in

ಶ್ರೀ ಕ್ಷೇತ್ರ ಪಣೋಲಿಬೈಲು

ಶ್ರೀ ಕ್ಷೇತ್ರ ಪಣೋಲಿಬೈಲು
ಶ್ರೀ ಕ್ಷೇತ್ರ ಪಣೋಲಿಬೈಲು

ಶ್ರೀ ಕ್ಷೇತ್ರ ಪಣೋಲಿಬೈಲು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ, ಸಜೀಪ ಮೂಡ ಗ್ರಾಮದಲ್ಲಿರುವ ದೈವಸ್ಥಾನ. ಇಲ್ಲಿ ತುಳುನಾಡಿನ ದೈವ ಕಲ್ಲುರ್ಟಿ ಕಲ್ಕುಡರನ್ನು ಆರಾಧಿಸಲಾಗುತಿದೆ. ಇದು ಬಿ.ಸಿ.ರೋಡ್ ದಾಟಿ ಪಾಣೆಮಂಗಳೂರು ಮೆಲ್ಕಾರುನಿಂದ ಬಲಭಾಗಕ್ಕೆ ಮಾರ್ನಬೈಲ್ ಮೂಲಕ ಎಡಭಾಗಕ್ಕೆ 4ಕಿ.ಮೀ. ದೂರದಲ್ಲಿ ನೆಲೆಯಾದಂತಹ ತುಳುನಾಡಿನ ಅತ್ಯಂತ ಕಾರಣೀಕ ಅದೇ ರೀತಿ ಪಟ್ಟೆ ಸೀರೆ ಹರಕೆ, ಅಗೆಲು ಕೋಲ ಮಲ್ಲಿಗೆ ಹೂ, ಬೆಳ್ಳಿ ಬಂಗಾರ ತೆಗೆದುಕೊಳ್ಳುವ ಸಂಪದ್ಭರಿತ ಜೋಡಿ ದೈವಗೆ ಕಲ್ಲುರ್ಟಿ ಕಲ್ಕುಡ ನೆಲೆಯಾಗಿ ಭಕ್ತರನ್ನು ಹರಸುತ್ತಿಹರು.

ಪಣೋಲಿಬೈಲ್ ಎಂಬ ಹೆಸರನ್ನು ಉಲ್ಲೇಖಿಸಿದಾಗ ಈ ಪ್ರದೇಶದಲ್ಲಿ ಪನೆಯ ಮರ ಬಹಳಷ್ಟಿತ್ತೆಂದು ತಿಳಿದು ಬರುತ್ತದೆ. ಕಾಲಕ್ರಮೇಣ ಇದೇ ಊರಿನ ಹೆಸರಾಯಿತೆಂದು ಹೇಳಲಾಗಿದೆ. ಈ ಮರವು 60 ವರಷಗಳಿಗೊಮ್ಮೆ ಹೂ ಬಿಟ್ಟು ಸಿಂಗಾರಗೊಳ್ಳುತ್ತವೆ. ಹೀಗೆ ಹೂ ಬಿಟ್ಟ ಕಾಯಿಯಾದ ನಂತರ ಅದು ಸತ್ತು ಹೋಗುತ್ತದೆಂದು ತಿಳಿದುಬರುತ್ತದೆ. ಈ ವೃಕ್ಷವು ಅನಿಷ್ಟಕಾರಕವೆಂದು ನಂಬಲಾಗಿದೆ. ಇದು ಮನೆಯ ಅಕ್ಕಪಕ್ಕದಲ್ಲಿರುವುದು ಶುಭಲಕ್ಷಣವಲ್ಲವೆಂದೂ ಹೇಳುತ್ತಾರೆ. ಅದಕ್ಕಾಗಿ ಆ ಮರಕ್ಕೆ ಪೂಜೆಮಾಡಿ ಕಡಿದು ಉರುಳಿಸುತ್ತಾರೆ ಎಂಬುದು ನಂಬಿಕೆ. ಈ ಪ್ರದೇಶದಲ್ಲಿ ಈ ಮರಗಳಿದ್ದ ಕಾರಣ ಮನಗಳ ಸಂಖ್ಯೆಯೂ ಕಡಿಮೆಯಾಗಿರುತ್ತದೆ. ಈ ಪ್ರದೇಶಕ್ಕೆ ಕಲ್ಲುರ್ಟಿಯ ಪ್ರವೇಶವಾಗುವುದರೊಂದಿಗೆ ಈ ಪ್ರದೇಶವು ಪಣೋಲಿಬೈಲ್ ಕ್ಷೇತ್ರವೆಮ್ದು ಈ ಜಾಗದ ದೈವದ ಹೆಸರನ್ನೆತ್ತಿದರೆ ಸಾಕು ಈ ದೈವಕ್ಕೆ ಗೋಚರವಾಗುತ್ತದೆಂದು ತಿಳಿದುಕೊಳ್ಳಲಾಗಿದೆ.

ಶ್ರೀ ಕ್ಷೇತ್ರ ಪಣೋಲಿಬೈಲು
ಕಲ್ಲುರ್ಟಿ ದೈವದ ನರ್ತನ

ಸುಮಾರು 400 ವರ್ಷಗಳಿಗೂ ಹಿಂದೆ ಉಪ್ಪಿನಂಗಡಿಯ ಮಂತ್ರವಾದಿ, ವಿದ್ವಾಂಸನಾದ ವೈಲಾಯರ ಮನೆ ದೇವರಾಗಿ ಬೆಳಗಿದ ಈ ಎರಡು ಶಕ್ತಿಗಳು ಅನಂತರ ಕಲ್ಲೇಗ, ನೇರಳಕಟ್ಟೆ, ಕಡಂಬು, ಪೊಳತ್ತೂರು ಆ ಮೂರು ತದನಂತರ ಪಣೋಲಿಬೈಲಿನಲ್ಲಿ ನೆಲೆಯಾದರು. ಈ ಕ್ಷೇತ್ರದಲ್ಲಿ ನೆಲೆಯಾಗಿ ಹಗಲಿನಲ್ಲಿ ಅಗೆಲು ಭಾರಣೆ ರಾತ್ರಿಯಲ್ಲಿ ನರ್ತನಕೋಲ ಭಕ್ತರಿಂದ ಪಡೆದುಕೊಂಡು ಅಭಯವನ್ನು ಕೊಡುತ್ತಿಹಳು. ಈ ದೈವವು ಸಜಿಪ ಮಾಗಣೆಗೆ ಪ್ರಥಮವಾಗಿ ಪ್ರವೇಶವನ್ನು ಪಡೆಯುವಾಗ ಈ ಜಾಗ ಪ್ರಧಾನ ದೈವವಾಗಿ ಮಾಗಣೆಯ ದೈವವಾಗಿ ನಾಲ್ಕೈತ್ತಾಯ, ನುಡಿಯೇಳು ದೈಯಂಗುಳ, ಉಲ್ಲಾಲ್ದಿ ಅಮ್ಮ ಅಧಿಕಾರಸ್ಥರು.

ಈ ದೈವಗಳ ಅಪ್ಪಣೆಯನ್ನು ಈ ರೀತಿ ಪಡೆದಳು. ಮಿತ್ತ ಮಜಲು ಜಾಗದಲ್ಲಿ ನಡಿಯೇಳು ದೈಯಂಗುಲು ದೈವಕ್ಕೆ ನೇಮ ನಡೆಯುತ್ತಿರುವಾಗ, ನಡಿಯೇಳು ದೈಯೊಂಗುಲು ದೈವದ ಪಕ್ಕದಲ್ಲಿ ನಾಲ್ಕೆತ್ತಾಯ ದೈವವು ದರ್ಶನ ಪಾತ್ರಿಯ ಮೂಲಕ ಇರುವಾಗ ಕಲ್ಲುರ್ಟಿಯು ಮಿತ್ತ ಮಜಲಿಗೆ ಪ್ರವೇಶವನ್ನಿಟ್ಟಳು. ನನಗೆ ಈ ಮಾಗಣೆಯಲ್ಲಿ ನೆಲೆಯಾಗಲು ಜಾಗಬೇಕೆಂದು ಮಾಗಣೆಯ ಕುಲಾಲ ವ್ಯಕ್ತಿಯ ಮೈಮೇಲೆ ಕಲ್ಲುರ್ಟಿ ದೈವವು ಆವೇಶಭರಿತಳಾಗಿ ಬಂದು ತಿಳಿಸಿದಳು. ಆ ಸಮಯದಲ್ಲಿ ಅಲ್ಲಿರುವ ಗುರಿಕಾರರ ಅಣತಿಯಂತೆ ಆವೇಶಭರಿತ ವ್ಯಕ್ತಿಯ ಮೈಮೇಲೆ ಕೈ ಹಾಕಿ ಹೊರಗೆ ದೂಡಿದರು. ಆ ಸಮಯದಲ್ಲಿ ಕೋಪಗೊಂಡ ಕಲ್ಲುರ್ಟಿ ದೈವವು ನಾನು ಯಾರೆಂದು, ನನ್ನ ಶಕ್ತಿಯನ್ನು ತೋರಿಸುತ್ತೇನೆ ಎಂದು ದೈವ ಕಲ್ಲುರ್ಟಿಯು ದೈವಂಗುಳ ದೈವದ ನೇಮದ ಸಿರಿಮುಡಿಗೆ ಬೆಂಕಿ ಹಾಕಿದಳು. ಅದೇ ರೀತಿ ಅದನ್ನು ನಂದಿಸಿದಳು. ನಂತರ ಸಜೀಪ ಮಾಗಣೆಯ ದೈವಗಳಿಗೂ ಕಲ್ಲುರ್ಟಿಗೂ ಒಡಂಬಡಿಕೆ ಒಪ್ಪಂದವಾಗಿ ಅಲ್ಲಿಂದ ಪಕ್ಕದಲ್ಲಿನ ಕಲ್ಲಿನಲ್ಲಿ ಕಲ್ಲುರ್ಟಿ ನೆಲೆಯಾಗಿ ಬರ್ಕೆ ಶೆಟ್ಟಿ ವಂಶಸ್ಥರನ್ನು ಕೂಡಿಕೊಂಡು ಆ ಕಲ್ಲನ್ನು ಗುಡ್ಡ ಮೂಲ್ಯನು ಹೊತ್ತುಕೊಂಡು ಪಣೋಲಿಬೈಲಿಗೆ ಈಗ ನೆಲೆಯಾದ ಜಾಗದಲ್ಲಿ ಗುಡ್ಡ ಮೂಲ್ಯನು ಆಯಾಸಗೊಂಡು ಕಲ್ಲನ್ನು ಅಲ್ಲೆ ಇಟ್ಟನು. ಸ್ವಲ್ಪ ಹೊತ್ತು ಕಳೆದ ಮೇಲೆ ಕೆಳಗೆ ಇಟ್ಟ ಕಲ್ಲು ಮೇಲೆ ಎತ್ತಲಾಗದಾಯಿತು. ಕಲ್ಲು ಅಲ್ಲೆ ಸ್ಥಿರವಾಗಿ ಅಲುಗಾಡಿಸದಾಯಿತು. ಅಂದು ಮಂಗಳವಾರ ದಿವಸ ಕಲ್ಲುರ್ಟಿ ಕಲ್ಕುಡರು ಅಲ್ಲಿ ನೆಲೆಯಾದರು. ಅವತ್ತಿನ ದಿನವೇ ದೈವಕ್ಕೆ ಕೋಲ ಸೇವೆ ನಡೆಯಿತು, ಹಾಲು ಕುಡಿದಳು. ನಂತರ ತನ್ನ ಕಟ್ಟುಕಟ್ಟಳೆಯನ್ನು ತಿಳಿಸಿದಳು. ತನ್ನ ಅರ್ಚಕ ಕೆಲಸವನ್ನು ಗುಡ್ಡ ಮೂಲ್ಯರವರು ಮತ್ತು ಅವರ ಸಂತತಿಯಾವರು ಮಾಡಬೇಕೆಂದು, ಅಗೆಲು ಬಡಿಸುವುದು ಅಗೆಲು ಸಾಮಾನು ಬೇಯಿಸುವುದು ಈ ಸಂತತಿ ಎಂದು ತಿಳಿಸಿದಳು, ಅವಳ ಬಂಡಾರ ಗುಡ್ಡ ಮೂಲ್ಯರ ಮನೆಯ ಎದುರು ಭಾಗದ ಭಂಡಾರ ಮನೆಯಿಂದ ನೆಲೆಯಾದ ಸ್ಥಳಕ್ಕೆ ಬರುವ ಸಂಪ್ರದಾಯ ಇದೆ. ಈ ಜಾಗದ ದೈವದ ಚಾಕಿರಿ ಕೆಲಸವನ್ನುಸಾಲ್ಯಾನ್ ಗೋತ್ರದ ಗುಡ್ಡ ಮೂಲ್ಯರ ಮನೆಯ ಎದುರು ಭಾಗದ ಭಂಡಾರ ಮನೆಯಿಂದ ನೆಲೆಯಾದ ಸ್ಥಳಕ್ಕೆ ಬರುವ ಸಂಪ್ರದಾಯ ಇದೆ. ಈ ಜಾಗದ ದೈವದ ಚಾಕಿರಿ ಕೆಲಸವನ್ನು ಸಾಲ್ಯಾನ್ ಗೋತ್ರದ ಗುಡ್ಡ ಮೂಲ್ಯರ ಸಂತತಿಯವರು ಮಾಡುತ್ತಿರುವಾಗ ಅವರಿಗೆ ಸೂತಕ ಬಂದಲ್ಲಿ ಕಲ್ಲುರ್ಟಿ ದೈವದ ಸೇವೆ ನಿಲ್ಲಬಾರದೆಂದು ಗುಡ್ಡ ಮೂಲ್ಯರವರ ನೆಂಟಸ್ಥರಾದ ಗುಜರನ್ ಗೋತ್ರದವರು ದೈವದ ಅಪ್ಪಣೆ ಪ್ರಕಾರ ಮಾಡಿದರು. ಈ ದೈವವು ಈ ಜಾಗದಲ್ಲಿ ಈ ಎರಡು ಗೋತ್ರದವರಿಂದ ಪೂಜೆ ಹಾಲು ತೆಗೆದುಕೊಳ್ಳುತ್ತದೆ.1880ರಲ್ಲಿ ಗುಡ್ಡ ಮೂಲ್ಯರ ವಂಶದ ಆಸ್ತಿ ಹರಾಜು ಹಾಕುವಾಗ ಅದನ್ನು ಹತ್ತು ಮುಡಿ ಕೃಷ್ಣರಾಯರು ಪಡೆದರು. ಅವರು ಆ ಆಸ್ತಿಯನ್ನು 1888ರಲ್ಲಿ ನಂದಾವರ ವೆಂಕಟೇಶ ನಾಯಕರಿಗೆ ಮಾರಾಟ ಮಾಡಿದರು. 1931ರಲ್ಲಿ ಈ ಜಾಗವನ್ನು ಕಾಂತಾಡಿಗುತ್ತು ಸಂಕಮ್ಮ ಶೆಡ್ತಿಗೆ ಮಾರಾಟವಾಯಿತು.

ಹಿಂದೂ – ಮುಸ್ಲಿಂ ಸಾಮರಸ್ಯದ ಕತೆ : 1956ರಲ್ಲಿ ಮಂಚಿ ಗ್ರಾಮದ ಅಹಮ್ಮದ್ ಬ್ಯಾರಿಯವರು ಪಣೋಲಿಬೈಲಿನ ಜಾಗವನ್ನು ಪಡಕೊಂಡರು.

ಶ್ರೀ ಕ್ಷೇತ್ರ ಪಣೋಲಿಬೈಲು
ಕ್ಷೇತ್ರದಲ್ಲಿರುವ ನಾಗಬನ

ಅಹಮ್ಮದ್ ಬ್ಯಾರಿಯವರು ಈ ಜಾಗವನ್ನು ಪಡೆದ ನಂತರ ಕಲ್ಲುರ್ಟಿ ದೈವಕ್ಕೆ ಅಗೇಲು ಸೇವೆ ನಡೆಯುತ್ತಿರಲು, ದೈವಕ್ಕೆ ಅಗೇಲಿಗಾಗಿ ಅನ್ನ, ಕೋಳಿಪದಾರ್ಥ ಬೇಯಿಸಲು ಹಿಂದಿನಿಂದಲೂ ಅಲ್ಲಿನ ಮೂಲ್ಯನ್ನನವರು ಬಿದಿರು ಕಡಿದು ಅದನ್ನು ಕಟ್ಟಿಗೆಯಾಗಿ ಅಡಿಗೆಗೆ ಉಪಯೋಗಿಸುತ್ತಿದ್ದರು. ಅಹಮ್ಮದ್ ಬ್ಯಾರಿಯವರು ಇನ್ನು ಮುಂದೆ ಬಿದಿರು ಕಡಿಯಬಾರದು. ಅದು ನನ್ನ ಜಾಗ ಎಂದು ಬಿದಿರು ಕಡಿಯುವವರಿಗೆ ತಿಳಿಸಿದರು. ಕಂಗಾಲಾದ ಗುಡ್ಡ ಮೂಲ್ಯ ವಂಶಸ್ಥರು ಕಲ್ಲುರ್ಟಿ ದೈವದಲ್ಲಿ ದೂರು ಕೊಟ್ಟರು. ಅನಂತರ ಅಹಮ್ಮದ್ ಬ್ಯಾರಿಯು ಬಿಲ್ಡಿಂಗ್ ಕಂಟ್ರಾಕ್ಟ್ ದಾರನಾಗಿದ್ದು, ಆತನು ನಿರ್ಮಿಸಿದ ಬಹುಮಹಡಿ ಕಟ್ಟಡ ನೆಲಕ್ಕೆ ಕುಸಿದು ಬಿತ್ತು. ವ್ಯವಹಾರದಲ್ಲಿ ಆತನು ತೀರಾ ಕಷ್ಟ ನಷ್ಟಕ್ಕೊಳಗಾದನು. ತಾಂಬೂಲ ಪ್ರಶ್ನೆಯಲ್ಲಿ ದೈವದ ತೊಂದರೆಯೆಂದು ಮನವರಿಕೆಯಾಯಿತು. ತದನಂತರ ದೈವದ ಹೆಸರಿನಲ್ಲಿ 9 ಸೆನ್ಸ್ ಭೂಮಿಯನ್ನು ಸರ್ವೆನಂಬ್ರ 224-2ರಲ್ಲಿ ಕಲ್ಲುರ್ಟಿ ದೈವದ ಹೆಸರಿನಲ್ಲಿ ದಾನವಾಗಿ ಬರೆದುಕೊಟ್ಟನು. ದೈವದ ಅರ್ಚಕ ಮತ್ತು ಬಡಿಸುವ ಕೆಲಸವನ್ನು ಪಕೀರ ಮೂಲ್ಯನ ಹಿರಿಯವರು, ಅವರ ಮರಣಾನಂತರ ಅವರ ಕುಟುಂಬದವರಿಂದ ದೈವದ ಅರ್ಚಕ ಕೆಲಸವನ್ನು, 1965ರಿಂದ 1974ರವರೆಗೆ ಪಕೀರ ಮೂಲ್ಯ ಅವರ ಮರಣಾನಂತರ 1988ರವರೆಗೆ ಅವರ ಮೊಮ್ಮಗ ಗಂಗಯ್ಯ ಅವರ ಮರಣಾನಂತರ ಗುಡ್ಡ ಮೂಲ್ಯರ ವಂಶದವರು. 1ನೇ ಮೂಲ್ಯನ್ನನಾಗಿ ದೈವದ ಅರ್ಚಕ ಕೆಲಸವನ್ನು ಗುಡ್ಡ ಮೂಲ್ಯ ಸ್ಂತಾನದ ಸೂತಕದಂದು ಅವರ ನೆಂಟಸ್ತರಾದ ಗುಜರನ್ ಗೋತ್ರದವರು ಅರ್ಚಕ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ದೈವದ ಮಧು (ಅರಿಕೆ) ಹೇಳಲು ಸಜೀಪಮೂಡದ ಬರ್ಕೆ ಶೆಟ್ಟಿ ವಂಶಜರು ಹೇಳುವ ಸಂಪ್ರದಾಯ ಹಿಂದಿನಿಂದಲೂ ನಡೆಯುತ್ತಿತ್ತು.

ಪಣೋಲಿಬೈಲ್ ಕಲ್ಲುರ್ಟಿ ಕ್ಷೇತ್ರ ತುಳುನಾಡಿನ ಅತ್ಯಂತ ಶ್ರೀಮಂತ ಕ್ಷೇತ್ರ. ಅಷ್ಟು ಮಾತ್ರವಲ್ಲ, ಬಡವ ಬಲ್ಲಿದನೆಂಬ ಭೇದಭಾವವಿಲ್ಲದೆ ಸರ್ವರನ್ನೂ, ಗೋವುಗಳನ್ನು, ಸ್ತ್ರೀವರ್ಗದ ಅತೀವ ರಕ್ಷಕಿಯಾಗಿ ಮೆರೆಯುತ್ತಿರುವ ಈ ಕ್ಷೇತ್ರ ಇವತ್ತಿನ ದಿನದಲ್ಲಿ ವಾರಕ್ಕೆ ಐದು ದಿವಸ ಇಪ್ಪತ್ತು ಹರಕೆಯ ಕೋಲ ಅದೇ ರೀತಿ ವಾರದ ಮೂರು ದಿನ ನಾಲ್ಕು ಸಾವ್ರಕ್ಕೂ ಮಿಕ್ಕಿ ಅಗೆಲು ಸೇವೆ ಹರಕೆಯನ್ನು ಪಡೆಯುತ್ತಿರುವ ಕ್ಷೇತ್ರ ಮದುವೆ, ವಿದ್ಯೆ, ಕಷ್ಟಕಾರ್ಪಣ್ಯ, ಕಳ್ಳತನ ಉದ್ಯೋಗಕ್ಕೆ ಅಲ್ಲದೆ ಶರೀರದಲ್ಲಿರುವ ಪ್ರೇತಾತ್ಮ ಇನ್ನಿತ್ತರ ದುಷ್ಟಶಕ್ತಿಗಳನ್ನು ಕೋಲದಲ್ಲಿ ವಿಮೋಚನೆಗೊಳಿಸುತ್ತಾರೆ. ಈ ಜಾಗದಲ್ಲಿ ಪಟ್ಟ ಹರಕೆ ಹೇಳುತ್ತಾ ಜನರು ಕಷ್ಟ ಕಳೆಯುತ್ತಾ ಇರುವ ಶ್ರೀ ಕ್ಷೇತ್ರ ಪಣೋಲಿಬೈಲು. ಈ ಪ್ರದೇಶಕ್ಕೆ ಬರುವ ಭಕ್ತರು ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಸುಬ್ರಹ್ಮಣ್ಯ, ನೆಲ್ಯಾಡಿ, ಮಡಿಕೇರಿ, ಮಂಗಳೂರು, ಮಂಜೇಶ್ವರ, ಕಾಸರಗೋಡು, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದ್ರೆ, ಕೊಡಗು ಮುಂತಾದ ಕಡೆಗಳಿಂದಲ್ಲದೆ ಹೊರಗಿನವರೂ ಈ ಪ್ರದೇಶಕ್ಕೆ ಹರಿಕೆ ಕಾಣಿಕೆ, ಅಗೇಲು ಕೋಲ ಬೆಳ್ಳಿ ಬಂಗಾರದ ಸೇವೆಯನ್ನು ಕೊಡುತ್ತಿದ್ದಾರೆ. ಆಸ್ತಿ ವಿಚಾರ ತಕರಾರು, ಕೋರ್ಟ್ ವಿಚಾರ ಇನ್ನಿತರ ಕಷ್ಟ ಕಾರ್ಪಣ್ಯದಲ್ಲಿದ್ದವರು ಈ ಕ್ಷೇತ್ರಕ್ಕೆ ಬಂದು ದೈವದ ಮುಂದೆ ತಮ್ಮ ಕಷ್ಟ ಕಾರ್ಪಣ್ಯವನ್ನು ತೋಡಿಕೊಂಡು ಹರಕೆಯನ್ನು ಹೇಳಿಕೊಳ್ಳುತ್ತಾರೆ.

ಕಲ್ಲುರ್ಟಿ ಕೋಲ : ಕಲ್ಲುರ್ಟಿ ದೈವವು ಸಜೀಪ ನಡುವಿನಲ್ಲಿ ಕುಂಞತ್ ಬೈಲು, ಸಜೀಪ ಪಡುವಿನಲ್ಲಿ ಇಡಿಪಡ್ಪು, ಕುಂಞತ್ ಬೈಲಲ್ಲಿ ವರ್ಷಕ್ಕೊಂದು ಬಾರಿ ಕೋಲ ನಡೆಯಲು ಪಣೋಲಿಬೈಲಿನಿಂದ ದೈವದ ಪದೇಯಿ ಬಂಗಾರ ಬಂದು ಅದೇ ಅಭರಣದ ಮೂಲಕ ಕೋಲ ನಡೆಯುವುದಿಲ್ಲ. ಅಲ್ಲದೆ, ಸಜೀಪ ಮಾಗಣೆಯ ದೈವಗಳಾದ ನಾಲ್ಕೈತ್ತಾಯ, ನಡಿಯೇಳ್ ದೈಯಂಗುಲ ಉಲ್ಲಾಲ್ದಿಗೆ ನೇಮ ನಡೆಯುವಾಗ ನಂದಾವರ ವಿನಾಯಕ ಕ್ಷೇತ್ರದಲ್ಲಿ ಜಾತ್ರೆ ನಡೆಯುವಾಗ ಪಣೋಲಿಬೈಲಿನಲ್ಲಿ ಅಗೆಲು, ಕೋಲ ನಡೆಯುವ ಸಂಪ್ರದಾಯವಿರುವುದಿಲ್ಲ. ಆಟಿ ತಿಂಗಳಲ್ಲಿ ಕೋಲ ಇರುವುದಿಲ್ಲ. ವಾರ್ಷಿಕ ಷಷ್ಠಿಯಂದು ಕೋಲ ಇರುವುದಿಲ್ಲ. ಅಗೇಲು ಹರಕೆ ಇರುತ್ತದೆ. ವಾರದಲ್ಲಿ ಅಗೇಲು ನಡೆಯುವ ದಿವಸ – ಮಂಗಳವಾರ, ಶುಕ್ರವಾರ, ಆದಿತ್ಯವಾರ ವಾರದಲ್ಲಿ 5 ದಿವಸ (ಶನಿವಾರ, ಸೋಮವಾರ ಬಿಟ್ಟು) ಕೋಲ ನಡೆಯುತ್ತದೆ. ಬೆಳಿಗ್ಗೆ 10.30ರ ಒಳಗೆ ಅಗೇಲು ಹರಕೆಗೆ ಬೇಕಾದ ಕೋಳಿ, ಸೇರು ಅಕ್ಕಿ, ೩ತುಂಡು ಬಾಳೆ ಎಲೆ, 1ತೆಂಗಿನಕಾಯಿ, ಅಗೇಲಿನ ಸಾಮಾನಿನ ಬಾಬ್ತು ಒಂದರ ರೂ.15, ಜೋಡಿ ಅಗೇಲಿಗೆ 2 ಕೋಳಿ, 2 ಸೇರು ಅಕ್ಕಿ, 2 ತೆಂಗಿನಕಾಯಿ, ೫ ತುಂಡು ಬಾಳೆಕಾಯಿ ಮತ್ತು ಸಾಮಾನಿನ ರೂ.30/- ಸಲ್ಲಿಸುತ್ತಾರೆ.

ಪಣೋಲಿಬೈಲು ಕ್ಷೇತ್ರದ ವತಿಯಿಂದ ಇಡೀ ಮಾಗಣೆಗೊಳಪಟ್ಟ ಸಜೀಪ ಮುನ್ನೂರು, ಸಜೀಪ ಮೂಡ, ಸಜೀಪ ನಡುವಿನಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಾಗಿವೆ. ಪಣೋಲಿಬೈಲಿನ ಕಲ್ಲುರ್ಟಿ ದೇವಸ್ಥಾನದ ವತಿಯಿಂದ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ಕ್ಷೇತ್ರದ ಜೀರ್ಣಾಭಿವೃದ್ಧಿ ಸಂಧರ್ಭದಲ್ಲಿ ಧನ ಶಾಯವೂ ಅಲ್ಲದೆ ನಂದಾವರ ಕ್ಷೇತ್ರಕ್ಕೆ ಮಾರ್ನಬೈಲಿನಲ್ಲಿ ಮಹಾದ್ವಾರ ನಿರ್ಮಾಣಗೊಂಡಿದೆ. ಸಜೀಪದಲ್ಲಿರುವ ನಾಲ್ಕೈತ್ತಾಯ ದೈವಸ್ಥಾನದ ಪುನರ್ ನವೀಕರಣದ ಗರ್ಭಗುಡಿಯ ನಿರ್ಮಾಣಕ್ಕೆ ಧನ ನಿಯೋಗಿಸಲಾಗಿದೆ ಹಾಗೂ ಮಿತ್ತಮಜಲ್ ಕ್ಷೇತ್ರದ ನಡಿಯೇಳ್ ದೈಯಂಗುಲ ದೈವದ ದೈವಸ್ಥಾನದ ಪುನರ್ ನವೀಕರಣಕ್ಕೆ ಮತ್ತು ಸಂಕೇಶದಲ್ಲಿರುವ ಉಲ್ಲಾಲ್ದಿ ದೈವಸ್ಥಾನಕ್ಕೆ ಪಣೋಲಿಬೈಲಿನ ಕ್ಷೇತ್ರದ ವತಿಯಿಂದ ಹಣವನ್ನು ವಿನಿಯೋಗಿಸಲಾಗಿದೆ. ಇವೆಲ್ಲವೂ ನಡಿಯೇಳ್ ದೈಯಂಗುಲ ದೈವದ ನೇಮ ಮತ್ತು ನಾಲ್ಕೈತ್ತಾಯ ದೈವದ ಮಾಣಿಯಚ್ಚಿ ಸಂಧರ್ಭದಲ್ಲಿ ಪಣೋಲಿಬೈಲು ಕಲ್ಲುರ್ಟಿ ದೈವದೊಂದಿಗೆ ಸುಮಾರು 400 ವರ್ಷಗಳಿಗೂ ಹಿಂದೆ ಆದಂತಹ ಕಟ್ಟು ಕಟ್ಟಲೆ ಪ್ರಕಾರ ನಡೆದಿದೆ.

ಇತ್ತೀಚೆಗೆ ಭಕ್ತಾಭಿಮಾನಿಗಳ ವತಿಯಿಂದ ಸುಮಾರು 5.5 ಲಕ್ಷಕ್ಕೂ ಮಿಕ್ಕಿ ಮಾರ್ನಬೈಲ್ ನಲ್ಲಿ ಮಹಾದ್ವಾರ ನಿರ್ಮಾಣಗೊಂಡಿದೆ. ಇತ್ತೀಚೆಗೆ ಪಣೋಲಿಬೈಲು ಕ್ಷೇತ್ರದ ಗರ್ಭ ಗುಡಿಗೆ ಬೆಳ್ಳಿಯ ದಾರಂದವನ್ನು ಭಕ್ತಾಧಿಯೋರ್ವರು ಸಮರ್ಪಿಸಿದ್ದಾರೆ. ಭಕ್ತಾದಿಗಳಿಂದ ಒಂದಲ್ಲ ಒಂದು ರೂಪದಲ್ಲಿ ಬೆಳ್ಳಿ ಬಂಗಾರದ ಹರಕೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕ್ಷೇತ್ರಕ್ಕೆ ಸಂದಾಯವಾಗುತ್ತಿದೆ.ನಾಲ್ಕು ಗ್ರಾಮದ ದೈವಗಳಾದ ನಡಿಯೇಳ್ ದೈಯಂಗುಲ ನೇಮದಚ್ಚಿಯಲ್ಲಿ ಮತ್ತು ನಾಲ್ಕೈತ್ತಾಯ ದೈವ ಮಾಣಿಯಿಚ್ಚಿಯಲ್ಲಿ ಇರುವಾಗ ಕಲ್ಲುರ್ಟಿಗೂ ಇವರಿಗೂ ಆದಂತಹ ಕಟ್ಟುಪಾಡು ಇಂತಿದೆ. ಬೆಳ್ಳಿಯಲ್ಲಿ ಬಂದರೆ ನಮಗೆ, ಬಂಗಾರದಲ್ಲಿ ಬಂದರೆ ನಮಗೆ ನಿನಗೆ ಶ್ರೀಮಂತಿಕೆಯ ವ್ಯಕ್ತಿಯಿಂದ ಹಿಡಿದು ಸಾಲ ಇರುವ ಬಡವರವರೆಗ ಕೊಟ್ಟ. ಸಮ್ಮನ (ಅಗೆಲು, ಪಟ್ಟೆಸೀರೆ), ಕೋಲ ನಿನಗೆ (ಬೊಳ್ಳಿಡ್ ಬತ್ತಿನ ಎಂಕ್ ಲೆಗೆ, ಬಂಗಾರ್ ಡ್ ಬತ್ತಿನ ಎಂಕ್ಲೆಗ್ ನಿಕ್ಕ್ ಏಳೆತ್ತಿ ಮಲ್ಲಕ್ಳೆರ್ದ್ ಸಾಲೆತ್ತಿ ಬಡವರೆ ಮುಟ್ಟ ಕೊರ್ನ್ ಸಮ್ಮನ್).

ಶ್ರೀ ಕ್ಷೇತ್ರ ಪಣೋಲಿಬೈಲು
ದೈವದ ನರ್ತನ ವೇಷಧಾರಿಗಳು

ವರ್ಷಕ್ಕೆರಡು ಬಾರಿ ನಿನ್ನ ಖಜಾನೆ ನಮ್ಮಲ್ಲಿ ಬರಬೇಕು ಎಂದು ಒಪ್ಪಂದವಾಯಿತು. ಅದರಂತೆ ಮೂಲ್ಯನ್ನನವರು ಕೊಂಬುವಿನೊಂದಿಗೆ ಮಾಗಣೆಯ ದೈವಕ್ಕೆ ನೇಮ ನಡೆಯುವಾಗ ಒಪ್ಪಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ. ಐದು ಮಾಡ ಮೂರು ಸಾನ್ ಒಂದು ಭಂಡಾರದ ಮನೆಯಲ್ಲಿ ನಿನ್ನ ಗುತ್ತಿನ ಅಧಿಕಾರ ಹಿಡಿದು ಬರ್ಕೆ ಗುತ್ತಿನವರ ಅಧಿಕಾರ ಹಿಡಿದು ನಮ್ಮ ಕೊಂಬುವಿನೊಂದಿಗೆ ಪಣೋಲಿಬೈಲಿಗೆ ಕಳುಹಿಸಿಕೊಡುತ್ತೇವೆ. ಅಲ್ಲಿಂದ ನಿನ್ನ ಬೆಳ್ಳಿ ಬಂಗಾರದ ಖಜಾನೆ ಬರಬೇಕು. ಅನಂತರ ಕಾರಿಕಬುಳಿಯ ಕೂಡಿದ ಕರಿಸ್ಥಳದ (ಈಗಿನ ಮಿತ್ತಮಜಲು) ಕರಿನೇಮದ ಸೇವೆಯಲ್ಲಿ ನಮ್ಮ ಸಮಸ್ತಿಯಲ್ಲಿ ನಿನ್ನ ಬರ್ಕೆಯ ಉತ್ತಿನವರಿಗೆ ನಮ್ಮ ಕೊಂಬು (ಸೊನ್ನೆ) ಕಳುಹಿಸಿಕೊಡುತ್ತೇವೆ. ನಿನ್ನ ಮೂಲ್ಯನು ರಡು ಸಲ ಬೆಳ್ಳಿ ಬಂಗಾರದ ಖಜಾನೆಯನ್ನು ನೇಮ ನಡೆಯುವಾಗ ತರಬೇಕು ಎಂದು ದೈಯಂಗುಲ ಮತ್ತು ನಾಕ್ಕೈತ್ತಾಯನ ಅಭಯವಾಯಿತು. ಕ್ಷೇತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಮುಸ್ಲೀಂ ಮತ್ತು ಕ್ರಿಶ್ಚಿಯನ್ ಧರ್ಮದ ಜನರು ತಮ್ಮ ಹರಕೆಯನ್ನು ಸಲ್ಲಿಸುತ್ತಿದ್ದಾರೆ.

ಸ್ಜೀಪದ ಓರ್ವ ಮಹಿಳೆ ಕ್ಷೇತ್ರದ ಕಲ್ಲುರ್ಟಿಯ ಅಪಾರ ಭಕ್ತಿಯನ್ನು ಇಟ್ಟುಕಂಡಿದ್ದು, ತಮ್ಮ ಕಷ್ಟ ಕಾರ್ಪಣ್ಯಗಳಿಗೆ ಆಗಾಗ ದೈವವನ್ನು ನೆನವರಿಕೆ ಮಾಡಿಕೊಳ್ಳುತ್ತಿದ್ದರು. ಈ ವಿಷಯ ತಿಳಿದ ಅವರ ಸಂಬಂದಿಕರು ಆ ಮಹಿಳೆಯನ್ನು ನಿಂದಿಸಿ, ನಮ್ಮ ಧರ್ಮವನ್ನು ಬಿಟ್ಟು ಆ ದೈವವನ್ನು ನಂಬಬಾರದು ಎಂದಾಗ, ಮಹಿಳೆ ಇದನ್ನು ಕಲ್ಲುರ್ಟಿ ನೋಡಲಿ ಎಂದು ದೈವದ ಮೇಲೆ ಭಾರವನ್ನು ಹಾಕಿದರು. ತದನಂತರ ಹೀಯಾಳಿಸಿದ ಕುಟುಂದವರಲ್ಲಿ ಮೂರು ಜನ ಅವಘಢಕ್ಕೊಳಪಟ್ಟು ಪ್ರಾಣವನ್ನು ಕಳಕೊಂಡರು. ತದನಂತರ ಅದಕ್ಕೆ ಸಂಬಂಧಪಟ್ಟವರು ಕ್ಷೇತ್ರಕ್ಕೆ ಬಂದು ದೈವದಲ್ಲಿ ಕ್ಷಮೆಯಾಚಿಸಿ ದೈವಕ್ಕೆ ಕೋಲವನ್ನು ಕೊಟ್ಟರು ಮತ್ತು ದೈವದ ಕೈಯಲ್ಲಿರುವ ಸತ್ತ ಪ್ರೇತಾತ್ಮಗಳನ್ನು ದೈವದ ಕೈಯಿಂದ ಬಂಧಮುಕ್ತಗೊಳಿಸಿದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಶ್ರೀ ಸೋಮನಾಥ ದೇವಸ್ಥಾನ

ಶ್ರೀ ಸೋಮನಾಥ ದೇವಸ್ಥಾನ, ಸೋಮೇಶ್ವರ

ಗುಳಿಗ ದೈವದ ಕಥೆ

ಕಾಂತಾರ ಸಿನಿಮಾದಲ್ಲಿ ಕೊನೆಯಲ್ಲಿ ಬರುವ ಗುಳಿಗ ದೈವದ ಕಥೆ