in

ಕನ್ನಡದ ಮೊದಲ ರಾಜವಂಶ ಕದಂಬರು

ಕದಂಬರ ಆಳ್ವಿಕೆ
ಕದಂಬರ ಆಳ್ವಿಕೆ

‘ಕದಂಬ’ ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ.

ಕದಂಬರ ಮೂಲದ ಬಗ್ಗೆ ಹಲವಾರು ಕಥೆಗಳಿವೆ.
ಒಂದು ಕಥೆಯ ಪ್ರಕಾರ ಈ ವಂಶದ ಮೂಲಪುರುಷ ತ್ರಿಲೋಚನ ಕದಂಬ, ಹಲಸಿ ಮತ್ತು ದೇಗಾಂವಿಯ ದಾಖಲೆಗಳ ಪ್ರಕಾರ ಇವನ ಹೆಸರು ಜಯಂತ. ಇವನಿಗೆ ಮೂರು ಕಣ್ಣುಗಳೂ ನಾಲ್ಕು ಕೈಗಳೂ ಇದ್ದವು. ಶಿವನ ಬೆವರು ಕದಂಬ ವೃಕ್ಷದ ಕೆಳಗೆ ಬಿದ್ದಾಗ ಹುಟ್ಟಿದವನು ಇವನು, ಕದಂಬ ಎಂಬ ಹೆಸರು.

ಮಯೂರ ಶರ್ಮ
ಮಯೂರ ಶರ್ಮ

ಇನ್ನೊಂದು ಕಥೆಯ ಪ್ರಕಾರ ಮಯೂರ ಶರ್ಮನೇ ಶಿವ ಮತ್ತು ಭೂದೇವಿಯ ಮಗನಾಗಿ ಹುಟ್ಟಿ ಕದಂಬ ವಂಶವನ್ನು ಸ್ಥಾಪಿಸಿದ. ಇವನಿಗೂ ಮೂರು ಕಣ್ಣುಗಳಿದ್ದವು. ಕನ್ನಡ ಬ್ರಾಹ್ಮಣರ ಇತಿಹಾಸ ವಿವರಿಸುವ ಗ್ರಾಮ ಪದ್ಧತಿ ಎಂಬ ಕನ್ನಡ ಪುಸ್ತಕದ ಪ್ರಕಾರ, ಮಯೂರ ಶರ್ಮನು ಶಿವಪಾರ್ವತಿಗೆ ಸಹ್ಯಾದ್ರಿ ಪರ್ವತ ಶ್ರೇಣಿಯ ಕದಂಬ ವೃಕ್ಷದ ಕೆಳಗೆ ಹುಟ್ಟಿದವನಾಗಿದ್ದ. ಇದೇ ವಂಶದ ಕುಡಿಯಾದ ನಾಗರಖಾಂಡ ಕದಂಬರೆಂಬ ವಂಶದ ಒಂದು ಶಾಸನದ ಪ್ರಕಾರ, ಈ ವಂಶದ ಮೂಲ ನಂದ ಸಾಮ್ರಾಜ್ಯದವರೆಗೂ ಹೋಗುತ್ತದೆ. ಮಕ್ಕಳಿಲ್ಲದ ರಾಜಾ ನಂದನು , ಮಕ್ಕಳಿಗಾಗಿ ಕೈಲಾಸದಲ್ಲಿ ಶಿವನನ್ನು ಪ್ರಾರ್ಥಿಸಲು, ಅವನಿಗೆ ಎರಡು ಮಕ್ಕಳಾಗುವುದಾಗಿಯೂ, ಅವರಿಗೆ ಕದಂಬ ಕುಲ ಎಂಬ ಹೆಸರು ಬರುವುದಾಗಿಯೂ, ಹಾಗೂ ಅವರಿಗೆ ಶಸ್ತ್ರ ವಿದ್ಯೆಯನ್ನು ಕಲಿಸಬೇಕೆಂದೂ ನಭೋವಾಣಿಯಾಯಿತು.

ಕದಂಬರು ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಮುಂದೆ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಾಮಂತರಾಗಿ ಆಳ್ವಿಕೆ ಮುಂದುವರಿಸಿದ ಕದಂಬರ ರಾಜ್ಯ ಗೋವಾ ಮತ್ತು ಹಾನಗಲ್ ಗಳಲ್ಲಿ ಶಾಖೆಗಳನ್ನು ಹೊಂದಿತು. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕದಂಬರ ರಾಜ್ಯ ಕರ್ನಾಟಕದ ಅನೇಕ ಭಾಗಗಳನ್ನೊಳಗೊಂಡಿತ್ತು. ಕದಂಬರ ಪೂರ್ವದ ರಾಜ ವಂಶಗಳಾದ ಮೌರ್ಯರು, ಶಾತವಾಹನರು ಮೂಲತಃ ಕರ್ನಾಟಕದ ಹೊರಗಿನವರಾಗಿದ್ದು, ಅವರ ರಾಜ್ಯದ ಕೇಂದ್ರಬಿಂದು ಕರ್ನಾಟಕದ ಹೊರಗಿತ್ತು. ಕನ್ನಡವನ್ನು ರಾಜ್ಯಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಈ ಪ್ರದೇಶದ ಬೆಳವಣಿಗೆಯ ಅಧ್ಯಯನದಲ್ಲಿ , ಬಹಳ ಕಾಲ ಬಾಳಿದ ಸ್ಥಳೀಯ ರಾಜಕೀಯ ಶಕ್ತಿಯಾಗಿ ಮತ್ತು ಕನ್ನಡ ಒಂದು ಪ್ರಮುಖ ಪ್ರಾದೇಶಿಕ ಭಾಷೆಯಾಗಿ ಬೆಳೆದ ಈ ಕಾಲಮಾನ, ಕರ್ನಾಟಕದ ಇತಿಹಾಸದಲ್ಲಿ,ಸರಿಸುಮಾರು ಐತಿಹಾಸಿಕ ಪ್ರಾರಂಭ ಕಾಲವಾಗಿದೆ. ಕ್ರಿ.ಶ. ೩೪೫ರಲ್ಲಿ ಮಯೂರವರ್ಮನಿಂದ ಸ್ಥಾಪಿಸಲಾದ ಈ ರಾಜ್ಯವು, ಬೃಹತ್ ಸಾಮ್ರಾಜ್ಯವಾಗಿ ಬೆಳೆಯುವ ಲಕ್ಷಣವನ್ನು ಆಗಾಗ ತೋರಿಸುತ್ತಿತ್ತು. ಆಗಿನ ರಾಜರುಗಳ ಬಿರುದು ಬಾವಲಿಗಳೂ ಈ ವಿಷಯಕ್ಕೆ ಪುಷ್ಟಿ ಕೊಡುತ್ತವೆ.ಇದೇ ವಂಶದ ಕಾಕುಸ್ಥವರ್ಮನು ಬಲಾಢ್ಯ ಅರಸನಾಗಿದ್ದು, ಉತ್ತರದ ಗುಪ್ತ ಮಹಾಸಾಮ್ರಾಜ್ಯದ ದೊರೆಗಳು ಇವನೊಂದಿಗೆ ಲಗ್ನ ಸಂಬಂಧ ಇಟ್ಟುಕೊಂಡದ್ದು ಈ ರಾಜ್ಯದ ಘನತೆಯನ್ನು ಸೂಚಿಸುತ್ತದೆ. ಇದೇ ಪೀಳಿಗೆಯ ರಾಜ ಶಿವಕೋಟಿ ಪದೇಪದೇ ನಡೆಯುತ್ತಿದ್ದ ಯುದ್ಧ, ರಕ್ತಪಾತಗಳಿಂದ ಬೇಸತ್ತು ಜೈನ ಧರ್ಮಕ್ಕೆ ಮತಾಂತರಗೊಂಡ.ಕದಂಬರು, ಹಾಗೂ ಅವರ ಸಮಕಾಲೀನರಾಗಿದ್ದ ತಲಕಾಡು ಪಶ್ಚಿಮ ಗಂಗರು ಸಂಪೂರ್ಣ ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದ ಸ್ಥಳೀಯರಲ್ಲಿ ಮೊದಲಿಗರು.

ಕನ್ನಡದ ಮೊದಲ ರಾಜವಂಶ ಕದಂಬರು
ಕದಂಬರು

ಶಾತವಾಹನರ ಅನಂತರ ಪ್ರಾಮುಖ್ಯಗಳಿಸಿದ ಕದಂಬ ಸಂತತಿಯನ್ನು ೩೦೦ರ ಸುಮಾರಿನಲ್ಲಿ ಸ್ಥಾಪಿಸಿದಾತ ಬ್ರಾಹ್ಮಣ ಕುಲದ ಮಯೂರಶರ್ಮ. ಈಚೆಗೆ ಇವರ ರಾಜಧಾನಿ ಬನವಾಸಿ ಬಳಿಯ ಗುಡ್ನಾಪುರದಲ್ಲಿ ದೊರಕಿದ ರವಿವರ್ಮನ ಶಾಸನದಲ್ಲಿ ಈತನ ತಂದೆ ತಾತಂದಿರ ವಿಷಯವಾಗಿ ಕೆಲವು ಮಾಹಿತಿಗಳು ದೊರಕಿವೆ. ಪಲ್ಲವರಿಗೆ ಸೇರಿದ ಪ್ರದೇಶಗಳನ್ನು ಗೆದ್ದು ಕದಂಬ ರಾಜ್ಯ ಸ್ಥಾಪನೆ ಮಾಡಿದ ಅನಂತರ ಬಾಣರೇ ಮೊದಲಾದ ದೊರೆಗಳನ್ನು ಸೋಲಿಸಿದುದಾಗಿ ಇವನ ಚಂದ್ರವಳ್ಳಿಯ ಶಾಸನ ತಿಳಿಸುತ್ತದೆ. ಇವನು ಅರಸನಾದ ಮೇಲೆ ಶರ್ಮ ಹೆಸರಿನ ಸ್ಥಳದಲ್ಲಿ ‘ವರ್ಮ’ ಎಂಬ ಬಿರುದು ಧರಿಸಿ ಕ್ಷತ್ರಿಯನಾಗಿ ಕಾಣಿಸಿಕೊಂಡನು. ಇವನ ಅನಂತರ ಕಾಕುತ್ಸ್ಥವರ್ಮ, ಶಾಂತಿವರ್ಮ, ಮೃಗೇಶವರ್ಮ ಮುಂತಾದವರೂ ಸಿಂಹಾಸನವನ್ನೇರಿ ತಮ್ಮ ವಂಶದ ಗೌರವವನ್ನು ಹೆಚ್ಚಿಸಿದರು. ಇವರಲ್ಲಿ ಕಡೆಯವನಾದ ಹರಿವರ್ಮನನ್ನು ಇದೇ ವಂಶದ ಮತ್ತೊಂದು ಶಾಖೆಯ ೨ನೆಯ ಕೃಷ್ಣವರ್ಮ ಸೋಲಿಸಿ ರಾಜ್ಯವನ್ನು ಪುನರೇಕೀಕರಣಗೊಳಿಸಿದ. ಎರಡು ಶತಮಾನಗಳಿಗೂ ಹೆಚ್ಚು ಕಾಲ ಆಳಿದ ಆದಿ ಕದಂಬರ ಹಲವಾರು ಶಾಸನಗಳು ಅವರ ರಾಜ್ಯ ವಿಸ್ತಾರ, ಯುದ್ಧ ವಿಜಯಗಳು ಮತ್ತಿತರ ಸಾಧನೆಗಳನ್ನು ತಿಳಿಸುತ್ತವೆ. ಕದಂಬ ರಾಜ್ಯ ಈಗಿನ ಬೆಳಗಾಂವಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಕೆಲವು ಭಾಗ ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಗೊಂಡಿದ್ದು ಅವರ ರಾಜಧಾನಿಗಳು ಕ್ರಮವಾಗಿ ಬೆಳಗಾವಿ ಜಿಲ್ಲೆಯ ಹಲಸಿ, ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಮತ್ತು ಬಳ್ಳಾರಿ ಜಿಲ್ಲೆಯ ಉಚ್ಚಂಗಿದುರ್ಗಗಳಲ್ಲಿದ್ದುವು. ಕರ್ನಾಟಕದ ಪ್ರಾಚೀನ ಅರಸುಮನೆತನಗಳಲ್ಲೊಂದಾದ ಕದಂಬ ವಂಶದ ದೊರೆಗಳು ಪ್ರಾಕೃತ ಭಾಷೆಯನ್ನು ತಮ್ಮ ಶಾಸನಗಳಿಗೆ ಬಳಸುತ್ತಿದ್ದರು. ಕ್ರಮೇಣ ಸಂಸ್ಕೃತ ರಾಜಭಾಷೆಯಾಯಿತು. ಐದನೆಯ ಶತಮಾನದ ಬೇಲೂರು ತಾಲ್ಲೂಕಿನ ಹಲ್ಮಡಿ ಶಾಸನವು ಇವರ ಕಾಲದ ಪ್ರಥಮ ಕನ್ನಡ ಶಾಸನವಾಗಿದೆ. ಕಾಳಿದಾಸ ಇವರ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನೆಂದು ಕುಂತಳೇಶ್ವರ ದೌತ್ಯಂ ಎಂಬ ಕೃತಿಯಿಂದ ತಿಳಿದುಬರುತ್ತದೆ. ಕದಂಬ ರಾಜಪುತ್ರಿಯನ್ನು ಸಮಕಾಲೀನ ಗುಪ್ತ ಚಕ್ರವರ್ತಿ ವಿವಾಹವಾಗಿದ್ದನೆಂದರೆ ಇವರ ಪ್ರಾಮುಖ್ಯ ಅರಿವಾಗುತ್ತದೆ. ಆ ಚಕ್ರವರ್ತಿ ೧ನೆಯ ಕುಮಾರಗುಪ್ತನಾಗಿರಬಹುದು. ೫೪೦ರಲ್ಲಿ ಚಾಳುಕ್ಯರ ಒಂದನೆಯ ಪುಲಕೇಶಿ ಇವರನ್ನು ಸೋಲಿಸಿದ ಅನಂತರ ಕೆಲಕಾಲ ಈ ವಂಶಜರು ಆಳುತ್ತಿದ್ದರೂ ಸ್ವತಂತ್ರ ಕದಂಬ ವಂಶದ ಅಂತ್ಯವಾಯಿತೆಂದು ಹೇಳಬಹುದು. ೧೪ನೆಯ ಶತಮಾನದವರೆಗೂ ಇವರು ಬೇರೆ ರಾಜರ ಸಾಮಂತರಾಗಿ ಕರ್ನಾಟಕದ ಕೆಲಭಾಗಗಳಲ್ಲಿ ಆಳುತ್ತಿದ್ದರು. ಕರ್ನಾಟಕ ಮತ್ತು ಹಿಂದೂ ಸಂಸ್ಕೃತಿಗಳಿಗೆ ಇವರ ಕೊಡುಗೆ ಗಮನಾರ್ಹ. ವೈದಿಕ ಧರ್ಮನಿರತರಾದ ಇವರ ಆಶ್ರಯದಲ್ಲಿ ವೇದಾಭ್ಯಾಸಕ್ಕೆ ಉತ್ತೇಜನ ದೊರೆಯಿತು. ವೈಷ್ಣವ-ಶೈವಧರ್ಮಗಳು ವೃದ್ಧಿಗೊಂಡುವು. ಜೈನ ಮತ್ತು ಬೌದ್ಧ ಧರ್ಮಗಳಿಗೂ ಪ್ರೋತ್ಸಾಹವಿತ್ತು. ಎಲ್ಲ ಧರ್ಮಗಳ ದೇವಮಂದಿರಗಳಿಗೂ ದಾನದತ್ತಿಗಳನ್ನು ನೀಡಿದ್ದರು. ಕೆಲಶಾಸನಗಳಲ್ಲಿ ಜೈನಾಚಾರ್ಯರಾದ ಪುಜ್ಯಪಾದ, ನಿರವದ್ಯಪಂಡಿತ ಮುಂತಾದವರ ಹೆಸರುಗಳಿವೆ. ಹಾನಗಲ್ ಮತ್ತು ಪುಲಿಗೆರೆಗಳು ಜೈನ ಕೇಂದ್ರಗಳಾಗಿದ್ದರೆ ಅಜಂತ ಮತ್ತು ಬನವಾಸಿಗಳು ಬೌದ್ಧ ಕೇಂದ್ರಗಳಾಗಿದ್ದು ಆ ಧರ್ಮದ ಉಚ್ಛ್ರಾಯಸ್ಥಿತಿಯನ್ನು ಸೂಚಿಸುತ್ತವೆ. ಸು.೬೩೬ರ ವೇಳೆಗೆ ಬನವಾಸಿಗೆ ಬಂದ ಚೀನ ದೇಶದ ಪ್ರವಾಸಿ ಯುವಾನ್ ಚಾಂಗ್ ಅಲ್ಲಿ ಹೀನಯಾನ ಮತ್ತು ಮಹಾಯಾನ ಪಂಥಗಳೊರಡೂ ನೆಲೆಸಿದ್ದುವೆಂದೂ ಒಂದು ನೂರು ಬೌದ್ಧ ಸಂಘಾರಾಮಗಳೂ ಹತ್ತು ಸಾವಿರ ಭಿಕ್ಷುಗಳೂ ಇದ್ದರೆಂದೂ ತಿಳಿಸುತ್ತಾನೆ. ಅಶೋಕ ನಿರ್ಮಿತ ಸ್ತೂಪವೂ ಅಲ್ಲಿತ್ತೆಂಬುದೂ ಆತನಿಂದ ತಿಳಿದುಬರುವ ಅಂಶ. ವಾಸ್ತು ಮತ್ತು ಮೂರ್ತಿಶಿಲ್ಪಕಲೆಯ ವೃದ್ಧಿಗೂ ಪ್ರೋತ್ಸಾಹವಿದ್ದು ಅನಂತರಕಾಲದ ವೇಸರಶೈಲಿಗೆ ತಳಹದಿಯನ್ನೊದಗಿಸಿದ ಕೀರ್ತಿ ಇವರಿಗೆ ಸಲ್ಲಬೇಕು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮಳೆಗಾಲ ಆಹಾರಗಳು

ಮಳೆಗಾಲದಲ್ಲಿ ಹಿರಿಯರು, ಕಿರಿಯರು ತಿನ್ನಬಹುದಾದ ಆಹಾರಗಳು

ಮೂರನೇ ಪಾಣಿಪತ್ ಯುದ್ದ

ಮೂರನೇ ಪಾಣಿಪತ್ ಯುದ್ದ