in ,

ಕಿರುಧಾನ್ಯಗಳು ಎಂದರೆ ಏನು? ಅವು ಯಾವುವು?

ಕಿರುಧಾನ್ಯಗಳು
ಕಿರುಧಾನ್ಯಗಳು

ಅಕ್ಕಿ, ಗೋಧಿ, ಬಾರ್ಲಿಗಳಿಂದ ಹೊರತಾಗಿ ಬೇರೆ ಆಹಾರಧಾನ್ಯಗಳಿಗೆ ಸಾಮಾನ್ಯವಾಗಿ ಕಿರುಧಾನ್ಯಗಳೆಂದು ಹೆಸರು. ಇವು ಸಾಮಾನ್ಯವಾಗಿ ಗುಂಡಗಿನ ಆಕಾರದಲ್ಲಿ ಮತ್ತು ಸಣ್ಣ ಗಾತ್ರದಲ್ಲಿ ಇರುತ್ತವೆ. ನವಣೆ, ಸಾಮೆ, ಸಜ್ಜೆ, ಹಾರಕ(ಅರ್ಕ), ಕೊರಲೆ, ಬರಗು, ರಾಗಿ, ಜೋಳದಂತಹ ಬೆಳೆಗಳು ಕಿರು ಧಾನ್ಯಗಳು. ಎಲ್ಲ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ, ಹೆಚ್ಚು ಪೌಷ್ಟಿಕಾಂಶಗಳನ್ನು, ನಾರಿನಂಶವನ್ನು ಹೊಂದಿರುವ ನಿಸರ್ಗಕ್ಕೆ ಹಾನಿ ಮಾಡದಂತೆ ಬೆಳೆಯುವ ಈ ಧಾನ್ಯಗಳನ್ನು ಸಿರಿಧಾನ್ಯಗಳೆಂದು ಕೂಡ ಕರೆಯುತ್ತಾರೆ. ಇವನ್ನು ತೃಣಧಾನ್ಯಗಳು ಎಂದೂ ಕರೆಯುತ್ತಾರೆ.

ಶಿಲಾಯುಗದಲ್ಲಿ ಸರೋವರ ತಟದ ನಿವಾಸಿಗಳು ಸ್ವಿಟ್ಜರ್ ಲ್ಯಾಂಡಿನಲ್ಲಿ ಈ ಕಿರುಧಾನ್ಯಗಳನ್ನು ಬೆಳೆದುದನ್ನು ಗುರುತಿಸಲಾಗಿದೆ. ನವಶಿಲಾಯುಗದಲ್ಲಿ ಇವುಗಳನ್ನು ಒಣಹವಾಮಾನದ ಆಫ್ರಿಕಾ ಹಾಗೂ ಉತ್ತರ ಚೀನಾಪ್ರದೇಶಗಳಲ್ಲಿ ಬೆಳೆದಿದ್ದನ್ನು ಇತಿಹಾಸದಲ್ಲಿ ದಾಖಲಿಸಲಾಗಿದೆ. ಭಾರತ, ಚೀನಾ ಹಾಗೂ ಕೊರಿಯಾ ದೇಶಗಳ ನವಶಿಲಾಯುಗದ ನಾಗರಿಕತೆಗಳಲ್ಲಿ ಈ ಕಿರಿಧಾನ್ಯಗಳೇ ಜನ ಪ್ರಮುಖ ಆಹಾರವಾಗಿತ್ತೇ ಹೊರತು ಅಕ್ಕಿ, ಗೋಧಿಗಳಲ್ಲ ಎಂಬುದು ತಿಳಿದುಬಂದಿದೆ.

ಅನಂತರದ ದಿನಗಳಲ್ಲಿ ಸಿರಿಧಾನ್ಯಗಳು ಜಗತ್ತಿನೆಲ್ಲೆಡೆ ಪಸರಿಸಿದವು. ಮಾಸಲು ಹಳದಿ, ಬೂದು, ಬಿಳಿ, ಕೆಂಪು ಹೀಗೆ ವಿವಿಧ ಬಣ್ಣಗಳ ಸುಮಾರು ಆರು ಸಾವಿರಕ್ಕೂ ಹೆಚ್ಚು ವಿಧದ ಸಿರಿಧಾನ್ಯಗಳು ಜಗತ್ತಿನಲ್ಲಿವೆ. ಪುರಾತತ್ವಶಾಸ್ತ್ರಜ್ಞರ ಪ್ರಕಾರ ಇಂದು ಅನೇಕ ತಳಿಗಳು ನಾಮಾವಶೇಷವಾಗಿವೆ.

ಕಿರುಧಾನ್ಯಗಳು ಎಂದರೆ ಏನು? ಅವು ಯಾವುವು?
ಧಾನ್ಯಗಳು

ಆಫ್ರಿಕಾ ಮತ್ತು ಏಷಿಯಾ ಮೂಲದ ಈ ಕಿರುಧಾನ್ಯಗಳ ಮೂಲ ಹಾಗೂ ತಳಿಗಳು ವೈವಿಧ್ಯಮಯವಾಗಿವೆ. ಉದಾಹರಣೆಗೆ ಸಜ್ಜೆ ಪಶ್ಚಿಮ ಆಫ್ರಿಕಾದ ಉಷ್ಣವಲಯದ ಬೆಳೆಯಾಗಿದ್ದರೆ ರಾಗಿ ಉಗಾಂಡಾ ಹಾಗೂ ನೆರೆಹೊರೆಯ ಪ್ರದೇಶದ ಬೆಳೆಯಾಗಿದೆ. ಸುಮಾರು ಮೂರುಸಾವಿರ ವರ್ಷ ಗಳ ಹಿದೆಯೇ ಆಫ್ರಿಕಾದ ತಪ್ಪಲು ಪ್ರದೇಶದಿಂದ ರಾಗಿ ಭಾರತವನ್ನು ಪ್ರವೇಶಿಸಿದರೆ ಕ್ರಿಸ್ತಶಕದ ಪ್ರಾರಂಭದಲ್ಲಿ ಇದು ಯುರೋಪಿನ ದೇಶಗಳಿಗೆ ಒಯ್ಯಲ್ಪಟ್ಟಿತ್ತು. ನಂತರ ದಿನಗಳಲ್ಲಿ ಇವು ಆಫ್ರಿಕಾ ಖಂಡದ ದೇಶಗಳಲ್ಲಿ ಮತ್ತು ಭಾರತದ ಉಪಖಂಡದ ದೇಶಗಳಲ್ಲಿ ಪ್ರಸಾರವಾದವು.

ಹರಪ್ಪಾ ಮತ್ತು ಮೊಹೆಂಜೋದಾರೂಗಳ ಉತ್ಖನನ ಪ್ರದೇಶಗಳಲ್ಲಿ ಅನೇಕ ಬಗೆಯ ಕಿರುಧಾನ್ಯಗಳ ಕುರುಹುಗಳು ದೊರೆತಿವೆ. ಮಾನವ ನಾಗರಿಕತೆಯ ತೊಟ್ಟಿಲುಗಳಾದ ಆಫ್ರಿಕಾ, ಮಾಯನ್ನರು, ಇಂಕಾಗಳು ತಮ್ಮ ಅಡುಗೆಗಳಲ್ಲಿ ಸಿರಿಧಾನ್ಯಗಳನ್ನು ಬಳಸುತ್ತಿದ್ದುದು ತಿಳಿದುಬಂದಿದೆ. ಕ್ರಿ.ಪೂ. ೨ನೇ ಶತಮಾನದಲ್ಲಿದ್ದ ಸಂಗ ವಂಶಸ್ಥ ಹೋಚಿ ಎಂಬಾತನು ’ಸಿರಿಧಾನ್ಯಗಳ ಅರಸ’ ಎಂದು ಪ್ರಸಿದ್ಧಿ ಪಡೆದಿದ್ದನು.

ನಮ್ಮ ಶತಪಥಬ್ರಾಹ್ಮಣದಂತಹ ವೈದಿಕ ಗ್ರಂಥಗಳಲ್ಲಿ ಸಿರಿಧಾನ್ಯಗಳ ಕುರಿತು ಉಲ್ಲೇಖಗಳಿವೆ. ಮಹಾಕವಿ ಕಾಳಿದಾಸನ ಶಾಕುಂತಲದಲ್ಲಿ ಶಕುಂತಲೆಯನ್ನು ದುಷ್ಯಂತನ ಅರಮನೆಗೆ ಕಳಿಸುವಾಗ ಕಣ್ಮಮಹರ್ಷಿಗಳು ಆಕೆ ತಲೆ ಮೇಲೆ ನವಣೆ ಹಾಕಿ ಆಶೀರ್ವದಿಸಿದ್ದನ್ನು ಚಿತ್ರಿಸಲಾಗಿದೆ. ಚೀನಾದಲ್ಲಿ ಇವುಗಳನ್ನು ಪವಿತ್ರಧಾನ್ಯಗಳೆಂದು ಪರಿಗಣಿಸಲಾಗಿತ್ತು. ೨೮೦೦ ವರ್ಷಗಳಷ್ಟು ಹಳೆಯ ದಾಖಲೆಗಳಲ್ಲಿ ಈ ಧಾನ್ಯಗಳ ಬೇಸಾಯ ಮತ್ತು ಸಂಗ್ರಹಣೆ ಕುರಿತು ಮಾಹಿತಿಗಳು ದೊರೆತಿವೆ.

ಉತ್ತರಭಾರತದಲ್ಲೂ ಪ್ರಾಗೈತಿಹಾಸಿಕ ಕಾಲದಲ್ಲೇ ಈ ಧಾನ್ಯಗಳ ಬೇಸಾಯ ಮಾಡಲಾಗುತ್ತಿತ್ತು. ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾಗಳಲ್ಲಿ ಇದು ಪ್ರಮುಖ ಆಹಾರವಾಗಿತ್ತು. ಕ್ರಿ.ಪೂ. ೨೫೦೦ ಸುಮಾರಿಗೆ ಸುಮೇರಿಯನ್ನರಿಗೂ ಇದು ಆಹಾರವಾಗಿತ್ತು. ಹಿಬ್ರೂಗಳ ಬೈಬಲ್ ನಲೂ ಇವುಗಳ ಉಲ್ಲೇಖಗಳಿವೆ. ಬ್ಯಾಬಿಲೋನಾದ ತೂಗು ಉದ್ಯಾನಗಳಲ್ಲಿ ಅಮೂಲ್ಯ ಸಸ್ಯಗಳ ಪೈಕಿ ಕಿರುಧಾನ್ಯಗಳನ್ನು ಸೇರಿಸಿದ್ದನ್ನು ಉಲ್ಲೇಖಿಸಲಾಗಿದೆ.

ಗೋಧಿ ಮತ್ತು ಬಾರ್ಲಿಗಳ ಬೇಸಾಯ ಸಾಧ್ಯವಿರದ ಸಹಾರಾದ ಒಣಪ್ರದೇಶಗಳಲ್ಲಿ ಸಿರಿಧಾನ್ಯಗಳನ್ನು ಬೇಸಾಯ ಮಾಡುವ ಬಗೆಯನ್ನು ಆಫ್ರಿಕನ್ನರಿಂದ ಸುಮಾರು ಕ್ರಿ.ಪೂ.೩೦೦೦ ವರ್ಷಗಳ ಹಿಂದೆಯೇ ಇಜಿಪ್ಶಿಯನ್ನರು ಸೋಮಾಲಿಯಾ ಮತ್ತು ಇರಿಟ್ರಿಯಾಗಳೊಡನೆ ವಾಣಿಜ್ಯ ವ್ಯವಹಾರ ಮಾಡುವ ಸಂದರ್ಭದಲ್ಲಿ ಕಲಿತರೆಂದು ತಿಳಿದುಬರುತ್ತದೆ.

ಚೀನಾದಿಂದ ಯೂರೋಪಿನ ಕಪ್ಪುಸಮುದ್ರ ಪ್ರದೇಶಕ್ಕೆ ಕ್ರಿ.ಪೂ.೫೦೦೦ರದ ಹೊತ್ತಿಗಾಗಲೇ ಪ್ರವೇಶಿಸಿದ್ದವು. ರೋಮನ್ನರು ಹಾಗೂ ಗಾವುಲ್ ರು ಸಿರಿಧಾನ್ಯಗಳಿಂದ ಮಾಡಿದ ರೊಟ್ಟಿಗಳನ್ನು ತಿನ್ನುತ್ತಿದ್ದರು. ಮಧ್ಯಯುಗದಲ್ಲಿ ಗೋಧಿಗಿಂತಲೂ ಸಿರಿಧಾನ್ಯಗಳೇ ಪ್ರಮುಖವಾಗಿ ಬಳಕೆಯಾಗುತ್ತಿದ್ದವು. ಬೈಬಲ್ ನಲ್ಲಿ ಬ್ರೆಡ್ ತಯಾರಿಕೆಗೆ ಕಿರಿಧಾನ್ಯಗಳನ್ನು ಬಳಕೆ ಮಾಡುತ್ತಿದ್ದ ಬಗ್ಗೆ ಪ್ರಸ್ತಾಪವಿದೆ.

ಸಿರಿಧಾನ್ಯ ಬೆಳೆಗಳ ಲಕ್ಷಣಗಳು

*ಲಂಬವಾಗಿ ಎತ್ತರವಾಗಿ ಬೆಳೆಯುವ ವಾರ್ಷಿಕ ಬೆಳೆಗಳು.
*ತಳಿಗಳನ್ನು ಆಧರಿಸಿ ಸುಮಾರು ೧ರಿಂದ ೧೫ ಅಡಿ ಎತ್ತರಕ್ಕೆ ಬೆಳೆಯುವ ಇವು ಆಕಾರ ಮತ್ತು ಗಾತ್ರದಲ್ಲಿ ವ್ಯತ್ಯಾಸ ಹೊಂದಿರುತ್ತವೆ.
*ವಿವಿಧ ಬಣ್ಣದ ಸಿಪ್ಪೆಯೊಳಗೆ ಧಾನ್ಯಗಳ ಬೀಜಗಳಿರುತ್ತವೆ.
*ಸಿಪ್ಪೆ ತೆಗೆದು ಬಳಕೆಮಾಡಬೇಕು. ಅದರಿಂದ ಯಾವುದೇ ಪೌಷ್ಟಿಕಾಂಶ ನಷ್ಟವಾಗುವುದಿಲ್ಲ.
*ಸಿಪ್ಪೆ ಸುಲಿದ ನಂತರ ಧಾನ್ಯಗಳು ಹಳದಿ ಬಣ್ಣದ ಚಿಕ್ಕ ಗುಂಡಾಕಾರದಲ್ಲಿರುತ್ತವೆ.
*ಗಂಟು ಗಂಟಾದ ಕಾಂಡ ಹಾಗೂ ಹುಲ್ಲಿನಂತಹ ಎಲೆಗಳಿರುತ್ತವೆ.

ವಿವಿಧ ಕಿರುಧಾನ್ಯಗಳು

ಜೋಳ

ಕಿರುಧಾನ್ಯಗಳು ಎಂದರೆ ಏನು? ಅವು ಯಾವುವು?
ಜೋಳ

ಜೋಳವು ಒಂದು ಮುಖ್ಯ ಒರಟುಧಾನ್ಯದ ಆಹಾರ ಬೆಳೆ. ಇದನ್ನು ಮಹಾರಾಷ್ಟ್ರ ಮಧ್ಯಪ್ರದೇಶ ಉತ್ತರ ಪ್ರದೇಶ, ಹರಿಯಾಣಾ, ಆಂಧ್ರಪ್ರದೇಶ ತಮಿಳುನಾಡು, ಕರ್ನಾಟಕ ಹಾಗೂ ರಾಜಸ್ಥಾನದ ಕೆಲಭಾಗಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಜೋಳವು ಪೊಟ್ಯಾಶಿಯಂ ಮತ್ತು ಫಾಸ್ಫರಸ್ ಗಳ ಆಗರವಾಗಿದ್ದು, ಕ್ಯಾಲ್ಶಿಯಂ ಪ್ರಮಾಣವೂ ಗಣನೀಯವಾಗಿದೆ. ಜೊತೆಗೆ ಕಬ್ಬಿಣ ಮತ್ತು ಸೋಡಿಯಂ, ಸತುವಿನ ಅಂಶಗಳೂ ಇವೆ.

ಸಜ್ಜೆ

ಕಿರುಧಾನ್ಯಗಳ ಪೈಕಿ ವ್ಯಾಪಕವಾಗಿ ಬೆಳೆಯಲಾಗುವ ಬೆಳೆ ಇದು. ಪ್ರಾಚೀನಕಾಲದಿಂದಲೂ ಇದನ್ನು ಆಫ್ರಿಕಾ ಹಾಗೂ ಭಾರತೀಯ ಉಪಖಂಡಗಳಲ್ಲಿ ಬೆಳೆಯಲಾಗುತ್ತಿತ್ತು. ಅತಿಕಡಿಮೆ ಮಳೆಬೀಳುವ ಪ್ರದೇಶಗಳಲ್ಲಿ ಮತ್ತು ಹೆಚ್ಚು ಫಲವತ್ತಲ್ಲದ ಮರುಭೂಮಿಯಲ್ಲಿ ಇದನ್ನು ಬೆಳೆಯಬಹುದಾದ್ದರಿಂದ ಗುಜರಾತ ಹರಿಯಾನಾ, ರಾಜಸ್ಥಾನ ರಾಜ್ಯಗಳಲ್ಲಿ ಹಾಗೂ ಕರ್ನಾಟಕ ರಾಜ್ಯ ಉತ್ತರ ಭಾಗ ಹಾಗೂ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಈ ಬೆಳೆಯನ್ನು ವ್ಯವಸಾಯ ಮಾಡುತ್ತಾರೆ. ೬ ರಿಂದ ೧೫ ಅಡಿಗಳ ಎತ್ತರ ಬೆಳೆಯುವ ಈ ಸಸ್ಯದಲ್ಲಿ ಕಂದು ಬಣ್ಣದ ಹೂ ಗೊಂಚಲುಗಳು ಆಗುತ್ತವೆ. ಫೈಟೋಕೆಮಿಕಲ್ಸ್, ಫೋಲೇಟ್, ಮ್ಯಾಗ್ನೇಶಿಯಂ, ತಾಮ್ರ, ಸತು, ಇ ಜೀವಸತ್ವ ಹಾಗೂ ಬಿ ಕಾಂಪ್ಲೆಕ್ಸ್ ಗಳು ಇದರಲ್ಲಿವೆ. ಇದರಲ್ಲಿ ಕ್ಯಾಲ್ಶಿಯಂ ಅಂಶ ಇದೆ. ಕರ್ನಾಟಕದ ಉತ್ತರ ಭಾಗದ ಜಿಲೆಗಳಲ್ಲಿ ಯಾವ ಬೆಳೆಗಳೂ ಬೆಳೆಯದ ಗರಿಷ್ಟ ಮಟ್ಟದ ಬರ ಬಂದಾಗ ಸಜ್ಜೆ ಬೆಳೆಯನ್ನು ಬೆಳೆದು ಜೀವನ ನಿರ್ವಹಣೆ ಮಾಡುತ್ತಿದ್ದುದು ದಾಖಲಾಗಿದೆ. ಅಂತಹ ಬರವನ್ನು ಸಜ್ಜೆ ಬರವೆಂದು ಸಹ ಕರೆಯುತ್ತಾರೆಂಬುದು ಸಜ್ಜೆಯ ಬರನಿರೋಧಕ ಗುಣದ ಬಗ್ಗೆ ತಿಳಿಸುತ್ತದೆ.

ಬರಗು

ಅನೇಕ ಪ್ರಕಾರದ ಹವಾಮಾನ ಹಾಗೂ ಮಣ್ಣಿನಲ್ಲಿ ಬೆಳೆಯಬಹುದಾದ ಬೆಳೆ. ಇದು ಅತಿಕಡಿಮೆ ಅವಧಿಯಲ್ಲಿ ಅಂದರೆ ನೆಟ್ಟು ಸುಮಾರು ೬೦-೭೫ ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದನ್ನು ಹಿಂಗಾರಿನ ಬೆಳೆಯಾಗಿ ಬೆಳೆಯುವುದು ಹೆಚ್ಚು. ೩-೪ ಅಡಿ ಎತ್ತರಕ್ಕೆ ಬೆಳೆಯುವ ಇದರ ತುದಿಯಲ್ಲಿರುವ ಗೊಂಚಲುಗಳು ಮುಂದಕ್ಕೆ ಬಾಗಿರುವುದರಿಂದ ಇದಕ್ಕೆ ಪೊರಕೆ ಜೋಳ ಎಂದು ಕರೆಯಲಾಗುತ್ತದೆ. ಇದರ ಬೀಜಗಳು ಕಾಲು ಇಂಚು ದಪ್ಪವಾಗಿದ್ದು ಸುತ್ತಲೂ ಮೃದುವಾದ ಹೊಳೆಯುವ ಸಿಪ್ಪೆ ಹೊಂದಿವೆ.

ರಾಗಿ

ಕಡಿಮೆ ಎತ್ತರದ ನಸುಗೆಂಪುಬಣ್ನದ ಕಾಳುಗಳಿರುವ ಈ ಗಿಡಗಳು ಹವಾಮಾನ ಹಾಗೂ ಬೇಸಾಯದ ಸಂಗತಿಗಳನ್ನು ಅನುಸರಿಸಿ ಮೂರರಿಂದ ಆರು ತಿಂಗಳ ಅವಧಿಯ ಬೆಳೆಯಾಗಿವೆ. ಸುಮಾರಾಗಿ ಎಲ್ಲಾ ತರಹದ ಮಳೆ ಪ್ರದೇಶಗಳಲ್ಲಿ ಹೊಂದಿಕೊಳ್ಳುವ ಈ ಬೆಳೆಯಲ್ಲಿ ಬೇರುಗಳು ಮೇಲ್ಮಟ್ಟದಲ್ಲಿಯೇ ಇರುತ್ತವೆ. ಒಣಪ್ರದೇಶಗಳಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಇದನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ರಾಗಿಯಲ್ಲಿ ಕ್ಯಾಲ್ಶಿಯಂ, ಪ್ರೊಟೀನುಗಳಲ್ಲದೇ ಎ ಜೀವಸತ್ವ, ಅಮೈನೋ ಆಸಿಡ್ ಗಳು ಗಂಧಕ ಅಂಶಗಳು ಇರುತ್ತವೆ. ಅಧಿಕ ನಾರಿನಂಶ ಇರುತ್ತದೆ.

ರಾಗಿಯ ಪ್ರಕಾರಗಳು
ಪಿಚ್ಚಕಡ್ದಿ ರಾಗಿ, ಬಿಳಿ ರಾಗಿ, ಕೋಣನ ಕೊಂಬಿನ ರಾಗಿ, ಕರಿಕಡ್ದಿ ರಾಗಿ, ಜೇನುಗೂಡು ರಾಗಿ, ಕರಿಮುಂಡುಗ,
ಹಸಿರುಕಡ್ಡಿ ರಾಗಿ.

ನವಣೆ

ಕಿರುಧಾನ್ಯಗಳು ಎಂದರೆ ಏನು? ಅವು ಯಾವುವು?
ನವಣೆ

ಗ್ಲುಟೇನ್ ಮುಕ್ತವಾಗಿರುವ ಈ ಧಾನ್ಯ ೧-೫ ಅಡಿ ಎತ್ತರಕ್ಕೆ ತೆಳ್ಳಗೆ ಬೆಳೆಯುತ್ತದೆ. ಈ ಧಾನ್ಯದ ಗೊಂಚಲು ಹಳದಿ, ಹಸಿರು ನರಿಬಾಲದಂತೆ ಕಾಣುತ್ತದೆ. ಬತ್ತದ ಅಕ್ಕಿಯಂತಿರುವ ಇದನ್ನು ಮೇಲಿನ ಸಿಪ್ಪೆ ತೆಗೆದು ಉಪಯೋಗಿಸಲಾಗುತ್ತದೆ. ಪ್ರಾಚೀನಕಾಲದಿಂದಲೂ ಇದನು ಬೇಸಾಯ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಅರೆ-ರುಕ್ಷ ಪ್ರದೇಶದಲ್ಲಿ ಅತಿಕಡಿಮೆ ಪ್ರಮಾಣದ ನೀರಿನ ಲಭ್ಯತೆ ಇರುವಲ್ಲಿ ಬೆಳೆಯಲಾಗುತ್ತದೆ. ಇದನ್ನು ೬೫-೭೦ ದಿನಗಳಲ್ಲಿ ಕಟಾವಿಗೆ ಬರುವ ಬೆಳೆಯಾಗಿ ಬೆಳೆಯುತ್ತಾರೆ. ಬೇರುಗಳು ಹೆಚ್ಚು ಆಳಕ್ಕೆ ಹೋಗುವುದಿಲ್ಲ.

ನವಣೆಯ ಪ್ರಕಾರಗಳು
ಕರಿನವಣೆ, ಕುಚ್ಚುನವಣೆ, ಕೆಂಪುನವಣೆ, ಜಡೆನವಣೆ, ಹುಲ್ಲುನವಣೆ, ಹಾಲುನವಣೆ

ಹಾರಕ

ಉಷ್ಣವಲಯ ಹಾಗೂ ಇದರ ಉಪವಲಯದ ತೇವಾಂಶವಿರುವ ಪ್ರದೇಶದಲ್ಲಿ ಈ ಬೆಳೆ ಕಾಣಬಹುದು. ಭಾರತದಲ್ಲಿ ಕಡಿಮೆಪ್ರಮಾಣದಲ್ಲಿ ಬೆಳೆಯಾಗಿದ್ದು ಗುಜರಾತ, ಕರ್ನಾಟಕ ಮತ್ತು ರಾಜಸ್ಥಾನ ರಾಜ್ಯಗಳಿಗೆ ಸೀಮಿತವಾಗಿದೆ. ಹರಕವು ನಸುಗೆಂಪು ಅಥವಾ ಕಂದುಬಣ್ಣದ್ದಾಗಿದೆ. ಈ ಧಾನ್ಯದ ಸಿಪ್ಪೆಯನ್ನು ತೆಗೆಯುವುದು ಸುಲಭವಲ್ಲ.

ಸಾಮೆ

ಜವುಳು ಪ್ರದೇಶ ಮತ್ತು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿಯೂ ಬೆಳೆಯಬಹುದಾದ ಈ ಧಾನ್ಯ ಬಹುಪ್ರಾಚೀನ ತೃಣಧಾನ್ಯಗಳಲ್ಲೊಂದಾಗಿದೆ. ಭಾರತದಾದ್ಯಂತ ಹಾಗೂ ಕರ್ನಾಟಕದಲ್ಲಿಯೂ ಇದನ್ನು ಸಾಂಪ್ರದಾಯಿಕವಾಗಿ ಕೃಷಿಮಾಡಲಾಗುತ್ತದೆ. ೩೦ರಿಂದ ೯೦ ಸೆಂಟಿಮೀಟರ್ ಎತ್ತರ ಬೆಳೆಯುವ ಗಿಡದ ತೆನೆಗಳು ೧೪ರಿಂದ ೪೦ ಸೆಂ.ಮೀ.ಗಳಷ್ಟು ಉದ್ದವಾಗಿರುತ್ತದೆ. ಇತರ ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳ ಜೊತೆ ಮಿಶ್ರಬೆಳೆಯಾಗಿ ಇದನ್ನು ಬೆಳೆಯುವುದು ಹೆಚ್ಚು. ಈ ಧಾನ್ಯದ ಗಾತ್ರ ಇತರ ಸಿರಿಧಾನ್ಯಗಳಿಗಿಂತ ಕಿರಿದು. ಅಕ್ಕಿಯಂತೆಯೇ ಅನ್ನ ಮತ್ತು ಇತರ ತಿನಿಸುಗಳನ್ನು ಮಾಡಿ ಬಳಸಬಹುದಾಗಿದೆ.

ಅಕ್ಕಡಿ

ಕಿರುಧಾನ್ಯಗಳು ಎಂದರೆ ಏನು? ಅವು ಯಾವುವು?
ಅಕ್ಕಡಿ

ಅಕ್ಕಡಿ ಕಾಳುಗಳನ್ನು ರಾಗಿಯ ಜೊತೆ ಮಿಶ್ರಬೆಳೆಯಾಗಿ ಬೆಳೆಯಲಾಗುತ್ತದೆ. ಸಾಸಿವೆ, ಜೋಳ, ಕಡಲೆ, ಹುರುಳಿ ಅಲಸಂದೆ, ನವಣೆ, ಸಜ್ಜೆಗಳ ಜೊತೆ ಮಿಶ್ರಬೆಳೆಯಾಗಿ ಬೆಳೆಯುವುದರಿಂದ ಸಾರಜನಕದ ಕೊರತೆಯಾಗದು. ಸಣ್ಣಹಿಡುವಳಿಗಾಗರಿಗೆ ಭೂಮಿಯ ಉತ್ಪಾದಕತೆಯನ್ನು, ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಾಯಕಾರಿ.

ಕೊರಲೆ

ಕರ್ನಾಟಕ ರಾಜ್ಯದ ತುಮಕೂರು (ಮಧುಗಿರಿ, ಕೊರಟಗೆರೆ ಭಾಗದಲ್ಲಿ), ಚಿತ್ರದುರ್ಗ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲಿ ಕಂಡುಬರುವ ವಿಶಿಷ್ಟ ಪ್ರಾದೇಶಿಕ ಬೆಳೆ. ಎರಡೂವರೆ ತಿಂಗಳಿಗೆ ಕೊಯ್ಲಿಗೆ ಬರುವ, ಬರ ನಿರೋಧಕ ಗುಣ ಹೊಂದಿದ, ಬರಡು ಮಣ್ಣಿನಲ್ಲೂ ಬೆಳೆಯುವ ಸಾಮರ್ಥ್ಯ ಕೊರಲೆಗಿದೆ. ಅತಿಹೆಚ್ಚಿನ ನಾರಿನಂಶ ಹೊಂದಿದೆ. ಇದರ ವೈಜ್ಞಾನಿಕ ಹೆಸರು ಪ್ಯಾನಿಕಮ್ ರಾಮೋಸಮ್. ಕಾಳು ಹಳದಿ ಮಿಶ್ರಿತ ಬೂದು ಬಣ್ಣಕ್ಕಿರುತ್ತದೆ. ಗರಿಗಳು ಜೋಳದ ಗರಿಗಳನ್ನು ಹೋಲುತ್ತವೆ, ಆದರೆ ಗಾತ್ರ ಮತ್ತು ಉದ್ದ ಕಡಿಮೆ. ಕೊರಲೆ ಹುಲ್ಲು ದನಕರುಗಳಿಗೆ ಉತ್ತಮ ಆಹಾರ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಿದ್ಧವೇಷ

ಜನಪದ ಕಲೆಗಳಲ್ಲಿ ಒಂದು ಸಿದ್ಧವೇಷ

ಟಾಟಾ ಗ್ರೂಪ್

ಟಾಟಾ ಗ್ರೂಪ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ