in

ಕರ್ನಾಟಕದ ಇತಿಹಾಸ ಪ್ರಸಿದ್ದ ಕೋಟೆಗಳು

ಕರ್ನಾಟಕದ ಇತಿಹಾಸ ಪ್ರಸಿದ್ದ ಕೋಟೆಗಳು
ಕರ್ನಾಟಕದ ಇತಿಹಾಸ ಪ್ರಸಿದ್ದ ಕೋಟೆಗಳು

ಕೋಟೆಯನ್ನು ಕನ್ನಡದಲ್ಲಿ ಗಡ ಹಾಗು ದುರ್ಗ ಎಂದು ಸಹ ಕರೆಯಲಾಗುತ್ತದೆ, ಕರ್ನಾಟಕದಲ್ಲಿ ಹಲವು ಕೋಟೆಗಳಿವೆ.

ಕರ್ನಾಟಕವನ್ನು ಮೌರ್ಯ, ಹೊಯ್ಸಳ, ವಿಜಯನಗರ, ಚಾಲುಕ್ಯ, ಕದಂಬ, ರಾಷ್ಟ್ರಕೂಟರು, ಗಂಗರು ಸೇರಿದಂತೆ ಮುಂತಾದ ರಾಜವಂಶಗಳು ಆಳಿವೆ. ಈ ಎಲ್ಲಾ ಸಾಮ್ರಾಜ್ಯಗಳು ತಮ್ಮ ಶ್ರೀಮಂತ ಪರಂಪರೆ ಮತ್ತು ಇತಿಹಾಸವನ್ನು ಬಿಟ್ಟು ಹೋಗಿವೆ. ಐತಿಹಾಸಿಕ ದೇವಾಲಯಗಳು, ಸ್ಮಾರಕಗಳು, ಅರಮನೆಗಳು ಮತ್ತು ಕೋಟೆಗಳು ಈ ವೀರ ಪರಂಪರೆಯ ಸಾವಿರಾರು ಕಥೆಗಳನ್ನು ಹೇಳುತ್ತವೆ. ಈ ಕರ್ನಾಟಕದ ಭವ್ಯವಾದ ಕೋಟೆಗಳಿಗೆ ಭೇಟಿ ನೀಡಬೇಕು. ಈ ಕೋಟೆಗಳ ಅವಶೇಷಗಳು ಎಲ್ಲಾ ರೂಪಗಳಲ್ಲಿ ತಮ್ಮ ಅಂದಿನ ಭವ್ಯತೆ ಮತ್ತು ವೈಭವವನ್ನು ಪ್ರತಿನಿಧಿಸುತ್ತವೆ.

ಕೋಟೆಗಳು ಸಾಮಾನ್ಯವಾಗಿ ಪ್ರದೇಶದ ರಕ್ಷಣೆಯನ್ನು ಪರಿಣಾಮಾತ್ಮಕವಾಗಿ ಮಾಡಲು ತಂತ್ರಗಾರಿಕೆ, ದೂರುದ್ದೇಶದಿಂದ ಕೂಡಿರುವ ಆಯಾ ಪ್ರದೇಶಗಳನ್ನು ಆಳುತ್ತಿದ್ದ ಅಂದಿನ ರಾಜರುಗಳಿಂದ ನಿರ್ಮಿತವಾದ ದೊಡ್ಡ ರಚನೆಗಳು. ಇಂದಿನ ಕಾಲದ ಹಾಗೆ ಮುಂದುವರೆದ ವಿಜ್ಞಾನ, ಆಧುನಿಕ ನಿರ್ಮಾಣ ಉಪಕರಣಗಳು, ಸಾಮಗ್ರಿಗಳು ಆ ದಿನಗಳಲ್ಲಿ ಇಲ್ಲದಿದ್ದರೂ ಕೂಡ ಅತ್ಯಂತ ಸದೃಢವಾಗಿ ನಿರ್ಮಿಸಲ್ಪಟ್ಟಿರುವ ಈ ಕೋಟೆಗಳು ಅದೆಷ್ಟೊ ದಶಕಗಳು ಕಳೆದರೂ ಇಂದಿಗೂ ಠಿವಿಯಿಂದ ನಿಂತಿರುವುದು ನೋಡಿದರೆ ಇಂದಿನ ನಿರ್ಮಾಣ ಪದ್ಧತಿಗಳಿಗೆ ಸವಾಲೆಸೆಯುವಂತಿದೆ ಎಂದರೆ ತಪ್ಪಾಗಲಾರದು.

ಶತ್ರುಗಳ ಚಲನ ವಲನ ಹಾಗು ಆಕ್ರಮಣಗಳನ್ನು ತಡೆಯುವ ನಿಟ್ಟಿನಿಂದ ಕೋಟೆಗಳನ್ನು ದೊಡ್ಡ ದೊಡ್ಡ ಕಲ್ಲು ಚಪ್ಪಡಿಗಳಿಂದ ವಿಶಾಲವಾಗಿ ಎತ್ತರದ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿತ್ತು. ಇದರಿಂದ ಶತ್ರುಗಳು ನುಗ್ಗುವುದನ್ನು ಸುಲಭವಾಗಿ ಗಮನಿಸಬಹುದಾಗಿತ್ತು. ಅಷ್ಟೆ ಅಲ್ಲ ಶತ್ರುಗಳೂ ಕೂಡ ಎತ್ತರದಲ್ಲಿರುವ ಕೋಟೆಯನ್ನು ಪ್ರವೇಶಿಸಲು ಸಾಕಷ್ಟು ಕಷ್ಟಪಡಬೇಕಾಗಿತ್ತು. ಇಂತಹ ಕೌತುಕಮಯ ರಚನೆಗಳನ್ನು ಭಾರತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದು. ಕರ್ನಾಟಕ ರಾಜ್ಯದಲ್ಲೂ ಕೂಡ ಬಹಳಷ್ಟು ಕೋಟೆಗಳಿವೆಯಾದರೂ ಕೆಲವು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿ ಬಹು ಜನಪ್ರಿಯವಾಗಿವೆ.

*ಬೀದರ ಕೋಟೆ

ಕರ್ನಾಟಕದ ಇತಿಹಾಸ ಪ್ರಸಿದ್ದ ಕೋಟೆಗಳು
ಬೀದರ ಕೋಟೆ

ಬಹಮನಿ ರಾಜವಂಶದ ಸುಲ್ತಾನ್ ಅಹ್ಮದ್ ಶಾ ವಾಲಿ 1429 ರಿಂದ 1432 ರಲ್ಲಿ ತನ್ನ ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀದರ್‌ಗೆ ಸ್ಥಳಾಂತರಿಸಿದನು ಮತ್ತು ಆವರಣದೊಳಗೆ 30 ಕ್ಕೂ ಹೆಚ್ಚು ಸ್ಮಾರಕಗಳೊಂದಿಗೆ ಈ ಬೃಹತ್ ಕೋಟೆಯನ್ನು ಪುನರ್ನಿರ್ಮಿಸಿದನು. ಮೂಲತಃ ಕೋಟೆಯನ್ನು 8 ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ನಂತರ ಔರಂಗಜೇಬನ ವಶವಾಯಿತು. ಕ್ರಿ.ಶ 1726 ವರೆಗೆ ಈ ಕೋಟೆಯನ್ನು ಸಲಾಬತ್ ಜಂಗ್ ಆಳಿದರು. ಮತ್ತು 20 ನೇ ಶತಮಾನದ ಮಧ್ಯದಲ್ಲಿ, ಹೈದರಾಬಾದ್ ರಾಜ್ಯ ವಿಭಜನೆಯಾದಾಗ, ಬೀದರ್ ಕೋಟೆಯು ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯದ ಭಾಗವಾಯಿತು. ಬೀದರ್ ಕೋಟೆಯು ಏಳು ಪ್ರವೇಶದ್ವಾರಗಳನ್ನು ಹೊಂದಿದೆ, ಹಮ್ಮಾಮ್ ಎಂಬ ಟರ್ಕಿಶ್ ಬಾತ್ ಅನ್ನು ಈಗ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಇಲ್ಲಿನ ಪ್ರಸಿದ್ಧ ಮಸೀದಿಗಳು ಮತ್ತು ಮಹಲ್‌ಗಳು ಅನುಕರಣೀಯ ಇಸ್ಲಾಮಿಕ್ ಮತ್ತು ಪರ್ಷಿಯನ್ ವಾಸ್ತುಶಿಲ್ಪವನ್ನು ಪ್ರದರ್ಶಿಸುತ್ತವೆ.

*ಮಿರ್ಜಾನ್ ಕೋಟೆ

ಉತ್ತರ ಕನ್ನಡದ ಪಶ್ಚಿಮ ಕರಾವಳಿ ತೀರದಲ್ಲಿ ಈ ಕೋಟೆಯನ್ನು ಕಾಣಬಹುದು. ಹಲವು ಕದನಗಳಿಗೆ ಸಾಕ್ಷಿಯಾಗಿ ನಿಂತಿರುವ ಈ ಕೋಟೆಯು ತನ್ನಲ್ಲಿನ ವಾಸ್ತುಶಿಲ್ಪಕ್ಕೂ ಕೂಡ ಹೆಸರುವಾಸಿಯಾಗಿದೆ. ಈ ಕೋಟೆಯು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಕರ್ಣದಿಂದ 11 ಕಿ.ಮೀ ದೂರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 11 ರಿಂದ ಕೇವಲ ಅರ್ಧ ಕಿ.ಮೀ ಅಂತರದಲ್ಲಿ ನೆಲೆಸಿದೆ. ಗೇರುಸೊಪ್ಪದ ರಾಣಿ ಚೆನ್ನಭೈರದೇವಿಯಿಂದ 16 ನೆಯ ಶತಮಾನದಲ್ಲಿ ಈ ಕೋಟೆಯು ನಿರ್ಮಾಣವಾಗಿದೆ

*ಚಿತ್ರದುರ್ಗ ಕೋಟೆ

ಕರ್ನಾಟಕದ ಇತಿಹಾಸ ಪ್ರಸಿದ್ದ ಕೋಟೆಗಳು
ಚಿತ್ರದುರ್ಗ ಕೋಟೆ

11 ರಿಂದ 13 ನೇ ಶತಮಾನದ ನಡುವೆ ಚಾಲುಕ್ಯರು ಅಥವಾ ಹೊಯ್ಸಳರಿಂದ ಈ ಕೋಟೆಯು ನಿರ್ಮಿಸಲ್ಪಟಿತು. ಇದು ಅಕ್ಕಪಕ್ಕದ ಬೆಟ್ಟಗಳ ಅದ್ಭುತ ನೋಟವನ್ನು ನೀಡುತ್ತದೆ. ಚಿತ್ರದುರ್ಗದ ನಾಯಕರಿಂದ 15 ರಿಂದ 18 ನೇ ಶತಮಾನದ ನಡುವೆ ಈ ಕೋಟೆಯನ್ನು ವಿಸ್ತರಿಸಲಾಯಿತು.

ಬೆಂಗಳೂರಿನಿಂದ ಕೇವಲ 200 ಕಿಮೀ ದೂರದಲ್ಲಿರುವ ಈ ಕೋಟೆಯು ತೀವ್ರವಾದ ಮತ್ತು ವಿಸ್ತಾರವಾದ ರಕ್ಷಣಾ ವ್ಯವಸ್ಥೆಯಿಂದಾಗಿ ಏಳು ಸುತ್ತಿನ ಕೋಟೆ ಎಂದು ಹೆಸರುವಾಸಿಯಾಗಿದೆ. ಒನಕೆ ಓಬವ್ವ ಕಿಂಡಿಯ ಜನಪ್ರಿಯ ಕಥೆಯು ಕೋಟೆಯ ಭೇಟಿಯನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ. ದಾಳಿಯ ಸಂದರ್ಭದಲ್ಲಿ ಕಾವಲುಗಾರನ ಹೆಂಡತಿ ಒನಕೆ ಓಬವ್ವ ಕೋಟೆಯನ್ನು ರಕ್ಷಿಸಿದಳು ಎಂಬುದು ನಮ್ಮ ನಾಡಿನ ಹೆಮ್ಮೆ ಆಗಿದೆ.

*ಮುದ್ಗಲ್ ಕೋಟೆ

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್ ಎಂಬಲ್ಲಿ ಈ ಕೋಟೆಯಿದೆ. ದೇವಗಿರಿಯ ಸೇವುಣ ಯಾದವರಿಗೆ ಸಂಬಂಧಿಸಿದ ಹಲವಾರು ಶಾಸನಗಳನ್ನು ಈ ಐತಿಹಾಸಿಕ ಪಟ್ಟಣದಲ್ಲಿ ಕಾಣಬಹುದು.

*ಗಜೇಂದ್ರಗಡ ಕೋಟೆ

ಕರ್ನಾಟಕದ ಇತಿಹಾಸ ಪ್ರಸಿದ್ದ ಕೋಟೆಗಳು
ಗಜೇಂದ್ರಗಡ ಕೋಟೆ

ಗಜೇಂದ್ರ ಎಂದರೆ ಆನೆ ದೇವರು ಮತ್ತು ಗಡ್ ಎಂದರೆ ಕೋಟೆ, ಹೀಗಾಗಿ ಈ ಕೋಟೆಗೆ ಈ ಹೆಸರು ಬಂದಿದೆ. ಗದಗ ಜಿಲ್ಲಾ ಕೇಂದ್ರದಿಂದ ಕೇವಲ 55 ಕಿ.ಮೀ ದೂರದಲ್ಲಿರುವ ಈ ದೈತ್ಯಾಕಾರದ ಕೋಟೆಯು ಬೆಟ್ಟದ ತುದಿಯಲ್ಲಿದೆ. ನಗರದ ವೈಮಾನಿಕ ನೋಟವು ಆನೆಯಂತೆ ಕಾಣುತ್ತದೆ ಆದ್ದರಿಂದ ಈ ಹೆಸರು ಬಂದಿದೆ.

ಗಜೇಂದ್ರಗಡ ಕೋಟೆಯು ಪ್ರಸಿದ್ಧ ಮರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜರಿಂದ ನಿರ್ಮಿಸಲ್ಪಟ್ಟ ಐತಿಹಾಸಿಕ ಕೋಟೆಯಾಗಿದೆ. 

ಗಜೇಂದ್ರಗಡಕೋಟೆಯನ್ನು ಮೈಸೂರು ದೊರೆ ಟಿಪ್ಪು ಸುಲ್ತಾನ್ ರಿಂದ ಮರಾಠರು ವಶಪಡಿಸಿಕೊಂಡರು. ಹಾಗೆಯೇ ಬಾದಾಮಿ ಮತ್ತು ಗಜೇಂದ್ರಗಡವನ್ನು ಗಜೇಂದ್ರಗಡದ ಒಪ್ಪಂದದ ಭಾಗವಾಗಿ ಮರಾಠರಿಗೆ ಬಿಟ್ಟುಕೊಡಲಾಯಿತು.

*ಸವದತ್ತಿ ಕೋಟೆ

8 ಕೊತ್ತಲಗಳುಳ್ಳ ಈ ಕೋಟೆಯು ಶಿರಸಂಗಿ ದೇಸಾಯಿಯಿಂದ 18 ನೆಯ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. ಈ ಕೋಟೆಯಲ್ಲಿ ಕಾಡಸಿದ್ಧೇಶ್ವರನ ದೇವಾಲಯವಿದ್ದು ಅದು ತನ್ನ ಅದ್ಭುತವಾದ ವಾಸ್ತುಶಿಲ್ಪದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

*ಬಳ್ಳಾರಿ ಕೋಟೆ

ಐತಿಹಾಸಿಕ ನಗರವಾದ ಬಳ್ಳಾರಿಯಲ್ಲಿರುವ ಈ ಕೋಟೆಯು ಬಳ್ಳಾರಿ ಗುಡ್ಡದ ತುದಿಯಲ್ಲಿದೆ. ಈ ಕೋಟೆಯನ್ನು ಪಾಳೇಗಾರ ಮುಖ್ಯಸ್ಥ ಹನುಮಪ್ಪ ನಾಯಕ ನಿರ್ಮಿಸಿದನೆಂದು ನಂಬಲಾಗಿದೆ ಆದರೆ 1769 ರಲ್ಲಿ ಹೈದರ್ ಅಲಿ ಈ ಕೋಟೆಯನ್ನು ವಶಪಡಿಸಿಕೊಂಡನು. ಕೋಟೆಯನ್ನು ಸ್ವಾಧೀನಪಡಿಸಿಕೊಂಡ ನಂತರ, ಹೈದರ್ ಅಲಿ ಕೆಳ ಕೋಟೆಯನ್ನು ನಿರ್ಮಿಸಲು ಮತ್ತು ಮೇಲಿನ ಕೋಟೆ ಎಂದು ಕರೆಯಲ್ಪಡುವ ಬಳ್ಳಾರಿ ಕೋಟೆಯನ್ನು ನವೀಕರಿಸಲು ಫ್ರೆಂಚ್ ಎಂಜಿನಿಯರ್‌ಗಳಿಗೆ ನಿಯೋಜಿಸಿದನು. ಬಳ್ಳಾರಿ ಕೋಟೆಯು ವಿಜಯನಗರ ಕಾಲದ (14 ನೇ ಶತಮಾನ) ಕೋಟೆಯಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೇವಲ 300 ಕಿಮೀ ದೂರದಲ್ಲಿದೆ. ಬಳ್ಳಾರಿ ಕೋಟೆಯು ದೇವಾಲಯ ಮತ್ತು ಬಾವಿಗಳನ್ನು ಹೊಂದಿದೆ. ಕೆಳಗಿನ ಕೋಟೆಯು ಆಳವಾದ ಹೊಂಡಗಳನ್ನು ಮತ್ತು ಹನುಮಾನ್ ದೇವಾಲಯವನ್ನು ಹೊಂದಿದೆ.

*ರಾಯಚೂರು ಕೋಟೆ

ಕೃಷ್ಣಾ ಹಾಗು ತುಂಗಭದ್ರಾ ನದಿಗಳ ಮಧ್ಯೆ ನೆಲೆಸಿರುವ ರಾಯಚೂರು ಬೆಂಗಳೂರಿನಿಂದ 415 ಕಿ.ಮೀ ದೂರವಿದ್ದು ಇಲ್ಲಿ ಐತಿಹಾಸಿಕ ಪ್ರಸಿದ್ಧ ರಾಯಚೂರು ಕೋಟೆಯನ್ನು ಕಾಣಬಹುದಾಗಿದೆ. ಕಾಕತೀಯ ರಾಜ ರುದ್ರನಿಂದ ಈ ಕೋಟೆಯು 1284 ರಲ್ಲಿ ನಿರ್ಮಿಸಲ್ಪಟ್ಟಿದೆ. ಕಾಕತೀಯರು, ವಿಜಯನಗರ, ಬಹುಮನಿ ಹೀಗೆ ಹಲವು ಸಾಮ್ರಾಜ್ಯಗಳಡಿಯಲ್ಲಿ ಈ ಕೋಟೆಯು ಒಳಪಟ್ಟಿತ್ತು.

*ಕಲಬುರ್ಗಿ ಕೋಟೆ

ಕರ್ನಾಟಕದ ಇತಿಹಾಸ ಪ್ರಸಿದ್ದ ಕೋಟೆಗಳು
ಕಲಬುರ್ಗಿ ಕೋಟೆ

ಕಲಬುರಗಿ ಕೋಟೆಯು ಉತ್ತರ ಕರ್ನಾಟಕದ ಕಲಬುರಗಿ ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. 1347 ರಲ್ಲಿ ನಿರ್ಮಿಸಲಾದ ಕಲಬುರ್ಗಿ ಅಥವಾ ಗುಲ್ಬರ್ಗಾ ಕೋಟೆಯು ಉತ್ತರ ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿದೆ ಮತ್ತು ಇದು ಕರ್ನಾಟಕದ ಪ್ರಾಚೀನ ಇಸ್ಲಾಮಿಕ್ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ.

ಕಲಬುರಗಿ ಕೋಟೆಯನ್ನು ಮೂಲತಃ ವಾರಂಗಲ್‌ನ ರಾಜ ರಾಜಾ ಗುಲ್‌ಚಂದ್ ನಿರ್ಮಿಸಿದನು ಮತ್ತು ನಂತರ ಅಲಾ-ಉದ್ದೀನ್ ಬಹಮಾನ್‌ಶಾನಿಂದ ಈ ಕೋಟೆಯು ನವೀಕರಿಸಲ್ಪಟ್ಟಿತ್ತು. 20 ಎಕರೆಗಳಲ್ಲಿ ಹರಡಿರುವ ಕಲಬುರಗಿ ಕೋಟೆಯನ್ನು 14 ರಿಂದ 16 ನೇ ಶತಮಾನದವರೆಗೆ ಬಹಮನಿ ಸುಲ್ತಾನರು ದೀರ್ಘಕಾಲ ಆಳಿದರು. ತರುವಾಯ, ರಾಷ್ಟ್ರಕೂಟರು, ಚಾಲುಕ್ಯರು, ಕಲ್ಯಾಣಿಯ ಕಲಚೂರಿಗಳು, ದೇವಗಿರಿಯ ಯಾದವರು, ವಿಜಯನಗರ ಸಾಮ್ರಾಜ್ಯ, ಹೊಯ್ಸಳ ಸಾಮ್ರಾಜ್ಯ ಮತ್ತು ದೆಹಲಿಯ ಸುಲ್ತಾನರು ಆಳಿದರು. ಕಲಬುರಗಿ ಕೋಟೆಯಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ 15 ಕಾವಲು ಗೋಪುರಗಳು ಸೇರಿವೆ. ಇಲ್ಲಿನ ಜಾಮಿಯಾ ಮಸೀದಿ- ಭಾರತದ ಅತ್ಯಂತ ಹಳೆಯ ಮತ್ತು ದೊಡ್ಡ ಮಸೀದಿಗಳಲ್ಲಿ ಒಂದಾಗಿದೆ, ಇದು ಸ್ಪೇನ್‌ನ ಕಾರ್ಡೋಬಾ ಮಸೀದಿ ಮತ್ತು ಖಾಜಾ ಬಂದೆ ನವಾಜ್ ಸಮಾಧಿಯನ್ನು ಹೋಲುತ್ತದೆ.

*ಕಿತ್ತೂರು ಕೋಟೆ

ವೀರ ರಾಣಿ ಚೆನ್ನಮ್ಮ ಆಳಿದ ಕಿತ್ತೂರು ಕೋಟೆಯು ಕುಂದಾ ನಗರಿ ಬೆಳಗಾವಿಯಿಂದ 50 ಕಿ.ಮೀ ದೂರದಲ್ಲಿದೆ. ಇಲ್ಲಿ ನಾಥಪಂಥಿ ಮಠ, ಕಲ್ಮೇಶ್ವರ, ಮಾರುತಿ, ಬಸವಣ್ಣ ಹಾಗು ದ್ಯಾಮವ್ವನ ದೇವಾಲಯಗಳನ್ನು ಕಾಣಬಹುದು. ಪ್ರಸ್ತುತ ಇವುಗಳನ್ನು ನವೀಕರಣಗೊಳಿಸಲಾಗಿದ್ದು ಪ್ರವಾಸಿ ಆಕರ್ಷಣೆಗಳಾಗಿ ಗಮನ ಸೆಳೆಯುತ್ತವೆ.

*ಕವಲೇದುರ್ಗ ಕೋಟೆ

ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶದ ಕವಲೇ ದುರ್ಗ ಕೋಟೆಯನ್ನು 9 ನೇ ಶತಮಾನದಲ್ಲಿ ನಿರ್ಮಿಸಲಾಯಿತು ಮತ್ತು ಇದು 14 ನೇ ಶತಮಾನದಲ್ಲಿ ಚೆಲುವರಂಗಪ್ಪರಿಂದ ನವೀಕರಿಸಲ್ಪಟ್ಟಿತು. ವಿಜಯನಗರದ ಅರಸರ ಸಾಮಂತರಾದ ಕವಲೇದುರ್ಗ ನಾಯಕರು ಈ ಕೋಟೆಯ ಮೇಲೆ ಹಿಡಿತವನ್ನು ಹೊಂದಿದ್ದರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ್ ಅವರು ಸ್ವತಂತ್ರ ಸಾಮಂತರಾದರು.

ಕವಲೇದುರ್ಗ ಕೋಟೆಯು 3 ಸುತ್ತಿನ ಭದ್ರವಾದ ಕಲ್ಲಿನ ಗೋಡೆಗಳನ್ನು ಹೊಂದಿದೆ.

*ಬಸವಕಲ್ಯಾಣ ಕೋಟೆ

ಕರ್ನಾಟಕದ ಇತಿಹಾಸ ಪ್ರಸಿದ್ದ ಕೋಟೆಗಳು
ಬಸವಕಲ್ಯಾಣ ಕೋಟೆ

ಬೀದರ್ ಜಿಲ್ಲೆಯಲ್ಲಿನ ಬಸವಣ್ಣನವರ ಕರ್ಮಭೂಮಿ ಎಂದೆ ಪ್ರಸಿದ್ಧವಾದ ಬಸವಕಲ್ಯಾಣ ಪಟ್ಟಣದಲ್ಲಿದೆ ಈ ಕೋಟೆ. 10 ನೆಯ ಶತಮಾನದಲ್ಲಿ ನಿರ್ಮಿತವಾದ ಈ ಕೋಟೆಯು ರಕ್ಷಣಾತ್ಮಕ ತಂತ್ರಗಾರಿಕೆಯಿಂದ ಕೂಡಿದೆ. ಬಸವಕಲ್ಯಾಣವು ಗುಲಬರ್ಗಾದಿಂದ 90 ಕಿ.ಮೀ ದೂರವಿದ್ದು ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.

*ನಗರ ಕೋಟೆ

ಮಲೆನಾಡು ಪ್ರದೇಶದ ಮತ್ತೊಂದು ಪ್ರಮುಖ ಕೋಟೆ ನಗರ ಕೋಟೆ. ಶಿವಮೊಗ್ಗ ಜಿಲ್ಲೆಯ ಈ ಗ್ರಾಮವು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದ್ದು ಕೆಳದಿ ಸಾಮ್ರಾಜ್ಯದ ಶಿವಪ್ಪ ನಾಯಕ್ ನಿರ್ಮಿಸಿದ ಕೋಟೆಯಿಂದಾಗಿ ಜನಪ್ರಿಯವಾಗಿದೆ.

 ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬೆಂಗಳೂರಿನಲ್ಲಿ ಶಾಪಿಂಗ್‌

ಬೆಂಗಳೂರಿನಲ್ಲಿ ಶಾಪಿಂಗ್‌ ಮಾಡುವ ಪ್ರಮುಖ ಸ್ಥಳಗಳು

ವಿಜ್ಞಾನದಲ್ಲಿ ಮಹಿಳಾ ಮತ್ತು ಹುಡುಗಿಯರ ಅಂತರರಾಷ್ಟ್ರೀಯ ದಿನ

ಫೆಬ್ರವರಿ 11ರಂದು, ವಿಜ್ಞಾನದಲ್ಲಿ ಮಹಿಳಾ ಮತ್ತು ಹುಡುಗಿಯರ ಅಂತರರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತದೆ