲಿಷ್ ಕಲಿಸುವ ವ್ಯವಸ್ಥೆ ಮಾಡಿದ. ಹಾಗೆಯೇ ತೆಲುಗು, ಮರಾಠಿ ಹಾಗೂ ಪಾರ್ಸಿ ಭಾಷೆಗಳನ್ನೂ ಕಲಿಸುವ ವ್ಯವಸ್ಥೆ ಮಾಡಿದ. ಇದೇ ಸಂದರ್ಭದಲ್ಲಿ ರಾಜಕುಮಾರನನ್ನು ಕೊಲೆಗೈಯುವ ಶತ್ರುಗಳ ಯತ್ನ ಟೇಲರನ ಮುಂಜಾಗರೂಕತೆಯಿಂದಾಗಿ ಸಫಲವಾಗಲಿಲ್ಲ.

1853ರ ಜೂನ್ ತಿಂಗಳಲ್ಲಿ ವೆಂಕಟಪ್ಪನಾಯಕ ಟೇಲರನಿಂದ ರಾಜ್ಯಾಡಳಿತವನ್ನು ವಹಿಸಿಕೊಂಡರು. ಟೇಲರ್ ಸಂಸ್ಥಾನದಲ್ಲಿ ರಾಜಕೀಯ ಪ್ರತಿನಿಧಿಯಾಗಿರಬೇಕೆಂಬ ಸಲಹೆ ನಾಯಕನಿಗೆ ಪ್ರಿಯವಾದುದಾಗಿದ್ದರೂ ಭಾರಿ ಮೊತ್ತದ ವೇತನ ನೀಡಲು ಅಶಕ್ಯವಿದ್ದುದರಿಂದ ಅದನ್ನೊಪ್ಪಿ ಕೊಳ್ಳಲಿಲ್ಲ. ನಾಯಕ ಅಧಿಕಾರವಹಿಸಿಕೊಂಡಾಗ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಸಂಬಳ, ಸಾರಿಗೆ ಸರಿಯಾಗಿ ಪಾವತಿಯಾಗದೆ ಸೈನ್ಯದಲ್ಲಿ ಗೊಂದಲವೆದ್ದಿತು. ಜೊತೆಗೆ ನಿಜಾಮನಿಗೆ ಸಲ್ಲಬೇಕಾಗಿದ್ದ ಬಂಡಣಿಯನ್ನೂ ಸಲ್ಲಿಸಿರಲಿಲ್ಲ. ಈ ಮಧ್ಯೆ ಪಿಡ್ಡನಾಯಕನ ಮಕ್ಕಳ ಜಹಗೀರಿಯನ್ನು ವೆಂಕಟಪ್ಪನಾಯಕ ಕಿತ್ತುಕೊಂಡದ್ದರಿಂದ ಅವರೂ ಬ್ರಿಟಿಷರಿಗೆ ದೂರಿತ್ತರು. ಈ ಸಲುವಾಗಿ ನಾಯಕನಿಗೂ ಅವರ ತಾಯಿಗೂ ಮನಸ್ತಾಪ ಉಂಟಾಗಿತ್ತು. ರಾಜ್ಯದಲ್ಲೂ ಎರಡು ಗುಂಪುಗಳಾಗಿದ್ದವು.

ದೇಶದ ರಾಜಕೀಯ ಪರಿಸ್ಥಿತಿ 1857ರಲ್ಲಿ ಗಂಭೀರವಾಗತೊಡಗಿತು. ಎಲ್ಲ ಕಡೆ ಬ್ರಿಟಿಷರ ವಿರುದ್ಧ ಬಂಡಾಯಗಳು ಏಳತೊಡಗಿದವು. ವೆಂಕಟಪ್ಪನಾಯಕನೂ ಈ ಬಂಡಾಯದಲ್ಲಿ ತೊಡಗಿರಬಹುದೆಂಬ ಸಂದೇಹ ಬ್ರಿಟಿಷರಿಗೆ ತಲೆದೋರಿತು. ವೆಂಕಟಪ್ಪನಾಯಕ ತನ್ನ ಸೈನ್ಯಕ್ಕೆ ಅಶ್ವ ಮತ್ತು ಕಾಲ್ದಳಗಳನ್ನು ಸೇರಿಸಿ ಸೈನ್ಯವನ್ನು ಬಲಪಡಿಸಿಕೊಂಡದ್ದು, ಬ್ರಿಟಿಷರಿಗೆ ಆಗದ ರೋಹಿಲೆ ಮತ್ತು ಅರಬರನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೈನ್ಯಕ್ಕೆ ನೇಮಿಸಿಕೊಂಡದ್ದು, ಬ್ರಿಟಿಷರಿಗೆ ಸೆರೆಸಿಕ್ಕ ಮಹಿಪಾಲ್‍ಸಿಂಗ್ ನಾಯಕನೇ ತನ್ನನ್ನು ಕಳುಹಿಸಿದ ನೆಂದು ಹೇಳಿದ್ದು, ನಾನಾಸಾಹೇಬನ ಬಳಿಗೆ ನಾಯಕ ನಾನಾಸಂಕೇಶ್ವರ ನೆಂಬ ಬ್ರಾಹ್ಮಣನನ್ನು ಒಪ್ಪಂದಕ್ಕಾಗಿ ಕಳಿಸಿದ್ದಾನೆಂಬ ದಟ್ಟ ವದಂತಿ ಮುಂತಾದ ಸಂಗತಿಗಳು ಬ್ರಿಟಿಷರು ಸಂದೇಹಪಡಲು ಪ್ರಮುಖ ಕಾರಣಗಳಾದವು.

ಸುರಪುರದ ವೆಂಕಟಪ್ಪನಾಯಕ ಸುರಪುರ ಸಂಸ್ಥಾನದ ದೊರೆ
ಸುರಪುರ ಸಂಸ್ಥಾನದ ದೊರೆ ವೆಂಕಟಪ್ಪನಾಯಕ

1857 ಡಿಸೆಂಬರ್‍ನಲ್ಲಿ ಬ್ರಿಟಿಷರು ಕ್ಯಾಪ್ಟನ್ ಕ್ಯಾಂಬೆಲ್ ಎಂಬಾತ ನನ್ನು ಪರಿಶೀಲನೆಗಾಗಿ ಸುರಪುರಕ್ಕೆ ಕಳಿಸಿದರು. ಅವನ ಆದೇಶದಂತೆ ಫೆಬ್ರವರಿ ತಿಂಗಳಲ್ಲಿ ಲಿಂಗಸುಗೂರಿನಿಂದ ಸೈನ್ಯದ ತುಕಡಿಯೊಂದು ಕ್ಯಾಪ್ಟನ್ ವಿಂಡ್ಹ್ಯಾಮಿನ ನೇತೃತ್ವದಲ್ಲಿ ಸುರಪುರಕ್ಕೆ ಬಂದು ಊರ ಹೊರಗಿನ ಬಯಲಲ್ಲಿ ಬೀಡುಬಿಟ್ಟಿತು. ಕಲಾದಗಿಯಿಂದ ಮಾಲ್ಕಮ್ ಸಾಹೇಬನ ಸೈನ್ಯವೂ ಬಂದು ಸೇರಿತು. ಸೈನ್ಯ ಊರ ಮೇಲೆ ದಾಳಿಮಾಡಿತು. ನಾಯಕ ತಲೆತಪ್ಪಿಸಿಕೊಂಡು ಹೈದರಾಬಾದಿನ ಹಾದಿ ಹಿಡಿದ. ರಾಣಿಯರು ತಲೆಮರೆಸಿಕೊಂಡು ಸುರಪುರದಲ್ಲಿ ಶಾಂತಿ ನೆಲಸಿದ ಮೇಲೆ ಅಲ್ಲಿಗೆ ಬಂದು ಸೇರಿದರು. ಹೈದರಾಬಾದಿನ ವನಪರ್ತಿ ರಾಜ ಇವರನ್ನು ಬ್ರಿಟಿಷರಿಗೊಪ್ಪಿಸಿದ. ಈತನನ್ನು ಅವರು ಸಿಕಂದರಾಬಾದಿನಲ್ಲಿ ಸೆರೆಯಿಟ್ಟರು. ಆಗ ಟೇಲರ್ ಬಂದು ನಾಯಕನನ್ನು ಭೇಟಿಯಾಗಿ ಸಂಧಾನಕ್ಕಾಗಿ ಪ್ರಯತ್ನಿಸಿದ. ನಾಯಕನಿಗೆ ವಿಧಿಸಿದ್ದ ಮರಣದಂಡನೆ ಜೀವಾವಧಿಶಿಕ್ಷೆಗೆ ಇಳಿಯಿತು. ಕೊನೆಗೆ ಅದೂ ಕಡಿಮೆಯಾಗಿ ನಾಲ್ಕುವರ್ಷಗಳ ಸೆರೆವಾಸದ ಅನಂತರ ರಾಜ್ಯವನ್ನು ವೆಂಕಟಪ್ಪನಾಯಕನಿಗೊಪ್ಪಿಸಬೇಕೆಂಬ ತೀರ್ಮಾನವಾಯಿತು. ಮದರಾಸು ಬಳಿಯ ಚೆಂಗಲ್‍ಪೇಟೆಯಲ್ಲಿ ಈತ ತನ್ನ ರಾಣಿಯರೊಂದಿಗೆ ಇರುವ ವ್ಯವಸ್ಥೆ ಮಾಡಲಾಯಿತು. ರಾಣಿಯರು ಕರ್ನೂಲಿನಲ್ಲಿ ಈತನನ್ನು ಸೇರಿಕೊಳ್ಳುವ ವ್ಯವಸ್ಥೆ ನಡೆಯಿತು. ಆದರೆ ಅಷ್ಟರಲ್ಲೇ ನಾಯಕ ಗುಂಡೇಟಿನಿಂದ ಮರಣ ಹೊಂದಿದ. ಈ ಮರಣ ಆಕಸ್ಮಿಕವೇ ಕೊಲೆಯೇ ಆತ್ಮಹತ್ಯೆಯೇ ಎಂಬ ಸಂಗತಿ ನಿಗೂಢವಾಗಿ ಉಳಿದಿದೆ. ಮರಣಹೊಂದಿದಾಗ ನಾಯಕನಿಗಿನ್ನೂ ಶಿಕ್ಷಾವಧಿಯ ಒಂದು ವರ್ಷವೂ ತುಂಬಿರಲಿಲ್ಲ. ಅಷ್ಟರೊಳಗೆ ಆತ ಮರಣಹೊಂದುತ್ತಾನೆಂಬ ಭವಿಷ್ಯವನ್ನು ಬರೆದಿಟ್ಟುದನ್ನು ಟೇಲರ್ ತನ್ನ ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದಾನೆ. ಅನಂತರ ಸುರಪುರ ಸಂಸ್ಥಾನ ಎರಡು ವರ್ಷಗಳ ಕಾಲ ಬ್ರಿಟಿಷರ ಅಧೀನದಲ್ಲಿದ್ದು, ಬಂಡಾಯಕಾಲದಲ್ಲಿ ತಮಗೆ ಮಾಡಿದ ಸಹಾಯಕ್ಕಾಗಿ ಅದನ್ನು ನಿಜಾಮನಿಗೆ ಒಪ್ಪಿಸಲಾಯಿತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

45 Comments

ಅಶ್ವಗಂಧ ಔಷಧಿ ಗಿಡ

ಅಶ್ವಗಂಧ ಔಷಧಿ ಗಿಡ ಬೆಳೆಯುವ ವಿಧಾನ ಮತ್ತು ಆರೋಗ್ಯಕ್ಕೆ ಹೇಗೆ ಉಪಯೋಗವಾಗುತ್ತದೆ?

ವಿನೋದ್ ರಾಜ್ ಅವರ ಈ ಫೋಟೋ ಇದೀಗ ಫುಲ್ ವೈರಲ್ ನೋಡಿ ಏನು ವಿಷಯ.

ವಿನೋದ್ ರಾಜ್ ಅವರ ಈ ಫೋಟೋ ಇದೀಗ ಫುಲ್ ವೈರಲ್ ನೋಡಿ ಏನು ವಿಷಯ.