in ,

ಯಕ್ಷಗಾನ ಕರಾವಳಿ ಕಲೆ ಈಗ ಎಲ್ಲಾ ಕಡೆ ಇದೆ

ಯಕ್ಷಗಾನ
ಯಕ್ಷಗಾನ

ಯಕ್ಷಗಾನ – ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.ಯಕ್ಷಗಾನದ ಪ್ರಾಚೀನತೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರಕುವುದಿಲ್ಲವಾದರೂ ಭರತಮುನಿಯ ನಾಟ್ಯಶಾಸ್ತ್ರದಲ್ಲಿ ಅಲ್ಲಲ್ಲಿ ತೋರಿ ಬರುವ ಕೆಲವು ಆಧಾರಗಳಿಂದ ಈ ಕಲೆ ಬಹಳ ಹಿಂದಿನಿಂದಲೂ ಇತ್ತೆಂಬುದು ಸ್ಪಷ್ಟವಾಗುತ್ತದೆ. ಕನ್ನಡದ ಪ್ರಾಚೀನ ಕಾವ್ಯಗಳಲ್ಲಿ ಯಕ್ಷಗಾನ ಎಂಬ ಹೆಸರಿನ ಉಲ್ಲೇಖ ಕಂಡುಬರುತ್ತದೆ. ಕರ್ನಾಟಕದಲ್ಲು ಸುಮಾರು 12ನೆಯ ಶತಮಾನದಲ್ಲಿ ಒಂದು ಗಾನ ಸಂಪ್ರದಾಯ ಯಕ್ಷಗಾನ ಎಂಬ ಹೆಸರಿನಿಂದ ಬಳಕೆಯಲ್ಲಿತ್ತು. ಮುಂದೆ ಅದು ನಾಟಕ ರೂಪದಲ್ಲಿ ಪರಿವರ್ತನೆಗೊಂಡಾಗ ಬಯಲಾಟ, ದಶಾವತಾರ ಆಟ, ದೊಡ್ಡಾಟ, ಪಾರಿಜಾತ ಎಂಬ ಹೆಸರುಗಳಿಂದ 15ನೆಯ ಶತಮಾನದ ಹೊತ್ತಿಗೆ ರೂಢಿಗೆ ಬಂದಂತೆ ಕಾಣುತ್ತದೆ. ಈ ಬಯಲಾಟದ ಇನ್ನೊಂದು ರೂಪ ತಾಳಮದ್ದಲೆ ಅಥವಾ ಯಕ್ಷಗಾನ ಕೂಟ. ಇದು 16ನೆಯ ಶತಮಾನದಲ್ಲಿ ರೂಢಿಯಾಗಿದ್ದಂತೆ ತಿಳಿದುಬರುತ್ತದೆ.

ಯಕ್ಷಗಾನ ಕರಾವಳಿ ಕಲೆ ಈಗ ಎಲ್ಲಾ ಕಡೆ ಇದೆ
ಯಕ್ಷಗಾನ

ಯಕ್ಷಗಾನ ನಾಲ್ಕು ಕಲಾಮಾಧ್ಯಮಗಳಿಂದ ಮೈಗೂಡಿನಿಂತ ಒಂದು ಸಮ್ಮಿಶ್ರ ಕಲೆ. ಇದರಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರ _ ಈ ನಾಲ್ಕು ಕಲೆಗಳ ಔಚಿತ್ಯಪೂರ್ಣವಾದ ಸಾಮರಸ್ಯವಿದೆ. ಪ್ರದರ್ಶನಕ್ಕೆ ಸಂಬಂಧಿಸಿದಂತೆ ಇದರಲ್ಲಿ ಎರಡು ಭಾಗಗಳಿವೆ. ಮೊದಲನೆಯದಕ್ಕೆ ಪೂರ್ವರಂಗ ಅಥವಾ ಸಭಾಲಕ್ಷಣ ಎನ್ನುವರು.

ಯಕ್ಷಗಾನದಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಕಾಣಬಹುದು.

ಯಕ್ಷಗಾನ ಕರಾವಳಿ ಕಲೆ ಈಗ ಎಲ್ಲಾ ಕಡೆ ಇದೆ
ಯಕ್ಷಗಾನ

ಪ್ರಸಂಗ: ಯಕ್ಷಗಾನದಲ್ಲಿ ಯಾವುದಾದರೊಂದು ಕಥಾನಕವನ್ನು ಆಯ್ದುಕೊಂಡು ಅದನ್ನು ಜನರಿಗೆ ಹಾಡು, ಅಭಿನಯ, ನೃತ್ಯಗಳೊಂದಿಗೆ ತೋರಿಸಲಾಗುತ್ತದೆ. ಹೀಗೆ ಆಯ್ದುಕೊಂಡ ಕಥಾನಕವನ್ನು ಪ್ರಸಂಗ ಎಂದು ಕರೆಯುತ್ತಾರೆ. ಉದಾಹರಣೆಗೆ ಮಹಾಭಾರತದಲ್ಲಿ ಭೀಮ ಮತ್ತು ದುರ್ಯೋಧನರ ನಡುವೆ ನಡೆಯುವ ಗದಾಯುದ್ಧದ ಕಥೆಯನ್ನು ಆಯ್ದುಕೊಂಡರೆ ಆಗ ಅದನ್ನು “ಗದಾಯುದ್ದ ಪ್ರಸಂಗ” ಎಂಬುದಾಗಿ ಕರೆಯುತ್ತಾರೆ. ಹೆಚ್ಚಾಗಿ ಪೌರಾಣಿಕ ಪ್ರಸಂಗಗಳನ್ನೇ ಆಯ್ದು ಕೊಳ್ಳುವುದು ಯಕ್ಷಗಾನದ ವಾಡಿಕೆಯಾದರೂ ಪ್ರಸಂಗವು ಪೌರಾಣಿಕವೇ ಆಗಬೇಕು ಎಂಬ ನಿಯಮವೇನೂ ಇಲ್ಲ. ಇದು ಐತಿಹಾಸಿಕವೂ, ಸಾಮಾಜಿಕವೂ ಆಗಿರಬಹುದು.
ಪಾತ್ರಧಾರಿಗಳು : ಪ್ರಸಂಗದಲ್ಲಿ ಬರುವ ಕಥೆಯನ್ನು ಅಭಿನಯಿಸುವವರೇ ಪಾತ್ರಧಾರಿಗಳು. ಸ್ತ್ರೀ ಪಾತ್ರ, ಖಳ ನಟನ ಪಾತ್ರ, ಹಾಸ್ಯ ಕಲಾವಿದನ ಪಾತ್ರ, ನಾಯಕನ ಪತ್ರ ಹೀಗೆ ಪ್ರಸಂಗಕ್ಕೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ನೃತ್ಯ, ಅಭಿನಯ ಹಾಗೂ ಮಾತುಗಾರಿಕೆಗಳೊಂದಿಗೆ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಪಾತ್ರಧಾರಿಗಳ ಮೇಲಿರುತ್ತದೆ.

ವೇಷಭೂಷಣ : ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟಗಳಲ್ಲಿ ವೇಷಭೂಷಣಗಳು ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ಉದಾಹರಣೆಗೆ ಪ್ರಮುಖ ಖಳನಟ ಮತ್ತು ರಾಜನ ಪಾತ್ರಕ್ಕೆ ಬಳಸುವ ಕಿರೀಟವು ಸಾಮಾನ್ಯ ಪಾತ್ರಧಾರಿಗೆ ಬಳಸುವ ಕಿರೀಟಗಳಿಗಿಂತ ವಿಭಿನ್ನ ವಿನ್ಯಾಸ ದ್ದಾಗಿರುತ್ತದೆ. ಹಾಗೆಯೇ ಸ್ತ್ರೀ ಪಾತ್ರಗಳಿಗೆ ಬಳಸುವ ಕಿರೀಟವು ತುಂಬಾ ಚಿಕ್ಕದಾಗಿರುತ್ತದೆ. ಅಲ್ಲದೇ ತೆಂಕತಿಟ್ಟು ಶೈಲಿಯ ಯಕ್ಷಗಾನದಲ್ಲಿ ಉಪಯೋಗಿಸುವ ವೇಷಭೂಷಣ ಗಳು ಬಡಗತಿಟ್ಟಿನಲ್ಲಿ ಉಪಯೋಗಿಸುವ ವೇಷ ಭೂಷಣಗಳಿಗಿಂತ ಭಿನ್ನವಾಗಿರುತ್ತವೆ.

ಭಾಗವತಿಕೆ : ಯಕ್ಷಗಾನದ ಜೀವಾಳವೇ ಭಾಗವತಿಕೆ ಅಥವಾ ಹಾಡುಗಾರಿಕೆ. ಅವರು ಈ ರಂಗ ಪ್ರಕಾರದ ನಿರ್ದೇಶಕರಿದ್ದಂತೆ. ಇಲ್ಲಿ ಪಾತ್ರಧಾರಿಗಳು ಅಭಿನಯಿಸುವ ಕಥಾನಕವನ್ನು ಕಾವ್ಯ ರೂಪದಲ್ಲಿ ಹಾಡಲಾಗುತ್ತದೆ. ಹೀಗೆ ಹಾಡುವವರನ್ನು ಭಾಗವತರು ಎಂದು ಕರೆಯುತ್ತಾರೆ. ಭಾಗವತರು ಹಾಡುವ ಪದಗಳಿಗೆ ತಕ್ಕಂತೆ ಪಾತ್ರಧಾರಿಗಳು ನೃತ್ಯದ ಮೂಲಕ ಅಭಿನಯಿಸುತ್ತಾರೆ. ನೃತ್ಯದೊಂದಿಗೆ ಹಾಡಿನಲ್ಲಿ ಬರುವ ಕಥಾನಕದ ಸಂದರ್ಭಕ್ಕನುಗುಣವಾಗಿ ಭಾವಾಭಿನಯವೂ ಸಹ ಅತ್ಯಂತ ಅಗತ್ಯವಾದುದು.

ಮಾತುಗಾರಿಕೆ: ಹಾಡುವುದನ್ನು ಪೂರ್ಣಗೊಳಿಸಿದ ಕೂಡಲೇ ಆ ಹಾಡಿನ ಸಾರಾಂಶವನ್ನು ಪಾತ್ರಧಾರಿಗಳು ಚರ್ಚಿಸುತ್ತಾರೆ. ಹಾಡಿನಲ್ಲಿ ಕಥಾನಕದ ಯಾವ ಭಾಗವನ್ನು ಪ್ರಸ್ತುತ ಪಡಿಸಲಾಗುತ್ತದೋ ಅದೇ ಭಾಗದ ಅರ್ಥವನ್ನು ಜನ ಸಾಮಾನ್ಯರೆಲ್ಲರಿಗೂ ಸ್ಪಷ್ಟವಾಗುವಂತೆ ಆಡುಮಾತಿನಲ್ಲಿ ಪಾತ್ರಧಾರಿಗಳು ಸಂಭಾಷಿಸುತ್ತಾರೆ.

“ಸ೦ಗೀತ ರತ್ನಾಕರ”ದಲ್ಲಿ (೧೨೧೦ ಕ್ರಿಶ) “ಜಕ್ಕ” ಎಂದು ಆಗಿದ್ದು ಮುಂದೆ “ಯಕ್ಕಲಗಾನ” ಎಂದು ಕರೆಯಲ್ಪಟ್ಟಿತ್ತು ಎ೦ಬುದು ಒಂದು ಅಭಿಪ್ರಾಯ. ಗ೦ಧರ್ವ ಗ್ರಾಮ ಎ೦ಬ ಈಗ ನಶಿಸಿ ಹೋಗಿರುವ ಗಾನ ಪದ್ದತಿಯಿ೦ದ ಗಾನ ಮತ್ತು ಸ್ವತ೦ತ್ರ ಜಾನಪದ ಶೈಲಿಗಳಿ೦ದ ನೃತ್ಯ ರೂಪು ಗೊ೦ಡಿತೆ೦ದು ಶಿವರಾಮ ಕಾರ೦ತರ “ಯಕ್ಷಗಾನ ಬಯಲಾಟ” ಎ೦ಬ ಸ೦ಶೋಧನಾ ಪ್ರಬಂದಗಳ ಸಂಕಲನದಲ್ಲಿ ಹೇಳಿದೆ. ೧೫೦೦ ರಷ್ಟರಲ್ಲಿ ವ್ಯವಸ್ತಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎ೦ಬುದು ಬಹಳ ವಿದ್ವಾ೦ಸರು ಒಪ್ಪುವ ವಿಚಾರ.

ಯಕ್ಷಗಾನದಲ್ಲಿ ಅನೇಕ ರೀತಿಯ ಪ್ರಭೇದಗಳಿದ್ದು ಅವುಗಳಲ್ಲಿ ಯಕ್ಷಗಾನ ಬಯಲಾಟವು ಅತ್ಯಂತ ಜನಪ್ರಿಯವಾದುದು. ಬಯಲಾಟವೆಂದರೆ ವೇಷಭೂಷಣಗಳೊಂದಿಗೆ ರಂಗಭೂಮಿಯಲ್ಲಿ ಆಡುವ ಯಕ್ಷಗಾನ ಪ್ರಭೇದ. ಕುಣಿತ ಎಂಬ ಹೆಸರು ಇದಕ್ಕಿದೆ. ಮೊದ ಮೊದಲು ಹಬ್ಬ ಹರಿದಿನಗಳಂದು ಊರಿನ
ಬಯಲಿನಲ್ಲಿ ರಾತ್ರಿಯಿಡೀ ಈ ಬಯಲಾಟ ಹೆಚ್ಚಾಗಿ ನಡೆಯುತ್ತಿದ್ದ ಕಾರಣ “ಬಯಲಾಟ” ಎಂಬ ಹೆಸರು ರೂಢಿಯಲ್ಲಿದೆ. ಜನರು ಇದನ್ನು ಸರಳವಾಗಿ “ಆಟ” ಎಂದೂ ಕರೆಯುತ್ತಾರೆ. ಆದರೆ ಈಗೀಗ ರಾತ್ರಿಯಿಡೀ ನಡೆಯುವ ಬಯಲಾಟದೊಂದಿಗೆ ೨-೩ ಘಂಟೆಗಳ ಕಾಲ ನಡೆಯುವ ಯಕ್ಷಗಾನವೂ ಬಳಕೆಯಲ್ಲಿದೆ.

ಯಕ್ಷಗಾನದಲ್ಲಿ ಮೂಡಲಪಾಯ ಮತ್ತು ಪಡುವಲಪಾಯ ಎಂಬ ಎರಡು ಮ್ರಮುಖ ಪ್ರಭೇದಗಳಿವೆ. ಪಶ್ಚಿಮ ಘಟ್ಟದ ಪೂರ್ವಕ್ಕೆ ಪ್ರಚಲಿತವಿರುವದು ಮೂಡಲಪಾಯ.
ಉತ್ತರ ಕರ್ನಾಟಕದಲ್ಲಿ ಬಹು ಜನಪ್ರಿಯವಾಗಿರುವ ಶ್ರೀಕೃಷ್ಣ ಪಾರಿಜಾತ ಮೂಡಲ ಪಾಯದಲ್ಲಿ ಗಮನಾರ್ಹ. ಮಲೆನಾಡು ಮತ್ತು ಕರಾವಳಿಯಲ್ಲಿ ಪ್ರಚಲಿತವಿರುವುದು ಪಡುವಲಪಾಯ. ಪಡುವಲಪಾಯದಲ್ಲಿ ೩ ವಿಭಾಗಗಳಿವೆ.ಅವು ತೆಂಕುತಿಟ್ಟು,ಬಡಗುತಿಟ್ಟು ಮತ್ತು ಉತ್ತರದ ತಿಟ್ಟು (ಬಡಾಬಡಗು).
ಉತ್ತರ ಕನ್ನಡ, ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತರದ ತಿಟ್ಟು ಶೈಲಿಯ ಬಯಲಾಟಗಳು ಕಂಡು ಬಂದರೆ ಉಡುಪಿಯಲ್ಲಿ ಬಡಗುತಿಟ್ಟು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ತೆಂಕುತಿಟ್ಟು ಶೈಲಿಯ ಯಕ್ಷಗಾನವನ್ನು ಕಾಣಬಹುದು. ವೇಷಭೂಷಣಗಳ ವಿನ್ಯಾಸ, ನೃತ್ಯದ ಶೈಲಿ, ಭಾಗವತಿಕೆ ಮತ್ತು ಹಿಮ್ಮೇಳಗಳಲ್ಲಿ ಕಂಡುಬರುವ ಕೆಲವು ವ್ಯತ್ಯಾಸಗಳ ಆಧಾರದ ಮೇಲೆ ಈ ವಿಂಗಡಣೆಯನ್ನು ಮಾಡಲಾಗಿದೆಯೇ ಹೊರತು ಯಕ್ಷಗಾನದ ಮೂಲ ತತ್ವ, ಆಶಯಗಳು ೩ ಶೈಲಿಗಳಲ್ಲಿಯೂ ಒಂದೇ ಆಗಿರುತ್ತದೆ.

ಯಕ್ಷಗಾನದ ಇನ್ನೊಂದು ಪ್ರಮುಖ ವಿಭಾಗವೆಂದರೆ “ತಾಳಮದ್ದಳೆ”. ಬಯಲಾಟಗಳಿಗಿಂತ ಇವು ವಿಭಿನ್ನವಾದವುಗಳು. ಇಲ್ಲಿ ವೇಷಭೂಷಣ, ನೃತ್ಯ ಮತ್ತು ಭಾವಾಭಿನಯಗಳು ಕಂಡು ಬರುವುದಿಲ್ಲ. ಭಾಗವತಿಕೆ, ಹಿಮ್ಮೇಳ ಹಾಗೂ ಮಾತುಗಾರಿಕೆಗಳು ಮಾತ್ರ ಇಲ್ಲಿರುತ್ತವೆ. ಬಯಲಾಟದಂತೆ ಇಲ್ಲಿಯೂ ಒಂದು ಪ್ರಸಂಗವನ್ನು ಆಯ್ದುಕೊಳ್ಳಲಾಗುತ್ತದೆ.
ಭಾಗವತರು ಹಾಡುಗಾರಿಕೆಯ ಮೂಲಕ ಕಥಾನಕವನ್ನು ಹೇಳುತ್ತಾ ಹೋಗುತ್ತಾರೆ. ಇಲ್ಲಿ ಪಾತ್ರಧಾರಿಗಳ ಬದಲು ಅರ್ಥಧಾರಿಗಳಿರುತ್ತಾರೆ. ಅರ್ಥಧಾರಿಗಳು ಹಾಡುಗಾರಿಕೆಯಲ್ಲಿ ಹೇಳಲ್ಪಟ್ಟ ಕಥೆಯ ಭಾಗವನ್ನು ಮಾತುಗಾರಿಕೆಯ ಮೂಲಕ ಚರ್ಚಿಸುತ್ತಾರೆ. ಬಯಲಾಟಕ್ಕೂ ತಾಳ ಮದ್ದಲೆಗೂ ಪ್ರಮುಖ ವ್ಯತ್ಯಾಸವಿರುವುದೇ ಈ ಮಾತುಗಾರಿಕೆಯಲ್ಲಿ.
ಬಯಲಾಟಗಳಲ್ಲಿ ನೃತ್ಯ ಮತ್ತು ಅಭಿನಯಗಳೇ ಪ್ರಧಾನ. ಮಾತುಗಾರಿಕೆ ಇದ್ದರೂ ಅದು ಕೇವಲ ಹಾಡುಗಾರಿಕೆಯಲ್ಲಿ ಹೇಳಲ್ಪಟ್ಟ ಕಥಾನಕದ ಸಾರಾಂಶವಷ್ಟೇ ಆಗಿರುತ್ತದೆ ಯೇ ವಿನಃ ವಾದ ಮಂಡನೆಗೆ ಹೆಚ್ಚು ಅವಕಾಶವಿರುವುದಿಲ್ಲ. ಅದೂ ಅಲ್ಲದೇ ಬಯಲಾಟದಲ್ಲಿ ಬರುವ ಸಂಭಾಷಣೆ ಗಳನ್ನು ಸಾಮಾನ್ಯವಾಗಿ ಮೊದಲೇ ಸಿಧ್ಧಪಡಿಸಿರುತ್ತಾರೆ. ಹಾಗಾಗಿ ಈ ಮಾತುಗಾರಿಕೆಯು ಭಾಗವತಿಕೆಯಲ್ಲಿ ಹೇಳಲ್ಪಟ್ಟ ಕಥೆಯ ಚೌಕಟ್ಟನ್ನು ದಾಟಿ ಆಚೆ ಹೋಗುವುದಿಲ್ಲ. ಆದರೆ ತಾಳ ಮದ್ದಲೆಗಳು ಹಾಗಲ್ಲ. ತಾಳ ಮದ್ದಲೆಯಲ್ಲಿ ವಾದವೇ ಪ್ರಮುಖವಾದದ್ದು.

ಭಾಗವತರು ಹೇಳುವ ಒಂದು ಹಾಡಿಗೆ ಇಂತಿಷ್ಟೇ ಸಂಭಾಷಣೆಗಳನ್ನು ಹೇಳಬೇಕು ಎಂದು ಪೂರ್ವ ನಿರ್ಧಾರವಾಗಿರುವುದಿಲ್ಲ. ಭಾಗವತರು ಹಾಡುಗಾರಿಕೆಯ ಮೂಲಕ ವಾದಕ್ಕೆ ಒಂದು ಪೀಠಿಕೆ ಹಾಕಿ ಕೊಡುತ್ತಾರೆ. ಆಮೇಲೆ ಆ ಕಥಾನಕದ ಭಾಗದ ಮೇಲೆ ಅರ್ಥಧಾರಿಗಳಿಂದ ವಾದ ಆರಂಭವಾಗು ತ್ತದೆ. ಈ ವಾದ ಸಂಧರ್ಭಕ್ಕನುಗುಣವಾಗಿ ಪ್ರಸಂಗದಿಂದ ಪ್ರಸಂಗಕ್ಕೆ ಬದಲಾಗುತ್ತಲೂ ಹೋಗಬಹುದು. ವಾದವೇ ತಾಳ ಮದ್ದಲೆಗಳ ಜೀವಾಳವಾಗಿರುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

65525

15 Comments

ಶ್ರೀಕೃಷ್ಣದೇವರಾಯ

ವಿಜಯನಗರ ಶ್ರೀಕೃಷ್ಣದೇವರಾಯ

ಮೈಸೂರ್ ಸಂಸ್ಥಾನ

ಮೈಸೂರು ಸಂಸ್ಥಾನ