ಅಕೊರಸ್ ಕೆಲಾಮಸ್ ಎಂದು ಕರೆಯುವ ಬಜೆ ‘ಏರೇಸಿ’ ಕುಟುಂಬಕ್ಕೆ ಸೇರಿದ ಸಸ್ಯಮೂಲಿಕೆ. ಇದರ ಮೂಲಸ್ಥಾನ ಹಿಮಾಲಯ. ಇದನ್ನು ಪರ್ಶಿಯ ಮೂಲದಿಂದ ಭಾರತಕ್ಕೆ ತರಲಾಗಿದೆ. ಪರ್ಶಿಯಾದಲ್ಲಿ ಬಜೆಯನ್ನು ಖುರಸಾನಿ ವಚಾ ಅಥವಾ ಬಲ-ವಜ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಜೌಗು ಪ್ರದೇಶದಲ್ಲಿ ಬೆಳೆಯುತ್ತದೆ. ನೀರಿನಂಶ ಜಾಸ್ತಿ ಇರುವ ಕಡೆ ಬೆಳೆಯುತ್ತದೆ. ಇದು ಉತ್ತರ ಅಮೇರಿಕಾ, ಯೂರೋಪ್ ಮತ್ತು ರಷ್ಯಾದ ನದಿ ತೀರಗಳು ಮತ್ತು ಕೊಳಗಳಿರುವ ಪ್ರದೇಶದಲ್ಲಿ ದಟ್ಟವಾಗಿ ಬೆಳೆಯುತ್ತದೆ.
ಈ ಬೆಳೆಯು ವಾಣಿಜ್ಯವಾಗಿ ರಷ್ಯಾ, ಮಧ್ಯ ಯೂರೋಪ್, ರುಮೇನಿಯ, ಭಾರತ ಮತ್ತು ಜಪಾನ್ ದೇಶಗಳಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ಬಜೆ, ಕರ್ನಾಟಕ, ಮಣಿಪುರ, ಅರುಣಚಲಪ್ರದೇಶ, ಮೇಘಾಲಯ ಮತ್ತು ಹಿಮಾಲಯ ತಪ್ಪಲಲ್ಲಿ ೧೮೦೦ಮೀ. ಎತ್ತರದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದ ತುಮಕೂರು, ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಗದ್ದೆಗಳಲ್ಲಿ ಬೆಳೆಯಲಾಗುತ್ತದೆ. ಇದು ಅಮೇರಿಕಾ ಮತ್ತು ಉತ್ತರ ನಾರ್ವೆಯ ಡೊಂಗುದಿ ಪ್ರದೇಶಗಳಲ್ಲೂ ಸಮೃದ್ಧವಾಗಿ ಬೆಳೆಯುತ್ತದೆ. ಇದು ದೇಹಕ್ಕೆ ತುಂಬಾ ತಂಪು. ಇದು ನೀರಿನಾಸರೆ ಇರುವ ಕಡೆ ಬೆಳೆಯುವ ಸಸಿ. ಹಾಸನ, ತುಮಕೂರು, ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಗದ್ದೆಗಳಲ್ಲಿ ಬಜೆಯನ್ನು ಬೆಳೆಸುತ್ತಾರೆ. ಎಲೆಗಳು ಹಸಿರು ಮತ್ತು ಉದ್ದವಾಗಿದ್ದು ಚಿಕ್ಕ ಕಬ್ಬಿಣ ಪತ್ರಗಳನ್ನು ಹೋಲುತ್ತವೆ, ಬಢರುಗಳು ಗಂಟು ಗಂಟಾಗಿ ಉದ್ದವಾಗಿರುವುವು. ಬೇರುಗಳ ಮೇಲೆ ಮಾಸಲು ಬಣ್ಣದ ರೋಮಗಳಿರುವುವು, ಬೇರುಗಳಿಗೆ ಸುವಾಸನೆಯಿರುವುದು. ರುಚಿ ಖಾರವಾಗಿರುವಿದು. ಹೂಗಳು ಸಣ್ಣ ಸಣ್ಣದಾಗಿದ್ದು ತಿಳಿ ಹಸಿರಾಗಿರುವುವು. ಗ್ರಾಮವಾಸಿಗಳಿಗೆ, ಅಜ್ಜಿಯಂದಿಯರಿಗೆ ಚಿರಪರಿಚಿತ ಮೂಲಿಕೆ, ಸಣ್ಣ ಮಕ್ಕಳಿರುವ ಪ್ರತಿ ಮನೆಯಲ್ಲೂ ಬಜೆ ಇದ್ದೇ ಇರುತ್ತದೆ. ಇದರಲ್ಲಿ ‘ಅಕೊರಿನ್’ ತೈಲ ಇರುತ್ತದೆ.
ಇದೊಂದು ಏಕದಳ ಸಸ್ಯ. ಕರ್ನಾಟಕದ ಅನೇಕ ಭಾಗಗಳಲ್ಲಿ ಇದನ್ನು ಗದ್ದೆಗಳಲ್ಲಿ ಸಾಗುವಳಿ ಮಾಡಲಾಗುತ್ತದೆ. ಬಜೆಗಿಡದಲ್ಲಿ ನೆಲದೊಳಗಿರುವ ಸುವಾಸನೆಯಿಂದ ಕೂಡಿದ ಶಿಘಾವೃಂತ ಅಥವಾ ಕಂದು ಇರುತ್ತದೆ. ಈ ಕಂದು ಸಾಮಾನ್ಯವಾಗಿ ೧-೨ ಮೀ. ಉದ್ದವಿರುತ್ತದೆ. ಕಂದಿನ ಮೇಲಿನ ಎಲೆಗಳು ೦.೭೫ – ೧.೫ಮೀ. ಉದ್ದ ಹಾಗೂ ೨ – ೪ಸೆಂ. ಮೀ. ಅಗಲವಿದ್ದು ಐರಿಸ್ ಗಿಡದ ಎಲೆಯನ್ನು ಹೋಲುತ್ತದೆ. ಹೂತನೆಯು ೬-೩೦ಸೆಂ. ಮೀ. ಉದ್ದವಿರುತ್ತದೆ. ಹಣ್ಣು ಹಳದಿ ಹಸಿರು ಬಣ್ಣವಿದ್ದು ೧-೩ ಬೀಜಗಳಿರುತ್ತವೆ. ಈ ಗಿಡದ ವಾಣಿಜ್ಯ ಭಾಗ ಗುಪ್ತಕಾಂಡ. ಇದು ೧.೫-೨.೫ಸೆಂ. ಮೀ. ದಪ್ಪವಾಗಿರುತ್ತದೆ.
ಮಣ್ಣು ಭತ್ತ ಬೆಳೆಯುವ ಮಣ್ಣುಗಳಾದ ಜೇಡಿ, ಗೋಡು ಮತ್ತು ಮೆಕ್ಕಲು ಮಣ್ಣಿನಲ್ಲಿ ಬೆಳೆಯಬಹುದು ಹಾಗೂ ನೀರಾವರಿ ಇರುವ ಅಥವಾ ನದೀ ತೀರದಲ್ಲೂ ಬೆಳೆಯಬಹುದು.

ಇದು ಉಷ್ಣವಲಯ ಮತ್ತು ಸಮಶೀತೋಷ್ಣವಲಯದ ಬೆಳೆ. ಒಳ್ಳೆಯ ಮಳೆ ಬೀಳುವ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕೊಯ್ಲು ಮಾಡುವಾಗ ಮತ್ತು ಬೇರುಕಾಂಡಗಳನ್ನು ಒಣಗಿಸುವಾಗ ಸಾಕಷ್ಟು ಸೂರ್ಯನ ಬೆಳಕು ಬೇಕಾಗುತ್ತದೆ.
ಹಿಂದಿನ ಬೆಳೆಯಲ್ಲಿ ಕೊಯ್ಲು ಮಾಡಿದ ಸಸ್ಯದ ಹಸಿಕೊನೆ ಅಥವಾ ಬೇರುಕಾಂಡದ ಮೇಲ್ಭಾಗವನ್ನು ಉಪಯೋಗಿಸುತ್ತಾರೆ. ಚೆನ್ನಾಗಿ ಬಲಿತ ಬೇರುಕಾಂಡದ ಕೊನೆಯನ್ನು ಕತ್ತರಿಸಿ, ನಾಟಿಗೆ ಉಪಯೋಗಿಸಬಹುದು. ಹೆಕ್ಟೇರಿಗೆ ನಾಟಿ ಮಾಡಲು ೨-೩ ಟನ್ ತುದಿಬೇರುಕಾಂಡಗಳು ಬೇಕಾಗುತ್ತದೆ. ತುದಿಬೇರುಕಾಂಡಗಳನ್ನು ನೇರವಾಗಿ ನಾಟಿ ಮಾಡಬಹುದು. ಇವುಗಳನ್ನು ಹೊದಿಕೆ ಮುಚ್ಚದ ಗುಣಿಗಳಲ್ಲಿ ಬಹಳ ಕಾಲ ಶೇಖರಿಸಿಡಬಹುದು.
ಈ ಬೆಳೆಯನ್ನು ವರ್ಷದ ಎಲ್ಲಾ ಕಾಲದಲ್ಲೂ ಬೆಳೆಯಬಹುದು. ಆದರೆ ನಾಟಿ ಮಾಡಲು ವಸಂತಋತು(ಮಾರ್ಚ್-ಏಪ್ರಿಲ್) ಹೆಚ್ಚು ಸೂಕ್ತ. ಕೊಯ್ಲು ಮಾಡುವ ಸಮಯದಲ್ಲಿ ಹೆಚ್ಚು ಬಿಸಿಲಿರಬೇಕು. ಇದರಿಂದ ಬೇರುಕಾಂಡಗಳು ಸುಲಭವಾಗಿ ಒಣಗುತ್ತವೆ.
ಭತ್ತದ ಬೆಳೆಗೆ ಮಾಡುವಂತೆ ಭೂಮಿಯನ್ನು ವಿಂಗಡಿಸಬೇಕು. ಜಮೀನಿಗೆ ಹೆಚ್ಚು ನೀರನ್ನು ಹಾಯಿಸಿ, ಎರಡರಿಂದ ಮೂರು ಬಾರಿ ಉಳಿಮೆ ಮಾಡಬೇಕು. ಸ್ವಲ್ಪ ದಿನಗಳ ನಂತರ ನೀರು ನಿಂತಿರುವ ಭೂಮಿಯನ್ನು ಕಾಲಿನಿಂದ ತುಳಿದು ಭತ್ತದ ಗದ್ದೆಯಂತೆ ಸಿದ್ದಪಡಿಸಬೇಕು. ನಂತರ ಹಲಗೆಯ ಸಹಾಯದಿಂದ ಭೂಮಿಯನ್ನು ಸಮಮಾಡಬೇಕು.
೩೦×೩೦ಸೆಂ. ಮೀ. ಅಂತರದಲ್ಲಿ ಕತ್ತರಿಸಿದ ಬೇರುಕಾಂಡದ ತುಂಡುಗಳನ್ನು ಭೂಮಿಯಲ್ಲಿ ೫ಸೆಂ. ಮೀ. ಆಳದಲ್ಲಿ ನೆಡಬೇಕು. ಎರಡನೆ ಸಾಲಿನಲ್ಲಿ ನಾಟಿ ಮಾಡುವ ಬೇರುಕಾಂಡಗಳು ಮೊದಲನೆಯ ಸಾಲಿನ ಮಧ್ಯದಲ್ಲಿ ಬರುವಂತೆ ನಾಟಿಮಾಡಬೇಕು.
ಸಿದ್ದಮಾಡುವ ಸಮಯದಲ್ಲಿ ೮-೧೦ ಗಾಡಿ ಹಸಿರೆಲೆ ಗೊಬ್ಬರ ಹತ್ತು ಕೊಟ್ಟಿಗೆ ಗೊಬ್ಬರ(೨೫ಟನ್/ಹೆ.)ಗಳನ್ನು ಭೂಮಿಗೆ ಸೇರಿಸಬೇಕು. ನಾಟಿ ಮಾಡುವ ಸಮಯದಲ್ಲಿ ಮತ್ತು ನಾಟಿಯಾದ ೪ ಮತ್ತು ೮ ತಿಂಗಳ ನಂತರ ಇವುಗಳ ಜೊತೆಗೆ ೧೦೦ಕಿ.ಗ್ರಾಂ. ಅಮೋನಿಯಂ ಸಲ್ಫ಼ೇಟ್, ೩೦೦ಕಿ. ಗ್ರಾಂ. ಸೂಪರ್ ಫಾಸ್ಪೇಟ್ ಮತ್ತು ೧೦೦ಕಿ. ಗ್ರಾಂ. ಮ್ಯೂರೇಟ್ ಆಫ್ ಪೊಟ್ಯಾಷ್ ಗಳನ್ನು ಮಣ್ಣಿನಲ್ಲಿ ಮಿಶ್ರಮಾಡಬೇಕು ಅಥವಾ ಹೆಕ್ಟೇರಿಗೆ ೧೨೫ಕಿ.ಗ್ರಾಂ. ಎನ್. ಪಿ.ಕೆ. ಮಿಶ್ರಣವನ್ನು ಮೂರು ಸಮಕಂತುಗಳಲ್ಲಿ ಕೊಡುವುದನ್ನು ಶಿಫಾರಸ್ಸು ಮಾಡಲಾಗಿದೆ.
ಭೂಮಿಗೆ ನಿರಂತರವಾಗಿ ನೀರನ್ನು ಹಾಯಿಸಬೇಕು. ಈ ಬೆಳೆಯಿರುವ ಅವಧಿಯಲ್ಲಿ ಸುಮಾರು ೫ಸೆಂ. ಮೀ. ಎತ್ತರದವರೆಗೆ ನೀರು ನಿಲ್ಲುವಂತೆ ಮಾಡಬೇಕು. ಗಿಡಗಳೂ ಬೆಳೆದಂತೆ ನೀರನ್ನು ೧೦ಸೆಂ. ಮೀ. ಎತ್ತರಕ್ಕೆ ಹೆಚ್ಚಿಸಬೇಕು.

ಆಗಾಗ ಕಳೆ ಕಿತ್ತು ಜಮೀನಿನಲ್ಲಿ ಕಳೆ ಇಲ್ಲದಂತೆ ಮಾಡಬೇಕು. ಬೆಳೆ ಅವಧಿಯಲ್ಲಿ ೩ ಬಾರಿ ಕಳೆ ಕೀಳಬೇಕು. ಪ್ರತಿ ಬಾರಿ ಕಳೆ ಕಿತ್ತಮೇಲೆ, ಸಸಿಗಳ ಬುಡಕ್ಕೆ ಮಣ್ಣು ಏರಿಸಬೇಕು.
ಈ ಬೆಳೆಗೆ ಯಾವುದೇ ರೀತಿಯ ಕೀಟ ಅಥವಾ ರೋಗಗಳು ಕಂಡುಬಂದಿಲ್ಲ. ಆದಾಗ್ಯೂ ಹಿಟ್ಟು ತಿಗಣೆಯು ಬೇರು ಮತ್ತು ಕಾಂಡಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಇದರ ಹತೋಟಿಗೆ ಶೇ. ೧ಮೀಥೈಲ್ ಪ್ಯಾರಾಥಿಯನ್ ಅಥವಾ ಶೇ. ೦.೨ಕ್ವಿನಾಲ್ ಫಾಸನ್ನು ಗಿಡಗಳ ಮೇಲೆ ಹಾಗೂ ಬೇರುಗಳ ಸುತ್ತಲೂ ಸಿಂಪಡಿಸಬೇಕು.
ನಾಟಿ ಮಾಡಿದ ಒಂದು ವರ್ಷದ ನಂತರ ಈ ಬೆಳೆ ಕೊಯ್ಲಿಗೆ ಬರುತ್ತದೆ. ಕೊಯ್ಲು ಮಾಡುವ ಮೊದಲು ಭೂಮಿಯಿಂದ ನೀರು ಹಿಂಗುವಂತೆ ಮಾಡಿ ನಂತರ ಭೂಮಿಯನ್ನು ಅಗೆಯಲು ಅನುಕೂಲವಾಗುವಂತೆ ತೆಳುವಾಗಿ ನೀರು ಹಾಯಿಸಬೇಕು. ಎಲೆಯು ಹಳದಿ ಬಣ್ಣಕ್ಕೆ ತಿರುಗಿದಾಗ ಬೆಳೆಯನ್ನು ಕೊಯ್ಯಲಾಗುತ್ತದೆ. ಭೂಮಿಯನ್ನು ೬೦ ಸೆಂ. ಮೀ. ಆಳದವರೆಗೆ ಅಗೆದು ಗುಪ್ತಕಾಂಡಗಳನ್ನು ತೆಗೆಯಬೇಕು. ಅನಂತರ ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಗಿಸಬೇಕು. ೧ ಚ. ಮೀ. ಭೂಮಿಯಿಂದ ೧ ಕೆ. ಜಿ. ಯಷ್ಟು ಗುಪ್ತಕಾಂಡದ ಇಳುವರಿ ದೊರಕುತ್ತದೆ
ಬಜೆಯನ್ನು ಸುಟ್ಟು ಭಸ್ಮವನ್ನು ಮಾಡಿ, ಅರ್ಧ ಚಮಚ ಭಸ್ಮಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ದಿವಸಕ್ಕೆ ೨-೩ ವೇಳೆ ತಿನ್ನುವುದರಿಂದ ನೆಗಡಿ, ಕೆಮ್ಮು ಕಡಿಮೆಯಾಗುತ್ತದೆ.
ಬಜೆಯನ್ನು ತೇಯ್ದು ತುಪ್ಪದೊಡನೆ ಕಲಸಿ ಮಕ್ಕಳಿಗೆ ತಿನ್ನಿಸುವುದರಿಂದ ವಾಕ್ ಶಕ್ತಿ, ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
ಬಟ್ಟೆಯಲ್ಲಿ ಶೋಧಿಸಿದ ಬಜೆಯ ಚೂರ್ಣ ೧೦ಗ್ರಾಂನಷ್ಟನ್ನು ದಿವಸಕ್ಕೊಮ್ಮೆ ಬೆಳಗ್ಗೆ ಬಿಸಿ ನೀರಿನಲ್ಲಿ ಅಥವಾ ಜೇನಿನಲ್ಲಾಗಲೀ ಇಟ್ಟು ೪೦ ದಿನ ಸೇವಿಸಿದರೆ ಮೂರ್ಛೆ ಗುಣವಾಗುತ್ತದೆ.

ಬಜೆಯನ್ನು ಅರೆದು ಲೇಪಿಸುವುದರಿಂದ, ಸಂಧಿವಾತ ಮತ್ತು ಲಕ್ವ ಗುಣವಾಗುತ್ತದೆ.
ಹಸಿ ಬಜೆಯ ರಸವನ್ನು ಕಿವಿಗೆ ಹಿಂಡುವುದರಿಂದ ಕಿವಿನೋವು ಕಡಿಮೆಯಾಗುತ್ತದೆ.
ಬಜೆ, ನಾಗಕೇಸರಿ, ಹಿಪ್ಪಲಿ ಬೇರಿನ ಚೂರ್ಣಗಳನ್ನು ಸೇರಿಸಿ ಸೇವಿಸಿದರೆ ಸುಖ ಪ್ರಸವವಾಗುತ್ತದೆ.
ಬಜೆ ಸೇವಿಸುವುದರಿಂದ ಜಂತುಹುಳುಗಳು ನಾಶವಾಗುತ್ತವೆ.
ಬಜೆಯ ಕಷಾಯ ಸೇವನೆಯಿಂದ ಮೂತ್ರಕೋಶದ ಕಲ್ಲು ಕರಗಿ ಹೋಗುತ್ತದೆ. ಮೂತ್ರ ಬಂಧವೂ ನಿವಾರಣೆಯಾಗುತ್ತದೆ.
ಮಕ್ಕಳಲ್ಲಿ ಹಲ್ಲು ಹುಟ್ಟುವಾಗ ಜ್ವರ ಕಾಣಿಸಿಕೊಂಡಲ್ಲಿ ಬಜೆಯನ್ನು ಅರೆದು ತಿನ್ನಿಸುವುದರಿಂದ ಜ್ವರ ವಾಸಿಯಾಗುತ್ತದೆ.
ಬಜೆ ಮತ್ತು ಸೈಂಧಲವಣ ಇವೆರಡನ್ನು ನೀರಿನೊಡನೆ ಕುಡಿಯುವುದರಿಂದ ಕಫ ವಾಂತಿಯಾಗಿ ಕೆಮ್ಮು ಶಮನವಾಗುತ್ತದೆ.
ಬಜೆಯ ಗಂಧ ತಯಾರಿಸಿ ಸೇವಿಸುವುದರಿಂದ ಅಜೀರ್ಣ, ಹೊಟ್ಟೆನೋವು ಮತ್ತು ಮೂಲವ್ಯಾಧಿ ಗುಣವಾಗುತ್ತದೆ.
ಒಂದು ತಿಂಗಳಿಂದ ಆರು ತಿಂಗಳ ಮಕ್ಕಳಲ್ಲಿ ಭೇದಿಯಾಗುತ್ತಿದ್ದಲ್ಲಿ ಹಾಗೂ ಹೊಟ್ಟೆ ಉಬ್ಬರವಿದ್ದಲ್ಲಿ ಬಜೆಪುಡಿಯನ್ನು ಹರಳೆಣ್ಣೆಯಲ್ಲಿ ಬೆರೆಸಿ ಹೊಟ್ಟೆಯ ಮೇಲೆ ಲೇಪಿಸಬೇಕು.
ಧನ್ಯವಾದಗಳು.
GIPHY App Key not set. Please check settings