in

ನಿಜಾಮರ ಕಾಲದಲ್ಲಿ ಹೈದರಾಬಾದ್ ಪ್ರಾಂತ್ಯದಲ್ಲಿದ್ದ : ಅಜಂತಾ ಗುಹೆಗಳು

ಅಜಂತಾ ಗುಹೆಗಳು
ಅಜಂತಾ ಗುಹೆಗಳು

ಭಾರತದ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಹೈದರಾಬಾದ್ ನ ನಿಜಾಮರ ಕಾಲದಲ್ಲಿ ಹೈದರಾಬಾದ್ ಪ್ರಾಂತ್ಯದಲ್ಲಿದ್ದ ಅಜಂತಾ ಈಗ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿದೆ. ಇಲ್ಲಿಯ ಬೌಧ್ಧ ಚೈತ್ಯಗಳಿಗೆ ಮತ್ತು ಇಲ್ಲಿನ ಗೋಡೆಗಳಲ್ಲಿನ ಭಿತ್ತಿ ಚಿತ್ರಗಳಿಗಾಗಿ ಇದು ಅತ್ಯಂತ ಪ್ರಸಿಧ್ಧಿಯಾಗಿದೆ.

ಇದು ಮಲೆಸೀಮೆ, ಚಂದರ್, ಶತಮಾಲ, ವಿಂಧ್ಯಾದ್ರಿ, ಸಹ್ಯಾದ್ರಿ ಎಂದು ಕರೆಯಲ್ಪಡುವ ಪಶ್ಚಿಮಘಟ್ಟಗಳ ಬೆಟ್ಟಗಳು ಸುತ್ತಲೂ ಇವೆ. ಇವುಗಳ ಸರಾಸರಿ ಎತ್ತರ 4,000. ಇವು ಮನಮಾಡದಿಂದ ಬೀರಾರಿನವರೆಗೆ ವಿಸ್ತರಿಸಿವೆ. ಅಲ್ಲಲ್ಲಿ ವ್ಯಾಪಾರಿಗಳ, ಸೈನ್ಯದ ಓಡಾಟ ಸಾಗಣೆಗಳಿಗನುಕೂಲವಾದ ಕಣಿವೆ ದಾರಿಗಳಿವೆ. ದಕ್ಷಿಣ ಪ್ರಸ್ಥಭೂಮಿಯ ಉತ್ತರಗಡಿಯಾದ ಈ ಶ್ರೇಣಿ ಬೀರಾರಿನಲ್ಲಿ 2,000` ಎತ್ತರವಾಗಿದೆ.

ಊರಿಗೆ 31/2 ಮೈ. ದೂರದಲ್ಲಿ ಜಗತ್ಪ್ರಸಿದ್ಧವಾದ ಅಜಂತ ಗುಹಾಂತರ್ದೇವಾಲಯಗಳು ವಾಫ್ ಕಣಿವೆಯ ಮನೋಹರವಾದ ನೈಸರ್ಗಿಕ ಸನ್ನಿವೇಶದಲ್ಲಿವೆ. ಕಲೆಯ ಪ್ರಭೇದಗಳಾದ ಶಿಲ್ಪ, ಕೆತ್ತನೆ ಹಾಗೂ ವರ್ಣಲೇಪನ ಇವುಗಳ ಕೇಂದ್ರವೆನಿಸಿರುವ ಅಜಂತ ಭಾರತೀಯ ಪರಮೋತ್ಕ್ರಷ್ಟ ಕಲಾನೈಪುಣ್ಯದ ಚಿರಂತನಸಾಕ್ಷಿಯಾಗಿದೆ. ಇಲ್ಲಿ ಬೆಟ್ಟವನ್ನು ಕೊರೆದು ಗುಹಾಲಯಗಳನ್ನು ನಿರ್ಮಿಸಿ ಚಿತ್ರಗಳನ್ನು ಬಿಡಿಸುವ ಕಾರ್ಯ ಕ್ರಿ.ಪೂ. 2ನೆಯ ಶತಮಾನದಲ್ಲಿ ಪ್ರಾರಂಭವಾಗಿ ಅವಿಚ್ಛಿನ್ನವಾಗಿ ಕ್ರಿ.ಶ. 7ನೆಯ ಶತಮಾನದವರೆಗೂ ಮುಂದುವರಿಯಿತು. ಶಾತವಾಹನ, ವಾಕಾಟಕ ಮತ್ತು ಬಾದಾಮಿ ಚಾಳುಕ್ಯ ಸಂತತಿಗಳ ಅರಸರು ಬೌದ್ಧಭಿಕ್ಷುಗಳಿಗಾಗಿ ಗುಹಾಂತರ್ದೇವಾಲಯಗಳನ್ನು ನಿರ್ಮಿಸಿದರು, ಶಿಲ್ಪಿಗಳು ಗುಹಾಲಯಗಳ ನಿರ್ಮಾಣ ಹಾಗೂ ಕಲಾವಿನ್ಯಾಸದಲ್ಲಿ ತಮ್ಮ ಚಾತುರ್ಯವನ್ನು ತೋರಿಸಿರುವರು. ಮತನಿಷ್ಠೆ ಹಾಗೂ ಪರಂಪರಾನುಗತವಾಗಿ ಬೆಳೆಸಿಕೊಂಡು ಬಂದ ಕಲಾಪರಿಪೂರ್ಣತೆಯನ್ನು ವರ್ಣಲೇಪನದಲ್ಲಿ ಬೌದ್ಧಭಿಕ್ಷುಗಳು ಅತ್ಯುನ್ನತವಾಗಿ ಪ್ರದರ್ಶಿಸಿರುವರು.

ನಿಜಾಮರ ಕಾಲದಲ್ಲಿ ಹೈದರಾಬಾದ್ ಪ್ರಾಂತ್ಯದಲ್ಲಿದ್ದ : ಅಜಂತಾ ಗುಹೆಗಳು
ಗುಹಾಂತರ್ದೇವಾಲಯ

ಕ್ರಿ.ಶ.7ನೆಯ ಶತಮಾನದಲ್ಲಿ ಅಜಂತಕ್ಕೆ ಭೇಟಿಯಿತ್ತಿದ್ದ ಹುಯೆನ್‍ತ್ಸಾಂಗನ ಬರೆವಣಿಗೆಗಳಿಂದ, ಇಲ್ಲಿ ಬಹು ಸಂಖ್ಯೆಯಲ್ಲಿ ಬೌದ್ಧಭಿಕ್ಷುಗಳು ವಾಸಿಸುತ್ತಿದ್ದರೆಂದೂ ಅವರು ಹತ್ತಿರದಲ್ಲಿದ್ದ ಇಂದ್ರಕಾಂತವೆಂಬ ಪಟ್ಟಣಕ್ಕೆ ಆಗಾಗ ಭಿಕ್ಷಾಟನೆಗಾಗಿ ಹೋಗುತ್ತಿದ್ದರೆಂದೂ ತಿಳಿದುಬರುತ್ತದೆ. ಇವನು ಅಜಂತ ಕಲಾಕೇಂದ್ರದ ಪ್ರಕೃತಿ ಸೌಂದರ್ಯವನ್ನೂ ಗುಹಾಂತರ್ದೇವಾಲಯಗಳ ಸೌಂದರ್ಯವನ್ನು ವಿಶೇಷವಾಗಿ ಪ್ರಶಂಸಿಸಿರುವನು. ಬೌದ್ಧಮತ ಕ್ಷೀಣಿಸಿದ ಮೇಲೆ ಈ ಸ್ಥಳ ನಿರ್ಲಕ್ಷಿಸಲ್ಪಟ್ಟು ಪೊದೆಗಳು ಬೆಳೆದು ಮೃಗಪಕ್ಷಿಗಳ ಆವಾಸಸ್ಥಾನವಾಗಿ ಮಾನವ ಸ್ಮತಿಗೋಚರದಿಂದ ಮರೆಯಾಯಿತು.

ಕ್ರಿ.ಶ. 19ನೆಯ ಶತಮಾನದ ಪೂರ್ವಾರ್ಧದಲ್ಲಿ ಆಂಗ್ಲ ವಿದ್ವಾಂಸರ ಗಮನಕ್ಕೆ ಬಂದು ಅವರಲ್ಲಿ ವಿಸ್ಮಯವನ್ನೂ ಕುತೂಹಲವನ್ನೂ ಕೆರಳಿಸಿ ನಮ್ಮ ನಾಡಿನ ಹಾಗೂ ಪ್ರಪಂಚದ ಕಲಾತಜ್ಞರ ಗಮನವನ್ನು ಅತ್ತ ಸೆಳೆದುವು. ಅಜಂತದಲ್ಲಿ ಒಟ್ಟು 30 ಗುಹಾಂತರ್ದೇವಾಲಯಗಳಿವೆ. ಅನೇಕ ಗುಹಾಲಯಗಳಲ್ಲಿ ಕಾಲ ಮತ್ತು ಪ್ರಕೃತಿಯ ಹೊಡೆತದಿಂದ ಚಿತ್ರಗಳು ನಾಶವಾಗಿದೆ. ಆದಾಗ್ಗ್ಯೂ ಅವುಗಳ ಭವ್ಯಕಲ್ಪನೆಯನ್ನು ಚಿತ್ರಿಸಿಕೊಳ್ಳಲು ಎಡೆಯಿದೆ. ಪಳೆಯುಳಿಕೆಗಳನ್ನು ಇತ್ತೀಚೆಗೆ ಉದ್ಧಾರಮಾಡಿ ಕಾಪಾಡಿಕೊಂಡು ಬರುವ ಏರ್ಪಾಡು ಮಾಡಲಾಗಿದೆ. ಹಾಳಾಗಿರುವ ಭಾಗಗಳ ಪಡಿಯಚ್ಚು ಮಾಡಿಕೊಳ್ಳಲಾಗಿದೆ. ಇವುಗಳಲ್ಲಿ 16ನೆಯ ಗುಹಾಲಯ ಕಲೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದುದು. ಇದನ್ನು ಬೆಟ್ಟದೊಳಕ್ಕೆ 65 ಕೊರೆದು ನಿರ್ಮಿಸಲಾಗಿದೆ. 20 ಕಂಬಗಳನ್ನು ಅಂದವಾಗಿ ಕೊರೆದಿದ್ದಾರೆ. ಮುಖಮಂಟಪದಲ್ಲಿ 5 ಕಂಬಗಳಿವೆ. ರಂಗಮಂಟಪದಲ್ಲಿ ಪ್ರತಿಯೊಂದು ಕಡೆಯೂ 7 ಚಿಕ್ಕ ಚಿಕ್ಕ ಕೋಣೆಗಳಿವೆ. ಗರ್ಭಗೃಹದಲ್ಲಿ ಪ್ರಲಂಬ-ಪಾದಾಸನನಾಗಿರುವ ಬುದ್ಧದೇವನ ಮೂರ್ತಿ ಇದೆ. 14ನೆಯ ಗುಹಾಲಯ ಸರಿಸುಮಾರಾಗಿ ಇದೇ ಮಾದರಿಯನ್ನು ಹೋಲುವುದು. ಇಲ್ಲಿ 75 ವಿಸ್ತಾರವಾದ ಹಜಾರವಿದೆ. 20 ಸುಂದರವಾದ ಕಂಬಗಳನ್ನು ಕೊರೆದು ಬಿಡಿಸಲಾಗಿದೆ. ಈ ಗುಹಾಲಯವನ್ನು ಅತ್ಯಂತ ಸುಂದರವಾದ ಮಂದಿ ರವನ್ನಾಗಿಸಬೇಕೆಂಬ ಇಚ್ಛೆಯಿಂದ ಕೊರೆದಂತಿದೆ. ಆದರೆ ಕೊರೆಯುವ ಕೆಲಸ ಪೂರ್ಣವಾಗಿಲ್ಲ. ಜೊತೆಗೆ ಗುಹಾಲಯ ಬಹುವಾಗಿ ಶಿಥಿಲವಾಗಿದೆ. 1, 2 4 ಮತ್ತು 24 ನೆಯ ಗುಹಾಲಯಗಳು ಕಲಾದೃಷ್ಟಿಯಿಂದ ಉನ್ನತವಾದ ಕಟ್ಟಡ ವಿನ್ಯಾಸವನ್ನು ಪ್ರದರ್ಶಿಸುತ್ತವೆ. 1 ಮತ್ತು 2ನೆಯ ಗುಹಾಲಯಗಳು ಮನೋಜ್ಞವಾದ ಶಿಲ್ಪ ಹಾಗೂ ಕೆತ್ತನೆಯ ಕೆಲಸಗಳಿಗೆ ಉದಾಹರಣೆಯಾಗಿವೆ. ಕಂಬಗಳು ಅಂದವಾದ ಕೆತ್ತನೆಯ ಕೆಲಸ ಹಾಗೂ ಸುಂದರವಾಗಿ ಕಡೆದ ಬೋದಿಗೆಗಳನ್ನು ಹೊಂದಿವೆ. 19 ಮತ್ತು 26ನೆಯ ಗುಹಾಲಯಗಳಲ್ಲಿಯೂ ಉತ್ತಮ ಕೆತ್ತನೆಯ ಕೆಲಸಗಳನ್ನು ನೋಡಬಹುದು. ಈ ಕೆಲಸಗಳು ಮುಂಬರಲಿದ್ದ ದಕ್ಷಿಣ ಭಾರತದ ಶಿಲ್ಪ ಕಲಾಸಂಪನ್ನತೆಯ ಮುಂಬೆಳಗಿನ ಪ್ರಜ್ಞೆಯಂತಿದೆ ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.

ಅಜಂತದ ಚಿತ್ರಗಳ ಮುಖ್ಯಗುರಿ ಮತಬೋಧನೆ. ಬೌದ್ಧ ಭಿಕ್ಷುಗಳು, ಕೆಂಪು, ಹಸಿರು, ಹಳದಿ, ಊದ, ಧೂಮ್ರ ಮತ್ತು ನೀಲವರ್ಣಗಳಿಂದ ಬಿಡಿಸಿರುವ ಭಿತ್ತಿಚಿತ್ರಗಳು ವರ್ಣನಾತೀತವಾದ ಸೌಂದರ್ಯವನ್ನೂ ಕೌಶಲವನ್ನೂ ಪ್ರದರ್ಶಿಸುತ್ತವೆ. ಚಿತ್ರಕಾರರು ಸಾಂಪ್ರದಾಯಿಕ ನೀತಿಯನ್ನನುಸರಿ ತಮ್ಮ ಪ್ರತಿಭೆ ಮತ್ತು ಸ್ವಾತಂತ್ರ್ಯವನ್ನು ತೋರ್ಪಡಿಸಿದ್ದಾರೆ. ಬೋಧಿಸತ್ವ ಬುದ್ಧದೇವನ ಜೀವನದ ಪ್ರಮುಖ ಘಟನೆಗಳು ಸಜೀವವಾಗಿ ಪಡಿಮೂಡಿವೆ. ಹೂಬಳ್ಳಿಗಳ, ಗೂಳಿ, ಕಪಿ, ನವಿಲು ಮುಂತಾದ ಪ್ರಾಣಿ ಪಕ್ಷಿಗಳ ಚಿತ್ರಗಳು ನೈಜ ಜೀವಿಗಳಂತಿವೆ. ಸ್ತ್ರೀ ಚಿತ್ರಗಳು ಭಾರತೀಯ ಸ್ತ್ರೀಯರ ಸಹಜವಾದ ಶರೀರಭಂಗಿ, ಪ್ರಮಾಣ, ಅಲಂಕಾರ, ಮಾರ್ದವ, ಲಾವಣ್ಯಗಳನ್ನು ನಿದರ್ಶಿಸುತ್ತವೆ. ದೇವಾನುದೇವತೆಗಳ, ಅಪ್ಸರೆಯರ, ಕಿನ್ನರರ, ಪ್ರಭು, ಪ್ರಭೃತಿಗಳ, ಗಣ್ಯರ, ವೀರರ, ಹಳ್ಳಿ, ನಗರಗಳ, ಸಂತರ ಮತ್ತು ಮಹರ್ಷಿಗಳ ಚಿತ್ರಗಳು ಸಹಜವಾಗಿ, ಸುಂದರವಾಗಿ, ಮನೋಜ್ಞವಾಗಿ ಒಡಮೂಡಿವೆ. ಒಂದು ಮತ್ತು ಎರಡನೆಯ ಗುಹಾಲಯಗಳಲ್ಲಿ ಪುಲಿಕೇಶಿಯ ಆಸ್ಥಾನವನ್ನೂ ಪರ್ಷಿಯಾ ರಾಯಭಾರಿಗಳ ಆಗಮನವನ್ನೂ ಜೀವಂತವಾಗಿ ಚಿತ್ರಿಸಿದ್ದಾರೆ.

ಈ ಗುಹೆಗಳಲ್ಲಿರುವ ಜಿಂಕೆಗಳ ಹಾಗೂ ಶಿವಪಾರ್ವತಿಯರ ಭಿತ್ತಿಚಿತ್ರಗಳು ಅತ್ಯಂತ ಸುಂದರವಾಗಿವೆ. 17ನೆಯ ಗುಹೆಯಲ್ಲಿ ಬೌದ್ಧಮತದ ನಿಯಮನಿಷ್ಠೆಯಲ್ಲಿದ್ದ ನಿರಂತರ ಶ್ರದ್ಧೆ ಹಾಗೂ ಪರಂಪರಾನುಗುತವಾಗಿ ಬೆಳೆಸಿಕೊಂಡು ಬಂದ ಚಿತ್ರಕಲಾಭ್ಯಾಸ ಇವುಗಳ ಅನುಭವದ ಆನಂದ ಪರವಶತೆಯನ್ನೂ ಕೌಶಲವನ್ನೂ ಅನಾಮಧೇಯ ಬೌದ್ಧಭಿಕ್ಷುಗಳು ಪರಮೋತ್ಕಷ್ಟವಾಗಿ ಅಜಂತ ಗುಹಾಂತರ್ದೇವಾಲಯಗಳಲ್ಲಿ ಪ್ರದರ್ಶಿಸಿದ್ದಾರೆ. ಸೌಮ್ಯತೆ, ಅಸದೃಶವಾದ ಕುಂಚಕೌಶಲ, ಎಣೆಯಿಲ್ಲದ ವರ್ಣವಿನ್ಯಾಸದ ವೈಖರಿ, ಅಸಾಧಾರಣ ಪ್ರೌಢಿಮೆ-ಇವುಗಳಿಗೆ ಅಜಂತ ಭಿತ್ತಿಚಿತ್ರಗಳು ಅದ್ವಿತೀಯ ನಿದರ್ಶನಗಳಾಗಿವೆಯೆಂದು ಕಲಾವಿಮರ್ಶಕರು ಪ್ರಶಂಸಿಸಿದ್ದಾರೆ.

ಅಜಂತದ ವಾಸ್ತುಶಿಲ್ಪ

ಅಜಂತದ ಗುಹಾಂತರ್ದೇವಾಲಯಗಳು ಜಗತ್ಪ್ರಸಿದ್ಧವಾಗಿವೆ. ಇದಕ್ಕೆ ಕಾರಣ ಅಲ್ಲಿನ ನೈಸರ್ಗಿಕ ಸೌಂದರ್ಯ, ಶಿಲ್ಪಕಲೆ, ಚಿತ್ರಕಲೆ, ಎದುರಿಗೆ ಸಮೀಪದಲ್ಲಿಯೇ ಜುಳು ಜುಳು ಎಂದು ಮಂಜುಳ ಧ್ವನಿಗೈಯುತ್ತ ಹರಿಯುವ ವಾಘೋರಾ ನದಿ ಚಿಕ್ಕ ಏಳು ಜಲಪಾತಗಳಿಂದ ಕೂಡಿಕೊಂಡು ರಮ್ಯವಾಗಿದೆ. ನದಿಯ ಕೊಳ್ಳ ಗಂಭೀರ ಶಾಂತತೆಯಿಂದ ಮೆರೆಯುತ್ತಿದೆ. ಸುಮಾರು 200 ಬೌದ್ಧ ಭಿಕ್ಷುಗಳು ಇಲ್ಲಿನ ಗುಹೆಗಳಲ್ಲಿ ವಾಸಮಾಡಿಕೊಂಡಿದ್ದಿರಬೇಕು. ಅವರು ಸುತ್ತಮುತ್ತಲಿನ ನಿಸರ್ಗ ರಮಣೀಯತೆಯಲ್ಲಿ ತಮ್ಮ ಆಧ್ಯಾತ್ಮ ಸಾಧನೆಯನ್ನು ಮಾಡುತ್ತಿದ್ದರು. ಅವರ ದರ್ಶನ ಪಡೆದು ಅವರಿಗೆ ಅನ್ನ, ಬಟ್ಟೆಗಳನ್ನೊದಗಿಸಿ ಅವರಿಂದ ಆಶೀರ್ವಾದ ಪಡೆಯಲು ಜನರು ಇಲ್ಲಿಗೆ ಮೇಲಿಂದ ಮೇಲೆ ಬರುತ್ತಿದ್ದರು. ಸುಮಾರು 3/4 ಮೈ. ಉದ್ದವಾದ ಕುದುರೆಲಾಳದ ಆಕಾರದ ಬೆಟ್ಟದ ನಿಡಿದಾದ ಓರೆಯಲ್ಲಿ ಈ ಗುಹಾಂತರ್ದೇವಾಲಯಗಳನ್ನು ಕೊರೆದಿದ್ದಾರೆ. ಇವು ಹೆಚ್ಚಾಗಿ ಬೌದ್ಧಮತಕ್ಕೆ ಸಂಬಂಧಿಸಿದುವು. ಸ್ಥೂಲವಾಗಿ ಹೀನಯಾನ ಮತ್ತು ಮಹಾಯಾನ ಎಂಬ ಎರಡು ಬೌದ್ಧಪಂಥಗಳಿಗೆ ಸಂಬಂಧಪಟ್ಟುವೆಂದು ಅವುಗಳಲ್ಲಿ ಕೆತ್ತಿದ ಬೌದ್ಧ ಮೂರ್ತಿಗಳು. ಬಣ್ಣದ ಚಿತ್ರಗಳು ಮತ್ತು ಕಂಬಗಳ ರಚನೆಯಿಂದ ವಿಂಗಡಿಸಬಹುದು. ಇವುಗಳ ರಚನೆ ಕ್ರಿ.ಪೂ. 2ನೆಯ ಶತಮಾನದಿಂದ ಆರಂಭವಾಗಿ ಕ್ರಿ.ಶ. 7ನೆಯ ಶತಮಾನದವರೆಗೂ ನಡೆಯಿತು.

ನಿಜಾಮರ ಕಾಲದಲ್ಲಿ ಹೈದರಾಬಾದ್ ಪ್ರಾಂತ್ಯದಲ್ಲಿದ್ದ : ಅಜಂತಾ ಗುಹೆಗಳು
ಅಜಂತ ವಾಸ್ತುಶಿಲ್ಪ

ಅಜಂತದ ವಾಸ್ತುಶಿಲ್ಪ, ಮೂರ್ತಿಶಿಲ್ಪಗಳಲ್ಲಿನ ಕಲೆ ಸಾಕಷ್ಟು ಉತ್ತಮಮಟ್ಟದ್ದಾಗಿದ್ದು ವೈವಿಧ್ಯಮಯವಾಗಿದೆ. ಕಂಬಗಳ ಮಾಟ, ಅಲಂಕಾರ ಪದ್ಧತಿ, ಮೂರ್ತಿಗಳ ಮೈಕಟ್ಟು, ಪ್ರಮಾಣ, ಅಲಂಕಾರ ಕಲೆ ಮನ ಮೆಚ್ಚುವಂತಿವೆ. ನಿರ್ಮಾತೃಗಳಾದ ಸ್ಥಪತಿಗಳು ಒಳ್ಳೆ ದಕ್ಷತೆಯಿಂದ ಕೆಲಸ ಮಾಡಿ ಮೂರ್ತಿಗಳಲ್ಲಿ, ವರ್ಣಚಿತ್ರಗಳಲ್ಲಿ ಜೀವಕಳೆ ತುಂಬಿದ್ದಾರೆ. ಅಜಂತದ ಚೈತ್ಯಗಳಿಗೆ ಕಂಬಗಳುಳ್ಳ ಮುಖಮಂಟಪ, ಹಿಂಬದಿಯಲ್ಲಿ ಅರ್ಧವರ್ತುಲಾಕಾರದ ನಡು ಅಂಕಣ, ಅದರ ಪಕ್ಕಗಳಲಲಿ ಕಂಬಗಳ ಸಾಲಿನಿಂದ ಬೇರ್ಪಡಿಸಿದ ಬದಿಯ ಅಂಕಣಗಳು, ಸ್ತೂಪ, ಗುಮ್ಮಟ, ಚಾವಣಿಯ ಕೋಣೆ – ಇತ್ಯಾದಿ ಇರುತ್ತವೆ. ಹೀನಯಾನ ಪಂಥದ ವಿಹಾರಗಳಲ್ಲಿ ಬಾಗಿಲು ದಾಟಿದ ಕೂಡಲೆ ಒಂದು ವಿಶಾಲವಾದ ನಡುಸಾಲೆ ಕಾಣುತ್ತದೆ. ಅದರ ಮೂರು ಗೋಡೆಗಳಲ್ಲಿ ಕಲ್ಲಿನ ಹಾಸಿಗೆಯುಳ್ಳ ಸಣ್ಣ ಕೋಣೆಗಳಿವೆ. ಇವುಗಳ ಕಾಲ ಸುಮಾರು ಕ್ರಿ.ಶ. 3ನೆಯ ಶತಮಾನದವರೆಗೆ. ಮಹಾಯಾನ ತಲೆದೋರಿದಂದಿನಿಂದ ವಿಹಾರಗಳ ರಚನೆಯಲ್ಲಿ ಮಾರ್ಪಾಡಾಯಿತು. ಮಧ್ಯದ ಮಂಟಪದ ಸುತ್ತ ನಾಲ್ಕು ಕಡೆಗೂ ಹೋಗಲು ಬರುವಂತೆ ಮೊಗಸಾಲೆಗಳಾದುವು. ಎದುರಿನ ಗೋಡೆಯ ಮಧ್ಯದಲ್ಲಿ ಗರ್ಭಗುಡಿ ಬಂದಿತು. ಅದರಲ್ಲಿ ಬುದ್ಧನ ಮೂರ್ತಿಯನ್ನು ಕಡೆದು ಪೂಜಿಸಹತ್ತಿದ್ದರು. ಮಹಾಯಾನದಲ್ಲಿ ಚಿತ್ರ ಮತ್ತು ಮೂರ್ತಿಗಳಿಗೆ ಅವಕಾಶ ದೊರೆತದ್ದರಿಂದ ಬದಿಯ ಅಂಕಣಗಳಲ್ಲಿ ಮಾಡಗಳನ್ನು ಕೊರೆಯುವ ಮತ್ತು ಹೆಚ್ಚು ಹರವಾದ ಒಳಗೋಡೆಗಳನ್ನು ನಿರ್ಮಿಸುವ ಅವಶ್ಯಕತೆ ಉಂಟಾಯಿತು. ಇದಕ್ಕೆ ಕಂಬಗಳು ನೆರವಾದುವು. 11, 7 ಮತ್ತು 6ನೆಯ ವಿಹಾರಗಳು ಮಧ್ಯಂತರದ ಅವಸ್ಥೆಯನ್ನು ಸೂಚಿಸುತ್ತವೆ. ಅವುಗಳ ರಚನೆ ಹೀನಯಾನ ವಿಹಾರಗಳ ರಚನೆಯಿಂದ ಬೇರೆಯಾಗಿದ್ದರೂ ಮಂಟಪದಲ್ಲಿಯ ಕಂಬಗಳ ರಚನೆಯಲ್ಲಿ ಕಟ್ಟಡಗಳಲ್ಲಿ ಹಿಂದೆ ಬಳಸಲಾದ ನಮೂನೆಯಿದೆ. ಈ ಮೂರು ವಿಹಾರಗಳಲ್ಲಿ 11ನೆಯದು ಎಲ್ಲಕ್ಕೂ ಮೊದಲು ಹುಟ್ಟಿದೆ. ಇದರಲ್ಲಿಯ ನಾಲ್ಕು ಕಂಬಗಳು ಪ್ರಾಕಾರದ ಮಧ್ಯದಲ್ಲಿ ತಯಾರಿಸಿದ ಒಂದು ಚಪ್ಪರವನ್ನು ನಿರ್ದೇಶಿಸುತ್ತವೆ. 7ನೆಯದರಲ್ಲಿ ಇಂಥ ಎರಡು ಚಪ್ಪರಗಳನ್ನು ಕಾಣುತ್ತೇವೆ. ಮುಂದೆ ಅನೇಕ ಕಂಬಗಳು ಕೂಡಿಕೊಂಡು ದೊಡ್ಡ ಮಂಟಪದ ರಚನೆಗೆ ಕಾರಣವಾದುವು. 1, 4, 16, 17, 21, ಮತ್ತು 23ನೆಯ ಗುಹಾಂತರ್ದೇವಾಲಯಗಳಲ್ಲಿ ಶಿಲ್ಪಕಲಾ ಕುಶಲತೆಯ ಉತ್ತಮ ವೈವಿಧ್ಯ ಕಾಣಬರುತ್ತದೆ.

ಕ್ರಿ.ಶ. 6ನೆಯ ಶತಮಾನದಲ್ಲಿ ನಿರ್ಮಾಣವಾದ 16ನೆಯ ಇವುಗಳಲ್ಲಿ ಅತ್ಯುತ್ತಮವಾದುದು. ಇದು ಮತ್ತು 1ನೆಯ ಗುಹಾಂತರ್ದೇವಾಲಯಗಳು ಸಾಮಾನ್ಯವಾಗಿ ಒಂದೇ ರೀತಿಯವು. ಇವೆರಡಕ್ಕೂ 65 ಉದ್ದವಾದ ಮೊಗಸಾಲೆ, 65` ಚೌಕಟ್ಟಿನ 20 ಕಂಬಗಳ ಸಾಲಿನಿಂದೊಡಗೂಡಿದ ನಡುಸಾಲೆಗಳಿರುವುವು. 16ನೆಯದರ ನಡುಸಾಲೆ, ಮೊಗಸಾಲೆಗಳ ಗೋಡೆಗಳಲ್ಲಿ 16 ಚಚ್ಚೌಕದ ಸಣ್ಣ ಕೋಣೆಗಳಿವೆ. ಮತ್ತು ಹಿಂಬದಿಯ ಗೋಡೆಯಲ್ಲಿ ಒಂದು ಅಗಲವಾದ ಗರ್ಭಗುಡಿಯನ್ನು ನಿರ್ಮಿಸಿದ್ದಾರೆ. ಅದರಲ್ಲಿ ಬುದ್ಧನ ದೊಡ್ಡ ವಿಗ್ರಹ ವಿರಾಜಮಾನವಾಗಿದೆ. ಈ ಗುಹೆಯಲ್ಲಿ ವಾಕಾಟಕ ಹರಿಷೇಣನ ಶಿಲಾಶಾಸನವಿದೆ. 2ನೆಯ ಗುಹಾಂತರ್ದೇವಾಲಯದಲ್ಲಿ ಬ್ರಾಹ್ಮೀಲಿಪಿ ಮತ್ತು ಸಂಸ್ಕತ ಭಾಷೆಯಲ್ಲಿರುವ ಕ್ಷಾಂತಿವಾದಿ ಸರಸ್ವತಿ, ಮೈತ್ರೀ, ಬಲಜಾತಕ ಕ್ಷಾಂತಿಜಾತಕದ ಒಂದೆರಡು ಶ್ಲೋಕಗಳನ್ನು ಬಣ್ಣದಲ್ಲಿ ಬರೆಯಲಾಗಿದೆ.

19ನೆಯದು ಉತ್ತಮರೀತಿಯಲ್ಲಿ ರಚಿತವಾದ ಚೈತ್ಯಾಲಯ. ಇದೇನೂ ಅಷ್ಟು ದೊಡ್ಡದಲ್ಲ. ಹೊರಗೆ 38 ಉದ್ದ 32 ಅಗಲವಾಗಿದೆ. ಒಳಭಾಗದ ಉದ್ದ 46 ಅಗಲ 24. ಹಿಂದೆ ಒಂದು ಹೊರಪ್ರಾಕಾರವೂ ಎರಡೂ ಬದಿಗಳಲ್ಲಿ ಕಿರುದೇವಾಲಯಗಳೂ ಇದ್ದಿರಬೇಕು. ಮುಂದಿನ ಗೋಡೆಗೆ ಮೂರು ಪ್ರವೇಶದ್ವಾರಗಳ ಬದಲಾಗಿ ಒಂದೇ ಇದೆ. ಮುಂದುಗಡೆ ಹೊರಮಂಟಪ ಇದ್ದು ಚೈತ್ಯಾಲಯಕ್ಕೆ ಕಲೆ ತಂದುಕೊಟ್ಟಿದೆ. 26ನೆಯದೂ ಒಂದು ಚೈತ್ಯಾಲಯ. 68 ಉದ್ದ, 36 ಅಗಲ ಮತ್ತು 31 ಎತ್ತರವಿದೆ. ಪ್ರವೇಶದ್ವಾರದಲ್ಲಿಯ ಎರಡು ಕಂಬಗಳಲ್ಲದೆ ಇದಕ್ಕೆ 12 ಎತ್ತರವಾದ 26 ಕಂಬಗಳಿವೆ. ಅಲಂಕಾರ ಹೆಚ್ಚು. ಸ್ತೂಪದ ಮೇಲೆ ಹಲವು ಕೆತ್ತನೆಗಳಿವೆ. ಆದರೆ, ಮೊದಲಿನ ಚೈತ್ಯಗಳಲ್ಲಿದ್ದ ನಯ ಮತ್ತು ಲಯ ಇಲ್ಲಿ ತಪ್ಪಿದೆ. ಚೈತ್ಯ ಕಿಂಡಿಯ ಹತ್ತಿರ ಸುಂದರವಾದ ಅನೇಕ ಆಕೃತಿಗಳನ್ನು ಕೆತ್ತಿದ್ದಾರೆ. ಇಲ್ಲಿಯ ಮೂರ್ತಿಗಳು ವಿಶೇಷ ಪ್ರಮಾಣದಲ್ಲಿದ್ದರೂ ವೈವಿಧ್ಯವಿಲ್ಲದ್ದರಿಂದ ಮನಸ್ಸನ್ನು ಸೆಳೆಯುವುದಿಲ್ಲ.

1ನೆಯ ಗುಹಾಂತರ್ದೇವಾಲಯದಲ್ಲಿಯ ಶಿಲಾಮೂರ್ತಿಗಳು ಬಹು ಸುಂದರವಾಗಿವೆ. ಮುಂಭಾಗದಲ್ಲಿ ಉತ್ತಮ ರೀತಿಯ ಕೆತ್ತನೆ ಕೆಲಸ ಮಾಡಿದ್ದಾರೆ. 26ನೆಯ ಗುಹಾಂತರ್ದೇವಾಲಯದಲ್ಲಿ ಬುದ್ಧ ನಿರ್ಯಾಣದ ಬೃಹತ್ ಚಿತ್ರವನ್ನು ಕೆತ್ತಿದ್ದಾರೆ. ಆನಂದನೇ ಮೊದಲಾದ ಅವನ ಅನುಯಾಯಿಗಳು ದೇಹದ ಹತ್ತಿರ ಕುಳಿತು ಶೋಕಿಸುತ್ತಿದ್ದಾರೆ. ಚಿತ್ರಸಂಯೋಜನೆ ಸುಂದರವಾಗಿದೆ. 1ನೆಯ ಗುಹಾಂತರ್ದೇವಾಲಯದ ಒಂದು ಕಂಬದ ಬೋಧಿಗೆಯ ಮೇಲೆ ನಾಲ್ಕು ದೇಹ, ಒಂದೇ ಮುಖವುಳ್ಳ ನಾಲ್ಕು ಚಿಗರೆಗಳನ್ನು ಬಹು ಸುಂದರವಾಗಿ, ಜೀವಂತವೋ ಎನ್ನುವಂತೆ ಕೆತ್ತಿದ್ದಾರೆ. ಚೌಕಟ್ಟಿನ ಮೆಲಿರುವ ಕೆತ್ತನೆ ಮನಮೋಹಕವಾಗಿದೆ. ಅಜಂತದ ಒಂದು ವಿಹಾರದಲ್ಲಿ ಗರ್ಭಗುಡಿಯಲ್ಲಿಯ ಬುದ್ಧನ ಮೂರ್ತಿ, ಎದುರಿನಿಂದ ನೋಡಿದರೆ ಗಂಭೀರ ಮೌನದಲ್ಲಿದ್ದಂತೆ ತೋರುತ್ತದೆ. ಅದನ್ನೇ 45º ಕೋನದಲ್ಲಿ ನಿಂತು ನೋಡಿದರೆ ನಗುವಂತೆ ತೋರುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಇಂದಿನಿಂದ 2030 ರವರೆಗೆ ಏಳು ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಶುರು.

ಇಂದಿನಿಂದ 2030 ರವರೆಗೆ ಏಳು ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಶುರು.

ಪುರಿಯ ಶ್ರೀ ಜಗನ್ನಾಥ ದೇವಾಲಯ

ಪುರಿಯ ಶ್ರೀ ಜಗನ್ನಾಥ ದೇವಾಲಯ