ಅರಿಸ್ಟಾಟಲ್ ಒಬ್ಬ ಗ್ರೀಕ್ ದಾರ್ಶನಿಕ ಮಾತ್ರವಲ್ಲದೆ, ಪ್ಲೇಟೋನ ಓರ್ವ ವಿದ್ಯಾರ್ಥಿ ಹಾಗೂ ಅಲೆಕ್ಸಾಂಡರ್ನ ಗುರುವಾಗಿದ್ದ. ಭೌತಶಾಸ್ತ್ರ, ತತ್ತ್ವಮೀಮಾಂಸೆ, ಕವಿತೆ, ರಂಗಭೂಮಿ, ಸಂಗೀತ, ತರ್ಕಶಾಸ್ತ್ರ, ಭಾಷಣಶಾಸ್ತ್ರ, ರಾಜಕಾರಣ, ಸರ್ಕಾರ, ನೀತಿಶಾಸ್ತ್ರ, ಜೀವಶಾಸ್ತ್ರ, ಮತ್ತು ಪ್ರಾಣಿಶಾಸ್ತ್ರ ಇವೇ ಮೊದಲಾದವನ್ನು ಒಳಗೊಂಡಂತೆ ಅನೇಕ ವಿಷಯಗಳ ಕುರಿತು ಆತ ಬರೆದ. ಪ್ಲೇಟೋನ ಗುರುವಾದ ಸಾಕ್ರಟಿಸ್ ಮತ್ತು ಪ್ಲೇಟೋನ ಜೊತೆಜೊತೆಗೆ, ಪಾಶ್ಚಿಮಾತ್ಯ ತತ್ತ್ವಶಾಸ್ತ್ರದಲ್ಲಿನ ಅತಿ ಪ್ರಮುಖ ಪ್ರಸಿದ್ಧ ಸಂಸ್ಥಾಪಕರಲ್ಲಿ ಅರಿಸ್ಟಾಟಲ್ ಕೂಡಾ ಒಬ್ಬನಾಗಿದ್ದಾನೆ. ಪಾಶ್ಚಿಮಾತ್ಯ ತತ್ತ್ವಶಾಸ್ತ್ರದ ಒಂದು ವ್ಯಾಪಕವಾದ ಪದ್ಧತಿಯನ್ನು ಸೃಷ್ಟಿಸುವಲ್ಲಿ ಆತ ಮೊದಲಿಗನಾಗಿದ್ದು, ನೀತಿಶಾಸ್ತ್ರ ಮತ್ತು ಸೌಂದರ್ಯ ಮೀಮಾಂಸೆ, ತರ್ಕಶಾಸ್ತ್ರ ಮತ್ತು ವಿಜ್ಞಾನ, ರಾಜಕಾರಣ ಮತ್ತು ತತ್ತ್ವಮೀಮಾಂಸೆ ಇವೇ ಮೊದಲಾದವುಗಳನ್ನು ಈ ಪದ್ಧತಿಯು ಒಳಗೊಂಡಿದೆ. ಭೌತಿಕ ವಿಜ್ಞಾನಗಳ ಕುರಿತಾದ ಅರಿಸ್ಟಾಟಲ್‌ನ ದೃಷ್ಟಿಕೋನಗಳು ಮಧ್ಯಯುಗದ ಪಾಂಡಿತ್ಯಕ್ಕೆ ಗಾಢವಾದ ಸ್ವರೂಪವನ್ನು ನೀಡಿದವು. ಅಂತಿಮವಾಗಿ ಅವು ನ್ಯೂಟನ್ನನ ಭೌತಶಾಸ್ತ್ರದಿಂದ ಸ್ಥಾನಪಲ್ಲಟಗೊಂಡರೂ ಸಹ, ಅವುಗಳ ಪ್ರಭಾವವು ನವೋದಯ ಕಾಲಕ್ಕೂ ವಿಸ್ತರಿಸಿತು ಎಂದು ಹೇಳಬಹುದು. ಜೈವಿಕ ವಿಜ್ಞಾನಗಳಲ್ಲಿನ ಆತನ ಕೆಲವೊಂದು ವೀಕ್ಷಣೆಗಳು ತುಂಬಾ ನಿಖರವಾಗಿವೆ ಎಂದು ಕೇವಲ ಹತ್ತೊಂಬತ್ತನೇ ಶತಮಾನದಲ್ಲಿ ದೃಢೀಕರಿಸಲ್ಪಟ್ಟವು. ಅತಿ ಮುಂಚಿನದು ಎಂದು ಹೇಳಲಾದ ತರ್ಕಶಾಸ್ತ್ರದ ಔಪಚಾರಿಕ ಅಧ್ಯಯನವು ಆತನ ಕೃತಿಗಳಲ್ಲಿ ಸೇರಿಕೊಂಡಿದ್ದು, ಅದನ್ನು ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ ಆಧುನಿಕ ಔಪಚಾರಿಕ ತರ್ಕಶಾಸ್ತ್ರದೊಳಗೆ ಅಳವಡಿಸಲಾಯಿತು. ತತ್ತ್ವಮೀಮಾಂಸೆಗೆ ಸಂಬಂಧಿಸಿ ಹೇಳುವುದಾದರೆ, ಮಧ್ಯ ಯುಗಗಳಲ್ಲಿನ ಇಸ್ಲಾಂ ಹಾಗೂ ಯೆಹೂದೀಯ ಸಂಪ್ರದಾಯಗಳಲ್ಲಿರುವ ತತ್ವಶಾಸ್ತ್ರದ ಮತ್ತು ದೇವತಾಶಾಸ್ತ್ರದ ಚಿಂತನಾ ಲಹರಿಗಳ ಮೇಲೆ ಅರಿಸ್ಟಾಟಲ್ ಸಿದ್ಧಾಂತವು ವ್ಯಾಪಕವಾದ ಪ್ರಭಾವವನ್ನು ಹೊಂದಿತ್ತು. ಇದು ಇಷ್ಟಕ್ಕೇ ನಿಲ್ಲದೇ, ಕ್ರೈಸ್ತ ದೇವತಾಶಾಸ್ತ್ರದ, ಅದರಲ್ಲೂ ವಿಶೇಷವಾಗಿ ಪೌರಸ್ತ್ಯ ಸಾಂಪ್ರದಾಯಿಕ ದೇವತಾಶಾಸ್ತ್ರ, ಮತ್ತು ಕೆಥೊಲಿಕ್ ಚರ್ಚ್‌ನ ವಿದ್ವತ್ಪೂರ್ಣ ಸಂಪ್ರದಾಯದ ಮೇಲೂ ಪ್ರಭಾವವನ್ನು ಬೀರುತ್ತಿದೆ. ಆತನ ನೀತಿಶಾಸ್ತ್ರ ಯಾವಾಗಲೂ ಪ್ರಭಾವಶಾಲಿಯಾಗಿದ್ದರೂ ಸಹ, ಆಧುನಿಕ ಸದ್ಗುಣ ನೀತಿಶಾಸ್ತ್ರದ ಉದಯವಾಗುವುದರೊಂದಿಗೆ ಹೊಸಚೈತನ್ಯದೊಂದಿಗಿನ ಆಸಕ್ತಿಯನ್ನು ಗಳಿಸಿದವು. ಅರಿಸ್ಟಾಟಲ್‌ನ ತತ್ತ್ವಶಾಸ್ತ್ರದ ಎಲ್ಲಾ ಮಗ್ಗುಲುಗಳೂ, ವಿದ್ವತ್ಪೂರ್ಣವಾದ ಅಥವಾ ಪ್ಲೇಟೋವಿನ ತಾತ್ವಿಕ ಪಂಥಕ್ಕೆ ಸಂಬಂಧಿಸಿದ ಇಂದಿನ ಕ್ರಿಯಾಶೀಲ ಅಧ್ಯಯನದ ಕೇಂದ್ರವಸ್ತುವಾಗಿಯೇ ಮುಂದುವರಿದುಕೊಂಡು ಬಂದಿವೆ. ಸುಸಂಸ್ಕೃತವಾದ ಅನೇಕ ಪ್ರಕರಣ ಗ್ರಂಥಗಳು ಹಾಗೂ ಸಂಭಾಷಣಾ ರೂಪದ ಗ್ರಂಥಗಳನ್ನು ಅರಿಸ್ಟಾಟಲ್ ಬರೆದನಾದರೂ, ಆತನ ಸಾಹಿತ್ಯಿಕ ಶೈಲಿಯನ್ನು “ಬಂಗಾರದ ಒಂದು ನದಿ” ಎಂದು ಸಿಸೆರೊ ವರ್ಣಿಸಿದ್ದಾನೆ, ಆತನ ಬಹುಪಾಲು ಬರಹಗಳು ಈಗ ಇಲ್ಲವಾಗಿವೆ ಮತ್ತು ಆತನ ಮೂಲಕೃತಿಗಳ ಪೈಕಿ ಕೇವಲ ಮೂರನೇ ಒಂದು ಭಾಗ ಮಾತ್ರವೇ ಸದ್ಯಕ್ಕೆ ಲಭ್ಯವಿವೆ ಎಂಬ ಅಭಿಪ್ರಾಯವೂ ಚಾಲ್ತಿಯಲ್ಲಿದೆ.

ಇಂದಿನ ಥೆಸ್ಸಾಲೊನಿಕಿಯ ಸುಮಾರು ಪೂರ್ವದಿಕ್ಕಿನಲ್ಲಿರುವ ಚಾಲ್ಸಿಡೈಸ್‌ನ ಸ್ಟಾಗೈರಾದಲ್ಲಿ, 384 BCಯಲ್ಲಿ, ಅರಿಸ್ಟಾಟಲ್ ಹುಟ್ಟಿದ. ಆತನ ತಂದೆ ನಿಕೊಮ್ಯಾಕಸ್, ಮೆಸೆಡಾನ್‌ನ ರಾಜ ಅಮಿಂಟಾಸ್‌ನಿಗೆ ಖಾಸಗಿ ವೈದ್ಯನಾಗಿದ್ದ. ಕುಲೀನ ವರ್ಗದ ಓರ್ವ ಸದಸ್ಯನಂತೆ ಅರಿಸ್ಟಾಟಲ್‌ಗೆ ತರಬೇತಿ ಮತ್ತು ಶಿಕ್ಷಣವನ್ನು ನೀಡಲಾಯಿತು. ಸುಮಾರು ಹದಿನೆಂಟರ ವರ್ಷದವನಾಗಿದ್ದಾಗ, ಪ್ಲೇಟೋನ ವಿದ್ಯಾಸಂಸ್ಥೆಯಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಲು ಆತ ಅಥೆನ್ಸ್‌ಗೆ ತೆರಳಿದ. ಸುಮಾರು ಇಪ್ಪತ್ತು ವರ್ಷಗಳ ಕಾಲ ಅರಿಸ್ಟಾಟಲ್ ಸದರಿ ವಿದ್ಯಾಸಂಸ್ಥೆಯಲ್ಲಿಯೇ ಉಳಿದಿದ್ದ. ಕ್ರಿ.ಶ.347 ಯಲ್ಲಿ ಪ್ಲೇಟೋನ ಸಾವು ಸಂಭವಿಸಿದ ನಂತರವೂ ಆತ ಜಾಗವನ್ನು ತೆರವುಗೊಳಿಸಲಿಲ್ಲ. ನಂತರ, ಕ್ಸೀನೋಕ್ರೇಟ್ಸ್‌ನೊಂದಿಗೆ ಏಷ್ಯಾ ಮೈನರ್‌ನಲ್ಲಿನ ಅಟಾರ್ನಿಯಸ್‌ನ ಹರ್ಮಿಯಾಸ್ ಎಂಬ ತನ್ನ ಸ್ನೇಹಿತನ ಆಸ್ಥಾನಕ್ಕೆ ಆತ ಪಯಣಿಸಿದ. ಏಷ್ಯಾದಲ್ಲಿರುವಾಗ, ಥಿಯೋಫ್ರಾಸ್ಟಸ್‌ನೊಂದಿಗೆ ಲೆಸ್ಬೋಸ್ ದ್ವೀಪಕ್ಕೆ ಅರಿಸ್ಟಾಟಲ್ ಪಯಣಿಸಿದ. ಅಲ್ಲಿ ಅವರಿಬ್ಬರೂ ಸದರಿ ದ್ವೀಪದ ಸಸ್ಯಶಾಸ್ತ್ರ ಮತ್ತು ಜೀವಶಾಸ್ತ್ರದ ಕುರಿತಾಗಿ ಒಟ್ಟಿಗೇ ಸಂಶೋಧನೆ ನಡೆಸಿದರು. ಹರ್ಮಿಯಾಸ್‌ನ ದತ್ತುಪುತ್ರಿ ಪೈಥಿಯಾಸ್‌ಳನ್ನು ಅರಿಸ್ಟಾಟಲ್ ಮದುವೆಯಾದ. ಆಕೆ ಅವನಿಗೊಂದು ಮಗುವನ್ನು ನೀಡಿದಳು. ಪೈಥಿಯಾಸ್ ಎಂದು ಆ ಮಗುವಿಗೆ ನಾಮಕರಣ ಮಾಡಲಾಯಿತು. ಹರ್ಮಿಯಾಸ್‌ನ ಮರಣದ ನಂತರ, 343 B.C.ಯಲ್ಲಿ ಮೆಕೆಡಾನ್‌ನ IIನೇ ಫಿಲಿಪ್‌ನಿಂದ ಅರಿಸ್ಟಾಟಲ್‌ಗೆ ಆಹ್ವಾನ ಬಂತು. ತನ್ನ ಮಗ ಅಲೆಕ್ಸಾಂಡರ್ ಮಹಾಶಯನಿಗೆ ಅರಿಸ್ಟಾಟಲ್ ಬೋಧಕನಾಗಿ ಕಾರ್ಯನಿರ್ವಹಿಸಬೇಕು ಎನ್ನುವುದು ಫಿಲಿಪ್‌ನ ಬಯಕೆಯಾಗಿತ್ತು.
ಮೆಕೆಡಾನ್‌ನ ರಾಯಲ್ ಅಕೆಡೆಮಿಯ ಮುಖ್ಯಸ್ಥನಾಗಿ ಅರಿಸ್ಟಾಟಲ್‌ನನ್ನು ನೇಮಿಸಲಾಯಿತು. ಆ ಅವಧಿಯಲ್ಲಿ ಅಲೆಕ್ಸಾಂಡರ್‌ಗೆ ಮಾತ್ರವಲ್ಲದೆ ಟೊಲೆಮಿ ಮತ್ತು ಕೆಸ್ಸಾಂಡರ್ ಎಂಬ ಇತರಿಬ್ಬರು ಭವಿಷ್ಯದ ರಾಜರಿಗೂ ಸಹ ಆತ ಪಾಠಗಳನ್ನು ಹೇಳಿಕೊಟ್ಟ. ಉಳಿದೆಲ್ಲ ನಾಗರಿಕರೆಲ್ಲರ ಒಟ್ಟು ಮಾಡಿದ ಸದ್ಗುಣದೊಂದಿಗೆ ತುಲನೆ ಮಾಡಿನೋಡಿದಾಗ, ರಾಜ ಮತ್ತವನ ಕುಟುಂಬದ ಸದ್ಗುಣ ಪ್ರಮಾಣವು ಹೆಚ್ಚಾಗಿ ಕಂಡುಬಂದಲ್ಲಿ, ಕೇವಲ ಅದು ಮಾತ್ರವೇ ರಾಜಪ್ರಭುತ್ವವನ್ನು ಸಮರ್ಥಿಸಬಲ್ಲದು ಎಂದು ಪಾಲಿಟಿಕ್ಸ್ ಎಂಬ ತನ್ನ ಕೃತಿಯಲ್ಲಿ ಅರಿಸ್ಟಾಟಲ್ ಹೇಳುತ್ತಾನೆ. ಯುವ ರಾಜಕುಮಾರ ಮತ್ತು ಅವನ ತಂದೆಯನ್ನು ಚಾಕಚಕ್ಯತೆಯಿಂದ ಅಥವಾ ಸಮಯಸ್ಫೂರ್ತಿಯಿಂದ ಆ ವರ್ಗದಲ್ಲಿ ಅವನು ಸೇರಿಸಿದ. ಪೌರಸ್ತ್ಯ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅರಿಸ್ಟಾಟಲ್ ಅಲೆಕ್ಸಾಂಡರ್‌ನನ್ನು ಪ್ರೇರೇಪಿಸಿದ, ಮತ್ತು ಪರ್ಷಿಯಾದೆಡೆಗಿನ ಅವನ ವರ್ತನೆ ಅಥವಾ ದೃಷ್ಟಿಕೋನವು ಜನಾಂಗಕೇಂದ್ರಿತವಾಗಿತ್ತು ಎಂದು ನಿಸ್ಸಂಕೋಚವಾಗಿ ಹೇಳಬಹುದು. ’ಗ್ರೀಕರಿಗೆ ಓರ್ವ ನಾಯಕನಾಗಿ ಮತ್ತು ಗ್ರೀಕೇತರರಿಗೆ ಅಥವಾ ಅನ್ಯದೇಶೀಯರಿಗೆ ಓರ್ವ ನಿರಂಕುಶ ಪ್ರಭುವಾಗಿರುವಂತೆ, ಸ್ನೇಹಿತರು ಮತ್ತು ಸಂಬಂಧಿಗಳ ನಂತರದ ಸ್ಥಾನದಲ್ಲಿ ಗ್ರೀಕರನ್ನು ನೋಡಿಕೊಳ್ಳುವಂತೆ, ಹಾಗೂ ಪಶುಗಳ ಅಥವಾ ಗಿಡಗಳೊಂದಿಗೆ ವರ್ತಿಸುವ ರೀತಿಯಲ್ಲಿ ಅನ್ಯದೇಶೀಯರೊಂದಿಗೆ ನಡೆದುಕೊಳ್ಳುವಂತೆ’ ಒಂದು ಪ್ರಖ್ಯಾತ ನಿದರ್ಶನದಲ್ಲಿ ಅಲೆಕ್ಸಾಂಡರ್‌ಗೆ ಆತ ಹಿತವಚನವನ್ನು ನೀಡುತ್ತಾನೆ. 335 BCಯ ಹೊತ್ತಿಗಾಗಲೇ ಆತ ಅಥೆನ್ಸ್‌ಗೆ ಹಿಂದಿರುಗಿದ್ದ. ಲೈಸಿಯಂ ಎಂಬ ಹೆಸರಿನ ತನ್ನದೇ ಸ್ವಂತ ಶಾಲೆಯನ್ನು ಅಲ್ಲಿ ಆತ ಸ್ಥಾಪಿಸಿದ. ಮುಂದಿನ ಹನ್ನೆರಡು ವರ್ಷಗಳವರೆಗೆ ಆ ಶಾಲೆಯಲ್ಲಿ ಅರಿಸ್ಟಾಟಲ್ ತರಗತಿಗಳನ್ನು ನಡೆಸಿದ. ಅಥೆನ್ಸ್‌ನಲ್ಲಿರುವಾಗ ಆತನ ಹೆಂಡತಿ ಪೈಥಿಯಾಸ್ ತೀರಿಕೊಂಡಳು ಮತ್ತು ಸ್ಟಾಗೈರಾದ ಹರ್ಪೈಲಿಸ್‌ಳಿಗೆ ಅರಿಸ್ಟಾಟಲ್ ಒಡನಾಡಿಯಾದ. ಆಕೆ ಗಂಡುಮಗುವೊಂದಕ್ಕೆ ಜನ್ಮ ನೀಡಿದಳು ಮತ್ತು ತನ್ನ ತಂದೆಯ ಹೆಸರಾದ ನಿಕೊಮ್ಯಾಕಸ್ ಎಂಬ ಹೆಸರನ್ನೇ ಆ ಮಗುವಿಗೂ ಅರಿಸ್ಟಾಟಲ್ ಇಟ್ಟ. ಸೂಡಾದ ಪ್ರಕಾರ, ಅಬೈಡಸ್‌ನ ಪಾಲಿಫೇಟಸ್‌ಗೆ ಸೇರಿದ ಇರೊಮಿನಸ್ ಎಂಬುವವಳ ಜೊತೆಗೂ ಆತನ ಒಡನಾಟವಿತ್ತು. 335 ರಿಂದ 323 BCವರೆಗೆ ಅಥೆನ್ಸ್‌ನಲ್ಲಿದ್ದ ಆ ಅವಧಿಯಲ್ಲೇ ಅರಿಸ್ಟಾಟಲ್ ತನ್ನ ಬಹುಪಾಲು ಕೃತಿಗಳನ್ನು ರಚಿಸಿರಬಹುದೆಂದು ನಂಬಲಾಗಿದೆ. ಅರಿಸ್ಟಾಟಲ್ ಅನೇಕ ಸಂಭಾಷಣಾ ರೂಪದ ಗ್ರಂಥಗಳನ್ನು ಬರೆದಿದ್ದು, ಅವುಗಳಲ್ಲಿ ಅವಶಿಷ್ಟ ಭಾಗಗಳಷ್ಟೇ ಉಳಿದಿವೆ. ಹೀಗೆ ಉಳಿದುಕೊಂಡ ಭಾಗಗಳು ಪ್ರಕರಣ ಗ್ರಂಥದ ಸ್ವರೂಪದಲ್ಲಿದ್ದು, ಅವುಗಳ ಬಹುತೇಕ ಭಾಗವು ವ್ಯಾಪಕವಾಗಿ ಪ್ರಕಟವಾಗುವ ಉದ್ದೇಶವನ್ನು ಹೊಂದಿರಲಿಲ್ಲ. ಏಕೆಂದರೆ, ಈ ಭಾಗಗಳು ಆತನ ವಿದ್ಯಾರ್ಥಿಗಳಿಗಾಗಿ ಮೀಸಲಿಡಲಾಗಿದ್ದ ಬೋಧನಾ ಸಾಮಗ್ರಿಗಳಾಗಿವೆ ಎಂದು ಸಾಮಾನ್ಯವಾಗಿ ಭಾವಿಸಲಾಗಿತ್ತು. ಆತನ ಅತಿ ಪ್ರಮುಖ ಪ್ರಕರಣ ಗ್ರಂಥಗಳಲ್ಲಿ ಫಿಸಿಕ್ಸ್ , ಮೆಟಾಫಿಸಿಕ್ಸ್ , ನಿಕೋಮೇಕಿಯನ್ ಎಥಿಕ್ಸ್ , ಪಾಲಿಟಿಕ್ಸ್ , ಡಿ ಅನಿಮಾ ಮತ್ತು ಪೊಯೆಟಿಕ್ಸ್ ಇವೇ ಮೊದಲಾದವು ಸೇರಿವೆ. ಆ ಸಮಯದಲ್ಲಿ ಕಾರ್ಯಸಾಧ್ಯವಾದ ಸರಿಸುಮಾರು ಎಲ್ಲ ವಿಷಯಗಳ ಅಧ್ಯಯನವನ್ನು ಮಾತ್ರವೇ ಅರಿಸ್ಟಾಟಲ್ ಮಾಡಲಿಲ್ಲ. ಅದರ ಜೊತೆಗೆ, ಅವುಗಳಲ್ಲಿ ಬಹುತೇಕ ವಿಷಯಗಳ ಕುರಿತಾಗಿ ಗಮನಾರ್ಹವಾದ ಕೊಡುಗೆಗಳನ್ನು ಸಲ್ಲಿಸಿದ್ದಾನೆ. ಭೌತಿಕ ವಿಜ್ಞಾನದಲ್ಲಿ, ಅಂಗರಚನಾ ಶಾಸ್ತ್ರ, ಖಗೋಳ ವಿಜ್ಞಾನ, ಅರ್ಥಶಾಸ್ತ್ರ, ಭ್ರೂಣಶಾಸ್ತ್ರ, ಭೂಗೋಳ, ಭೂವಿಜ್ಞಾನ, ಪವನಶಾಸ್ತ್ರ, ಭೌತಶಾಸ್ತ್ರ ಮತ್ತು ಜೀವಶಾಸ್ತ್ರಗಳನ್ನು ಅರಿಸ್ಟಾಟಲ್ ಅಧ್ಯಯನಮಾಡಿದ. ತತ್ತ್ವಶಾಸ್ತ್ರದಲ್ಲಿ, ಸೌಂದರ್ಯ ಮೀಮಾಂಸೆ, ನೀತಿಶಾಸ್ತ್ರ, ಸರ್ಕಾರ, ತತ್ತ್ವಮೀಮಾಂಸೆ, ರಾಜಕಾರಣ, ಮನೋವಿಜ್ಞಾನ, ಭಾಷಣಶಾಸ್ತ್ರ ಮತ್ತು ದೇವತಾಶಾಸ್ತ್ರಗಳ ಕುರಿತಾಗಿ ಆತ ಕೃತಿಗಳನ್ನು ರಚಿಸಿದ. ಶಿಕ್ಷಣ, ವಿದೇಶಿ ಸುಂಕಗಳು, ಸಾಹಿತ್ಯ ಮತ್ತು ಕವಿತೆ ಇವೇ ಮೊದಲಾದ ವಿಷಯಗಳನ್ನೂ ಆತ ಅಧ್ಯಯನ ಮಾಡಿದ. ಆತನ ಸಂಯೋಜಿತ ಕೃತಿಗಳು ಗ್ರೀಕ್ ಜ್ಞಾನಸಾಗರದ ಒಂದು ವಸ್ತುತಃ ವಿಶ್ವಕೋಶವೇ ಆಗಿ ಮೈದಳೆದಿವೆ. ತಾನು ಬದುಕಿದ್ದ ಕಾಲದ ಅವಧಿಯಲ್ಲಿ ಏನೇನನ್ನು ತಿಳಿದುಕೊಂಡಿರಬೇಕಿತ್ತೋ ಅವೆಲ್ಲವನ್ನೂ ತಿಳಿದುಕೊಂಡವರಲ್ಲಿ ಪ್ರಾಯಶಃ ಅರಿಸ್ಟಾಟಲ್ ಕೊನೆಯ ವ್ಯಕ್ತಿ ಎಂದು ಹೇಳುವುದು ವಾಡಿಕೆಯಾಗಿದೆ.

ಅಲೆಕ್ಸಾಂಡರ್ನ ಬದುಕಿನ ಕೊನೆಯ ದಿನಗಳು ಸಮೀಪಿಸುತ್ತಿದ್ದಂತೆ, ತನ್ನ ವಿರುದ್ಧ ಸಂಚುಗಳು ನಡೆಯುತ್ತಿವೆ ಎಂದು ಶಂಕಿಸಲು ಪ್ರಾರಂಭಿಸಿದ ಅಲೆಕ್ಸಾಂಡರ್, ಪತ್ರಗಳ ಮೂಲಕ ಅರಿಸ್ಟಾಟಲ್‌ನನ್ನು ಬೆದರಿಸಿದ. ಅಲೆಕ್ಸಾಂಡರನ ದೇವಮಾನವನ ಸೋಗು ಅಥವಾ ಡೋಂಗಿಯ ಕುರಿತಾಗಿ ತನಗಿರುವ ತಾತ್ಸಾರವನ್ನು ಅರಿಸ್ಟಾಟಲ್ ಎಂದೂ ಮುಚ್ಚಿಟ್ಟರಲಿಲ್ಲ, ಮತ್ತು ಅರಿಸ್ಟಾಟಲ್‌ನ ಸೋದರ ಮೊಮ್ಮಗ ಕ್ಯಾಲಿಸ್ಥೆನ್ಸಸ್‌ನನ್ನು ಓರ್ವ ದೇಶದ್ರೋಹಿಯೆಂದು ರಾಜನು ಗಲ್ಲಿಗೇರಿಸಿದ್ದ. ಅಲೆಕ್ಸಾಂಡರ್‌ನ ಮರಣದಲ್ಲಿ ಅರಿಸ್ಟಾಟಲ್ ಪಾತ್ರ ವಹಿಸುತ್ತಿದ್ದಾನೆ ಎಂದು ಪ್ರಾಚೀನರಲ್ಲಿನ ಒಂದು ವ್ಯಾಪಕ ಸಂಪ್ರದಾಯವು ಶಂಕಿಸಿತಾದರೂ, ಈ ಕುರಿತು ಯಾವುದೇ ಚಿಕ್ಕ ಸಾಕ್ಷ್ಯವೂ ಸಿಕ್ಕಿಲ್ಲ. ಅಲೆಕ್ಸಾಂಡರ್‌ನ ಮರಣಾನಂತರ ಅಥೆನ್ಸ್‌ನಲ್ಲಿ ಮೆಕೆಡಾನೀಯರ-ವಿರೋಧಿ ಭಾವನೆಯು ಮತ್ತೊಮ್ಮೆ ಭುಗಿಲೆದ್ದಿತು. ದೇವರುಗಳಲ್ಲಿ ಗೌರವ ತೋರದಿದ್ದುದಕ್ಕಾಗಿ ದೀಕ್ಷಾಗುರುವಾದ ಯುರಿಮೆಡಾನ್ ಅರಿಸ್ಟಾಟಲ್‌ನನ್ನು ಬಹಿರಂಗವಾಗಿ ಉಗ್ರವಾಗಿ ಟೀಕಿಸಿದ. ನಗರವನ್ನು ಏಕಾಏಕಿ ಬಿಟ್ಟು ಪಲಾಯನ ಮಾಡಿದ ಅರಿಸ್ಟಾಟಲ್, ಚಾಲ್ಸಿಸ್‌ನಲ್ಲಿನ ತನ್ನ ತಾಯಿಯ ಕುಟುಂಬದ ತೋಟಕ್ಕೆ ತೆರಳಿದ. ಹೀಗೆ ಹೋಗುವಾಗ ಆತ, “ತತ್ತ್ವಶಾಸ್ತ್ರದ ವಿರುದ್ಧವಾಗಿ ಎರಡುಸಲ ಪಾಪವೆಸಗಲು ನಾನು ಅಥೆನ್ಸಿನ ಜನರಿಗೆ ಅವಕಾಶ ಮಾಡಿಕೊಡುವುದಿಲ್ಲ”ಎಂದು ಹೇಳಿರುವುದು ಅಥೆನ್ಸ್‌ನ ಇದಕ್ಕೂ ಮುಂಚಿನ, ಸಾಕ್ರಟಿಸ್‌ನ ವಿಚಾರಣೆ ಮತ್ತು ಗಲ್ಲಿಗೇರಿಸುವಿಕೆಗೆ ಒಂದು ಉಲ್ಲೇಖವಾಗಿದೆ. ಆದಾಗ್ಯೂ, ಆ ವರ್ಷದೊಳಗೆ ಯುಬಿಯಾದಲ್ಲಿ ಆತ ಸ್ವಾಭಾವಿಕವಾಗಿ ಮರಣ ಹೊಂದಿದ. ತನ್ನ ವಿದ್ಯಾರ್ಥಿ ಆಂಟಿಪೇಟರ್‌ನನ್ನು ಮುಖ್ಯ ಕಾರ್ಯನಿರ್ವಾಹಕನನ್ನಾಗಿ ನೇಮಿಸಿದ ಅರಿಸ್ಟಾಟಲ್, ತನ್ನಹೆಂಡತಿಯ ಗೋರಿಯ ಪಕ್ಕದಲ್ಲೇ ತನ್ನನ್ನೂ ಸಮಾಧಿ ಮಾಡಬೇಕು ಎಂದು ನಮೂದಿಸಿದ್ದ ಉಯಿಲು ಒಂದನ್ನು ಬಿಟ್ಟುಹೋದ.
ಧನ್ಯವಾದಗಳು.
GIPHY App Key not set. Please check settings