ಮುತ್ತತ್ತಿ ಕರ್ನಾಟಕ ರಾಜ್ಯ, ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿಯಲ್ಲಿರುವ ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ದ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ್ಯದೊಂದಿಗೆ ಕಂಗೊಳಿಸುವ ಚಿಕ್ಕ ಗ್ರಾಮವೇ ಮುತ್ತತ್ತಿ . ಕಾವೇರಿ ನದಿ ನೀರಿನಲ್ಲಿ ಭಾರಿ ಜನಪ್ರಿಯ ಸಾಹಸಕ್ರೀಡೆ ಕೋರಲ್ ರೈಡ್ ನ್ನು ಇಲ್ಲಿ ಪ್ರವಾಸಿಗರು ಆನಂದಿಸಬಹುದು. ಕಾವೇರಿ ವನ್ಯಜೀವಿ ಧಾಮ ಮತ್ತು ದಟ್ಟ ಅರಣ್ಯಗಳಿಂದ ಸುತ್ತುವರಿದಿರುವ ಮುತ್ತತ್ತಿ ಗ್ರಾಮದ ಪ್ರಕೃತಿ ಸೌಂದರ್ಯ ಮನ ಸೆಳೆಯುತ್ತದೆ. ರಮಣೀಯ ಕಣಿವೆ, ರಭಸದಿಂದ ಹರಿಯುವ ನೀರಿನ ಸೆಳವುಳ್ಳ ಸಣ್ಣ ಹಳ್ಳಗಳು ಇಲ್ಲಿವೆ. ಹಲವಾರು ಬಗೆಯ ಪ್ರಾಣಿ ಪಕ್ಷಿಗಳು ಈ ಅರಣ್ಯದಲ್ಲಿ ನೆಲೆಸಿವೆ.
ಮಂಡ್ಯ ಜಿಲ್ಲೆಯ ಕಾವೇರಿ ದಡದಲ್ಲಿರುವ ಮುತ್ತತ್ತಿ ಗ್ರಾಮವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಬೆಂಗಳೂರಿನಿಂದ ರಸ್ತೆ ಮೂಲಕ 90 ನಿಮಿಷಗಳಲ್ಲಿ ಮುತ್ತತ್ತಿಯನ್ನು ತಲುಪಬಹುದು. ಮುತ್ತತ್ತಿ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿ ಬರುವ ಒಂದು ಪ್ರದೇಶವಾಗಿದೆ ಎಂಬ ಪ್ರತೀತಿ ಇದೆ. ಇಲ್ಲಿ ಪ್ರಸಿದ್ಧವಾದ ಹನುಮಾನ ಮಂದಿರವಿದೆ ಅದಕ್ಕೆ ಸ್ಥಳೀಯರು ಹನುಮಂತರಾಯ ದೇವಸ್ಥಾನವೆಂದು ಕರೆಯುತ್ತಾರೆ.
ಶ್ರೀ ಆಂಜನೇಯಸ್ವಾಮಿ ಮೂರ್ತಿಯು ಮುತ್ತತ್ತಿಯಲ್ಲಿ ಭೂಮಿಯಿಂದ ಮೂಡಿದ್ದು ಸದರಿ ಜಾಗದಲ್ಲಿ ಮೂಡಿರುವ ಮೂರ್ತಿಯನ್ನು ಭೂಮಿಯಲ್ಲೇ ಹೂತು ಹನುಮಂತನ ವಿಗ್ರಹವನ್ನು ಕೆತ್ತಿಸಿ ಪ್ರತಿಷ್ಠಾಪನೆ ಮಾಡಿ ಆ ಜಾಗದಲ್ಲಿ ದೇವಸ್ಥಾನವನ್ನು 1986-87ನೇ ಸಾಲಿನಲ್ಲಿ ಸಾರ್ವಜನಿಕ/ ಭಕ್ತಾಧಿಗಳ ವಂತಿಕೆಯಿಂದ ಹಣ ಕ್ರೂಢೀಕರಿಸಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸದರಿ ಜಾಗದಲ್ಲಿ ನಿರ್ಮಿಸಿರುವ ಹನುಮಂತನು ಸಾರ್ವಜನಿಕ/ಭಕ್ತಾಧಿಗಳಿಗೆ ಅಭಯ ಹಸ್ತವನ್ನು ನೀಡುತ್ತಾ ನೆಲೆಸಿದ್ದರಿಂದ ಆ ಜಾಗವನ್ನು ಮುತ್ತತ್ತಿಯೆಂದು ಕರೆಯುತ್ತಾರೆ.
ರಾಮಾಯಣದ ಕಾಲದಲ್ಲಿ ಶ್ರೀರಾಮಚಂದ್ರಪ್ರಭು ಲಂಕಾಧಿಪತಿ ರಾವಣನನ್ನು ಕೊಂದು ವಿಭೀಷಣನಿಗೆ ಪಟ್ಟಕಟ್ಟಿ, ತಂದೆ ಶ್ರೀ ರಾಮಚಂದ್ರಪ್ರಭು, ತಾಯಿ ಸೀತಾಮಾತೆ, ಲಕ್ಷ್ಮಣ ಮತ್ತು ಆಂಜನೇಯರ ಸಮೇತ ಲಂಕೆಯಿಂದ ಅಯೋಧ್ಯೆಗೆ ಹಿಂದಿರುಗಿ ಹೋಗುವಾಗ ಬಸವನ ಬೆಟ್ಟ ಅರಣ್ಯ ಪ್ರದೇಶದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಒಂದು ದಿನ ಇಲ್ಲೇ ತಂಗಿ ಹೋಗಲು ನಿರ್ಧರಿಸುತ್ತಾರೆ ಮರುದಿನ ಬೆಳಗ್ಗೆ ಕಾವೇರಿ ನದಿ ತೀರದಲ್ಲಿರುವ ತಿರುಗಣೆ ಮಡುವಿನಲ್ಲಿ ಕುಳಿತು ತಾಯಿ ಸೀತಾಮಾತೆದೇವಿ ಸ್ನಾನ ಮಾಡುತ್ತಿದ್ದಾಗ ಸೀತಾಮಾತೆಯ ಮುತ್ತಿನ ಮೂಗುತಿಯು ಕಾವೇರಿ ನದಿಯಲ್ಲಿ ಬಿದ್ದು ಹೋಗಿರುವುದಾಗಿ ತನ್ನ ಪತಿಯಾದ ಶ್ರೀ ರಾಮರಿಗೆ ಹೇಳಿದಾಗ ಅಲ್ಲೇ ಇದ್ದ ಹನುಮಂತನು ನೀರಿನಲ್ಲಿದ್ದ ಮೂಗುತಿಯನ್ನು ಹುಡುಕಲು ಶ್ರೀ ರಾಮಚಂದ್ರ ಪ್ರಭು ಹೇಳುತ್ತಾರೆ ಅವರ ಆಜ್ಞೆಯಂತೆ ಆಂಜನೇಯಸ್ವಾಮಿ ಅವರು ತನ್ನ ಬಾಲವನ್ನು ನೀರಿನಲ್ಲಿ ತಿರುಗಿಸಿ ನೀರಿನಲ್ಲಿ ಕಳೆದುಹೋಗಿದ್ದ ಮುತ್ತಿನ ಮೂಗುತಿ ಕಾಣಿಸಿದಾಗ ಹನುಮಂತನು ಮೂಗುತಿಯನ್ನು ಸೀತಾಮಾತೆಗೆ ನೀಡಿದನು. ಹನುಮಂತ ಬಾಲವನ್ನು ನೀರಿನಲ್ಲಿ ತಿರುಗಿಸಿದ ರಭಸಕ್ಕೆ ಆ ಜಾಗದಲ್ಲಿ ಇಂದಿಗೂ ಕಾವೇರಿ ನದಿಯ ನೀರು ಒಂದು ಸುತ್ತು ತಿರುಗಿ ಹೋಗುತ್ತದೆ ಆದಕಾರಣ ಆ ಸ್ಥಳಕ್ಕೆ ತಿರುಗಣೆಮಡು ಎಂದು ಕರೆದು ಪ್ರಸಿದ್ದಿಯಾಗಿದೆ. ಹನುಮಂತನು ಸೀತಾಮಾತೆಗೆ ಮುತ್ತಿನ ಮೂಗುತಿಯನ್ನು ತನ್ನ ಬಾಲದಲ್ಲಿ ಕೊಟ್ಟಿರುವುದಕ್ಕೆ ತಾಯಿ ಸೀತಾಮಾತೆದೇವಿ ಆಂಜನೇಯಸ್ವಾಮಿ ಅವರನ್ನು ಮುತ್ತೆತ್ತರಾಯನೆಂದು ಹೆಸರು ಕರೆದರು. ಅಂದರೆ ಸೀತಾಮಾತೆಯ ಮುತ್ತಿನ ಮೂಗುತಿಯನ್ನು ಬಾಲದಲ್ಲಿ ಎತ್ತಿಕೊಟ್ಟ ಕಾರಣ ಮುತ್ತೆತ್ತರಾಯ ಎಂಬ ಹೊಸ ನಾಮಕರಣವನ್ನು ತಾಯಿ ಸೀತಾದೇವಿ ಮಾಡಿದರು, ಹಾಗೂ ಆಂಜನೇಯಸ್ವಾಮಿಯನ್ನು ಈ ಕ್ಷೇತ್ರದಲ್ಲಿ ಮುತ್ತೆತ್ತರಾಯಸ್ವಾಮಿಯಾಗಿ ನೆಲೆಸು ಹಾಗೂ ಈ ಕ್ಷೇತ್ರಕ್ಕೆ ಮುತ್ತತ್ತಿ ಎಂದು ಹೆಸರು ಈಗ ಆ ಸ್ಥಳವನ್ನು ಮುತ್ತತ್ತಿಯೆಂದು ಕರೆಯುತ್ತಾರೆ.
ಹುಲಿ, ಚಿರತೆ, ಕರಡಿ, ಕಾಡೆಮ್ಮೆ, ಕಾಡುಕೋಣ, ಕಾಡುಹಂಡಿ, ವಿವಿಧ ತಳಿಯ ಅಳಿಲು, ಜಿಂಕೆ, ಸಾಂಬಾರ್ ಮುಂತಾದ ಪ್ರಾಣಿಗಳು ಈ ಕಾಡಿನಲ್ಲಿ ನೆಲೆಸಿವೆ.ಮತ್ತೊಂದು ಪ್ರವಾಸಿ ತಾಣವಾಗಿರುವ ಭೀಮೇಶ್ವರಿ ಬಳಿ ಇರುವ ಮುತ್ತತ್ತಿ ಸುಂದರ ಪ್ರಾಕೃತಿಕ ಸೌಂದರ್ಯದೊಂದಿಗೆ ಚಾರಣಪ್ರಿಯರಿಗೆ ಸಂತಸ ಮೂಡಿಸುತ್ತದೆ. ಅದಕ್ಕೆಂದೇ ಅತೀ ಹೆಚ್ಚಿನ ಪ್ರಮಾಣದ ಚಾರಣಪ್ರಿಯರು ಇಲ್ಲಿಗೆ ಬರುತ್ತಾರೆ. ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಈ ಅರಣ್ಯದಲ್ಲಿ ಪ್ರವಾಸಿಗರು ಚಾರಣ ಕೈಗೊಳ್ಳಬಹುದು.
ಇಲ್ಲಿರುವ ಸೊಲಿಗೆರೆ ಬೆಟ್ಟ ಸಮುದ್ರ ಮಟ್ಟದಿಂದ 1125 ಮೀ. ನಷ್ಟು ಎತ್ತರದಲ್ಲಿರುವ ಸೊಲಿಗೆರೆ ಬೆಟ್ಟದಿಂದ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿಂದ ಚಾರಣ ಮಾಡುತ್ತ ನಿಸರ್ಗಧಾಮವನ್ನು ನೋಡುತ್ತ ಭೀಮೇಶ್ವರಿ ಮತ್ತು ಸಂಗಮ ತಲುಪಬಹುದು. ಬೆಂಗಳೂರಿನ ಜನತೆಗೆ ಮುತ್ತತ್ತಿಯು ಅಚ್ಚುಮೆಚ್ಚಿನ ಪಿಕ್ ನಿಕ್ ತಾಣವಾಗಿದೆ. ಪ್ರವಾಸಿಗರು ಇಲ್ಲಿ ಪ್ರಕೃತಿ ಸೌಂದರ್ಯ, ಕಾವೇರಿ ನದಿ, ಅರಣ್ಯ ಹಾಗೂ ಚಾರಣದಂತಹ ಸಾಹಸಕ್ರೀಡೆಯನ್ನು ಆನಂದಿಸಬಹುದು.
ಧನ್ಯವಾದಗಳು.
GIPHY App Key not set. Please check settings